ಜೀವನದ ಪ್ರತೀ ಕ್ಷಣ ಹೋರಾಟ..

ಧನಂಜಯ್.ಎನ್.

ಯುರೋಪಿಯನ್ ಥಿಯೇಟರ್ ಇಂದ ಒಂದು ಇಂಡಿಯನ್ ಸ್ಟೋರಿನ ನೋಡಿದ್ರೆ ಹೇಗಿರುತ್ತೆ.. ಯದ್ವಾ ತದ್ವಾ ಎಕ್ಸ್ ಪರಿಮೆಂಟ್‍‍‍‍ಗೆ ಒಳಗಾದ ಮೆದುಳು, ಒಂದು ಅರ್ಧ ಘಂಟೆ ಕೆಲಸ ಮಾಡದೇ ಉಳಿದುಕೊಂಡು, ಸಣ್ಣದೊಂದು ಟಾನಿಕ್ ಬಾಟಲ್ ಹಿಡಿಯಲೂ ಶಕ್ತಿ ಇಲ್ಲದ ಕೈಗಳನ್ನ ನೆಚ್ಚಿ ಕೂತ ಅನುಭವ.

ನಾನು ಈ ನಾಟಕ ನೋಡಿ ಹೊರ ಬಂದ ಮೇಲೆಯೇ ಇದರ ಮೂಲ ಹುಡುಕುವ ಪ್ರಯತ್ನ ಮಾಡಿದ್ದು. ಅರುಂಧತಿ ರಾಯ್ ಅವರ ‘The god of small things’ ಅನ್ನೋ ಕಾದಂಬರಿ ಇಂದ ಕಲೆಕ್ಟ್ ಮಾಡಿದ್ದೇವೆ ಅಂತ ನಾಟಕದವರೇ ಇದರ ಸಣ್ಣ ಪರಿಚಯಕ್ಕಾಗಿ ಚಿಕ್ಕ ಬುಕ್ ಮಾಡಿ ಕೈಗೆ ಕೊಟ್ಟಿದ್ದರೂ.. ಓದದಲೇ ಒಳಗಡೆ ಹೋಗಿ ಕೂತಿದ್ದು ನನ್ನಂಥ ಸಾಮಾನ್ಯ ಪ್ರೇಕ್ಷಕನ ತಪ್ಪು!. ಒಂದು ಸಣ್ಣ ಪ್ರವೇಶಕ್ಕೂ ನಾಟಕದ ಅರ್ಧ ಭಾಗದವರೆಗೂ ಕಾಯಿಸಿದ್ದು ಇಡೀ ತಂಡದ ತಪ್ಪು. ಇರಲಿ, ಕಾದಂಬರಿ ಓದದಲೇ ನಾಟಕ ನನಗೆಷ್ಟು ದಕ್ಕಿದೆ ಎಂಬುದು ಮುಖ್ಯ ಈಗ.

ಒಂದಷ್ಟು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ, ಈ ಸಮಾಜ ಸೃಷ್ಟಿಸಿದ ಕೃತಕ ಗೋಡೆಗಳನ್ನ ಒಡೆದು, ನೈಸರ್ಗಿಕ ಭೂ ಪ್ರದೇಶವೊಂದರ ಹೊರಮೈ ಸೌಂದರ್ಯ ಸವಿಯಲು, ನಮಗೆ ಖಂಡಿತಾ ಸಾಧ್ಯವಿಲ್ಲ.
ಈ ಸನ್ನಿವೇಶವನ್ನು ಬರೀ ನಾಲ್ಕು ಸಾಲಿನಲ್ಲಿ ಹೀಗೆ ಹೇಳಿ ಮುಗಿಸಿದರೆ ಅರ್ಥವಾಗುತ್ತದೆಯೇ, ಅದೂ ಕೂಡಾ ಇಲ್ಲ!. ಹಾಗಿದ್ರೆ ಅದಕ್ಕೊಂದು ಕಲ್ಪನೆ, ಕಥೆಯ ಅವಶ್ಯಕತೆ ಇದೆ.
ಮಿತಿಯಿಲ್ಲದ ಕಲೆಗೆ ಇರುವ ಶಕ್ತಿಯೇ ಅದು. ಅದರಲ್ಲೂ ಅದು abstract ( ಅಮೂರ್ತ )ರೂಪದಲ್ಲಿ ಸಿಕ್ಕರಂತೂ ಅದರ ಮಜವೇ ಬೇರೆ !! ಸಣ್ಣ ಸಣ್ಣದಕ್ಕೂ ದೊಡ್ಡ ಪ್ರತಿಧ್ವನಿ. ನಾವೆಲ್ಲಾ ತಾಳ್ಮೆಯಿಂದ ಕೂರಬೇಕು ಅಷ್ಟೇ.

ಒಬ್ಬಳು ಒಂಟಿ ಮಹಿಳೆ, ಇಬ್ಬರು ಟ್ವಿನ್ಸ್ ಮಕ್ಕಳ ಜೊತೆಗೆ ವಯಸ್ಸಿನ ಸಹಜ ಉಲ್ಲಾಸಗಳತ್ತಲೂ.. ಭಾರವಾದ ಸಮಾಜದ ಕಟ್ಟುಪಾಡುಗಳತ್ತಲೂ ಒಮ್ಮೆಲೇ ದೃಷ್ಟಿ ಹಾಯಿಸುತ್ತಿರಬೇಕು.
ಸಣ್ಣ-ಸಣ್ಣ ಸಂತೋಷಗಳನ್ನೂ ಸಹ, ಕದ್ದು ಮುಚ್ಚಿಯೇ ಪಡೆದುಕೊಳ್ಳಬೇಕು, ಆ ತೃಪ್ತಿಯಿಲ್ಲದ ಅತೃಪ್ತ ಸಮಾಧಾನಕ್ಕೂ ಒಬ್ಬ ಸಂಗಾತಿ ಬೇಕು. ಈ ಸವಾಲು ಬರೀ ನಾಲ್ಕು ಗೋಡೆಯ ಮಧ್ಯಕ್ಕೆ ಮಾತ್ರ ಸೀಮಿತವಾಗುತ್ತದೆಯೇ ಒಮ್ಮೆ ಯೋಚಿಸಿ ನೋಡಿ!.

ನಮ್ಮಗಳ ನಡುವೆ, ಈ ಹಿಂದಿನಿಂದಲೂ ಸಪರೇಟ್ ಆಗಿ ಕಡೆಗಣಿಸಿಕೊಳ್ಳುತ್ತಾ ಬಂದ ಒಂದು ವರ್ಗವಿದೆ. ನೇರವಾಗಿ ಹೇಳದಿದ್ದರೂ ಅರ್ಥ ಮಾಡಿಕೊಳ್ಳಿ. ಪ್ರತೀ ಕ್ಷಣವೂ ಹೋರಾಡಿಕೊಂಡೇ ಅಂಥಾ ವಾತಾವರಣದಲ್ಲಿ ಜೀವಿಸುತ್ತಾ ಬಂದ ಮನುಷ್ಯ ತನ್ನ ಖುಷಿಗಳನ್ನು ಎಲ್ಲೆಲ್ಲಿ ಕಂಡುಕೊಂಡಿರುತ್ತಾನೆ?. ಹರಿಯೋ ನೀರು, ರಾತ್ರಿ ಕಾಣುವ ಪೂರ್ಣಚಂದ್ರನ ನಗು, ಹಕ್ಕಿಗಳ ಚಿಲಿಪಿಲಿ, ಕೆಲವೊಮ್ಮೆ ತಣ್ಣನೆಯೂ ಕೆಲವೊಮ್ಮೆ ಕೆಂಡದಂತೆಯೂ ಬೀಸುವ ಗಾಳಿ, ಇಷ್ಟೆಲ್ಲಾ ಇತರೆಗಳನ್ನು ಒಳಗೊಂಡ ಪ್ರಕೃತಿಯೊಂದಿಗೆ ಮಾತ್ರವೇ ಆತನ ಸಂತೋಷ.

ಗೋಡೆಗಳ ನಡುವೆ ಬಂಧಿಯಾದ ಆ ಹೆಣ್ಣನ್ನೂ, ಪ್ರಕೃತಿಯೊಂದಿಗೆ ಬೆರೆತು ನಲಿದಾಡಿದ ಈ ಗಂಡನ್ನೂ, ಅಮೂರ್ತ ಭಾವದಿಂದ ಕಂಡುಕೊಂಡ ಪ್ರೇಕ್ಷಕ ಎಷ್ಟರಮಟ್ಟಿಗೆ ಕಲ್ಪಿಸಿಕೊಳ್ಳಬಹುದು ಎಂಬುದು ಅವನ ಶಕ್ತಿಗೆ ಬಿಟ್ಟದ್ದು. ಸಮಾಜದ ವಿರೋಧಗಳ ನಡುವೆಯೂ ಈ ಎರಡೂ ರೂಪಕಗಳು ಒಂದಾಗುತ್ತವೆ, ಆ ತಪ್ಪಿಗೆ ಪ್ರಭುತ್ವದ ಶಕ್ತಿಯಿಂದ ಆ ಪ್ರಿಯಕರನ ಕೊಲೆಯೂ ಆಗುತ್ತದೆ.
ಥೇಟ್ ಶ್ರೀಗಂಧದ ಕಳ್ಳಸಾಗಣೆಯ ಆಸೆಗೆ ಕಾಡನ್ನು ಬಲಿ ಕೊಟ್ಟಂತೆ.

ಈ ಪ್ರಭುತ್ವದ ಲಿಂಕ್ ಅನ್ನು ಅರ್ಥ ಮಾಡಿಕೊಳ್ಳಲು ಒಂದು ಮೆಸೇಜ್ ಇದೆ. ಅರುಂಧತಿ ರಾಯ್ ಅವರ ಈ ಕಾದಂಬರಿಯನ್ನು ಕೇರಳದಲ್ಲಿ ಬ್ಯಾನ್ ಮಾಡಲಾಗಿತ್ತು. ಅದೂ ಕೂಡ ಒಂದು ಕಮ್ಯುನಿಸ್ಟ್ ಆಡಳಿತವಿರುವ ಸರ್ಕಾರದ ಆಡಳಿತವಿರುವಾಗಲೇ ಎಂಬುದನ್ನು ಗಮನಿಸಬೇಕು.

ನಿರ್ದೇಶಕರು “ಎಲ್ಲೋ ಜೋಗಪ್ಪ ನಿನ್ನರಮನೆ” ಎಂಬ ಕನ್ನಡ ಜನಪದವನ್ನೂ, ಮಲೆಯಾಳಿ ಭಾಷೆಯ ಒಂದು ಹಾಡನ್ನೂ, ಇತರೆ ಭಾರತ ದೇಶದ್ದಲ್ಲದ ಭಾಷೆಗಳನ್ನು ಬಳಸಿರುವ ಉದ್ದೇಶ,
ನಾವೆಲ್ಲರೂ ಈ ಕಥೆಗೆ ಹೊರಗಿನಿಂದ ಬಂದು ತೂರಿಕೊಂಡವರಲ್ಲ, ಬದಲಿಗೆ ಎಲ್ಲೆಡೆಯೂ ಸಲ್ಲುವಂಥ ಕಥೆ ಇದು ಎಂದು ತೋರಿಸಿಕೊಡಲು ಅನ್ನಿಸುತ್ತೆ.

Things can change in a day!. ಇದು ನಾಟಕದ ಒಂದು ಹಂತದಲ್ಲಿ ಬರುವ ಮಾತು, ಮುಂದೆ ಪಾತ್ರಗಳ ಬದುಕಿನಲ್ಲಿ ಬರುವ ಮುನ್ಸೂಚನೆಯಾಗಿಯೂ ಕಾಣುತ್ತದೆ. ಆ ಹೆಣ್ಣಿನ ಪ್ರಿಯಕರ ಸತ್ತು, ಆಕೆ ತನ್ನ ಬದುಕಿನ ಆಸೆಯೇ ಕಳೆದುಕೊಂಡು, ಮಕ್ಕಳ ಜೊತೆಗಿನ ಬದುಕು ಮತ್ತಷ್ಟು ಕಲಕಿ ಹೋಗುತ್ತದೆ ಹಾಗೂ ಸಮಾಜದ ಮೇಲಿನ ಸಿಟ್ಟು ರೇಜಿಗೆ ಹೆಚ್ಚುತ್ತದೆ. ಈ ಸನ್ನಿವೇಶವನ್ನು ವೀಕ್ಷಕರೆಡೆಗೆ ನೋಡುತ್ತಾ ಇರುವ ಹಾಗೆ ಮಾಡುವ ನಟರು ಅದ್ಭುತವಾಗಿ ತಲುಪಿಸಿದ್ದಾರೆ.

ಒಡಹುಟ್ಟಿದವರಿಬ್ಬರಲ್ಲಿ ಒಬ್ಬರನ್ನು ಬೇರೆಲ್ಲೋ ಕಳಿಸುವಾಗಿನ  ದೃಶ್ಯದಲ್ಲಿ , ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲಾಗದ ನೋವಿನ ಸನ್ನಿವೇಶ ಮಸ್ತ್. ಮೊದಲ ದೃಶ್ಯದಲ್ಲಿ ಭಾರ ಹೊತ್ತ ಅಮ್ಮನ ಹಾಗೆಯೇ ಕೊನೆ ಕೊನೆಗೆ ಮಗಳೂ ಬಾರಾ ಹೊತ್ತು ಹೋಗುವ, ಅವಳ ಸಹಜ ಉಡುಗೆ ಬಿಟ್ಟು ಅಮ್ಮನ ಹಾಗೆಯೇ ಬಟ್ಟೆ ಧರಿಸುವ ದೃಶ್ಯದಲ್ಲಿ ನಿರ್ದೇಶಕರ ಕೂಡಾ ಮಸ್ತ್ .

ಸಮಾಜ ಬಯಸುವ ಶಿಸ್ತು , ಬಿಗುಮಾನ, ಯಶಸ್ಸುಗಳು, ಹೇಗೆ ಮನುಷ್ಯರ ಬದುಕಿಗೆ ಕುಣಿಕೆಯಾಗಿ ಬದಲಾಗುತ್ತದೆ ಎಂದು ಮಾರ್ಮಿಕವಾಗಿ ತೋರಿಸಿದ್ದಾರೆ. ಆ ನಾಲಕ್ಕೂ ಜೀವಗಳು ಒಂದು ಸಣ್ಣ ಸಿಗರೇಟ್ ಹುಡುಕುವ, ಲೈಟರ್ ಬಳಸುವ ಸಣ್ಣ-ಸಣ್ಣ ಸಂಗತಿಗಳಲ್ಲಿ ಸಂತೋಷ ಹುಡುಕುವ ಬಗೆ ಮತ್ತು ಅವರೆಲ್ಲರ ಸಣ್ಣ ನಡೆಗಳನ್ನು (ಮೂಗು ಕೆರೆಯುವ, ಆಕಳಿಸುವ, ದಿಟ್ಟಿಸುವ ) ಸಮಾಜ ನೋಡುವ ಬಗೆ.. ಅವರೆಲ್ಲರ ಸಂತೋಷಗಳು ಎಲ್ಲಿ ಬಂಧಿಯಾಗಿವೆ ಎಂದು ಗಮನಿಸಬಹುದು.

ರಂಗದ ಮೇಲಿನ ಎಲ್ಲಾ ಪಾತ್ರಗಳನ್ನು, ಕೇವಲ ನಾಲ್ಕು ಜನರು ನಡೆಸಿಕೊಂಡು ಹೋಗುತ್ತಾರೆ. ಒಬ್ಬೊಬ್ಬರ ನಟನೆಯೂ ಚೆಂದ, ವೈಯಕ್ತಿಕವಾಗಿ ರಮಿತ್ ರಮೇಶ್ ಎಂಬ ಕೇರಳದಿಂದ ಬಂದ ನಟ , ತನ್ನ ಎಕ್ಸ್ ಪ್ರೆಷನ್ ಗಳಿಂದಲೇ ಮಿಕ್ಕವರಿಗಿಂತ ಹೆಚ್ಚಿಗೆ ಗಮನ ಸೆಳೆಯುತ್ತಾನೆ.

ಕೊನೆಗೆ, ಒಂದು ಒಪ್ಪಿತವಲ್ಲದ ಅಥವಾ ಸ್ವೀಕರಿಸಲು ಆಗದ ಅಂಶ ಅಂದ್ರೆ ಆ ಹುಡುಗಿ, ಧಮ್ ಹೊಡೆದುಕೊಂಡು ಸ್ಟೈಲ್ ಆಗಿ ‘ಇಂಡಿಯಾ ಈಸ್ ಫ್ರೀ ಕಂಟ್ರಿ’ ಅಂದು ಬಿಡುತ್ತಾಳೆ. ನಮ್ಮಗಳ ಮಟ್ಟಿಗಂತೂ ಇದು ಖಂಡಿತಾ ದೂರದ ಮಾತು (ನಿರ್ದೇಶಕರು ಇದನ್ನ ಯಾವ ರೀತಿಯಲ್ಲಿ ತೋರಿಸಿದ್ದಾರೋ ತಿಳಿಯದು). ಆ ನಾಲ್ಕು ಪಾತ್ರಗಳಲ್ಲಿ ಇಬ್ಬರು ಹೆಂಗಸರು ಇಬ್ಬರು ಗಂಡಸರು, ಒಂದೊಂದು ಪಾತ್ರವೂ ತನ್ನ ಬಟ್ಟೆಗಳನ್ನು ಕಳಚಿ ಮತ್ತೊಬ್ಬರ ಬಟ್ಟೆಯನ್ನು ಹಾಕಿಕೊಳ್ಳುವ ರೂಪಕ, ಕುವೆಂಪು ಅವರ ‘ಆಗು ನೀ ಅನಿಕೇತನ’ ಅನ್ನೋ ಸಾಲನ್ನು ನೆನಪಿಸುತ್ತೆ.

‍ಲೇಖಕರು avadhi

September 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: