
ಜೋಗಿ
ಕುಡುಕರೆಂದರೆ
ನನಗೆ ಮೆಚ್ಚುಗೆ, ಅಕ್ಕರೆ.
ಕುಡಿಯುತ್ತಾರೆ ಅನ್ನುವ ಕಾರಣಕ್ಕಲ್ಲ
ಕುಡಿದಂತಿರುತ್ತಾರಲ್ಲ, ಅದಕ್ಕೆ.
ದುಡಿಯುತ್ತಲೇ ಇರುವವರು
ಕುಡಿಯದೇ ಸಾಯುತ್ತಾರಲ್ಲ,
ಅವರ ಬಗ್ಗೆ ಅನುಕಂಪ, ಹತಾಶೆ.
ಕುಡುಕರು ಉದಾರಿಗಳಾಗಿರುತ್ತಾರೆ
ಅನ್ನುವುದಕ್ಕಲ್ಲ.
ಮಿಕ್ಕವರಂತೆ ಅವರು ದಾರಿಯ
ಚಿಂತೆ ಮಾಡುವುದಿಲ್ಲ.
ಸವೆದ ದಾರಿಯೆಂದರೆ ಅವರಿಗೆ
ಅಲರ್ಜಿ.
ಕುಡುಕರು ಕವಿತೆ
ಬರೆಯುವುದಿಲ್ಲ.
ಮತ್ತು ಅದನ್ನು ಗಟ್ಟಿಯಾಗಿ ಓದುವುದಿಲ್ಲ.
ಅವರೊಳಗೆ ಗದ್ಯವೂ ಇರುವುದಿಲ್ಲ
ಪದ್ಯವೂ ಇರುವುದಿಲ್ಲ
ಬರೀ ಮದ್ಯವಿರುತ್ತದೆ. ಮದ್ಯಕ್ಕೆ ಜಾತಿಯಿಲ್ಲ.
ಕುಡುಕರು ಸಮಾನತೆ, ಬದ್ಧತೆ,
ಮೋದಿ, ಗಾಂಧಿ,
ತಾತ್ವಿಕತೆ ಎಂದೆಲ್ಲ ಕ್ಯಾತೆ ತೆಗೆಯುವುದಿಲ್ಲ.
ರಮ್ಮು ಬಾಟಲಿನ ಮುಚ್ಚಳ
ತೆಗೆಯಲಾಗದೇ ಇದ್ದದ್ದಕ್ಕೆ
ಜಾತಿಪದ್ಧತಿಯೇ ಕಾರಣ ಎಂದು ದೂರುವುದಿಲ್ಲ.
ಕುಡುಕರು
ಭಾಷಣ ಮಾಡುವುದಿಲ್ಲ ಮತ್ತು
ಅಪ್ಪಣೆ ಕೊಡಿಸುವುದಿಲ್ಲ.
ಕುಡುಕರು
ಹುಲುಮಾನವರಂತೆ.
ಎಡವುತ್ತಾರೆ, ಬೀಳುತ್ತಾರೆ, ಸ್ವಂತ ಶಕ್ತಿಯಿಂದ
ಏಳುತ್ತಾರೆ.
ಎದ್ದು ಹಲ್ಲುಜ್ಜಿಕೊಂಡು ಕನ್ನಡಿ ನೋಡಿಕೊಳ್ಳುತ್ತಾರೆ.
ಮುಸ್ಸಂಜೆಯ ತನಕ
ಕರುಳು ಹಿಂಡುವಂತೆ ದುಡಿಯುತ್ತಾರೆ.
ಅವರು
ಪ್ರೀತಿಸಿದ್ದಕ್ಕೆ ಪಾಲು ಕೇಳುವುದಿಲ್ಲ.
ಪತ್ರಿಕೆ ಓದುವುದಿಲ್ಲ
ಟೀವಿ ನೋಡುವುದಿಲ್ಲ
ಮತ್ತು ಥಟ್ಟನೆ ಎದುರಾದರೆ ನಿಮ್ಮನ್ನು
ಮತ್ತೊಬ್ಬ ಕುಡುಕನಂತೆಯೇ ನೋಡುತ್ತಾರೆ.
ನೀವು ನಕ್ಕರೆ ಸಾಕು
ಚಿಯರ್ಸ್ ಅನ್ನುತ್ತಾರೆ.





ನಿಜವಾಗ್ಲೂ ಬಾಟಮ್ ಅಪ್ ಮಾಡಲೇಬೇಕೆನಿಸುವ ಕವಿತೆ ಇದು. ಇಡೀ ಜಗತ್ತಿನ ಫಿಲಾಸಫಿಯೇ ಒಂದು ವಿಸ್ಕಿ ಬಾಟಲಲ್ಲಿದೆಯೆಂದು ಓದಿದ ನೆನಪು. ಸತ್ಯ ಅದು. ಆದರೆ ಜೋಗಿಯವರೇ, ಕುಡುಕರಲ್ಲೂ ಮತಿಗೆಟ್ದು ದುಡುಕುವವರಿರುತ್ತಾರೆ, ನಮ್ಮ ಬಹು ಪಾಲು ರಾಜಕಾರಣಿಗಳಂತೆ.
ದನಕರುಗಳಂತಿರುತ್ತಾರೆ
ಕುಡುಕರು
ಹಾಕುತ್ತಿರುತ್ತಾರೆ ಏನನ್ನೋ
ಮೆಲುಕು
ಉದರ ತುಂಬುವ ವರೆಗೆ
ಅವರ ನೆಚ್ಚಿನ ಸರಕು
ಕುಡುಕರು ದನಬಡಿದಂತೆ
ಬಡಿಯುತ್ತಾರೆ
ಹೆಂಡತಿ ಮಕ್ಕಳನ್ನ
ಬಿದ್ದು ಚರಂಡಿ ಯಲ್ಲಿ
ಸ್ನಾನ ಮಾಡುತ್ತಾರೆ
ರಸ್ತೆ ಬದಿಯಲ್ಲಿ
ಮಲಗುತ್ತಾರೆ
ಚಡ್ಡಿಲಿ ಉಚ್ಚೆ ಹೊಯ್ಕೊಂಡು.