ಡಾ ನಾರಾಯಣ್ ಕ್ಯಾಸಂಬಳ್ಳಿ
ತನ್ನ ಗಲ್ಲಿಗೇರಿಸಿದವರ ಮೂರ್ಖತನಕ್ಕೆ
ಏಸು ಮರುಕ ಪಟ್ಟಿದ್ದನಂತೆ
ಅದು ನಿಮಗೂ ಗೊತ್ತು ಸ್ಟ್ಯಾನ್
ಅವರು ಕೊಂದದ್ದು ಕ್ರಿಸ್ತನನಲ್ಲ
ಪ್ರೀತಿಯನ್ನು ಕರುಣೆಯನ್ನು ಮಮತೆಯನ್ನು
ತಾವು ಮಾಡೊ ಉತ್ತಮ ಕೆಲಸದಿಂದ
ತಾವೇ ದೇವಾಲಯಗಳಾಗಿ
ಎಂದ ಬಸವನನ್ನು ಮುಗಿಸಿ
ಲಿಂಗೈಕ್ಯವಾಗಿಸಿದ್ದು ಇದೇ ಮಣ್ಣಲ್ಲಿ

ಗಾಂಧಿಯ ಎದೆಗೆ ಗುಂಡಿಟ್ಟವರೇ
ಜನರ ಹೃದಯಗಳಲಿ
ವಿಷ ಬೀಜಗಳನು ಬಿತ್ತಿ
ಪಸಲುಣ್ಣುತ್ತಿರುವ ಕಾಲದಲಿ
ನೀವು ನಾನು ಹಸಿವಿನ ಕುರಿತು ಮಾತಾಡಿದರೆ
ಅಪರಾಧವಾಗುತ್ತದೆ
ನಡುಗುವ ಕೈಯಲಿಡಿದು
ನೀರೂ ಕುಡಿಯಲಾಗದ ನೀವು
ಕೇವಲ ಒಂದು ಸ್ಟ್ರಾಗಾಗಿ
ನಿವೇದಿಸಿಕೊಂಡಿರಿ
ಅವರು ನಿಮಗೆ ಸಾವು ಕರುಣಿಸಿದರು

ಫಾದರ್ ಸ್ಟ್ಯಾನ್
ಇಂದು ಮಧ್ಯಾಹ್ನ ನಿಮ್ಮ ಸಾವಿನಲ್ಲೇ
ನ್ಯಾಯಂಗ ಪ್ರಜಾಸತ್ತೆಗಳೆರಡು ತೀರಿಕೊಂಡಿದನ್ನು
ಖಾತರಿಪಡಿಸಿವೆ.
ಹೋಗಿಬನ್ನಿ …
ನಿಮಗೆ ಬಿಡುಗಡೆಯ ವಿದಾಯ
ಆಮೇನ್






0 Comments