ಸತೀಶ ಕುಲಕರ್ಣಿ ಓದಿದ ‘ಇವಳ ಭಾರತ’

ಸತೀಶ ಕುಲಕರ್ಣಿ

‘ಇವಳ ಭಾರತ’ ರೂಪ ಹಾಸನ ಅವರರ ಎರಡು ದಶಕಕ್ಕೂ ಹೆಚ್ಚಿನ ವೈಚಾರಿಕ ಪಯಣದ ಲೇಖನಗಳ ಸಂಗ್ರಹ. ಮುಗ್ಧ ಮತ್ತು ನಿರ್ಲಕ್ಷಿತ ಹೆಣ್ಣನ್ನು ಕೇಂದ್ರವಾಗಿಟ್ಟುಕೊಂಡು ಕಾಲಕಾಲಕ್ಕೆ ಬರೆದಂಥವು. ಅವಳ ಭಾರತ ಅಥವ ನನ್ನ ಭಾರತ ಅನ್ನದೆ, ಲೇಖಕಿ ತನ್ನನ್ನು ಮಗ್ಗುಲಲ್ಲಿ ನಿಲ್ಲಿಸಿ ಇವಳ ಭಾರತವನ್ನು ಕಟ್ಟಿಕೊಟ್ಟಿದ್ದಾರೆ.

ಮುಖ್ಯವಾಗಿ ನಮಗೆಲ್ಲ ರೂಪಾ ಅವರು ಕವಯತ್ರಿಯಾಗಿಯೇ ಹೆಚ್ಚು ಪರಿಚಿತರು ಮತ್ತು ಇಷ್ಟ. ಇವಳ ಭಾರತ – ಇದು ಅವರ ಕ್ರಿಯಾರಂಗದ ಚಾಚು ಬರಹಗಳು. ಸೂಕ್ಷ್ಮ ಸಂವೇದನೆಯ ಕವಯತ್ರಿ ಇದರಲ್ಲಿನ ಅನೇಕ ತಿರುಳುಗಳನ್ನು ತಮ್ಮ ಕಾವ್ಯದುದ್ದಕ್ಕೂ ಹೇಳಿದ್ದಾರೆ. ಇದು ಗದ್ಯದ ವಿಸ್ತರಣೆ ಮಾತ್ರ. ಬರವಣಿಗೆ ಮತ್ತು ವೈಚಾರಿಕ ಹೋರಾಟವನ್ನು ಸಮಚಿತ್ತಾಗಿ ನಿಭಾಯಿಸುವುದು ಸುಲಭದ ಕೆಲಸವಲ್ಲ. ಲೇಖಕಿ ಇದನ್ನು ಸರಿಯಾಗಿ ನಿಭಾಯಿಸಿ ಒಂದೆತ್ತರಕ್ಕೆ ಬೆಳೆದು ನಿಂತಿದ್ದಾರೆ.

ಇವಳ ಭಾರತವನ್ನು ಆರು ಅಂಕಗಳಲ್ಲಿ ವಿಂಗಡಿಸಿಕೊಂಡಿದ್ದಾರೆ. ಅಸ್ಮಿತೆಯ ಸವಾಲುಗಳನ್ನೆದುರಿಸುತ್ತ, ಸಾಂದರ್ಭಿಕ ದನಿ, ನಾವೂ ಇದ್ದೇವೆ, ಜಾತಿ-ಮತಗಳ ಸಂಕೋಲೆ, ಸಮಸ್ಯೆಗಳ ಸುಳಿ, ಜೀವ ತಳಮಳ, ದಮನಿತ ಲೋಕ ಹಾಗೂ ಪೂರಕವಾದ ಒಂದು ಸಂದರ್ಶನ – ಹೀಗೆ ನಾನೂರಾ ಅರವತ್ನಾಲ್ಕು ಪುಟಗಳ ಪುಸ್ತಕವಿದು.

ಶ್ರೀಮತಿ ರೂಪಾ ಅವರು ಹೇಳುವಂತೆ ‘ಇಂದು ಮಹಿಳೆ ಪುರುಷನಿಗೆ ಸಮಾನಳಾಗಿದ್ದಾಳೆ, ಅವನಿಗಿಂತ ಯಾವುದರಲ್ಲಿ ಕಡಿಮೆ ಇಲ್ಲ – ಎಂದು ಅವೇ ನಾಲ್ಕೈದು ಸಾಧಿತ ಧೀರೋದ್ದಾತ ಮಹಿಳೆಯರ ಹೆಸರು ಉದ್ಗರಿಸಿ ಹೆಮ್ಮೆಪಟ್ಟುಕೊಳ್ಳುವುದು ಮುಂದುವರೆದಿದೆ. ಆದರೆ ಮೇಲ್ಪದರದ ಈ ಬಣ್ಣದ ಪರದೆಗಳನ್ನು ಪದರು ಪದರಾಗಿ ಬಿಚ್ಚುತ್ತಾ ಹೋದರೆ, ಕಣ್ಕಟ್ಟಿನೊಳಗಿರುವ ವಾಸ್ತವದು ಬೇರೆಯದೆ ಆಗಿ ಇವಳ ಭಾರತ ಕಾಣಲಾರಂಭಿಸುತ್ತದೆ’.

ಮುಂದುವರೆದು ‘ಹೆಣ್ಣು ಜೀವದ ಮೇಲಿನ ಕ್ರೌರ್ಯಗಳು ಅವಿರತ ಇಲ್ಲಿ ನಡೆಯುತ್ತಿವೆ. ಇವನ್ನೆಲ್ಲ ಕಾಣದವರು ನೆಮ್ಮದಿಯಾಗಿದ್ದಾರೆ. ಕಾಣಬಲ್ಲವರು ಪ್ರತಿಕ್ಷಣ ಉಸಿರುಗಟ್ಟಿ ಒದ್ದಾಡುತ್ತಿದ್ದಾರೆ. ಹೀಗೆ ನಮ್ಮೀ ದೇಶದಲ್ಲಿ ಹೆಣ್ಣು ಜೀವನವನ್ನು ಹಿಂಡುತ್ತಿರುವ ಹಿಂಸೆಯ ಬಗೆಗಳು ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾಗಿ ಬಿಟ್ಟವೆ. . . ಈ ಎಲ್ಲ ಅಗೋಚರ ಗಾಳಗಳು, ದಾಳಗಳು ತಂದೊಡ್ಡುವ ಸಂಕಟ, ಸೃಷ್ಟಿಸುತ್ತಿರುವ ದಾರುಣತೆಗೆ ಉತ್ತರ ಕಂಡುಕೊಳ್ಳಲು ನಮ್ಮ ಸಂವಿಧಾನ ಒಂದೇ ಭರವಸೆ’.

ತಮ್ಮ ಈವರೆಗಿನ ಬರಹ ಮತ್ತು ಹೋರಾಟಗಳಿಗೆ ‘ಇವಳ’ ಹಾಡು ಪಾಡಿನೊಂದಿಗೆ ನನ್ನ ಪಯಣ ಎಂಬ ಆರಂಭಿಕ ಮಾತುಗಳಲ್ಲಿ ಮೇಲಿನಂತೆ ಹೇಳಿಕೊಂಡಿದ್ದಾರೆ. ಇವೇ ಮಾತುಗಳಿಗೆ ಪೂರಕ ಎಂಬಂತೆ ಕೊನೆಯಲ್ಲಿ ಶ್ರೀಮತಿ ಶಿಲ್ಪ ಬೆಣ್ಣೆಗೆರೆ ಅವರ ಸಂದರ್ಶನದಲ್ಲಿ ಕೂಡ ‘ಸಕಲ ಜೀವಪರವಾದ ಸಂವಿಧಾನವೇ ನನ್ನ ಧರ್ಮ’ ಎಂದಿದ್ದಾರೆ.

ಅಸ್ಮಿತೆಯ ಸವಾಲುಗಳನ್ನೆದುರಿಸುತ್ತ. . . ಭಾಗದಲ್ಲಿ ಹದಿಮೂರು ಲೇಖನಗಳಿವೆ. ಅವಳೂ ಆತ್ಮಕಥೆಯೂ, ತಳಮಳವೂ ಲೇಖನ ಕನ್ನಡ ಮತ್ತು ಜಾಗತಿಕ ಮಟ್ಟದಲ್ಲಿ ಬಂದಿರುವ ಮಹಿಳಾ ಆತ್ಮಕಥನಗಳ ಸುತ್ತ ತಮ್ಮದೇ ಆದ ನಿಲುವುಗಳನ್ನು ಮಂಡಿಸುತ್ತ ‘ಹೆಣ್ಣಿನ ಬದುಕು ಛಿದ್ರಗೊಂಡಿರುವುದರ ವಿವಿಧ ನೆಲೆಗಳ ಅನಾವರಣದ ಸೌಮ್ಯ ಪ್ರಯತ್ನಗಳು. ಅಲ್ಲಲ್ಲಿ ಕಂಡರೂ, ಅದನ್ನು ಅನುಭವಿಸಿದಾಗಿನ ತೀವ್ರತೆ, ಒದ್ದಾಟ ಸಂಕಟಗಳು ಅದೇ ಪ್ರಮಾಣದಲ್ಲಿ ಅಭಿವ್ಯಕ್ತಿಗೊಂಡಿವೆಯೇ? ಇಲ್ಲವಾದರೆ ಏಕೆ ಎಂಬ ಪ್ರಶ್ನೆಯೂ ಕಾಡುತ್ತದೆ. ಇದನ್ನು ಹೇಳಲು ಒಂದು ಸಾಮಾಜಿಕ ಸ್ಥಿತಿ ನಿರ್ಮಾಣವಾಗಬೇಕೆಂಬುದು ಲೇಖಕಿಯ ಆಶಯ.

ಕಾಮನೆಗಳ ಪಳಗಿಸುವ ದಾರಿಗಳ ಹುಡುಕದಿದ್ದರೆ, ತಂತಿ ಮೇಲಿನ ನಡಿಗೆ ಎತ್ತಲೂ ಜಾರದೆ, ಸಾವಿತ್ರಿಬಾಯಿ ಫುಲೆ, ವಿಜಯಾ ದಬ್ಬೆ, ಗ್ರೇಟಾ – ಅಂತಹ ವ್ಯಕ್ತಿ ವಿಶೇಷಗಳು ಭೈರಪ್ಪನವರ ಕವಲು ಕಾದಂಬರಿ ಕುರಿತಾದ ಹೊಸ ಗ್ರಹಿಕೆ – ಇವೆಲ್ಲ ಈ ಭಾಗದಲ್ಲಿವೆ. ಭೈರಪ್ಪನವರ ಒಟ್ಟು ಧೋರಣೆಗಳನ್ನು ಕ್ರೊಢೀಕರಿಸುತ್ತ ‘ಅದರ ಹಿಂದೆ ಮಹಿಳಾ ಅರಿವಿನ, ಸ್ವಾತಂತ್ರ್ಯದ ವಿಸ್ತರಣೆಯ ವಿರೋಧಿಯಾದ ಮನಸ್ಸೊಂದಿದೆ’ ಎಂದಿದ್ದಾರೆ. ವಿಜಯಾ ದಬ್ಬೆ ಲೇಖನ ಮತ್ತ ಮತ್ತೆ ಓದುವಂತಹದು. ವಿದ್ವತ್ತು, ವೈಚಾರಿಕತೆ, ಸ್ಥಾನಮಾನ ಏನೆಲ್ಲ ಇದ್ದರೂ ಅವರ ಕೊನೆಯ ದಿನಗಳ ಬಗ್ಗೆ ಓದಿದಾಗ ಮನಸ್ಸು ಭಾರವಾಗುತ್ತದೆ.

ಸಾಂದರ್ಭಿಕ ದನಿ – ಈ ಭಾಗದಲ್ಲಿ ಹೆಸರೇ ಸೂಚಿಸುವಂತೆ ಕಾಲಕಾಲಕ್ಕೆ ತಾವು ಕೊಟ್ಟ ಪ್ರತಿಕ್ರಿಯೆಗಳು ಇಲ್ಲಿ ದಾಖಲಾಗಿವೆ. ಮೀಟೂ ಅಂತಹ ಬಹುಚರ್ಚಿತ ಅಭಿಯಾನ ಕುರಿತು ‘ಎಷ್ಟೋ ವರ್ಷಗಳಿಂದ ಎದೆಯಲ್ಲಿ ತುಂಬಿಕೊಂಡ ಬೆಂಕಿಯನ್ನು ಕೆಲವರಾದರೂ ಹೊರಚೆಲ್ಲಿದ್ದಾರೆ’ ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ಮುಖ್ಯವಾಗಿ ವರ್ತಮಾನಕ್ಕೆ ಲೇಖಕಿ ಮುಖಾಮುಖಿಯಾಗುವುದನ್ನು ನೋಡಬಹುದು. ಮುರುಘಾಶರಣರ ಪ್ರಕರಣ ಕುರಿತು ಕಾನೂನಾತ್ಮಕವಾಗಿ ಸರಕಾರಕ್ಕೆ ಬರೆದ ಲೇಖನ ಒಳಗೊಂಡಂತೆ ಹದಿನಾರು ಲೇಖನಗಳು ಇಲ್ಲಿವೆ.

‘ನಾವೂ ಇದ್ದೇವೆ’ ಮತ್ತೊಂದು ಭಾಗದಲ್ಲಿ ಏಳು ಲೇಖನಗಳು. ಮಹಿಳೆ ಮತ್ತು ಅವಳ ವ್ಯಕ್ತಿಗತ ಸ್ಥಾನಮಾನ, ಸಾಂಪ್ರದಾಯಿಕ ಜಡತ್ವದಲ್ಲಿ ನೋಡುವ ಸಿದ್ಧವಾಡಿಕೆಗಳನ್ನು ಮುರಿದು ಕಟ್ಟಿ, ಹೊಸ ಒಳನೋಟ ಕೊಡುವ ಬರೆಹಗಳಿವು. ಗೃಹಕೃತ್ಯವೆಂಬ ಅನುತ್ಪಾದಕ ಕೆಲಸ ಎಂಬ ಮಾದರಿ ಲೇಖನ ನೋಡಬಹುದು. ಮಹಿಳೆಯೊಬ್ಬಳು ಸಂಬಳ ಪಡೆಯುವಾಗ ಅದು ದುಡಿಮೆ, ಅದೇ ಅವಳು ಹೆಂಡತಿಯಾದಾಗ ಸೇವೆ ಎಂಬ ರೂಪಾಂತರ ಆಗುವ ಮಾಟವನ್ನು ಬಿಚ್ಚಿಟ್ಟಿದ್ದಾರೆ. ‘ಮಹಿಳೆ ತನ್ನ ದುಡಿಮೆಗೆ ಎಂದು ಲೆಕ್ಕ ಕೇಳುವಳೋ, ಅಂದು ಮನುಕುಲದ ಇತಿಹಾಸದ ಅತಿದೊಡ್ಡ ಮತ್ತು ಹಳೆಯ ಕಳವು ಪತ್ತೆಯಾಗುವುದು’ ಎಂಬ ಲಕ್ಷಂಬರ್ ಮಾತು ಕಣ್ಣು ತೆರೆಯಿಸುತ್ತದೆ.

ಬಾಲ್ಯವಿವಾಹ – ಅಪ್ರಾಪ್ತರ ಮೂಲಭೂತ ಹಕ್ಕುಗಳನ್ನು ಕಸಿಯುತ್ತದೆ. ಶಿಕ್ಷಣ ಕೌಶಲ್ಯದ ವಂಚನೆಯಾಗುವ ಮೊನಸಾದ ವಿಚಾರಗಳು ಇಡೀ ಭಾಗದಲ್ಲಿ ಪ್ರಾಪ್ತವಾಗುತ್ತವೆ. ‘ಸ್ವರ್ಗ ಬೇಕೆಂದೇನೋ ನಾವು ಕೇಳುತ್ತಿಲ್ಲ, ನರಕ ಬೇಡವೆಂದಷ್ಟೆ’ ಎಂಬ ತಮಿಳುನಾಡಿನ ಸ್ಮೈಲ್‌ ವಿದ್ಯಾ ಅವರ ಮಾತು ಎದೆ ನಾಟುತ್ತದೆ. ಜೀವ ಚುರ್ ಎನ್ನುವ ಅಂಧ ಬಾಲೆ, ಬಾಲ್ಯವಿವಾಹ, ಇವರನ್ನೂ ನಮ್ಮಂತೆ ಮನುಷ್ಯರೆಂದು ಬಗೆದರೆ, ಇವೆಲ್ಲ ಮನುಷ್ಯತ್ವದ ಕಡೆಗೆ ಬೆರಳು ತೋರಿಸುವಂತ ಲೇಖನಗಳು. ಇಡೀ ಪುಸ್ತಕದಲ್ಲಿ ವ್ಯವಸ್ಥೆಯನ್ನು ಎದುರಿಸುವ ದಿಟ್ಟ ಬಾಲೆಯರು ಎಂಬ ಧನಾತ್ಮಕ ಲೇಖನ ಕೂಡ ಇಲ್ಲಿ ಸೇರಿದೆ.

ಜಾತಿ ಮತಗಳ ಸಂಕೋಲೆ – ಮೂರು ಕಿರುಲೇಖನಗಳ ಭಾಗದಲ್ಲಿ ರಾಜಕೀಯ ವೈಪರೀತ್ಯ ಬೆಳವಣಿಗೆಗಳಿಂದಾಗಿ ಅಲ್ಪಸಂಖ್ಯಾತ, ಸಣ್ಣಸಣ್ಣ ಜಾತಿ ಸಮುದಾಯಗಳು ಅದ್ಹೇಗೆ ಅಭದ್ರತೆ ಅನುಭವಿಸುತ್ತಿವೆ ಎಂದು ಚರ್ಚಿಸಿ, ಹೆಣ್ಣು ಕೇವಲ ಸಂಸ್ಕೃತಿ ರಕ್ಷಕಳು, ವಾಹಕಳು ಎನ್ನುವ ಭಾವನೆಗಳನ್ನು ತಿರಸ್ಕರಿಸುತ್ತ ನಿರ್ಮಾತೃ ಆಗಬೇಕೆಂಬ ಆಶಯಗಳದ್ದು.

ಸಮಸ್ಯೆಗಳ ಸುಳಿಯಲ್ಲಿ – ಐದನೇ ಭಾಗದಲ್ಲಿ ನಿತ್ಯ ನೀರಿಗಾಗಿ ಪರದಾಡುವ, ಮದ್ಯಪಾನ ವಿರೋಧಿಸುವ ಹೋರಾಟ ಇವೆಲ್ಲದರ ಜೊತೆಗೆ ಕೋವಿಡ್ ಸಂಕಷ್ಟದಲ್ಲಿ ಹೆಚ್ಚು ಸಂಬಳ ಮತ್ತು ಕೆಲಸ ಕಳೆದುಕೊಂಡ ಅಸಂಘಟಿತ ಮಹಿಳೆಯರ, ಆಶಾ ಕಾರ್ಯಕರ್ತೆಯರಿಗೆ ಸಿಗದ ಗೌರವ ಇಂತಹ ಕರ್ನಾಟಕದ ಚಿತ್ರಗಳಿವೆ. ರೂಪ ಹಾಸನ ತಮ್ಮ ಕೈಗೆಟುಕುವ ಕೂಗಳತೆಯಲ್ಲಿ ಕಂಡ ಸಮಸ್ಯೆಗಳನ್ನು ತಮ್ಮಂಗಳಕ್ಕೆ ತಂದು ಪ್ರತಿಕ್ರಿಯಿಸಿದ ಏಳು ಲೇಖನಗಳಿವು.

ಜೀವ ತಳಮಳ – ಎಂಬ ಆರನೇ ಭಾಗದಲ್ಲಿ ಅತ್ಯಂತ ಗಂಭೀರ ಸಮಸ್ಯೆಗಳಾದ ಗರ್ಭಕೋಶ ಹನನ, ಎಲ್ಲೆ ಮೀರಿದ ವಿಕೃತಿ, ಸುತ್ತಲಿನ ಅತ್ಯಾಚಾರ ಅನೇಕ ವಿಷಯಗಳ ಕುರಿತು ಖಚಿತ ಅಂಕಿ ಸಂಖ್ಯೆಗಳ ಮೂಲಕ ಕೊಟ್ಟು ‘ಆಧುನಿಕ ತಂತ್ರಜ್ಞಾನ ಕಣ್ಣಿಗೆ ಕಾಣದ ರೀತಿಯಲ್ಲಿ ಹೆಣ್ಣನ್ನು ನಾಶ ಮಾಡುತ್ತಿದೆ’ ಎಂದು ಹೇಳುತ್ತಾರೆ.

ದಮನಿತ ಲೋಕ – ಕೊನೆಯ ಭಾಗದಲ್ಲಿ ಲೈಂಗಿಕ ಜೀತಗಾರಿಕೆ, ನಾಪತ್ತೆ ಎಂಬ ಜಾಲ ಹಾಗೂ ಸರ್ಕಾರದೊಂದಿಗೆ ಜ್ವಲಂತ ಸಮಸ್ಯೆಗಳ ಬಗ್ಗೆ ಲೇಖಕಿ ಮಾಡಿದ ಪತ್ರ ವ್ಯವಹಾರಗಳಿವೆ. ಸ್ವಯಂನಿಯಂತ್ರಣದ ನೀತಿಪಾಠಗಳನ್ನು ಪಾಲಕರು ಮತ್ತು ಸಮಾಜ ಗಂಡು ಮಕ್ಕಳಿಗೆ ಬೋಧಿಸಬೇಕೆಂಬ ಅಳಲು ಇಲ್ಲಿಯದು.

ಈಗಾಗಲೆ ಹೇಳಿದಂತೆ ೪೬೪ ಪುಟಗಳ ಇವಳ ಭಾರತದ ಬಗ್ಗೆ ಸಾಂದ್ರವಾಗಿ ಹೇಳುವುದು ಕಷ್ಟ. ಒಂದು ಮಾತಂತೂ ಸತ್ಯ, ನಿರಂತರವಾಗಿ ಈ ರೀತಿಯ ಹೆಣ್‌ಕಾಳಜಿಯನ್ನು ಓದು, ಚಿಂತನೆ, ಮತ್ತು ಕ್ರಿಯೆಯ ಮೂಲಕ ಕಾಪಾಡಿಕೊಂಡ ರೂಪ ಹಾಸನ, ಇವಳ ಲೋಕವನ್ನು ಪರಿಚಯಿಸುವುದರ ಜೊತೆಗೆ ಗಂಡಸಿನ ಕಣ್ಣುಗಳ ಸ್ವಲ್ಪಮಟ್ಟಿಗಾದರು ತೆರೆಸಿರಬಹುದೆಂಬ ನನ್ನ ಓದಿನ ಅನುಭವ.

ರೂಢಿಗತ ಕುರುಡು ನಂಬಿಕೆಗಳು ತಲೆ ತುಂಬಿ ಹೋಗಿರುವ ಕಾಲದಲ್ಲಿ, ಅಂತಹ ಕಾಡು ತಲೆಗಳ ಖಾಲಿ ಮಾಡುವ ಇವಳ ಭಾರತ ಪ್ರಕಟಿಸಿದ ಪಲ್ಲವ ಪ್ರಕಾಶನವನ್ನು ನನ್ನಂತಹ ಓದುಗ ಕೃತಜ್ಞತೆ ಹೇಳಲೇ ಬೇಕು. ಕೃತಿ ಕೇವಲ ಕಳವಳದ ಹಾಡಲ್ಲ ಸಮಾಜ ಪರವಾದ ಚಿಂತನೆ ವಿಸ್ತರಿಸುವ ರೀತಿಯದು. ನಮ್ಮಲ್ಲಿರುವ ಛಿದ್ರ ನೆಲೆಗಳ ಹುಡುಕಾಟ ಇದನ್ನು ಓದಿದಾಗ ಕಾಡದೇ ಇರಲಾರವು. ಹೊಸ ಲೇಖಕ- ಲೇಖಕಿಯರು ಓದಲೇ ಬೇಕಾದ ಪುಸ್ತಕ ಇವಳ ಭಾರತ.

‘ರೂಪ ಹಾಸನ ಕೇವಲ ಬರೆದು ಕೈತೊಳೆದುಕೊಳ್ಳುವವರಲ್ಲ, ಮಕ್ಕಳು, ಮಹಿಳೆಯರಿಗಾಗಿ ಸ್ವಹಿತ ಲೆಕ್ಕಿಸದೆ ದುಡಿದವರು. ಈ ಬರಹಗಳ ಅವರು ಅನುಭವ ಕಥನ’ ಎಂಬ ಒಳಪುಟದಲ್ಲಿಯ ಪ್ರೊ. ಜಿ.ಎಸ್. ಜಯದೇವ ಅವರ ಮಾತು ಅಕ್ಷರಶಃ ಸತ್ಯ. ಹಿರಿಯ ಕವಯತ್ರಿ ಪ್ರೊ. ಸ ಉಷಾ ‘ರೂಪಾ ಅವರದು ಸಮತೋಲನದ ಘನತೆಯ ಕನಸು’ ಎಂಬ ಮಾತು ಕೃತಿಗೆ ತೂಕ ತಂದಿವೆ.

‍ಲೇಖಕರು avadhi

May 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ನೂತನ ದೋಶೆಟ್ಟಿ

    ರೂಪಾ
    ಸಮಗ್ರವಾದ ವಿಮರ್ಶೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: