ಡಾ ಕೆ ಎಸ್ ಚೈತ್ರಾ ಅಂಕಣ– ಫಿಸಿಯಾಲಜಿ ಎಂಬ ಭಯಾಲಜಿ!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

5

 ಫಿಸಿಯಾಲಜಿ  ಎಂದರೆ ಶರೀರರಚನಾ ಶಾಸ್ತ್ರ, ಮೊದಲನೆಯ ವರ್ಷದಲ್ಲಿ ವೈದ್ಯಕೀಯ ಮತ್ತು ದಂತವೈದ್ಯಕೀಯ ವಿದ್ಯಾರ್ಥಿಗಳು ಕಲಿಯಬೇಕಾದ ವಿಷಯ. ಹಾಗೆ ನೋಡಿದರೆ ಮೊದಲನೆಯ ವರ್ಷದಲ್ಲಿ ಕಲಿಯುವ ವಿಷಯಗಳು ಮುಂದಿನ ಶಿಕ್ಷಣಕ್ಕೆ ಮಾತ್ರವಲ್ಲ, ಇಡೀ ವೃತ್ತಿಜೀವನಕ್ಕೆ ಬುನಾದಿಯನ್ನು ಹಾಕುತ್ತದೆ. ದೇಹದ ವಿವಿಧ ವ್ಯವಸ್ಥೆಗಳ ಕಾರ್ಯವೈಖರಿ ಇಲ್ಲಿ ಕಲಿಯಬೇಕಾಗುತ್ತದೆ. ಶ್ವಾಸಕೋಶ, ಹೃದಯ, ಮೂತ್ರಪಿಂಡ, ಜನನಾಂಗಗಳು, ಮೆದುಳು, ಮಾಂಸಖಂಡಗಳು ಹೀಗೆ ದೇಹದಲ್ಲಿರುವ ವಿವಿಧ ಅಂಗಗಳು- ವ್ಯವಸ್ಥೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಕಲಿತಾಗ ಮಾತ್ರ ಈ ಮಾನವ ದೇಹ ಎಂಥ ಅದ್ಭುತ ಸೃಷ್ಟಿ ಎಂಬ ಅರಿವು ಮೂಡುತ್ತದೆ. ನಿಜ, ಈಗ ಬರೆಯಲೂ- ಹೇಳಲೂ ಇದು ಸರಿ ಎನಿಸುತ್ತದೆ; ಅನುಭವದಿಂದ ಅರ್ಥವೂ ಆಗಿದೆ. ಆಗ, ಅಂದರೆ  ಹದಿನೆಂಟರ ಹೊಸ್ತಿಲಲ್ಲಿ ಹಾಗೆನ್ನಿಸುತ್ತಿರಲಿಲ್ಲ! ಫಿಸಿಯಾಲಜಿ ಬರೀ ಬೋರಿಂಗ್ ಅನ್ನಿಸುತ್ತಿತ್ತು ಮತ್ತು ನೋವೂ ಕೊಟ್ಟು ಭಯಾಲಜಿ ಆಗಿತ್ತು. ಥಿಯರಿಯಲ್ಲಿ ಹಾಗೂ ಹೀಗೂ ತೂಕಡಿಸುತ್ತಾ ಕುಳಿತರೆ ಲ್ಯಾಬ್‌ನಲ್ಲಿ ಅಳಬೇಕಾಗುತ್ತಿತ್ತು. ಮಣಿಪಾಲದ ಬಿಸಿಲಲ್ಲಿ , ಪ್ರಾಕ್ಟಿಕಲ್ ಹಾಲ್‌ನಲ್ಲಿ ಕೇವಲ ಬೆವರಷ್ಟೇ ಅಲ್ಲ, ರಕ್ತವನ್ನೂ ನಾವೂ ಸುರಿಸಬೇಕಿತ್ತು… !!

ಕಾರಣ ಇಷ್ಟೇ, ರಕ್ತಕ್ಕೆ ಸಂಬಂಧಿಸಿದ ಅನೇಕ ಲ್ಯಾಬ್ ಪರೀಕ್ಷೆಗಳನ್ನು ಮಾಡುವುದು ಅನಿವಾರ್ಯ. ಅದಕ್ಕಾಗಿ ಪ್ರತೀ ಸಲ ರಕ್ತ ತರುವುದಾದರೂ ಎಲ್ಲಿಂದ? ಹೀಗಾಗಿ ನಾವೇ ನಮ್ಮ ರಕ್ತ ತೆಗೆದು ಟೆಸ್ಟ್ ಮಾಡಬೇಕಾಗಿದ್ದು ಅನಿವಾರ್ಯವಾಗಿತ್ತು. ಹಾಗಂತ ನಮಗೇನೂ ಲೀಟರ್‌ಗಟ್ಟಲೇ ರಕ್ತ ಬೇಕಾಗುತ್ತಿರಲಿಲ್ಲ, ಬೇಕಾಗಿದ್ದುದು ಕೆಲವೇ ಹನಿಗಳು. ಆದರೆ ಸಮಸ್ಯೆ ಇದ್ದುದು ನಮ್ಮಲ್ಲೇ. ವಿದ್ಯಾರ್ಥಿಗಳಾಗಿದ್ದ ನಮಗೆ ಬೆರಳಿಗೆ ಸಣ್ಣ ಗಾಯ ಮಾಡಿ, ರಕ್ತ ತೆಗೆದು ಕೂಡಲೇ ಅದನ್ನು ಪರೀಕ್ಷಿಸುವ ನೈಪುಣ್ಯತೆ ಇರಲಿಲ್ಲ. ಎಲ್ಲಕ್ಕಿಂತ ಮೊದಲು ನಮಗೆ ನಾವೇ ನೀಡಲ್ ಚುಚ್ಚಿಕೊಳ್ಳುವುದು ಎಂದರೆ ಕೈ ಜತೆಗೆ ಮೈ ನಡುಗುತ್ತಿತ್ತು. ಅಪ್ರಯತ್ನವಾಗಿ ಕಣ್ಣೂ ಮುಚ್ಚಿಬಿಡುತ್ತಿತ್ತು. ಹೀಗಾಗಿ ಒಮ್ಮೆ ಸೂಜಿ ಚುಚ್ಚದೇ ಇದ್ದರೆ, ಮತ್ತೆ ರಕ್ತ ಸಾಕಷ್ಟು ಸಿಗುತ್ತಿರಲಿಲ್ಲ. ಮತ್ತೆ ಕೆಲವು ಬಾರಿ ರಕ್ತ ತೆಗೆದು ಅದನ್ನು ಗಾಜಿನ ಸ್ಲೈಡಿಗೆ ಹಾಕುವಷ್ಟರಲ್ಲಿ ತಡವಾಗುತ್ತಿತ್ತು.ಸರಿಯಾದ ಸಮಯಕ್ಕೆ ರಕ್ತ ತೆಗೆದು, ಸ್ಲೈಡಿಗೆ ಹಾಕಿ, ಅದನ್ನು ಮೈಕ್ರೋಸ್ಕೋಪಿನ ಅಡಿಯಲ್ಲಿ ಇಟ್ಟು ನೋಡಿ ಫಲಿತಾಂಶ ಬರೆಯುವಷ್ಟರಲ್ಲಿ ದೊಡ್ಡ ಸಾಹಸ ಮಾಡಿದ ಅನುಭವ.

ಹೀಗೆ ಕನಿಷ್ಠ ಒಂದೊಂದು ಟೆಸ್ಟಿಗೂ ಸರಿಯಾಗಿ ಬರುವ ತನಕ ಎಂಟರಿಂದ ಹತ್ತು ಸಲ ಚುಚ್ಚು, ರಕ್ತ ತೆಗೆ ಈ ಕೆಲಸ ನಡೆಯುತ್ತಿತ್ತು. ನಮಗೇ ನಾವು ಚುಚ್ಚಿಕೊಳ್ಳುವುದು ಹೆದರಿಕೆ ಎಂದು ಒಬ್ಬರು ಇನ್ನೊಬ್ಬರಿಗೆ ಚುಚ್ಚುವುದು ಎಂದು ಒಪ್ಪಂದ ಮಾಡಿಕೊಂಡೆವು. ಆದರೆ ಅಲ್ಲಲ್ಲಿ ಜಗಳಗಳೂ ಶುರುವಾದವು. ಜೋರಾಗಿ ಚುಚ್ಚಿ ಬೆರಳು ನೀಲಿಯಾಯಿತು ಎಂದು ಕೆಲವರು ಕುಣಿದಾಡಿದರೆ, ಮೆಲ್ಲಗೆ ಚುಚ್ಚಿ ರಕ್ತ ಸಾಕಷ್ಟು ಸಿಗಲೇ ಇಲ್ಲ; ಮೂರು-ನಾಲ್ಕು ಸಲ ಮಾಡಬೇಕಾಯಿತು ಎಂದು ಕೆಲವರ ದೂರು. ಕೆಲವೊಮ್ಮೆ ಯಾರಿಗಾದರೂ ಜೋರಾಗಿ ಚುಚ್ಚಿ ರಕ್ತ ಹರಿಯುತ್ತಿದ್ದರೆ ಎಲ್ಲರೂ ‘ರಕ್ತ ದಾನ’ ಮಾಡಿ ಎಂದು ದುಂಬಾಲು ಬೀಳುತ್ತಿದ್ದದ್ದೂ ಇದೆ. ಇದೆಲ್ಲದರ ನಡುವೆಯೇ ತೋರು ಬೆರಳನ್ನು ಉಫ್ ಉಫ್ ಎನ್ನುತ್ತಾ ಸುರಿವ ಬೆವರನ್ನು ಒರೆಸಿಕೊಳ್ಳುತ್ತಾ ‘ಏನಾದ್ರೂ ತೊಂದರೆ ಇದ್ರೆ ತಿಳಿದರೆ ಸಾಕು. ಅದನ್ನು ಬಿಟ್ಟು ಸರಿ ಇರುವ ನಮ್ಮದೇ ರಕ್ತ ಈ ರೀತಿ ಚುಚ್ಚಿ ತೆಗೆದು ಪರೀಕ್ಷಿಸಿಕೊಳ್ಳುವ ಅಗತ್ಯ ಏನಿದೆಯೋ? ಇದೆಲ್ಲಾ ವೇಸ್ಟು, ಸ್ಟುಡೆಂಟ್ಸ್ ಗಳನ್ನು ಹದ್ದುಬಸ್ತಿನಲ್ಲಿಡುವ ಉಪಾಯ’ ಎಂದೆಲ್ಲಾ ನಮ್ಮ ಕ್ರಾಂತಿಕಾರಕ ಯೋಚನಾಲಹರಿ ಸಾಗುತ್ತಿತ್ತು, ಕೆಲವೊಮ್ಮೆ ಸಾಮೂಹಿಕ ಚರ್ಚೆಯೂ ನಡೆಯುತ್ತಿತ್ತು. ನಮಗೇನೋ ಇದು ಹೊಸದು. ಆದರೆ ನಮ್ಮಂಥ ಎಷ್ಟೋ ಬ್ಯಾಚುಗಳನ್ನು ನೋಡಿ ಪ್ರೊಫೆಸರ್‌ಗೆ ತಿಳಿಯದ ವಿಷಯವೇನಿದೆ? ಅದೂ ಅಲ್ಲದೇ ಅವರೂ ಈ ಹಂತ ದಾಟಿಯೇ ಬಂದವರಲ್ಲವೇ! ಹಾಗಾಗಿ ಕ್ಲಾಸಿನಲ್ಲಿ ವಿವರಿಸಿದ್ದರು ‘ಇದೆಲ್ಲಾ ಬೇಕಿತ್ತಾ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬಂದೇ ಬರುತ್ತದೆ; ಬರದಿದ್ದರೆ ಸಂಥಿಂಗ್ ಇಸ್ ರಾಂಗ್! ನಿಜವೇ, ನಿಮ್ಮ ಹತ್ತಿರ ಬರುವವರು ತೊಂದರೆ ಇರುವವರು, ಒಪ್ಪುವ ಮಾತು. ಆದರೆ ದೋಷ ಗುರುತಿಸುವುದು ಹೇಗೆ? ದೋಷವಿಲ್ಲದ್ದು ಯಾವುದು ಎಂದು ತಿಳಿದಾಗ ಮಾತ್ರ. ಹಾಗಾಗಿ ಸಹಜವಾಗಿ, ಸರಿಯಾಗಿ ಕೆಲಸ ಮಾಡುವ ದೇಹ ವ್ಯವಸ್ಥೆಯನ್ನು ಮೊದಲು ತಿಳಿದು ನಂತರ ದೋಷಗಳತ್ತ ಗಮನ ಹರಿಸಿರಿ.ಇದರ ಜತೆ ನೀವು ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಹೊಂದಾಣಿಕೆ.

ದೇಹದ ಪ್ರತೀ ವ್ಯವಸ್ಥೆಯೂ ಸಂಪೂರ್ಣವಾಗಿದೆ. ಆದರೆ ಅದೊಂದರಿಂದಲೇ ದೇಹ ಕೆಲಸ ಮಾಡುವುದಿಲ್ಲ.ಪ್ರತೀ ವ್ಯವಸ್ಥೆಯೂ ತನ್ನ ಕೆಲಸವನ್ನು ತಾನು ಮಾಡುವುದರ ಜತೆ ಪರಸ್ಪರ ಹೊಂದಿಕೊಂಡು ಕೆಲಸ ಮಾಡಬೇಕು. ಅದೇ ರೀತಿ ಬರೀ ಸಮಾಜದಲ್ಲೂ ಹಾಗೇ. ಪ್ರತಿ ವ್ಯಕ್ತಿಯೂ, ವೃತ್ತಿಯೂ, ವ್ಯವಸ್ಥೆಯೂ ಮುಖ್ಯ. ಎಲ್ಲದರಲ್ಲೂ ಹೊಂದಾಣಿಕೆ ಇಲ್ಲದಿದ್ದಲ್ಲಿ ಪ್ರಯೋಜನವೇನು? ಆಮೇಲೆ ಈಗ ಬೆರಳು ಚುಚ್ಚಿಕೊಳ್ಳುವಾಗ ಆಗುವ ನೋವು ಎಂದಿಗೂ ಮರೆಯಬೇಡಿ, ವಿಶೇಷವಾಗಿ ನೀವು ಇನ್ನೊಬ್ಬರಿಗೆ ಇಂಜೆಕ್ಷನ್ ಚುಚ್ಚುವಾಗ!’. ಅಂದಿನಿಂದ ನಮ್ಮ ಗೊಣಗಾಟ ಕಡಿಮೆಯಾಗಿತ್ತು (ಅವರನ್ನು ಕಂಡಾಗಲಾದರೂ). ಜತೆಗೇ ಚುಚ್ಚುವುದರಲ್ಲೂ ಪ್ರಾವೀಣ್ಯತೆ ಗಳಿಸಿದ್ದೆವು!

ಈ ಎಲ್ಲಾ ಕ್ಲಾಸ್- ಪ್ರಾಕ್ಟಿಕಲ್ ನಡುವೆ  ಆಗಾಗ್ಗೆ ನಮ್ಮದೇ ಮಾತುಕತೆಗಳೂ ನಡೆಯುತ್ತಿದ್ದವು. ಹಾಗೊಂದು ದಿನ ವಿರಾಮದಲ್ಲಿ ಚರ್ಚೆ ಶುರುವಾಗಿದ್ದು ಫೇವರಿಟ್ ಕಲರ್ ಬಗ್ಗೆ! ನಾನು ನನ್ನ ಇಷ್ಟದ ಬಣ್ಣ ಕೆಂಪು; ಆದರೆ ಈಗ ಈ ರಕ್ತ ನೋಡಿ, ಸುರಿಸಿ ಅಷ್ಟು ಇಷ್ಟ ಆಗ್ತಾ ಇಲ್ಲ ಎಂದಾಗ ಎಲ್ಲರೂ ನಕ್ಕರೆ ಶಿಬು ‘ ನನಗೆ ಕೆಂಪು ಎಂದರೆ ರೋಗ ಮತ್ತು ಯುದ್ಧ ನೆನಪಿಗೆ ಬರುತ್ತೆ. ಮೊದಲಿನಿಂದಲೂ ಇಷ್ಟವೇ ಇಲ್ಲ.ರಕ್ತ ಕಂಡರಂತೂ ಈಗಲೂ ತಲೆ ತಿರುಗುತ್ತೆ, ಹೊಟ್ಟೆ ತೊಳಸುತ್ತೆ. ದೇವರ ಸ್ವಂತ ನಾಡಿನ ನನಗೆ ಹಸಿರು ಪ್ರೀತಿಯ ಬಣ್ಣ’ ಎಂದ. ರಾಜಸ್ತಾನಿನ ಅಲ್ಕಾ ನನಗೂ ಈ ಕೆಂಪು ಇಷ್ಟವಿಲ್ಲ. ನನಗೆ ರಕ್ತಕ್ಕಿಂತ ಮೆಹೆಂದಿ ನೆನಪಿಗೆ ಬರುತ್ತದೆ ಎಂದಾಗ ಎಲ್ಲರಿಗೂ ಆಶ್ಚರ್ಯ. ಹುಡುಗಿಯರಾದ ನಮಗೆಲ್ಲರಿಗೂ ಬಣ್ಣದ ಸುಂದರ ಚಿತ್ತಾರ ಮೂಡಿಸುವ ಈ ಮೆಹೆಂದಿ / ಮದರಂಗಿ ಅಂದರೆ ಎಲ್ಲಿಲ್ಲದ ಪ್ರೀತಿ. ರಾಜಸ್ತಾನಿಗಳಂತೂ ಈ ಚಿತ್ತಾರ ಬಿಡಿಸುವಲ್ಲಿ ಸಿದ್ಧಹಸ್ತರು. ಹೀಗಿರುವಾಗ ಇವಳಿಗೇಕೆ ಬೇಡ ಎನಿಸಿ ಕೇಳಿದೆವು. ‘ನಮ್ಮಲ್ಲಿ ಎಲ್ಲಾ ಶುಭಕೆಲಸಗಳಿಗೆ ಮೆಹೆಂದಿ ಹಾಕುತ್ತಾರೆ.ಶಾದಿಗಂತೂ ಕಡ್ಡಾಯ. ಶಾದಿಗಳಲ್ಲಿ ಮೆಹೆಂದಿ ಕೈ-ಕಾಲುಗಳಿಗೆ ಹಾಕುವುದೇ ದೊಡ್ಡ ಸಮಾರಂಭ. ಚಂದದ ಚಿತ್ತಾರ ನಿಜ, ಆದರೆ ಪುಟ್ಟ ಪುಟ್ಟ ಹುಡುಗಿಯರಿಗೆ ಈ ರೀತಿ ಒತ್ತಾಯದಿಂದ ಮದುವೆ ಮಾಡಿ ಕೈ-ಕಾಲಿಗೆ ಚಿತ್ತಾರ, ತಲೆಗೆ ಪರದೆ ಹಾಕಿ ಕಳಿಸುತ್ತಾರಲ್ಲ ಅದು ಬೇಸರ ಮತ್ತು ಸಿಟ್ಟು ತರಿಸುತ್ತೆ. ಹಳ್ಳಿಯಲ್ಲಿರುವ ನನ್ನದೇ ವಯಸ್ಸಿನ ಸಂಬಂಧಿಗೆ ಮದುವೆಯಾಗಿ ಮಗುವೂ ಇದೆ. ನನಗೆ ಕೆಂಪು ಎಂದರೆ ಮೆಹೆಂದಿ, ಮನಸ್ಸಿಲ್ಲದ ಮದುವೆಯ ನೆನಪೇ ಬರುತ್ತದೆ. ಅದಕ್ಕಿಂತ ಹಕ್ಕಿಗಳು ರೆಕ್ಕೆ ಬಿಚ್ಚಿ  ಹಾರುವ ಬಾನಿನ ನೀಲಿ ಇಷ್ಟ’ ಎಂದಳು. ಹೇಗೆ ಬಣ್ಣಕ್ಕೂ ಭಾವನೆಗೂ ಸಂಬಂಧವಿದೆ ಎಂದು ಯೋಚಿಸುವಷ್ಟರಲ್ಲಿ  ‘ಕೆಂಪು ನನ್ನ ಬಹಳ ಇಷ್ಟದ ಬಣ್ಣ’ ಎಂದ ಬಿಹಾರದ ಶ್ಯಾಮ್.

ಕರಿಕಲ್ಲಿನ ಶಿಲ್ಪದಂತಿದ್ದ ಶ್ಯಾಮ್ ಮಿತಭಾಷಿ, ಮೃದು ಸ್ವಭಾವದವನು. ಎಲ್ಲರೂ ಆತನಿಗೆ ಕಾಲಿಯಾ ಎಂದೇ ತಮಾಷೆ ಮಾಡುತ್ತಿದ್ದರು. ಆತ ಮುಟ್ಟಿದರೆ ಕಪ್ಪು ಬಣ್ಣ ತಾಕಿತು ಎಂದು ನಟಿಸುವವರೂ ಕೆಲವರಿದ್ದರು. ಇಂಗ್ಲೀಷ್ ಸರಿಯಾಗಿ ಬರುತ್ತಿರಲಿಲ್ಲ ಎಂದು ಗವಾಂರಾ ಎಂಬ ಹೆಸರೂ ಇತ್ತು. ಆದರೆ ಎಲ್ಲದಕ್ಕೂ ನಗುವೇ ಅವನ ಉತ್ತರವಾಗಿತ್ತು.ಇಂಥ ಶ್ಯಾಮ್ ಇಷ್ಟು ಸ್ಪಷ್ಟವಾಗಿ  ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಕೇಳಿ ಎಲ್ಲರಿಗೂ ಆಶ್ಚರ್ಯವೇ. ಓಹೋ ಕಾಲಿಯಾನಿಗೆ ಲಾಲ್‌ಸೆ ಪ್ಯಾರ್ ಎಂದು ನಗೆಬುಗ್ಗೆ ಸಿಡಿಯಿತು. ಕೂಡಲೇ ಶ್ಯಾಮ್ ‘ದೇಹದ ಬಣ್ಣ ಏನೇ ಇರಲಿ, ನೀಡಲ್ ಚುಚ್ಚಿ ರಕ್ತ ಹೊರಬಂದಾಗ ನನ್ನದು ಮತ್ತು ತಮಾಷೆ ಮಾಡುವವರದ್ದು ಎಲ್ಲರ ರಕ್ತದ ಬಣ್ಣ ಒಂದೇ ಆಗಿತ್ತು. ನಾನು ಭಾವಿಸಿದಂತೆ ಬಿಳಿ ಇರಲಿಲ್ಲ.

ಇನ್ನೊಂದು ವಿಷಯ ಎಂದರೆ ನನ್ನದು ಓ ಪಾಸಿಟಿವ್ ರಕ್ತ . ಅಂದರೆ ಎಲ್ಲರಿಗೂ ದಾನ ಮಾಡಬಹುದಾದ ರಕ್ತದ ಗುಂಪು. ರಕ್ತದಾನ ಮಾಡುವಾಗ ಅಥವಾ ತೆಗೆದುಕೊಳ್ಳುವಾಗ ಯಾರೂ ಚರ್ಮದ ಬಣ್ಣ, ಇಂಗ್ಲೀಷ್ ನೋಡುವುದಿಲ್ಲವಲ್ಲ..ಆಲ್ ಆರ್ ಈಕ್ವಲ್! ಹಾಗಾಗಿ ಲಾಲ್ ರಂಗ್ ಅಚ್ಛಾ ಹೈ’. ಮುಖದಲ್ಲಿ ನಗು ಹಾಗೆಯೇ ಇತ್ತು, ದನಿಯೂ ಮೆತ್ತಗೇ; ಆದರೆ ಅದರಲ್ಲಿದ್ದ ನೋವು ಎದೆಗೇ ಚುಚ್ಚಿತ್ತು.ಹಾಸ್ಯದ ಹೆಸರಿನಲ್ಲಿ ಮಾಡುವ ಕೆಲಸ, ಆಡುವ ಮಾತುಗಳು ಹೇಗೆ ವ್ಯಕ್ತಿಯನ್ನು ನೋಯಿಸುತ್ತವೆ ಎಂಬುದು ಆತನ ಮಾತಿನಿಂದ ತಿಳಿಯಿತು. ಒಂದು ಕ್ಷಣದ ಮೌನದ ನಂತರ ಮತ್ತೆ ಯಥಾಪ್ರಕಾರ ನಮ್ಮ ಮಾತುಕಥೆ ಮುಂದುವರಿಯಿತು. ಆಡಿದ್ದು ಎರಡೇ ಮಾತು, ಆದರೆ ಅಂದು ಶ್ಯಾಮ್ ಕಲಿಸಿದ ಪಾಠ ದೊಡ್ಡದು.. ಈಗಲೂ ಕೆಂಪು ಅಂದಾಗಲೆಲ್ಲಾ ರೋಗ, ಯುದ್ಧ, ಮದರಂಗಿ ಮತ್ತು ರಕ್ತ ಎಲ್ಲವೂ ನೆನಪಾಗಿ ಮಿಶ್ರ ಭಾವ ಮೂಡುತ್ತದೆ.

‍ಲೇಖಕರು Admin

April 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: