ಪ್ರಸಾದ್ ನಾಯ್ಕ್

ನನಗೂ ಸೈಕಲ್ಲಿಗೂ ಇರೋದು ಒಂದು ರೀತಿಯಲ್ಲಿ ‘ಹಾಫ್ ಗರ್ಲ್ಫ್ರೆಂಡ್’ ನಂಟು.
ಏಕೆಂದರೆ ಸೈಕಲ್ಲೆಂದರೆ ನನಗೆ ಒಂಚೂರು ಸಿಕ್ಕಿ ಮತ್ತೆಲ್ಲೋ ಉಳಿದುಹೋಗಿ ಒಟ್ಟಾರೆಯಾಗಿ ಅರ್ಧಂಬರ್ಧ ಆಗಿಹೋದ ಕಹಾನಿ. ನಮ್ಮಪ್ಪನ ಬಳಿ ಸುಮಾರು ವರ್ಷಗಳ ಹಿಂದೆ ಹಳೇ ಮಾಡಲ್ಲಿನ ಬಿ.ಎಸ್.ಎ ಸೈಕಲ್ಲೊಂದಿತ್ತು. ಅದರಲ್ಲಿ ಅಪ್ಪನೊಂದಿಗೆ ಕೂತು ಒಂದಷ್ಟು ತಿರುಗಾಡಿದ್ದು ನನಗೆ ನೆನಪಿದೆ. ಮುಂದೆ ಮತ್ತೇನೋ ಕಾರಣಾಂತರಗಳಿಂದಾಗಿ ಆ ಸೈಕಲ್ ಮಾಯವಾಗಿ ನನ್ನ ಮೇಲೆ ಸೈಕಲ್ ನಿಷೇಧವನ್ನು ಹೇರಲಾಯಿತು. ಆದರೆ ಅಪರೂಪಕ್ಕೊಮ್ಮೆ ಆಡಲು, ಅಡ್ಡಾಡಲು ಹೊರಡುತ್ತಿದ್ದ ನನ್ನನ್ನು ನನ್ನ ಗೆಳೆಯನೊಬ್ಬ ತನ್ನ ಸೈಕಲ್ಲಿನಲ್ಲಿ ಕೂರಿಸಿಕೊಂಡು ಹೊರಡುತ್ತಿದ್ದ. ಅದೂ ಕೂಡ ನನ್ನ ಕೆಟ್ಟ ಭಯಕ್ಕೆ ಸರಿಯಾಗಿ ಇನ್ನೇನು ಗಾಳಿಯಲ್ಲಿ ಟೇಕಾಫ್ ಆಗಲಿದೆ ಎಂಬಷ್ಟರ ವೇಗದಲ್ಲಿ ಬಿರುಗಾಳಿಯಂತೆ ಓಡಿಸುತ್ತಿದ್ದ ಈ ಪುಣ್ಯಾತ್ಮ. ಮುಂದೆ ನಾನು ಉಡುಪಿ ಬಿಡುವುದರೊಂದಿಗೆ ಈ ‘ರಹಸ್ಯ ಸೈಕಲ್ ಸಾಹಸ’ ಅಧ್ಯಾಯದ ಅಂತ್ಯವಾಯಿತು. ಈ ನನ್ನ ಗೆಳೆಯನ ತಂದೆ ಆಗಲೇ ಸಾಹಿತ್ಯಲೋಕದಲ್ಲಿ ಹೆಸರು ಮಾಡಿದ್ದರು ಎಂದು ಅಪ್ಪನಿಂದ ಕೇಳಿದ್ದೆ. ಒಟ್ಟಿನಲ್ಲಿ ಸಾಹಿತ್ಯ, ಸೈಕಲ್ಲು ಎರಡೂ ಆ ವಯಸ್ಸಿನಲ್ಲಿ ನನಗೆ ದಕ್ಕಲಿಲ್ಲ.
ಇತ್ತೀಚೆಗೆ ಜೀರ್ಜಿಂಬೆ ಚಿತ್ರವನ್ನು ನೋಡುತ್ತಾ ಈ ಸೈಕಲ್ ಕಥೆಗಳು ಒಮ್ಮೆಲೇ ನೆನಪಾದವು. ಜೊತೆಗೇ ”ಹೆಣ್ಣುಮಗಳೊಬ್ಬಳಿಗೆ ಸೈಕಲ್ ಎಂಬುದು ಅವಳ ಅನುಭವದ ಸ್ವಾತಂತ್ರ್ಯದ ಮೊದಲ ಹೆಜ್ಜೆ”, ಎಂದಿದ್ದ ಗೆಳತಿ ಮೇಘನಾಳ ಮಾತೂ ಕೂಡ. ಚಿತ್ರದ ಆರಂಭದಲ್ಲೇ ಸೈಕಲ್ ಸವಾರಿಯನ್ನು ಹಾರುವ ಅನುಭವಕ್ಕೆ ಹೋಲಿಸುವ ಸೂಕ್ತಿಯೊಂದು ಬರುತ್ತದೆ. ಚಿತ್ರದ ಮೊದಲ ಭಾಗದಲ್ಲಿ ಚಿಟ್ಟೆಯಂತೆ ಹಳದಿ ರೆಕ್ಕೆಯನ್ನು ಕಟ್ಟಿಕೊಂಡು ಪುಟಿದಾಡುವ ರುದ್ರಿ ಪಾತ್ರದ ಉತ್ಸಾಹವು ವೀಕ್ಷಕರಲ್ಲೂ ಎಲ್ಲಿಲ್ಲದ ಹುಮ್ಮಸ್ಸನ್ನು ತಂದುಬಿಡುತ್ತದೆ. ಈ ಬಾಲಕಿ ರುದ್ರಿ ಮೊದಲು ಶಾಲಾಕಾರ್ಯಕ್ರಮಕ್ಕಾಗಿ ದೊಡ್ಡ ಹಳದಿ ರೆಕ್ಕೆಯೊಂದನ್ನು ತನ್ನ ಬೆನ್ನಿಗೆ ಕಟ್ಟಿಕೊಳ್ಳುತ್ತಾಳೆ. ನಂತರ ಯಾವುದೋ ಸರ್ಕಾರಿ ಯೋಜನೆಯೊಂದರಲ್ಲಿ ಸಿಗುವ ಸೈಕಲ್ ಅವಳ ಹಾರಾಟದ ಮೊದಲ ಅನುಭವವಾಗುತ್ತದೆ. ನಂತರ ಅನಿರೀಕ್ಷಿತವಾಗಿ ಬರುವ ಕಾರು. ಅವಳಿಗೋ ಎಲ್ಲವನ್ನೂ ಬಾಚಿಕೊಳ್ಳುವ ಹುಮ್ಮಸ್ಸು, ಇಡಿಇಡಿಯಾಗಿ ಬದುಕುವ ಆಕಾಂಕ್ಷೆ. ಹೀಗೆ ರುದ್ರಿಯ ಕನಸುಗಳು ಅವಳ ಕಲ್ಪನೆಗೂ ಮೀರಿದವುಗಳು.

ಆದರೆ ಖುಷಿಯ ವಿಚಾರವೆಂದರೆ ಇಂಥಾ ಕನಸುಗಳನ್ನು ಕಾಣಲು ಅವಳಲ್ಲೊಂದು ಅದ್ಭುತ ಧೈರ್ಯವಿದೆ. ತನ್ನ ಗ್ರಾಮೀಣಭಾಗದ ಹಿನ್ನೆಲೆಯ, ಲಿಂಗದ, ಜಾತಿಯ ಅಥವಾ ಬೇರ್ಯಾವ ಸೀಮೆಗಳೂ ಅವಳನ್ನು ಬಂಧಿಸಿಡಲಾರವು. ಅದೆಷ್ಟೇ ಅಡಚಣೆಗಳು ಬಂದರೂ ಮುನ್ನುಗ್ಗುವ ಛಲವಿದೆ. ವಯೋಸಹಜವಾಗಿ ಕೊಂಚ ಇಂಪಲ್ಸಿವ್ ಆದ ಹೆಜ್ಜೆಗಳನ್ನಿಟ್ಟರೂ ”ಹೌದು, ನಾನು ಮಾಡಿದ್ದು ನನ್ನ ಮಟ್ಟಿಗೆ ಸರಿ” ಎಂದು ತನ್ನ ಅಭಿಪ್ರಾಯಗಳನ್ನು ನಿಸ್ಸಂಕೋಚವಾಗಿ ಮಂಡಿಸುವ ದಿಟ್ಟತನವಿದೆ. ಜೀರ್ಜಿಂಬೆಯ ರುದ್ರಿ ಪಾತ್ರವು ನಮಗಿಷ್ಟವಾಗುವುದು ಈ ಕಾರಣಕ್ಕಾಗಿಯೇ. ರಸ್ತೆ ದಾಟಲು ಹೊರಟವನು ಮಾರ್ಗಮಧ್ಯದಲ್ಲೇ ಗೊಂದಲಕ್ಕೆ ಬಿದ್ದು ಹೋಗಲೋ ಬೇಡವೋ ಎಂದು ಏಕಾಏಕಿ ಕಂಗಾಲಾಗಿಬಿಟ್ಟರೆ ಅದಕ್ಕಿಂತ ವಿಪರ್ಯಾಸ ಬೇರೊಂದಿಲ್ಲ.
ಈಗ ಒಂದೋ ಆತ ಆದದ್ದಾಗಲಿ ಎಂದು ದಾಟಿ ಮುನ್ನಡೆಯಬೇಕು. ಇಲ್ಲವಾದರೆ ಇದು ನನ್ನಿಂದಾಗುವ ವಿಷಯವಲ್ಲ ಎಂದು ತನ್ನ ಹೆಜ್ಜೆಯನ್ನು ಹಿಂದಿಡಬೇಕು. ಅದೇನೇ ಆದರೂ ಆದಷ್ಟು ಬೇಗ ಮಾಡಬೇಕು. ರುದ್ರಿ ಮೊದಲ ವಿಭಾಗಕ್ಕೆ ಸೇರಿದವಳು. ತಪ್ಪಾಗುವ ಭಯದಲ್ಲಿ ಹೆಜ್ಜೆಯನ್ನೇ ಹಿಂದಿಡುವ ಜಾಯಮಾನದವಳಲ್ಲ ರುದ್ರಿ. ಬದಲಾಗಿ ತನ್ನ ತಪ್ಪನ್ನು ತಿದ್ದಿಕೊಂಡು ಹಾದಿಗೆ ತೊಡಕಾಗುವ ಕಲ್ಲುಗಳನ್ನೇ ಮೆಟ್ಟಿಲಾಗಿಸಿಕೊಳ್ಳುವವಳು. ಈ ಗುಂಗಿನಲ್ಲೇ ನಟಿ ಕಂಗನಾ ರಣಾವತ್ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತೊಂದು ನೆನಪಾಯಿತು ನನಗೆ. ”ಚಿತ್ರರಂಗದ ಹಿನ್ನೆಲೆಯಿರದ ನಾನು ಆ ಎಳೆ ವಯಸ್ಸಿನಲ್ಲಿ ಅದ್ಯಾವ ಧೈರ್ಯದಲ್ಲಿ ಮನೆಬಿಟ್ಟು ಮುಂಬೈಗೆ ಬಂದು ನೆಲೆಯಾದೆನೇ ಗೊತ್ತಿಲ್ಲ. ಆ ವಯಸ್ಸಿನಲ್ಲಿ ಅಂಥದ್ದೊಂದು ಭಂಡಧೈರ್ಯವಿತ್ತು. ಏನಾದರೂ ಆಗಲಿ ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ಹಟವಿತ್ತು. ಅಂಥಾ ಭಂಡಧೈರ್ಯದ ಹೆಜ್ಜೆಯನ್ನು ಆ ವಯಸ್ಸಿನಲ್ಲೇ ಇಟ್ಟಿದ್ದು ಒಳ್ಳೆಯದಾಯಿತೇನೋ. ಈಗೆಲ್ಲಾ ಅಂಥಾ ಸಾಹಸಗಳು ಕಷ್ಟ”, ಎಂದಿದ್ದರು ಕಂಗನಾ. ರುದ್ರಿ ಪಾತ್ರದಲ್ಲಿ ನನಗೆ ಕಂಡಿದ್ದು ಅಂಥದ್ದೇ ಸಾಹಸಿ.
ಸ್ವಾತಂತ್ರ್ಯದ ವಿಚಾರಕ್ಕೆ ಬಂದರೆ ಬಹಳ ಚಿಕ್ಕ ವಯಸ್ಸಿನಲ್ಲೇ ನನಗೆ ನನ್ನದೇ ಆದ ಕೆಲ ಕಲ್ಪನೆಗಳಿದ್ದವು. ನಾನು ಹಳ್ಳಿಯಲ್ಲಿ ಬೆಳೆದಿರುವವನಲ್ಲದಿದ್ದರೂ ಮನೆಯ ಹೆಂಗಸರ ಮಾತುಗಳಿಗೆ ಬೆಲೆಯೇ ಇಲ್ಲದಂಥಾ ವಿಚಿತ್ರ ವ್ಯವಸ್ಥೆಯೊಂದನ್ನು ದುರಾದೃಷ್ಟವಶಾತ್ ಬಹಳ ಹತ್ತಿರದಿಂದ ನೋಡುತ್ತಿದ್ದೆ. ಈ ಗಂಡಸರ್ಯಾರೂ ಅನಕ್ಷರಸ್ಥರಾಗಿರಲಿಲ್ಲ. ಹಲವರು ಒಳ್ಳೊಳ್ಳೆಯ ಹುದ್ದೆಗಳಲ್ಲಿದ್ದರೂ ಕೂಡ. ಆದರೆ ಹೆಂಗಸರನ್ನು ಎರಡನೇ ದರ್ಜೆಯ ಜೀವಿಗಳಂತೆ, ಅವರುಗಳು ಚಾಕರಿ ಮಾಡಿ ಸಾಯಲಷ್ಟೇ ಹುಟ್ಟಿಕೊಂಡಿರುವವರಂತೆ ಅವರೊಂದಿಗೆ ವ್ಯವಹರಿಸುತ್ತಿದ್ದಿದ್ದೆಲ್ಲಾ ನನಗಿನ್ನೂ ನೆನಪಿದೆ.
ಆಗಿನ್ನೂ ಫೆಮಿನಿಸಂನಂಥಾ ತೂಕದ ಪದಗಳಿಗೆ, ತರಹೇವಾರಿ ಇಸಮ್ಮುಗಳಿಗೆ ನಾನು ಇನ್ನೂ ತೆರೆದುಕೊಂಡಿಲ್ಲದ ಕಾಲ. ಆದರೆ ಇವುಗಳನ್ನು ನೋಡಿದಾಗಲೆಲ್ಲಾ ನನಗೆ ಒಂದಂತೂ ಸ್ಪಷ್ಟವಾಗಿತ್ತು. ಈ ಗಂಡಸರು ತಮ್ಮ ಸುತ್ತಲಿದ್ದ ಹೆಂಗಸರ ಅಸಲಿ ಸಾಮಥ್ರ್ಯವನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದರು. ‘ಒಂದು ಪಕ್ಷ ಇವರು ನಮ್ಮನ್ನು ಮೀರಿಸಿಬಿಟ್ಟರೆ…’ ಎಂಬ ವಿಚಿತ್ರ ಅಭದ್ರತೆಯಿಂದ ಇವರೆಲ್ಲಾ ನರಳುತ್ತಿದ್ದರು. ಹೀಗಾಗಿ ಇವರನ್ನು ಪದೇ ಪದೇ ಮೂದಲಿಸುವುದು, ನಾಲ್ಕು ಜನರೆದುರು ಹಣಿಯುವುದು, ಇಲ್ಲದ ಕೀಳರಿಮೆಗಳನ್ನು ಸೃಷ್ಟಿಸುವುದು, ಈ ಸುಳ್ಳನ್ನೇ ನಿರಂತರವಾಗಿ ಅವರ ತಲೆಗಳಲ್ಲಿ ತುಂಬಿಸಿ ಅದಕ್ಕೆ ಸತ್ಯದ ಮುಖವಾಡ ತೊಡಿಸುವುದು, ಅವರ ಚಿಕ್ಕಚಿಕ್ಕ ಸುಖ-ಯಶಸ್ಸುಗಳನ್ನು ಕಸಿದುಕೊಂಡು ತಮ್ಮದೆಂದು ಬೀಗುವುದು… ಇತ್ಯಾದಿಗಳು ನಿರಂತರವಾಗಿ ನಡೆಯುತ್ತಿತ್ತು. ‘ಲಿಂಗ ಸಮಾನತೆ’ಯೆಂಬುದು ಇವರುಗಳಿಗೆ ಪುಸ್ತಕದ ಬದನೆಕಾಯಿಯಾಗಿತ್ತೇ ಹೊರತು ಅದಕ್ಕೂ ಇವರ ನಿತ್ಯದ ಜೀವನಶೈಲಿಗೂ ಯಾವ ಸಂಬಂಧವೂ ಇರಲಿಲ್ಲ.
ಅಸಲಿಗೆ ಇವುಗಳು ವ್ಯವಸ್ಥೆಗೆ, ಸರ್ಕಾರಕ್ಕೆ ಅಥವಾ ರುದ್ರಿ ಡಯಲ್ ಮಾಡುವ 1098 ಸಹಾಯವಾಣಿಗೆ ದಕ್ಕುವ ಅಪರಾಧಗಳೇ ಅಲ್ಲ. ಅಷ್ಟಕ್ಕೂ ಸಮಾಜದ ಕಣ್ಣಿಗೆ ಇವೆಲ್ಲಾ ‘ಅಪರಾಧ’ವೇ ಆಗದಿರಬಹುದು. ಆದರೆ ತಪ್ಪು ತಪ್ಪೇ ಅಲ್ಲವೇ! ಮಹಿಳೆಯ ಸ್ಥಾನದಲ್ಲಿ ತನ್ನನ್ನು ತಾನು ಒಂದು ಕ್ಷಣ ಇರಿಸಿಕೊಳ್ಳುವ ಪುರುಷನಿಗೆ ಇಂಥಾ ವಿಷಗಳನ್ನು ನಿತ್ಯವೂ ಡೋಸ್ ರೂಪದಲ್ಲಿ ಮನೆಯ ಹೆಂಗಸಿಗೆ ನೀಡುವ ಭೀಕರತೆಯ ಬಗ್ಗೆ ಒಂದಷ್ಟು ಅರಿವಾಗಬಹುದೇನೋ. ಆತ್ಮಸಾಕ್ಷಿ ಎಂಬುದೊಂದಿದ್ದರೆ ಇಂಥಾ ಗಂಡಸಿಗೆ ತಾನು ಮಾಡುವ ಪ್ರತೀ ಕಸರತ್ತುಗಳ ಸಂಪೂರ್ಣ ಅರಿವಿರುತ್ತದೆ. ಆತ ಅದನ್ನು ಮುಕ್ತವಾಗಿ ಹೇಳಿಕೊಳ್ಳದಿರಬಹುದು, ಆ ವಿಷಯ ಬೇರೆ.

ಚಿತ್ರದಲ್ಲೂ ಅಂಥದ್ದೊಂದು ಸನ್ನಿವೇಶ ಬರುತ್ತದೆ. ರುದ್ರಿಯ ಅಕ್ಕನ ಗಂಡ ಭಯಂಕರ ಮೈಗಳ್ಳ. ಪತ್ನಿಗೆ ಹುಷಾರಿಲ್ಲವೆಂದು ಮಾವನ ಮನೆಯಲ್ಲೇ ಸೋಂಬೇರಿಯಂತೆ ಬಿದ್ದುಕೊಂಡಿದ್ದಾನೆ. ಅವನಿಗೆ ರುದ್ರಿಯ ಮತ್ತು ಅವಳ ಸೈಕಲ್ ಮೇಲೆ ಕಣ್ಣು. ”ಇದು ನನ್ನ ಸೈಕಲ್” ಎಂದು ರುದ್ರಿ ಸಮರ್ಥಿಸಿಕೊಂಡರೆ ”ಶಾಲೆಯಿಂದ ಪುಗ್ಸಟ್ಟೆ ಸಿಕ್ಕ ಸೈಕಲ್ ನಿನ್ನದ್ಹೇಗಾಗುತ್ತದೆ?” ಎಂಬ ವರಸೆ ಅವನದ್ದು. ಆದರೆ ತಾನು ನಾಲ್ಕು ಕಾಸು ದುಡಿಯದೆ ಕನಸು ಕಂಗಳ ಹೆಣ್ಣುಮಗಳೊಬ್ಬಳಿಂದ ಕಸಿದುಕೊಳ್ಳುವ ಸೈಕಲ್ ಕೂಡ ಪುಗ್ಸಟ್ಟೆಯದ್ದಲ್ಲವೇ ಎಂದು ಆತ ಯೋಚಿಸುವುದಿಲ್ಲ. ಅವಳಿಂದ ಸೈಕಲ್ ಕಸಿದುಕೊಳ್ಳುವುದು ತನ್ನ ಹಕ್ಕೆಂಬಂತೆಯೇ ಆತ ವರ್ತಿಸುತ್ತಾನೆ. ಯಾವತ್ತೋ ಮಾತಿನ ಭರದಲ್ಲಿ ರುದ್ರಿಯ ತಂದೆ ಆಡಿದ ”ನಿನಗೆ ಟೀವಿಎಸ್ ಕೊಡ್ಸೋದೆಲ್ಲಾ ನನ್ನಿಂದಾಗಕ್ಕಿಲ್ಲ. ಇವಳ ಸೈಕಲ್ ಇದ್ಯಲ್ಲಾ. ಅದನ್ನು ಹಿಡ್ಕಂಡ್ ತೊಗಲಾಚೆ” ಮಾತೊಂದಕ್ಕೆ ಜೋತುಬಿದ್ದು ಆತ ಸೈಕಲ್ ತನ್ನದೇ ಎಂದು ವಾದಿಸುತ್ತಾನೆ. ಸಾಲ ಕೊಟ್ಟ ವ್ಯಕ್ತಿಯೊಬ್ಬ ಕತ್ತಿನಪಟ್ಟಿ ಹಿಡಿದು ಝಾಡಿಸಿದಾಗ ರುದ್ರಿಯ ಸೈಕಲ್ಲನ್ನೇ ಅವನ ಕೈಗಿಟ್ಟು ಮಹಾದಾನಶೂರನಂತೆ ಬೀಗುತ್ತಾನೆ. ರುದ್ರಿ ಪ್ರತಿಭಟಿಸಿದಾಗ ”ಮರ್ವಾದೆಗಿಂತ ಸೈಕಲ್ ದೊಡ್ಡದೇನೇ?”, ಎಂದು ಸಮರ್ಥಿಸಿಕೊಳ್ಳುತ್ತಾನೆ. ಯಾವುದಕ್ಕೂ ಲಾಯಕ್ಕಿಲ್ಲದ, ಒಬ್ಬ ಕೈಲಾಗದ ಗಂಡೂ ಕೂಡ ‘ತಾನು ಗಂಡು’ ಎಂಬ ಪುಕ್ಕಟೆಯಾಗಿ ಸಿಕ್ಕ ಸಾಮಾಜಿಕ ಹಣೆಪಟ್ಟಿಯೊಂದನ್ನೇ ಹಿಡಿದುಕೊಂಡು ಹೇಗೆ ಹೆಣ್ಣನ್ನು ಸತಾಯಿಸುತ್ತಾನೆ ಎಂಬುದಕ್ಕೆ ಒಳ್ಳೆಯ ನಿದರ್ಶನವಿದು.
ಬಾಲ್ಯವಿವಾಹವನ್ನೇ ಮುಖ್ಯ ಥೀಮ್ ಆಗಿರಿಸಿಕೊಂಡರೂ ರುದ್ರಿಯ ಸೈಕಲ್ಲು, ಹಳದಿ ಚಿಟ್ಟೆ ರೆಕ್ಕೆ, ರುದ್ರಿಯ ಗೆಳತಿ ದಾಕ್ಷಿಯ ವಿವಾಹ ಪ್ರಸಂಗ, ಮುಖ್ಯಮಂತ್ರಿಗೆ ಅಹವಾಲು ಇತ್ಯಾದಿ ಪ್ರಸಂಗಗಳು ಹೀಗೆ ಹಲವಾರು ಹೇಳದುಳಿದ ಒಡಲಾಳದ ಕಥೆಗಳನ್ನು ನಮಗೆ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿ ಹೇಳುತ್ತವೆ. ಶಿಕ್ಷಣ, ಕಾನೂನು, ದೌರ್ಜನ್ಯ, ಹರೆಯ, ಲೈಂಗಿಕತೆ, ಮಾನವೀಯತೆ… ಹೀಗೆ ತರಹೇವಾರಿ ವಿಚಾರಗಳು ಸೂಕ್ಷ್ಮವಾಗಿ ಅಲ್ಲಲ್ಲಿ ಬಂದು ಮರೆಯಾಗುವ ಗುಪ್ತಗಾಮಿನಿಯಂತಿವೆ. ಹೀಗಾಗಿ ಇಲ್ಲಿಯ ಪಾತ್ರಗಳನ್ನು ಬಹಳ ಜಾಗರೂಕತೆಯಿಂದ ಕಟ್ಟಿಕೊಡಲಾಗಿದೆ ಎಂಬ ಭಾವವು ಮೂಡುವುದು ಸಹಜ. ಅತಿಥಿ ಪಾತ್ರದಲ್ಲಿ ಬರುವ ಸುಮನ್ ನಗರ್ಕರ್ ಪಾತ್ರವು ಚಿಕ್ಕದಾಗಿದ್ದರೂ eಟegಚಿಟಿಣ ಅನ್ನಿಸುವಂಥದ್ದು. ”ರುದ್ರೀ… ನಿನ್ನ ಕನಸುಗಳು ಯಾರಪ್ಪನ ಸ್ವತ್ತೂ ಅಲ್ಲ”, ಎಂದು ಆಕೆಯ ಪಾತ್ರವು ಹೇಳುವ ಮಾತು ‘ನೀಲ್ ಬಟೇ ಸನ್ನಾಟಾ’ ಚಿತ್ರದಲ್ಲಿ ಚಂದಾ ತನ್ನ ಮಗಳು ಅಪೇಕ್ಷಾಳನ್ನು ನದಿ ದಂಡೆಯ ಪಕ್ಕ ಕೂರಿಸಿಕೊಂಡು ”ಮಗಳೇ… ನಿನ್ನ ಕನಸುಗಳು ಕೇವಲ ನಿನ್ನವು ಮಾತ್ರ. ಯಾರ ಕೊಂಕುಮಾತುಗಳೂ, ಮೂದಲಿಕೆಗಳೂ ನಿನ್ನ ಕನಸುಗಳನ್ನು ಛಿದ್ರವಾಗುವಂತೆ ಮಾಡಬೇಡ” ಎಂದು ಹೇಳುವುದನ್ನೆಲ್ಲಾ ನೆನಪಿಸಿದ್ದು ಸತ್ಯ.
”ಇವತ್ತು ನಿನ್ನ ಸೈಕಲ್ ಕಸಿದುಕೊಂಡರು. ನಾಳೆ ನಿನ್ನ ಕನಸು ಕಸಿದುಕೊಳ್ಳುತ್ತಾರೆ. ಆಗಲೂ ಹೀಗೇನೇ ಅಳ್ತಾ ಕೂತಿರ್ತೀಯಾ?”, ಎಂದು ರುದ್ರಿಯ ಹಿರಿಯಕ್ಕ ಹೇಳುವ ಖಡಕ್ ಮಾತುಗಳು ನಿಜಕ್ಕೂ ತಟ್ಟುವಂಥವು. ಅಸಲಿಗೆ ರುದ್ರಿಯ ಹಿರಿಯಕ್ಕ ಸ್ವತಃ ಶೋಷಣೆಯ ಬಲಿಪಶು. ಆದರೆ ರಾತ್ರೋರಾತ್ರಿ ರುದ್ರಿಯ ಪಲಾಯನಕ್ಕೆ ನೆರವಾಗುವ ಮೂಲಕವಾಗಿ ತಂಗಿಯ ಸ್ವಾತಂತ್ರ್ಯದಲ್ಲಿ ತನ್ನ ವಿಮೋಚನೆಯನ್ನು ಕಂಡುಕೊಳ್ಳುವ ಆಕೆಯ ಹೆಜ್ಜೆ ಸಮಯೋಚಿತವಷ್ಟೇ ಅಲ್ಲ, ವೈಚಾರಿಕತೆಯಿಂದ ಆಕೆಗೆ ಸಿಕ್ಕ ಹೊಸ ಸ್ವಾತಂತ್ರ್ಯದ ಸಂಕೇತವೂ ಹೌದು. ಏಕೆಂದರೆ ಅಷ್ಟು ಮಾಡಲೂ ಅವಳಿಗೆ ಧೈರ್ಯ ಬಂದಿದ್ದು ತಂಗಿ ರುದ್ರಿಯ ನಿರ್ಭಿಡೆಯ ಗುಣದಿಂದಷ್ಟೇ. ದೌರ್ಜನ್ಯವನ್ನು ಮುಲಾಜಿಲ್ಲದೆ ಪ್ರತಿಭಟಿಸಿ ಹಿಮ್ಮೆಟ್ಟಿಸುವ, ಮನಸ್ಸು ಮಾಡಿದರೆ ಕಿಚ್ಚಾಗಬಹುದಾದ ಕಿಡಿಯನ್ನು ಭರವಸೆಗಳೇ ಇಲ್ಲದ ಅಕ್ಕನಿಗೆ ನೀಡಿ ಅದನ್ನು ದೀಪವಾಗಿಸಿಕೊಂಡ ಶ್ರೇಯಸ್ಸು ರುದ್ರಿಗಲ್ಲದೆ ಇನ್ಯಾರಿಗೆ ತಾನೇ ನೀಡಬಹುದು!
‘ಜೀರ್ಜಿಂಬೆ’ ನಿಜಕ್ಕೂ ಕಾಡಿದ, ಬಹುಕಾಲ ಮನದಲ್ಲಿ ಉಳಿದುಹೋಗುವ ಚಿತ್ರಗಳಲ್ಲೊಂದು.
ಕೊನೇ ಮಾತು:
ಹರಿಯಾಣಾದ ಗುರುಗ್ರಾಮದ ಸೋಹ್ನಾ ರಸ್ತೆಯಲ್ಲಿರುವ ರಹೇಜಾ ಮಾಲ್ ಗೆ ಬಂದು ‘ಜೀರ್ಜಿಂಬೆ’ ಚಿತ್ರದ ಟಿಕೆಟ್ ತೆಗೆದುಕೊಂಡೆ. ಯಾರಾದರೂ ಕನ್ನಡದವರು ಸಿಕ್ಕರೆ ಮಾತಾಡಿಸೋಣ ಎಂದು ಮನದಲ್ಲಿ ಮಂಡಿಗೆ ತಿಂದಿದ್ದೇ ಬಂತು. ಇಡೀ ಥಿಯೇಟರ್ ನಲ್ಲಿ ನಾನೊಬ್ಬನೇ. ಸಂಪೂರ್ಣ ಆಡಿಟೋರಿಯಂ ಅನ್ನು ನಾನೊಬ್ಬನೇ ಬುಕ್ ಮಾಡಿಕೊಂಡು ವಿಶೇಷ ಪ್ರದರ್ಶನವನ್ನು ನೋಡಿದಂತೆ. ಅದೇನು ಅನುಕಂಪವೋ, ಅಚ್ಚರಿಯೋ ಅಥವಾ ಇನ್ನೇನೋ… ಒಂದಿಬ್ಬರು ಮಲ್ಟಿಪ್ಲೆಕ್ಸ್ ಸಿಬ್ಬಂದಿಗಳು ತಾಸಿಗೊಮ್ಮೆ ಬಂದು ನನ್ನನ್ನು ಅಚ್ಚರಿಯೆಂಬಂತೆ ದೂರದಿಂದಲೇ ಇಣುಕಿನೋಡುವುದೂ ಮರೆಯಾಗುವುದೂ ಆಯಿತು.
ಹೌದ್ಹೌದು… ಬದುಕಿಗೆ ಇಂಥಾ ಅಪರೂಪದ ಜೀವನಾನುಭವಗಳೂ ಬೇಕು!






0 Comments