ಜೋಗಿ ಅಂಕಣ – ‘ಊರುಕೇರಿ’ಯ ಸಿದ್ಧಸಾಧಕನ ಕಣ್ಮರೆ

‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.

ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ

ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.

ಕೆಲವು ದಿನಗಳ ಹಿಂದೆ ಕೊರೋನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆದು ಮನೆಗೆ ಬಂದ ದಿನ ಸಿದ್ಧಲಿಂಗಯ್ಯ ಅವರ ಮನೆ ಮುಂದೆ ಅವರ ಅಭಿಮಾನಿಗಳೆಲ್ಲ ಸೇರಿದ್ದರಂತೆ. ತಮ್ಮ ಮೆಚ್ಚಿನ ಕವಿ ಆರೋಗ್ಯವಾಗಿ ಹಿಂದಿರುಗಿದ ಸಂಭ್ರಮಕ್ಕೆ ಅವರೆಲ್ಲ ದೊಡ್ಡ ದನಿಯಲ್ಲಿ ಸಿದ್ಧಲಿಂಗಯ್ಯ ಅಮರ್ ರಹೇ, ಸಿದ್ಧಲಿಂಗಯ್ಯ ಅಮರ್ ರಹೇ ಎಂದು ಘೋಷಣೆ ಕೂಗುತ್ತಿದ್ದರಂತೆ. ಅದರಿಂದ ಗಾಬರಿಯಾದ ಸಿದ್ಧಲಿಂಗಯ್ಯ, ಹೊರಗೆ ಬಂದು ಅಲ್ರಯ್ಯಾ, ಅಮರ್ ರಹೇ ಅನ್ನೋದು ಯಾರಾದರೂ ತೀರಿಕೊಂಡಾಗ. ಬದುಕಿದ್ದವರಿಗೆ ಹಾಗೆ ಹೇಳಬಾರದು ಅಂತ ಬುದ್ಧಿವಾದ ಹೇಳಲು ಯತ್ನಿಸಿದರಂತೆ. ಆದರೆ ಅಭಿಮಾನಿಗಳು ಅವರ ಮಾತನ್ನೇ ಕೇಳದೇ, ಸಿದ್ಧಲಿಂಗಯ್ಯ ಅಮರ್ ರಹೇ ಅಂತ ಘೋಷಣೆ ಮುಂದುವರಿಸಿದರಂತೆ.

ಇದು ಸಿದ್ಧಲಿಂಗಯ್ಯ ಅವರ ತಮಾಷೆಗೆ ಒಂದು ಉದಾಹರಣೆ. ಅವರು ಎಲ್ಲವನ್ನೂ ಇಷ್ಟೇ ಹಗುರವಾಗಿ ಸ್ವೀಕರಿಸಿದ ನಿಶ್ಚಿಂತ ಸಂತ. ಓದುತ್ತಿದ್ದ ದಿನಗಳಿಂದ ಹಿಡಿದು ವಿಧಾನ ಪರಿಷತ್ತಿನಲ್ಲಿ ಕುಳಿತ ಕ್ಷಣಗಳ ತನಕ ಪ್ರತಿಯೊಂದು ಸನ್ನಿವೇಶವನ್ನು ಕೂಡ ತನ್ನ ನಿರುಮ್ಮಳ ಮನಸ್ಸಿನಿಂದಲೇ ಎದುರಿಸಿದವರು. ಸಿದ್ಧಲಿಂಗಯ್ಯ ಕೂಗಾಡಲಿಲ್ಲ, ಅರಚಾಡಲಿಲ್ಲ, ಅವರ ಆರಂಭದ ಕವಿತೆಗಳಲ್ಲಿ ಕಂಡ ಆಕ್ರೋಶ ಅವರ ಮಾತುಗಳಲ್ಲಿ ಇರಲಿಲ್ಲ.

ಸಿಟ್ಟು ಕವಿತೆಯೊಳಗೆ ಇರಬೇಕೇ ಹೊರತು, ಮಾತಿನಲ್ಲಿ ಅಲ್ಲ, ನಾವು ಜಗಳ ಆಡುತ್ತಿರುವುದು ಕೂಡ ಮನುಷ್ಯರ ಹತ್ತಿರ ಎಂದು ನಂಬಿದ್ದವರು ಅವರು. ಹೀಗಾಗಿಯೇ ಸಿದ್ಧಲಿಂಗಯ್ಯ ಜಗಳ ಕಾದವರ ಜೊತೆಗೂ ಸ್ನೇಹ ಕಳೆದುಕೊಳ್ಳಲಿಲ್ಲ. ಬಡವನ ನಗುವಿನ ಶಕ್ತಿಯನ್ನು ಬಲ್ಲವರ ಹಾಗೆ ನಗುತ್ತಲೇ ಇದ್ದರು. ಅತ್ಯಂತ ಕಟುವಾದ ಅವಮಾನವನ್ನು ಕೂಡ ನಕ್ಕು ಹದಗೆಡಿಸಬಲ್ಲ ಅಪೂರ್ವ ಶಕ್ತಿ ಅವರಲ್ಲಿತ್ತು.

ಮೇಷ್ಟರಾಗಿದ್ದ ಸಿದ್ಧಲಿಂಗಯ್ಯ ಅವರಿಗೆ ಅಸಂಖ್ಯಾತ ಶಿಷ್ಯವರ್ಗವಿದೆ. ಅಪಾರ ಮಿತ್ರರಿದ್ದಾರೆ. ಅವರ ಗೆಳೆಯರ ಪಟ್ಟಿಯಲ್ಲಿ ಹಿರಿಯ ಅಧಿಕಾರಿಗಳಿದ್ದಾರೆ, ರಾಜಕಾರಣಿಗಳಿದ್ದಾರೆ. ಹಾಗೆಯೇ ಏನೂ ಅಲ್ಲದ ತರುಣರೂ ಇದ್ದಾರೆ. ಯಾರನ್ನು ಕೂಡ ಅವರು ದೂರ ಇಟ್ಟವರಲ್ಲ. ಯಾರಿಂದರೂ ದೂರ ಉಳಿದವರೂ ಅಲ್ಲ. ತಮ್ಮ ಮನೆಯ ವಿಶಾಲವಾದ ಗ್ರಂಥಾಲಯದಲ್ಲಿ ಯಾವುದಾದರೂ ಪುಸ್ತಕದ ನಡುವೆ ಕಳೆದುಹೋಗಲು ಇಚ್ಚಿಸುತ್ತಿದ್ದ ಸಿದ್ಧಲಿಂಗಯ್ಯ, ಓದುವಷ್ಟೂ ಹೊತ್ತು ಯಾರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ.

ತಮ್ಮ ಮೊಬೈಲು -ನನನ್ನು ದೂರ ಇಟ್ಟು, ಅದು ಒಂದು ತಪಸ್ಸೆಂಬಂತೆ ಓದಿನಲ್ಲಿ ತಲ್ಲೀನರಾಗುತ್ತಿದ್ದರು. ಹೊಸ ಬರಹಗಾರರ ಪುಸ್ತಕಗಳನ್ನು ಓದುತ್ತಿದ್ದರು. ಓದಿದ ತಕ್ಷಣ ಫೋನ್ ಮಾಡಿ ಲೇಖಕರಿಗೆ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದರು. ಇದ್ದಕ್ಕಿದ್ದಂತೆ ತಮ್ಮ ಕಾರು ಹತ್ತಿಕೊಂಡು ಗಾಂಧೀಬಜಾರಿಗೆ ಬಂದು ಅಂಕಿತ ಪುಸ್ತಕದಿಂದ ಒಂದು ರಾಶಿ ಪುಸ್ತಕ ಒಯ್ದು ಮತ್ತೆ ಓದಲು ಕೂರುತ್ತಿದ್ದರು.

ಸಿದ್ಧಲಿಂಗಯ್ಯ ಕಾವ್ಯ ಜಗತ್ತಿಗೆ ಚಂಡಮಾರುತದಂತೆ ಪ್ರವೇಶಿಸಿದವರು. ಅವರ ಮೊದಲ ಸಂಕಲನ ಹೊಲೆ ಮಾದಿಗರ ಹಾಡು ಕಾವ್ಯಲೋಕದಲ್ಲಿ ಬಿರುಗಾಳಿ ಎಬ್ಬಿಸಿತು. ಎಲ್ಲಿಗೆ ಬಂತು, ಯಾರಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ ಎಂದು ಗಟ್ಟಿದನಿಯಲ್ಲಿ ಕೇಳಿದ ಸಿದ್ಧಲಿಂಗಯ್ಯನವರ ಮೊದಲ ಸಂಕಲನ ದಾವಣಗೆರೆಯಲ್ಲಿ ಬಿಡುಗಡೆಯಾಗಿ ಒಂದೇ ವಾರದಲ್ಲಿ ಸಾವಿರ ಪ್ರತಿಗಳು ಮಾರಾಟವಾದವು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದ ಕವನ ಸಂಕಲನ ಅದು.

ದಲಿತ ಸಂಘರ್ಷ ಸಮಿತಿ ಆರಂಭಿಸಿ ಇಡೀ ನಾಡು ಸುತ್ತಿದ್ದು, ಹಲವರ ವಿರೋಧದ ನಡುವೆ ರಹಸ್ಯವಾಗಿ ಸಭೆ ಸೇರಿ ಮಾತಾಡಿದ್ದು, ಕೊಳೆಗೇರಿಗಳಲ್ಲಿ ಮಕ್ಕಳಿಗಾಗಿ ತರಗತಿ ಆರಂಭಿಸಿದ್ದು, ಕಮ್ಯೂನಿಸ್ಟ್ ಪಕ್ಷದ ಶಿಬಿರಕ್ಕೆ ಹಾಜರಾದದ್ದು, ವಿಚಾರವಾದಿ ಪರಿಷತ್ತು ಆರಂಭಿಸಿದ್ದು.. ಹೀಗೆ ಸಿದ್ಧಲಿಂಗಯ್ಯ ಹತ್ತು ಹಲವು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಲೇ ಬಂದವರು. ಅವರ ಹೋರಾಟದ ಮನೋಭಾವ ಕಾವ್ಯದ ರೂಪ ತಳೆದದ್ದೇ ತಡ, ದಲಿತ ಸಾಹಿತ್ಯಕ್ಕೆ ಹೊಸ ಆಯಾಮ ಸಿಕ್ಕಿತೆಂದೇ ಹೇಳಬೇಕು.

ಸಿದ್ಧಲಿಂಗಯ್ಯ ಖಡ್ಗ ಝಳಪಿಸುವಂತೆ ಬರೆದ ಸಾಲುಗಳು ಇವು- ಹಸಿವಿನಿಂದ ಸತ್ತೋರು, ಸೈಜುಗಲ್ಲು ಹೊತ್ತೋರು, ವದೆಸಿಕೊಂಡು ಒರಗಿದೋರು ನನ್ನ ಜನಗಳು. ಪರಮಾತ್ಮನ ಹೆಸರು ಹೇಳಿ ಪರಮಾನ್ನ ಉಂಡಜನಕೆ, ಬೂಟುಮೆಟ್ಟು ಹೊಲೆದೋರು ನನ್ನ ಜನಗಳು.

ದಲಿತರು ಬಂದರು ದಾರಿಬಿಡಿ, ದಲಿತರ ಕೈಗೆ ರಾಜ್ಯ ಕೊಡಿ ಎಂದು ಬರೆದ ಸಿದ್ಧಲಿಂಗಯ್ಯ ಗ್ರಾಮದೇವತೆಗಳ ಅಧ್ಯಯನ ಮಾಡಿ ಬರೆದ ಪುಸ್ತಕ, ಆತ್ಮಚರಿತ್ರೆಯಂತೆ ಬರೆದ ಮೂರು ಸಂಪುಟಗಳು, ಸದನದಲ್ಲಿ ಅವರು ಕೇಳಿದ ಮಹತ್ವದ ಪ್ರಶ್ನೆಗಳು- ಇವೆಲ್ಲವೂ ಅವರ ವ್ಯಕ್ತಿತ್ವದ ದಿಟ್ಟತನವನ್ನೂ ಪ್ರತಿಭೆಯನ್ನೂ ತೋರುತ್ತವೆ. ತನಗೆ ಸರಿ ಅನ್ನಿಸಿದ ಎಲ್ಲವನ್ನೂ ಸಿದ್ಧಲಿಂಗಯ್ಯ ಯಾರ ಅಪ್ಪಣೆಯನ್ನೂ ಕೇಳದೇ ಮಾಡಿದವರು. ಯಾವ ಟೀಕೆಗೂ ಅಂಜದವರು.

ಪುಟ್ಟಣ್ಣ ಕಣಗಾಲರ ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಅವರು ಗೆಳತೀ ಓ ಗೆಳತೀ, ಅಪ್ಪಿಕೋ ನನ್ನ ಅಪ್ಪಿಕೋ ಎಂಬ ಗೀತೆಯನ್ನು ಆದಿತ್ಯ ಎಂಬ ಹೆಸರಲ್ಲಿ ಬರೆದದ್ದು ವಿವಾದವಾಯಿತು. ಹೋರಾಟದ ಕವಿ ಪ್ರೇಮಗೀತೆ ಬರೆಯಬಾರದು ಎಂದು ಅನೇಕರು ಅವರ ವಿರುದ್ಧ ತಿರುಗಿ ಬಿದ್ದರು.

ಬ್ರಾಹ್ಮಣರನ್ನು ನಾನಿನ್ನು ಟೀಕಿಸಲಾರೆ, ಇಕ್ರಲಾ ವದೀರ್‍ಲಾ ಎಂದು ಬರೆಯಲಾರೆ, ಬ್ರಾಹ್ಮಣ ದ್ವೇಷಿ ನಾನಲ್ಲ, ಅವರಿಂದಲೂ ಕಲಿಯಬೇಕಾದದ್ದು ಇದೆ, ಮೊದಲಿನ ಆಕ್ರೋಶ ನನ್ನಲ್ಲಿಲ್ಲ ಎಂದು ಹೇಳಿ ದೊಡ್ಡ ಚರ್ಚೆ ಹುಟ್ಟುಹಾಕಿದರು. ಬಿ ಎಸ್ ಯಡಿಯೂರಪ್ಪನವರನ್ನು ಆಧುನಿಕ ಬಸವಣ್ಣ ಎಂದು ಕರೆದು ಟೀಕೆಗೆ ಗುರಿಯಾದರು. ಅಮಿತ ಶಾ ಮನೆಗೆ ಬರುವುದಾಗಿ ಹೇಳಿದಾಗ ಸ್ವಾಗತಿಸಿ ಎಲ್ಲರ ವಿರೋಧಕ್ಕೆ ಗುರಿಯಾದರು. ಅವೆಲ್ಲವನ್ನೂ ಎದುರಿಸಿ ನಿಂತು ತಮ್ಮ ಜನಪ್ರಿಯತೆಯನ್ನೂ ಗಟ್ಟಿತನವನ್ನೂ ಹಾಗೆಯೇ ಉಳಿಸಿಕೊಂಡರು.

ಆಸ್ಪತ್ರೆ ಸೇರುವ ಕೆಲವು ದಿನಗಳ ಮೊದಲು ಸಿದ್ಧಲಿಂಗಯ್ಯ ಸಪ್ನಾ ಪುಸ್ತಕ ಮಳಿಗೆಗೆ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಅದು ಕೊರೋನಾ ಇಳಿಮುಖವಾಗುತ್ತಿದ್ದ ದಿನಗಳಾಗಿದ್ದವು. ಹೀಗಾಗಿ ಅವರು ಮಾಸ್ಕ್ ಹಾಕಿರಲಿಲ್ಲ. ಮಾತಿನ ಮಧ್ಯೆ ಅವರನ್ನು ನೀವು ಮಾಸ್ಕ್ ಹಾಕಬೇಕು, ಕೊರೋನಾ ಅಪಾಯಕಾರಿ ಎಂದು ಮಿತ್ರರೊಬ್ಬರು ತಮಾಶೆಯಾಗಿ ಹೇಳಿದರು. ಅದಕ್ಕೆ ಸಿದ್ಧಲಿಂಗಯ್ಯನವರು ಲಘು ಧಾಟಿಯಲ್ಲಿ ನನಗೆ ಮಲ್ಟಿಪಲ್ ಕಾಯಿಲೆಗಳಿವೆ. ನೂರಾರು ತೊಂದರೆಗಳಿವೆ. ಲಿವರ್, ಕಿಡ್ನಿ, ಹಾರ್ಟು, ಶ್ವಾಸಕೋಶ-ಹೀಗೆ ಎಲ್ಲಾ ಅಂಗಾಂಗಗಳೂ ಕಂಗಾಲಾಗಿವೆ. ನನ್ನನ್ನು ಹಿಡಿದುಕೊಂಡರೆ ಎಲ್ಲಿ ನನಗಿರುವ ರೋಗ ತನಗೇ ಬರುತ್ತದೋ ಏನೋ ಎಂದು ಕೊರೋನಾ ನನ್ನ ಹತ್ತಿರ ಸುಳಿಯುವುದಿಲ್ಲ ಅಂದಿದ್ದರು.

ಕೊನೆಗೂ ಅವರು ಕೊರೋನಾಗೆ ತುತ್ತಾಗಲಿಲ್ಲ. ಕೊರೋನಾ ಬಂದರೂ ಅದರಿಂದ ಚೇತರಿಸಿಕೊಂಡರು. ಆದರೆ ಆನಂತರದ ಬಳಲಿಕೆ ಮತ್ತು ಅನಾರೋಗ್ಯ ಅವರನ್ನು ಕರೆದೊಯ್ದಿತು. ಅವರ ಕಣ್ಮರೆಯೊಂದಿಗೆ ಉಲ್ಲಾಸ, ಉತ್ಸಾಹ, ಅರಿವು ಮತ್ತು ವಿರೋಧಗಳ ಸಮ್ಮಿಶ್ರದಂತಿದ್ದ ಜೀವವೊಂದು ನಮ್ಮಿಂದ ದೂರವಾಗಿದೆ. ಊರುಕೇರಿ ಬರಡಾಗಿದೆ.

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: