ಚೌಸಟ್‌ ಯೋಗಿನಿ ಮಂದಿರವೂ, ನಮ್ಮ ಸಂಸದ್‌ ಭವನವೂ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಸಂಜೆಯಾಗುತ್ತಾ ಬಂದಿತ್ತು. ನಾವಿನ್ನೂ ಯಾವುದೋ ಹೆಸರೂ ಗೊತ್ತಿಲ್ಲದ ಹಳ್ಳಿಯ ಯಾವುದೋ ಖಾಲಿ ಖಾಲಿ ದಾರಿಯಲ್ಲಿ ಅಬ್ಬೇಪಾರಿಗಳಂತೆ ಸುತ್ತುತ್ತಿದ್ದೆವು. ಎಲ್ಲೋ ಅಲ್ಲೊಂದು ಇಲ್ಲೊಂದು ಮನೆ ಬಿಟ್ಟರೆ ಬೇರೇನೂ ಇಲ್ಲ. ಗೂಗಲ್‌ ಮ್ಯಾಪನ್ನೇ ನಂಬಿಕೊಂಡು, ಕೇಳಲೂ ಯಾರೂ ಇಲ್ಲದೆ ಸುಮ್ಮನೆ ಉದ್ದಕ್ಕೆ ಸಪೂರ ರಸ್ತೆ ಮಧ್ಯದ ಗುಂಡಿಗಳಲ್ಲಿ ಇಳಿದೇಳುತ್ತಾ ಹೋಗುತ್ತಿದ್ದೆವು. ಸುತ್ತಲೂ ಇನ್ನೇನು ಒಣಗಲು ಹೊರಟ ಹಸಿರು ಗದ್ದೆ ಬಯಲಿನ ನಡುವೆ ಫೆಬ್ರವರಿ ತಿಂಗಳಾದರೂ ಬಿಸಿಲು ಹೇಗೆ ಝಳಪಿಸುತ್ತಿತ್ತೆಂದರೆ, ಬೇಸಗೆಯಲ್ಲಿ ಇಲ್ಲಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಬಹುದು. ಬಿಸಿಲಲ್ಲಿ ಸುತ್ತಾಡಿ ಸುಸ್ತಾದರೂ, ಇಂಥದ್ದೊಂದು ದೇವಾಲಯ ಇಲ್ಲೇ ಎಲ್ಲೋ ಇದ್ದೂ ನೋಡದೆ ದಾಟಿ ಹೋಗುವುದು ಮಾತ್ರ ಘೋರ ಅಪರಾಧ ಎಂಬಂತೆ ಇದರ ಹಿಂದೆ ಬಿದ್ದಿದ್ದೆವು.

ಹಿಂದೊಮ್ಮೆ ಗ್ವಾಲಿಯರ್‌ ಬಂದಿದ್ದಾಗ ಇದು ಮಿಸ್ಸಾಗಿ ಛೇ ಅನಿಸಿತು. ಹಾಗಾಗಿ ಎರಡನೇ ಬಾರಿಯೂ ಗ್ವಾಲಿಯರ್‌ ದಾರಿಯಲ್ಲಿ ಇದರಿಂದ ತಪ್ಪಿಸಿಕೊಳ್ಳುವ ಮಾತೇ ಇರಲಿಲ್ಲ. ಸಂಜೆ ಚಳಿಗಾಲದ ಸೂರ್ಯ ಬೇಗ ಮರೆಯಾಗಿಬಿಡುವ ಅವಸರದಲ್ಲಿದ್ದ. ಹೊಂಬಿಸಿಲು ಇರುವಾಗಲಾದರೂ ತಲುಪಿದರೆ ಫೋಟೋ ಆದರೂ ದಕ್ಕೀತು.

ಕತ್ತಲಾಗಿ ಹೋದರೆ ಪ್ರಯೋಜನವಿಲ್ಲ ಎಂದು ಮನಸ್ಸಲ್ಲೇ ಬೇಗ ದಾರಿ ಸಿಕ್ಕಿದರೆ ಸಾಕಿತ್ತು ಅಂತ ನನಗನಿಸತೊಡಗಿತ್ತು. ಕೇಳಿದರೂ, ತಮಗೆ ಇದು ಗೊತ್ತೇ ಇಲ್ಲ, ತಿಳಿಯುವ ಅಗತ್ಯವೂ ಇಲ್ಲ ಎಂಬಂತೆ ಉಡಾಫೆಯಿಂದ ಸಾಗುವುದು ಮಾತ್ರ ಚಿಂತೆಗೀಡು ಮಾಡಿತ್ತು. ಗೂಗಲಮ್ಮನೂ ಸುಮ್ಮನೆ ಯಾವ್ಯಾವುದೋ ಹಳೆ, ಹೊಸ ದಾರಿಗಳಲ್ಲಿ ವೃಥಾ ಸುತ್ತು ಹೊಡೆಸಿದ್ದರಿಂದ ಆಕೆಯನ್ನು ನಂಬುವುದಂತೂ ಮೂರ್ಖತನ. ಅಷ್ಟರಲ್ಲಿ ಸಿಕ್ಕ ಪುಣ್ಯಾತ್ಮರೊಬ್ಬರು, ಸರಿಯಾದ ದಿಕ್ಕಿಗೆ ಸಾಗಲು ಸಹಾಯ ಮಾಡಿದರು.

ಅಷ್ಟಕ್ಕೂ ನಾವು ಹುಡುಕಿಕೊಂಡು ಹೊರಟದ್ದು ಚೌಸಟ್‌ ಯೋಗಿನಿ ಮಂದಿರ್!‌ ಅಂದರೆ ಕನ್ನಡದಲ್ಲಿ ಹೇಳಬೇಕಾದರೆ ʻಅರುವತ್ತನಾಲ್ಕು ಯೋಗಿನಿ ಮಂದಿರʼ ಎನ್ನಬಹುದೇನೋ. ಲೋಕಲ್‌ ಮಂದಿಗಿದು ಇಕತ್ತರ್ಸೋ ಮಹಾದೇವ ಮಂದಿರ. ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ಮಿತಾವಳಿ ಎಂಬ ಚೆಂದದ ಹೆಸರಿನ ಹಳ್ಳಿ ಮೂಲೆಯೊಂದರಲ್ಲಿದೆ ಈ ದೇವಾಲಯ. ಇಂಥದ್ದೊಂದು ಅಪರೂಪದ ದೇವಾಲಯ ಇಲ್ಲಿದೆ ಎಂದು ಅಷ್ಟಾಗಿ ಯಾರಿಗೂ ತಿಳಿಯದ, ಇನ್ನೂ ಹತ್ತರಲ್ಲಿ ಹನ್ನೊಂದಾಗಿ ಕಣ್ಣಿಗೆ ಬೀಳದೆ ಉಳಿದಿರುವ ದೇವಾಲಯಗಳಲ್ಲಿ ಇದೂ ಒಂದು. ಆದರೂ ಈ ದೇವಾಲಯವನ್ನು ಹುಡುಕಿಕೊಂಡು ಹೋಗಲು ಕಾರಣವೂ ಇದೆ.

ನಾವಲ್ಲಿ ಇದರ ಹಿಂದೆ ಬಿದ್ದು ಹುಡುಕಿಕೊಂಡು ಹೊರಟಾಗ, ಅತ್ತ ದೇಶದ ರಾಜಧಾನಿಯಲ್ಲಿ ಹೊಸ ಸಂಸತ್‌ ಭವನದ ನಿರ್ಮಾಣದ ರೂಪುರೇಷೆಗಳು ಸಿದ್ಧವಾಗುತ್ತಿತ್ತೇನೋ! ಸಂಸತ್‌ ಭವನಕ್ಕೂ ಈ ದೇವಾಲಯಕ್ಕೂ ಎತ್ತಣ ಸಂಬಂಧವಯ್ಯಾ ಎಂದರೆ ಇಲ್ಲೊಂದು ಬಹಳ ಆಸಕ್ತಿಕರವಾದ ಕಥೆಯಿದೆ. ನೀವೊಮ್ಮೆ ೧೯೨೧ರಲ್ಲಿ ಬ್ರಿಟೀಷ್‌ ಕಾಲದಲ್ಲಿ ಶಂಕುಸ್ಥಾಪನೆಗೊಂಡ ನಮ್ಮ ಸಂಸತ್‌ ಭವನದ ವಿನ್ಯಾಸವನ್ನು ಸರಿಯಾಗಿ ನೋಡಿ. ಆಮೇಲೆ ಈ ದೇವಾಲಯವನ್ನೊಮ್ಮೆ ನೋಡಿ. ಅರೆ, ಎರಡೂ ಒಂದೇ ಥರ ಇದೆಯಲ್ಲ ಎಂದು ಯಾರಿಗಾದರೂ ಅನಿಸದೆ ಇರದು.

ಐತಿಹಾಸಿಕ ದಾಖಲೆಗಳಲ್ಲಿ ಎಲ್ಲೂ, ಇದೇ ದೇವಾಲಯದಿಂದ ಸ್ಪೂರ್ತಿಗೊಂಡು ಎಡ್ವಿನ್‌ ಲುಟಯನ್ಸ್‌ ಈ ಸಂಸತ್‌ ಭವನವನ್ನು ನಿರ್ಮಿಸಿದರು ಎಂಬ ಉಲ್ಲೇಖಗಳು ಸಿಗುವುದಿಲ್ಲವಾದರೂ, ಸಂಸತ್‌ ಭವನದ ಅಪರೂಪದ ವಿನ್ಯಾಸಕ್ಕೆ ಮೂಲ ಪ್ರೇರಣೆ ಇದೇ ದೇವಾಲಯ ಎಂಬ ಬಲವಾದ ವಾದವೊಂದು ಸದ್ದು ಮಾಡಿತ್ತು. ಲುಟಯನ್ಸ್‌ ಕೂಡಾ ಎಲ್ಲೂ ಈ ಬಗ್ಗೆ ಹೇಳಿಕೊಂಡಿಲ್ಲವಾದ್ದರಿಂದ ಈ ವಾದಕ್ಕೆ ಆಧಾರಗಳೇ ಇಲ್ಲ.

ಗ್ವಾಲಿಯರ್‌ನಿಂದ ಸುಮಾರು ನಲ್ವತ್ತು ಕಿಮೀ ದೂರದ ಮಿತಾವಳಿಯ ಪುಟಾಣಿ ಬೆಟ್ಟವೊಂದರ ತುದಿಯಲ್ಲಿರುವ ಈ ದೇವಾಲಯದ ವೃತ್ತಾಕಾರದ ಆವರಣ ೬೪ ಪುಟಾಣಿ ಮಂದಿರಗಳಿಂದ ಮಾಡಲ್ಪಟ್ಟಿದೆ. ಈ ೬೪ ಮಂದಿರಗಳಲ್ಲಿ ೬೪ ಯೋಗಿನಿಯರ ಮೂರ್ತಿಗಳು ಇದ್ದವಂತೆ. ಮಧ್ಯಭಾಗದಲ್ಲಿ ಮೇಲ್ಛಾವಣಿಯಿಲ್ಲದ ತೆರೆದ ಮಂದಿರ ಮಹಾದೇವ ಮಂದಿರ. ಮಂದಿರದೊಳಗೆ ಶಿವಲಿಂಗವಿದೆ. ಈ ಎಲ್ಲ ಮಂದಿರಗಳ ಛಾವಣಿಯೂ ಸಮತಟ್ಟಾಗಿದ್ದು, ಹಿಂದೆ ಇಲ್ಲಿ ಪ್ರತಿಯೊಂದಕ್ಕೂ ಗೋಪುರ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಹಾಗಾದರೆ ಈ ಯೋಗಿನಿಯರೆಂದರೆ ಯಾರು? ಇಂಥದ್ದೊಂದು ಹೆಸರಿನ ಮಂದಿರಗಳೇ ಅಪರೂಪವಲ್ಲವೇ ಎಂಬ ಪ್ರಶ್ನೆಗಳೂ ಬಾರದಿರದು. ಯೋಗಿನಿಯರೆಂದರೆ ಮಹಾಶಕ್ತಿ ದುರ್ಗೆಯ ಪ್ರತಿರೂಪ. ಅಗ್ನಿ ಪುರಾಣ, ಕಾಳಿಕಾ ಪುರಾಣ, ಸ್ಕಂದ ಪುರಾಣ, ಚತುರ್ವರ್ಗ ಚಿಂತಾಮಣಿಗಳಲ್ಲದೆ, ಮಾಯಾ ತಂತ್ರ, ಕಾಮಾಕ್ಯ ತಂತ್ರ ಮೊದಲಾದ ತಂತ್ರ ವಿದ್ಯೆಗಳ ಪುಸ್ತಕಗಳಲ್ಲಿ ಇದರ ಉಲ್ಲೇಖ ಬರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯೋಗಿನಿಯರು ಎಲ್ಲ ದಿಕ್ಕಿನಲ್ಲೂ ಚಲಿಸಬಲ್ಲ ಕಾಸ್ಮಿಕ್‌ ಶಕ್ತಿಗಳು.

ಭಕ್ತರ ಬುದ್ಧಿ ಮತ್ತು ಅಹಂಕಾರ ಎಂಬ ಎರಡು ಗುಣಗಳನ್ನು ಪ್ರಭಾವಿಸಬಲ್ಲ ಶಕ್ತಿ ಇವಾಗಿದ್ದು, ಇದನ್ನು ಇನ್ನೂ ಹೆಚ್ಚಿನ ಉನ್ನತಿಗೆ ಕೊಂಡೊಯ್ಯಲು ಯೋಗಿನಿಯರ ಪೂಜೆ ಫಲ ನೀಡುತ್ತದೆ ಎಂಬ ನಂಬಿಕೆ. ಇದೂ ಅಲ್ಲದೆ, ಈ ದೇವಾಲಯದಲ್ಲಿನ ೬೪ ಯೋಗಿನಿಯರೆಂದರೆ ೬೪ ವಿದ್ಯೆ/ಕಲೆಯ ಪ್ರತಿನಿಧಿಗಳಂತೆ ಎಂಬ ನಂಬಿಕೆಯೂ ಇದೆ. ಹಾಗಾಗಿಯೇ, ಈ ದೇವಾಲಯದಲ್ಲಿ, ೬೪ ದಿಕ್ಕುಗಳಲ್ಲೂ ಕಾಣಬಹುದಾದ ಈ ಯೋಗಿನಿಯರು, ಆಯಾ ದಿಕ್ಕಿನಗುನುಣವಾದ ಶಕ್ತಿ ಹೊಂದಿರುವವರು ಎಂಬ ವಾದವಿದೆ. ಇಡೀ ವೃತ್ತಾಕಾರದ ದೇವಾಲಯ ಶ್ರೀಯಂತ್ರದ ಸಾಂಕೇತಿಕ ರೂಪ ಎಂಬ ವಿವರಗಳೂ ದಕ್ಕುತ್ತವೆ.

ಯೋಗಿನಿಯರ ಪೂಜೆ ಸಂಪ್ರದಾಯ ಶುರುವಾಗಿದ್ದು ಸುಮಾರು ಕ್ರಿಸ್ತಶಕ ೭ನೇ ಶತಮಾನದಲ್ಲಿ. ಸುಮಾರು ೧೫ನೇ ಶತಮಾನದವರೆಗೂ ಈ ಯೋಗಿನಿಯರ ಪೂಜೆ ಬಹಳ ಪ್ರಚಲಿತದಲ್ಲಿತ್ತು. ಹಾಗಾಗಿ ಇಂಥ ಸಂದರ್ಭ ದೇಶದೆಲ್ಲೆಡೆ ಯೋಗಿನಿಯರ ದೇವಾಲಯ ನಿರ್ಮಾಣವಾದುದಕ್ಕೆ ಆಧಾರಗಳು ಸಿಗುತ್ತವೆ. ಮುಖ್ಯವಾಗಿ ಇಂದಿನ ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಒಡಿಶಾಗಳಲ್ಲಿ ಇದು ಹೆಚ್ಚು ಪ್ರಸಿದ್ಧವಾಗಿತ್ತು ಎಂಬುದಕ್ಕೆ ಅಲ್ಲಿ ಆ ಕಾಲಘಟ್ಟದಲ್ಲಿ ನಿರ್ಮಾಣವಾದ ಯೋಗಿನಿ ದೇಗುಲಗಳೇ ಸಾಕ್ಷಿ.

೬೪ ಯೋಗಿನಿ, ೮೧ ಯೋಗಿನಿ ಹಾಗೂ ೪೨ ಯೋಗಿನಿಗಳೆಂಬ ವಿಭಾಗಗಳಡಿ ಕಾಣಲು ಸಿಗುತ್ತವೆ.  ಅದರಲ್ಲೂ ಚೌಸಟ್‌ (೬೪) ಯೋಗಿನಿ ಮಂದಿರಕ್ಕೆ ಆಗ ಹೆಚ್ಚು ಪ್ರಾಶಸ್ತ್ಯ. ಮಧ್ಯಪ್ರದೇಶದಲ್ಲಿ ಎರಡು ಹಾಗೂ ಒಡಿಶಾದಲ್ಲಿ ಎರಡು ಇಂತಹ ಚೌಸಟ್‌ ಪ್ರಕಾರದ ದೇವಾಲಯಗಳು ಹಳೆಯದಾದರೂ ಇಂದಿಗೂ ನೋಡಬಲ್ಲ ಸ್ಥಿತಿಯಲ್ಲಿದೆ. ಉಳಿದವುಗಳಲ್ಲಿ ಈಗ ಬಹುತೇಕ ಎಲ್ಲವೂ ಅವನತಿಗೆ ಸಾಗಿದ್ದು, ಇಂದಿಗೂ, ತನ್ನ ಸೌಂದರ್ಯವನ್ನು ಉಳಿಸಿಕೊಂಡಿರುವ ದೇಗುಲಗಳ ಪೈಕಿ ಮಿತಾವಳಿಯ ಈ ದೇಗುಲ ಪ್ರಮುಖವಾಗಿ ನಿಲ್ಲುತ್ತದೆ. ಜಬಲ್‌ಪುರದ ಯೋಗಿನಿ ಮಂದಿರವೂ ಹೆಚ್ಚು ಕಡಿಮೆ ಹೀಗೆಯೇ ಇದೆ.

ಇತಿಹಾಸದ ಅಂದಾಜುಗಳ ಪ್ರಕಾರ, ಇಂದಿಗೆ ಸಾವಿರ ವರ್ಷಗಳ ಹಿಂದೆ ಮಧ್ಯಪ್ರದೇಶದ ಮಿತಾವಳಿ, ಪದಾವಳಿ ಹಾಗೂ ಬಟೇಶ್ವರಗಳಲ್ಲಿ ವಿಶ್ವವಿದ್ಯಾಲಯಗಳಿದ್ದವು. ಗಣಿತ, ಜ್ಯೋತಿಷ್ಯ ವಿದ್ಯೆ ಹಾಗೂ ಹಿಂದೂ ಧರ್ಮದ ಶಿಕ್ಷಣ ಇಲ್ಲಿ ದೊರೆಯುತ್ತಿತ್ತು. ಒಂದು ಕಾಲದಲ್ಲಿ ದೇಶದ ಮೂಲೆ ಮೂಲೆಗಳಿಂದಲೂ ವಿದ್ಯಾಕಾಂಕ್ಷಿಗಳಾಗಿ ಇಲ್ಲಿ ಬಂದು ಕಲಿತು ಹೋಗುವವರಿದ್ದರು. ಇದು ತಂತ್ರ ವಿದ್ಯೆಯ ಕೇಂದ್ರ ಸ್ಥಾನವೂ ಆಗಿತ್ತು ಎಂದು ಹೇಳಲಾಗುತ್ತದೆ. ಇಲ್ಲಿನ ದಾಖಲೆಗಳ ಪ್ರಕಾರ, ಇದನ್ನು ಮಹಾರಾಜ ದೇವಪಾಲನು ಸುಮಾರು ಕ್ರಿಸ್ತಶಕ ೧೧ನೇ ಶತಮಾನದ ವೇಳೆಯಲ್ಲಿ ನಿರ್ಮಿಸಿದನೆಂದು ಹೇಳಲಾಗುತ್ತದೆ. ಹಾಗಾಗಿ ಸಾವಿರ ವರ್ಷಗಳಷ್ಟು ಹಳೆಯದಾದರೂ, ಇಂದಿಗೂ ಹಾಗೆಯೇ ಉಳಿದುಕೊಂಡಿರುವ ಅಪರೂಪದ ಮಂದಿರವಿದು.

ಸೂರ್ಯನಿಗೆ ನನ್ನ ಮೊರೆ ಕೇಳಿತ್ತೋ ಎಂಬಂತೆ ನಿಧಾನಕ್ಕೆ ಪಶ್ಚಿಮಕ್ಕೆ ಜಾರುವಷ್ಟರಲ್ಲಿ ಸಂಜೆ ಬೆಳಕಿನಲ್ಲಿ ಈ ವಿಶಿಷ್ಟ ವಿನ್ಯಾಸದ ದೇಗುಲದ ಕನಸು ನನಸಾಗಿತ್ತು. ಹೊರಡುವಷ್ಟರಲ್ಲಿ, ಅದ್ಯಾರೋ ಊರ ಒಂದಿಬ್ಬರು ಬಂದದ್ದು ಬಿಟ್ಟರೆ, ನಮ್ಮನ್ನು ಹೊರತುಪಡಿಸಿದರೆ, ಅಲ್ಲಿ ಒಂದೂ ಮಾನವ ಜೀವವೂ ನೋಡಲು ಬಂದ್ದು ಕಾಣಲಿಲ್ಲ. ಈ ದೇಶದ ಮೂಲೆ ಮೂಲೆಗಳಲ್ಲಿ ಹೀಗೆ ಹುಡುಕಹೊರಟರೆ, ತೆರೆದಷ್ಟೂ ಬಾಗಿಲು. ಕೇಳುವ ಕಿವಿಗಳಿದ್ದರೆ, ನೋಡುವ ಕಣ್ಣುಗಳಿದ್ದರೆ ಸಿಗುವ ಕಥೆಗಳೆಷ್ಟೋ. ಇನ್ನೂ ಎಷ್ಟೋ ಮುರಿದು ಬಿದ್ದ ಶಿಲ್ಪಗಳು ಹೇಳದೆ ಉಳಿದ ಕಥೆಗಳೆಷ್ಟೋ!

‍ಲೇಖಕರು Avadhi

June 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: