ಜೀವ ಹಾಗೂ ಜೀವನದ ಪ್ರಶ್ನೆ!

ಸಂಕೇತ ದತ್ತ

ಈ ದಿನಮಾನದಲ್ಲಿ ಜೀವ ಭಯದಿಂದ ಜೀವವನ್ನು ಮುಷ್ಟಿಯಲ್ಲಿಟ್ಟುಕೊಂಡು ಜೀವನ ಮಾಡಬೇಕಿದೆ. ಕಾಣದ ರೋಗದಿಂದ ಮುಕ್ತರಾಗಲು ಮನೆಯಲ್ಲೇ ಮುದುರಿ ಮೂಲೆ ಸೇರಬೇಕಾಗಿದೆ. ಉಳ್ಳವರು ಇದ್ದುದರಲ್ಲೇ ಹೊಟ್ಟೆ ಹೊರೆಯಬಹುದು. ಟೈಮ್ ಪಾಸ್ ಗೆ ವಿಧವಿಧದ ಭಕ್ಷ್ಯ ಮಾಡಿ ತಿನ್ನಬಹುದು. ಇಲ್ಲದವರ ಪಾಡೇನು? ಎರಡ್ಹೊತ್ತಿಗೂ ತತ್ವಾರ!

ಈ ಕಳ್ಳಾಟ ಹೂಡುವ ಕಾಯಿಲೆ ಯಾವಾಗ, ಎಲ್ಲಿಂದ, ಹೇಗೆ ಬರುತ್ತೆ ಅನ್ನೋದು ಗೊತ್ತಾಗದಂತೆ ಬಂದು ಒಕ್ಕರಿಸುತ್ತೆ! ಚೆನ್ನಾಗಿದ್ದವರನ್ನೂ ಬಗ್ಗು ಬಡಿದು ಗಂಟಲಲ್ಲಿ ಕೂತು ಪ್ರಾಣ ತೆಗೆಯುತ್ತೆ. ಅಷ್ಟಿಷ್ಟು ಸ್ಥೈರ್ಯವಂತರು ರೋಗ ನಿರೋಧಕ ಶಕ್ತಿ ಹೆಚ್ಚಿರುವವರು ಈ ಕೆಟ್ಟ ಕಾಯಿಲೆಯಿಂದ ಬಚಾವ್ ಆಗಬಹುದು‌. ಆದರೆ ಕೆಲವರಿಗೆ ಪಾಸಿಟೀವ್ ಎಂದು ತಿಳಿದಾಕ್ಷಣದಿಂದಲೇ ಭಯ-ಆತಂಕಗಳು ಕಾಡಿ ಅವರನ್ನು ಮತ್ತಷ್ಟು ನಿತ್ರಾಣರನ್ನಾಗಿಸುತ್ತೆ.

ಕೆಲವೊಮ್ಮೆ ಉಸಿರಾಟದ ತೊಂದರೆ ಮಾಡಿ ಉಸಿರು ನಿಲ್ಲುವ ಹಂತಕ್ಕೆ ತಲುಪಿಸುತ್ತೆ. ಎಂದೂ ಕೇಳರಿಯದಾ! ಕಂಡಿಲ್ಲದಾ ಈ ಕೆಟ್ಟ ರೋಗ ಇಡೀ ಮನುಕುಲವನ್ನೇ ತಲ್ಲಣಗೊಳಿಸಿದೆ. ಹಮ್ಮು-ಬಿಮ್ಮುಗಳಿಂದ ತನ್ನ ಸಮಾನರು ಯಾರೂ ಇಲ್ಲವೆಂದು ಬೀಗುತ್ತಿದ್ದ, ಚಂದ್ರಯಾನ, ಮಂಗಳಯಾನಗಳೆಂದು ಅಲ್ಲೂ ಅಡಿ ಇಟ್ಟ ಮಾನವ ಈಗ ತನ್ನ ಮನೆಯ ಹೊಸ್ತಿಲಿಂದ ಒಂದು ಹೆಜ್ಜೆಯನ್ನೂ ಆಚೆ ಇಡದಂತೆ ಮಾಡಿದೆ ಈ ಕಾಣದ ಅಣು, ವೈರಸ್! 

ವಿಜ್ಞಾನದಲ್ಲಿ ಸಾಕಷ್ಟು ಪಳಗಿದ ಮಾನವ ತನ್ನಷ್ಟಕ್ಕೆ ತಾನು ನೆಮ್ಮದಿಯಿಂದ ಉಸಿರಾಡಲು ಆಗದ ಪರಿಸ್ಥಿತಿಗೆ ತಲುಪಿದ್ದಾನೆ. ಪ್ರಾಣವಾಯವನ್ನು ದುಬಾರಿ ಬೆಲೆ ತೆತ್ತು ಪ್ರಾಣ ಉಳಿಸಿಕೊಳ್ಳುತ್ತಿದ್ದಾನೆ. ಶತಮಾನಗಳಿಂದ ಉಚಿತ ಪ್ರಾಣವಾಯುವನ್ನು ಕೊಟ್ಟ ನಿಸರ್ಗದ ಮಹತ್ವ ಈಗ ಎಲ್ಲರಿಗೂ ತಿಳಿಯುತ್ತಿದೆ. ಹತ್ತಿಪ್ಪತ್ತು ದಿನಗಳ ಕೃತಕ ಪ್ರಾಣವಾಯುವಿಗೆ ಲಕ್ಷಾಂತರ ಹಣ ಖರ್ಚು ಮಾಡುವ ಕರುಣಾಜನಕ ಸ್ಥಿತಿಯಲ್ಲಿದ್ದು ನಾವೀಗ ದಿನಗಣನೆ ಮಾಡುವಂತಾಗಿದೆ.

ಉಸಿರಾಟದ ತೊಂದರೆ ಉಂಟಾದರೆ ಬೆಡ್ ಗಳ ಬೇಟೆ ಆರಂಭ. ಪಾಸಿಟೀವ್ ಹಣೆಪಟ್ಟಿ ಹೊತ್ತ ರೋಗಿ ಮನೆಯಿಂದ ಹೊರ ನಡೆವಾಗ ಮನೆಯಲ್ಲಿನ ಎಲ್ಲಾ ದೇವರ, ಹಿರಿಯರ ಫೋಟೋಗಳಿಗೆ ತಮ್ಮನ್ನು ಬದುಕಿಸು ಎಂದು ಕೋರಿ ಹೊರ ನಡೆಯುತ್ತಾರೆ. ಅವರ ಅದೃಷ್ಟ ಚೆನ್ನಾಗಿದ್ದು ಬೆಡ್, ಸಿಕ್ಕಿ, ಸರಿಯಾದ ಶುಶ್ರೂಷೆ ದಕ್ಕಿದಲ್ಲಿ ಅವರು ಕ್ಷೇಮವಾಗಿ ಆರೋಗ್ಯವಾಗಿ ಮನೆ ಸೇರಿ ಅವೇ ಫೋಟೋಗಳಿಗೆ ಕೃತಜ್ಞತೆಯಿಂದ ಕೈ ಮುಗಿದು ಬದುಕುತ್ತಾರೆ. ಬೆಡ್, ಸಿಕ್ಕರೂ ಸರಿಯಾದ ಸಮಯಕ್ಕೆ ಸರಿಯಾದ ಶುಶ್ರೂಷೆ ಸಿಗದೇ, ಉಸಿರಾಟದ ತೊಂದರೆಯಾದಲ್ಲಿ ಸರಿಯಾದ ಸಮಯಕ್ಕೆ ಪ್ರಾಣವಾಯು ಸಿಗದೇ ಹೋದಲ್ಲಿ ಪ್ರಾಣ ಹೋಗಿ ಮನೆಯ ಹಿರಿಯರ ಫೋಟೋ ಜತೆ ತಾವೂ ಫೋಟೋ ಆಗ್ತಾರೆ.
ಯಾವುದೂ ನಮ್ ಕೈಲಿಲ್ಲಾ ಎನ್ನುವ ಹಂತಕ್ಕೆ ಇಡೀ ಸಮಾಜ ಬಂದು ನಿಂತಿದೆ.

ಆಸ್ಪತ್ರೆಗೆ ದಾಖಲಾದ  ರೋಗಿಯ ಚಪ್ಪಲಿಗಳು ಆಸ್ಪತ್ರೆಯ ಹೊರಗಿನ ಚಪ್ಪಲಿ ಗೂಡಲ್ಲಿ ಮೂಲೆ ಸೇರುತ್ವೆ. ತನ್ನ ಒಡೆಯನ ಪಾದಗಳಿಗಾಗಿ ಕಾದು ಕೂರುತ್ವೆ. ರೋಗಿಯ ಸಂಬಂಧಿಕರ ಹಾಗೂ ಗೆಳೆಯರಷ್ಟೇ ಆತಂಕದಲ್ಲಿ ಇರುವುದಲ್ಲಾ ಈ ಚಪ್ಪಲಿಗಳು ದಿನಗಣನೆ ಮಾಡುತ್ತಾ ಇರುತ್ವೆ.
ಅದೂ ಸರಿ, ಜೋಡಿ ಕೂತು ಒಂದಕ್ಕೆ ಇನ್ನೊಂದು ಸಮಾಧಾನ ಮಾಡಬಹುದಾ ಎಂದರೆ ಅದಕ್ಕೂ ಅವಕಾಶವಿಲ್ಲ.

ದಿನವೂ ಬಂದು ಬೀಳುವ ಜೋಡಿ ಜೋಡುಗಳ ಭರಾಟೆಯಲ್ಲಿ ಅವು ದಿಕ್ಕಾಪಾಲಾಗಿ ದಿಕ್ಕಿಗೊಂದರಂತೆ ಅನಾಥವಾಗಿ ಒಂಟೊಂಟಿಯಾಗಿ ಬಿದ್ದು ಗೋಳಾಡ್ತಾ ಇರುತ್ವೆ! ದಿನವೂ ಹೊಸ ಚಪ್ಪಲಿಗಳು ಸೇರ್ಪಡೆಯಾಗುತ್ವೆ. ಆದರೆ ಹೊರ ನಡೆವ ಚಪ್ಪಲಿಗಳು ಮಾತ್ರ ವಿರಳ. ಪಾದಗಳ ಊರಿ ಹೊರ ನಡೆಯುವವರು ಅಪರೂಪ! ಯಾರದೋ ಭುಜದ ಆಸರೆಯಲ್ಲೋ, ವ್ಹೀಲ್ ಚೇರನಲ್ಲೋ, ಸ್ರೆಚರ್ನಲ್ಲೋ ಮನೆಗೋ, ಮಸಣಕೋ ಯಾತ್ರೆ ಕೈಗೊಳ್ಳುತ್ತಾರೆ. ಹೀಗಿದ್ದಾಗ ಆಸ್ಪತ್ರೆಯವರೆಗೂ ಬಂದು ನಿಂತು ಹೋದ ಚಪ್ಪಲಿಗಳಿಗೆ ಮುಕ್ತಿ ಎಲ್ಲಿ? ನಡೆಯುವವರಿಗೆ ಚಪ್ಪಲಿಗಳು ಬೇಕು. ಹೆಗಲುಗಳ ಆಸರೆಯಲ್ಲಿ ಇರುವವರಿಗೆ ಚಪ್ಪಲಿ ಏಕೆ ಬೇಕು?

ಗುಡಿಯ ಮುಂದೆ ಬಿಟ್ಟ ಪಾಪೋಸು ಮಾಯ, ಆಸ್ಪತ್ರೆಯ ಮುಂದೆ ಬಿಟ್ಟ ಚಪ್ಪಲಿಗಳು ಅಲ್ಲೇ ಇರುತ್ವೆ, ಆದರೆ ಚಪ್ಪಲಿಯ ಒಡೆಯನೇ ಮಾಯ!ಮುಂಬಾಗಿಲಿಂದ ಒಳಗ್ಹೋದವನು ಹಿಂಬಾಗಿಲಿಂದ ಕಾಣೆಯಾಗ್ತಾನೆ! ಕಾಣದ ಲೋಕ ಸೇರ್ತಾನೆ! ಕಾಣೆಯಾದ ರೋಗಿಯ ಪರಿಕರಗಳು ಅನಾಥವಾಗುತ್ತೆ! ಚಪ್ಪಲಿಯಂತೆ, ಫೇಸ್ಬುಕ್, ಟ್ವೀಟರ್, ಇನ್ಸ್ಟಾಗ್ರಾಮ್ಗಳ ಅಕೌಂಟ್ಗಳೂ ಕೂಡ! ಜೀವ ಹಾಗೂ ಜೀವನ ಉಳಿಯಬೇಕಿದ್ದರೆ ಚಪ್ಪಲಿಗಳನ್ನು ಮನೆಯ ಚಪ್ಪಲಿ ಗೂಡಿಂದ ಹೊರ ತೆಗೆಯದಂತೆ ಭದ್ರಪಡಿಸಿ! ಒಂದ್ಹೊತ್ತು ತಿಂದರೂ ಚಿಂತೆಯಿಲ್ಲ. ಕ್ಷೇಮದಿಂದ, ನೆಮ್ಮದಿಯಿಂದ ಮನೆಯಲ್ಲಿರೋಣ.

ಪ್ರತಿಯೊಬ್ಬರೂ ಕ್ಷೇಮದಿಂದ ಮನೆಯಲ್ಲೇ ಇದ್ದರೆ, ಯಾರೂ ಅನಾವಶ್ಯಕವಾಗಿ ಹೊರ ಹೋಗದಿದ್ದರೆ ನಮ್ಮ ದೇಶವೂ ಕ್ಷೇಮವಾಗಿರುತ್ತೆ! ಕರೋನಾ ಮುಕ್ತವಾಗುತ್ತೆ! ಸ್ವಾರ್ಥದಲ್ಲಿ ನಿಸ್ವಾರ್ಥ ಸೇವೆಯೂ ಅಡಗಿದೆ. ಮನೆಯೇ ಮಂತ್ರಾಲಯ ಮಾಸ್ಕೇ ಶುಭ್ರ ಮಡಿ ವಸ್ತ್ರ!

‍ಲೇಖಕರು Avadhi

May 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: