ಡಾ ಕೆ ಎಸ್ ಚೈತ್ರಾ ಅಂಕಣ– ಚೀನಿ ಹುಡುಗಿ, ತಮಿಳು ಆತ್ಮ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

4

ಶಿವಮೊಗ್ಗೆಯಂಥ ಊರಿನಲ್ಲಿ ಬೆಳೆದ ನನಗೆ ಬೇರೆ ರಾಜ್ಯಗಳ ಅದರಲ್ಲೂ ಬೇರೆ ದೇಶಗಳ ಜನರು ಎಂದರೆ ಎಲ್ಲಿಲ್ಲದ ಬೆರಗು. ಅವರ ಮಾತು, ಉಡುಪು, ಮನೋಭಾವ ಎಲ್ಲವೂ ಆಸಕ್ತಿ ಮೂಡಿಸುತ್ತಿತ್ತು. ವಿಶೇಷವಾಗಿ ನಮ್ಮ ನೆರೆ ರಾಷ್ಟ್ರ ಚೀನಾದವರೆಂದರೆ ಸ್ವಲ್ಪ ಹೆಚ್ಚೇ ಆಸಕ್ತಿ. ಮಣಿಪಾಲದಲ್ಲಿ ಸಾಕಷ್ಟು ವಿದೇಶಿ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಚೀನಾ ಮೂಲದ ಸಿಂಗಾಪೂರ್, ಮಲೇಷ್ಯಾ, ಥೈಲ್ಯಾಂಡ್, ವಿಯೆಟ್ನಾಂಗಳಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳು ಅನೇಕರು. ನಮಗೆ ಅವರೆಲ್ಲರ ಮುಖ ಚಹರೆ ಒಂದೇ ಎನಿಸುತ್ತಿತ್ತು, ಹಾಗಾಗಿ ಎಲ್ಲರನ್ನೂ ಚೀನಿಯರು ಎಂದೇ ತಿಳಿದಿದ್ದೆವು.

ನಮ್ಮ ತರಗತಿಯಲ್ಲಿದ್ದ ಐದಾರು ಈ ರೀತಿ ಚೀನಿಯರ ಬಗ್ಗೆ ಒಂದು ಥರದ ವಿಶೇಷ ಆಕರ್ಷಣೆ ನನಗೆ. ಅದಕ್ಕೆ ಸರಿಯಾಗಿ ಹಾಸ್ಟೆಲ್ಲಿನಲ್ಲಿ ನಮ್ಮೊಂದಿಗೆ ಇದ್ದವಳು ಮರಿಯಾ. ಅವಳ ರೇಷ್ಮೆ ಕೂದಲು, ಹೊಳೆವ ಚರ್ಮ, ಸಣ್ಣ ಕಣ್ಣು, ಚಪ್ಪಟೆ ಮೂಗು ಎಲ್ಲವೂ ಅವಳನ್ನು ನಮ್ಮಿಂದ ಪ್ರತ್ಯೇಕಿಸಿತ್ತು. ಪುಟ ಪುಟ ನಡೆಯುತ್ತಾ ಯಾರೊಂದಿಗೂ ಹೆಚ್ಚಾಗಿ ಬೆರೆಯದ ಅವಳದ್ದು ಗಂಭೀರ ಸ್ವಭಾವ. ಅಗತ್ಯವಾದಷ್ಟೇ ಸಣ್ಣ ದನಿಯಲ್ಲಿ ಮಾತು, ನಗುವೂ ಕಡಿಮೆಯೇ. ಕೆಲವರು ಸೊಕ್ಕು ಎನ್ನುತ್ತಿದ್ದರು; ನನಗೆ ಅವಳನ್ನು ಕಂಡರೆ ‘ಪಾಪ, ಎಲ್ಲಿಂದಲೋ ಬಂದು ನಮ್ಮನ್ನೆಲ್ಲಾ ಕಂಡು ತಾನು ಬೇರೆ ಎನ್ನುವ ಸಂಕೋಚ ಇರಬೇಕು’ ಎಂಬ ಊಹೆ. ಹಾಸ್ಟೆಲ್ಲಿನಲ್ಲೂ ಕೂಡಾ ಸಿಂಗಲ್ ರೂಮಿನಲ್ಲಿ ವಾಸವಾಗಿದ್ದಳು. ಹೀಗಾಗಿ ಯಾರಿಗೂ ಹೆಚ್ಚು ಮಾಹಿತಿ ಇರಲಿಲ್ಲ. ಆದರೆ ತರಗತಿಯಲ್ಲದೇ ದಿನವೂ ಅವಳು ಸಿಗುತ್ತಿದ್ದದ್ದು ಊಟ-ತಿಂಡಿಗೆ…..ಅದೂ ಸೌತ್ ಇಂಡಿಯನ್ ಮೆಸ್‌ನಲ್ಲಿ!

ಮೊದಲ ಬಾರಿ ನೋಡಿದಾಗ ಆಕೆ ಮೂಲೆಯಲ್ಲಿ ಕುಳಿತು ದೋಸೆ ತಿನ್ನುತ್ತಿದ್ದಳು. ಕೈಯ್ಯಲ್ಲಿ ದೋಸೆ ಚೂರು ಮಾಡಿ ಚಟ್ನಿ- ಪಲ್ಯದಲ್ಲಿ ಅದ್ದಿಸಿ ಆಕೆ ತಿನ್ನುತ್ತಿದ್ದ ರೀತಿ ಥೇಟ್ ನಮ್ಮ ಹಾಗೆಯೇ! ಊಟದ ಸಮಯದಲ್ಲೂ ಅಷ್ಟೇ..ಸಾರು-ಹುಳಿ-ಅನ್ನ- ಪಲ್ಯ ಎಲ್ಲವನ್ನೂ ಸಲೀಸಾಗಿ ತಿನ್ನುತ್ತಿದ್ದಳು. ಆದರೆ ದಿನವೂ ಅಡಿಗೆಯವರ ಹತ್ತಿರ ಏನೋ ಕೇಳುವುದು- ತೋರಿಸುವುದು ಮಾಡುತ್ತಿದ್ದಳು. ‘ಈ ಚೀನಿ ಹುಡುಗಿಗೆ ಬಹುಶಃ ಎಲ್ಲವೂ ಖಾರ ಇರಬೇಕು. ಹಾಗೆಯೇ ಈ ಎಲ್ಲಾ ತರಕಾರಿ-ಖಾದ್ಯಗಳು ಹೊಸದು. ಹಾಗಾಗಿ ಎಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಾಳೆ. ಅನ್ನ ತಿನ್ನುವ ನಮಗೆ ಈ ಉತ್ತರ ಭಾರತೀಯರ ಪರಾಠಾ ತಿನ್ನುವುದು ಕಷ್ಟ. ಹೀಗಿರುವಾಗ ಒಂದು ದೇಶದಿಂದ ಇನ್ನೊಂದಕ್ಕೆ ಹೊಂದಿಕೊಳ್ಳುವುದು ಇವರಿಗೆ ಎಷ್ಟು ಕಠಿಣ೧ ಇವರಿಗೇ ಬೇರೆ ಮೆಸ್ ಇದ್ದಿದ್ದರೆ ಒಳ್ಳೆಯದಿತ್ತು’ ಎಂದು ನಮ್ಮ ನಮ್ಮಲ್ಲೇ ಮಾತು ನಡೆಯುತ್ತಿತ್ತು. ಆಶ್ಚರ್ಯವೆಂದರೆ ನಮ್ಮ ಕ್ಲಾಸಿನಲ್ಲಿದ್ದ ಇತರ ಚೀನಿ ವಿದ್ಯಾರ್ಥಿಗಳ ಜತೆಯೂ ಆಕೆ ಬೆರೆಯುತ್ತಿರಲಿಲ್ಲ.

ಒಟ್ಟಿನಲ್ಲಿ ಎಲ್ಲರಿಗೂ ಒಂದು ರೀತಿಯ ನಿಗೂಢ ಆಕರ್ಷಣೆ- ರಹಸ್ಯದ ವ್ಯಕ್ತಿತ್ವ ಈ ಮರಿಯಾಳದ್ದಾಗಿತ್ತು. ಬೆನ್ನ ಹಿಂದೆ ಒಂದಿಷ್ಟು ಮಾತನಾಡುವುದರ ಜತೆ ಆಗಾಗ್ಗೆ ಅವಳ ಮುಂದೆಯೇ ಹೇಗೂ ಗೊತ್ತಾಗುವುದಿಲ್ಲ ಎಂಬ ಧೈರ್ಯದಿಂದ ಕನ್ನಡ-ತಮಿಳು-ಹಿಂದಿಯಲ್ಲಿ ಒಂದಿಷ್ಟು ತಮಾಷೆಯ ಮಾತುಗಳೂ ಹೊರಬರುತ್ತಿದ್ದವು. ‘ಇವಳ ಕಣ್ಣು ಎಷ್ಟು ಸಣ್ಣದು.. ನಿದ್ದೆ ಮಾಡ್ತಾ ಇದ್ದಾಳೊ ಇಲ್ವೋ ಗೊತ್ತೇ ಆಗಲ್ಲ, ಪಾಪ ಜಿರಲೆ-ಹಲ್ಲಿ ತಿನ್ನುವ ಇವಳಿಗೆ ನಮ್ಮ ಅನ್ನ-ಸಾರು ತಿಂದು ನಾಲಿಗೆ ಸುಟ್ಟೇ ಹೋಗಿರುತ್ತೆ, ಈ ಹುಡುಗಿಗೆ ಸೀರೆ ಉಡಿಸಿ ಕುಂಕುಮ ಇಟ್ಟರೆ ಹೇಗೆ ಕಾಣಿಸಬಹುದು? ನಮ್ಮ ಪೇಶೆಂಟ್ಸ್ ಇವಳನ್ನು ನೋಡಿದ್ರೆ ಹೆದರಿ ಓಡಬಹುದು’ ಹೀಗೆ ಹುಡುಗರ ಕೀಟಲೆಯ ಕೆಲವೊಮ್ಮೆ ಅಪಹಾಸ್ಯದ ಮಾತಿಗೆ ಕೊನೆಯೇ ಇರಲಿಲ್ಲ. ಆಕೆಯದ್ದು ಎಂದಿನಂತೆ ನಿರ್ಲಿಪ್ತ ಮುಖಭಾವ. ಆದರೆ ನಾವೆಲ್ಲಾ ಊಹಿಸಲಾರದ ಘಟನೆ ನಡೆದಿತ್ತು.

ಥಿಯರಿ ತರಗತಿ ಮುಗಿದು ಪ್ರಾಕ್ಟಿಕಲ್ ಕ್ಲಾಸ್ ಆರಂಭವಾಗುವ ಮುನ್ನ ಸ್ವಲ್ಪ ಸಮಯ ವಿರಾಮ ಸಿಗುತ್ತಿತ್ತು. ಆಗ ಎಲ್ಲರೂ ಗುಂಪಾಗಿ ಹರಟೆ ಹೊಡೆಯುವುದು ರೂಢಿ. ಆ ದಿನವೂ ಅಷ್ಟೇ. ಎಲ್ಲರೂ ತರಗತಿಯಲ್ಲೇ ಕುಳಿತು ಮಾತನಾಡುತ್ತಾ ನೋಟ್ಸ್ ಮಾಡುತ್ತಿದ್ದೆವು. ಮರಿಯಾ ತನ್ನ ಪಾಡಿಗೆ ತಾನು ಏನೋ ಓದುತ್ತಿದ್ದಳು. ಇದ್ದಕ್ಕಿದ್ದಂತೆ ನಮ್ಮ ಸೀನಿಯರ್ ಸುಬ್ರಮಣಿಯಂ ನಮ್ಮೆಡೆಗೆ ಬಂದ. ಜ್ಯೂನಿಯರ್‌ಗಳಾಗಿದ್ದ ನಮಗೆ ಇವರನ್ನು ಕಂಡರೆ ಎಲ್ಲಿಲ್ಲದ ಹೆದರಿಕೆ. ಅವರನ್ನು ಸರ್ ಎನ್ನುವುದು, ಎದ್ದು ನಿಂತು ಗೌರವಿಸುವುದು ಕಡ್ಡಾಯ. ಎದ್ದೆವೋ ಬಿದ್ದೆವೋ ಎಂದು ಎಲ್ಲರೂ ವಿಶ್ ಮಾಡಲು ನಿಂತರೆ ಆತ ನಡೆದಿದ್ದು ಸೀದಾ ನಮ್ಮ ಮರಿಯಾ ಬಳಿ. ನಮಗೆ ಕುತೂಹಲವಾದರೆ ಮತ್ತೆ ಕೆಲವರಿಗೆ ಈ ಮರಿಯಾಳಿಗೆ ಆತ ಏನೋ ಬೈಯ್ಯುತ್ತಾನೆ ಎಂಬ ನಿರೀಕ್ಷೆ! ಆತ ಅವಳೆದುರು ನಿಂತು ನಗುತ್ತಾ ತಮಿಳಿನಲ್ಲಿ ಏನೋ ಕೇಳಿದ.

ನಮ್ಮ ನೋಟ ಪುಸ್ತಕದ ಮೇಲಿದ್ದರೂ ಕಿವಿಯೆಲ್ಲಾ ಅತ್ತಲೇ ಇತ್ತು. ಏನಾಶ್ಚರ್ಯ.. ಮುಖದ ತುಂಬಾ ನಗೆ ಸೂಸುತ್ತಾ ಈ ಚೀನಿ ಹುಡುಗಿ ಮರಿಯಾ ಇಷ್ಟುದ್ದದ ಉತ್ತರ ಕೊಟ್ಟಳು ಇಂಗ್ಲೀಷಿನಲ್ಲಿ ಅಲ್ಲ, ತಮಿಳಿನಲ್ಲಿ! ಕಣ್ಣು- ಬಾಯಿ -ಕಿವಿ ತೆರೆದು ನಾವು ಅಲ್ಲಿಯೇ ಕುಳಿತಿದ್ದೆವು. ಸುಮಾರು ಸಮಯ ಇಬ್ಬರ ಮಾತುಕತೆ ನಡೆಯಿತು. ‘ಶರಿ, ವರುಕ್ಕಾಯಿಕ್ಕು ನಣ್ರಿ’ ಎಂದೇನೋ ಹೇಳಿ ಮರಿಯಾ ಕುಳಿತಾಗ ಆಕೆಯೇ ನಮ್ಮ ಪಾಲಿಗೆ ಹೀರೋಯಿನ್. ಹುಡುಗರಂತೂ ಚೀನಿ ಹುಡುಗಿಯ ದೇಹದಲ್ಲಿ ತಮಿಳು ಆತ್ಮ ಸೇರಿರಬೇಕು, ಇದು ಪೂರ್ವಜನ್ಮದ ಕತೆ ಎಂದೆಲ್ಲಾ ಗಾಬರಿಯಾಗಿದ್ದರು. ದೈವಭಕ್ತ ಹರಿ ‘ಭೂಮಿಯು ಬಿರಿಯಲಿ, ಗಗನವು ನಡುಗಲಿ, ಬಿಡೆನು ನಿನ್ನ ಪಾದ ಗುರುವೇ, ನಮ್ಮ ಸಹಪಾಠಿ ಉಳಿಸುವ ತನಕ’ ಎಂದು ಮಣಮಣಿಸತೊಡಗಿದ್ದ. ಮರಿಯಾ ಮಾತ್ರ ಎಂದಿನಂತೆ ತನ್ನಷ್ಟಕ್ಕೆ ತಾನಿದ್ದಳು. ಅವಳ ಬಗ್ಗೆ ಆ ದಿನ ಪೂರ್ತಿ ತಲೆ ಕೆಡಿಸಿಕೊಂಡವರು ನಾವು! ಕಡೆಗೆ ಧೈರ್ಯ ಮಾಡಿ ಮೆಸ್‌ನಲ್ಲಿ ಸಿಕ್ಕಾಗ ನಾವು ಗೆಳತಿಯರು ಅವಳೊಟ್ಟಿಗೆ ಕುಳಿತು ‘ಮರಿಯಾ, ಮರೆಯಲಾರದ ಶಾಕ್ ಕೊಟ್ಟೆ ನೀನು’ ಎಂದೇ ಮಾತು ಆರಂಭಿಸಿದೆವು. ಜೋರಾಗಿ ನಕ್ಕಳು ಮರಿಯಾ, ಅದರೊಂದಿಗೇ ನಮ್ಮ ನಡುವಿನ ಗೋಡೆ ಒಡೆಯಿತು; ಇತಿಹಾಸದ ಅನೇಕ ಸ್ವಾರಸ್ಯಕರ ವಿಷಯಗಳು ತಿಳಿದವು.

ಅಂದ ಹಾಗೆ ನಮ್ಮ ಮರಿಯಾ ಚೆನ್ನೈನವಳು; ಹುಟ್ಟಿದ್ದು-ಬೆಳೆದದ್ದು ಎಲ್ಲವೂ ಅಲ್ಲಿಯೇ. ಅವಳ ಪೂರ್ವಜರು ಮೂಲತಃ ಚೀನಾದ ಹುಬೈ ಪ್ರಾಂತ್ಯದವರು. ಎರಡನೇ ಮಹಾಯುದ್ಧದ ಸಮಯದಲ್ಲಿ ಬಲವಂತದಿಂದ ಎಲ್ಲರನ್ನೂ ಯುದ್ಧಕ್ಕೆ ಕಳುಹಿಸಲಾಗುತ್ತಿತ್ತು. ಮರಣ ಅಥವಾ ಪಲಾಯನ ಎರಡೇ ಅವರಿಗಿದ್ದ ಮಾರ್ಗ. ಹೀಗಾಗಿ ೧೯೩೦ ರಲ್ಲಿ ಒಟ್ಟು ಎಂಟು ಕುಟುಂಬಗಳು ಒಂದಾಗಿ ಸಮುದ್ರಮಾರ್ಗವಾಗಿ ಬರ್ಮಾ, ಮಲೇಷ್ಯಾ, ಸಿಂಗಪೂರ್ ದಾಟಿ ಚೆನ್ನೈಗೆ ಬಂದರು.

ಮರಿಯಾಳ ಪೂರ್ವಜರು ಸಾಂಪ್ರದಾಯಿಕ ಚೀನಿ ದಂತವೈದ್ಯರಾಗಿದ್ದರು, ಆದರೆ ಇಲ್ಲಿ ದಂತವೈದ್ಯರೆಂದು ಅವರ ದಾಖಲಾತಿ ಆಗಿರಲಿಲ್ಲ. ಆಗಿನ್ನೂ ಇಲ್ಲಿ ದಂತವೈದ್ಯಕೀಯ ಕಾಲೇಜುಗಳೇ ಇರಲಿಲ್ಲ, ಬಾಯಿಯ ಆರೋಗ್ಯದ ಬಗ್ಗೆ ಇದ್ದ ಅರಿವೂ ಕಡಿಮೆಯೇ. ಆದರೂ ಇವರು ತಮ್ಮೊಂದಿಗೆ ಇಂಗ್ಲೆಂಡಿನಿಂದ ತಂದಿದ್ದ ಕೊಂಡೊಯ್ಯುವ ಸಾಧನ ಬಳಸಿ ಬಂದರಿಗೆ ಬಂದು ಹೋಗುತ್ತಿದ್ದ ವ್ಯಾಪಾರಿಗಳಿಗೆ ಹಲ್ಲಿನ ಚಿಕಿತ್ಸೆ ನೀಡುತ್ತಿದ್ದರು.ಉತ್ತಮ ಚಿಕಿತ್ಸೆ ಕಡಿಮೆ ದರದಲ್ಲಿ ನೀಡುತ್ತಿದ್ದುದ್ದರಿಂದ ಈ ಚೀನಿ ವೈದ್ಯರು ಜನಪ್ರಿಯರಾದರು, ಇಲ್ಲಿಯೇ ನೆಲೆಸಿದರು. ೧೯೫೦ ರಲ್ಲಿ ದಂತವೈದ್ಯಕೀಯ ಕಾಲೇಜು ಆರಂಭವಾದಾಗ ಇವರ ಮಕ್ಕಳು ಅಲ್ಲಿ ಸೇರಿದರು. ಹೀಗೆ ದಂತವೈದ್ಯರ ಸಂಖ್ಯೆ ಹೆಚ್ಚಿತು. ಇಂದಿಗೂ ಚೆನ್ನೆöÊನಲ್ಲಿ ಮೂಲ ಕುಟುಂಬಗಳ ಹಲವಾರು ಜನ ದಂತವೈದ್ಯರಾಗಿದ್ದರೆ, ಮೊಮ್ಮಕ್ಕಳು ವಿದೇಶಗಳಲ್ಲಿ ನೆಲೆಸಿದ್ದಾರೆ. ನಮ್ಮ ಮರಿಯಾ ಮೂರನೇ ತಲೆಮಾರಿನವಳು.

ಚೀನಿ ಭಾಷೆ ಸ್ವಲ್ಪ ಬರುತ್ತಿತ್ತು, ಆದರೆ ತಮಿಳಿನಲ್ಲಿ ಪಂಡಿತಳು. ತನ್ನ ಪೂರ್ವಜರ ನಾಡು ಚೀನಾ ನೋಡಬೇಕು ಎಂಬ ಆಸೆ ಇದ್ದರೂ ಅದು ಬರೀ ಪ್ರವಾಸಿಯಾಗಿ ಮಾತ್ರ. ಕಮ¯ಹಾಸನ್ ಕಟ್ಟಾ ಅಭಿಮಾನಿ, ಇಡ್ಲಿ- ಸಾಂಬಾರ್ ಪ್ರಿಯೆ. ಪೊಂಗಲ್ ಇಷ್ಟದ ಹಬ್ಬ. ಮೆಸ್‌ನಲ್ಲಿ ಅವಳು ದಿನವೂ ಅಡಿಗೆಯ ಬಗ್ಗೆ ಕೇಳುತ್ತಿದ್ದುದ್ದಲ್ಲ; ಸರಿಯಾದ ಸಾಂಬಾರ್, ರಸಂ, ಫಿಲ್ಟರ್ ಕಾಫಿ ಮಾಡುವ ವಿಧಾನ ಹೇಳಿಕೊಡುತ್ತಿದ್ದಳು. ಬರೀ ತಮಿಳಷ್ಟೇ ಅಲ್ಲ ಮಲಯಾಳಂ, ತೆಲುಗು ಕೂಡಾ ಅರ್ಥವಾಗುತ್ತಿತ್ತು. ತನ್ನ ಸಣ್ಣ ಕಣ್ಣುಗಳಲ್ಲಿ ನಗು ತುಳುಕಿಸುತ್ತಾ ‘ಎಲ್ಲರೂ ಮಾತನಾಡುವುದು ನನಗೆ ಅರ್ಥವಾಗುತ್ತದೆ. ಆದರೂ ಇರಲಿ ಎಂದು ಸುಮ್ಮನಿದ್ದೆ. ಈ ಸುಬ್ಬು ಎಲ್ಲಾ ಹಾಳು ಮಾಡಿದ.

ನಮ್ಮೂರಿನವನ ಜತೆ ನಮ್ಮ ಭಾಷೆಯಲ್ಲದೇ ಬೇರೆ ಭಾಷೆಯಲ್ಲಿ ಹೇಗೆ ಮಾತನಾಡಲಿ? ಈ ಮಣಿಪಾಲ ಹೊಸ ಸ್ಥಳವಾದರೂ ಪರವಾಗಿಲ್ಲ; ನಮ್ಮೂರಿನ ಹಾಗೆಯೇ ಬಿಸಿಲು. ನನಗೆ ಚೆನ್ನೈ ಜಗತ್ತಿನಲ್ಲೇ ಅತ್ಯಂತ ಪ್ರೀತಿಯ ಸ್ಥಳ’ ಎಂದಳು. ಇದನ್ನೆಲ್ಲಾ ಕೇಳಿ ನಮಗೆ ನಾಚಿಕೆ, ಆಶ್ಚರ್ಯ, ಖುಷಿ ಎಲ್ಲವೂ ಬೆರೆತ ಸಮ್ಮಿಶ್ರ ಭಾವ. ವಿಷಯ ಗೊತ್ತಾದ ಬಳಿಕ ಕ್ಲಾಸಿನ ಹುಡುಗರಂತೂ ಸಾರಿ ಕೇಳಿ ಅವಳಿಗೆ ಮರಿಯಮ್ಮ ಎಂದೇ ಹೊಸ ನಾಮಕರಣ ಮಾಡಿದರು. ಎಲ್ಲಿಂದಲೋ ಬಂದು ಅಪರಿಚಿತ ದೇಶದಲ್ಲಿ ನೆಲೆಸಿ ಅಲ್ಲಿಯವರೇ ಆದ ಸತ್ಯ ಕತೆಯಿದು. ಹಾಗಾಗಿಯೇ ಮರಿಯಾ ಚೀನಿ ಹುಡುಗಿಯಲ್ಲ; ಅಪ್ಪಟ ಚೆನ್ನೈನ ಪೆಣ್ಣು!!

‍ಲೇಖಕರು Admin

April 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: