ದೇವತೆ ಮತ್ತೆ ಹೊರಟಳು ಸ್ವರ್ಗದತ್ತ…

ಸುಮಾ ಕಂಚೀಪಾಲ್

ಪುಟ್ಟ ಕರುವಾಗಿ ಪುಟಿಯುತ್ತಾ ಆಡುತ್ತಾ ಬೆಳೆದು ಮೆಂದು ಇರುವ ಹಸುವೊಂದು ಇಂದು ಮೈಕೊರಟು ಮಾಡಿ ಉಸಿರ ಏರಿಳಿತಗಳಿಲ್ಲದೆ ನೆಲದ ಮೇಲೆ ಮಲಗಿಯೇ ಇದೆ.! ಕೆಚ್ಚಲು ತುಂಬಿ ಸುರಿವ ಹಾಲು ಕೊನೆಯ ಉಸಿರಲ್ಲೂ ಚಿಮ್ಮಿಸಿ ಸುಮ್ಮನಾಗಿದೆ. ಈಗಲೂ ನಾವು ಹಾಲುಂಡ ಆ ತಾಯಿ ಸ್ವರ್ಗದ ಬಾಗಿಲೆಡೆಗೆ ಬಾಲ ಬೀಸಿ ನಡೆಯುತ್ತಿದೆ ಎಂದರೆ ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಉಳಿದಿರಲಿಲ್ಲ.

ಅಮ್ಮ ಅಕ್ಕರೆಯಿಂದ ಬೆಳೆಸಿದ ಮುದ್ದಿನ ಕರು. ತಮ್ಮ ಆಗಾಗ ಚಿಕ್ಕ ಕೊಂಬು ಹಿಡಿದು ದೊಡ್ಡ ಯುದ್ದವನ್ನೇ ಮಾಡಿದ್ದು ಆ ಹಸುವಿನೊಂದಿಗೆ, ಎಳೆಹುಲ್ಲಿನ ಚಿಗುರನ್ನಷ್ಟೇ ಅಜ್ಜ ಕೊಯ್ದು ತಿನ್ನಿಸಿ ಬೆಳೆಸಿದ್ದು ಇದೇ ಕರುವನ್ನು. ಬುಟ್ಟಿ ಹಿಂಡಿ ಕೊಟ್ಟು ಅಪ್ಪ ಹಾಲು ಹಿಂಡಿದ್ದು ಇದೇ ಹಸುವಿನದು. ಬೇರೆಯವರಿಗೆ ಹತ್ತಿರ ಸುಳಿಯಲು ಭಯ ಹುಟ್ಟುವಷ್ಟು ಧೈತ್ಯವಾಗಿ ಬೆಳೆದಿತ್ತು ಇದೇ ಹಸು. ಎದೆಗೆ ಚುಚ್ಚಿದ ಮುಳ್ಳು ಒಳಗಡೆಯೇ ಮುರಿದಂತೆ ಮನದ ನೋವು.

ಒಂದು ವಾರದಿಂದ ಹಿಂದೆ ಏಕೋ ಒಂದು ದಿನ ಮಲಗಿದ ಹಸು ಏಳಲೇ ಇಲ್ಲ. ಕಣ್ಣುಗಳಲ್ಲೇ ತನಗೆ ಏನೋ ಆಗಿದೆ ಎಂದು ಸಣ್ಣದಾಗಿ ಹೇಳುತ್ತಿದ್ದ ಅವಳ ಮಾತು ಮೊದಲು ತಿಳಿದದ್ದು ಅಮ್ಮನಿಗೆ. ಇಲ್ಲ ಸಂಜೆಯಾದರೂ ಹುಲ್ಲು, ನೀರು, ಅವಳಿಷ್ಟದ ಬಾಳೆ ಎಲೆ ಯಾವುದನ್ನೂ ತಿನ್ನುತ್ತಿಲ್ಲ ಹಾಲು ಕರೆಯಬೇಕೆಂದು ಹತ್ತಿರ ಹೋದರು ಏಳುವ ಬಲುಮೆ ಅವಳಲ್ಲಿರಲಿಲ್ಲ. ಅಪ್ಪ ತಡಮಾಡಲಿಲ್ಲ ‘ಡಾಕ್ಟರ್ ಒಮ್ಮೆ ಬಂದು ನೋಡಿ ಎಂದಿಗೂ ಚುರುಕಾಗಿಯೇ ಇರುತ್ತಿದ್ದ ನಮ್ನ ಹಸುವಿಗೆ ಏನೋ ಆಗಿದೆ’ ಎಂದು ಪೋನಿಸಿದ ಮಾರನೆ ದಿನ ಬೆಳಿಗ್ಗೆ ಬಂದು ವಿಚಾರಿಸಿ ಔಷದಿ ನೀಡಿ ಹೋಗಿದ್ದಾಯ್ತು.

ಮರುದಿನವೂ ಯಾವ ಸುಧಾರಣೆಯೂ ಕಾಣುತ್ತಿಲ್ಲ. ಮನೆಯ ಮನುಷ್ಯರಿಗೆ ಹುಶಾರು ತಪ್ಪಿದರೆ ಎಷ್ಡು ಕಳವಳವೋ ಅದಕ್ಕಿಂತ ಹೆಚ್ಚಿನ ಆತಂಕ ನಮ್ಮೆಲ್ಲರದು. ಯಾಕೆ ಹೇಳಿ!? ನಾವಾದರೆ ಮಾತಿನಲ್ಲಾದರೂ ನಮಗಾಗುತ್ತಿರುವ ತೊಂದರೆಯನ್ನು ಹೇಳಿಕೊಳ್ಳುವ ಅವಕಾಶವನ್ನು ದೇವರು ಒದಗಿಸಿದ್ದಾನೆ. ಅವಳಾದರೋ ಮೂಕ ಪ್ರಾಣಿ. ರಾತ್ರಿ ನಿದ್ದೆ ಬಾರದೆ ಅಪ್ಪ ಮನದಲ್ಲಿ ಅದೆಷ್ಟು ವಿಚಾರ ಮಾಡಿದರೋ ಏನೋ.

ನಮ್ಮ ಜೀವನದ ಮುಖ್ಯ ಆಧಾರವೇ ಅವಳಾಗಿದ್ದಾಗ ಅವಳನ್ನು ಕಳೆದುಕೊಳ್ಳುವ ಭಯವನ್ನು ನೆನೆಯಲೂ ಸಾಧ್ಯವಿಲ್ಲದ ಪರಿಸ್ಥಿತಿ ನಮ್ಮದಾಗಿತ್ತು. ನಾಕಾರು ವೈದ್ಯರನ್ನು ದಿನ ದಿನವೂ ಕರೆಸಿ ಅದೆಷ್ಟು ಬಾರಿ ಸೂಜಿಗಳನ್ನು ಅವಳ ಚರ್ಮದ ಪದರಗಳಲ್ಲಿ ನುಸುಳಿಸಿ ನೋವು ಕೊಟ್ಟೆವೋ ಲೆಕ್ಕವಿಲ್ಲ. ‘ಇಲ್ಲಾ ಈ ಹಸು ಉಳಿಯುವ ಸಾಧ್ಯತೆ ತುಂಬಾ ಕಡಿಮೆ ಇದೆ’ ಎಂದು ವೈದ್ಯರು ಹೇಳಿದಾಗಲೇ ಅಪ್ಪನ ಹೊಟ್ಟೆಯಲ್ಲಿ ನೂರು ಕೊಳ್ಳಿದೆವ್ವಗಳ ಸಾಲು ಸುಳಿದಿತ್ತು. ಮನಸ್ಸು ಗಟ್ಟಿಮಾಡಿಕೊಂಡು ಪ್ರಯತ್ನ ಬಿಡದೆ ಇಲ್ಲ ಮತ್ತು ಬೇರೆ ವೈದ್ಯರಿದ್ದರೆ ತಿಳಿಸಿ ಹೇಗಾದರೂ ಮಾಡಿ ನಾನು ಉಳಿಸಿಕೊಳ್ಳುತ್ತೇನೆ ಎಂದು ಮತ್ತೂ ಒಂದು ಚಿಕ್ಕ ಭರವಸೆಯನ್ನು ಅವನಿಗವನೇ ತಂದು ಕೊಂಡ.

ಮೂರು ಹೊತ್ತು ಅವಳು ನರಳುವ ಮತ್ತು ಉಸಿರಾಡಲು ಪಡುತ್ತಿದ್ದ ಕಠೋಟ ನೋವು ತುಂಬಿದ ದನಿಗಳು ಕೊಟ್ಟಿಯ ಕಡೆಯಿಂದ ಅಲೆಯಾಗಿ ಮನೆಯನ್ನು ಸುಳಿಯುತ್ತಿತ್ತು. ಎರಡು ದಿನದಿಂದ ಅವಳೊಟ್ಟಿಗೆ ಅಪ್ಪ, ಅಮ್ಮನೂ ನಿಶ್ಚಿಂತರಾಗಿ ನಿದ್ದೆ ಮಾಡಿರಲಿಲ್ಲ. ಅಮ್ಮ ದಿನವೂ ಅವಳ ಮೈಗೆ ಬಿಸಿ ನೀರ ಶಾಖ ನೀಡಿ ತುಂಬಾ ಪ್ರೀತಿಯಿಂದ ‘ಶೋಭಾ ನಿನಗೆ ಏನಾಗುತ್ತಿದೆ!? ನಾನಿದ್ದೇನೆ’ ಎಂದು ಮೈಮೇಲೆ ಕೈಯಾಡಿಸುತ್ತಿದ್ದರೆ. ಅಮ್ಮನನ್ನೇ ದಿಟ್ಟಿಸಿ ನೋಡಿ ಇದಕ್ಕೂ ಹೆಚ್ಚು ನನ್ನಿಂದಾಗದು. ನಾನು ನಿಮ್ಮನ್ನು ಅಗಲುವ ಸಮಯ ಬಂದಂತಿದೆ ಎಂದು ಹೇಳಿದ್ದು ಅಮ್ಮನಿಗೂ ತಿಳಿಯುತ್ತಿತ್ತು ಆದರೂ ಅವಳ ಪಕ್ಕ ಕುಳಿತು ಸಮಾಧಾನ ಮಾಡುತ್ತಿದ್ದರು. ಏಳಲು ಪ್ರಯತ್ನಿಸುತ್ತಿದ್ದ ಅವಳನ್ನು ಯಂತ್ರದ ಮೂಲಕ ಎತ್ತಿ ನಿಲ್ಲಿಸುವ ಪ್ರಯತ್ನವೂ ನಡೆಯಿತು. ಬದುಕ ಬೇಕು ಎದ್ದು ನಿಲ್ಲಬೇಕೆಂಬ ಅವಳ ಬಯಕೆಯೂ ಏಳುವಾಗ ಅವಳ ಮೊಣಕಾಲಿಗಾದ ಗಾಯವೇ ಸಾರುತ್ತಿತ್ತು.

ಏಳು ಬಾರಿ ಬೇರೆ ಬೇರೆ ವೈದ್ಯರನ್ನು ತರಿಸಿದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಯಸ್ಸಾದ ಹಸುವಲ್ಲ ಹುಟ್ಟಿ ಐದುವರ್ಷವಷ್ಟೇ ಆಗಿತ್ತು. ತಮ್ಮನಿಗೂ ಅವಳೆಂದರೆ ವಿಶೇಷವಾದ ಒಲವಿತ್ತು ಯಾಕೆಂದರೆ ತಿಂಗಳಿದು ಐದಾರು ಬಾರಿ ಕುಣಿದು ಕುಣಿದು ಕುತ್ತಿಗೆಯ ಹಗ್ಗ ಬಿಡಿಸಿಕೊಂಡು ಓಡುತ್ತಿದ್ದ ಅವಳ ದೈತ್ಯಕಾಯವನ್ನು ಉಪಾಯಮಾಡಿ ಹಿಡಿದು ತಂದು ಅಶ್ವಮೇಧದ ಕುದುರೆ ಕಟ್ಟಿದಷ್ಟು ಖುಷಿ ಪಡುತ್ತಿದ್ದ. ಅವಳೊಟ್ಟಿಗೆ ಅದನ್ನೇ ಮಾತನಾಡಿ ನಗುತ್ತಿದ್ದ. ಯಾವದಕ್ಕೂ ಕರಗದ ಅವನ ಮನಸ್ಸು ಇವಳ ನರಳಾಟಕ್ಕೆ ತೀರಾ ಕುಂದಿ ಹೋಗಿತ್ತು.

ಕೊನೆಯ ದಿನದಲ್ಲಿ ಅವಳ ಶರೀರದ ಬಾಗಗಳು ಬಿರುಕು ಬಿಡತೊಡಗಿದ್ದವು. ಗಡ್ಡೆಯಂತಾಗಿದ್ದವು. ಕೆಚ್ಚಲು ತುಂಬಾ ಭಾರವಾಗಿದ್ದವು, ಅಲ್ಲಲ್ಲಿ ಗಾಯಗಳು ಔಷಧಿಯ ಪರಿಣಾಮವಾಗಿ ಬಾವು ಬಂದಿತ್ತು. ಪದೇ ಪದೇ ಅವಳು ಬದುಕುವುದಿಲ್ಲ ಎಂಬ ಭಾವ ದೃಡವಾಯ್ತು. ಹೇಗಾದರೂ ಸಾಯುವವಳು ಈ ಎಲ್ಲ ನೋವುಗಳಿಂದ ಬೇಗ ಮುಕ್ತಿ ಹೊಂದಿ ಬೇರೆ ದಾರಿ ಹಿಡಿಯಲಿ ಎಂದು ಕೊನೆಗೆ ನಾವೇ ಬಯಸುವ ಸ್ಥಿತಿಯಲ್ಲಿ ಅವಳು ಇಂದು ಉಸಿರು ನಿಲ್ಲಿಸಿದ್ದಾಳೆ.

ಏಳು ಜನ ಸೇರಿದರು ಎತ್ತಲಾಗದ ಅವಳ ದೈತ್ಯ ದೇಹವನ್ನು ಅಂತ್ಯಸಂಸ್ಕಾರಕ್ಕಾ ಎಳೆದುಕೊಂಡು ಹೋಗುವ ಕಾಲಕ್ಕೆ ಅಪ್ಪನ ಮನಸ್ಸು ಅದೆಷ್ಟು ಸಹಸ್ರ ಚೂರುಗಳಾಗಿ ಒಡೆದವೆಂದು ಊಹಿಸಲು ನಮಗೆ ಸಾದ್ಯವಾಗುವುದಿಲ್ಲ. ಸದಾ ಜೊತೆಯಾಗಿರುತ್ತಿದ್ದ ಅಂಬಾ ಎನ್ನುವ ಭಾಷೆಯಲ್ಲಿ ಮಾತನಾಡುತ್ತಿದ್ದ ಉಳಿದ ಹಸುಗಳಿಗೆ ಆ ದೃಷ್ಯದ ಅರಿವಾಗಿರಬಹುದು ಹಗ್ಗ ಹರಿಯುವಂತೆ ಕುಪ್ಪಳಿಸಿ ಅಂಬಾ, ಅಂಬಾ, ಎಂದು ಎಣಿಸಲಾರದಷ್ಟು ಬಾರಿ ಕೂಗಿದವು.

ಮಾತೂ ಬಾರದ ಕಣ್ಣೀರೂ ಸುರಿಯದ ಒಳನೋವು ಅಪ್ಪನಿದಾದರೆ, ಈ ಯಾವ ದೃಷ್ಯವನ್ನೂ ನೋಡುವ ಮನಸ್ಸು ಮಾಡದ ಅಮ್ಮ ಇನ್ನೊಂದು ಕಡೆ. ಹಗ್ಗ ತಪ್ಪಿಸಿಕೊಂಡಾಗ ಅವಳನ್ನು ಮಣಿಸುತ್ತಿದ್ದ ತಮ್ಮನ್ನು ಇಂದು ಅವಳನ್ನು ಮಣ್ಣಿನ ಗುಣಿಯೆಡೆಗೆ ಎಳೆಯುತ್ತಿದ್ದಾನೆ. ಅವನಿಗೂ ಅನಿಸಿಯೇ ಅನಿಸಿರುತ್ತದೆ ‘ಒಮ್ಮೆ ಎದ್ದು ಓಡಿಬಿಡು ದಯವಿಟ್ಟು ಮತ್ತೆ ಹಿಡಿಯುತ್ತೇನೆ’ ಎಂದು ಬಲಗೈಯ ಅಂಗಿ ತೋಳುಗಳು ತೊಯ್ಯವಷ್ಟು ಅವನು ಕರಗಿದ್ದಾನೆ. ದೂರದ ಊರಲ್ಲಿರುವ ನನಗೆ ಕೊನೆಪಕ್ಷ ಅವಳನ್ನು ನೋಡುವ ಕನಿಷ್ಠ ಭಾಗ್ಯವೂ ಸಿಗಲಿಲ್ಲ.

‍ಲೇಖಕರು Avadhi

May 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: