ಜಿ ವಿ ಕಾರ್ಲೊ ಅನುವಾದಿತ ಕಥೆ ಮೂಗು – ಭಾಗ 4

ಮೂಲ : ನಿಕೊಲಾಯ್ ಗೊಗೊಲ್
ಅನು : ಜಿ. ವಿ. ಕಾರ್ಲೊ

ಉಕ್ರೇಯ್ನ್ ಮೂಲದ ನಿಕೊಲಾಯ್ ವ್ಯಾಸಿಲೆವಿಚ್ ಗೊಗೊಲ್ (1809-1858) ರಶ್ಯಾದ ಸಾಹಿತ್ಯಲೋಕದಲ್ಲಿ ಬಲು ದೊಡ್ಡ ಹೆಸರು. ರಶ್ಯಾದ ಮೊತ್ತಮೊದಲ ವಾಸ್ತವವಾದಿ ಲೇಖಕ ಎಂದು ಬಣ್ಣಿಸುತ್ತಾರೆ. ಅವನಿಂದ ಪ್ರಭಾವಿತರಾದ ಬಹಳಷ್ಟು ಲೇಖಕರಲ್ಲಿ ‘The Crime and Punishment’ ನ ಫ್ಯೊದರ್ ದಸ್ತವೆಸ್ಕಿ ಪ್ರಮುಖ. ನಾವೆಲ್ಲಾ ಗೊಗೊಲಾನ The Overcoat ನಿಂದ ಹೊರ ಬಂದವರೆಂದು ಅವನು ಗೊಗೊಲನನ್ನು ಸ್ಮರಿಸುತ್ತಾನೆ.

ಗೊಗೊಲ್, ಅವನ ಸಮಕಾಲಿನ ರಶ್ಯನ್ ಸಮಾಜವನ್ನು ಲೇವಡಿ ಮಾಡುವ ನಾಟಕ The Inspector General, ಮಾನವ ಸರಕುಗಳಲ್ಲೊಂದಾದ ಗುಲಾಮರ ಲೇವಾದೇವಿಯ The Dead Souls ಕಾದಂಬರಿ ಮತ್ತು ಪ್ರಭುತ್ವವನ್ನು ಅಣಕಿಸುವ, ಬಡ ಗುಮಾಸ್ತನ ಕತೆ The Overcoat ಮತ್ತು ಪ್ರಸ್ತುತ ಅಧಿಕಾರಿಶಾಹಿಯ ಒಣ ಪ್ರತಿಷ್ಠೆ ಮತ್ತು ಮಹತ್ವಾಕಾಂಕ್ಷೆಯ The Nose ಓದುವಾಗ, ‘ಮೂಗು’ ಇಲ್ಲದಿರುವುದು ಎಷ್ಟೊಂದು ಅನಾಹುತಾಕಾರಿಯಾಗಬಲ್ಲದೆಂದು ನನಗೆ ‘ರಾಮಾಯಣ’ದ ‘ಶೂರ್ಪನಖಿ’ಯ ಪಾತ್ರ ಕಣ್ಣ ಮುಂದೆ ಬಂದಿತು.

4

ಕೊವಾಲ್ಯೊವ್ ಅಲ್ಲಿಂದ ನೆಟ್ಟಗೆ ಸ್ಥಳೀಯ ಪೊಲೀಸ್ ಇನ್​ಸ್ಪೆಕ್ಟರ್​ನ ಕಚೇರಿಗೆ ಹೊರಟ. ಈ ಮಹಾಶಯನೋ ಒಬ್ಬ ಸಕ್ಕರೆ ಪ್ರಿಯ! ಅವನ ಹಜಾರದಿಂದಿಡಿದು ಊಟದ ಮನೆಯವರೆಗೂ ವಿವಿಧ ನಮೂನೆಯ ಸಕ್ಕರೆ ಅಚ್ಚುಗಳಿಂದ ತುಂಬಿಕೊಂಡಿತ್ತು. ಅವನ ಸಕ್ಕರೆಯ ದೌರ್ಬಲ್ಯವನ್ನು ಅರಿತಿದ್ದ ವ್ಯಾಪಾರಸ್ಥರು ಅವನನ್ನು ತಮ್ಮ ಬುಟ್ಟಿಗೆ ಕೆಡವಿಕೊಳ್ಳಲು ‘ವಿವಿಧ ಸಕ್ಕರೆ’ಯ ಪ್ರಲೋಭನೆಯನ್ನು ಒಡ್ಡುತ್ತಿದ್ದರು.

ಆಗಷ್ಟೇ ಇನ್​ಸ್ಪೆಕ್ಟರ್​ನ ಸಾಹೇಬರು ಎರಡು ಗಂಟೆ ವಿಶ್ರಾಮ ತೆಗೆದುಕೊಳ್ಳುವ ಮೂಡಿನಲ್ಲಿದ್ದು ತಮ್ಮ ಶಯನಾಗೃಹಕ್ಕೆ ತೆರಳುವ ಹೊತ್ತಿನಲ್ಲೇ ನಮ್ಮ ಮೌಲ್ಯಮಾಪಕರು ಅವರ ಮನೆ ಬಾಗಿಲು ತಟ್ಟ ಬೇಕೇ?

ಈ ಇನ್​ಸ್ಪೆಕ್ಟರ್​ ಸಾಹೇಬರು ಕಲೋಪಾಸನೆಯೊಟ್ಟಿಗೆ ವಾಣಿಜ್ಯಕ್ಕೂ ಅಷ್ಟೇ ಮಹತ್ವ ಕೊಡುತ್ತಿದ್ದರು. ಸರಕಾರಿ ನೋಟುಗಳ ಮೇಲೆ ಅವರಿಗೆ ಎಲ್ಲಿಲ್ಲದ ಮೋಹ. “ಅವುಗಳಷ್ಟು ಸುಂದರವಾದದ್ದು ಬೇರೊಂದಿಲ್ಲ!” ಎನ್ನುತ್ತಿದ್ದರು. “ಹೆಚ್ಚು ಜಾಗ ಬೇಕಿಲ್ಲ. ಎಲ್ಲಿ ಬೇಕಾದರೂ, ಜೇಬಲ್ಲಿಯೂ, ಆರಾಮವಾಗಿ ಇಡಬಹುದು. ಬಿದ್ದರೂ ಒಡೆದು ಹೋಗುವುದಿಲ್ಲ!”

ಅವರಿಂದ ಕೊವಾಲ್ಯೊವ್‌ನಿಗೆ ಹೇಳಿಕೊಳ್ಳುವಂತ ಮಧುರ ಸ್ವಾಗತ ಲಭಿಸಲಿಲ್ಲ. ಊಟದ ನಂತರ ಎಂಥದ್ದೇ ವಿಚಾರಣೆ ಕೈಗೊಳ್ಳುವುದು ಅಷ್ಟು ಸಮಂಜಸವಲ್ಲ. ಊಟದ ನಂತರ ನಿಸರ್ಗವೇ ವಿಶ್ರಮಿಸಿಕೊಳ್ಳುವ ಅವಕಾಶವನ್ನು ದಯಪಾಲಿಸಿದೆ. ಅಲ್ಲದೆ ಸಾಮಾನ್ಯವಾಗಿ ಮರ್ಯಾದಸ್ಥರು ಹೋಗಬಾರದ ಜಾಗಗಳಿಗೆ ಹೋಗಿ ತಮ್ಮ ಮೂಗುಗಳನ್ನು ಕತ್ತರಿಸಿಕೊಳ್ಳುವಂಥ ದಯನೀಯ ಸ್ಥಿತಿಗೆ ಕೈ ಹಾಕುವುದಿಲ್ಲವೆನ್ನುವುದು ಅವನ ಅಭಿಮತವಾಗಿತ್ತು.

ಅವನು ಹೇಳಿದ್ದರಲ್ಲಿ ಹೆಚ್ಚು ಉತ್ಪ್ರೇಕ್ಷೆ ಇರಲಿಲ್ಲವಾದರೂ ಅದು ಕೊವಾಲ್ಯೊವ್‌ನ ಮರ್ಮಕ್ಕೆ ತಾಗಿತು. ಈ ವ್ಯಕ್ತಿ ಕೊವಾಲ್ಯೊವ್ ತುಂಬಾ ಸೂಕ್ಷ್ಮ ಮನಸ್ಸಿನವನೆಂದು ನಿಮಗೆ ಮೊದಲೇ ತಿಳಿಸುವುದು ಉಚಿತ. ವೈಯಕ್ತಿಕವಾಗಿ ಅವನ ಬಗ್ಗೆ ಯಾರಾದರೂ ಕೆಟ್ಟದ್ದು ಹೇಳಿದರೆ ಅವನು ಅಷ್ಟೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ತನ್ನ ವೃತ್ತಿಪರ ಶ್ರೇಣಿ ಮತ್ತು ಸಾಮಾಜಿಕ ಸ್ಥಾನದ ಬಗ್ಗೆ ಕುಹಕ ಮಾತುಗಳನ್ನಾಡಿದರೆ ಅವನಿಗೆ ತಡೆಯಲಾಗುತ್ತಿರಲಿಲ್ಲ (ಪೀಟರ್ ದಿ ಗ್ರೇಟ್ ಕಾಲದಲ್ಲಿ ಸಾಮಾನ್ಯರೂ ಕೂಡ ಸರಕಾರಿ ಕೆಲಸಗಳಿಗೆ ಸೇರಿ ಸಾಮಾಜಿಕ ಅಂತಸ್ತನ್ನು ಏರುವ ಅವಕಾಶವಿತ್ತು.)

ಕೆಳ ಅಂತಸ್ತಿನ ಕಾರಕೂನರ ಬಗ್ಗೆ ಅವನು ಈ ಮಾತನ್ನು ಹೇಳಿದರೆ ಒಪ್ಪ ಬಹುದಿತ್ತೇನೋ, ಆದರೆ, ಅಧಿಕಾರಿವರ್ಗದ ಕೊವಾಲ್ಯೊವ್‌ನಿಗೆ ಇನ್​ಸ್ಪೆಕ್ಟರ್​ನ ಕುಹಕದ ಮಾತು ಸರಿಕಾಣಿಸಲಿಲ್ಲ.

ಇನ್​ಸ್ಪೆಕ್ಟರ್​ನ ಅವಮಾನಕಾರ ಸ್ವಾಗತದಿಂದ ಕೊವಾಲ್ಯೊವ್‌ನಿಗೆ ಸಹಜವಾಗಿ ಮೈಯೆಲ್ಲಾ ಉರಿಯಿತು. ಅವನು ಎರಡೂ ಕೈಗಳನ್ನು ಆಚೀಚೆ ಬೀಸುತ್ತಾ ತಲೆಯಲ್ಲಾಡಿಸಿ ಗಂಭೀರವಾಗಿ ಹೇಳಿದ: “ನಿಜ ಹೇಳಬೇಕೆಂದರೆ ಈ ನಿಮ್ಮ ಅವಹೇಳನಕಾರಿ ಅಭಿಪ್ರಾಯದ ನಂತರ ನನಗೆ ಏನು ಹೇಳಬೇಕೆಂಬುದೇ ತೋಚುತ್ತಿಲ್ಲ…” ಎಂದು ಸಿಟ್ಟಿನಿಂದ ಹೊರನಡೆದ. ಕತ್ತಲಾಗುತ್ತಿತ್ತು. ಅಪಮಾನದಿಂದ ಕುದಿಯುತ್ತಾ ಕೊವಾಲ್ಯೊವ್ ಹೇಗೆ ಮನೆ ಸೇರಿದನೆಂದು ಅವನಿಗೇ ಗೊತ್ತಾಗಲಿಲ್ಲ. ಅವನು ನಡುಕೋಣೆಯನ್ನು ಪ್ರವೇಶಿಸುತ್ತಿದ್ದಂತೆ ಅವನ ಕೆಲಸದಾಳು ಇವಾನ್, ಅಂಗಾತ ಮಲಗಿ ಪ್ರತಿಸಲ ಚಾವಣಿಯ ಒಂದೇ ಕಡೆಗೆ ಗುರಿ ಇಟ್ಟು ಉಗಿಯುತ್ತಾ ಯಜಮಾನನ ಬರುವಿಕೆಯನ್ನು ಎದುರು ನೋಡುತ್ತಿದ್ದ. ಅವನ ನಿರ್ಲಿಪ್ತತೆ ಕಂಡು ಕೊವಾಲ್ಯೊವ್‌ನಿಗೆ ಗಾಯದ ಮೇಲೆ ಬರೆ ಎಳೆದಂತಾಯಿತು. ತನ್ನ ಹ್ಯಾಟನ್ನು ತೆಗೆದು ಅವನ ಹಣೆಯ ಮೇಲೆ ಬೀಸುತ್ತಾ, “ನಿನಗೆ ಬೇರೆ ಏನೂ ಕೆಲಸವಿಲ್ಲವೇನೋ ಹಂದಿ ನನ್ಮಗನೇ…?” ಎಂದು ಕಿರುಚಿದ.

ಇವಾನ್ ತಕ್ಷಣ ಮೇಲೆದ್ದು ಯಜಮಾನನ ಕೋಟನ್ನು ಕಳಚಲು ಮುಂದಾದ. ಆಯಾಸದಿಂದಷ್ಟೇ ಅಲ್ಲದೆ ಮಾನಸಿಕವಾಗಿ ಜರ್ಝರಿತನಾಗಿದ್ದ ಕೊವಾಲ್ಯೊವ್ ತನ್ನ ರೂಮಿಗೆ ಹೋಗಿ ತನ್ನ ಆರಾಮ ಕುರ್ಚಿಯ ಮೇಲೆ ಕುಸಿದು ಕುಳಿತು, “ದೇವರೇ!! ನಾನೇನು ತಪ್ಪು ಮಾಡಿದೆ ಅಂತ ಈ ನಮೂನೆಯ ಶಿಕ್ಷೆ?” ಎಂದ ದೀರ್ಘ ನಿಟ್ಟುಸಿರು ಬಿಡುತ್ತಾ. “ಒಂದು ಕೈಯೋ ಕಾಲೋ ಕಳೆದುಕೊಂಡಿದ್ದಿದ್ದರೆ ಇಷ್ಟೊಂದು ಅಸಹನೀಯವಾಗುತ್ತಿರಲಿಲ್ಲ. ಒಂದು ಕಿವಿ ಹೋಗಿದ್ದರೂ ಹೇಗೋ ಸಹಿಸಿಕೊಳ್ಳಬಹುದಿತ್ತು. ಆದರೆ,ಮೂಗೇ ಇಲ್ಲದ ಮನುಷ್ಯ ಅತ್ತ ಮತ್ಸ್ಯವೂ ಅಲ್ಲ, ಇತ್ತ ಪಕ್ಷಿಯೂ ಅಲ್ಲ! ಯುದ್ಧದಲ್ಲೋ, ಕಾಳಗದಲ್ಲೋ ಮೂಗು ಕಳೆದುಕೊಂಡಿದ್ದಿದ್ದರೆ ಜನರಿಗೆ ಏನಾದರೊಂದು ಹೇಳಬಹುದಿತ್ತು. ಸಕಾರಣವಿಲ್ಲದೆ, ಸುಮ್ಮನೇ ಮೂಗು ಕಳೆದುಕೊಳ್ಳುವುದೆಂದರೆ… ಛೆ, ಛೆ… ಸುಮ್ಮನೆ ಹಾಗೇ ಹೋಗಲು ಸಾಧ್ಯನೇ ಇಲ್ಲ. ಒಂದೋ ಇದೊಂದು ಕನಸು ಅಥವಾ ಮುಖಕ್ಷೌರ ಮಾಡಿದ ನಂತರ ಹಚ್ಚಿ ಕೊಳ್ಳುವ ಆ ವೋಡ್ಕಾವನ್ನು ಈ ದರಿದ್ರ ಇವಾನ್ ಹೊರಗೆಲ್ಲೋ ಇಟ್ಟಿರಬೇಕು ಮತ್ತು ಅದನ್ನು ನೀರೆಂದು ನಾನು ಕುಡಿದಿರಬೇಕು! 

ತಾನು ಕುಡಿದಿಲ್ಲವೆಂದು ಖಾತ್ರಿ ಪಡಿಸಿಕೊಳ್ಳಲು ಕೊವಾಲ್ಯೊವ್ ಜೋರಾಗಿ ತನ್ನ ಮೈಯನ್ನು ಜಿಗುಟಿ ನೋವು ತಾಳಲಾರದೆ, “ಅಯ್ಯೋ, ಅಮ್ಮಾ!” ಎಂದು ಕೂಗಿಕೊಂಡ. ತಾನು ಕುಡಿದಿಲ್ಲ ಮತ್ತು ಸಂಪೂರ್ಣವಾಗಿ ಎಚ್ಚರದಲ್ಲಿದ್ದೇನೆಂದು ಅವನಿಗೆ ಮನದಟ್ಟಾಯಿತು.

ಅವನು ಮೆಲ್ಲಗೆ ಕನ್ನಡಿಯ ಕಡೆಗೆ ಸರಿದು ಹುಬ್ಬುಗಳನ್ನು ಜೋಡಿಸಿ ಮೂಗು ಯಥಾಸ್ಥಾನದಲ್ಲಿರುವುದೆಂಬ ಹುಚ್ಚು ಭರವಸೆಯಿಂದ ಕಣ್ಣು ತೆರೆದು ನೋಡಿ ಜಿಗುಪ್ಸೆಯಿಂದ ಹಿಂದಕ್ಕೆ ಜಿಗಿದ.

“ಥತ್ತ್, ಅದೇ ಖಾಲಿ ಜಾಗ…”

ಅವನಿಗೆ ಅದು ಹೇಗಾಯಿತು ಎಂಬುದೇ ಅರ್ಥವಾಗಲಿಲ್ಲ. ಒಂದು ಚಿನ್ನದ ಗುಂಡಿಯೋ, ಬೆಳ್ಳಿ ಚಮಚವೋ, ಅವನ ವಾಚೋ ಅಥವಾ ಮತ್ತಾವ ವಸ್ತುವೋ ಕಳೆದು ಹೋಗಿದ್ದರೆ ಅರ್ಥವಾಗುತಿತ್ತು. ತನ್ನದೇ ಫ್ಲ್ಯಾಟಿನಿಂದ ತನ್ನ ಮೂಗೇ ಕಳುವಾಗಿರುವುದೆಂದರೆ… ಎಲ್ಲವನ್ನೂ ಅಳೆದು ತೂಗಿ ನೋಡಿದಾಗ ಅವನಿಗೆ ಇದಕ್ಕೆಲ್ಲಾ ಕಾರಣ ತನ್ನ ಸಹದ್ಯೋಗಿಯ ಮಡದಿ ಶ್ರೀಮತಿ ಪೊಡ್‌ಟೊಚಿನ್ ಎಂದು ಮನದಟ್ಟಾಗತೊಡಗಿತು. ಆಕೆ ತನ್ನ ಮಗಳನ್ನು ಮದುವೆಯಾಗಲು ಅವನಿಗೆ ದುಂಬಾಲು ಬಿದ್ದಿದ್ದಳು. ಇವನು, ತನಗೆ ಇನ್ನೂ ವಯಸ್ಸಾಗಿಲ್ಲ, ಇನ್ನೂ ಐದು ವರ್ಷ ಕಳೆಯಲಿ, ನಲವತ್ತೆರಡು ವರ್ಷವಾಗಿರುತ್ತದೆ ಹಾಗೂ ಕೈಯಲ್ಲೂ ಸಾಕಷ್ಟು ದುಡ್ಡಿರುತ್ತದೆ ಎಂದು ನಯವಾಗಿಯೇ ಆಕೆಯ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದ. ಬಹುಶಃ ಈ ಸಿಟ್ಟಿನಿಂದ ಆಕೆ ನನಗೆ ಬುದ್ಧಿ ಕಲಿಸಲು ಯಾರೋ ಮಾಟಗಾತಿಯನ್ನು ಛೂ ಬಿಟ್ಟು ಈ ಕೃತ್ಯವನ್ನು ಎಸಗಿರಬೇಕು! ಅವನಿಗೆ ಗೊತ್ತಿರುವಂತೆ ಬೇರೆ ಯಾರೂ ಅವನ ಫ್ಲ್ಯಾಟಿಗೆ ಬಂದಿರಲಿಲ್ಲ. ಅವನ ಮಾಮೂಲಿ ಕ್ಷೌರಿಕ ಇವಾನ್ ಯಾಕೊವ್‌ಲೆವಿಚ್ ಕಳೆದ ಬುಧವಾರವಷ್ಟೇ ಅವನ ಗಡ್ಡ ಹೆರೆದಿದ್ದ. ಆ ಬುಧವಾರ ಮತ್ತು ಮಾರನೆಯ ಗುರುವಾರದವರೆಗೂ ಅವನ ಮೂಗು ಎಂದಿನಂತೆಯೇ ಮೇಲ್ದುಟಿ ಮೀಸೆಯ ಮೇಲೆ ರಾರಾಜಿಸುತ್ತಿತ್ತು. ಅವನಿಗದು ಚೆನ್ನಾಗಿ ನೆನಪಿತ್ತು.

ಅಷ್ಟೇ ಅಲ್ಲ. ಮೂಗು ಕೊಯ್ದು ಅಪಹರಿಸಿಕೊಂಡು ಒಯ್ದಿದ್ದರೆ ನೋವು, ಗಾಯ ಆಗಲೇ ಬೇಕಿತ್ತು. ಗಾಯದ ಗುರುತು ಹೋಗಲಿ. ಮೇಲ್ದುಟಿಯ ಮೇಲೆ ಯಾವತ್ತೂ ಮೂಗೇ ಇರಲಿಲ್ಲ ಎನ್ನುವಷ್ಟು ಅದರ ಅಸ್ಪಷ್ಟ ಕುರುಹೂ ಇಲ್ಲದಂತೆ, ಗೋಡೆಯಂತೆ ಸಪಾಟಾಗಿತ್ತು!

ಈಗ ತಾನು ಏನು ಮಾಡಬಹುದೆಂದು ಕೊವಾಲ್ಯೊವ್ ಯೋಚಿಸತೊಡಗಿದ. ಮೊದಲನೆಯದಾಗಿ, ಪರಿಹಾರಕ್ಕಾಗಿ ಸಹದ್ಯೋಗಿಯ ಮಡದಿಯ ಮೇಲೆ ದಾವೆ ಹೂಡುವುದು. ಇಲ್ಲ, ನೇರವಾಗಿ ಅವಳನ್ನು ಭೇಟಿ ಮಾಡಿ ಅವಳನ್ನು ಆರೋಪಿಸಿ ಎದುರಿಸುವುದು.

ಅಷ್ಟರಲ್ಲಿ, ಬಾಗಿಲ ಸಂದಿನಿಂದ ಬೆಳಕಿನ ಕಿರಣಗಳು ತೂರಿಕೊಂಡು ಅವನ ಕೊಠಡಿಯೊಳಗೆ ಬಿದ್ದಾಗ ಅವನ ಆಲೋಚನಾ ಸರಣಿ ಕಡಿದು ಬಿತ್ತು. ಅಂದರೆ;ಇವಾನ್, ನಡುಕೋಣೆಯಲ್ಲಿ ಮೋಂಬತ್ತಿಯನ್ನು ಹಚ್ಚಿದ್ದ. ಕೆಲವು ಗಳಿಗೆಗಳ ನಂತರ ಸ್ವತಃ ಇವಾನನೇ ಉರಿಯುತ್ತಿರುವ ಮೋಂಬತ್ತಿಯನ್ನು ಹಿಡಿದುಕೊಂಡು ಅವನ ಕಕ್ಷೆಯನ್ನು ಪ್ರವೇಶಿಸಿದ. ಕತ್ತಲೆಯೊಳಗಿದ್ದ ಅವನ ಕೊಠಡಿ ಬೆಳಗಿತು. ಇವಾನನ ಆಗಮನವಾಗುತ್ತಿದ್ದಂತೆ ಕೊವಾಲ್ಯೊವ್ ಒಮ್ಮೆಲೇ ತನ್ನ ಕರವಸ್ತ್ರವನ್ನು ಹೊರಸೆಳೆದು, ನಿನ್ನೆಯಷ್ಟೇ ತನ್ನ ಮೂಗಿದ್ದ ಜಾಗವನ್ನು ಮುಚ್ಚಿಕೊಂಡ. ಆ ಮೂರ್ಖ ತನ್ನ ಮೂಗಿದ್ದ ಜಾಗವನ್ನು ಬಿಟ್ಟ ಕಂಗಳಿಂದ ಬಾಯ್ದೆರೆದು ನೋಡುತ್ತಾ ನಿಂತುಕೊಂಡಿರುವ ದೃಶ್ಯವನ್ನು ಅವನಿಂದ ಕಲ್ಪಿಸಿಕೊಳ್ಳಲಾಗಲಿಲ್ಲ. ಮೋಂಬತ್ತಿಯನ್ನಿಟ್ಟು ಇವಾನ್ ಹೊರಗೆ ಹೋಗುತ್ತಿದ್ದಂತೆಯೇ ನಡುಕೋಣೆಯಿಂದ ಒಂದು ಅಪರಿಚಿತ ದನಿ ಕೇಳಿಸಿತು:

“ಇದು ಸರಕಾರಿ ಮೌಲ್ಯಮಾಪಕ ಕೊವಾಲ್ಯೊವ್‌ರ ಬಿಡಾರ ತಾನೇ?”

“ಬನ್ನಿ, ಬನ್ನಿ. ಇದುವೇ ಮೇಜರ್ ಕೊವಾಲ್ಯೊವ್‌ರ ನೆಲೆ,” ಎನ್ನುತ್ತಾ ಬಾಗಿಲನ್ನು ತೆರೆದ.

ಠಾಕೂಠೀಕಾಗಿ ಸಮವಸ್ತ್ರಧರಿಸಿದ್ದ, ತುಂಬಿದ ಕೆನ್ನೆಗಳ, ತೀರ ತೆಳುವು ಅಲ್ಲದ ಮತ್ತು ತೀರ ಗಾಢವೂ ಅಲ್ಲದ ಮೀಸೆಯ ಪೊಲೀಸ್ ಆಫೀಸರನೊಬ್ಬ ಒಳಗೆ ಪ್ರವೇಶಿಸಿದ. ಕತೆಯ ಆರಂಭದಲ್ಲಿ ಸೈಂಟ್ ಐಸಾಕ್ ಸೇತುವೆಯ ಮೇಲೆ ಗಸ್ತಿನಲ್ಲಿದ್ದ ಪೊಲೀಸ್ ಆಫೀಸರನೇ ಇವನು.

“ಮೂಗು ಕಳೆದು ಕೊಂಡವರು ನೀವೇನೇ?” ಅವನು ಕೇಳಿದ.

“ಹೌದೌದು. ನಾನೇ!”

“ಅದು ಸಿಕ್ಕಿದೆ.”

“ಏನಂದ್ರಿ?” ಮೇಜರ್ ಕೊವಾಲ್ಯೊವ್ ತಾನು ಕೇಳುತ್ತಿರುವುದು ನಿಜವೇ ಎಂದು ಪರಾಮರ್ಶಿಸಲು ಕಣ್ಣುಗಳನ್ನು ಹಿಗ್ಗಿಸಿ ಮತ್ತೆ ಕೇಳಿದ. ಮೋಂಬತ್ತಿಯ ಬೆಳಕು ಅವನ ಉಬ್ಬಿದ ಕೆನ್ನೆಗಳ, ಮತ್ತು ತೆಳು ತುಟಿಗಳ ಮೇಲೆ ನರ್ತಿಸುತ್ತಿತ್ತು.

“ಅದನ್ನು ಹೇಗೆ ಪತ್ತೆ ಹಚ್ಚಿದಿರಿ?” ಅವನು ಆಶ್ಚರ್ಯದಿಂದ ಕೇಳಿದ.

“ಆಕಸ್ಮಿಕವಾಗಿ! ಅದು ರೀಗಾ ನಗರದ ಸ್ಟೇಜ್‌ಕೋಚನ್ನು ಹತ್ತುವುದರಲ್ಲಿತ್ತು. (ಸ್ಟೇಜ್ ಕೋಚ್ ಅಂದರೆ ಒಂದು ವಿಶಾಲವಾದ ಕುದುರೆ ಗಾಡಿ. ಒಮ್ಮೆಗೆ ಅದು ಸುಮಾರು ಹತ್ತು ಹದಿನೈದು ಮೈಲು ಪ್ರಯಾಣಿಸಿದ ನಂತರ ಒಂದು ಖಾನಾವಳಿಯ ಬಳಿ ನಿಲ್ಲಿಸಿ ಕುದುರೆಗಳಿಗೆ ಮೇವಿತ್ಯಾದಿ ಕೊಟ್ಟು ಮುಂದುವರಿಯುತ್ತಿತ್ತು. ಇಂಥ ನಿಲ್ದಾಣಗಳಿಗೆ ಸ್ಟೇಜ್ ಎಂದು ಕರೆಯುತ್ತಿದ್ದರು) ಒಬ್ಬ ಸರ್ಕಾರಿ ಅಧಿಕಾರಿಯ ಹೆಸರಿನಲ್ಲಿ ಅದು ಪಾಸ್‌ಪೊರ್ಟ್ ಮಾಡಿಸಿಕೊಂಡಿತ್ತು! ಶುರುವಿನಲ್ಲಿ ಅದನ್ನು ನಾನು ಒಬ್ಬ ಕುಲೀನ ಮನೆತನದ ವ್ಯಕ್ತಿ ಎಂದೇ ತಿಳಿದಿದ್ದೆ. ಸದ್ಯ ಜೇಬಿನಲ್ಲಿ ಕನ್ನಡಕ ಇತ್ತು. ಅದನ್ನು ಧರಿಸಿ ನೋಡಿದಾಗಲೇ ಅದೊಂದು ಮೂಗು ಎಂದು ನನಗೆ ಗೊತ್ತಾಗಿದ್ದು. ನನ್ನದು ವಿಪರೀತ ಸಮೀಪ ದೃಷ್ಟಿ ಎಂದೇ ಹೇಳಬೇಕು. ನೀವು ನನ್ನ ಎದುರಿಗೆ ನಿಂತರೆ ನಿಮ್ಮ ಮುಖ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತದೆಯೇ ಹೊರತು, ಮೂಗು, ಗಡ್ಡ ಇತ್ಯಾದಿ ಕಾಣಿಸುವುದೇ ಇಲ್ಲ. ನನ್ನ ಅತ್ತೆದೂ (ಮಡದಿಯ ತಾಯಿ) ಇದೇ ಸಮಸ್ಯೆ!

“ನನ್ನ ಮೂಗು ಈಗ ಎಲ್ಲಿದೆ?” ಕೊವಾಲ್ಯೊವ್ ಆತುರದಿಂದ ಕೇಳಿದ.

“ಇಷ್ಟೊಂದು ಉದ್ರೇಕಗೊಳ್ಳಬೇಡಿ ಸರ್! ನಿಮ್ಮ ಮೂಗಿನ ಬಗ್ಗೆ ನೀವು ಎಷ್ಟೊಂದು ಕಾತುರರಾಗಿರುತ್ತಿರೆಂದು ಗೊತ್ತಿದ್ದೇ ನಾನದನ್ನು ಜತೆಯಲ್ಲೇ ತಂದಿದ್ದೇನೆ. ನಿಮಗೆ ವಿಚಿತ್ರ ಎನಿಸಬಹುದು ಸಾರ್. ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ ವೊಜೆನ್ ಸ್ಕಿ ಬೀದಿಯ ಆ ದಗಲಬಾಜಿ ಕುಡುಕ ಕ್ಷೌರಿಕ. ಅವನನ್ನೂ ಸ್ಟೇಶನಿನೊಳಗೆ ಕೂಡಾಕಿದ್ದೇನೆ. ಮೊದಲಿಂದಲೂ ಆ ಕುಡುಕ ಕಳ್ಳನ ಮೇಲೆ ನಾನೊಂದು ಕಣ್ಣಿಟ್ಟಿದ್ದೆ. ಮೂರು ದಿನಗಳ ಹಿಂದೆಯಷ್ಟೇ ಒಂದು ಅಂಗಡಿಯಿಂದ ಕೆಲವು ಗುಂಡಿಗಳನ್ನು ಕದಿಯುತ್ತಿರುವಾಗ ಹಿಡಿದಿದ್ದೆ! ನೀವು ಮೂಗು ಕಳೆದುಕೊಂಡಂತ ಸ್ಥಿತಿಯಲ್ಲೇ ಅದನ್ನು ಪತ್ತೆ ಹಚ್ಚಿ ತಂದಿದ್ದೇನೆ,” ಎನ್ನುತ್ತಾ ಪೊಲೀಸ್ ಆಫೀಸರ್ ತನ್ನ ಜೇಬೊಳಗಿನಿಂದ ಪೇಪರಿನೊಳಗೆ ಸುತ್ತಿಟ್ಟಿದ್ದ ಮೂಗನ್ನು ಹೊರತೆಗೆದ.

“ಒಹ್!! ಅದುವೇ ನನ್ನ ಮೂಗು! ಯಾವುದೇ ಸಂಶಯವಿಲ್ಲ. ಈಗ ನೀವು ನನ್ನ ಜೊತೆ ಒಂದು ಕಪ್ ಚಹಾ ಸೇವಿಸಲೇಬೇಕು.”

“ಏನು ಮಾಡುವುದು ಸರ್. ನಾನು ಈಗಿಂದೀಗಲೇ ಸ್ಟೇಶನಿಗೆ ಹೋಗಲೇಬೇಕು…ಜೀವನ ನಡೆಸೋದೇ ಕಷ್ಟ ಸರ್… ಆಹಾರ ಪದಾರ್ಥಗಳ ಬೆಲೆಗಳೆಲ್ಲಾ ಯದ್ವಾತದ್ವಾ ಏರುತ್ತಲೇ ಇವೆ. ನನ್ನತ್ತೆ ಬೇರೆ ನಮ್ಮ ಜೊತೆಯಲ್ಲೇ ವಾಸಿಸುತ್ತಿದ್ದಾರೆ. ಮಕ್ಕಳ ಓದು ಬೇರೆ. ಹಿರಿಯವನಂತೂ ಓದಿನಲ್ಲಿ ತುಂಬಾ ಚೂಟಿ ಸರ್. ಆದರೆ, ಏನು ಮಾಡುವುದು? ಮುಂದಕ್ಕೆ ಓದಿಸಲು ದುಡ್ಡು ಸಾಲುತ್ತಿಲ್ಲ…”

ಕೊವಾಲ್ಯೊವ್‌ನಿಗೆ ಅವನ ಮನದಿಂಗಿತ ಅರ್ಥವಾಯಿತು. ಮೇಜಿನ ಡ್ರಾವರಿನೊಳಗಿನಿಂದ ಒಂದು ನೋಟನ್ನು ಎಳೆದು ಪೊಲೀಸ್ ಆಫೀಸರನ ಕೈಗಿತ್ತ. ಅವನಿಗೆ ತಲೆ ಬಾಗಿಸಿ ವಂದಿಸುತ್ತಾ ಪೊಲೀಸ್ ಆಫೀಸರ್ ಹೊರನಡೆದ. ಬೀದಿಗಿಳಿಯುತ್ತಲೇ ಅವನು ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದ ರೈತನಿಗೆ ದೊಡ್ಡದನಿಯಲ್ಲಿ ಗದರಿಸುತ್ತಿರುವುದು ಕೇಳಿ ಬಂದಿತು.

ಪೊಲೀಸ್ ಆಫೀಸರ್ ಬಂದು ಹೋದ ಕೆಲ ಹೊತ್ತಿನವರೆಗೂ ಅವನು ಗರಬಡಿದವನಂತೆ ಹಾಗೇ ಕುಳಿತುಕೊಂಡ. ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವನು ಕಾಗದದ ಪೊಟ್ಟಣದಿಂದ ತನ್ನ ಮೂಗನ್ನು ಹೊರತೆಗೆದು ತನ್ನ ಬೊಗಸೆಯಲ್ಲಿ ಹಿಡಿದು ಹತ್ತಿರದಿಂದ ಪರೀಕ್ಷಿಸಿದ.

“ನನ್ನದೇ! ಯಾವುದೇ ಅನುಮಾನಗಳಿಲ್ಲ. ನಿನ್ನೆ ಎಡಗಡೆಗೆ ಎದ್ದಿದ್ದ ಮೊಡವೆ ಕೂಡ ಹಾಗೆಯೇ ಇದೆ!” ಅವನು ಖುಷಿಯಿಂದ ನಕ್ಕ.

ಈ ಜಗತ್ತಿನಲ್ಲಿ ಯಾವುದೂ ಸ್ಥಿರವಲ್ಲ. ನೀರಿನ ಮೇಲೆ ಎಸೆದ ಕಲ್ಲು ಸಣ್ಣ ಅಲೆಯನ್ನು ಸೃಷ್ಟಿಸುತ್ತಾ ಕ್ರಮೇಣವಾಗಿ ವಿಸ್ತಾರಗೊಳ್ಳುತ್ತಾ ಹರಡಿ ಒಮ್ಮೆಲೇ ಮಾಯವಾಗುವಂತೆ, ಎಂಥ ಖುಷಿಯೂ ಕೂಡ ಒಂದೇ ನಿಮಿಷದೊಳಗೆ ಕರಗುತ್ತಾ ಮೊದಲಿನಂತೆಯೇ ಕಾಣಿಸತೊಡಗುವಂತೆ, ಕೊವಾಲ್ಯೊವ್‌ನಿಗೆ ಮೂಗು ಸಿಕ್ಕಿದರೂ ಕೂಡ ಎಲ್ಲೋ ಏನೋ ಯಡವಟ್ಟಾಗಿದೆ ಅಂತ ಅನಿಸತೊಡಗಿತು. ಹೌದು. ಮೂಗನ್ನು ಮತ್ತೆ ಯಥಾಸ್ಧಾನದಲ್ಲಿ ಕೂರಿಸುವುದು ಹೇಗೆ ಎಂಬ ಸಮಸ್ಯೆ ಅವನನ್ನು ಕಾಡತೊಡಗಿತು.

“ಒಂದು ವೇಳೆ ಅದನ್ನು ಸರಿಯಾಗಿ ಕೂರಿಸಲಾಗದಿದ್ದಲ್ಲಿ?!”

ಅವನು ಗಾಬರಿಯಿಂದ ಕನ್ನಡಿಯ ಬಳಿ ದೌಡಾಯಿಸಿದ. ಅದನ್ನು ಕಿತ್ತು ಮೇಜಿನ ಮೇಲಿಟ್ಟು ಕುಳಿತುಕೊಂಡ. ತಾನು ಅದನ್ನು ಅಂಟಿಸಲು ಹೋಗಿ ಏನಾದರೂ ವಾರೆಯಾಗಿ ಕೂರಿಸಿದರೆ? ಅವನ ಕೈಗಳು ನಡುಗತೊಡಗಿದವು. ಆದರೂ, ಬಹಳ ಜೋಪಾನದಿಂದ ಅವನು ಮೂಗನ್ನು ಅದರ ಸ್ವಸ್ಥಾನದಲ್ಲಿ ಕೂರಿಸಿದ. ಹತ್ತೇರಿ… ಎಷ್ಟೇ ಕಷ್ಟಪಟ್ಟು ಕೂರಿಸಿದ ಗಳಿಗೆಯೊಳಗೆ ಅದು ಬಿದ್ದು ಹೋಗುತ್ತಿತ್ತು! ಅವನು ಅದನ್ನು ಬಾಯಿಯ ಬಳಿ ತಂದು ಅದರ ಮೇಲೆ ಬಿಸಿ, ಬಿಸಿ ಗಾಳಿಯನ್ನೂದಿ ಅಂಟಿಸಲು ನೋಡಿದ. ಏನೇ ಮಾಡಿದರೂ ಅದು ಅಂಟಿಕೊಳ್ಳಲೇ ಇಲ್ಲ!

“ಕೂತ್ಕೊಳೋ ನನ್ನ್ ಮಗನೇ…” ಮೇಜರ್ ಕೊವಾಲ್ಯೊವ್ ಹತಾಶೆಯಿಂದ ಚೀರಿದ. ಆದರೆ, ಆ ಮೂಗು ಕೇಳಲೊಲ್ಲದು. ಬಿರಡೆಯಿಂದ ತಯಾರಿಸಿದ ಮೂಗಿನಂತೆ ಅದು ಅವನ ಕೆನ್ನೆಗಳ ಮಧ್ಯದ ಚರ್ಮಕ್ಕೆ ಅಂಟಿಕೊಳ್ಳದೆ ದೊಪ್ಪನೆ ಮೇಜಿನ ಮೇಲೆ ಬೀಳುತ್ತಲೇ ಇತ್ತು. ಏನು ಮಾಡಿದರೂ ಅದು ಅಂಟಿಕೊಳ್ಳಲೇ ಇಲ್ಲ!

ಬೇರೇನೂ ದಾರಿ ಕಾಣದೆ ಮೇಜರ್ ಕೊವಾಲ್ಯೊವ್ ತನ್ನ ಸೇವಕ ಇವಾನನನ್ನು ಕೂಗಿ ಕರೆದ. ಅವನು ವಾಸಿಸುತ್ತಿದ್ದ ಮಹಡಿಯ ಮೇಲಿನ ಮಹಡಿಯಲ್ಲಿ ಒಬ್ಬ ಯುವಕ ಡಾಕ್ಟರನು ತನ್ನ ಸುಂದರ ಪತ್ನಿಯೊಡನೆ ವಾಸಿಸುತ್ತಿದ್ದ. ದಿನ ಬೆಳಿಗ್ಗೆ ಅವನು ಸೇಬು ಹಣ್ಣು ತಿಂದು, ಮುಕ್ಕಾಲು ಗಂಟೆಯಾದರೂ ಬಾಯಿ ಮುಕ್ಕಳಿಸುತ್ತಿದ್ದಷ್ಟೇ ಅಲ್ಲದೆ ವಿವಿಧ ನಮೂನೆಯ ಐದು ಟೂತ್ ಬ್ರಶ್ಶುಗಳನ್ನು ಬಳಸುತ್ತಿದ್ದ. ಆ ಡಾಕ್ಟರನನ್ನು ಕರೆತರಲು ಕೊವಾಲ್ಯೊವ್ ಇವಾನನಿಗೆ ಹೇಳಿದ.

ಇವಾನ್ ಕರೆದ ಕೂಡಲೇ ಅವನು ತಕ್ಷಣ ಬಂದು, ಪೂರ್ವಾಪರ ವಿಚಾರಿಸುತ್ತಲೇ ಕೊವಾಲ್ಯೊವ್‌ನ ಒಮ್ಮೆ ಮೂಗಿದ್ದ ಜಾಗಕ್ಕೆ ತಿವಿದ. ಅವನು ತಿವಿದ ರಭಸಕ್ಕೆ ಕೊವಾಲ್ಯೊವ್‌ನ ತಲೆ ಹಿಂಬದಿಯ ಗೋಡೆಗೆ ಬಡಿಯಿತು. ಆದರೂ, ನೀವು ಕಿಂಚಿತ್ತೂ ಹೆದರುವ ಅಗತ್ಯವಿಲ್ಲವೆಂದು ಧೈರ್ಯ ತುಂಬಿಸಿದ ಡಾಕ್ಟರ್ ಕೊವಾಲ್ಯೊವ್‌ನಿಗೆ ಗೋಡೆಯಿಂದ ತುಸು ದೂರವೇ ನಿಲ್ಲಿಸಿ, ಮೊದಲು ಬಲಗಡೆಗೆ ಕತ್ತನ್ನು ಬಾಗಿಸಲು ಹೇಳಿದ. ಹಿಂದೊಮ್ಮೆ ಅವನ ಮೂಗು ಇದ್ದ ಜಾಗವನ್ನು ಜಿಗುಟುತ್ತಾ, ‘ಸರಿ, ಸರಿ’ ಎಂದು ಕತ್ತನ್ನು ಎಡಗಡೆಗೆ ತಿರುಗಿಸಲು ಹೇಳಿ ‘ಸರಿ, ಸರಿ’ ಎಂದು ಮತ್ತೊಮ್ಮೆ ತಿವಿದು ಅಸಹಾಯಕತೆಯಿಂದ ತಲೆಯಲ್ಲಾಡಿಸಿದ.

“ಏನೂ ಪ್ರಯೋಜನವಿಲ್ಲ. ನಾನಿನದನ್ನು ಚಿಟಿಕೆ ಮುರಿದಂತೆ ಕೂರಿಸಬಲ್ಲೆ. ಆದರೂ, ಇದರಿಂದ ಮತ್ತಷ್ಟು ಅವಲಕ್ಷಣವಾಗೋದು ಬಿಟ್ಟರೆ ಬೇರೆ ಏನೂ ಆಗುವುದಿಲ್ಲ! ನೀವು ಈಗ ಇದ್ದ ಹಾಗೆಯೇ ಇರೋದು ಕ್ಷೇಮ ಎಂದು ನನ್ನ ಭಾವನೆ.”

“ಅದ್ಭುತ, ಅದ್ಭುತ…! ಹೌದು. ಮೂಗೇ ಇಲ್ಲದಿರೋದು ಕ್ಷೇಮಕರ ಅಲ್ಲವೇ ಡಾಕ್ಟ್ರೇ?” ಅರ್ಧ ಸಿಟ್ಟು ಮತ್ತು ವ್ಯಂಗ್ಯದಿಂದ ಕೊವಾಲ್ಯೊವ್ ಹೇಳಿದ. “ನೀವು ಹೇಗೇ ಆದರೂ, ಕೂರಿಸಿಯಪ್ಪಾ, ಮೂಗೇ ಇಲ್ಲದಿರೋವಷ್ಟು ಕೆಟ್ಟದಾಗೇನೂ ಕಾಣಿಸಲಾರದು. ಮೂಗಿರುವವರ ಮಧ್ಯೆ ಮೂಗಿಲ್ಲದಿರುವವನು ಹೇಗೆ ಓಡಾಡುವುದು ನೀವೇ ಹೇಳಿ ನೋಡೊಣ? ನಾನು ಓಡಾಡಿಕೊಂಡಿರುವ ಜನರ್ಯಾರೂ ಸಾಮಾನ್ಯರಲ್ಲ. ಸಮಾಜದಲ್ಲಿ ಉನ್ನತ ಹೆಸರು ಗಳಿಸಿದವರು. ಇವತ್ತೇ ಸಂಜೆ ನನಗೆ ಎರಡು ಔತಣಕೂಟಗಳಿಗೆ ಆಮಂತ್ರಣವಿತ್ತು. ಮಿಸೆಸ್ ಚೆಕ್ತಾರೆವ್ ಹೆಸರು ಕೇಳಿದ್ದೀರಾ? ರಾಜ್ಯಮಟ್ಟದ ಕೌನ್ಸಿಲರೊಬ್ಬರ ಮಡದಿ. ಮತ್ತೊಬ್ಬಾಕೆ ಸ್ಟಾಫ್ ಆಫೀಸರರ ಮಡದಿ, ಮಿಸೆಸ್ ಪೊಡ್‌ಟೊಚಿನ್. ಈಕೆ ನನ್ನೊಂದಿಗೆ ನಡೆದುಕೊಂಡ ರೀತಿಯಿಂದಾಗಿ ನಾನು ಆಕೆಯ ಸಂಪರ್ಕವನ್ನು ಕಡಿದು ಕೊಂಡಿದ್ದೇನೆ. ಆಕೆಯೊಡನೆ ಮುಖಾಮುಖಿ ಏನಿದ್ದರೂ ಪೊಲೀಸರೊಟ್ಟಿಗಷ್ಟೇ…ಡಾಕ್ಟ್ರೇ…ಪ್ಲೀಜ್ ಏನಾದರೂ ಮಾಡಿ. ಏನಾದರೊಂದು ಪರಿಹಾರ ಇರಲೇಬೇಕು! ಹೇಗಾದರೂ ಜೋಡಿಸಿ ಪ್ಲೀಜ್. ಬೀಳುವಂತಿದ್ದರೆ ನಾನು ಕೈಯಲ್ಲಿ ಹಿಡಿದುಕೊಳ್ಳುತ್ತೇನೆ. ಅಲ್ಲದೆ, ನಾನು ಡ್ಯಾನ್ಸ್-ಗೀನ್ಸ್ ಮಾಡದೇ ಇರೋದರಿಂದ ಅದು ಬಿದ್ದು ಹೋಗುವ ಸಂಭವವಂತೂ ಖಂಡಿತಾ ಇರೋದಿಲ್ಲ. ಡಾಕ್ಟ್ರೇ…ನೀವು ಏನೂ ಹೆದರುವುದು ಬೇಡ. ನಿಮ್ಮನ್ನು ನನ್ನ ಅಂತಸ್ತಿಗೆ ತಕ್ಕಂತೆ ನಡೆಸಿಕೊಳ್ಳುತ್ತೇನೆ…”

ಪ್ರತ್ಯುತ್ತರವಾಗಿ ಡಾಕ್ಟರ್ ಮಾತನಾಡತೊಡಗಿದ. ಅವನ ದನಿ ಏರಿರಲೂ ಇಲ್ಲ, ಹಾಗಂತ ಮೆದುವಾಗಿಯೂ ಇರಲಿಲ್ಲ. ಮನವೊಲಿಸುವಂತಿತ್ತು.

“ನಾನು ಯಾವತ್ತೂ ನನ್ನ ವಿದ್ಯೆಯನ್ನು ಹಣಕ್ಕಾಗಿ ಮಾರಿಕೊಂಡವನಲ್ಲ. ನನ್ನ ವೃತ್ತಿಪರ ನೈತಿಕತೆ ಮತ್ತು ಸಿದ್ಧಾಂತಗಳಿಗುಣವಾಗಿ ನಡೆಸಿಕೊಂಡು ಬಂದಿದ್ದೇನೆ. ಖಾಸಗಿ ಸಮಾಲೋಚನೆಗಳಿಗೆ ದುಡ್ಡು ಪಡೆದುಕೊಂಡಿಲ್ಲವೆಂದು ಹೇಳಲಾರೆ. ನನ್ನ ಸೇವೆಯನ್ನು ಪಡೆದುಕೊಂಡವರ ಸ್ವಾಭಿಮಾನವನ್ನು ನೋಯಿಸಬಾರದೆಂಬ ಸದುದ್ದೇಶದಿಂದ ಮಾತ್ರ. ನಿಮ್ಮ ಮೂಗು ಜೊಡಿಸಿಕೊಡಲು ನನ್ನಿಂದ ಸಾಧ್ಯವಿಲ್ಲವಂತಲ್ಲ. ಆದರೆ, ಅದು ಖಂಡಿತವಾಗಿಯೂ ನಿಮ್ಮ ಒಳ್ಳೆಯದಕ್ಕಾಗಿರಲಾರದು. ನಿಸರ್ಗಕ್ಕೇ ಬಿಟ್ಟು ಬಿಡಿ. ಅದು ತನ್ನಷ್ಟಕ್ಕೆ ಸೂಕ್ತ ಪರಿಹಾರ ಹುಡುಕಿಕೊಳ್ಳುತ್ತದೆ. ಆ ಜಾಗವನ್ನು ತಣ್ಣೀರಿನಿಂದ ತೊಳೆದು ಸ್ವಚ್ಛವಾಗಿ ಇರಿಸಿಕೊಳ್ಳಿ. ಖಂಡಿತವಾಗಿಯೂ ನನ್ನನ್ನು ನಂಬಿ. ಕ್ರಮೇಣ ನಿಮಗೆ ಒಂದು ಮೂಗು ಇತ್ತು ಎಂಬುದೇ ಮರೆತು ಹೋಗುತ್ತದೆ. ಆ ಮೂಗನ್ನು ಒಂದು ಮದ್ಯದ ಬೋಗುಣಿಯಲ್ಲಿ ಸಂರಕ್ಷಿಸಿ ಇಡಿ. ಹುಳಿ ಬರಿಸಿದ ಎರಡು ಚಮಚ ವೋಡ್ಕಾ ಮತ್ತು ಬಿಸಿ ಮಾಡಿದ ವಿನೆಗರ್‌ನಲ್ಲಿಡಿ. ಒಳ್ಳೆ ಬೆಲೆ ಬಾಳುತ್ತದೆ. ನಿಮಗೆ ಬೇಡವೆಂದರೆ ನಾನೇ ಕೊಂಡುಕೊಳ್ಳುತ್ತೇನೆ.”

“ಅದು ಮತ್ತೊಮ್ಮೆ ಕಳೆದು ಹೋದರೂ ಚಿಂತೆ ಇಲ್ಲ, ಖಂಡಿತಾ ಮಾರುವುದಿಲ್ಲ,”ಕೊವಾಲ್ಯೊವ್ ದೃಢವಾಗಿ ಹೇಳಿದ.

“ಸರಿ ಬಿಡಿ.” ಎನ್ನುತ್ತಾ ಡಾಕ್ಟರ್ ಅವನಿಗೆ ವಂದಿಸಿ ಹೊರಡಲಣಿಯಾದ. “ನನ್ನಿಂದ ಸಹಾಯವಾದೀತೆಂದು ತಿಳಿದಿದ್ದೆ. ಕ್ಷಮಿಸಿ.”

ಕೊವಾಲ್ಯೊವ್ ಅವನೆಡೆಗೆ ಕತ್ತೆತ್ತಿಯೂ ನೋಡಲಿಲ್ಲ. ಆ ಮರಗಟ್ಟಿದ ಸ್ಥಿತಿಯಲ್ಲೂ ಅವನಿಗೆ ಡಾಕ್ಟರನ ಕರಿ ಕೋಟಿನಿಂದ ಹೊರ ಇಣುಕುತ್ತಿದ್ದ ಶರಟಿನ ಅಚ್ಚ ಬಿಳುಪು ತೋಳು ತುದಿಗಳು ಮಾತ್ರ ಗೋಚರಿಸುತ್ತಿದ್ದವು.

| ಮುಂದುವರೆಯುವುದು |

‍ಲೇಖಕರು Admin

December 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: