ಜ್ಯೋತಿ ಬೊಮ್ಮನಹಳ್ಳಿ
ನಿನ್ನ ನೆರಳಾದರೂ
ಕದಿಯಲು ಬಿಡು
ಜತನವಾಗಿ ಜತೆಗೇ
ಇದ್ದುಬಿಡುವೆ…!
ಹಾದಿಯ ಬದಿಯಲಿ
ತಿರುವಿನಲಿ…
ಈ ನೆಲದ ಮಣ್ಣಿನಲಿ
ಪ್ರೇಮದ ನೆರಳ ನೀಡು
ಬೋಧಿ ವೃಕ್ಷದಂತೆ…
ಕರಕಲಾದರೂ ಸರಿಯೇ
ಮಂಗಳಾರತಿಗೆ ಸಿದ್ಧಗೊಂಡ
ಎಣ್ಣೆ ಬತ್ತಿ…
ತೇಯ್ದು ತೋಯ್ದು ಹೋಗಲಿರುವ
ಗಂಧ ಚಂದನ…
ಬಾಡಲಿರುವ ಮುನ್ನ
ಮುಡಿಗೇರಿಯೇ ತೀರುವೆನೆಂಬ
ಹಠ ಹಿಡಿದ ಮಲ್ಲಿಗೆ…
ನಿನಗೆ ಮಾತ್ರ ಇವೆಲ್ಲ ‘ಮಹಾ ಪ್ರಸಾದ’
ಭಕ್ತಿ, ಭಾವ, ಸರಸ,
ಅವಕ್ಕಾಗಿ ಕುಳಿತಿದೆ
ಭೂಮಿ ಒಡಲ ಬಗೆವ ಪರಿಕಂಡು…

ಮಿಣುಕು ಹುಳುವಾಗು
ಗುಂಗಿ ಹುಳುವಾದರೂ ಸರಿಯೇ
ಸದಾ ಗುಂಯ್‌ಗುಡುತ್ತಲೇ ಇರು
ಬೆಳಕ ತೋರಲು ಜಗಕೆ
ಪ್ರೀತಿಯ ನೆರಳ ಹರಡಿ ಬಿಡು






0 Comments