’ಆತ ಇಲ್ಲದಿದ್ದರೆ, ಕಳೆದು ಹೋದರೆ…’ – ನೆಲ್ಸನ್ ನೆನಪಿನಲ್ಲಿ ಜಿ ಎನ್ ಮೋಹನ್ ಬರೆದ ಕವನ

ಇಂದು ನೆಲ್ಸನ್ ಮಂಡೇಲಾ ಅವರ ಜನ್ಮದಿನ. ಅವರ ನೆನಪಿನಲ್ಲಿ …

***

ನೆಲ್ಸನ್ ಮಂಡೇಲಾ ಅವರನ್ನು ನೆನೆಯುತ್ತಾ – ಜಿ ಎನ್ ಮೋಹನ್ ಅವರ ಎರಡು ಕವಿತೆಗಳು



ಈ ಪಾಟಿ ನಾಡಿನಲ್ಲಿ…
ದೂರದ ಬೆಟ್ಟದ ಮೇಲೆ
ಒಬ್ಬ ಪುಟ್ಟ ಹುಡುಗ. ಹೆಸರು ನೆಲ್ಸನ್
ಹಾಡುಗಳು ಎದೆಯೊಳಗೆ, ಮಾತಿನಲಿ
ವಜ್ರಗಳು. ತುಟಿ ಬಿರಿದು ನಕ್ಕರೆ
ನೂರು ಲೋಕ.
ಸುತ್ತ ಹಸಿರು ತೋಟ, ಮಧ್ಯೆ ಕಾಡು ಪಕಳೆಗಳು
ಹೊಸತನದ ಒಸಗೆಗಳು ದಿನ ನಿತ್ಯ ಎದೆಗೆ
 
ದೂರದ ಬೆಟ್ಟದಲ್ಲಿ ಕುಳಿತು ಮಾತುಗಳ
ಕಡೆಕಡೆದು ನೋವುಗಳ ಹುರಿಮಾಡಿ
ಬದುಕು ಚಿತ್ರ ಬಿಡಿಸುತ್ತಾನೆ ನೆಲ್ಸನ್
ಗದ್ದಲದ ಕೊಠಡಿಯಲಿ ಪಾಟಿ ಪುಸ್ತಕ ಹಿಡಿದು ಅ ಆ ಇ ಈ ತಿದ್ದುತ್ತಾನೆ
ತೆರೆಯುತ್ತಾವೆ ಹೊಸಲೋಕ.
 
ಈಗ ಈ ನೆಲ್ಸನ್ ಗೆ ಹೊತ್ತು
ದೂರದ ತನ್ನ ಗೆಣೆಕಾರ ಮತ್ತೊಬ್ಬ ನೆಲ್ಸನ್
ಪಾಟಿ ಪುಸ್ತಕದಲ್ಲೂ ಗುರುಗಳು ತಿದ್ದಿಸಿದ್ದಾರೆ
ಆತನ ಹೆಸರು. ಹೇಳುತ್ತಾರೆ ನಿಮ್ಮ ಕಪ್ಪು ಪಾಟಿಯ
ಹಾಗೆ ಆತನ ಮುಖ.ಅಜ್ಜಿ ಕೆಂಡಕ್ಕೆ ನೀರೆರೆದಾಗ
ಕಂಡ ಹಾಗೆ
 
ನಿಮ್ಮ ಎಳೆತನದಲ್ಲೇ ಪಾಟಿ ಕಿತ್ತು
ಬಚ್ಚಿಟ್ಟುಕೊಂಡರೆ ಕೊಡದಂತೆ ಆತ ಆಡಿಸಿದರೆ
ಏನಾದೀತು ಹೇಳಿ.
ಹೊಸಹೊಸತು ಲೋಕಗಳು ಗರಿಬಿಚ್ಚಿದ
ಹಕ್ಕಿಗಳು ಕುಕಿಲು ನಗೆಗಳ ಹುಡುಗಿ ಕಳೆದು
ಹೋದ ಹಾಗೆ, ಆತ ಇಲ್ಲದಿದ್ದರೆ,
ಕಳೆದು ಹೋದರೆ, ಅ ಆ ಇ ಈ  ಕತ್ತರಿಸಿ
ಹೋಗುತ್ತದೆ ಬದುಕು ಕಡಿದು ಹೋಗುತ್ತದೆ
ಸಂಬಂಧ ಕಣ್ಣಾಲಿಗಳಲ್ಲಿ ಬರೀ ದುಃಖ
ಹಾಗೆಯೇ ಈ ಪಾಟಿ ಮುಖದ ಗೆಣೆಕಾರ
ಇಲ್ಲದಿದ್ದರೆ.
 
ಹೌದಪ್ಪಾ, ಅಲ್ಲಿ ಹಾಗೆ. ಆ ನಾಡ ತುಂಬಾ
ಬರೀ ಪಾಟಿಗಳು. ಪಾಟಿ ನಾಡಿನ ತುಂಬಾ
ಬೆಳಕು ನಗೆ ಚಿತ್ತಾರ.

***

 

ದೋಣಿಗಳು ತೀರಗಳ ಸೇರಬೇಕು


ಹಾಡು ಹಾಡಿದ ಗಳಿಗೆ ತಲೆಯೆತ್ತಿ ಬಾಹುಗಳು
ಕಪ್ಪು ಕುಕ್ಕುವ ಕೈಯ ತಡೆಯಬೇಕು.
ಕಪ್ಪು ಹೊದ್ದಿಹ ಗಾಳಿ, ಕಪ್ಪುಲೇಪಿತ ಮೋಡ
ಕಪ್ಪು ಜನರಿಗೆ ನಗುವ ನೀಡಬೇಕು
 
ಬಿಡುಗಡೆಯ ಬಯಕೆಗಳ ಹುಟ್ಟನ್ನು ಹಿಡಿದಂತ
ದೋಣಿಗಳು ತೀರಗಳ ಸೇರಬೇಕು
ಕಪ್ಪು ಕುಡಿಕೆಗಳಲ್ಲಿ ಕನಸುಗಳ ಕೂಡಿಡುತ
ಬಿಳುಪು ನಗೆಗಳ ಜನರ ನೀಗಬೇಕು
 
ಬೀಸು ಕಲ್ಲಿನ ನಡುವೆ ಕಪ್ಪು ಜನಗಳ ಕೂಗು
ಕನಸ ಕುಟ್ಟಿದ ಒನಕೆ ಸಾಯಬೇಕು
ಬೆಳ್ಳಿ ನಗೆಗಳ ಹೊತ್ತು ಬಂದೂಕು ಹಿಡಿದಂತ
ಜನಗಳದೇ ಶವಯಾತ್ರೆ ನಡೆಯಬೇಕು
 
ಹಾಡು ಉಕ್ಕಲೇಬೇಕು ಎದೆಯಂತರಾಳದಲಿ
ಕನಸು ಚಿಗುರಲೇಬೇಕು ನೋವ ಕಣಕಣಗಳಲ್ಲಿ
ಕನಸುಗಳು ಕಾವ್ಯಗಳು ಹಾಡುಗಳ ಹೊಲದಲ್ಲಿ
ಹಸಿರು ಚೆಲ್ಲುವ ಗಿಡಗಳನು ಬೆಳೆಸಬೇಕು
 
ಸೂರ್ಯನ್ನ ಮರೆಮಾಡಿ ಬೆಳಕನ್ನು ಕದ್ದಂತ
ಜನಗಳಿಗೆ ಕೈಕೋಳ ತೊಡಿಸಬೇಕು
ಹಸಿರನ್ನು ಕದ್ದಂತ ಉಸಿರನ್ನು ತಡೆದಂತ
ಜನಗಳನು ಗಲ್ಲುಗಳು ಕರೆಯಬೇಕು
 
ಕಾವ್ಯ ಹುಟ್ಟಲೇಬೇಕು ಖಡ್ಗಗಳ ಮರೆಯಲ್ಲಿ
ಮಾತು ಚಿಗುರಲಿ ಇನ್ನು ಮೌನ ದೂಡಿ
ಕಾವ್ಯಗಳು ಖಡ್ಗಗಳು ಹಸ್ತಲಾಘವ ನೀಡಿ
ಬೆಂಜಮಿನ್ ಕನಸುಗಳ ಹಾಡಬೇಕು.
 
(ದಕ್ಷಿಣ ಆಫ್ರಿಕಾದಲ್ಲಿ ವರ್ಣ ದ್ವೇಷ ಅತಿರೇಕಕ್ಕೆ ಹೋದಾಗ)
 
 
 

‍ಲೇಖಕರು G

July 18, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. Triveni

    ಕಾವ್ಯ ಹುಟ್ಟಲೇಬೇಕು ಖಡ್ಗಗಳ ಮರೆಯಲ್ಲಿ
    ಮಾತು ಚಿಗುರಲಿ ಇನ್ನು ಮೌನ ದೂಡಿ
    ಕಾವ್ಯಗಳು ಖಡ್ಗಗಳು ಹಸ್ತಲಾಘವ ನೀಡಿ…
    ಅಗಲಿದ ಹೋರಾಟಗಾರನಿಗೆ ಭಾವಪೂರ್ಣ ಶ್ರದ್ಧಾಂಜಲಿ…
    ಧನ್ಯವಾದ, ಅವಧಿ!

    ಪ್ರತಿಕ್ರಿಯೆ
  2. ಮಂಜುನಾಥ ದಾಸನಪುರ

    ಕಪ್ಪು ಜಗತ್ತಿಗೆ ಇಂದು ಅಮಾವಾಸೆ…………

    ಪ್ರತಿಕ್ರಿಯೆ
  3. nagraj.harapanahalli

    ಹಾಡು ಉಕ್ಕಲೇಬೇಕು ಎದೆಯಂತರಾಳದಲಿ
    ಕನಸು ಚಿಗುರಲೇಬೇಕು ನೋವ ಕಣಕಣಗಳಲ್ಲಿ
    ಕನಸುಗಳು ಕಾವ್ಯಗಳು ಹಾಡುಗಳ ಹೊಲದಲ್ಲಿ
    ಹಸಿರು ಚೆಲ್ಲುವ ಗಿಡಗಳನು ಬೆಳೆಸಬೇಕು
    – ತುಂಬಾ ಇಷ್ಟವಾದ ಸಾಲುಗಳು…ಆಶಾವಾದವೇ ನೆಲ್ಸನ್ ಮಂಡೇಲಾರನ್ನು ಅತೀ ಎತ್ತರದ ಸ್ಥಾನಕ್ಕೆ ಕೊಂಡೊಯ್ಯಿತು.

    ಪ್ರತಿಕ್ರಿಯೆ
  4. ಗವಿಸಿದ್ಧ ಹೊಸಮನಿ

    ಸರ್,
    ಅಕ್ಷರದ ನಮನ…
    ನಿಜಕ್ಕೂ ಅರ್ಥಪೂರ್ಣ..
    ಅವಧಿಗೆ ವಂದನೆ….

    ಪ್ರತಿಕ್ರಿಯೆ
  5. ರಮೇಶ್ ಹಿರೇಜಂಬೂರು

    ಹಸಿರನ್ನು ಕದ್ದಂತ ಉಸಿರನ್ನು ತಡೆದಂತ
    ಜನಗಳನು ಗಲ್ಲುಗಳು ಕರೆಯಬೇಕು
    ಹಾಗೂ
    ಕಾವ್ಯ ಹುಟ್ಟಲೇಬೇಕು ಖಡ್ಗಗಳ ಮರೆಯಲ್ಲಿ
    ಮಾತು ಚಿಗುರಲಿ ಇನ್ನು ಮೌನ ದೂಡಿ
    ಸಾಲುಗಳು ತುಂಬಾ ಇಷ್ಟವಾದವು. ಎರಡೂ ಕವನಗಳು ತುಂಬಾ ಚೆನ್ನಾಗಿವೆ ಸರ್
    -ರಮೇಶ್‌ ಹಿರೇಜಂಬೂರು

    ಪ್ರತಿಕ್ರಿಯೆ
  6. lakshmikanth itnal

    ಕವನಗಳು ತುಂಬ ಚನ್ನಾಗಿವೆ, ಕಪ್ಪು ನೆಲದ ಎದೆಯಲ್ಲಿ ಅ ಆ ಇ ಈ ಬಿತ್ತಿದ ಭೀಮ ಬಂಟ ನೆಲ್ಸನ್..ಹ್ಯಾಟ್ಸ್ ಆಫ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: