ಟೈಮ್ ಪಾಸ್ ಕಡ್ಲೆ ಕಾಯ್ : ಹುಚ್ರಾಯಪ್ಪನ ಸರ್ವೀಸ್ ಟ್ಯಾಕ್ಸ!

ಎಚ್.ಜಿ.ಮಳಗಿ

‘ಇಲ್ನೋಡ್ರಿ ಪೇಪರ್ನ್ಯಾಗ ಏನ್ ಬರದಾರಂತ?’ ಅಂತ ಅಪರೂಪಕ್ಕೆಂಬಂತೆ ನನ್ನ ಪತ್ನಿ ಪೇಪರ್ ಓದುತ್ತಿದ್ದವಳು ಟಿವಿಯಲ್ಲಿ ದೂರದ ಘಾನಾ ದೇಶದ ಪಾರ್ಲಿಮೆಂಟಿನಲ್ಲಿ ಟ್ಯಾಕ್ಸ್ ಏರಿಕೆಯ ಕುರಿತು ನಡೆದ ಚರ್ಚೆಯು ಹೊಡೆದಾಕ್ಕೆ ತಿರುಗಿದ್ದನ್ನು ತೋರಿಸುತ್ತಿದ್ದುದನ್ನು ಕುತೂಹಲದಿಂದ ನೋಡುತ್ತ ಕೂತಿದ್ದ ನನ್ನ ಗಮನವನ್ನು ತನ್ನತ್ತ ಸೆಳೆದಳು. ಇನ್ನೇನು ಯಾವ್ದಾದರೂ ಸೀರೆಯ ಡಿಸ್ಕೌಂಟ್ ಸೇಲ್ ಹಾಕಿರುವ(ನನ್ನ ದೃಷ್ಟಿಯಲ್ಲಿ ನಮ್ಮ ಮುಂಡಾ ಮೋಚುವ) ಜಾಹೀರಾತಿರಬಹುದೆಂದು, ‘ಎಷ್ಟಂತ ಸೀರಿ ಡಿಸ್ಕೌಂಟು?’ ಅಂತ ನಾನು ಉದಾಸೀನದಿಂದ ಕೇಳಿದ್ದು ನನ್ನವಳ ಕೋಪವನ್ನು ಕೆರಳಿಸಿತೇನೊ. ಅಮಾವಾಸ್ಯೆಯ ಚಂದಿರನ ಅವಳ ಮುಖದಲ್ಲಿ ಕೋಪದ ಪ್ರವಾಹದ ಕೆಂಪು ರೇಖೆಗಳು ಎದ್ದು ಕಾಣಿಸಿದವು ಅಂದ್ರೆ ಕೋಪದ ‘ಹೈಟನ್ನು’ ಊಹಿಸಬಹುದು. ಸಿರ್ರನೇ ರೇಗಿ, ‘ಅಂದ್ರ ಏನ ಅಂಬೋಣ ನಿಮ್ದು? ಹೆಂಗ್ಸರಿಗೆ ಪೇಪರಿನ ತುಂಬಾ ಬರೇ ಸೀರಿನ ಕಾಣಸ್ತಾವಂತ ಮಾಡೀರ್ಯೋ ಹ್ಯಾಂಗ? ಛೆಂದ್ ಸೀರೀ ಉಟ್ಗೊಂಡ ನಮ್ಮಂತ ಹೆಂಗಸರನ್ನ ಬಾಯಿ ಬಿಟಗೊಂಡು ನೋಡ್ತೀರಿ’ ಅಂತ ತನ್ನ ಕುಂಬಳಕಾಯಿ ನಡವನ್ನ ಬಲವಂತವಾಗಿ ಬಳುಕಿಸಿದಳು. ಆದರೆ ಕಲ್ಲುಕಂಭದಂತಹ ನಡದ ಬದಲು ಗೋಣು ಅಲ್ಲಾಡಿತಷ್ಟೇ!
‘ಸೌಕಾಶಾ ಮಾರಾಳಾ, ಟೊಂಕಾ ಉಳುಕಿ…’
‘ಹೂಂ!’ ಅಂತ ಕೋಪದಿಂದ ನನ್ನ ಮಾತನ್ನ ಅರ್ಧಕ್ಕೆ ತಡೆದು ಹೂಂಕರಿಸಿದಳು. ನಾನು ಸುಧಾರಿಸಿಕೊಂಡು ಅವಳನ್ನು ಸಮಾಧಾನ ಪಡಿಸುವಂತೆ,
‘ಹಂಗಲ್ಲ ಮಾರಾಳ! ಇಲ್ನೋಡು ಸರಕಾರದೌರು ಮತ್ತ ನಾಕ್ನೂರು ಐಟಂನ್ನ ಸರ್ವೀಸ್ ಟ್ಯಾಕ್ಸ್ ಅಂಡರ್ ತರ್ಲಾಕ್ಕತ್ಯಾರಂತ ಪೇಪರ್ನ್ಯಾಗ ಬಂದದ. ನಿಂಗೊತ್ತಿಲ್ಲ ಈ ಅಂಗ್ಡೀಯೌರೂ ಭಾಳ ಬೆರಕೀ ಆಗ್ಯಾರ. ಸರಕಾರದ ಎಲ್ಲಾ ಟ್ಯಾಕ್ಸ್ ಸೀರಿಯೊಳಗ ಹಾಕಿ, ಡಿಸ್ಕೌಂಟ್ ಅಂತ ಪೇಪರ್ನ್ಯಾಗ ಹಾಕಿ ಬರೇ ಟೀವಿಯೊಳಗ ಸೀರಿಯಲ್ ಒಳಗ ಛೆಂದನ್ನ ಹುಡ್ಗೀರ್ಗೆ ಹಿಂತಾ ಸೀರೀ ಉಡ್ಸಿ ನಿಮ್ ತಲೀ ಕೆಡಸ್ತಾರ, ನಮ್ಮಂತ ಗಂಡಸರ ತಲೀ ಬೋಳಸ್ತಾರ!’
‘ಹೌದ್ ನೋಡ, ಭಾಳ್ ಸೀರಿ ಕೊಡ್ಸೀರಿ ನೀವು? ನೋಡ್ರಿಲ್ಲೆ ಈ ಸೀರೀನೂ ಸೇರ್ಸಿ ಎಲ್ಲಾ ಸೀರಿ ನಂ ತೌರ್ಮನಿಯೌರ ಕೊಟ್ಟಾರ!’ ಅಂತ ಕಟಕಿದಳು. ನನ್ನನ್ನು ಹಂಗಿಸುವ ಸರ್ಟಿಫಿಕೇಟನ್ನು ಇಂತಹ ಸಂದರ್ಭಗಳಲ್ಲಿ ನವೀಕರಿಸಿಕೊಳ್ಳುತ್ತಾಳೆ.
‘ಅಲ್ಲಾ ನಮ್ಮನ್ನಾಳೋರ್ಗ ಏನಾಗ್ಯದಂತ? ಹಿಂಗ್ ಹೆಣ್ಮಕ್ಳು ಉಡೋ ಸೀರೀಗೂ ಸರ್ವೀಸ್ ಟ್ಯಾಕ್ಸ್ ಹಾಕಿದ್ರ ರೌರವಕ್ಕ ಹೋಗಿ ಬೀಳೋದು ಗ್ಯಾರಂಟೀ!’ ತನ್ನದೇ ಆದ ಧಾರ್ಮಿಕ ಶಾಪ ಕೊಟ್ಟು ಬಿರುಗಾಳಿಯಂತೆ ಧೂಳೆಬ್ಬಿಸಿ ಒಳಗೆ ಹೋದಳು.
ಅವಳಿಗೆ ದೇವರ ವರಕ್ಕಿಂತ ತನ್ನ ಶಾಪದ ಮೇಲೆ ಹೆಚ್ಚು ವಿಶ್ವಾಸ!
ನಾನು ನನ್ನ ಬೋಳು ತಲೆಯಲ್ಲುಳಿದಿದ್ದ ಬಣ್ಣ ಕಂಡಿದ್ದ ನಾಕಾರು ಕೂದಲುಗಳನ್ನು ಅವಳ ಬಿರುಗಾಳಿಯಿಂದ ರಕ್ಷಿಸಿಕೊಂಡೆ. ಆಗ ನಮ್ಮ ಮನೆಯ ಗೇಟು ‘ಕಿರ್ರೆಂದು’ ಸದ್ದು ಮಾಡುತ್ತ ತೆರೆದು ಬಂದ ವ್ಯಕ್ತಿಯನ್ನು ನೋಡಿ ಚಕಿತವಾಯಿತು.
ಅರೆ ನಮ್ಮ ಅಡ್ಡಮನಿ ಹುಚ್ಚರಾಯಪ್ಪ!
ಮುಖದ ತುಂಬ ಬಣ್ಣಗೆಟ್ಟ ಕೆಂಪು ಟಾವೆಲ್ ಸುತ್ತಿಕೊಂಡಿದೆ. ಅಪರೂಪಕ್ಕೆಂಬಂತೆ ಮಾಸಿದ ದೊಗಳೆ ಕಾಟನ್ ಪ್ಯಾಂಟ್, ಮಾಸಿ ಖಾಕಿ ಬಣ್ಣಕ್ಕೆ ತಿರುಗಿದೆ ಕಾಟನ್ ಬಿಳಿ ಶರ್ಟ, ಹತ್ತು ದಿನದ ಕುರುಚಲು ಗಡ್ಡ, ಕೆದರಿದ ತಲೆ, ಪಾಚಿಗಟ್ಟಿದ ಬಚ್ಚಲು ಮೋರೆಯಂತಹ ಬಾಯಿಯೊಳಗೆ ಹೊಳೆಯುವ ಕೆಂಪು ಮಿಶ್ರಿತ ಕಪ್ಪು ವಕ್ರ ಹಲ್ಲುಗಳು!
ಯಾಕೋ ಹುಚ್ರಾಯ ಹೆದರಿಕೊಂಡಂತಿದ್ದ. ಆಚೀಚೆ ನೋಡಿ ನನ್ನತ್ತ ಪೇಲವ ನಗೆ ಎರಚಿ, ‘ಒಳೀಕೇ ಬನ್ನಿ ಸಾ! ಅಲ್ಲೇ ಕುಂತು ಮಾತಾಡೋವಾ!’ ಅಂತ ನನ್ನ ಪ್ರತಿಕ್ರಿಯೆಗೂ ಕಾಯದೇ ನನಗಿಂತ ಮುಂದಾಗಿ ಗಡಿಬಿಡಿಯಿಂದ ನನ್ನ ಮನೆಯೊಳಗೆ ತೂರಿಕೊಂಡ. ನನಗೆ ಅವನ ವರ್ತನೆ ಗೊಂದಲವಾಯಿತು. ಎದುರಿಗೇ ನಿಂತಿದ್ದ ನನ್ನ ಶ್ರೀಮತಿಯನ್ನು ಕಂಡು ಎಂದಿನ ತನ್ನ ದಿವ್ಯವಾದ ಮೇಕೆ ನಗೆಯನ್ನು ಅವಳತ್ತ ಬೀರಿ, ‘ಸಂದಾಗಿದೀರಾ ಸಾರ್ದಕ್ಕೌರೆ? ಒರ್ಗೆ ಚಳಿ ಅಲ್ಲವ್ರಾ, ಅದ್ಕೇ ಒಳೀಕೇ ಬನ್ನಿ ಸಾ ಮಾತಾಡಾಣಾಂತ ಸೇಸಣ್ಣ ಮೇಸ್ಟ್ರಿಗೆ ಏಳಿ ಬಂದೆ!’ ಅಂತ ಬೆವರು ಒರೆಸಿಕೊಳ್ಳುತ್ತ, ಎಂದಿನ ನಿರ್ಭಿಡೆಯಿಂದ ಕೂಡುವ ಬದಲು ಮುದುಡಿಕೊಂಡು ಎದುರಿನ ಸೋಫಾದಲ್ಲಿ ಕೂತು ಕಾಲಿಗೆ ಮೆತ್ತಿದ್ದ ಧಾರವಾಡದ ಕೆಮ್ಮಣ್ಣಿನ ರಂಗೋಲಿಯನ್ನು ಸೋಫಾ ಕವರಿಗೆ ಮೆತ್ತಿ ನನ್ನವಳ ಮುಖ ಮತ್ತೊಮ್ಮೆ ಕೋಪದಿಂದ ಕೆಂಪೇರಿಸಿದ.

ನಾನೂ ಒಳಕ್ಕೆ ಬಂದು, ‘ಶಾರದಾ ಹುಚ್ರಾಯಾ ಅಂಧಾಂಘ ಹೊರ್ಗ ಥಂಡಿ ಭಾಳ ಅದ ನೋಡು. ಇಬ್ರಿಗೂ ಒಂದಧರ್ಾ ಬಿಸಿಬಿಸಿ ಛಾ ತೊಗೊಂಡ್ ಬಾ!’ ಅಂತ ಆರ್ಡರ್ ಮಾಡಿ ‘ಹೇಗೆ’ ಅನ್ನುವಂತೆ ಹುಚ್ರಾಯನನ್ನ ನೋಡಿ ನಕ್ಕೆ. ಆದರೆ ಅವನು ನಗಲಿಲ್ಲ! ನನಗೆ ಪರಮಾಶ್ಚರ್ಯ. ಏನೋ ವಿಷಯ ಇದೆ. ಅದಕ್ಕೇ ಇವನು ಬಂದಿದ್ದಾನೆ ಎಂದುಕೊಂಡು, ‘ಏನೋ ಹುಚ್ರಾಯಾ ಇತ್ಲಾಕಡೆ ಬಂದಿ? ಭಾಳ್ ದಿನಾ ಆಗಿತ್ತ್ ನೋಡ್ ನಿನ್ನ ನೋಡಿ’ ಅಂತ ದೇಶಾವರಿ ವಿಚಾರಣೆ ಮಾಡಿದೆ.
‘ಊಂ ಸಾ! ಕಾಪೋರೇಸನ್ ಕೆಲ್ಸದಾಗೆ ಬಿಜಿಯಾಗಿದ್ದೆ. ಬರಾಕಾಗ್ನಿಲ್ಲಾ ಸಾ! ಅದ್ರಾಗೆ ಈ ಅಂದೀ ಇಡಿಯೋ ಕೆಲ್ಸಾ ಬ್ಯಾರೆ ಅಚ್ಚೌರೆ ನಂ ಮೇಯರ್ ಸಾಏಬ್ರು! ನಂ ವಾಲ್ಡನ್ಯಾಗೆ ಅಂದೀ ಓನರೌರೆ. ಎಂಗಾರಾ ಮಾಡಿ ಸಾಏಬ್ರಿಗೇಳಿ ಅಂದಿ ಇಡಿಯೋ ಪೋಗ್ರಾಮ್ ಪ್ರೋಸ್ಟೋನ್ ಮಾಡುಸ್ಕೊಡು ಉಚ್ರಾಯಾ ಅಂತ ಒರಾತ್ ಅಚ್ಗೊಂಡೌರೆ’
‘ಹೂಂ ಹೂಂ! ನಂ ಕಾರ್ಪೊರೇಶನ್ ಮಂದಿ ಅಪರೂಪಕ್ಕ ಇದೊಂದ್ ಒಳ್ಳೇ ಕೆಲಸ ಮಾಡ್ಲಿಕತ್ಯಾರ್ ನೋಡ್ ಹುಚ್ರಾಯಾ! ಏನ್ ಹಂದ್ಯಾಗ್ಯಾವೋ ಮಾರಾಯಾ ಊರ್ತುಂಬ.’
‘ಹಂದ್ಯೇನ್ ಅವು, ಹೊನಗ್ಯಾ ಆಗ್ಯಾವ ಹೊನಗ್ಯಾ!’ ಒಳಗಿಂದ ನನ್ನ ಶ್ರೀಮತಿ ಗುಡುಗುತ್ತ ಬಂದು ಚಹಾ ತಂದು ಟೀಪಾಯ್ ಮೇಲೆ ಕುಕ್ಕಿ ಹೋದಳು.
‘ಯಾಕ್ ಸಾ ಅಕ್ಕೌರು ರಾಂಗ್ ಆದಾಂಗೈತೆ?’ ಅನ್ನುತ್ತ ಹುಚ್ರಾಯಾ ಚಹಾ ಕಪ್ಪು ತೆಗೆದುಕೊಂಡು ತನ್ನ ಎಂದಿನ ಸ್ಟೈಲ್ನಲ್ಲಿ ಕುಡಿಯತೊಡಗಿದ.
‘ಏನಿಲ್ಲ ಮಾರಾಯಾ, ಸೀರಿ ಸೇಲ್ ಬಂದಂತಲ್ಲಾ ಅದರ ವಿಚಾರದಾಗ ಸಿಟ್ಟ ಮಾಡ್ಕೊಂಡಾಳ. ಸರಕಾರದೌರು ಎಲ್ಲಾಕ್ಕೂ ಈ ಸರ್ವೀಸ್ ಟ್ಯಾಕ್ಸ ಹಾಕಿ ರೇಟ್ ಜಾಸ್ತಿ ಮಾಡ್ಯಾರಂತ ಅಕೀಗ ಸಿಟ್ಟು’ ನಾನು ಅವಳ ಸಿಟ್ಟಿನ ಕಾರಣ ಹೇಳಿ, ‘ಅದಿರ್ಲಿ ಮತ್ತೇನಪಾ ಹೊಸಾ ವಿಷ್ಯಾ?’ ಅಂತ ಅವನಿಂದ ಹೊಸ ಸುದ್ದಿ ಹೊಡಿಸುವ ಪೀಠಿಕೆ ಹಾಕಿದೆ.
‘ಸಾ ಅಕ್ಕೌರು ಈಗ ಈ ಸರ್ವೀಸ್ ಟ್ಯಾಕ್ಸ ಅಂತ ಏನೋ ಅಂತಿದ್ರು? ಏನ್ ಸಾ ಅದು?’
‘ಅದನೋ ಹುಚ್ರಾಯಪ್ಪಾ ಈ ಎರಡೂ ಸರಕಾರದೌರು ಕೂತದ್ದಕ್ಕ ನಿಂತದ್ದಕ್ಕ ಟ್ಯಾಕ್ಸ ಹಾಕ್ತಾರಲ್ಲಾ ಅದಕ್ಕ ಸರ್ವೀಸ್ ಟ್ಯಾಕ್ಸ ಅಂತಾರ!’ ಅಂತ ಒಳಗಿಂದ ನನ್ನ ಹೆಂಡತಿ ಕುಹಕಿಸಿದಳು.
ನನ್ನವಳ ಮಾತಿನಿಂದ ಹುಚ್ಚುರಾಯನಿಗೆ ಹುರುಪಿನ ಜೊತೆಗೆ ರೋಷವೂ ಬಂತೂಂತ ಕಾಣುತ್ತದೆ.
‘ಸಾ ಈ ಸರ್ವೀಸ್ ಟ್ಯಾಕ್ಸ ಯಾಕ್ಸಾ ಆಕ್ತಾರೆ?’ ಅವನ ಸಿಟ್ಟಿನ ಧ್ವನಿಗೆ ಬೆರಗಾದ ನಾನು ತಣ್ಣಗೆ,
‘ಅದನೋ ಹುಚ್ರಾಯಾ, ಈ ಲೇಬರ್ ಕಾಂಟ್ರ್ಯಾಕ್ಟ ಮಾಡೋರು, ಹೋಟಲ್ನೋರು, ಬ್ಯಾಂಕ್ನೋರು ಹಿಂಗ ಭಾಳ ಜಾಗಾದಾಗ ಸರ್ವೀಸ್ ಕೊಡೋರು ಅಂತ. ಔರಿಗೆ ಈ ಮಾರಾಟ ತೆರಿಗೆ ಹಾಕ್ಲಿಕ್ಕ ಬರೂದಿಲ್ಲ ಏನಪಾ. ಅದ್ಕ ಹಿಂತೌರಿಂದ ಸರ್ವೀಸ್ ಟ್ಯಾಕ್ಸ ಅಂದ್ರ ಸೇವಾ ತೆರಿಗಿ ಹಾಕಿ ಔರಿಂದ ರೊಕ್ಕಾ ಪೀಕಸ್ತಾರ ಏನಪಾ!’ ಅಂತ ಸರ್ವೀಸ್ ಟ್ಯಾಕ್ಸ್ ಬಗೆಗಿನ ನನ್ನ ಅರ್ಧ ಜ್ಞಾನ ಇನ್ನರ್ಧ ಅಜ್ಞಾನ ಪ್ರಕಟಿಸಿದೆ.
‘ಅದಿರ್ಲಿ ಈಗ್ಯಾಕ್ ಆ ಮಾತು?’ ನನಗೆ ಹುಚ್ಚುರಾಯನ ಮಾತಿನ ಹಿನ್ನೆಲೆಯ ಬಗ್ಗೆ ಅನುಭವಜನ್ಯ ಸಂಶಯ ಬಲವಾಯಿತು.
‘ಅಲ್ಲಾ ಸಾ, ಸಮಾಜ ಸೇವೆ ಮಾಡ್ತೀನಿ ಅಂಗೆ ಇಂಗೆ, ಅಂತ ಏಳಕೊಂಡ್ ತಿರಗಾಡೋ ಮಂದೀಗೆಲ್ಲ ಸುಮ್ನೇ ಬಿಡ್ಬಾರ್ದು ಸಾ. ಅಕ್ಕೌರು ಏಳ್ದಾಂಗೆ ಕುಂತದ್ದಕೆ ನಿಂತದ್ದಕೆ ಈ ಸರ್ವೀಸ್ ಟ್ಯಾಕ್ಸ ಆಕೋ ಗೌಲ್ಮೆಂಟನೌರು ಸಮಾಜ ಸೇವಕರು, ಸಮಾಜ ಸೇವಕರು ಅಂತ ಓಕೊಳ್ಳೊ ಪಾಲಿಟೀಸಿನ್ಸು, ಪುಡಾರಿ ನನ್ಮಕ್ಳಿಗೂ ಯಾಕ್ ಸಾ ಸರ್ವೀಸ್ ಟ್ಯಾಕ್ಸ ಅಂತ ಆಕ್ಬಾರ್ದು? ಅಂಗಾಕಿದ್ರೆ ಎಟ್ಟೊಂದ ರೆನೂ ಬತ್ತದೇ ಸರಕಾರಕ್ಕೆ!’ ಫಕ್ಕನೇ ಬಂದ ಅವನ ಮಾತಿನಿಂದ ಛಕ್ಕನೇ ಅವಾಕ್ಕಾದ ನಾನು ಸುಧಾರಿಸಿಕೊಂಡು,
‘ಅಂದ್ರ?’
‘ಅಲ್ಲಾ ಸಾ, ಸೇವೆ ಮಾಡೌರು ಎಲ್ಲಿದ್ರೇನ್ಸಾ! ಪಾಲ್ಟೀನಾಗಿದ್ರೂ ಸಮಾಜ ಸೇವೆ ಮಾಡ್ಬೌದು. ನಿಮ್ಮಂತ ಇರಿಯರು ಏನ್ ಕಮ್ಮೀ ಸಮಾಜ ಸೇವೆ ಮಾಡಿಲ್ಲವ್ರಾ? ಮತ್ತೆ ಈ ನಂ ನಾಯಕ್ರು ಜನ ಸೇವೆ ಮಾಡಾಕೆ ನನ್ನ ಮಿನಿಟರ್ ಮಾಡ್ರಿ ಕಾಪೋರೇಸನ್ ಚೇರ್ಮನ್ ಮಾಡ್ರಿ ಅಂತ ಐ ಕಮಾಂಡೌರ್ ತಾವ ಯಾಕೆ ಸಾ ಅಲ್ ಗಿಂಜಿ ನಿಂತ್ಕೋಬೇಕು! ಅದ್ಕೇ ನಾ ಆವಾಗ್ಲೆ ಅಂದದ್ದು, ಇಂಗೆ ಸಮಾಜ ಸೇವೆ ಮಾಡೌರ್ಗೆಲ್ಲಾ ಸವರ್ೀಸ್ ಟ್ಯಾಕ್ಸ ಆಕಿ ಜಡದ್ರೆ ಅದಮ್ಕೊಂಡ ಬಿದ್ದಿತರ್ಾರೆ. ಅಲ್ಲವ್ರಾ? ಅದ್ಕೇ ನಾನು ಈ ಆಳಾದ್ದು ಪಾಲಿಟ್ರಿಕ್ಸ ಬ್ಯಾಡಂತ ಪಾಲ್ಟೀಗೆ ನಿಜೈನ್ ಮಾಡಿ ನಂ ಅಳ್ಳೀನಾಗೆ ಜನ ಸೇವೆ ಮಾಡಾಣಾಂತ ಮಾಡೀನಿ ಅದನ್ನ ಏಳಿ ಓಗಾನಾಂತ್ ನಿಂ ಹಂತೀಲೆ ಬಂದೆ ಸಾ!’ ಅಂತ ಭೀಷಣವಾದ ಭಾಷಣನ್ನೇ ಮಾಡಿದ. ಈ ಹುಚ್ರಾಯಾ ಯಾವತ್ತೂ ಹೀಗೆಯೇ ಏನೇನೋ ಮಾತಾಡ್ತಾನೆ ಅಂತ ಅನ್ನಿಸಿದರೂ ಗೂಢಾರ್ಥ ಇದ್ದೇ ಇರುತ್ತೆ. ಅವನ ಮಾತಿಗೆ ನಾನು ನಿರುತ್ತರನಾದರೂ, ಇವನಿಗೆ ಪಾಲಿಟಿಕ್ಸ ಬಗ್ಗೆ ವೈರಾಗ್ಯ ಬಂದದ್ದಕ್ಕೆ ಆಶ್ಚರ್ಯವಾಯಿತು.
‘ಆಗ್ಲಿ ಆಗ್ಲಿ! ನಿನ್ನ ಆಲೋಚನಿ ಅಗದೀ ಛೊಲೋ ಅದ ಏನಪಾ! ಹಂಗ ಆಗ್ಲಿ. ನನ್ನ ಆಶಿವರ್ಾದಾ ನಿಂಗ ಅದ ಅದ ಆತಿಲ್ಲೋ!’ ಅಂತ ಹೃದಯ ತುಂಬಿ ಆಶೀರ್ವದಿಸಿದೆ. ಅಷ್ಟೊತ್ತಿಗೆ ನಮ್ಮ ಮನೆ ಮುಂದಿನ ರಸ್ತೆಯಲ್ಲಿ ಒಂದೆರಡು ಪೋಲಿಸ್ ಜೀಪ್ ಓಡಾಡಿದ ಸದ್ದು. ಹುಚ್ರಾಯಪ್ಪನ ಮುಖ ವಿವರ್ಣವಾಗಿ ಮೈ ಬೆವೆತದ್ದು ಕಾಣಿಸಿತು. ಅವನೂ ನನಗೆ ಕಾಣದಂತೆ ಮುಖದ ಬೆವರು ಒರೆಸಿಕೊಳ್ಳು ನೆಪದಲ್ಲಿ ಮುಖಕ್ಕೆ ಟವೆಲ್ ಮುಚ್ಚಿಕೊಂಡದ್ದು ಕಂಡು ಅಚ್ಚರಿಯಾಯಿತು! ಇದ್ದಕ್ಕಿದ್ದಂತೆ ಧಡಕ್ಕನೇ ಎದ್ದು ನಿಂತ ಹುಚ್ರಾಯಾ ತರಾತುರಿಯಿಂದ ಹೊರಗೆ ಧಾವಿಸಿ, ‘ನಾ ಮತ್ತೆ ನಿಮ್ಮನ್ನ ಕಾಣ್ತೀನಿ ಸಾ!’ ಅಂತ ನನ್ನ ಉತ್ತರಕ್ಕೂ ಕಾಯದೇ ಹೊರಗೋಡಿದ. ನನಗೆ ಅವನ ವರ್ತನೆ ಅಸಹಜ ಎನ್ನಿಸಿದರೂ ಹುಚ್ರಾಯನ ಸ್ವಭಾವ ತಿಳಿದಿದ್ದರಿಂದ ಸುಮ್ಮನಾದೆ.
ಒಂದೈದು ನಿಮಿಷ ಕಳೆದಿತ್ತು.
‘ಏನ್ರಿ ಇಲ್ನೋಡ್ರಿ? ಪೇಪರ್ನ್ಯಾಗ ಏನ್ ಬಂದದಂತ! ಎಲ್ಲಿ ನಿಂ ಹುಚ್ರಾಯಾ ಹೋದ್ನ? ಔನ ಬಗ್ಗೇನ ಬಂದದ. ನೋಡ್ರಿ!’ ಅಂತ ನನ್ನ ಪತ್ನಿ ಪೇಪರನ್ನು ಹಿಡ್ಕೊಂಡು ಒಳಗಿನಿಂದ ಧಾವಿಸಿ ಬಂದಳು. ನಾನು ಸುದ್ದಿಯನ್ನು ಕುತೂಹಲದಿಂದ ಓದಿದೆ.
‘ನಿನ್ನೆ ರಾತ್ರಿ ಜನತಾ ಬಜಾರ್ ರಸ್ತೆಯ ಬಾರೊಂದರಲ್ಲಿ 118ನೇ ವಾರ್ಡನ ಕಾರ್ಪೊರೇಟರ್ ಅಡ್ಡಮನೆ ಹುಚ್ಚರಾಯಪ್ಪ ಎಂಬವರ ಮಗ ಅಡ್ಡಮನೆ ಭ್ರಾಂತೇಶ ಹಾಗೂ ಅವನ ನಾಲ್ವರು ಸ್ನೇಹಿತರು ಕುಡಿದು ಗಲಾಟೆ ಮಾಡಿ ಅಲ್ಲಿಗೆ ಬಂದ ಪೋಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆಂದೂ, ಇದಕ್ಕೆ ಅಡ್ಡಮನೆ ಹುಚ್ಚರಾಯಪ್ಪನವರ ಬೆಂಬಲವಿರುವುದೆಂದೂ ತಿಳಿದು ಬಂದಿದ್ದು, ಎಲ್ಲ ಆರೋಪಿಗಳೂ ತಲೆ ಮರೆಸಿಕೊಂಡಿದ್ದಾರೆ. ಕಾರ್ಪೊರೇಟರ್ ಹುಚ್ಚರಾಯಪ್ಪನನ್ನು ಪಾರ್ಟಿಯಿಂದ ಉಚ್ಛಾಟಿಸಲಾಗಿದ್ದು, ಪೋಲಿಸರು ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಆರೋಪಿಗಳನ್ನು ಹುಡುಕುತ್ತಿದ್ದಾರೆಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ!’
ಓಹೋ ಇದೋ ಸಮಾಚಾರ, ಹುಚ್ಚೂರಾಯನ ಪಾಲಿಟಿಕ್ಸ್ ಸರ್ವೀಸ್ ಟ್ಯಾಕ್ಸ್ ಕಾರಣ! ವೈರಾಗ್ಯದ ಕಾರಣ!!

‍ಲೇಖಕರು G

July 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: