ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಮ್ಮನ ಹೊಸ ಪುಸ್ತಕ…

ರಾಜಕುಮಾರ ಮಡಿವಾಳರ

ಈ ಹೂ ನನಗೆ ಒಂಥರ ಇಷ್ಟ, ಇದರ ಇಷ್ಟು ಚೆಂದದ ಹೆಸರು ಕೂಡ ನನಗೆ ಇದುವರೆಗೆ ಗೊತ್ತಿರಲಿಲ್ಲ, ನಾವು ಹೊನ್ನರಿಕೆ-ಹೊನ್ನಂಬ್ರಿ-ಹೊನ್ನಾಂಬರ ಅನ್ನುತ್ತೇವೆ. ನಮ್ಮೂರ ಹೊಳೆಸಾಲಿನಗುಂಟ (ಹೊಳೆ ಬದುವಿಗೆ) ನಡುಮಟ್ಟದ ಎತ್ತರಕ್ಕೆ ಬೆಳೆದ ಗಿಡದ ತುಂಬ ನೋಡಿದ್ದೇನೆ, ಅಂತಹ ಪರಿಮಳವಿಲ್ಲದ, ತೀರ ಹತ್ತಿರಕ್ಕೆ ಹೋಗಿ ನೋಡಿದರೆ ಅದ್ಭುತ ಅನ್ನುವಂತಹ ಚೆಲುವಲ್ಲದ! ನನ್ನಂತೆ ಪರಮ ಅಶಿಸ್ತಿನಲ್ಲಿ ಸುತ್ತ ಚಾಚಿಕೊಂಡು ಬೆಳೆವ ಪುಟ್ಟ ಗಿಡ! ಇದು ಟೊಂಗೆ ತುದಿಗೆ ಚೆಂಡಿನಂತೆ ಗೊಂಚಲು ಅರಳುವ ಹೂ, ನಮ್ಮಲ್ಲಿ ಸುಟ್ಟಗಾಯಕ್ಕೆ ಇದರ ಪಕಳೆ, ಮೊಗ್ಗು ಹುರಿದು ಆ ಪುಡಿ ಲೇಪಿಸಿದಾಗ ಸುಟ್ಟ ಗಾಯದ ಕಲೆ ಕೂಡ ಕಾಣದಂತೆ ಮಾಯವಾದ ಉದಾಹರಣೆ ಇದೆ.

ನಂತರ….
ರಾಷ್ಟ್ರೀಯ ಹೆದ್ದಾರಿ ನಾಲ್ಕು, ಚತುಷ್ಪಥ ಆದಾಗ, ರಸ್ತೆ ವಿಭಜಕದಗುಂಟ ಹೊನ್ನರಿಕೆ ಸಾಲು ಸಾಲು, ಸಾಲು ಮುಗಿಯುವತನಕ ನಾನು ಅವುಗಳ ತದೇಕ ನೋಡುತ್ತಿದ್ದೆ. ಈಗ ಪ್ರತಿ ಶನಿವಾರ ನಾನು ಬೆಳಗಾನ ಹೋಗುವ ನುಗ್ಗಿಕೇರಿ ಬದುವಲ್ಲಿ ಹೊನ್ನಂಬರವನ್ನ ಮಾತಾಡಿಸಿ ಬರುವುದಿದೆ.

ಅಮ್ಮ…..
ಕಮಲ ಅವರ ಗದ್ಯವಾಗಲಿ, ಪದ್ಯವಾಗಲಿ ಈ ಹೂವ್ವಿನ ಹಾಗೆ ಸುಟ್ಟಗಾಯಕ್ಕೆ ಔಷಧಿಯಂತವು, ಗೊತ್ತಿದ್ದೋ? ಗೊತ್ತಿಲ್ಲದೆಯೋ? ಈ ಹೆಸರಿಟ್ಟಿದ್ದಕ್ಕೆ ಮೊದಲು ಅಭಿನಂದನೆ, ಇದು ಅಪ್ಪಟ ಗ್ರಾಮೀಣ ಪ್ರತಿಭೆ, ಪಕ್ಕಾ ಸರಕಾರಿ ಕನ್ನಡ ಶಾಲೆಯ ಮಗುವಿನಂತ ಹೂ, ಹೀಗೆ ಪುಸ್ತಕದ ಹೆಸರಾಗಿ, ನನ್ನಂತವನ ಪ್ರತಿನಿಧಿಯಾಗಿ ನಿಂತ ಖುಷಿ ನನ್ನದು.

ಆ ಖುಷಿಯಲ್ಲಿ…
ಬ್ಯಾಸಿಗಿ ಬಿಸಿಗಾಳಿ ಬರಸುಯ್ದು
ನಡು ಮನಿಯಾಗ ಹಗಲೊತ್ತ ತೂಕಡಕಿ,
ತಲಿ ತೂಗಿ ಪಡಸಾಲಿ ಕಂಬಕ್ಕ
ಹಣಿ ಹಾದು ನಗಿಪಾಟಲಗಿ!
ಕಡಗೋಲ ನಡ ತಿರು ತಿರುವಿದಂಗ
ಚಿಮ್ಮುವ ಬೆಣ್ಣಿ ನೆಕ್ಕುವ ಆಸಬುರಕ ತುಟಿ ಮಡಕಿ
ಮಧ್ಯಾಹ್ನ ಕನಸಿನ್ಯಾಗ ಭಾಳ ಮುದ್ದಾಡಿದಂಗ
ಮುದ್ಯಾದ ಮೈ, ನೆರಿಗಿಗೆಟ್ಟ ನಾಚಿಕಿ ತಿಳಿ ಮಜ್ಜಿಗಿ..
ನೆಪ್ಪಾದೋ ನೆಪ್ಪು ಹಸಿರಾದೋ
ತೆಕ್ಕ್ಯಾಗ ಸಿಗುವ ತೆಳ್ಳನ ಹುಡುಗ
ಹೊಳಿಸಾಲ ಹೂ ಹೊನ್ನರಕಿ
ಬಂಗಾರ ನೆರಳು, ಬಲು ಎಚ್ಚರದಾಗು ನಿನ ಕನವರಕಿ!
ಅಭಿನಂದನೆ ಮಾ ..

‍ಲೇಖಕರು Admin

10 March, 2022

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. T S SHRAVANA KUMARI

    ಚಂದದ ಪುಸ್ತಕ ಪರಿಚಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading