ಟಿ ಕೆ ತ್ಯಾಗರಾಜ್
ಹೀಗೆ ಒಮ್ಮೆ ರಸ್ತೆಯೊಂದು ಕಾಲಿಗಡರಿಕೊಂಡು
ಕಣ್ಣು ಸಾಗಿದಷ್ಟೂ ದೂರ ನೋಡಿಯೇ ನೋಡಿದೆ
ಕಾಂಕ್ರೀಟು ರಸ್ತೆ, ಟಾರಿನ ಕೀಳರಿಮೆಯ
ಕಪ್ಪು ಬಣ್ಣದ್ದಂತೂ ಅಲ್ಲ
ದಣಿದ ಜೀವಕೆ ಬೆಳದಿಂಗಳಂತೆ ಕಂಡ ರಸ್ತೆ
ಒಂದಷ್ಟು ದೂರ ನಡೆದೇ ನಡೆದೆ
ಬೆಚ್ಚಿ ಬಿದ್ದೆ
ದೂರದಿಂದ ಕಂಡಂತೆ ಅದು
ಫಳಫಳನೆ ಹೊಳೆವ
ಹೊಸರಸ್ತೆಯೂ ಅಲ್ಲ
ಲಾಲೂ ಪ್ರಸಾದ್ ಬಣ್ಣಿಸಿದ
ಹೇಮಮಾಲಿನಿಯ ಕೆನ್ನೆಯಂತೆಯೂ ಇಲ್ಲ
ಒಂದಷ್ಟು ದೂರ ಸಪಾಟಾಗಿ ಕಾಣುತ್ತಿದೆ
ಅಲ್ಲಿ ಇಲ್ಲಿ ತೇಪೆ ಹಚ್ಚಿದ್ದೂ ಗೋಚರಿಸುತ್ತಿದೆ

ನನಗೆ ರಸ್ತೆಯಂತೂ ಬೇಕಾಗಿತ್ತು
ನಡೆದು ಗಮ್ಯ ಸೇರುವುದಕ್ಕೆ
ಇನ್ನೆಲ್ಲೋ ಹುಡುಕಿ ದಣಿದು ಪರದಾಡುವುದಕ್ಕಿಂತ
ಸಿಕ್ಕ ರಸ್ತೆಯಲ್ಲೇ ನಡೆಯುವುದು ಕ್ಷೇಮ
ಗಮ್ಯ ತಲುಪಿ ಹಗುರಾಗಬೇಕು
ರಸ್ತೆ ಯಾವುದಾದರೇನು?
ಎಷ್ಟೋ ಸಲ ರಸ್ತೆ ಹುಡುಹುಡುಕಿ
ಹೈರಾಣಾದ ನನಗಷ್ಟೇ ಗೊತ್ತು ಕಷ್ಟ
ಈಗ ಒಂದಿಷ್ಟೂ ಹುಡುಕಾಡದೇ
ಇಷ್ಟು ಸುಲಭಕ್ಕೆ ಸಿಕ್ಕ ರಸ್ತೆ
ಬಿಡಲಾರೆ, ಗಮ್ಯ ತಲುಪಲೇ ಬೇಕು
ಮತ್ತೆಯೂ ನಡೆದೆ.
ಜೊಲ್ಲು ಸುರಿಸುತ್ತ ಓಡಾಡುವ
ಹುಚ್ಚು ನಾಯಿಯಂತೆ
ಕಾಣುತ್ತಿದೆ ರಸ್ತೆ
ಅಲ್ಲಿ ಇಲ್ಲಿ ರಸ್ತೆಯ ಅಡಿಯಿಂದ
ಪಾಚಿಗಟ್ಟಿದ ಕೊಚ್ಚೆ
ಬಲವಂತವಾಗಿ ಹೊರಬರಲು
ಸಾಹಸ ಮಾಡುತ್ತಿದೆ
ಮೋರಿಯ ಮೇಲೆ ಕಟ್ಟಿದ ರಸ್ತೆ
ದುರ್ನಾತ ಬಚ್ಚಿಡಲು ನಿರ್ಮಿಸಿದ ರಸ್ತೆ
ಕ್ರಮಿಸಿಯಾಯಿತು ಇಷ್ಟೊಂದು ದೂರ
ರಸ್ತೆ ಹೇಗಿದ್ದರೇನು ಇನ್ನು ಸ್ವಲ್ಪ ದೂರ
ಗಮ್ಯ ಸೇರುವುದಕ್ಕೆ ನಡೆಯಲೇಬೇಕು.
ಛಲ ಬಿಡದ ತ್ರಿವಿಕ್ರಮನಂತೆ
ನಡೆದ ನನಗೆ ಆಘಾತ,
ಅಡ್ಡವಾಯಿತೊಂದು ಫಲಕ
“ರಸ್ತೆ ಬಂದ್ ಆಗಿದೆ.
ದಂಡ ಪಾವತಿಸಿ ಹಿನ್ನಡೆಯಿರಿ”.
ತಿರುಗಿ ನೋಡಿದರೆ
ಗಡ್ಡ ಬಿಟ್ಟವನೊಬ್ಬ
ರಸ್ತೆಗೇ ಅಡ್ಡನಾಗಿ ಮಲಗಿದ್ದಾನೆ

ಅವನೇ ರಸ್ತೆಯ ಮಾಲೀಕ!
ಈವರೆಗೆ ನಡೆದು ಬಂದ
ರಸ್ತೆಯೂ ಮಾಯ!
ವರ್ಷಗಳ ಕಾಲ
ಚಂದಗಿದ್ದ ರಸ್ತೆ ಮೇಲೆಯೇ ಮಲಗಿ ಉಂಡು ತೇಗಿ
ಗುಂಡಾದವರೆಲ್ಲ ನಾಪತ್ತೆಯಾಗಿದ್ದಾರೆ
ರಸ್ತೆಯ ಉಬ್ಬು ತಗ್ಗುಗಳಲ್ಲಿ
ಬೆವರಿಳಿಸಿದವರಿಗೂ ಬೇಡವಾಗಿದೆ.
ಯಾರೂ ನಡೆಯದೇ ಬಿಟ್ಟಿದ್ದ ರಸ್ತೆಯಲ್ಲಿ
ನಾನು ಸಿಕ್ಕಿ ಬಿದ್ದಿದ್ದೇನೆ ಸಿಕ್ಕು ಬಿಡಿಸಲಾಗದೇ
ದಯವಿಟ್ಟು ನೆರವಾಗಿ
ಹೊರಬರಲೇಬೇಕಿದೆ.






0 Comments