ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನಲ್ಲಿ ಕಾ(ಖಾ)ರಂತರು !!

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

15

ಇದೆಂಥ ಬೋಳು ಗುಡ್ಡ ಎಂದು ಹೆದರುತ್ತಾ ಬಂದಿದ್ದ ನಾವು ಮೂರನೇ ವರ್ಷಕ್ಕೆ ಕಾಲಿಡುವಷ್ಟರಲ್ಲಿ  ಮಣಿಪಾಲ ನಮ್ಮ ಊರಾಗಿತ್ತು. ದಿನಗಳು ಸಾಗುತ್ತಿದ್ದವು ಎನ್ನುವುದಕ್ಕಿಂತ ಓಡುತ್ತಿತ್ತು ಎನ್ನುವುದೇ ಸರಿ. ಬೆಳಿಗ್ಗೆಯಿಂದ ಸಂಜೆಯವರೆಗೆ ಕ್ಲಾಸ್, ಪ್ರಾಕ್ಟಿಕಲ್, ಲ್ಯಾಬ್ ಮತ್ತು ಕ್ಲಿನಿಕಲ್ ವರ್ಕ್ ಹೀಗೆ ಸುತ್ತಾಟವಾದರೆ ರಾತ್ರಿ ವೇಳೆ ಲೈಬ್ರರಿಯಲ್ಲಿ ಓದು ಸಾಗುತ್ತಿತ್ತು. ಹಾಸ್ಟೆಲ್ ಜೀವನ ಒಂಥರಾ ಕಷ್ಟವಾಗಿದ್ದರೂ ಮತ್ತೊಂದು ರೀತಿಯಲ್ಲಿ ಮಜವೂ ಆಗಿತ್ತು. ಮೆಸ್ ಊಟ, ಸ್ನೇಹಿತರ ಜತೆ ತಿರುಗಾಟ, ಸಣ್ಣ -ಪುಟ್ಟ ಕಿತ್ತಾಟ ಎಲ್ಲವೂ ಇಷ್ಟವಾಗಿತ್ತು.

 ಸಮಾನತೆ!

ಆಸ್ಪತ್ರೆಯಲ್ಲಿ  ರೋಗಿಗಳನ್ನು ನೋಡುತ್ತಾ ನೋವು, ರೋಗ- ರುಜಿನ ಹೇಗೆ ಎಲ್ಲರನ್ನೂ ಸಮಾನವಾಗಿಸುತ್ತದೆ ಎಂದು ಆಶ್ಚರ್ಯವಾಗುತ್ತಿತ್ತು. ದುಡ್ಡು, ಸ್ಥಾನ-ಮಾನ, ವಿದ್ಯೆ, ಅಂತಸ್ತು, ಪ್ರಭಾವ ಉಹೂಂ ಯಾವುದೂ ನಡೆಯದು.ವೈದ್ಯೋ ನಾರಾಯಣೋ ಹರಿಃ ಎನ್ನುವುದು ಎಷ್ಟು ನಿಜ ಎನ್ನಿಸಿದರೂ ವೈದ್ಯರಿಗಿರುವ ಜವಾಬ್ದಾರಿಯ ಬಗ್ಗೆ ಹೆದರಿಕೆಯೂ ಮೂಡುತ್ತಿತ್ತು.ಬರುತ್ತಿದ್ದ ರೋ ಗಿಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರೂ ಸೇರಿದ್ದರು.ಕಾರಣ,  ಅತ್ಯುತ್ತಮ ಗುಣಮಟ್ಟದ ಅತ್ಯಾಧುನಿಕ ಚಿಕಿತ್ಸೆ ಅತಿ ಕಡಿಮೆ ದರದಲ್ಲಿ ನಮ್ಮಲ್ಲಿ ಸಿಗುತ್ತಿತ್ತು.ಖ್ಯಾತನಾಮರು ಬಂದಾಗ ಕೆಲವರು ಕುತೂಹಲ, ಹೆಚ್ಚಿನ ಆಸಕ್ತಿ ತೋರಿದ್ದು ಸಹಜವೇ.ಆದರೆ ನಮಗೆ  ಪಾಠ ಮಾಡುವಾಗ ‘ ಯಾರೇ ನಿಮ್ಮ ಬಳಿಗೆ ಬರಲಿ..ವ್ಯತ್ಯಾಸವಿಲ್ಲ. ಪ್ರತಿಯೊಬ್ಬರೂ ವಿಶೇಷ ವ್ಯಕ್ತಿ. ತಮ್ಮತೊಂದರೆ ದೂರ ಮಾಡುತ್ತೀರಿ ಎಂದು  ನಿಮ್ಮ ಮೇಲೆ ನಂಬಿಕೆ ಇಟ್ಟು ಬರುತ್ತಾರೆ. ಹಾಗಾಗಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ನಿಮ್ಮ ಕೆಲಸ ಮಾಡಿ. ಒಳ್ಳೆಯದಾಗುತ್ತದೆ ಎಂಬ ವಿಶ್ವಾಸ ಇರಲಿ. ಆದರೆ ಒಂದೊಮ್ಮೆ ಕೇವಲ ನಮ್ಮ ಪ್ರಯತ್ನವಷ್ಟೇ ಸಾಲುವುದಿಲ್ಲ. ಪರಿಣಾಮ ನಾವೆಣಿಸಿದಂತೆ ಆಗದೇ ಇರಬಹುದು; ಅದಕ್ಕೂ ಸಿದ್ಧರಿರಬೇಕು.’  ಎಂಬ ಸೂಚನೆ ನೀಡಲಾಗಿತ್ತು. ನಾವು ಆದಷ್ಟೂ ಅದನ್ನು ಪಾಲಿಸುತ್ತಿದ್ದೆವು.

 ಬೆಳ್ಳಿ ಕೂದಲ ಅಜ್ಜ!       

ಅದೊಂದು ದಿನ ಥಿಯರಿ ಕ್ಲಾಸ್ ಮುಗಿಸಿ ಕ್ಲಿನಿಕ್ ಗೆ ಬರುವಾಗ ಕಾರಿಂದ ಬಿಳಿ ಜುಬ್ಬಾ- ಪಂಚೆ ತೊಟ್ಟ ಬೆಳ್ಳಿ ಕೂದಲಿನ ಹಿರಿಯರೊಬ್ಬರು ಇಳಿಯುತ್ತಿದ್ದರು. ದಿನಕ್ಕೆ ನೂರಾರು ಜನ ಬರುವ ಆಸ್ಪತ್ರೆಯದು. ಯಾರಿಗೂ ಯಾರನ್ನೂ ಸುಮ್ಮನೇ ನೋಡಲು-ಮಾತನಾಡಲು ಪುರುಸೊತ್ತಿಲ್ಲ.ಅದೂ ಅಲ್ಲದೇ ವಿದ್ಯಾರ್ಥಿಗಳಾಗಿದ್ದ ನಮಗಂತೂ ಉಸಿರಾಡಲೂ ಸರಿಯಾಗಿ ಸಮಯವಿರಲಿಲ್ಲ. ಒಂದು ಕಟ್ಟಡದಿಂದ ಇನ್ನೊಂದಕ್ಕೆ ಓಡುವುದು, ಕೆಲಸ ಮುಗಿಸುವುದಷ್ಟೇ ಗುರಿ.ಎದುರಿಗೆ ಸಿಕ್ಕ ಸಹಪಾಠಿಗಳಿಗೆ  ಮುಗುಳ್ನಗು ಬೀರುವುದೂ ಕಷ್ಟವೆನಿಸುವಷ್ಟು ಕೆಲಸದ ಒತ್ತಡ. ಹೀಗಾಗಿ ಕೈಯ್ಯಲ್ಲಿ ಪುಸ್ತಕ ಹಿಡಿದು ನಡೆಯುವುದು ಅಲ್ಲ  ರನ್ನಿಂಗ್ ರೇಸ್ ಮಾಡುತ್ತಿದ್ದೆವು ಎಂಬುದೇ ಸರಿ. ಹಾಗಾಗಿಯೇ ಈ ಹಿರಿಯರ ಬಗ್ಗೆ ವಿಶೇಷ ಗಮನ ನೀಡಿರಲಿಲ್ಲ. ಆದರೆ ಮಧ್ಯಾಹ್ನ ಊಟದ ಸಮಯದಲ್ಲಿ ಸೀನಿಯರ್ ‘ ಕಾರಂತ್ ಎನ್ನುವ ಕನ್ನಡದ ದೊಡ್ಡ ರೈಟರ್ ಇವತ್ತು ಬಂದಿದ್ರು. ಪ್ರೊಫೆಸರ್ ಎಲ್ಲಾ ಮಾತನಾಡಿಸಿದರು’ ಎಂದಾಗ ನನಗೆ ರೋಮಾಂಚನ. ಜತೆಯಲ್ಲಿದ್ದ ಮಲೇಶ್ಯನ್, ಉತ್ತರ ಭಾರತೀಯ ಹುಡುಗಿಯರು ಹೌದಾ ಎಂದಷ್ಟೇ ನುಡಿದು ಸುಮ್ಮನಾಗಿದ್ದರು. ನನಗೆ ಮಾತ್ರ ಎಂಥಾ ಸುವರ್ಣ ಅವಕಾಶ ತಪ್ಪಿತಲ್ಲಾ ಎಂಬ ಹಳಹಳಿಕೆ. ಆ ದಿನ ಲೈಬ್ರರಿಯಲ್ಲಿ ಕುಳಿತಾಗಲೂ ಅದೇ ಕನವರಿಕೆ.. 

ಹೆದರಿಕೆ-ಹಿಂಜರಿಕೆ

ನನ್ನ ಮೆಚ್ಚಿನ ಕಡಲ ತೀರದ ಭಾರ್ಗವರ ಜತೆ ಮಾತನಾಡುವುದನ್ನು ತಪ್ಪಿಸಿಕೊಂಡಿದ್ದು ಎರಡನೇ ಬಾರಿಯಾಗಿತ್ತು! ನಾವು ಸಣ್ಣವರಿದ್ದಾಗ ತರಂಗದಲ್ಲಿ ಕಾರಂತಜ್ಜ ಬಾಲವನ ಎಂಬ ಅಂಕಣದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.ನಾನು ಮತ್ತು ತಂಗಿ ಪವಿತ್ರಾಳಿಗೆ ಅದಲ್ಲಿನ ಪ್ರಶ್ನೋತ್ತರ ಓದುವುದೆಂದರೆ ಎಲ್ಲಿಲ್ಲದ ಖುಷಿ. ಹಾಗೇ ಅನೇಕ ಸಲ ಪ್ರಶ್ನೆ ಕೇಳಿ ಕಾರಂತಜ್ಜನಿಂದ ಉತ್ತರ ಬಂದಾಗ ಆ ಪತ್ರಿಕೆ ಅದೆಷ್ಟೋ ಬಾರಿ ನೋಡಿ ಖುಷಿ ಪಟ್ಟಿದ್ದೆವು. ನಂತರ  ಏಳನೇ ತರಗತಿಯಲ್ಲಿದ್ದಾಗ ಗುಲ್ಬರ್ಗಾದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆದಿತ್ತು. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರತಿನಿಧಿಯಾಗಿ ನಾನು  ಆಯ್ಕೆಯಾಗಿದ್ದೆ.ಎರಡು ದಿನಗಳ ಕಾಲ ಸಮ್ಮೇಳನ ನಡೆದಿತ್ತು. ಆಗ ಕಾರಂತರು ಅನಿರೀಕ್ಷಿತವಾಗಿ ನಮ್ಮ ಗೋಷ್ಠಿಗೆ ಬಂದಿದ್ದರು. ಪಕ್ಕಪಕ್ಕದಲ್ಲೇ ಕುಳಿತಿದ್ದರೂ ಒಂದೂ ಮಾತನಾಡಿರಲಿಲ್ಲ. ಕಾರಣ ಅಲ್ಲಿದ್ದವರು ಕಾರಂತರು ಬರುತ್ತಾರೆ ಎಂದೊಡನೆ ಮೈಮೇಲೆ ಆವಾಹನೆ ಆದವರಂತೆ ಕುಣಿದಾಡಿದ್ದರು. ‘ ಎಲ್ಲವೂ ಸರಿ ಇರಬೇಕು. ಸ್ವಲ್ಪ ಆಚೀಚೆ ಆದರೂ ಅವರು ಸುಮ್ಮನೆ ಬಿಡುವುದಿಲ್ಲ. ಮೈಕ್ ಮುಂದೆಯೇ ಬೈಯ್ಯಲಿಕ್ಕೂ ಸಿದ್ಧ ’ ಎನ್ನುತ್ತಾ ಎಲ್ಲವೂ ವ್ಯವಸ್ಥಿತವಾಗಿ ನಡೆಯುವಂತೆ ಮಾಡಿದ್ದರು.  ಕಾರಂತರು ಆ ದಿನ ಮಕ್ಕಳ ಸಾಹಿತ್ಯ ಕುರಿತು ಭಾಷಣ ಮಾಡಿದ್ದರು.ಅದನ್ನು ಬಹಳ ಆಸಕ್ತಿಯಿಂದ ಕೇಳಿದ್ದೆ. ನಂತರ ವೇದಿಕೆಯಲ್ಲಿದ್ದ ನಮ್ಮೆಲ್ಲರ ಕೈ ಕುಲುಕಿದ್ದರು. ನನ್ನ ಜತೆಗಿದ್ದ ಕೆಲವರು ಮಾತನಾಡಿದ್ದರು. ನನಗೆ ಮಾತನಾಡುವ ಹಂಬಲ ಬೆಟ್ಟದಷ್ಟಿದ್ದರೂ ಹೆದರಿಕೆ ಮತ್ತು ಸಂಕೋಚದಿಂದ ಮೌನಗೌರಿಯಂತೆ ನಿಂತುಬಿಟ್ಟಿದ್ದೆ. ಆಮೇಲೆ ಮನೆಗೆ ಬಂದ ನಂತರ ಮಾತನಾಡಬೇಕಿತ್ತು, ಆಟೋಗ್ರಾಫ್ ಹಾಕಿಸಿಕೊಳ್ಳಬೇಕಿತ್ತು ಎಂದು ಪೇಚಾಡಿದ್ದು ಅದೆಷ್ಟೋ ಬಾರಿ!

ಪ್ರಭಾವ ಬೀರಿದ ವ್ಯಕ್ತಿತ್ವ

ಆಮೇಲೆ ಹೈಸ್ಕೂಲಿನಲ್ಲಿ ಇರುವಾಗ 1989 ರಲ್ಲಿ ಲೋಕಸಭಾ ಚುನಾವಣೆಗೆ ಉತ್ತರಕನ್ನಡದಿಂದ ಕಾರಂತರು ಸ್ಪರ್ಧಿಸಿದ್ದರು; ಸೋತರು.ನಮ್ಮ ಮನೆಯಲ್ಲಿ ಎಲ್ಲರಿಗೂ ಬಹಳ ಬೇಸರವಾಗಿತ್ತು. ಏಕೆಂದರೆ ಕಾರಂತರ ವ್ಯಕ್ತಿತ್ವ ನಮ್ಮ ಮೇಲೆ ಬೀರಿದ ಪ್ರಭಾವ ಅಪಾರ. ಆಗಲೇ ಸುಧಾ ಪತ್ರಿಕೆಯಲ್ಲಿ  ‘ ನಿಮ್ಮ ಮೇಲೆ ಪ್ರಭಾವ ಬೀರಿದ ವರ್ಷದ ಮುಖ್ಯ  ಘಟನೆ ’ ಬಗ್ಗೆ ಲೇಖನ ಕೇಳಿದ್ದರು. ಆಗ ನನ್ನ ಪ್ರಕಾರ  ಕಾರಂತರ ಸೋಲು ಮತ್ತು ಏಕೆ ಎಂಬುದನ್ನು ಬರೆದ ಅಭಿಪ್ರಾಯ ಸುಧಾದಲ್ಲಿ ಪ್ರಕಟವಾಗಿತ್ತು. ಕಾಲೆಜಿನಲ್ಲಿ ಮತ್ತು ಆತ್ಮೀಯರಿಂದ  ಸಾಕಷ್ಟು ಮೆಚ್ಚುಗೆ ಪಡೆದಿತ್ತು.ಕಾರಂತರ ಅಗಾಧ ಪ್ರತಿಭೆ, ಬಹುಮುಖಿ ವ್ಯಕ್ತಿತ್ವ, ನಿರಂತರ ಅಧ್ಯಯನ, ಪ್ರಯೋಗಶೀಲತೆ, ಸಾಹಿತ್ಯ ಎಲ್ಲದರ ಅಭಿಮಾನಿ ನಾನು. ಅವರೊಂದಿಗೆ ಮಾತನಾಡುವುದು ಬಹು ದೊಡ್ಡ ಕನಸು.ಹೀಗಿರುವಾಗ  ಈಗ ಮಣಿಪಾಲದಲ್ಲಿ ಅನಾಯಾಸವಾಗಿ ದೊರೆತ ಭೇಟಿಯ ಅವಕಾಶ ಕೈಬಿಟ್ಟಿದ್ದೆ. ಆದರೂ  ‘ ಹಲ್ಲಿನ ತಪಾಸಣೆಗಾಗಿ ಮತ್ತೂ ಒಂದೆರಡು ಬಾರಿ ಬರಬಹುದೇನೋ!’ ಎಂದು ಸೀನಿಯರ್ ಹೇಳಿದ ಮಾತು ಆಶಾಕಿರಣವಾಗಿತ್ತು.

ಅಂದಿನಿಂದ ಎಲ್ಲಾದರೂ ಕಾರಂತರು ಕಂಡರೆ ಎಂದು ಹುಡುಕುವ ಹದ್ದಿನ ಕಣ್ಣು ನನ್ನದು! ಯಾರಾದರೂ ಬಿಳಿಕೂದಲಿನ, ಪಂಚೆ ಉಟ್ಟ ಹಿರಿಯರ ಬೆನ್ನು ಕಾಣಿಸಿದರೆ ಸರಸರ ಓಡಿ ಅವರ ಮುಖ ನೋಡುವವರೆಗೆ ಸಮಾಧಾನವಿರುತ್ತಿರಲಿಲ್ಲ. ಕ್ಲಾಸಿನ ಹುಡುಗರು ‘ಅಜ್ಜಂದಿರ ಮೇಲೆ ಲವ್ವಾ?’ ಎಂದು ಚುಡಾಯಿಸಿ ಬೈಸಿಕೊಂಡಿದ್ದರು. ಅಂತೂ ಅದೊಂದು ದಿನ  ಕ್ಲಾಸ್ ಮುಗಿಸಿ ಒಬ್ಬಳೇ  ಲೈಬ್ರರಿಗೆ ಹೊರಟಿದ್ದೆ. ಆಸ್ಪತ್ರೆಯಲ್ಲಿ  ಕಾಯುತ್ತಾ  ಕುಳಿತಿದ್ದ  ಹೊರರೋಗಿಗಳ ಸಂಖ್ಯೆ ಕಡಿಮೆ ಇತ್ತು. ಮೇಲಿನ ಮಹಡಿಯಿಂದ  ಕೆಳಗೆ ಇಳಿದು ಬರುತ್ತಿದ್ದ  ನನ್ನ ಕಣ್ಣು,  ಸುಮ್ಮನೇ ಮೂಲೆಯತ್ತ ಹೊರಳಿತ್ತು. ಗರಿಗರಿ, ಬಿಳಿ ಬಿಳಿ ಪಂಚೆ-ಶರ್ಟ್  ತೊಟ್ಟು  ಕೈಯ್ಯಲ್ಲಿ  ದಿನಪತ್ರಿಕೆ  ಹಿಡಿದು  ತಲೆ ತಗ್ಗಿಸಿ ಮಗ್ನರಾಗಿದ್ದರು ಹಿರಿಯರು. ಕಾರಂತರೇ ಇರಬಹುದೇ  ಎಂಬ ಸಣ್ಣ  ಅನುಮಾನ ಮೂಡಿತ್ತು. ಅಷ್ಟರಲ್ಲಿ ಅವರ  ಮುಖ ನನ್ನತ್ತ ಹೊರಳಿತ್ತು; ಅನುಮಾನವೇ ಇಲ್ಲ, ನಮ್ಮ ಕಾರಂತರೇ! ಎಂದೋ ಕೇಳಿದ್ದ ‘ಕಾರಂತರು ಬಹಳ ಮೂಡಿ, ಸಿಟ್ಟು ಬಂದರೆ ಎಲ್ಲೇ ಇದ್ದರೂ ಯಾರೇ ಆದರೂ ಬೈಯ್ಯುವುದೇ’ ಮಾತುಗಳು ಬೇಡವೆಂದರೂ ಎಚ್ಚರಿಕೆಯ ಗಂಟೆ ಬಾರಿಸಿದವು. ಅದೂ ಅಲ್ಲದೇ  ಈಗ ಚಿಕಿತ್ಸೆ/ ಭೇಟಿಗಾಗಿ ಬಂದಿರುವವರನ್ನು ಹೋಗಿ ಮಾತನಾಡಿಸುವುದು ಸರಿಯೇ ಎಂಬ ಅನುಮಾನ ಮೂಡಿತು. ಆದದ್ದಾಗಲಿ ಈ ಸಲ ಮಾತನಾಡಿಸಲೇಬೇಕು ; ಬೈದರೂ ಸರಿ ಎಂದು ತೀರ್ಮಾನ ಮಾಡಿ ಅವರ ಬಳಿಗೆ ಬಂದೆ.

 ಖಾರಂತರು

ಹತ್ತಿರ ನಿಂತು ನಮಸ್ತೆ ಎಂದಿದ್ದೇ, ತಲೆಯೆತ್ತಿ  ಗಂಭೀರವಾಗಿ ನಮಸ್ತೆ ಎಂದರು. ‘ ಒಂದೆರಡು ನಿಮಿಷ ಮಾತನಾಡಬಹುದೇ? ಇಲ್ಲಿ ಮಾತನಾಡಿಸುತ್ತಿರುವುದಕ್ಕೆ ಸಾರಿ ’ ಎಂದೇನೋ ನುಡಿದು ಅವರ ಪ್ರತಿಕ್ರಿಯೆಗೆ ಕಾದೆ. ಅವರು ಬೈಯ್ಯಲಿಲ್ಲ, ವಿಷಯ ಏನು ಎನ್ನುವ ಮುಖಭಾವ ತೋರಿದರು ಅಷ್ಟೇ ! ಆ ವಯಸ್ಸಿನಲ್ಲೂ ತೀಕ್ಷ್ಣ ಕಣ್ಣುಗಳ ಪ್ರಭೆಗೆ ಒಳಗೊಳಗೇ ಎದೆ ಡವಗುಟ್ಟಿತು. ಬುದ್ಧಿ ಹುಷಾರು ಎನ್ನುತ್ತಿದ್ದರೂ ಮನಸ್ಸು ಕೇಳಲಿಲ್ಲ. ಇನ್ನು ತಡಮಾಡಿದರೆ ಮಾತೇ ಹೊರಡುವುದಿಲ್ಲ ಎಂದು ಅವರಿಗೆ ಮಾತನಾಡಲು ಅವಕಾಶವನ್ನೇ ಕೊಡದೆ ನನ್ನ ಬಗ್ಗೆ, ಅವರ  ಕಾದಂಬರಿಗಳು, ಯಕ್ಷನೃತ್ಯ, ಬಾಲವನ, ಚುನಾವಣೆ,ಮಕ್ಕಳ ಸಮ್ಮೇಳನ, ಸಿನಿಮಾ  ಹೀಗೆ ಒಂದೇ ಉಸಿರಿಗೆ ಮಾತನಾಡಿದೆ. ಹುಂ ಇಲ್ಲ, ಊಹೂಂ ಇಲ್ಲ…ಒಂದೂ ಮಾತನಾಡದೇ ಗಂಭೀರವಾಗಿ ನನ್ನನ್ನೇ ನೋಡುತ್ತಾ- ಕೇಳುತ್ತಲೇ ಇದ್ದರು. ಅಷ್ಟರಲ್ಲಿ ಒಳಗಿನಿಂದ  ‘ಮಿ.ಖಾರಂತ್, ಇಲ್ಲಿ ಬನ್ನಿ’ ಎಂಬ ಜೋರಾದ  ಕರೆ. ಯಾರೋ ಮಲೆಯಾಳಿ ನರ್ಸ್ ಅವರ ಫೈಲನ್ನು ಹಿಡಿದು  ಒಳಗೆ ಕರೆದೊಯ್ಯಲು ಬಂದಿದ್ದರು. ನರ್ಸ್, ಪದೇ ಪದೇ ಖಾರಂತ್ ಎಂದು ಕರೆಯುತ್ತಿದ್ದಾಗ ನನಗೆ ಒಳಗೊಳಗೇ ಪುಕಪುಕ. ‘ ಈ ಮನುಷ್ಯ ಮೊದಲೇ ಮೂಡಿ ಅಂತಾರೆ, ಈಗಂತೂ ವಯಸ್ಸಾಗಿದೆ; ನಾನು ಬೇರೆ ಇಷ್ಟು ಹೊತ್ತು ಸತತವಾಗಿ ಕೊರೆದಿದ್ದೇನೆ.ಈ ಖಾರಂತ್ ಅನ್ನುವುದನ್ನು ಕೇಳಿ ಸಿಟ್ಟು ನೆತ್ತಿಗೇರಿದರೆ ಮಾಡುವುದೇನು? ಬಹುಶಃ ಈ ನರ್ಸ್ ಮತ್ತು ನನಗೆ ಇಬ್ಬರಿಗೂ ಈಗ ಮಂಗಳಾರತಿ ಇದೆ ’ ಎಂಬ ಚಿಂತೆ! ಕುಳಿತಲ್ಲೇ ಒಂದೆರಡು ಬಾರಿ ಚಡಪಡಿಸಿದೆ. ಮಧ್ಯೆ ಬಾಯಿ ಹಾಕಿ ಅದು  ಕಾರಂತ ಎಂದು ಸರಿಪಡಿಸಲು ಪ್ರಯತ್ನಿಸಿದೆ. ಕೆಲಸದ ಒತ್ತಡದಲ್ಲಿದ್ದ  ಆಕೆ ನನ್ನೆಡೆ ವಿಚಿತ್ರವಾಗಿ ನೋಡಿ ಒಂದಿಷ್ಟೂ ಗಮನ ನೀಡದೇ ಅದನ್ನೇ ಮುಂದುವರಿಸಿದಳು.

ಕಾರಂತರು ನಿಧಾನವಾಗಿ ಎದ್ದು ಹೊರಟರು.ಅಲ್ಲಿಯವರೆಗೆ ಒಂದೂ ಮಾತನಾಡದೇ ಇದ್ದವರು ಎರಡು ಹೆಜ್ಜೆ ಮುಂದೆ ಇಟ್ಟು ನನ್ನನ್ನು ಕರೆದರು ‘ ಮುಂದೆ ಡಾಕ್ಟರ್ ಆಗುವವರು ನೀವು;  ಡಾಕ್ಟರ್ ಅಂತಲ್ಲ, ಏನೇ ಆಗಲಿ ಕನ್ನಡ ಉಳಿಸಿಕೊಳ್ಳಬೇಕು ’ಎಂದು ಸಣ್ಣಮಕ್ಕಳಿಗೆ ಬುದ್ಧಿ ಹೇಳುವ ಹಾಗೆ ನುಡಿದರು.  ನನಗೋ ಅವರ ಮಾತು ಕೇಳಿದ್ದೇ ಧನ್ಯತಾ ಭಾವ. ಮತ್ತೆ ಕಣ್ಣಲ್ಲಿ ಕಣ್ಣಿಟ್ಟು ‘ ಮತ್ತೆ ಈ ನರ್ಸ್  ಕರೆದದ್ದೂ ಸರಿಯೇ , ಧೈರ್ಯವಾಗಿ ಎದುರಿಗೇ ಹೇಳಿದಳು; ಕೆಲವರು ಹಾಗೂ ಕರೆಯುವುದುಂಟು..ಬೆನ್ನ ಹಿಂದೆ ’ ಎಂದು ಸಣ್ಣಗೆ ನಕ್ಕರು. ಬೆಳ್ಳಿ ಕೂದಲು, ಪ್ರಖರ ಕಣ್ಣು, ಮುಖದ ನೆರಿಗೆಗಳಲ್ಲಿ ಹರಡಿದ ನಗು .. ಎಲ್ಲವೂ ಫಳಫಳ ಹೊಳೆಯುತ್ತಿತ್ತು. ನನಗೆ, ಆ ಕ್ಷಣದಲ್ಲಿ ನನ್ನ ಕಾರಂತಜ್ಜನ ದರ್ಶನವಾಗಿತ್ತು!!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 3, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: