ಡಾ ತಮಿಳು ಸೆಲ್ವಿ: ನಾಲಿಗೆ ಮೇಲೆ ಕನ್ನಡದ ನರ್ತನಶಾಲೆ!

ಕೆ ರಾಜಕುಮಾರ್

ತಮಿಳ್ ಸೆಲ್ವಿ ಅವರಿಗೆ ತಮಿಳುನಾಡು ಸರ್ಕಾರ ಶ್ರೇಷ್ಠ ಅನುವಾದಕಿ ಪ್ರಶಸ್ತಿ ಪ್ರಕಟಿಸಿರುವ ಸಂದರ್ಭದಲ್ಲಿ ಈ ಲೇಖನ-

ತಮಿಳು ಸೆಲ್ವಿ ಅಚ್ಚ ಕನ್ನಡತಿ. ಕನ್ನಡ ನೆಲದ ಕುಡಿ. ಮದರಾಸು ವಿವಿಯಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರು. ಆ ವಿಭಾಗದ ಮುಖ್ಯಸ್ಥರೂ ಅವರೇ. ಎರಡು ಭಾಷೆಗಳ, ಎರಡು ಸೀಮೆಗಳ, ಎರಡು ಮುರಿದ ಮನಸ್ಸುಗಳ ನಡುವೆ ಸಂಬಂಧದ ಸಬಲ ಸೇತುವೆ ಕಟ್ಟುತ್ತಿರುವವರು. ಸಾಹಿತ್ಯವೇ ಅವರ ಶಸ್ತ್ರ. ಕಾವ್ಯ ಅವರ ಕೈಯಲಗು.

ಅವರದು ಅತ್ಯದ್ಭುತ ಸ್ಮರಣ ಶಕ್ತಿ. ತಾವು ದಿನಗಟ್ಟಲೆ ವೀಕ್ಷಿಸಿದ ಕಾರ್ಯಕ್ರಮಗಳ ಯಾವ ವಿವರವೂ ತಪ್ಪಿಹೋಗದಂತೆ ಮರು ನಿರೂಪಿಸುವ ಕಲೆ ಅವರಿಗೆ ಸಿದ್ಧಹಸ್ತ. ಈ ವಿಷಯದಲ್ಲಿ ಅವರೊಂದು ಬೆರಗು.

ಅವರು ಭಾಷಾ ಸಾಮರಸ್ಯದ ಕೊಂಡಿಗಳನ್ನು ಬೆಸೆಯುತ್ತಲೇ ಸಾಗಿರುವವರು. ಹಳಗನ್ನಡ ಕಾವ್ಯಗಳ ಸಾಲುಗಳಿಗೆ ಅವರ ನಾಲಿಗೆ ಜೀವಂತ ನರ್ತನಶಾಲೆ. ಹಳಗನ್ನಡ ಕುರಿತಂತೆ ಯಾವುದೇ ಸಮಸ್ಯೆಯಿರಲಿ, ತಕರಾರಿರಲಿ ಅದಕ್ಕೆ ಪರಿಹಾರ ಸೂಚಿಸುವ ಛಾತಿ ಇರುವವರು ಕೆಲವರು ಮಾತ್ರ. ಅವರಲ್ಲಿ ಕೈಗೆಟುಕುವವರು ಇವರೊಬ್ಬರೇ. ಮಲ್ಲಿಗೆಯೊಂದಿಗೆ ಸುಮಸಂಧಾನ ಎಂಬ ಪ್ರಬಂಧ ಬರೆಯುತ್ತಿದ್ದೆ. ಅದರಲ್ಲಿ ಕವಿ ಜನ್ನನು ಮಲ್ಲಿಗೆ ಕುರಿತು ಹಳಗನ್ನಡದಲ್ಲಿ ಬರೆದ ಚರಣವೊಂದರ ಅರ್ಥ ಉಲ್ಲೇಖಿಸಬೇಕಿತ್ತು. ಅನೇಕ ವಿದ್ವಾಂಸರನ್ನು ಸಂಪರ್ಕಿಸಿದೆ. ವರ್ಷ ಕಾದರೂ ಉತ್ತರ ಸಿಗಲಿಲ್ಲ. ಕಡೆಗೆ ಸೆಲ್ವಿ ಮೇಡಂರ ಬಳಿ ಉಸುರಿದಾಗ ಒಂದೇ ಘಳಿಗೆಯಲ್ಲಿ ಅದನ್ನು ನಿರ್ವಚಿಸಿದರು. ಪ್ರಬಂಧ ಪ್ರಕಟಿಸಿದೆ. ಅವರ ವಿದ್ವತ್ತಿಗೆ ಇಂತಹ ಉದಾಹರಣೆಗಳು ಒಂದೆರಡಲ್ಲ.

ಅಭಿಜಾತ ಪ್ರತಿಭೆ ಅವರದು. ಒಂದಿನಿತೂ ಅಹಂ ಇಲ್ಲ. ಗರ್ವವೆಂಬುದು ಗಾವುದ ದೂರ. ಬಿಂಕದ ಸಿಂಗಾರಿಯಂತೂ ಅಲ್ಲ. ಬಿಗುಮಾನವೂ ಇಲ್ಲ. ಹಮ್ಮು ಬಿಮ್ಮು ಇಲ್ಲದ ಇವರ ನಡೆ ಸಾರ್ವತ್ರಿಕ ಪ್ರಶಂಸೆ ಗಳಿಸಿದೆ. ಕನ್ನಡದ ಬಗ್ಗೆ ಇವರದು ವೀರಮಾಹೇಶ್ವರ ನಿಷ್ಠೆ.

ಕನ್ನಡದಲ್ಲಿ ಕವನ ವಾಚಿಸುವ ಪರಿ ಹೇಗಿರಬೇಕು? ಕಾವ್ಯ ಸೃಜಿಸಿದ ಅನೇಕ ಯುವಕವಿಗಳು ಸೆಲ್ವಿ ಮೇಡಂ ಇದನ್ನೊಮ್ಮೆ ವಾಚಿಸಿದರೆ ಬರೆದದ್ದು ಧನ್ಯ ಎಂದು ಭಾವಿಸುತ್ತಾರೆ. ಅನಂತರ ಮರೆಯದೆ ಅವರ ಜೊತೆ ಒಂದು ಸೆಲ್ಫಿಗೆ ಮೊಗತೋರುತ್ತಾರೆ. ಅವರು ನಮ್ಮ ನಡುವಿನ ಸೆಲೆಬ್ರಿಟಿ ಲೇಖಕಿ. ತಮಿಳು ಸೆಲ್ವಿ ಎಂಬ ಹೆಸರೇ ಕನ್ನಡಿಗರಿಗೆ ಅನನ್ಯವಾದುದು. ಅವರು ಉಭಯರಾಜ್ಯ ನಿವಾಸಿ. ವಾರದಲ್ಲಿ ಐದು ದಿನ ಕಾರ್ಯನಿಮಿತ್ತ ತಮಿಳುನಾಡಿನಲ್ಲಿ ವಾಸ. ಉಳಿದೆರಡು ದಿನ ಕನ್ನಡದ ಪಾಲಿಗೆ; ಕನ್ನಡಾಂಬೆ ಪಾದಕೆ.

ಕನ್ನಡ ಸಾಹಿತ್ಯ ಪರಿಷತ್ತಿನ ‘ಕನ್ನಡ ರತ್ನ’ ಪರೀಕ್ಷೆಯಲ್ಲಿ ಅವರು rank ಪಡೆದಾಗ, ಮಹತ್ತ್ವವಾದುದನ್ನು ಸಾಧಿಸುತ್ತಾರೆ ಎಂದು ಭರವಸೆ ತಳೆದಿದ್ದೆ. ಅದು ನಿಜವಾಗುತ್ತಲೇ ಸಾಗಿದೆ. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ತಮಿಳುನಾಡು ಘಟಕದ ಹಾಲಿ ರಾಜ್ಯಾಧ್ಯಕ್ಷರು ಸಹ. ಇದು ಅವರ ಎರಡನೆಯ ಅವಧಿ. ತಮಿಳುನಾಡಿನಲ್ಲಿ ಕನ್ನಡಕ್ಕೆ ನೆಲೆ ಒದಗಿಸುವ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ.

ಅವರು ತಮ್ಮ ತೂಕವನ್ನು ವರ್ಷಕ್ಕೆ 10 ಗ್ರಾಮಿಗಿಂತ ಹೆಚ್ಚಲು ಬಿಡುತ್ತಿಲ್ಲ. ತುತ್ತು, ತುತ್ತನ್ನೂ ಕೈಯಲ್ಲಿ ಅಳೆದು, ತೂಗಿ, ಗೂಗಲಿಸಿ ಎಷ್ಟು ಕ್ಯಾಲೊರೀಸ್ ಶಕ್ತಿ ಸಂಚಯವಾಗುತ್ತದೆ ಎಂದು ಅರಿತು ಮೆಲ್ಲುವವರು. ಅವರು ಈಗಲೂ ಹಂಚಿಕಡ್ಡಿಯೇ. ಅವರು ಏಕಕಾಲಕ್ಕೆ ಕನ್ನಡ, ತಮಿಳು ಹಾಗೂ ತಮ್ಮ ಆರೋಗ್ಯವನ್ನು ಮುತುವರ್ಜಿಯಿಂದ ಕಾಯುತ್ತ ಬಂದಿರುವವರು. ಕೊರೋನಾವನ್ನು ತಮ್ಮ ಮನೆಯoಗಳಕ್ಕೆ ಕಾಲಿಡದಂತೆ ಮಾಡಲು ಅವರು ವಹಿಸುತ್ತಿದ್ದ ಮುನ್ನೆಚ್ಚರಿಕೆಗಳನ್ನು ಬಲ್ಲೆ. ಕಡೆಗೂ ಅದು ಸೋಲೊಪ್ಪಿಕೊಂಡಿತು. ಇವರಿರುವತ್ತ ಸುಳಿಯಲೇ ಇಲ್ಲ.

ಇದೀಗ ಡಾ. ತಮಿಳು ಸೆಲ್ವಿ ಅವರು ತಮಿಳುನಾಡಿನ ಶ್ರೇಷ್ಠ ಅನುವಾದಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ರೂ. ಎರಡು ಲಕ್ಷ ಮೌಲ್ಯದ ಅತಿ ದೊಡ್ಡ ಪುರಸ್ಕಾರ. ಸ್ವತಃ ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದು ಸೆಲ್ವಿಯವರು ಏರಿರುವ ಎತ್ತರಕ್ಕೆ ಒಂದು ನಿದರ್ಶನ. ಅನುವಾದ ಅವರ ಪ್ರಧಾನ ಆಡುಂಬೊಲ. ಈ ಸಾಧನೆಗಾಗಿ ಅವರನ್ನು ಅಭಿನಂದಿಸೋಣ. ಡಾ. ತಮಿಳು ಸೆಲ್ವಿ ಅವರಿಗೆ ಶುಭಾಭಿನಂದನೆಗಳು.

ಡಾ. ಸೆಲ್ವಿ ಎಂಬ ಉಭಯಜೀವಿ ಕರುನಾಡು ಮತ್ತು ತಮಿಳುನಾಡುಗಳ ನಡುವಿನ ಸಾಂಸ್ಕೃತಿಕ ರಾಯಭಾರಿ. ಕರ್ನಾಟಕದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಎರಡು ಭಾಷೆಗಳ ನಡುವಿನ ಈ ‘ತೂಗುಸೇತುವೆ’ಯ ಕೊಡುಗೆಯನ್ನು ಗುರುತಿಸಬೇಕಾಗಿದೆ. ಇನ್ನೂ ತಡಮಾಡದಿರಲಿ.

‍ಲೇಖಕರು Admin

December 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: