ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಜೈ ಭೀಮ್’ ಸಿನಿಮಾ ದೆಸೆಯಿಂದ ಇರುಳಿಗರ ಈರಮ್ಮನ ನೆನಪು…

ಮಲ್ಲಿಕಾರ್ಜುನ ಹೊಸಪಾಳ್ಯ

ಜೈ ಭೀಮ್ ಸಿನಿಮಾ ದೆಸೆಯಿಂದ ಕಾಡು ಪೂಜಾರರು ಅಥವಾ ಇರುಳಿಗ ಸಮುದಾಯ ಚರ್ಚೆಯಲ್ಲಿದೆ. ೧೯೯೮ರಿಂದ ೨೦೦೫ರವರೆಗೆ ತಮಿಳುನಾಡಿನ ಥಳಿ, ಕನಕಪುರ ಬಳಿಯ ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾಗ ಇರುಳಿಗ ಸಮುದಾಯದೊಂದಿಗೆ ನಿಕಟ ಬಾಂಧವ್ಯವಿತ್ತು. ಬಿಳಿದಾಳೆ, ತಗ್ಗಟ್ಟಿ, ಉರಿಗಮ್, ಕೋಟೆಯೂರು, ಜೀನ್ ಮಲ್ಲತ್ತ, ಆಲಗಡಕಲು, ಉಡುಬರಾಣಿ ಇತ್ಯಾದಿ ಹಳ್ಳಿಗಳಲ್ಲಿ ಇರುಳಿಗರಿದ್ದರು.

ಆಗ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದ ಕಾಳೇಗೌಡ ನಾಗವಾರ ಸರ್ ಹಾಗೂ ಸದಸ್ಯರಾಗಿದ್ದ ಹಿರಿಯರಾದ ಜಿ.ವಿ. ಆನಂದಮೂರ್ತಿಯವರು ಬುಡಕಟ್ಟು ವ್ಯಕ್ತಿಚಿತ್ರ ಪ್ರಕಟಣೆ ಮಾಡುವ ಯೋಜನೆ ಹೊಂದಿದ್ದರು. ನನಗೆ ಯಾರಾದರೂ ಇರುಳಿಗರ ಅಧ್ಯಯನ ಮಾಡುವ ಜವಾಬ್ದಾರಿ ಕೊಟ್ಟಿದ್ದರು.

ಬಿಳಿದಾಳೆ- ಕೊಳಗೊಂಡನಹಳ್ಳಿ ಬಳಿಯ ಕತ್ತಾಳೆಬಾರೆದೊಡ್ಡಿಯಲ್ಲಿ ಈರಮ್ಮ ಎಂಬುವರಿದ್ದರು. ಅವರನ್ನು ಹಾಗೂ ಅವರ ಗಂಡ ಈರಯ್ಯನನ್ನೂ ಮಾತಾಡಿಸಿ ಕ್ಯಾಸೆಟ್ ಮಾಡಿಕೊಂಡು ಬರಹಕ್ಕಿಳಿಸಿದ್ದೆ. ಅಕಾಡೆಮಿಯಿಂದ ಪ್ರಕಟವಾಗಲಿಲ್ಲ. ಆ ಪ್ರತಿ ೨೦ ವರ್ಷವಾದರೂ ನನ್ನ ಬಳಿ ಹಾಗೇ ಇದೆ. ಈಗ ಅದನ್ನು ಓದುತ್ತಿದ್ದೇನೆ. ಅವರು ಹೇಗೆ ಹೇಳಿದರೋ ಹಾಗೇ ಬರೆದಿಟ್ಟಿದ್ದೆ. ನಿಮಗೂ ಇಷ್ಟವಾಗಬಹುದು.

ಇರುಳಿಗ ಈರಮ್ಮನ ಕಥೆ – ಭಾಗ ೧

‘ನಾವು ಒಂದ್ಗುಟ್ದೋರು ಆರ್‍ಜನ. ತಮ್ಮದೀರು ಎಳ್ಡಾಳು. ನಾಕಜನ ಹೆಣ್ಣೈಕ್ಳು. ನಾನು ಎರಡ್ನೇಳು. ನನುಗ್ ಮುಂಚೆ ಒಬ್ಳು ಅಕ್ಕ ಇದ್ಲು. ನನುಗ್ ಹಿಂಚೆರಿ ಇಬ್ರು ತಂಗ್ದೇರು. ನಮ್ಮಟ್ಟಿಲಿ ನಮ್ಮಪ್ಪ ಗೆಯ್ತಿರ್‍ನಿಲ್ಲ. ಕಳ್ಳ ಸುದ್ದ ಕಳ್ಳ. ಯಂಡ್ರುನ ಗದರ್‍ಸೋದು, ಮಕ್ಳುನ ಗದುರ್‍ಸೋದು. ಆದಗ ಇಷ್ಟು ಉಂಡ್ಬುಟ್ಟು ಅಲ್ಲಿ ಇಲ್ಲಿ ಕುಂತಿದ್ ಮನಿಗ್ ಬರದಿ ಇಂಗ್ ಮಾಡನು.

ನಮ್ಮುನ್ನೆಲ್ಲ ಸಾಕಿ ಸಲಿವಿ ದೊಡ್ಡೋರನ್ ಮಾಡಿದ್ದು ನಮ್ಮಯ್ಯರು. ಅಂದ್ರೆ ನಂತಾತ. ಅದು ಬುಟ್ರೆ ನಮ್ಮಮ್ಮ ನಮವ್ವ ಇಬ್ರುನುನು ಕೂಲಿನಾಲಿ ಮಾಡಿ ಹೊತ್ಗೊಂದಿಷ್ಟು ಉಪ್ಪು ಮೆಂಚೆಕಾಯಿ ತಂದು ನಮ್ಮುನ್ನೆಲ್ಲ ಸಾಕಿದ್ರು.

ಒಂದು ಉಣ್ಣಕ್ಕಿಲ್ಲ ಒಂದು ಉಡಕ್ಕಿಲ್ಲ. ಬಡುಸ್ತನ ಅಂದ್ರೆ ಹಾಸಿ ಹೊದ್ಕಳವೊಷ್ಟಿತ್ತು. ಉದ್ದುಕು ಬಡುಸ್ತನವೇ. ಈಗ್ಲುನುನು ಒಂದ್ಕಿದ್ರೆ ಒಂದ್ಕಿಲ್ಲ. ನಂತಮ್ದೀರಂತೂ ಈ ಗಳಿಗೇಲೂ ಸಂಬ್ಳ ಗೇಯ್ತಾ ಅವ್ರೆ. ಊರಿನ್ ದನ ಎಮ್ಮೆ ಮೇಸದು ಅವರ್‍ಕೊಟಿದ್ ಈಸ್ಕಳದು ಕಾಲ ಹಾಕದು ಹಿಂಗೆ. ನಾವೇನೋ ಹಿಟ್ಟು ಬಟ್ಗೆ ವಸಿ ನ್ಯಾರವಾಗ್ ಅವಿ. ಅಕ್ಕ ತಂಗ್ದೇರು ಅಷ್ಟೆಯ. ಒಪ್ಪೊತ್ತುಣ್ಣದು ಒಪ್ಪೊತ್ತುಪಾಸ ಮನಿಕ್ಕಳದು ಹಿಂಗೆ.

ನಮಯ್ಯ ಅಂತ ಏಳುದ್ನಲ್ರ, ಈಗಿಲ್ಲ. ಸತ್ ಇನ್ನೇನ್ ಏಳೆಂಟೊರ್‍ಸ ಆಗಿದ್ದತೋ ಏನೋ. ಬಾಳಾ ಗೇದ್ಬುಟ್ಟವ್ನೆ. ಈ ಹೊಳೆಕೆರೆ ಐತಲ್ರ. ಕಾವೇರಿ ಹೊಳೆ. ಆ ಹೊಳೆ ಪಕ್ಕ ದೊಡ್ಡೀಲಿ ದನ ಮೇಸೋನು. ನಂ ಶಿವನೇಗೌಡನದೊಡ್ಡಿ ಅಲ್ಲಿಂದ ಬತ್ತ ಆಲುಕುಳಿ ಕೋಟೆಕೊಪ್ಪದ ದನುಗಳ್ನೆಲ್ಲ ಹೊಡ್ಕೊಂಡೋಗಿ ಮೇಸನು. ವರ್‍ಸಾನುಗಟ್ಳೆ ಅಲ್ಲೇ ಇರನು. ಏನೋ ಊರ್‍ಗೊಂದ್ ಹಬ್ಬ ಅಂತ ಮಾಡ್ದಗ, ಮನೆ ವಳ್ಗೆ ಒಳ್ಳೇದು ಕೆಟ್ಟುದ್ದು ಏನಾರ ಕಾರ್‍ಯ ಇದ್ದಗಷ್ಟೇ ಬತ್ತಿದ್ದಿದ್ದು. ಉಳದಂಗೆ ಅಲ್ಲೇ ಗೆಡ್ಡೆ ಅಗ್ಯದು ತಿನ್ನದು, ಜೇನ್ ಕೀಳದು, ಬ್ಯಾಲದ ಹಣ್ಣು ಕೀಳದು ತಿನ್ನದು, ಹೊಳೇಲಿ ನೀರ್ ಕುಡ್ಯದು. ಹಿಂಗೇ ಮಾಡಿ ಊರೋರ್ ಕೊಡೋ ಬತ್ತೇವುನ್ನೆಲ್ಲ ಮನಿಕ್ಕೊಡೋನು.

ಒಂದ್ ಕುಳುದ್ ಮ್ಯಾಲೆ ಅಚ್ಚೇರು ಬತ್ತೇವು ಕೊಡೋರು. ಉಳದಂಗೆ ಉಪ್ಪು ಬ್ಯಾಳೆಕಾಳು ಕಾರುದುಡಿ ಎಲ್ಲ ಕೊಡೋರು. ಅದುನ್ನೆಲ್ಲ ತಂದು ಮನಿಕ್ಕೊಟ್ ಹೋಗಬುಡನು. ಅವುನು ಮಾತ್ರ ಕಾಡುಗೆಡ್ಡೆ ಹೊಳೆಕೆರೆ ನೀರು ಕುಡಕಂಡೇ ಜೀವಣಾಂಶ ಮಾಡ್ಬುಟ್ಟ.

ನಮ್ಮಮ್ಮ ಹೆಚ್ಗಟ್ಳೆ ಕೂಲಿಗೋಯ್ತಿರ್‍ನಿಲ್ಲ. ಬಿಮ್ಮನ್ಸೆ, ಹುಡಿ ಐಕ್ಳು. ಅಂಗಾಗಿ ನಮವ್ವ ಒಬ್ಳೇ ಕೂಲಿನಾಲಿ ಓಯ್ತಿದ್ದಿದ್ದು. ಕೂಲಿ ತಾನೇ ಏನ್ ಕೊಡ್ತಿದ್ರು. ಆಗಿನ್ ಕಾಲ್ದಗೆ ಒಂದ್ ಸಾಲಿಗೆ ಐದ್ರುಪಾಯ್ ಕೊಡೋರು. ಅಲ್ಗೆ ಒಬ್ಬೊಬ್ರಿಗೆ ಎಲ್ಡುವರೆ ಎಲ್ಡುವರೆ ಬರದು. ಅಷ್ಟರಗೆ ಎಂಟೊಂಬತ್ತು ಜನ ಹೊಟ್ಟೆ ವರೀಬೇಕಲ್ರ.

ನಂಗೆ ಐದ್ ತುಂಬಿ ಆರಕ ಬೀಳ್ತಿದ್ದಂಗೆ ಎಲ್ಲ ಸೇರಿ ಸಂಬ್ಳ ಮಡ್ಗಿರು. ನಂ ಶಿವನೇಗೌಡನದೊಡ್ಡಿಲೆ ಹೊನ್ನಕ್ಕ ಅಂತ ಗೌಡುಗುಳು ಅವರ ಮನಿಗೆ. ವತ್ತಿನೆ ಓದ್ರೆ ಸಂದ್ಗಂಟ ಅವರ್‍ಮನೆಗೆ ಕಸ ಸುರ್‍ಯದು, ಕೀರೆ ಮಡಿಗೆ ನೀರುಯ್ಯದು, ಕಸ ಮುಸ್ರೆ ತೊಳ್ಯದು. ಸಾರ್‍ಸೋದು ಗುಡ್ಸೋದು, ಆಡಿಕುರಿ ಮೇಯ್ಸದು, ಅವುಕ್ ಹುಲ್ಲತರದು. ಈ ಸೀಗೆ ಸೊಪ್ಪು ವನಗನೆ ಸೊಪ್ಪು ಅಣ್ಣೆಸೊಪ್ಪು ಕುಯ್ತರದು. ಹಿಂಗೆ ತುಂಡ ಬಂಡ ಕೆಲಸ ಮಾಡಿ ಸಂದ್ಗೆ ನಮ್ಮಟ್ಟಿಗ್ ಬಂದ್ ಬುಟ್ತಿದ್ದೆ.

ಮದ್ವೆ ಆಗೋಗಂಟ ಅವರ್‍ಮನೆಗೆ ಜೀತ ಮಾಡಿವ್ನಿ ಲೆಕ್ಕ ಆಕ್ರಿ. ಹೆಚ್ಚುಕಮ್ಮಿ ಐದಾರೊರ್‍ಸ ಅಂದ್ಬುಡಿ. ಮದ್ಲು ಮದ್ಲೆಲ್ಲ ಅಯ್ಯೋ ಯಾರು ಅವರ್‍ಮನೆಗೆ ಸಂಬಳ ಗೆಯ್ಯೋರು. ಅವರ ಮಕ್ಕುಳ್ನೋಡಿರೆ ಮೂರೊತ್ತು ತಾರಾಡ್ಕೊಂಡಿರ್‍ತರೆ ನಾನ್ ಮಾತ್ರ ಹೊತ್ಗೂ ಗೆಯ್ಬೇಕಲ್ಲ ಅಂತ ಬೇಜಾರ್ ಬಂದ್ಬುಡದು. ಯತ್ತಗರ ಹೊಂಟೋಗನ ಅಂತ್ಲೂ ಅನ್ಸದು. ಓಗಲ್ಲ ಅಂದ್ರೆ ನಮಟ್ಟಿಲಿ ಹೊಡ್ಯೋರು. ಯತ್ತಗರ ಹೊಂಟೋಗ್ ಬುಡುವ ಅಂದ್ರೆ ಎಲ್ಲೋದಿರಿ. ಸುತ್ಲೂ ಕಾಡು. ಆಮೆಕ್ ಬತ್ತ ಬತ್ತ ಅವರ್‍ಮನೆಗೆ ಬೆರತ್ಕಂಬುಟ್ಟೆ.

ಅವುರೂ ಚಂದಕ ನೋಡ್ಕಳರು. ಅವುರುಣ್ಣೋದು ನಮುಗೂ ಕೊಡೋರು. ಅವರ್‍ಮಕ್ಳಿಗೆ ಬಟ್ಟೆಬರೆ ತಂದ್ರೆ ನಮ್ಗೂ ತರರು. ಅವರೊಟ್ಟೆಗುಟ್ಟಿದ್ ಮಕ್ಳೆಂಗೋ ಅಂಗೆ ನಮ್ಮುನ್ನು ಬಾವಸರು. ಆ ಹೊನ್ನಮ್ಮ ಅನ್ನರು ಈಗ್ಲೂ ಅವ್ರೆ. ಮನೆಗೇನಾರು ಒಳ್ಳೆದು ಕೆಟ್ಟದ್ದು ಆದ್ರೆ ಹೇಳ್ ಕಳುಸ್ತರೆ. ಅವರ ಸೊಸೆಂದ್ರು ಅಷ್ಟೇ. ನಮ್ಮತ್ತೆ ಬಯ್ತಳೆ ಅಂತ ಹೋದಗ್ಲೆಲ್ಲ ಚನ್ನಗೆ ನಿಗ ಮಾಡ್ತರೆ. ಬಟ್ಟೆ ಬರೆ ಉಡುಸ್ತರೆ. ಇವತ್ತು ನಾನ್ ನಂತೌರ್ ಮನಗೋದ್ರೆ ಅವರಟ್ಟಿಲಿ ಮುಂದ್ಲೂಟ, ನಮ್ಮಟ್ಟಿಲಿ ಹಿಂದ್ಲೂಟ.

(ಮುಂದುವರಿಯುವುದು)

‍ಲೇಖಕರು Admin

12 November, 2021

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading