‘ಸ್ಟಾರ್ಟ್ಅಪ್ಸ್’ ಸಿಂಗಾಪುರ್

ಬೇರೆ ಎಲ್ಲಾ ಉದ್ಯೋಗಗಳಿಗಿಂತ ಪತ್ರಿಕೋದ್ಯಮ ತುಂಬಾ ಉತ್ತಮ ಕೆಲಸ ನನ್ನ ಪ್ರಕಾರ. ಸರ್ಕಾರಿ ರಜೆಗಳು, ವೈಯಕ್ತಿಕ ರಜೆಗಳು ಸಿಗೋದಿಲ್ಲ ಅನ್ನೋದು ಬಿಟ್ರೆ, ಬಹುತೇಕ ಹಬ್ಬ ಹರಿದಿನಗಳು ಆಫೀಸ್ ನಲ್ಲೇ ಆಚರಿಸುವುದು ಬಿಟ್ರೆ, ಚ್ಯಾನೆಲ್ ಲೋಗೋ ಕೈಯಲ್ಲಿದ್ದಾಗ ಮಾತ್ರ ನಮ್ಮನ್ನು ನಾವು ಸುರಕ್ಷಿತ ಅಂದುಕೊಳ್ಳೋದು ಬಿಟ್ರೆ.. ಇಷ್ಟಕ್ಕೆಲ್ಲಾ ವ್ಯವದಾನ ಇದ್ದು, ನಿಯತ್ತಾಗಿ ಕೆಲಸ ಮುಗಿಸಿ ಮನೆಗೆ ಹೊರಟರೆ ಮುಗೀತು. ಮತ್ತೆ ನಾವ್ಯಾರೋ – ನೀವ್ಯಾರೋ. ಆದರೆ ಸಮಯಕ್ಕೆ ಸರಿಯಾಗಿ ಕಚೇರಿಯಿಂದ ಎಸ್ಕೇಪ್ ಆಗ್ತೀವೋ ಇಲ್ವೋ ಅನ್ನೋದೇ ಯಕ್ಷಪ್ರಶ್ನೆ..!

ಇದಕ್ಕೆ ವಿರುದ್ಧವಾದ ಇನ್ನೊಂದು ಕ್ಷೇತ್ರವಿದೆ. ಅದೇ ಎಂಜಿನಿಯರ್ ಗಳ ಜಗತ್ತು. ಬೇಕಾದಷ್ಟು ರಜೆಗಳು, ಉತ್ತಮ ವ್ಯವಸ್ಥೆಗಳು, ನಾನಾ ಸೌಕರ್ಯಗಳು ಹೀಗೆ ಒಂದ ಎರಡಾ. ಗಂಡ – ಹೆಂಡತಿಯನ್ನಾದ್ರೂ ಮರೆತಾರು ಇವರೆಲ್ಲ, ತಮ್ಮ ತಮ್ಮ ಲ್ಯಾಪ್ಟಾಪ್ ಗಳನ್ನು ಮಾತ್ರ ದೇವರಾಣೆಗೂ ಬಿಡೋದಿಲ್ಲ. ಆಫೀಸ್ ನಲ್ಲೂ ಕೆಲಸ. ಮನೆಗೆ ಬಂದು ಕೆಲಸ. ನಂಗಂತೂ ಈ ದೃಶ್ಯ ದಿನನಿತ್ಯದ್ದು.

ಇಂತಹ ಕ್ಷೇತ್ರಗಳಿಗೆ ಎಲ್ಲಿಲ್ಲದ ಡಿಮ್ಯಾಂಡ್ ಇರೋದಂತೂ ನಿಜ ಬಿಡಿ. ಬೆಂಗಳೂರು ಐ ಟಿ ಕಂಪೆನಿಗಳಿಂದಾಗಿ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಗಳಿಸಿದೆ. ಇನ್ನೂ ಇವುಗಳ ಮಧ್ಯೆ ಸ್ಟಾರ್ಟ್ಅಪ್ಸ್ ಗಳು ಕೂಡ ತಲೆಯೆತ್ತುತ್ತಿವೆ. ಈ ಬಗ್ಗೆ ಕರ್ನಾಟಕ ಸರ್ಕಾರವು ಕೂಡ ಹೆಚ್ಚಿನ ಒಲವು ತೋರಿದೆ. ವಾಣಿಜ್ಯೋದ್ಯಮಿಗಳು ವಿವಿಧ ಕ್ಷೇತ್ರಗಳಲ್ಲಿ ಆರಂಭಿಸುವ ಕಂಪೆನಿಗಳಿಗೆ ಬಂಡವಾಳ ಹೂಡುವ ಬೃಹತ್ ಯೋಜನೆಗೆ ಮುಂದೆ ಬಂದಿದೆ. ಈ ಮಾಹಿತಿಯಿಂದಾಗಿ 5 ಸಾವಿರಕ್ಕೂ ಅಧಿಕ ಕಂಪೆನಿಗಳು ಈಗಾಗಲೇ ನೋಂದಣಿ ಮಾಡಿಕೊಂಡಿವೆ. ಇವಕ್ಕೆಲ್ಲ ಎಷ್ಟರ ಮಟ್ಟಿಗೆ ಸೌಕರ್ಯ – ಸವಲತ್ತುಗಳು ಲಭ್ಯವಾಗಲಿದೆ ಅನ್ನೋದನ್ನ ಮಾತ್ರ ಅಧಿಕಾರಿಗಳೇ ಉತ್ತರಿಸಬೇಕು.

ಈ ವಿಚಾರದಲ್ಲಿ ಸಿಂಗಾಪುರ ಒಂದು ಹೆಜ್ಜೆ ಮುಂದಿದೆ ಎಂದರೆ ತಪ್ಪಾಗಲಾರದು. ಸ್ಟಾರ್ಟ್ ಅಪ್ಸ್ ಗಳಿಗಂತೂ ಈ ದೇಶ, ತವರೂರು ಎಂದೇ ಬಿಂಬಿತ. ಭಾರತದಲ್ಲಿ ಹೆಸರುವಾಸಿಯಾಗಿದ್ದ ಹಾಗೂ ವಾಲ್ ಮಾರ್ಟ್ ಗೆ ಮಾರಾಟವಾಗಿರುವ “ಫ್ಲಿಪ್ ಕಾರ್ಟ್ “ ಸಿಂಗಾಪುರದಲ್ಲಿ ನೊಂದಣಿ ಆಗಿರುವ ಕಂಪೆನಿ. ಇದಲ್ಲದೆ ಯು2ಒಪಿಯಾ ಮೊಬೈಲ್, ಮೊಬಿಕಾನ್, ಮಿಲಾಪ್, ಇನ್ ಮೊಬಿ, ಗ್ರೋಫೇರ್ಸ್ ಹೆಸರಿನ ಕಂಪೆನಿಗಳು ಕೂಡ ರಿಜಿಸ್ಟರ್ ಆಗಿರೋದು ಇಲ್ಲಿ.

ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳ ಸ್ಟಾರ್ಟ್ ಅಪ್ ಕಂಪೆನಿಗಳು ಸಿಂಗಾಪುರದತ್ತ ಮುಖ ಮಾಡುತ್ತಿವೆ. ಹೆಚ್ಚಿನ ಕಂಪೆನಿಯ ಆರಂಭ ಈ ದೇಶದಿಂದಲೇ ಆಗುತ್ತಿದೆ. ಅದಕ್ಕೂ ಹಲವಾರು ಕಾರಣಗಳಿವೆ.
ಮೊದಲನೆಯದು ಮೂಲ ಸೌಕರ್ಯ ಹಾಗೂ ಸೌಲಭ್ಯ. ಉತ್ಪನ್ನಗಳ ಕಸ್ಟಮ್ಸ್ ಕ್ಲಿಯರ್ ಆಗಲು ಕನಿಷ್ಟ 30 ದಿನಗಳು ಬೇಕು ನಮ್ಮ ದೇಶದಲ್ಲಿ. ಅದೇ ಸಿಂಗಾಪುರದಲ್ಲಿ ಐದು ಗಂಟೆಗಳ ಒಳಗೆ ಈ ಹಂತಗಳು ಕೊನೆಗೊಂಡು ಸರಕುಗಳನ್ನು ಖರೀದಿದಾರನ ಸ್ಥಳಕ್ಕೂ ತಲುಪಿಸಬಹುದಾಗಿದೆ. ಈ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಸಿಂಗಾಪುರ 2 ನೇ ಸ್ಥಾನದಲ್ಲಿದೆ.

ಮೊಳಕೆಯೊಡೆಯಲು ಇಚ್ಛಿಸುವ ಉದ್ಯಮಿಗಳಿಗೆ ಮೊದಲ ಆದ್ಯತೆ ಆಯಾ ದೇಶ ಅಥವಾ ಆ ಪ್ರದೇಶದಲ್ಲಿ ಲಭ್ಯವಾಗುವ ಮೂಲಭೂತ ಅಗತ್ಯತೆ. ಈ ಮೂಲಕ ತಮ್ಮ ಉದ್ಯಮಗಳ ಕಾರ್ಯ ವಿಧಾನಗಳು ಯಾವ ರೀತಿಯಲ್ಲಿ, ಎಷ್ಟು ಸಮಯದಲ್ಲಿ ಕೈಗೊಳ್ಳಲಿದೆ ಎಂಬುದನ್ನು ಕೂಡ ಪರಿಗಣಿಸಲಾಗುತ್ತದೆ. ಒಂದು ಕಂಪೆನಿ ಆರಂಭಗೊಳ್ಳಲು ನಮ್ಮ ದೇಶದಲ್ಲಿ ಒಟ್ಟು 13 ಹಂತದ ಪ್ರಕ್ರಿಯೆ ಇದೆ. ಇದು ಸರಾಸರಿ 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಅದೇ ಸಿಂಗಾಪುರದಲ್ಲಿ ಕೇವಲ 3 ಹಂತಗಳಿದ್ದು, ಒಂದು ದಿನದಲ್ಲಿ ಮುಗಿಸಬಹುದಾಗಿದೆ. ಬಹುತೇಕ ಮಾಹಿತಿಗಳನ್ನು ಇಲ್ಲಿ ಆನ್ಲೈನ್ ಮೂಲಕ ಸಲ್ಲಿಸಲಾಗುತ್ತದೆ.

ಹೊಸದಾಗಿ ಕಂಪೆನಿ ಆರಂಭಿಸೋದು ಅಂದ್ರೆ ಸುಲಭದ ಮಾತಲ್ಲ. ಅದಕ್ಕೆ ಬೇಕಾದ ಖರ್ಚು ವೆಚ್ಚಗಳು, ಕಂಪೆನಿ ಲಾಭದ ನಿಟ್ಟಿನಲ್ಲಿ ಸಾಗುವ ಬಗ್ಗೆ ಆತಂಕ – ಭಯದಲ್ಲಿರುವ ಉದ್ಯಮಿಗಂತೂ ಸಿಂಗಾಪುರ ಸ್ವರ್ಗವೇ ಸರಿ. ರೋಗಿ ಬಯಸಿದ್ದು, ವೈದ್ಯರು ಕೊಟ್ಟಿದ್ದು ಒಂದೇ ಹೇಳುವ ರೀತಿಯ ಅನುಭವ ಇಲ್ಲಿ ಆಗೋದಂತೂ ಗ್ಯಾರಂಟಿ. ಕಾಗದ ಪತ್ರಗಳು, ಸ್ಟಾಂಪ್ ಅದು ಇದು ಟೆನ್ಶನ್ ಮಾಡ್ತಾ 30 ದಿನಗಳ ಸಮಯ ಕಳೆಯುವುದಿಕ್ಕಿಂತ ಇಂತಹ ದೇಶಗಳಲ್ಲಿ ಆರಾಮವಾಗಿ ಯೋಜನೆಯನ್ನು ಆರಂಭಿಸುವ ನಿರ್ಧಾರ ಬಹುತೇಕರದ್ದಾಗಿದೆ.

ಇನ್ನೂ ಬಹುಮುಖ್ಯವಾದುದು ತೆರಿಗೆ ನಿಯಮಗಳು. ದುರದೃಷ್ಟವಶಾತ್, ಭಾರತದ ತೆರಿಗೆ ವ್ಯವಸ್ಥೆಯು ಸಂಕೀರ್ಣವಾದುದು. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಹೇಳುವ ಹಾಗೆ ಸಾಮಾನ್ಯ ಜನರು ಕಟ್ಟುವ ತೆರಿಗೆಗೆ ಯಾವ ಕಿಮ್ಮತ್ತು ಇಲ್ಲದಾಗಿದೆ. ಜನರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುತ್ತಾರೋ ಇಲ್ವೋ ಆದರೆ ನಮ್ಮ ದೇಶದಲ್ಲಿ ತೆರಿಗೆ ಮಾತ್ರ ಕಟ್ಟುನಿಟ್ಟಾಗಿ ಸಂಗ್ರಹಿಸಲಾಗುತ್ತದೆ. ಭಾರತದಲ್ಲಿ ತೆರಿಗೆಯ ಆದಾಯವು 10 ಮಿಲಿಯನ್ ಭಾರತೀಯ ರೂಪಾಯಿಗಳನ್ನು ಮೀರಿದರೆ ದೇಶೀಯ ಕಂಪೆನಿಗಳಿಗೆ ಕಾರ್ಪೊರೇಟ್ ತೆರಿಗೆ ದರವು ಶೇ 30% ಆಗಿದೆ. ಆದರೆ ಸಿಂಗಾಪುರದಲ್ಲಿ ಶೇ 17% ರಷ್ಟು ಆಗಿದ್ದು, ಇದು ವಿಶ್ವದಲ್ಲೇ ಅತಿ ಕಡಿಮೆ ಮಟ್ಟದ್ದು ಎಂಬ ಖ್ಯಾತಿಗೂ ಪಾತ್ರವಾಗಿದೆ. ತಮ್ಮ ಆದಾಯವನ್ನು ಉತ್ತಮಗೊಳಿಸಲು ಬಯಸುವ ಹೂಡಿಕೆದಾರರಿಗೆ ಖಂಡಿತವಾಗಿಯೂ ಅತ್ಯಂತ ತೆರಿಗೆ ಸ್ನೇಹಿ ಮತ್ತು ಆಕರ್ಷಕ ಸ್ಥಳ ಇದಾಗಿದೆ. ಹೊಸದಾಗಿ ಪ್ರಾರಂಭವಾದ ಕಂಪೆನಿಗಳಿಗೆ ತೆರಿಗೆ ವಿನಾಯಿತಿ ಯೋಜನೆಯನ್ನು ಕೂಡ ಕಾಣಬಹುದು. ಆರಂಭದ ಮೂರು ವರ್ಷಗಳ ಮೌಲ್ಯಮಾಪನಕ್ಕೆ, ಸಾಮಾನ್ಯ ಶುಲ್ಕದ ಆದಾಯದ ಮೊದಲ $ 1೦೦,೦೦೦ ಮೊತ್ತದ ಮೇಲೆ, ಸಂಪೂರ್ಣ ತೆರಿಗೆ ವಿನಾಯಿತಿಗಾಗಿ ಹಕ್ಕು ಸಾಧಿಸಬಹು ದಾಗಿದೆ.

ಇನ್ನು ಬೌದ್ಧಿಕ ಆಸ್ತಿ ಸಂರಕ್ಷಣೆ ಅಥವಾ ಇಂಟೆಲೆಕ್ಚುವಲ್ ಪ್ರಾಪರ್ಟಿ ಬಗ್ಗೆ ಗೌರವಾನ್ವಿತವಾಗಿ ಮತ್ತು ವ್ಯಾಪಕವಾಗಿ ಅಭ್ಯಾಸ ಮಾಡುವ ಮೂಲಕ ಬಲವಾದ ಚೌಕಟ್ಟನ್ನು ಸಿಂಗಾಪುರ ಈಗಾಗಲೇ ಸ್ಥಾಪಿಸಿದೆ. ಈ ನಿಟ್ಟಿನಲ್ಲಿ ವಿಶ್ವಾದ್ಯಂತ ಇದು 4 ನೇ ಶ್ರೇಣಿಯನ್ನು ಹೊಂದಿದೆ. ಏಷ್ಯಾದ ಅತ್ಯಂತ ಕ್ರಿಯಾತ್ಮಕ ಆರ್ಥಿಕ ಕೇಂದ್ರಗಳಲ್ಲಿ ಇದು ಕೂಡ ಒಂದು. ಭಾರತವು ಈ ವಿಚಾರದಲ್ಲಿ ಅಷ್ಟೊಂದು ಗಮನ ಹರಿಸಿದಂತೆ ಕಾಣುತ್ತಿಲ್ಲ. ಆದರೆ ಇತ್ತೀಚಿನ ಭಾರತ – ಅಮೆರಿಕಾ ಕಾರ್ಯನಿರತ ಗುಂಪಿನ ರಚನೆ ಮತ್ತು ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ನೀತಿಯನ್ನು ಅಭಿವೃದ್ಧಿಪಡಿಸಿರುವುದು ಗಮನಾರ್ಹವಾದ ಎರಡು ಬೆಳವಣಿಗೆಗಳಾಗಿವೆ. ಈ ಪ್ರಯತ್ನಗಳ ಹೊರತಾಗಿಯೂ, 2017 ಬೌದ್ಧಿಕ ಆಸ್ತಿ ಸೂಚ್ಯಂಕದಲ್ಲಿ 45 ದೇಶಗಳಲ್ಲಿ ಭಾರತ 43 ನೇ ಸ್ಥಾನವನ್ನು ಪಡೆದಿದೆ.

ಒಂದು ಕಂಪೆನಿಗೆ ಸೇರಿದ ಪೇಟೆಂಟ್, ಒಬ್ಬ ವ್ಯಕ್ತಿಯಿಂದ ಮೂಡಿದ ಕಲ್ಪನೆಗಳು ಅವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಾಗ ಬೇರೆ ವಿಧದಿಂದ ಅನುಕರಣೆಯಾಗದ ರೀತಿಯಲ್ಲಿ ಅದಕ್ಕೆ ಬೇಕಾದ ಸುರಕ್ಷತೆ ಅಥವಾ ಕಾನೂನು ಜಾರಿ ಮಾಡೋದು ಅತ್ಯಗತ್ಯ. ಆದರೆ ಇಂತಹ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸರಿಯಾದ ಕ್ರಮ ಅನುಸರಿಸದೆ ಹೋದರೆ ಕಂಪೆನಿಗಳು , ನಿಜಕ್ಕೂ ವಿದೇಶಗಳತ್ತ ಮುಖ ಮಾಡೋದ್ರಲ್ಲಿ ಸಂಶಯವೇ ಇಲ್ಲ.

ಇಷ್ಟೇ ಅಲ್ಲದೆ, ಶ್ರೀಮಂತ ರಾಷ್ಟ್ರವಾಗಿರುವ ಸಿಂಗಾಪುರದಲ್ಲಿ ಗುಣಮಟ್ಟದ ಜೀವನ ಶೈಲಿ, ರಾಜಕೀಯ ಸ್ಥಿರತೆ, ಈ ಸಂಬಂಧ ಜಾರಿಯಲ್ಲಿರುವ ಕಟ್ಟುನಿಟ್ಟಿನ ಕಾನೂನು. ಅಲ್ಲದೆ ವ್ಯಾಪಾರದ ದೃಷ್ಟಿಯಿಂದ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಸ್ಟಾರ್ಟ್ ಅಪ್ಸ್ ಗಳಿಗೆ ವರದಾನವಾಗಲಿದೆ.

ದೇಶದ ತಲಾ ಆದಾಯದ ಹೆಚ್ಚಳ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆಯೇ ಇದರ ಮೂಲ ಉದ್ದೇಶ. ಈ ಮೂಲಕ ದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಯತ್ತ ಗಮನಹರಿಸುವ ಇವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ರೆಡ್ ಕಾರ್ಪೆಟ್ ಮೂಲಕ ಸ್ಟಾರ್ಟ್ ಅಪ್ಸ್ ಗಳನ್ನು ಸ್ವಾಗತಿಸುತ್ತಿದೆ ಸಿಂಗಾಪುರ. ಪುಟ್ಟ ಮಕ್ಕಳನ್ನು ಕೈ ಹಿಡಿದು ನಡೆಸುವ ರೀತಿಯಲ್ಲಿ ಕಂಪೆನಿ, ಉತ್ಪಾದನೆ, ಹಾಗೂ ಅವುಗಳ ಮಾರಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ.

ಆದರೆ ನಮ್ಮಲ್ಲಿ ಸಣ್ಣ ಪುಟ್ಟ ಕೆಲಸಗಳಿಗೂ ದೀರ್ಘ ಪ್ರಕ್ರಿಯೆಗಳು, ಕೆಲಸ ಆಗಬೇಕಾದ್ರೆ ಅಲ್ಲಲ್ಲಿ ಹುತ್ತಗಳಂತೆ ತಲೆ ಎತ್ತುವ ಲಂಚ ಕೇಳೋ ಅಧಿಕಾರಿಗಳು, ಸರ್ಕಾರಿ ಸಂಬಂಧಿತ ಕೆಲಸಗಳು ಪೂರ್ಣಗೊಳ್ಳೋದೇ ಅಪರೂಪ. ಸಿಂಗಾಪುರದ ರೀತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಇನ್ನೆಷ್ಟು ವರ್ಷಗಳು ಕಾಯಬೇಕೋ…

‍ಲೇಖಕರು Avadhi

November 21, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: