ಡಾ ಕೆ ಎಸ್ ಚೈತ್ರಾ ಅಂಕಣ – ಕಾಲೇಜಿನ ಕ್ಯಾಂಟೀನಿನಲ್ಲಿ !

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ.

ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು ರಚಿಸಿದ್ದಾರೆ. ಭರತನಾಟ್ಯದಲ್ಲಿನ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿ -ಪುರಸ್ಕಾರಗಳಿಗೆ ಭಾಜನರು.

ಪ್ರವಾಸ ಕೈಗೊಂಡು ಸಣ್ಣ-ಪುಟ್ಟ ಗಲ್ಲಿ ಸುತ್ತೋದು, ಬೇರೆ ಬೇರೆ ರೀತಿ ಆಹಾರ ತಿನ್ನೋದು, ಲಾಂಗ್ ಡ್ರೈವ್, ಒಳ್ಳೆಯ ಸಂಗೀತ, ಮಕ್ಕಳ ಒಡನಾಟ, ಸ್ನೇಹಿತರ ಜತೆ ಹರಟೆ, ಅಡಿಗೆ ಮಾಡೋದು-ತಿನ್ನೋದು ಇಷ್ಟ; ಪಾತ್ರೆ ತೊಳೆಯೋದು ಕಷ್ಟ! ಮಾತು-ಮೌನ ಎರಡೂ ಪ್ರಿಯ!!

25

ಐದು ವರ್ಷದ ಪುಟ್ಟ ಮಗಳ ಕೈ ಹಿಡಿದು ಅಪ್ಪ-ಅಮ್ಮ ಶಾಲೆಗೆ ಹೊರಟಿದ್ದರು. ನಿಜವಾಗಿ ಹೇಳಬೇಕೆಂದರೆ ಒಂದನೆ ತರಗತಿ ಸೇರಲು ಮಗುವಿಗೆ ಆರು ವರ್ಷಗಳಾಗಬೇಕಿತ್ತು. ಈ ತುಂಟ ಮಗುವಿಗೆ ಶಾಲೆಗೆ ಹೋಗುವ ಆತುರದ ಜತೆಗೆ ಮನೆಯಲ್ಲಿದ್ದ ಇನ್ನೊಂದು ಪುಟ್ಟ ಮಗುವನ್ನು ಸಂಬಾಳಿಸುವ ಹೊಣೆ ಎಲ್ಲ ಸೇರಿ ದಾಖಲಾತಿಗೆ ಹೊರಟಿದ್ದರು. ಧಾರವಾಡದ ಪ್ರತಿಷ್ಠಿತ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಏನು ಎತ್ತ ಎಲ್ಲಾ ವಿಚಾರಿಸಿ ಮಗುವಿಗೂ ಒಂದಷ್ಟು ಪ್ರಶ್ನೆ ಕೇಳಿ ‘ ಮಗು ಚುರುಕಾಗಿದೆ; ಆದರೆ ನಮ್ಮಲ್ಲಿ ಅಡ್ಮಿಶನ್ ಮುಗಿದಿದೆ. ಸೀಟಿಲ್ಲ’ ಎಂದಿದ್ದರು. ಅಪ್ಪ-ಅಮ್ಮ ಬಾಯಿ ತೆರೆಯುವ ಮುನ್ನವೇ ಈ ಪುಟಾಣಿ ‘ ಅರೆ, ಅದಕ್ಕೇನು? ನಮ್ಮ ಮನೆಯಲ್ಲಿ ನನ್ನದೇ ಪುಟ್ಟ ಸೀಟಿದೆ. ನಿಮ್ಮಲ್ಲಿ ಸೀಟಿಲ್ವಾ? ನಾನೇ ತರುತ್ತೇನೆ. ಅದರಲ್ಲಿ ಕೂರುತ್ತೇನೆ ’ ಎಂದು ನುಡಿದಿದ್ದಳು. ಎಲ್ಲರಿಗೂ ನಗುವೋ ನಗು. ಅಲ್ಲಿ ಸೀಟು ಸಿಗದಿದ್ದರೂ ಬೇರೆ ಶಾಲೆಯಲ್ಲಿ ಹಠ ಮಾಡಿ ಸೇರಿಕೊಂಡ ತರಲೆ ಪುಟ್ಟಿ, ನಾನೇ! ಹಾಗಾಗಿ ಶಾಲೆಗೆ ಸೇರಿಸುವಾಗ ಹುಟ್ಟಿದ ವರ್ಷ ಒಂದು ವರ್ಷ ಹೆಚ್ಚು ಮಾಡಿ ಆರು ವರ್ಷ ಎಂದು ತೋರಿಸಿದರೂ ನಾನು ನಿಜವಾಗಿ ನೋಡಿದರೆ ಇತರರಿಗಿಂತ ನಾನು ಚಿಕ್ಕವಳಾಗಿದ್ದೆ. (ಆಗ ಬೇಗ ಸೇರಿಸಿದ್ದರಿಂದ ಐದು ವರ್ಷದ ಬುದ್ಧಿ- ಗಲಾಟೆ- ಹುಡುಗಾಟಿಕೆ ಇನ್ನೂ ಉಳಿದುಬಿಟ್ಟಿದೆ ಎಂದು ಅಪ್ಪ-ಅಮ್ಮ ಹೇಳಿದರೆ ನನ್ನ ಮಕ್ಕಳು ಸಂಪೂರ್ಣ ಅನುಮೋದನೆ ನೀಡುತ್ತಾರೆ.ಗಂಡ ಈ ವಿಷಯ ಮದುವೆಗೆ ಮುನ್ನ ಹೇಳಿರಲಿಲ್ಲ ಎಂದು ಗೊಣಗುತ್ತಾರೆ!)

ಬೇಬಿ ಆಫ್ ದಿ ಕ್ಲಾಸ್ !
ಹೈಸ್ಕೂಲಿನ ತನಕ ಹೆಣ್ಣುಮಕ್ಕಳ ಶಾಲೆಯಲ್ಲಿ ಓದಿದ ನಾನು ಅಲ್ಲಿ ಗಂಭೀರ ಸ್ವಭಾವದವಳು. ಆದರೆ ತೀರಾ ಆಪ್ತ ಗೆಳತಿಯರು, ಮನೆಯವರ ಹತ್ತಿರ ಮಾತ್ರ ತರಲೆ ಬುದ್ಧಿ ತೋರಿಸುತ್ತಿದ್ದೆ,ಗಲಾಟೆ ಮಾಡುತ್ತಿದ್ದೆ.ಮಾತು-ನಗು ಎಲ್ಲವೂ ಹೆಚ್ಚು; (ಈಗಲೂ ನಾನು ಶಿವಮೊಗ್ಗೆಗೆ ಹೋದೆ ಎಂದರೆ ಇಡೀ ಊರಿಗೆಲ್ಲಾ ಗೊತ್ತಾಗುತ್ತೆ ಎನ್ನುತ್ತಾರೆ ಅಮ್ಮ-ಅಪ್ಪ) ಈ ನನ್ನ ಸ್ವಭಾವಕ್ಕೆ ನನ್ನ ಎರಡು ಜಡೆಯೂ ಪೂರಕವೇ ಆಗಿತ್ತು. ವಯಸ್ಸಿನಲ್ಲಿ ಸಣ್ಣವಳು, ಸ್ವಭಾವವೂ –ಸ್ವರೂಪವೂ ಅಷ್ಟೇ. ಕಾಲೇಜಿಗೆ ಬಂದಾಗ ಕೋಎಡ್ ಅಂದರೆ ಹುಡುಗರು ಹುಡುಗಿಯರು ಒಟ್ಟಿಗೇ ಓದುವ ಪದ್ಧತಿ ಸ್ವಲ್ಪ ಕಷ್ಟವಾಗಿತ್ತು. ಚುಡಾಯಿಸುವ, ಕೀಟಲೆ ಮಾಡುವ ಹುಡುಗರನ್ನು ಕಂಡರೆ ಸಿಕ್ಕಾಪಟ್ಟೆ ಹೆದರಿಕೆಯೂ ಆಗುತ್ತಿತ್ತು. ಕಾಲೇಜಿಗೆ ಸೈಕಲಿನಲ್ಲಿ ಗೆಳತಿಯರೆಲ್ಲಾ ಗುಂಪಾಗಿ ಸೈಕಲಿನಲ್ಲಿ ಹೋಗುತ್ತಿದ್ದೆವು.ಕಾಲೇಜಿನ ಕೌಂಪೌಂಡ್ ಮೇಲೆ ಕುಳಿತ ಹುಡುಗರು ಹುಡುಗಿಯರನ್ನು ನೋಡುವುದು, ವಿಚಿತ್ರ ದನಿ ಹೊರಡಿಸುವುದು, ಕನ್ನಡ-ಹಿಂದಿ ಚಿತ್ರಗೀತೆ ಹಾಡುವುದು ಇವೆಲ್ಲವನ್ನೂ ಮಾಡುತ್ತಿದ್ದರು.ಹೊಸದಾಗಿ ಬಂದಿದ್ದ ಆಶಿಕಿ , ದಿಲ್ ಹಿಂದಿ ಸಿನಿಮಾ ಗೀತೆಗಳ ಜತೆ ಪ್ರೇಮಲೋಕದ ಹಾಡುಗಳನ್ನು ವಿವಿಧ ದನಿ, ರಾಗ, ಧಾಟಿಗಳಲ್ಲಿ ಕೇಳುವ ಭಾಗ್ಯ ನಮಗೆ ಸಿಗುತ್ತಿತ್ತು. ಹುಡುಗರ ಸೃಜನಶೀಲತೆ ಎಷ್ಟರಮಟ್ಟಿಗೆ ಇತ್ತು ಎಂದರೆ ಈ ಎಲ್ಲಾ ಹಾಡುಗಳನ್ನು ಬೆಕ್ಕು,ನಾಯಿ ,ಕತ್ತೆ ಹಾಡಿದರೆ ಹೇಗಿರುತ್ತದೆ ಎಂಬುದನ್ನೂ ಅಭಿನಯಸಹಿತವಾಗಿ ಹಾಡಿ ನಮಗೆ ಸ್ವಾಗತ ಕೋರುತ್ತಿದ್ದರು. ಈಗಾಗಿದ್ದರೆ ಸೈಕಲ್ ನಿಲ್ಲಿಸಿ ಅದನ್ನೆಲ್ಲಾ ನೋಡಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದೆ. ಆದರೆ ಆಗ ಹೆದರಿ ಜೀವ ನಡುಗಿ ಮುದ್ದೆಯಾಗಿ ಗೆಳತಿಯರ ಮಧ್ಯೆ ಅಡಗಿ ಕ್ಲಾಸಿಗೆ ಓಡುವುದೇ ಜೀವನದ ಪರಮ ಗುರಿಯಾಗಿತ್ತು. ಈ ಎರಡು ಜಡೆಯ , ಗೆಳತಿಯರಿಲ್ಲದೇ ಎಲ್ಲೆಲ್ಲೂ ಬರದ, ತಲೆ ಎತ್ತದ ಹುಡುಗಿಗೆ ಬೇಬಿ ಎನ್ನುವ ಅಡ್ಡ ಹೆಸರು ಇಡಲಾಗಿತ್ತು!

ಮಣಿಪಾಲಕ್ಕೆ ಬರುವಾಗಲೂ ಹುಡುಗರು ಎಂದರೆ ಅಂಜಿಕೆ ಇದ್ದರೂ ನಿಧಾನವಾಗಿ ಅವರಿಗೂ ನಮ್ಮೊಂದಿಗೆ ಕಷ್ಟವೇ ಎಂದು ಅರಿವಾಯಿತು! ಒಟ್ಟಿಗೇ ಕಲಿಯುತ್ತಾ , ಪರಸ್ಪರ ಕಲಿಸುತ್ತಾ ಎಲ್ಲರೂ ಆತ್ಮೀಯರಾದೆವು.ಹುಡುಗರೇ ಹೆಚ್ಚಿದ್ದ ನನ್ನ ಬ್ಯಾಚಿನಲ್ಲಿ ನನ್ನನ್ನು ರೇಗಿಸುವವರೇ ಎಲ್ಲರೂ! ಎರಡು ಜಡೆ, ಉದ್ದ ಮೂಗು, ಮೊಸರನ್ನ ತಿನ್ನುವುದು, ಅಚ್ಚುಕಟ್ಟಾಗಿ ನೋಟ್ಸ್ ಬರೆಯುವುದು, ತಲೆಗೆ ಹಾಕುವ ಎಣ್ಣೆ, ಬೈಕು-ಕಾರಿನ ಬಗ್ಗೆ ಅಜ್ಞಾನ ಹೀಗೆ ಎಲ್ಲವನ್ನೂ ತಮಾಷೆ ಮಾಡಿ ನಕ್ಕರೂ ಒಳಗಿದ್ದದ್ದು ಶುದ್ಧ ಪ್ರೀತಿ ಅಷ್ಟೇ! ನಾನು ಅವೆಲ್ಲವನ್ನು ಸಹಜವಾಗಿ ಸ್ವೀಕರಿಸುವುದನ್ನು ಕಲಿತೆ ಜತೆಗೆ ಇಷ್ಟವಾಗದ್ದನ್ನು ನೇರವಾಗಿ ಹೇಳುವ ಧೈರ್ಯವನ್ನೂ ಬೆಳೆಸಿಕೊಂಡೆ. ಬೇರೆ ದೇಶ-ರಾಜ್ಯಗಳಿಂದ ಬಂದ ಸಾಕಷ್ಟು ಊರು ಸುತ್ತಿದ, ಸಮಾಜದಲ್ಲಿ ಬೆರೆತು ಅವರಿಗಿದ್ದ ಅನುಭವ ನನಗಿರಲಿಲ್ಲ. ಹೀಗೆ ಒಂದು ರೀತಿಯಲ್ಲಿ ಅಲ್ಲಿಯೂ ಬೇಬಿ ಆಫ್ ದಿ ಬ್ಯಾಚ್ ನಾನೇ! ಆದರೆ ಇದರಿಂದ ನನಗಾದ ಲಾಭವೆಂದರೆ ಪ್ರತಿಯೊಬ್ಬರೂ ತಮ್ಮ ಅನುಭವ ನನ್ನೊಡನೆ ಹಂಚಿಕೊಂಡರು, ನನ್ನ ಸೀಮಿತ ಪರಿಧಿಯನ್ನು ಹಿಗ್ಗಿಸಿದರು! ಹೀಗೆ ಇಪ್ಪತ್ತೆರಡು ವರ್ಷಕ್ಕೆ ಮಣಿಪಾಲ ಬಿಟ್ಟು ಬರುವಾಗ ಪದವಿ ನನ್ನ ಕೈಯ್ಯಲ್ಲಿದ್ದರೆ ಮನದಲ್ಲಿ ಸ್ವತಂತ್ರವಾಗಿ ಬದುಕಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತ್ತು.ಓದು ಮುಗಿಯುವಾಗಲೇ ಸ್ನಾತಕೋತ್ತರ ಪದವಿಗೆ ಮೆರಿಟ್ ಸೀಟು ಸಿಕ್ಕರೂ ಆ ವಿಭಾಗ ಇಷ್ಟವಾಗದೇ ಅದನ್ನು ಕೈಬಿಟ್ಟೆ. ಮುಂದಿನ ಓದಿಗಾಗಿ ಸಿದ್ಧತೆ ನಡೆಸುತ್ತಿರುವಾಗಲೇ ಶಿವಮೊಗ್ಗೆ ಯ ದಂತವೈದ್ಯಕೀಯ ಕಾಲೇಜಿನಲ್ಲಿ ಲೆಕ್ಚರರ್ ಹುದ್ದೆಗೆ ಆಹ್ವಾನಿಸಿದರು.ಅಪ್ಪ-ಅಮ್ಮನ ಜತೆಗೇ ಇದ್ದು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಓದುವ ಅವಕಾಶ ಬಿಡುವುದುಂಟೇ? ಕೂಡಲೇ ಒಪ್ಪಿ ಕೆಲಸಕ್ಕೆ ಸೇರಿದೆ.

ಮೊದಲ ದಿನದ ಸಂಭ್ರಮ
ಮೊದಲ ಬಾರಿ ವಿದ್ಯಾರ್ಥಿನಿಯಿಂದ ಲೆಕ್ಚರರ್ ಆಗಿ ಕಾಲೇಜಿಗೆ ಕಾಲಿಡುವ ಸಂಭ್ರಮ. ನನ್ನ ಗುಂಗುರು ದಪ್ಪಕೂದಲನ್ನು ಬಾಚಿ ಅಮ್ಮ ಎರಡು ಜಡೆ ಚೆನ್ನಾಗಿ ಹೆಣೆದಿದ್ದರು.ಹೊಸ ಚೂಡಿದಾರ್ ಹಾಕಿ ಹೊಸ ಸ್ಕೂಟಿ ಏರಿ ಸಮಯಕ್ಕಿಂತ ಮುಂಚೆಯೇ ಊರಿನ ಹೊರಭಾಗದಲ್ಲಿದ್ದ ಕಾಲೇಜಿಗೆ ಹೊರಟೆ.(ದಂತವೈದ್ಯೆಯಾಗಿದ್ದರೂ ಆವರೆಗೆ ಎಲ್ಲೋ ಒಂದೆರಡು ಸಂದರ್ಭಗಳಲ್ಲಿ ಸೀರೆ ಉಟ್ಟಿದ್ದನ್ನು ಬಿಟ್ಟರೆ ಸೀರೆ ನನಗೆ ಅಪರಿಚಿತವಾಗಿತ್ತು. ನಾವು ಓದುವಾಗ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕ್ಲಿನಿಕ್ಸ್ ಗೆ ಬರುವಾಗ ಸೀರೆ ಉಡುವುದು ಕಡ್ಡಾಯವಾಗಿತ್ತು. ಈಗ ಹಾಗಿಲ್ಲ. ಆದರೆ ಮಣಿಪಾಲದಲ್ಲಿ ವಿದೇಶಿ ವಿದ್ಯಾರ್ಥಿನಿಯರು ಇದ್ದಾರೆಂಬ ಕಾರಣದಿಂದಲೋ ಏನೋ ಸೀರೆ ಎಂದಿಗೂ ಕಡ್ಡಾಯವಾಗಿರಲಿಲ್ಲ. ವೈಯಕ್ತಿಕವಾಗಿ ನನಗೆ ಮೊದಲಿನಿಂದಲೂ ಸೀರೆ ಕೆಲಸ ಮಾಡಲು-ಪ್ರಯಾಣಿಸಲು ಪ್ರಾಕ್ಟಿಕಲ್ ಉಡುಪು ಎನಿಸುವುದೇ ಇಲ್ಲ.ಆದರೆ ಅನಿವಾರ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಮತ್ತು ಸಭೆ-ಸಮಾರಂಭಗಳಲ್ಲಿ ಉಡುತ್ತೇನೆ . ಹೀಗಾಗಿ ಅಂದೂ ಇಂದೂ ಕ್ಲಿನಿಕ್ ನಲ್ಲಿ ನನ್ನ ಉಡುಗೆ ಸಲ್ವಾರ್ ಅಥವಾ ಚೂಡಿದಾರ್!) ಬುರ್ರೆಂದು ಗಾಡಿಯಲ್ಲಿ ಹೋಗಿ ಕಾಲೇಜಿನ ಬಳಿ ಇಳಿದಿದ್ದಾಯ್ತು. ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳಲು ಪ್ರಿನ್ಸಿಪಾಲರ ರೂಮಿಗೆ ಹೋದರೆ ಆಗಲೇ ಸಾಕಷ್ಟು ಹುಡುಗ-ಹುಡುಗಿಯರು ಸಾಲುಗಟ್ಟಿ ಕಾಯುತ್ತಿದ್ದರು ( ಹೊಸ ಸ್ಟುಡೆಂಟ್ ಅಡ್ಮಿಶನ್ ಪ್ರಕ್ರಿಯೆಯೂ ನಡೆದಿತ್ತು) ಅಲ್ಲಿದ್ದ ಸಹಾಯಕ ಏನು ಎತ್ತ ವಿಚಾರಿಸಿ ‘ ಸರಿಯಾಗಿ ಒಂಬತ್ತಕ್ಕೆ ಸರ್ ಬರ್ತಾರೆ. ಈಗಿನ್ನೂ ಎಂಟೂವರೆ; ನೀವು ಬೇಕಾದರೆ ಅಲ್ಲಿರೋ ಕ್ಯಾಂಟೀನಿನಲ್ಲಿ ತಿಂಡಿ-ಕಾಫಿ ತಿಂದು ಬನ್ನಿ’ ಎಂದು ಸೂಚಿಸಿದ. ಹಸಿವಾಗಿರಲಿಲ್ಲ,ಆದರೆ ಬೆಳಗಿನ ಛಳಿ, ಜತೆಗೆ ಕಾಫಿಯ ಆಸೆ.ಹಾಗೇ ಕಾಲೇಜು ನೋಡಿದ ಹಾಗೂ ಆಯಿತು ಎಂದು ಕ್ಯಾಂಟಿನ್ ಕಡೆ ಹೊರಟೆ.

ಹಾಡು ಹಾಡು—
ಪುಟ್ಟದಾದ ಕ್ಯಾಂಟೀನ್..ಒಂದೆರಡು ಬೆಂಚು, ಟೇಬಲ್ಲು.ಹೊರಗಡೆ ಇಡ್ಲಿ, ವಡೆ, ಚೌಚೌಭಾತ್ ಬೋಂಡಾ ಕಾಫಿ ಟೀ ಸಿಗುತ್ತದೆ ಎಂದು ಬರೆದ ಬೋರ್ಡ್.ಅದನ್ನೇ ನೋಡುತ್ತಾ ಒಳಹೊಕ್ಕರೆ ಅಲ್ಲೊಂದು ಪುಟ್ಟ ಮೀಟಿಂಗ್. ಎರಡು ಬೆಂಚುಗಳಲ್ಲಿ ಸಾಲಾಗಿ ಕುಳಿತ ಹುಡುಗರು ಮತ್ತು ಅವರ ಮುಂದೆ ತಲೆ ತಗ್ಗಿಸಿ ನಿಂತ ಹುಡುಗ ಹುಡುಗಿಯರು. ನೋಡಿದೊಡನೆ ತಿಳಿಯಿತು ಇದು ಸೀನಿಯರ್ ಜ್ಯೂನಿಯರ್ ಮೀಟಿಂಗ್. ಆದರೂ ಅದನ್ನು ಲೆಕ್ಕಿಸದೇ ಒಳಹೋಗಿ ‘ ಒಂದು ಕಾಫಿ ಕೊಡಪ್ಪಾ ‘ ಎಂದೆ. ಅಷ್ಟರಲ್ಲಾಗಲೇ ಹಲವರ ಕಣ್ಣು ನನ್ನನ್ನು ಹಿಂಬಾಲಿಸಿದ್ದವು. ಹಿಂದಿನಿಂದ ಧ್ವನಿ ಬಂತು ‘ ಏನು, ಕಾಲೇಜಿಗೆ ಹೊಸಬಳಾ?’ ಅತ್ತಲೇ ತಿರುಗಿ ಹೂಂ ಎಂದೆ. ಮಧ್ಯದಲ್ಲಿ ಕುಳಿತಿದ್ದವ ವಿವರಿಸಿದ ‘ ಮತ್ತೆ? ಇಷ್ಟು ಧೈರ್ಯವಾಗಿ ಕಾಫಿ ಆರ್ಡರ್ ಮಾಡಿಬಿಟ್ರೆ ಹೇಗೆ? ಮೊದಲು ವಿಶ್ ಮಾಡಬೇಕು ಆಮೇಲೆ ಇಂಟ್ರೋ ತೆಗೆದುಕೊಳ್ಳುತ್ತೇವೆ ..ಲಾಸ್ಟಿಗೆ ಕಾಫಿ-ತಿಂಡಿ ಇಲ್ಲಿರುವ ಎಲ್ಲರಿಗೂ ಕೊಡಿಸಬೇಕು.! ಇಲ್ಲಿ ಬನ್ನಿ ಮಿಸ್ ’ . ಒಂದು ಕ್ಷಣ ಯೋಚಿಸಿ ಮತ್ತೆ ಆತ ಹೇಳಿದಂತೆ ಇತರರ ಬಳಿ ನಿಂತೆ. ಪ್ರಶ್ನೆಗಳು ಶುರುವಾದವು ಯಾವ ಊರು, ಯಾವ ಕಾಲೇಜು, ಇಷ್ಟದ ಹೀರೋ, ಹೀರೋಯಿನ್ ಇದೆಲ್ಲಾ ಆದ ಮೇಲೆ ಈಗ ಟ್ಯಾಲೆಂಟ್ ಶೋ ಎಂದು ನಿರ್ಧರಿಸಿದರು. ಪಾಪ ನನ್ನ ಜತೆಯಲ್ಲಿದ್ದವರು ಚಳಿ ಗಾಳಿಗೆ , ಈ ಹುಡುಗರ ಪ್ರಶ್ನೆಗೆ ಹೆದರಿದ್ದವರು ಈಗಂತೂ ಗುಬ್ಬಿಮರಿಗಳಂತಾಗಿದ್ದರು. ‘ ನಿಮ್ಮೆಲ್ಲರಿಗಿಂತ ಎರಡು ಜಡೆ ಬೇಬಿಯೇ ಹೆದರದೇ ನಿಂತಿದೆ.ಏನು ಮಾಡ್ತೀಯಾ. ಹಾಡು, ಡಾನ್ಸ್ ’ ಅಂದ್ರು. ಯಾವುದೂ ಮಾಡಲ್ಲ /ಎರಡೂ ಮಾಡ್ತೀನಿ ಹೀಗೆ ಉತ್ತರಗಳ ಬಗ್ಗೆ ಯೋಚಿಸಿ ಕಡೆಗೆ ಹಾಡ್ತೀನಿ ಎಂದೆ. ವಿಶಲ್- ಕ್ಲಾಪ್ ಹೊಡೆದು ಚಿತ್ರವಿಚಿತ್ರ ದನಿ ಹೊರಡಿಸಿ ಸ್ವಾಗತಿಸಿದರು. ನಾನು ಕಣ್ಣು ಮುಚ್ಚಿ
‘ ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ.
ಭೂಮಿಯೆ ಬಿರಿಯಲಿ,ಗಗನವೆ ನಡುಗಲಿ,
ಸಾಗರ ಕೆರಳಲಿ,ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ’
ಎಂದು ಸಿಕ್ಕಾಪಟ್ಟೆ ಭಕ್ತಿ ಮತ್ತು ಆವೇಶದಿಂದ ಹಾಡಿದೆ. ಮುಂದಿನ ಸಾಲುಗಳು ಮರೆತುಹೋದ್ದರಿಂದ ಅದೇ ಸಾಲುಗಳನ್ನು ಎರಡೆರಡು ಬಾರಿ ಹಾಡಿಬಿಟ್ಟೆ (ನಾ ನಿನ್ನ ಬಿಡಲಾರೆ 1979 ರ ಸಿನಿಮಾದ ಜನಪ್ರಿಯ ಹಾಡು. ಅನಂತ್ ನಾಗ್ ಮತ್ತು ಲಕ್ಷ್ಮಿ ತಾರಾಗಣದಲ್ಲಿದ್ದಾರೆ. ಪ್ರಿಯತಮೆಯ ಆತ್ಮ ನಾಯಕನ ಮೇಲೆ ಆವಾಹನೆಯಾದಾಗ ನಾಯಕಿ ಗುರುರಾಯರ ಮೊರೆ ಹೋಗುವ ಹಾಡು) ‘ಅಮ್ಮಾ ತಾಯಿ! ಭೂತ ಪ್ರೇತ ನೆನಪಿಗೆ ಬರುವ ಹಾಗೆ ಎಂಥಾ ಹಾಡು ಹಾಡಿಬಿಟ್ಟೆ…ನಿನ್ನ ಪಾದಕ್ಕೆ ಬೀಳ್ತೀವಿ..ದಯವಿಟ್ಟು ನಿಲ್ಲಿಸು’ ಎಂದು ಕೈ ಮುಗಿದುಬಿಟ್ಟರು ಸೀನಿಯರ್ ಹುಡುಗರು. ನನ್ನ ಜತೆಗಿದ್ದವರು ಭಯಂಕರ ಗಾಬರಿಯಾಗಿದ್ದರು.

ಸೀನಿಯರ್ಸ್ ತಮ್ಮತಮ್ಮಲ್ಲಿ ಮುಂದೇನು ಹೇಳುವುದು ಎಂದು ಚರ್ಚೆ ಮಾಡುತ್ತಿರುವಾಗ ಆಫೀಸಿನಿಂದ ಸಹಾಯಕ ಓಡುತ್ತಾ ಬಂದ. ‘ ಮೇಡಂ, ಪ್ರಿನ್ಸಿ ಬಂದಿದ್ದಾರೆ. ಹೊಸ ಲೆಕ್ಚರರ್ ಬಂದ್ರಾ ಅಂತ ವಿಚಾರಿಸಿದ್ರು; ಬೇಗ ಕಾಫಿ ಕುಡಿದು ಬನ್ನಿ’ .ಪಾಪ ಶಾಕ್ ಹೊಡೆದಂತಾಗಿತ್ತು ಹುಡುಗರ ಪರಿಸ್ಥಿತಿ. ‘ ಸಾರಿ ಮ್ಯಾಮ್; ನಾವು ಸುಮ್ನೇ ತಮಾಷೆಗೆ ಮಾಡಿದ್ದು. ನೀವು ಆಗಲೇ ಹೇಳಿಬಿಡಬೇಕಿತ್ತು. ನಿಮ್ಮ ಜಡೆ- ಡ್ರೆಸ್ ನೋಡಿ ನಾವು ಫಸ್ಟ್ ಯಿಯರ್ ಅಂದುಕೊಂಡ್ವಿ. ಬೇಗ ಕಾಫಿ ಕೊಡ್ರೋ ಮ್ಯಾಮ್ ಗೆ’ ಎಂದೆಲ್ಲಾ ಬಡಬಡಿಸತೊಡಗಿದರು. ‘ ಪರವಾಗಿಲ್ಲ, ಆಮೇಲೆ ಮಾತನಾಡೋಣ..ಈಗ ಕ್ಲಾಸಿಗೆ ಹೋಗಿ’ ಎಂದಷ್ಟೇ ನುಡಿದು ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಿದ್ದೆ.ಆದಿನದ ಮೊದಲನೇ ಕ್ಲಾಸ್ ಇದೇ ಸೀನಿಯರ್ ಸ್ಟುಡೆಂಟ್ಸಿಗೆ ಇತ್ತು.ವೃತ್ತಿಪರ ಕಾಲೇಜುಗಳಲ್ಲಿ ರ‍್ಯಾಗಿಂಗ್ ಎಂಬ ಭೂತ ಜೋರಾಗಿದ್ದ ಕಾಲ ಅದು. ಈ ಹುಡುಗರು ಅಂಥದ್ದೇನೂ ಮಾಡಿರಲಿಲ್ಲ; ಆದರೂ ಹಾಗೇ ಬಿಟ್ಟಲ್ಲಿ ಅದು ಬೇರೆ ಸ್ವರೂಪ ತಾಳುವ ಸಾಧ್ಯತೆ ಇತ್ತು. ಆದ್ದರಿಂದ ’ ಹೊಸಬರ ಪರಿಚಯ ಮಾಡಿಕೊಳ್ಳುವುದು ತಪ್ಪಲ್ಲ; ಆದರೆ ಅದಕ್ಕೊಂದು ರೀತಿ ನೀತಿ ಇದೆ. ಅಪರಿಚಿತ ವಾತಾವರಣ, ಸ್ಥಳ, ಕೋರ್ಸ್ ಇವೆಲ್ಲದರ ಮಧ್ಯೆ ನೀವು ಧೈರ್ಯ ತುಂಬಬೇಕೇ ಹೊರತು ಈ ರೀತಿ ಹೆದರಿಸುವುದು ಸರಿಯಲ್ಲ.ನೀವೂ ಅವರ ಸ್ಥಾನದಲ್ಲಿದ್ದಿರಿ ಎಂಬುದು ನೆನಪಿನಲ್ಲಿರಲಿ. ರ‍್ಯಾಗಿಂಗ್ ಹೆಸರಿನಲ್ಲಿ ಯಾರಾದರೂ ನಿಮ್ಮ ಬಗ್ಗೆ ದೂರು ಕೊಟ್ಟರೆ ಜೈಲು ಸೇರಬೇಕಾಗುತ್ತೆ.’ ಎಂದು ಎಚ್ಚರಿಸಿದಾಗ ತಲೆ ತಗ್ಗಿಸಿದ್ದರು. ಆ ವರ್ಷ ನನ್ನನ್ನು ಆ್ಯಂಟಿ ರ‍್ಯಾಗಿಂಗ್ ಕಮಿಟಿಗೆ ಸೇರಿಸಿದ್ದರು.ನಾನು ರ‍್ಯಾಗಿಂಗ್ ನಡೆಯದಂತೆ ಗಮನ ಹರಿಸಲು ಇದೇ ಸೀನಿಯರ್ ಹುಡುಗರನ್ನು ನೇಮಿಸಿದ್ದೆ. ಸಂಪೂರ್ಣ ಸಹಕಾರ ನೀಡಿದರು ಮತ್ತು ನಾವು ಮ್ಯಾಮ್ ಟೀಂನವರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು! ನನಗಿಂತ ಒಂದೆರಡು ವರ್ಷ ಚಿಕ್ಕವರಾಗಿದ್ದ ಅವರಿಗೆ ಗಲಾಟೆ ಮಾಡಿದಾಗಲೆಲ್ಲಾ ಆಗಾಗ್ಗೆ ‘ ಬಿಡೆನು ನಿನ್ನ ಪಾದ’ ಹಾಡುತ್ತೇನೆ ಎಂದು ಹೆದರಿಸುತ್ತಿದ್ದೆ. ಅಲ್ಲಿ ಕೆಲಸ ಮಾಡಿದ್ದು ಕೇವಲ ಒಂದು ವರ್ಷವಾದರೂ ಖುಷಿ ಕೊಟ್ಟ ಅನುಭವ ಅದು!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: