ಸೇಡಿನ ರಾಜಕಾರಣವೂ.. ಜಾತಿ ಪರಾಕ್ರಮವೂ..

ಎನ್.ರವಿಕುಮಾರ್ ಟೆಲೆಕ್ಸ್

ಘಟನೆ 1: ಬಿಜೆಪಿಯ ಯಡಿಯೂರಪ್ಪ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ೨೦ ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಜೆಡಿಎಸ್‌‍ನ ಹೆಚ್.ಡಿ.ಕುಮಾರಸ್ವಾಮಿ ಅವರು ಒಪ್ಪಂದದಂತೆ ಮುಂದಿನ ೨೦ ತಿಂಗಳಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಬೆಂಬಲ ನೀಡದ ಪರಿಣಾಮ ಅಂದು ರಾಜ್ಯಾದ್ಯಂತ ಲಿಂಗಾಯಿತ/ವೀರಶೈವ ಮಠಾಧಿಪತಿಗಳು ಸೇರಿದಂತೆ ಇಡೀ ಲಿಂಗಾಯಿತ ಸಮುದಾಯ ಬೀದಿಗಿಳಿದು ಒಂದು ಹಂತದ ಉಗ್ರ ಹೋರಾಟವನ್ನೆ ನಡೆಸಿತು.

ಇಂತಹ ಅನುಕಂಪದ ಅಲೆಯಲ್ಲೆ ಮುಂದುವರೆದ ಭಾಗದಲ್ಲಿ ಸ್ವಂತ ಶಕ್ತಿಯ ಮೇಲೆ ಮುಖ್ಯಮಂತ್ರಿಯೂ ಆದ ಯಡಿಯೂರಪ್ಪ ಅವರು ಡಿನೋಟಿಫಿಕೇಶನ್ ಪ್ರಕರಣಗಳಲ್ಲಿ ಸಿಲುಕಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಯಿತು. ಇದರ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕೈವಾಡವಿದೆ. ಇದು ಲಿಂಗಾಯಿತ/ವೀರಶೈವ ಸಮಾಜಕ್ಕೆ ಆದ ರಾಜಕೀಯ ಅನ್ಯಾಯವೆಂದೆ ಕೂಗು ಕೇಳಿಬಂತು. ಇದಕ್ಕೆ ಪ್ರತಿಕಾರವೇ ಎಂಬಂತೆ ಲಿಂಗಾಯಿತ ಸಮುದಾಯ ಕಾಂಗ್ರೆಸ್ ವಿರುದ್ಧ ನಿಂತು ತನ್ನ ಸಮುದಾಯ ನಾಯಕನಿಗಾದ ಅನ್ಯಾಯವೆನೋ ಎಂಬಂತೆ ಸೇಡು ತೀರಿಸಿಕೊಳ್ಳುತ್ತಲೆ ಬಂತು. ಗಾಯಕ್ಕೆ ಉಪ್ಪು ಸವರಿದಂತೆ ಲಿಂಗಾಯಿತ ಧರ್ಮ ವಿಚಾರವೂ ಕಾಂಗ್ರೆಸ್‍ನ್ನು ಮಗ್ಗಲು ಮಲಗಿಸಿ ಬಿಟ್ಟಿತು.

ಘಟನೆ 2: ಒಕ್ಕಲಿಗ ಸಮಾಜದ ಎರಡು ಪರಸ್ಪರ ವಿರುದ್ಧ ದಿಕ್ಕಿನ ಬಲಿಷ್ಠ ಶಕ್ತಿ ಕೇಂದ್ರಗಳಿದ್ದಂತೆ ಪರಂಪರಾಗತವಾಗಿ ಬಡಿದಾಡಿಕೊಂಡು ಬಂದಿದ್ದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪರಸ್ಪರ ತಬ್ಬಿಕೊಂಡು, ವಿಜಯದ ಸಂಕೇತ ತೋರಿಸುತ್ತಾ ಒಗ್ಗಟ್ಟು ಪ್ರದರ್ಶಿಸಿ ಅಧಿಕಾರವನ್ನು ಹಂಚಿಕೊಂಡದ್ದು ಇಡೀ ಒಕ್ಕಲಿಗ ಸಮುದಾಯ ಲಿಂಗಾಯಿತ ಸಮುದಾಯದಷ್ಟೆ ಒಂದು ಬಿಂದುವಿಗೆ ಬಂದು ನಿಂತು ನಿಟ್ಟುಸಿರನ್ನು ಸಾಮಾನ್ಯ ಒಕ್ಕಲಿಗರು ಬಿಡುವಂತಾಯಿತು.

ಕಾಂಗ್ರೆಸ್‍ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರ ಮೇಲೆ ಅಕ್ರಮ ಸಂಪತ್ತು ಹೊಂದಿದ ಸಂಬಂಧ ಇ.ಡಿ ಬಂಧಿಸಿದೆ. ದೆಹಲಿಯ ಕರ್ನಾಟಕ ಭವನದಲ್ಲಿ ಸಿಕ್ಕ 8.5 ಕೋಟಿ ರೂ. ಹಣ, ಸೇರಿದಂತೆ ಶಿವಕುಮಾರ್ ಮತ್ತು ಅವರ ಆಪ್ತರ ಮನೆಗಳಲ್ಲಿ ನಡೆದ ಐಟಿ ರೇಡ್‍ಗಳಲ್ಲಿ ಸಿಕ್ಕಿಬಿದ್ದ ಕೋಟ್ಯಾಂತರ ರೂಪಾಯಿಗಳ ಆಸ್ತಿ-ಪಾಸ್ತಿಗೆ ಈಗ ಡಿಕೆಶಿ ಲೆಕ್ಕ ಕೊಡಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ ಅಥವಾ ರಾಜಕೀಯ ಭಾಷೆಯಲ್ಲೇ ಹೇಳುವುದಾದರೆ ಸಿಲುಕಿಸಲಾಗಿದೆ. ಇದನ್ನು ಖಂಡಿಸಿ ಒಕ್ಕಲಿಗ ಸಮುದಾಯ ಭಾರಿ ಸಂಖ್ಯೆಯಲ್ಲಿ ಬೀದಿಗಿಳಿದು ತಮ್ಮ ಶಕ್ತಿಯನ್ನು ಪ್ರದರ್ಶಿಸಿದೆ.

ಈ ಎರಡು ಘಟನೆಗಳ ಒಳಪದರವಾಗಲಿ ಹೊರಪದರವನ್ನಾಗಲಿ ಅವಲೋಕಿಸಿದಾಗ ರಾಜಕೀಯ ಸೇಡು. ಸಂಚುಗಳ ಆಚೆಗೂ ಎಲ್ಲವನ್ನೂ ದಕ್ಕಿಸಿಕೊಂಡು ಮೇಲೆಳುವುದು ದಟ್ಟವಾದ, ಬಲಿಷ್ಟವಾದ ಜಾತಿ ಮಾತ್ರ. ಎಂಬುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಾ ಹೋಗುತ್ತದೆ.

ಲಿಂಗಾಯಿತ ಸಮುದಾಯದ ಅನಭಿಷಕ್ತ ನಾಯಕ ಯಡಿಯೂರಪ್ಪ ಅವರು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕ್ಕಿದ್ದರು. ( ಚೆಕ್ ಮೂಲಕ ಲಂಚ ಪಡೆದ ದಾಖಲೆಗಳಿದ್ದದ್ದು ಬೇರೆ ಮಾತು) ಈಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವಿರುವಾಗ ಒಕ್ಕಲಿಗ ಸಮಾಜದ ಬಲಿಷ್ಠ ನಾಯಕ ಶಿವಕುಮಾರ್ ಕೂಡ ಅಕ್ರಮಗಳ ಆರೋಪಕ್ಕೆ  ತುತ್ತಾಗಿದ್ದಾರೆ. ಇದನ್ನು  ಹೊರಿಸುವುದು ರಾಜಕೀಯ ದಾಳವೂ ಇರಬಹುದು.

ಈ ಹೊತ್ತಿನ ರಾಜಕಾರಣದಲ್ಲಿ ಕೇಂದ್ರದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಹಿಡಿದ್ದಿದ್ದೇ ತಡ ಸೇಡಿನ ರಾಜಕಾರಣವನ್ನು ಮಾಡುತ್ತಿರುವುದು ಅಂಗೈ ಹುಣ್ಣಿನಷ್ಟೆ ಸ್ಪಷ್ಟ ಗೋಚರ. ಬಿಜೆಪಿ ಡಜನ್ ಗಟ್ಟಲೆ ನಾಯಕರುಗಳು ಸಾವಿರಾರು ಕೋಟಿ ರೂ.ಗಳ ಸಂಪತ್ತಿನ ಒಡೆಯರಾಗುತ್ತಿರುವುದು ಅಮಿತ್ ಶಾ-ಮೋದಿ ಜೋಡಿಗೆ ಕಾಣುತ್ತಿಲ್ಲ. ರಾಜಕೀಯ ಎದುರಾಳಿಗಳ ಅಕ್ರಮಗಳು, ಅಧಿಕಾರದಲ್ಲಿದ್ದಾಗ ಮಾಡಿದ ಅವ್ಯವಹಾರಗಳು ಮಾತ್ರವೆ ಕಾಣುತ್ತಿವೆ. ಅವುಗಳನ್ನುಹುಡುಕಿ ಹುಡುಕಿ ಜೈಲು ತುಂಬುವ ಕೆಲಸ ನಡೆದಿದೆ.

ಇಂತಹ ‘ಸೆಲೆಕ್ಟಿವ್ ಆಕ್ಷನ್’ ಗಳಿಂದಲೇ ಕೇಂದ್ರ ಸರ್ಕಾರ ರಾಜಕೀಯ ಸೇಡಿನ ಅಸ್ತ್ರ ಹೂಡುತ್ತಿದೆ ಎಂಬುದುನ್ನು  ಯಾವುದೇ ಅನುಮಾನವಿಲ್ಲದೆ ಹೇಳಿಬಿಡಬಹುದು. ಹಾಗಂತ ಸೇಡಿನ ರಾಜಕಾರಣ ಎಂಬ ಗುರಾಣಿಯನ್ನು ಅಡ್ಡವಿಟ್ಟುಕೊಂಡು ಭ್ರಷ್ಟರನ್ನು, ಅಕ್ರಮ ಕೂಟಗಳನ್ನು ರಕ್ಷಿಸಬೇಕೆ? ಅಥವಾ ಅದನ್ನು ಸಮರ್ಥಿಸಿಕೊಳ್ಳಬೇಕೆ? ಎಂಬ ಪ್ರಶ್ನೆಯೂ ನಮ್ಮ ಮುಂದೆ ಇದೆ.

ಭ್ರಷ್ಟಾಚಾರ ಎಂಬುದು ಜಾತ್ಯಾತೀತ, ಪಕ್ಷಾತೀತ ಸೋಂಕು. ಬಹುಶಃ ಭ್ರಷ್ಟಾಚಾರದ ವಿಷಯದಲ್ಲಿ ಇದುವರೆಗೂ ರೂಢಿಗೊಂಡು ಬಂದಿದ್ದ ರಾಜಕೀಯ ಪಕ್ಷಗಳ ನಡುವಿನ ಪರಸ್ಪರ ಒಪ್ಪಿತ ಒಡಂಬಡಿಕೆಯೊಂದನ್ನು ಅಧಿಕಾರ ರಾಜಕಾರಣವನ್ನು ಕಾಯ್ದಿಟ್ಟುಕೊಳ್ಳುವಲ್ಲಿ ಉಲ್ಲಂಘಿಸಲಾಗುತ್ತಿದೆಯೇ?  ಇಂತಹ ಉಲ್ಲಂಘನೆಯನ್ನು ಅಮಿತ್ ಶಾ ಮತ್ತು ಮೋದಿ ಎಂಬ ಕ್ಷುದ್ರ ರಾಜಕೀಯ ಮಹತ್ವಾಕಾಂಕ್ಷಿಗಳು ಪ್ರಜ್ಞಾಪೂರ್ವಕವಾಗಿಯೇ ಅಳವಡಿಸಿಕೊಂಡು ಹೆಜ್ಜೆ ಹಾಕುತ್ತಿದ್ದಾರೆಯೇ ಎಂಬುದನ್ನು ಬಿಜೆಪಿಯೂ ಪಡಸಾಲೆಗಳು ಪಿಸುಗುಡುವ ಸ್ಥಿತಿಯಲ್ಲಿಲ್ಲ.

ಅದೇನೆ ಇರಲಿ, ಇಲ್ಲಿ ಭ್ರಷ್ಟಾಚಾರದ ಆರೋಪ ರಾಜಕೀಯ ಸೇಡು ಎಂಬುದನ್ನು ಹೊರಗಿಟ್ಟು ನೋಡುವಾಗ ಭ್ರಷ್ಟಾಚಾರ, ಅಕ್ರಮ, ಅನೈತಿಕತೆ ಎಂಬುದನ್ನು ಜಾತಿ ಬಲದ ಆಧಾರದಲ್ಲಿ ಸಕ್ರಮಗೊಳಿಸುವ ಅಥವಾ ಒಪ್ಪಿತ ಸಾಮಾನ್ಯ ಸಂಗತಿ ಎಂಬಂತೆಯೂ ಅವುಗಳು  ಬಲಿಷ್ಟ ಜಾತಿಗಳ ನಾಯಕತ್ವದ ಗುಣಗಳೋ ಎಂಬಂತೆಯೂ ನಿರ್ಧಾರವಾಗುತ್ತಿರುವುದು ದೊಡ್ಡ ವಿಪರ್ಯಾಸ.

ಜಾತಿ ಎಂಬುದು ಬಲಾಢ್ಯ ಜಾತಿಗಳ ಪಾಲಿಗೆ ದೊಡ್ಡ ರಕ್ಷಣಾ ಕವಚವಾಗಿ ಈ ಹಿಂದಿನಿಂದಲೂ ಬಂದಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಟವಾದ ಮತ್ತು ಮಾನ್ಯತೆಗೊಂಡ ಜಾತಿಗಳು ತಮ್ಮ ಸಮುದಾಯದ ನಾಯಕರ ಮೇಲೆ ಬರುವ ಆಪಾದನೆಗಳೆಲ್ಲವನ್ನೂ ಲಜ್ಜೆ ಇಲ್ಲದೆ ಸಮರ್ಥಿಸಿಕೊಳ್ಳುವ ಅಥವಾ ಅದರ ವಿರುದ್ಧ ಹೋರಾಡುವ ಶಕ್ತಿಯನ್ನು ದಕ್ಕಿಸಿಕೊಂಡಿರುತ್ತವೆ. ಈ ಸಮಾಜದ ಸಣ್ಣ ಮತ್ತು  ಅನಾಥ ಜಾತಿಗಳಲ್ಲಿರುವ ಸೂಕ್ಷ್ಮ ಸಂವೇದನೆಗಳು ಬಲಿಷ್ಟ ಜಾತಿಗಳಿಗಿರುವುದಿಲ್ಲ ಎಂಬುದನ್ನು ಸಮಾಜ ಶಾಸ್ತ್ರಜ್ಞರೆ ಪ್ರತಿಪಾದಿಸಬೇಕಾಗಿಲ್ಲ . ಅದು ನಿತ್ಯವೂ ಕಾಣುತ್ತದೆ.

ಜೈಲಿಗೆ ಹೋಗಿ ಬಂದ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ಅವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಅಷ್ಟೇ ಬಲಿಷ್ಠ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಇಂದು ಜೈಲಿಗೆ ಹೋಗಿದ್ದಾರೆ. ಅವರು ಹೊರಬಂದ ಮೇಲೆ ಅವರಿಗೊಂದು ಅದೃಷ್ಟ ಮೀಸಲಿದೆ. ಎಂಬುದನ್ನು ಇಂದಿನ ಒಕ್ಕಲಿಗ ಸಮುದಾಯದ ಬೃಹತ್ ಪ್ರತಿಭಟನೆ ಸೂಚಿಸುತ್ತಿದೆ. ಮತ್ತು ಅಂತಹ ಸ್ಥಾನಮಾನಗಳನ್ನು ದಕ್ಕಿಸಲು ಹೋರಾಡಲಿದೆ ಕೂಡ. ಇದರಲ್ಲಿ ಯಾವ ಅನುಮಾನವೂ ಬೇಡ.

ಈ ರಾಜ್ಯದ ರಾಜಕಾರಣದಲ್ಲಿ ಬಂಡವಾಳ ಬಾಹುಳ್ಳ ಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳು ನಿರಂತರವಾಗಿ ರಾಜಕೀಯ ಹಕ್ಕುದಾರಿಕೆಯನ್ನು ಪ್ರತಿಪಾದಿಸುತ್ತಾ ಬಂದಿವೆ.  ಎಲ್ಲಾ ಕಾಲದಲ್ಲೂ ಈ ಸಮುದಾಯಗಳ ನಡುವೆಯೇ ಹೋರಾಟ ನಡೆದುಕೊಂಡು ಬಂದಿದೆ. ಅದು ಕಾಲ ಕಾಲಕ್ಕೆ ಪರಸ್ಪರ ಹಸ್ತಾಂತರಗೊಳ್ಳುತ್ತಲೆ ಬಂದಿದೆ.  ಆದರೆ ಈ ನಡುವೆ ಹಿಂದುಳಿದ ವರ್ಗಗಳಿಗೆ, ದಲಿತ ವರ್ಗಕ್ಕೆ  ರಾಜಕೀಯ ಶಕ್ತಿಯನ್ನು ತಂದ ದೇವರಾಜ ಅರಸು ಎಂಬ ನಾಯಕನನ್ನು ಭ್ರಷ್ಟಾಚಾರಿ ಎಂದೆ ಎಲ್ಲಾ ಕಾಲಕ್ಕೂ ಬಿಂಬಿಸುವಾಗ ಇದೊಂದು ರಾಜಕೀಯ ಪ್ರೇರಿತ, ಮೇಲ್ಜಾತಿಗಳ ಸಂಚು ಎಂದು ಅವರಿಂದಲೆ ಫಲ ಪಡೆದ  ದುರ್ಬಲ ಜಾತಿಗಳು ಅವರನ್ನು ಕನಿಷ್ಟ ಬೆಂಬಲಿಸಲಿಲ್ಲ.

ಬಹುಶಃ ಇಂತಹ ಧೈರ್ಯ, ಸ್ಥೈರ್ಯ ದುರ್ಬಲ ಜಾತಿಗಳಿಗೆ ಅಂದೂ ಇರಲಿಲ್ಲ. ಇಂದಿಗೂ ಇಲ್ಲ. ಬಂಗಾರಪ್ಪ ಅವರನ್ನು ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಅವರದ್ದೇ ಪಕ್ಷದ ಹೈಕಮಾಂಡ್ ಪದಚ್ಯುತಿಗೊಳಿಸಿದಾಗ ಬಂಗಾರಪ್ಪ ಅವರ ಪರ  ಹಿಂದುಳಿದ ಈಡಿಗ ಸಮುದಾಯ ಬೀದಿಗಿಳಿದು ಪ್ರತಿಭಟಿಸಲಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಮ್ಮ ಕೈಲ್ಲೊಂದು ದುಬಾರಿ ವಾಚು ಕಟ್ಟಿಕೊಂಡು ಸಂಕಷ್ಟಕ್ಕೀಡಾದಾಗ ಅವರದ್ದೇ ಜಾತಿಗಳು ಅದೇನು ಮಹಾ ಎಂಬ ಮಾತು ಆಡದೆ ಮೌನವಹಿಸಿದ್ದವು.

ದುರ್ಬಲ ಜಾತಿಗಳ ಏಳಿಗೆಗಾಗಿ ನಿರಂತರ ಕಲ್ಯಾಣ ಕಾರ್ಯಕ್ರಮಗಳನ್ನು ಕೊಟ್ಟ ಇದೇ ಸಿದ್ದರಾಮಯ್ಯ ಅವರನ್ನು ಅದೇ ಜಾತಿಗಳು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿದ್ದಿಗಾದರೂ ಬಿದ್ದು ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಷ್ಟೆಲ್ಲಾ ಹೇಳುವಾಗ ದುರ್ಬಲ ಜಾತಿಗಳ ನಾಯಕರ ಮೇಲೆ ಕೇಳಿ ಬಂದ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವ ನೆಪವಲ್ಲ. ಇಲ್ಲಿ ಜಾತಿ ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ.  ಈ ಸಮಾಜದ ಜಾತಿ ಸಂರಚನೆಯಲ್ಲಿ ಬಲಿಷ್ಟ ಮತ್ತು ದುರ್ಬಲ ಜಾತಿಗಳ ನಡುವಿನ ವ್ಯತ್ಯಾಸವನ್ನು ಬಲಿಷ್ಟ ಜಾತಿಗಳು  ತನ್ನ ಸಮುದಾಯದ ವ್ಯಕ್ತಿಯ ಎಲ್ಲಾ ಅನೈತಿಕ, ಅಕ್ರಮಗಳನ್ನು ನಿರ್ಲಜ್ಜ್ಯತ, ದಾಷ್ಟ್ಯದಿಂದ ಸಮರ್ಥಿಸಿಕೊಳ್ಳುವ ಮತ್ತು ದುರ್ಬಲ ಜಾತಿಗಳು ಅಷ್ಟೇ ಲಜ್ಜೆಯಿಂದ ತಲೆತಗ್ಗಿಸಿ ನಡೆದು ಹೋಗುವುದನ್ನು ವಿಶ್ಲೇಷಿಸುವ ಸಣ್ಣ ಯತ್ನವಷ್ಟೇ.

ಮೂಡಿಗೆರೆ ಬಿಜೆಪಿ ಶಾಸಕನಾಗಿ ಮೊದಲ ಬಾರಿಗೆ ಆಯ್ಕೆಯಾಗಿದ್ದ  ದಲಿತ ಎಂ.ಪಿ.ಕುಮಾರಸ್ವಾಮಿ ಅವರನ್ನು ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ (ಈಗ ಎಂಎಲ್ಸಿ) ಪ್ರಾಣೇಶ್(ಒಕ್ಕಲಿಗ) ಸಭೆಯೊಂದರಲ್ಲಿ ಕಪಾಳಕ್ಕೆ ಹೊಡೆದಿದ್ದು ಸುದ್ದಿಯಾಗಲಿಲ್ಲ. ಇದೇ ಡಿ.ಕೆ.ಶಿವಕುಮಾರ್ ಸದನದಲ್ಲಿ ಸಚಿವ ಹೆಚ್.ಆಂಜನೇಯ ಅವರ ಮೇಲೇರಿ ಹೋಗಿದ್ದು ಯಾರೊಬ್ಬರಿಗೂ ತಪ್ಪು ಎನಿಸಲಿಲ್ಲ. ಯಾವುದೇ ಸಂಘಟನೆಗಳು ಖಂಡಿಸಿ ಬೀದಿಗಿಳಿಯಲಿಲ್ಲ. ಇದೇ ಘಟನೆಗಳು ಉಲ್ಟಾ ಆಗಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು?

ಹೀಗೆ ಬಲಿಷ್ಠ ಜಾತಿಯ ಅಮಲು ಹತ್ತಿಸಿಕೊಂಡವರು ತನ್ನಂತೆ ಮನುಷ್ಯನಾಗಿರುವ ದುರ್ಬಲ ಜಾತಿಯ ವ್ಯಕ್ತಿಯನ್ನು ನಿರ್ಭಯವಾಗಿ ಹೊಡೆದು ತಲೆ ಎತ್ತಿ ನಡೆಯಬಲ್ಲ, ಭ್ರಷ್ಟಾಚಾರ ಮಾಡಿಯೂ ನಾಯಕತ್ವದ ಉತ್ತುಂಗ ಏರಬಲ್ಲ. ಅತ್ಯಾಚಾರವೆಸಗಿ ಮತ್ತೆ ಆರಿಸಿ ಬರಬಲ್ಲ, ಸದನದಲ್ಲಿ ಸೆಕ್ಸ್ ಚಿತ್ರಗಳನ್ನು‌ನೋಡಿ ಸಿಕ್ಕಿಬಿದ್ದರೂ  ಅಧಿಕಾರದ ಛತ್ರಿ ಚಾಮರಗಳೊಂದಿಗೆ ಮತ್ತದೆ ಸದನದಲ್ಲಿ ನಾಚಿಕೆಗೆಟ್ಟು ವಿರಾಜಮಾನನಾಗಬಲ್ಲ, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ವಿರೇಂದ್ರಪಾಟೀಲ್, ದೇವೇಗೌಡ, ಎಸ್.ಎಂ.ಕೃಷ್ಣ ಹೀಗೆ ಸಾಲು ಸಾಲು ಮುತ್ಸದ್ಧಿ, ಮೌಲ್ಯಾಧಾರಿತ ನಾಯಕರುಗಳು ಜನಮಾನಸದ ನಾಯಕರಾಗುವುದರ ಹಿಂದೆ ಜಾತಿಯ ಬಲವೂ ಇಲ್ಲವೆನ್ನಲಾದೀತೆ?

ತಳ ಸಮುದಾಯವೊಂದರ ಮಠದ ಸ್ವಾಮೀಜಿಯೊಬ್ಬನ ಮೇಲೆ ತನ್ನ ಸೇವಕಿ ಮೇಲೆ ಅತ್ಯಾಚಾರವೆಸಗಿದ ಎಂಬ ದೂರು ಕೇಳಿ ಬಂದ ತಕ್ಷಣ ಆ ಸ್ವಾಮೀಜಿಯನ್ನು ಎತ್ತಾಕಿಕೊಂಡು ಹೋದ ಪೊಲೀಸರು ಠಾಣೆಯಲ್ಲಿ ಹೊಡೆಯಬಾರದ ಜಾಗಕ್ಕೆಲ್ಲಾ ಹೊಡೆದು ಟ್ರೀಟ್‌ಮೆಂಟ್ ಕೊಟ್ಟು ಜೈಲಿಗೆ ಬಿಟ್ಟು ಬಂದಿದ್ದರು. ತಿಂಗಳುಗಟ್ಟಲೆ ಜೈಲಿನಲ್ಲಿದ್ದ ಆ ಸ್ವಾಮೀಜಿ ಕೊನೆಗೆ ತಪ್ಪೊಪ್ಪಿಕೊಂಡು ಹೊರಬಂದು ಸಂತ್ರಸ್ತೆಯನ್ನೆ ಮದುವೆಯಾಗಿ ಗೃಹಸ್ಥನಾದ. ಈ ಸ್ವಾಮೀಜಿಯ ಪರ ಆತನ ಜಾತಿ ತುಟಿಪಿಟಿಕ್ ಎನ್ನಲಿಲ್ಲ. ಬದಲಿಗೆ ಮಠದಿಂದ ಹೊರನೂಕಲಾಯಿತು.

ಇಂತಹುದ್ದೆ ಪ್ರಕರಣದಲ್ಲಿ ರಾಮಕಥಾ ಕಾಲಕ್ಷೇಪದಲ್ಲಿ ಕಾಮಕಥಾಕ್ಷೇಪ ಮಾಡಿದ ಮೇಲ್ಜಾತಿಯ ಸ್ವಾಮೀಜಿಯೊಬ್ಬ ತನ್ನದೆ ಜಾತಿಯ ಭಕ್ತೆಯನ್ನು ಕೆಡಿಸಿ ಸಿಕ್ಕಿಬಿದ್ದಿದ್ದರೂ ಆತನನ್ನು ಜೈಲಿಗೆ ಕಳುಹಿಸುವುದಿರಲಿ, ಬದಲಾಗಿ ಆತನ ಮೇಲೆ ದೂರು ಕೊಟ್ಟವರನ್ನೆ ಜೈಲಿಗಟ್ಟಲಾಯಿತು. ಸ್ವಾಮೀಜಿಯ ಪರ ಆತನ ಜಾತಿಯ ಎಲ್ಲಾ ಅಂಗಾಂಗಗಳು ಬೀದಿಗಿಳಿದು ಹೋರಾಡಿದವು. ಸುಮಾರು ೧೦ ನ್ಯಾಯಾಧೀಶರೇ ವಿಚಾರಣೆಯಿಂದ ಹಿಂದೆ ಸರಿದು ಹೋದರು. ಅಂದರೆ ಈ ನೆಲದ‌ ನ್ಯಾಯವನ್ನೂ ಮೀರಿ ಜಾತಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಇನ್ನೆಷ್ಟು ಪುರಾವೆ ಬೇಕು?.

ಮೂರು ದಿನಗಳಿಂದ ಯಾವುದೋ ದಿನಪತ್ರಿಕೆಯೊಂದರಲ್ಲಿ‌ ‘ಏಡ್ಸ್ ರೋಗಿಯೊಬ್ಬನಿಗೆ( ಪ್ರಬಲ ಜಾತಿಗೆ ಸೇರಿದವನು) ವಧು ಬೇಕಾಗಿದ್ದಾಳೆ. (ಎಸ್ಸಿ/ಎಸ್ಟಿ ಹೊರತು ಪಡಿಸಿ)’ ಎಂಬ ಕ್ಲಾಸಿಫೈಡ್ ಜಾಹೀರಾತು ಹರಿದಾಡುತ್ತಿತ್ತು. ಇಂತಹ ಸ್ಥಿತಿಯಲ್ಲೂ ಜಾತಿ ಹುಡುಕುವ  ಮನಸ್ಥಿತಿ ಎಂದರೆ ಈ ದೇಶದಲ್ಲಿ ಜಾತಿ ಎಂಬುದು ಏಡ್ಸ್ ರೋಗಕ್ಕಿಂತ ರಣ ಭೀಕರ ರೋಗ ಎಂಬುದು ಮತ್ತೆ ಸಾಬೀತಾಯಿತು. ಏಡ್ಸ್ ರೋಗ  ಪೀಡಿತ ವ್ಯಕ್ತಿಯನ್ನು ಬಾಧಿಸುತ್ತದೆ. ಆದರೆ ‘ಜಾತಿ ರೋಗ’ ಆತನ ಸುತ್ತಲಿನ ಸಮಾಜವನ್ನೂ ಕಾಡುತ್ತದೆ, ಕೊಳೆಸುತ್ತದೆ, ನರಳಿಸುತ್ತದೆ.

‍ಲೇಖಕರು avadhi

September 14, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: