ಹೆದ್ದಾರಿಯಂಚಿನಲ್ಲಿ ಉರಿಯುತ್ತಿರುವ ಒಂಟಿ ಬೇರು
-ದರ್ಶನ್ ಕುಮಾರ್
ಬಿಳಿ ಕೋಟು ತೊಟ್ಟು,
ನಾಡಿಮಿಡಿತವನ್ನಳೆಯುವ
ಕನಸು ಹೊತ್ತ ಕಣ್ಣುಗಳಿಗೆ
ಈಗ ಕಣ್ಣೀರೆಂಬ ಉಪ್ಪುನೀರಿನದ್ದೇ
ಹನಿಹನಿ ಅಭಿಷೇಕ!
ಯಾವ ಲೇಖನಿಯ ತುದಿಯಲ್ಲಿ
ಭವಿಷ್ಯದ ಶಾಯಿ ಹರಿಯಬೇಕಿತ್ತೋ,
ಅಲ್ಲಿ ಪ್ರಶ್ನೆಗಳಿಗಿಂತ ಮುನ್ನವೇ ಉತ್ತರಗಳು
ಬೆಲೆಕಟ್ಟಲಾರದ ಸಂತೆಯಲ್ಲಿ
ಕಾಸಿಗೆ ಹರಾಜಾಗಿವೆ.
ವೈದ್ಯನಾಗುವ ಕನಸಿಗೆ ಮುನ್ನವೇ,
ವ್ಯವಸ್ಥೆಯ ರೋಗಗ್ರಸ್ತ
ನಾಡಿಮಿಡಿತ ಆ ಎಳೆಯ
ಕೈಗಳಿಗೇ ಸಿಕ್ಕಿಬಿದ್ದಿದೆ.
ಬೆಂಗಾಡಾದ ಹೆದ್ದಾರಿಯ ನಡುವೆ
ಹಳೆಯದೊಂದು ಬೇರು
ತನ್ನಷ್ಟಕ್ಕೆ ತಾನು ಮಣ್ಣಿನ
ಹಂಗನ್ನು ತೊರೆದು ಕುಳಿತಿದೆ;
ಅದಕ್ಕೀಗ ನೀರಿನ ದಾಹವಿಲ್ಲ,
ಬರೀ ಕಮರುತ್ತಿರುವ ಮೌನದ ಉರಿ!
ಇದು ಎಲೆಯುದುರುವ
ಋತುವಿನ ಸಹಜತೆಯಲ್ಲ,
ತನ್ನನ್ನೇ ತಾನು ಸುಟ್ಟುಕೊಂಡು
ಇಡೀ ಕಾಡನ್ನೇ ಎಚ್ಚರಿಸುವ
ಒಣ ರೆಂಬೆಯ ಮೊಂಡು ಹಠ.
ಎಲ್ಲಿಯೋ…
ಬಿಳಿ ಹಾಳೆಯ ನದಿಯೊಂದು
ದಿಕ್ಕು ತಪ್ಪಿ ಹರಿದಾಗ,
ತಳ ತೂತಾದ ಕಾಗದದ
ದೋಣಿಯನ್ನೇ ನೆಚ್ಚಿದ್ದ
ನೂರಾರು ಕೈಗಳಿಗೆ
ಸಿಕ್ಕಿದ್ದು ಬರೀ ಕಾವೇರಿದ ಮರಳು.
ಅಕ್ಷರಗಳನ್ನೇ ತಕ್ಕಡಿಯಲ್ಲಿಟ್ಟು
ತೂಗುವ ಬಿಕರಿ ಸಂತೆಯಲ್ಲಿ,
ಕನಸುಗಳ ಬೆಲೆಕಟ್ಟಿದವರ
ಜೇಬು ಮಾತ್ರ ಭಾರವಾಗಿದೆ.
ಎದುರಿಗೆ,
ಕಲ್ಲಿನಿಂದಲೇ ಎದ್ದು
ನಿಂತಿರುವ ಭವ್ಯವಾದ ಬಾಗಿಲು.
ಅದರೊಳಗಿನ ಶಿಲಾಮೂರ್ತಿಗಳಿಗೆ
ಹಸಿವಿನ ವಾಸನೆ ತಟ್ಟುವುದಿಲ್ಲ,
ಬಿರುಗಾಳಿ ಬೀಸುವವರೆಗೂ
ಕಿಟಕಿ ತೆರೆಯುವ ರೂಢಿಯೂ ಅವರಿಗಿಲ್ಲ.
ಹೊರಗೆ ಬೇರೊಂದು
ಬಿಸಿಲಿಗೆ ಒಣಗಿ ನರಳುತ್ತಿರುವುದು
ಕಿವುಡಾದ ಆ ಗೋಡೆಗಳಿಗೆ
ಕೇವಲ ಮತ್ತೊಂದು ಸುಂದರವಾದ ದೃಶ್ಯ!
ಮತ್ತು ನಾವು?
ಗಾಜಿನ ತೊಟ್ಟಿಯೊಳಗೆ
ಈಜಾಡುತ್ತಿರುವ ಬಣ್ಣದ ಮೀನುಗಳು!
ಹೊರಗೆ ಬದುಕು ಬತ್ತುತ್ತಿರುವುದನ್ನು
ಚೌಕಾಕಾರದ ಪರದೆಯ
ಮೂಲಕವೇ ನೋಡಿ ನಿಟ್ಟುಸಿರು ಬಿಡುವ
ಅತ್ಯಾಧುನಿಕ ಪ್ರೇಕ್ಷಕರು.
ನಮ್ಮ ತಟ್ಟೆಯ ಅನ್ನ
ಬಿಸಿಯಾಗಿರುವವರೆಗೆ,
ಬೀದಿಯಂಚಿನಲ್ಲಿ ಗುಡಿಸಲು ಸುಡುತ್ತಿದ್ದರೂ
ಅದೇ ಬೆಂಕಿಗೆ ಚಳಿ ಕಾಯಿಸಿಕೊಳ್ಳುವ
ವಿಕೃತ ಜಾಣತನ ನಮ್ಮದು.
ಮೆಲ್ಲಗೆ ಕಣ್ಣು ಮುಚ್ಚಿ ಆಲೋಚಿಸಿ…
ಆ ಹೆದ್ದಾರಿಯಲ್ಲಿ ಬಿರುಕು
ಬಿಡುತ್ತಿರುವುದು ಆ ಹಳೆಯ ಬೇರಲ್ಲ,
ನಮ್ಮೊಳಗಿನ ಕೊನೆಯ ತೇವ.
ನಾಳೆ, ಆ ಬೇರು ಸಂಪೂರ್ಣ
ಕರಕಲಾದ ಮೇಲೆ,
ಮರದ ನೆರಳು ಕೂಡ ಬೆಂಕಿಯಂತೆ
ಸುಡುತ್ತದೆಂಬ ಸತ್ಯ
ನಾವೇ ಕೆತ್ತಿಕೊಂಡಿರುವ
ಈ ಸುಂದರವಾದ ಶವಪೆಟ್ಟಿಗೆಗಳಿಗೆ
ಇನ್ನೂ ತಿಳಿದಿಲ್ಲ!






0 Comments