ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಹೊಸ ಕವಿತೆ – ಅಪ್ಪ…

ಜೋಗಿ

ಅಂತರ್ಮುಖಿ ಅಪ್ಪ ಹಠಾತ್ತನೆ ಸತ್ತಾಗ
ಎಷ್ಟೊಂದು ಗುಟ್ಟುಗಳು ಉಳಿದುಹೋದವು
ಅವನ ಮೊದಲನೆಯ ಕ್ರಶ್ಯು, ಈಜು ಕಲಿತ ಬಾವಿ
ಯಾರಿಗೋ ಕೊಟ್ಟ ಸಾಲ, ಎಸ್ಸೆಸ್ಸೆಲ್ಸಿ ಫೇಲಾಗಲು ಕಾರಣ
ಉಪವಾಸ ಇದ್ದ ರಾತ್ರಿ ಕೆನ್ನೆ ತೋಯಿಸಿದ ನಿರಾಕರಣ
ಅಂಗಾಲಿಗೆ ಚುಚ್ಚಿ ಒಳಗೇ ಉಳಿದಿದ್ದ ಮುಳ್ಳು
ಬೀಡಿ ಬಿಡುತ್ತೇನೆಂದು ಮಾಡಿದ ಪ್ರಮಾಣ
ಉಡುದಾರ ಅಡವಿಟ್ಟು ಮರೆತ ಅಂಗಡಿ
ಬಚ್ಚಿಟ್ಟ ಅವಳ ಬ್ಲಾಕ್ ಅಂಡ್ ವೈಟು ಫೋಟೋ.
ಅಮ್ಮನ ಮೇಲಿದ್ದ ಅಕ್ಕರೆ ಒಂಟಿಯಾಗಿ ಕಳೆದ ದುಗುಡ
ಕೆಲಸ ಕೊಟ್ಟ ಧಣಿ ಬೈದ ಕೆಟ್ಟ ಬೈಗುಳದ ಗಾಯ
ಅರ್ಧ ಕಲಿತ ನಾಟಕದ ಪದ್ಯ ವಿಜ್ಞಾನ ಪುಸ್ತಕದ ನಡುವೆ
ಇಟ್ಟು ಮರೆತ ಅರಳೀ ಮರದ ಎಲೆ, ಹುಟ್ಟಬಾರದಿತ್ತು ಅಂತ
ಬಿಟ್ಟ ನಿಟ್ಟುಸಿರು.

ಅಪ್ಪನಿಗಷ್ಟೇ ಗೊತ್ತಿದ್ದ ಒಳದಾರಿ
ಅಪ್ಪ ಗುಣುಗುಣಿಸುತ್ತಿದ್ದ
ಅರೆಬರೆ ಶ್ಲೋಕದ ಅರ್ಥ
ಅಪ್ಪನ ಮೈಯ ವಾಸನೆ
ಅಪ್ಪ ಕೊನೆಯ ಸಲ ಗಡ್ಡ ಹೆರೆದು
ಜೋಪಾನವಾಗಿ ಎತ್ತಿಟ್ಟ ಬ್ಲೇಡು
ಅಂತರ್ಮುಖಿ ಅಪ್ಪ ಸತ್ತಾಗ ಮಗ ಅರ್ಧ ಸಾಯುತ್ತಾನೆ
ಅರ್ಧ ಸತ್ತ ಮಗನ ಬೆನ್ನು ತಡವಿ ಕಣ್ಣಲ್ಲಿ ಕಣ್ಣಿಟ್ಟು ನೋಡಿ
ತನ್ನ ಆಯಸ್ಸನ್ನು ದಾಟಿಸಲು ಆಗ
ಅಪ್ಪ ಇರುವುದಿಲ್ಲ.
ಅಂತರ್ಮುಖಿ ಅಪ್ಪ ಸತ್ತಾಗ
ಅಪ್ಪ ಅಂತರ್ಮುಖಿ ಅನ್ನುವುದು
ಅರಿವಾಗುತ್ತದೆ.
ಅದನ್ನು ಯಾರಿಗೂ ಯಾವತ್ತೂ
ಹೇಳಿಕೊಳ್ಳಲಿಕ್ಕೆ ಆಗುವುದಿಲ್ಲ.

‍ಲೇಖಕರು Admin

10 March, 2022

1 Comment

  1. T S SHRAVANA KUMARI

    ತುಂಬಾ ತುಂಬಾ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading