ಜಿ ಪಿ ಬಸವರಾಜು ನೆನಪಿನಲ್ಲಿ ಕಟ್ಟೀಮನಿ

ಜಿ ಪಿ ಬಸವರಾಜು

1

ಕೇವಲ ಒಂದೂಕಾಲು ಶತಮಾನದಷ್ಟು ಇತಿಹಾಸ ಹೊಂದಿರುವ ಕನ್ನಡ ಕಾದಂಬರಿ ಪರಂಪರೆಯಲ್ಲಿ ಸಿಕ್ಕುವ ಶಿಖರ ಕೃತಿಗಳು ಬೆರಳೆಣಿಕೆಯಷ್ಟು. ಇವು ಎಲ್ಲ ಕಾಲದಲ್ಲೂ ಬೆಳಗುವ ಕೃತಿಗಳು ಎಂಬುದು ನಿಜ. ಇವುಗಳಿಗೆ ಕನ್ನಡ ವಿಮರ್ಶಾ ಲೋಕದಲ್ಲಿ ಸರಿಯಾದ ಗೌರವ ದೊರಕಿದೆ; ಓದುಗರ ಪ್ರೀತಿಯೂ ಸಮೃದ್ಧವಾಗಿದೆ. ಇದೆಲ್ಲ ಹೆಮ್ಮೆ ಪಡಬೇಕಾದ ಸಂಗತಿಯೇ. ಆದರೆ ಇಷ್ಟೇ ಸಾಕೇ? ಇತರ ಕೃತಿಗಳನ್ನು ಗಮನಿಸಬೇಕಾದ ಅಗತ್ಯವಿಲ್ಲವೇ?

ಒಂದು ಪರಂಪರೆಯಲ್ಲಿ ಎತ್ತರವನ್ನಷ್ಟೇ ನೋಡದೆ, ಬೇರೆ ಬೇರೆಯ ಕಾರಣಗಳನ್ನು ಕೊಟ್ಟುಕೊಂಡು ಗಮನಿಸಬೇಕಾದ ಸಾಹಿತ್ಯ ಕೃತಿಗಳೂ ಇರುತ್ತವೆ. ಸಾಹಿತ್ಯಾಭ್ಯಾಸಿಗಳು ಇಂಥ ಕೃತಿಗಳನ್ನೂ ನೋಡಬೇಕಾದ, ಅಭ್ಯಾಸ ಮಾಡಬೇಕಾದ ಜರೂರೂ ಇರುತ್ತದೆ. ಸಾಂಸ್ಕೃತಿಕವಾಗಿಯೂ ಇಂಥ ಕೃತಿಗಳಿಗೆ ಬೇರೆಯದೇ ಆದ ಅರ್ಥ ಮತ್ತು ಮಹತ್ವ ಇರುತ್ತದೆ. ಎಲ್ಲ ಕೃತಿಗಳು ಸೇರಿದಾಗಲೇ ಒಂದು ಪರಂಪರೆ ಸಮೃದ್ಧಿವಾಗುತ್ತದೆ; ಅದರ ವೈವಿಧ್ಯ, ಪ್ರಯೋಗಶೀಲತೆ, ಭಾಷಾ ಪ್ರಯೋಗ, ಸಾಮಾಜಿಕ ಬದ್ಧತೆ ಮತ್ತು ರಾಜಕೀಯ ನಿಲುವು-ನೋಟ ಇತ್ಯಾದಿ ಅನೇಕ ಅಂಶಗಳು ಕೂಡಿಕೊಳ್ಳುತ್ತವೆ.

ಹೀಗೆ ಒಂದು ಪರಂಪರೆಯಲ್ಲಿ ವಿಭಿನ್ನ ಕಾರಣಗಳಿಗಾಗಿ ಜಾಗ ಪಡೆದುಕೊಳ್ಳುವ ಕಾದಂಬರಿಕಾರರು, ಬಸವರಾಜ ಕಟ್ಟೀಮನಿ. ಇದು ಕಟ್ಟೀಮನಿ ಅವರ ಶತಮಾನೋತ್ಸವ ಸಂದರ್ಭ(ಹುಟ್ಟು: 5 ಅಕ್ಟೋಬರ್ 1919). ಈ ಹೊತ್ತಿನಲ್ಲಿ ಕಟ್ಟೀಮನಿಯವರನ್ನು, ಅವರ ಬದುಕು-ಸಾಧನೆಗಳನ್ನು, ಹೋರಾಟಗಳನ್ನು, ಸಾಹಿತ್ಯಕ ಕೊಡುಗೆಗಳನ್ನು, ಸಾಂಸ್ಕೃತಿಕ ಮಹತ್ವವನ್ನು ತಿಳಿಯುವ, ಅದನ್ನು ಒರೆಗೆ ಹಚ್ಚುವ ಅಗತ್ಯ ಕೂಡಾ ಇರುತ್ತದೆ. ಇದು ಒಬ್ಬ ಲೇಖಕನಿಗೆ, ಸಮಾಜದ ಮುನ್ನಡೆಗೆ ಕಾರಣವಾದ ಹೋರಾಟಗಾರನಿಗೆ, ಸಾಂಸ್ಕೃತಿಕ ಚಿಂತಕನಿಗೆ ಕೊಡಬೇಕಾದ ಗೌರವ ಕೂಡಾ ಆಗಿರುತ್ತದೆ.

2

ಬಸವರಾಜ ಕಟ್ಟೀಮನಿ ಅವರು ಕಾದಂಬರಿ ಕ್ಷೇತ್ರವನ್ನು ಪ್ರವೇಶಿಸುವ ಹೊತ್ತಿಗೆ ಕನ್ನಡದಲ್ಲಿ ಮಹತ್ವದ ಕಾದಂಬರಿಗಳು ಬಂದಿದ್ದವು. ಕುವೆಂಪು ಅವರ ಕಾನೂರು ಹೆಗ್ಗಡಿತಿ (1936), ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’ (1941) ಪ್ರಕಟವಾಗಿ, ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದವು.  ಕಟ್ಟೀಮನಿ ಅವರು ರಭಸದಿಂದ ಕಾದಂಬರಿಗಳನ್ನು ಬರೆದು ಪ್ರಕಟಿಸುತ್ತಿದ್ದ ಹೊತ್ತಿನಲ್ಲಿಯೇ ರಾವ್ ಬಹದ್ದೂರ ಅವರ ‘ಗ್ರಾಮಾಯಣ’ದಂಥ ಕೃತಿಯೂ (1955) ಬೆಳಕು ಕಂಡಿತ್ತು. ನವೋದಯದ ಉತ್ಸಾಹ, ಹುರುಪುಗಳು ಇನ್ನೂ ತಗ್ಗಿರಲಿಲ್ಲ. ಆಗ ಬರವಣಿಗೆಯನ್ನು ಆರಂಭಿಸುವವರೆಲ್ಲ ನವೋದಯದ ಪ್ರಭಾವೀ ಲೇಖಕರ ನೆರಳಲ್ಲಿಯೇ ನಿಂತು ತಮ್ಮ ದಾರಿಯನ್ನು ಕಂಡುಕೊಳ್ಳಬೇಕಾದ ಅನಿವಾರ್ಯವೂ ಇತ್ತು.

ಇಂಗ್ಲಿಷ್ ಸಾಹಿತ್ಯದಿಂದ ಪ್ರೇರಣೆಯನ್ನು ಪಡೆದಿದ್ದ ನವೋದಯ ಸಾಹಿತ್ಯ, ಬಂಗಾಳಿ, ಮರಾಠಿ, ತೆಲುಗು ಇತ್ಯಾದಿ ಭಾಷೆಗಳಲ್ಲಿ ಆಗುತ್ತಿದ್ದ ಬದಲಾವಣೆಗಳನ್ನೂ ಗಮನಿಸುತ್ತ ಬಂದಿತ್ತು. ಬಂಗಾಳಿ, ಮರಾಠಿ ಮತ್ತು ತೆಲುಗು ಭಾಷೆಗಳನ್ನು ಕಲಿತು, ಅಲ್ಲಿ ಪ್ರಕಟವಾಗುತ್ತಿದ್ದ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಸತ್ವವನ್ನು ತುಂಬುವ ಕೆಲಸವನ್ನು ನಮ್ಮ ಕನ್ನಡ ಲೇಖಕರು ಮಾಡುತ್ತಿದ್ದರು. ಎಲ್ಲ ದಿಕ್ಕುಗಳಿಂದಲೂ ಬರುವ ಗಾಳಿ ಬೆಳಕಿಗೆ ಮೈತೆರೆದುಕೊಂಡ ನವೋದಯ ಸಾಹಿತ್ಯ ಗರಿಬಿಚ್ಚಿ ಕುಣಿಯುತ್ತಿತ್ತು.

ಇದೇ ಹೊತ್ತಿನಲ್ಲಿ ಪಶ್ಚಿಮದಲ್ಲಿ, ವಿಶೇಷವಾಗಿ ಯೂರೋಪ್‍ನಲ್ಲಿ ಅನೇಕ ಬಿಕ್ಕಟ್ಟುಗಳು ಕಾರಣವಾಗಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಲೋಕದಲ್ಲಿ ಅಲ್ಲೋಲ ಕಲ್ಲೋಲವಾದ ಬೆಳವಣಿಗೆಗಳು ಆಗಿದ್ದವು. ಎರಡನೇ ಜಾಗತಿಕ ಮಹಾಯುದ್ಧ ಯೂರೋಪ್ ರಾಷ್ಟ್ರಗಳಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟುಗಳನ್ನು ಹುಟ್ಟು ಹಾಕಿತ್ತು. ಇದರಿಂದಾಗಿ ಸಾಮಾಜಿಕ ಬದುಕಿನಲ್ಲಿ ತೀವ್ರಗತಿಯ ಬದಲಾವಣೆಗಳು, ಪಲ್ಲಟಗಳು ಕಂಡುಬರುತ್ತಿದ್ದವು. ಮನುಷ್ಯರ ನಡವಳಿಕೆಗಳಲ್ಲಿ, ಸಂಬಂಧಗಳಲ್ಲಿ ಬದಲಾವಣೆಗಳಾಗಿದ್ದವು. ಮನುಕುಲವನ್ನು ಮುನ್ನಡೆಸುತ್ತ ಬಂದಿದ್ದ ಮೌಲ್ಯಗಳಲ್ಲಿ, ನಂಬಿಕೆಗಳಲ್ಲಿ ಬಿರುಕು ಕಾಣಿಸಿದ್ದವು. ಎಲ್ಲದಕ್ಕಿಂತ ಮುಖ್ಯವಾಗಿ ಹಸಿವು ತನ್ನ ಘೋರ ರೂಪವನ್ನು ತೋರಿಸಿತ್ತು.

ಬಡತನ, ಆರ್ಥಿಕ ಸಂಕಷ್ಟ ಆ ಹೊತ್ತಿನ ಮುಖ್ಯ ಪ್ರಶ್ನೆಯಾಗಿ, ಅದನ್ನು ಎದುರಿಸುವುದೇ ದೊಡ್ಡ ಸವಾಲಾಗಿ ಕಾಣುತ್ತಿತ್ತು. ಬರಹಗಾರರು, ಚಿಂತಕರು, ಬುದ್ಧಿಜೀವಿಗಳು, ಸಾಮಾಜಿಕ ಹೋರಾಟಗಾರರು, ರಾಜಕೀಯ ಚಿಂತಕರು ಈ ಬಿಕ್ಕಟ್ಟುಗಳಿಂದ ಸಮಾಜ ಪಾರಾಗಲು ದಾರಿಗಳನ್ನು ಹುಡುಕುತ್ತಿದ್ದರು. ನೇರವಾಗಿ ಮನುಷ್ಯನ ಅಂತರಂಗವನ್ನು ಮುಟ್ಟಿ, ಅಲ್ಲಿ ಹೊಸ ತುಡಿತಗಳನ್ನು, ತರಂಗಗಳನ್ನು ಎಬ್ಬಿಸುವ ಸಾಹಿತ್ಯ ಕೃತಿಗಳನ್ನು ಸೃಷ್ಟಿಸುವ ಜರೂರು ಬರಹಗಾರರನ್ನು ಕಾಡುತ್ತಿತ್ತು.  ಕುಸಿದು ಹೋಗಿದ್ದ ಬದುಕಿಗೊಂದು ಪ್ರಗತಿಯ, ಮುನ್ನಡೆಯ ದಾರಿಯನ್ನು ತೋರಿಸುವ ಸಲುವಾಗಿಯೇ ಹಲವರು ಚಿಂತಿಸುತ್ತಿದ್ದರು.  ಇಂಥ ಪರಿಸ್ಥಿತಿಯನ್ನು ದಾಟಲು ಕಾರ್ಲ್ ಮಾರ್ಕ್ಸ್ ಕಂಡುಕೊಂಡಿದ್ದ ಸಿದ್ಧಾಂತ ಸಮರ್ಥವಾದ ಪರಿಹಾರದಂತೆಯೂ ಹಲವರಿಗೆ ಕಂಡಿತು.ಇದರ ಪರಿಣಾಮವೋ ಎನ್ನುವಂತೆ ಪ್ರಗತಿಶೀಲ ಚಿಂತನೆ ಕುಡಿಯೊಡೆಯಿತು.

1935ರಲ್ಲಿ ಪ್ರಗತಿಶೀಲ ಲೇಖಕರ ಸಮಾವೇಶ ಇಂಗ್ಲೆಂಡಿನಲ್ಲಿ ನಡೆಯಿತು. ಇದರ ಪ್ರತಿಧ್ವನಿಯಂತೆ ಭಾರತದಲ್ಲಿಯೂ ಅದೇ ವರ್ಷ ಲಕ್ನೋದಲ್ಲಿ ಭಾರತೀಯ ಪ್ರಗತಿಶೀಲ ಲೇಖಕರ ಸಮಾವೇಶ ಪ್ರೇಮ್‍ಚಂದ್ ಅವರ ಮುಂದಾಳುತನದಲ್ಲಿ ನಡೆಯಿತು. ಇದನ್ನೊಂದು ಚಳವಳಿಯಾಗಿ ಮುನ್ನಡೆಸುವ ಚಿಂತನೆಯೂ, ಚರ್ಚೆಯೂ ಈ ಸಮಾವೇಶದಲ್ಲಾಯಿತು. ಮುಲ್ಕ್‍ರಾಜ್ ಆನಂದ್ ಮತ್ತು ಇತರ ಕೆಲವು ಲೇಖಕರು ಇಂಗ್ಲೆಂಡಿನಲ್ಲಿಯೇ ಪ್ರಗತಿಶೀಲ ಚಳವಳಿಯ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದರು. ಭಾರತದಲ್ಲಿಯೂ ಆರ್ಥಿಕ ಬಿಕ್ಕಟ್ಟು ತೀವ್ರವಾಗಿತ್ತು.

ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ತೀವ್ರವಾದ ಪಲ್ಲಟಗಳು, ಆತಂಕಕಾರಿಯಾದ ಬೆಳವಣಿಗೆಗಳು ಉಂಟಾಗಿ ಬರಹಗಾರರ ಮತ್ತು ಕಲಾವಿದರ ಹೊಣೆಗಾರಿಕೆಗಳು ಹೆಚ್ಚಿದ್ದವು. ಹೊಸ ದಾರಿಯನ್ನು ತುಳಿಯಬೇಕಾದ, ಸಮಾಜವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಬೇಕಾದ ಅನಿವಾರ್ಯ ಸಂದರ್ಭ ಎದುರಾಗಿತ್ತು. ಕನ್ನಡ ನಾಡಿನಲ್ಲಿಯೂ ಕಲಾವಿದರು, ಬರಹಗಾರರು, ಚಿಂತಕರು, ಸಾಮಾಜಿಕ ಹೋರಾಟಗಾರರು ಈ ದಿಕ್ಕಿನಲ್ಲಿ ಚಿಂತಿಸಬೇಕಾದ ಅನಿವಾರ್ಯ ಸಂದರ್ಭವೊಂದು ಎದುರಾಯಿತು.

ಅ.ನ.ಕೃಷ್ಣರಾಯರು ಇಂಥ ಚಿಂತನೆಯ ಮುಂಚೂಣಿಯಲ್ಲಿ ನಿಂತು, ಇದನ್ನೊಂದು ಚಳವಳಿಯಾಗಿ ರೂಪಿಸಲು ನೋಡಿದರು. 1943ರ ಹೊತ್ತಿಗೆ ಪ್ರಗತಿಶೀಲ ಲೇಖಕರ ಮೊದಲ ಸಮಾವೇಶ ನಡೆಯಿತು. ಮಾರ್ಕ್ಸ್ ಚಿಂತನೆ, ತತ್ವಗಳೇ ಪ್ರಧಾನವಾಗಿದ್ದ ಕಾರಣವಾಗಿ ಪ್ರಗತಿಶೀಲ ಲೇಖಕರ ಕಣ್ಣಿಗೆ ಮೊದಲು ಬಿದ್ದವರೆಂದರೆ ಬಡವರು. ಅನೇಕ ರೀತಿಯ ದಬ್ಬಾಳಿಕೆಗೆ, ಬ್ರಿಟಿಷ್ ಆಡಳಿತಗಾರರ, ಬಂಡವಾಳಗಾರರ, ವ್ಯಾಪಾರಗಾರರ, ಭೂಮಾಲೀಕರ ಕೈಯಲ್ಲಿ ಸಿಕ್ಕು ನರಳುತ್ತಿದ್ದ ಈ ಬಡವರು ಎದುರಿಸಬೇಕಾಗಿದ್ದ ಅನ್ನ, ಅರಿವೆ, ವಸತಿ, ಆರೋಗ್ಯ ಸಮಸ್ಯೆಗಳೇ ಪ್ರಗತಿಶೀಲ ಬರಹಗಾರರ ಮತ್ತು ಕಲಾವಿದರ ಚಿಂತನೆಯ ಕೇಂದ್ರಗಳಾದವು. ‌

ಬಡತನಕ್ಕೆ ಮತ್ತು ಶೋಷಣೆಗೆ ಬಲಿಯಾದ ರೈತರು, ಕಾರ್ಮಿಕರು, ವೇಶ್ಯೆಯರು ತಮ್ಮ ಬದುಕನ್ನು ಸುಧಾರಿಸಿಕೊಳ್ಳಬೇಕಾದರೆ ತಮ್ಮ ಬರಹಗಳು ದಾರಿ ತೋರಿಸಬೇಕಾಗುತ್ತದೆ ಎಂಬ ನಂಬಿಕೆಯಿಂದ, ಹುರುಪಿನಿಂದ ಬರೆಯತೊಡಗಿದ ಪ್ರಗತಿಶೀಲ ಲೇಖಕರು, ಶೋಷಣೆಗೆ ಒಳಗಾದ ಈ ಜನರ ನಡುವೆಯೇ ನಿಂತು ಬದುಕನ್ನು ನೋಡಲು, ಅರಿಯಲು, ಅಲ್ಲಿಯ ನೋವು, ನಿಟ್ಟುಸಿರುಗಳನ್ನು ಅನುಭವಿಸಲು ಮುಂದಾದರು. ನೊಂದವರ ದನಿಯಾಗಿ ತಮ್ಮ ಕೃತಿಗಳು ಕಣ್ತೆರೆಯಬೇಕೆಂಬ ಹಂಬಲದಿಂದ, ಸರಳ ಗುರಿಯಿಂದ ಹೊರಟ ಈ ಚಳವಳಿ ಬಹಳ ಕಾಲ ಬಾಳಿಲಲ್ಲ. ಸುಮಾರು ಒಂದು ದಶಕದ ಕಾಲ ಪ್ರಗತಿಶೀಲರು ಕ್ರಿಯಾಶೀಲರಾಗಿದ್ದರು. ನಿಧಾನಕ್ಕೆ ಈ ಗುಂಪಿನಲ್ಲಿ ಒಡಕು ಕಾಣಿಸಿಕೊಂಡಿತು. ಅವರಲ್ಲಿಯೇ ತೀವ್ರ ಭಿನ್ನಮತ, ಟೀಕೆಗಳು ಆರಂಭವಾದವು. ಅಲ್ಲಿಗೆ ಈ ಚಳವಳಿಯ ಉತ್ಸಾಹವೂ ತಣ್ಣಗಾಯಿತು.

ಪ್ರಗತಿಶೀಲ ಚಳವಳಿಯಲ್ಲಿ ಮುಖ್ಯರಾದ ಬರಹಗಾರರೆಂದರೆ ಅನಕೃ, ತರಾಸು, ಚದುರಂಗ, ಬಸವರಾಜ ಕಟ್ಟೀಮನಿ, ನಿರಂಜನ ಮೊದಲಾದವರು. ಇವರೆಲ್ಲರು ಆಗ ಬರೆದ ಕಾದಂಬರಿಗಳು ಹಸಿವಿನ ಸುತ್ತಲೇ ತಿರುಗಿದ್ದು ಅಸಹಜವೇನೂ ಅಲ್ಲ.

3

ಬರೆದೇ ಬದುಕಬೇಕೆಂದು ಬಹುಪಾಲು ಪ್ರಗತಿಶೀಲ ಲೇಖಕರು ನಿರ್ಧರಿಸಿದ್ದರಿಂದ ಮತ್ತು ಕಾದಂಬರಿ ಪ್ರಕಾರವೇ ಅವರ ಅಭಿವ್ಯಕ್ತಿಯ ಪ್ರಮುಖ ಮಾರ್ಗವಾದುದರಿಂದ, ಈ ಬರಹಗಾರರು ಬಹಳ ವೇಗವಾಗಿ ಬರೆದು ಕೃತಿಗಳನ್ನು ಪ್ರಕಟಿಸುವುದು ಅನಿವಾರ್ಯವಾಗಿತ್ತು. ಜೊತೆಗೆ ಕಾದಂಬರಿ ಪ್ರಕಾರಕ್ಕೆ ಹೊಸ ಹೊಸ ಓದುಗರನ್ನು ಸೆಳೆದುಕೊಳ್ಳಬೇಕಾಗಿತ್ತು. ಹೊಸ ಓದುಗರು ಸಿಕ್ಕರೆಂಬುದು ನಿಜ. ಹಾಗೆಯೇ ಬದುಕಿಗೆ ಲೇಖನಿಯನ್ನೇ ನಂಬಿದ್ದ ಬಹುಪಾಲು ಲೇಖಕರು ಓದುಗನಿಗೆ ತೊಡಕಿಲ್ಲದೆ, ಸರಾಗವಾಗಿ ಓದಬಹುದಾಗಿದ್ದ ಕಾದಂಬರಿಗಳನ್ನು ಬರೆಯುತ್ತ ಹೋದರು. ಪ್ರಕಾಶಕರು, ಓದುಗರು ಮತ್ತು ಲೇಖಕರ ನಡುವೆ ಗಾಢ ಸಂಬಂಧವೂ ಈ ಕಾಲದಲ್ಲಿ ಬೆಸೆದುಕೊಂಡಿತು. ಹಾಗೆಯೇ ಈ ಹಾದಿಯನ್ನು ಹಿಡಿದ ಲೇಖಕರ ಮೇಲೆ ಕೆಲವು ಪರೋಕ್ಷ ಪರಿಣಾಮಗಳೂ ಉಂಟಾದವು. ಸಂಖ್ಯೆಯನ್ನು ಈ ಲೇಖಕರು ಹೆಚ್ಚಿಸಿದರೇ ಹೊರತು, ಗುಣ, ಪ್ರಯೋಗ, ಭಾಷೆ, ಶೈಲಿ ಇತ್ಯಾದಿ ಅಂಶಗಳನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳಲಿಲ್ಲ.

ಬಸವರಾಜ ಕಟ್ಟೀಮನಿ ಅವರು ಇದಕ್ಕೆ ಹೊರತಾಗಿ ಉಳಿಯಲಿಲ್ಲ. ಅವರ ಕಾದಂಬರಿಗಳು, ಅಡೆತಡೆ ಇಲ್ಲದ ಕುದುರೆಗಳಂತೆ ಓಡಿದವು. ಕಥೆ ನೇರ, ನಿರೂಪಣೆಯೂ ನೇರ. ಗುರಿಯೂ ನೇರ. ಅವರ ಚಿಂತನೆಯ ಕೇಂದ್ರ ಬಡವರು; ಶೋಷಿತರು: ಸಹಜವಾಗಿಯೇ ರೈತರು; ಗಿರಣಿಯ ಕಾರ್ಮಿಕರು ಮತ್ತು ವೇಶ್ಯೆಯರು.

ಇಷ್ಟಾಗಿಯೂ ಪ್ರಗತಿಶೀಲ ಲೇಖಕರಲ್ಲಿ ಭಿನ್ನವಾಗಿ ನಿಲ್ಲುವವರೆಂದರೆ ಚದುರಂಗ, ನಿರಂಜನ ಮತ್ತು ಕಟ್ಟೀಮನಿ. ಚದುರಂಗರು ಪ್ರಗತಿಶೀಲ ಚಳವಳಿಯಲ್ಲಿದ್ದರೂ ಅದರಿಂದ ವಸ್ತುನಿಷ್ಠ ದೂರವನ್ನು ಕಾಯ್ದುಕೊಂಡರು. ನವೋದಯ, ನವ್ಯ, ಪ್ರಗತಿಶೀಲ ಮತ್ತು ಮುಂದಿನ ಬಂಡಾಯ ದಲಿತ ಚಳವಳಿಗಳ ಪ್ರಭಾವಕ್ಕೂ ತಮ್ಮನ್ನು ತೆರೆದುಕೊಂಡು, ಈ ಚಳವಳಿಗಳ ಉತ್ತಮ ಅಂಶಗಳನ್ನು ಗಮನಿಸಿ ತಮ್ಮ ಕೃತಿಗಳನ್ನು ರೂಪಿಸಿದರು. ನಿರಂಜನ ಅವರು ಅನಕೃ ಅವರಿಗೆ ಎದುರಾಗಿ ನಿಂತು, ಭಿನ್ನ ದನಿಯಾಗಿ ತಮ್ಮದೇ ಮಾರ್ಗವನ್ನು ಹುಡುಕಿಕೊಂಡರು. ಕಟ್ಟೀಮನಿಯವರ ನಡೆಯೂ ಮಾರ್ಕ್ಸ್‌ವಾದಕ್ಕೆ ತನ್ನನ್ನು ಪೂರ್ಣವಾಗಿ ಕಟ್ಟಿಹಾಕಿಕೊಳ್ಳಲಿಲ್ಲ.

ಬಡತನದ ಮಧ್ಯದಿಂದಲೇ ಬಂದ, ಹಸಿವಿನ ಎಲ್ಲ ಮುಖಗಳನ್ನೂ ಕಂಡಿದ್ದ ಬಸವರಾಜ ಕಟ್ಟೀಮನಿ ಪತ್ರಿಕಾರಂಗದ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ, ಇಷ್ಟಿಷ್ಟೆ ಮೇಲೇರುತ್ತ ಕೊನೆಗೆ ಪತ್ರಕರ್ತರಾಗಿ ಹಲವು ಸವಾಲುಗಳಿಗೆ ಎದುರಾಗಿ, ಬಿಡಿಸಿಕೊಳ್ಳಲಾಗದ ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದರು. ಪತ್ರಿಕಾ ಬರಹಗಳಿಗಿಂತ ಸೃಜನಶೀಲ ಕೃತಿಗಳನ್ನು ಬರೆದೇ ಸಮಾಜದ ಮುನ್ನಡೆಗೆ ಪ್ರಯತ್ನಿಸಬಹುದೆಂದು ಚಿಂತಿಸುತ್ತಿದ್ದ ಸಮಯದಲ್ಲಿಯೇ ಕಟ್ಟೀಮನಿ ಅವರಿಗೆ ಪ್ರಗತಿಶೀಲ ಚಳವಳಿ ಕಾಣಿಸಿತ್ತು. ಅವರನ್ನು ನಿರಂತರವಾಗಿ ಕಾಡುತ್ತಿದ್ದ ಬಡತನಕ್ಕೆ ಮಾರ್ಕ್ಸ್ ತತ್ವಗಳು ತೀರ ಹಿತಕರವಾಗಿ ಕಂಡವು. ಅವರು ಪ್ರಗತಿಶೀಲ ಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡರು. ಆದರೆ ಅಷ್ಟಕ್ಕೇ ಅವರು ಸೀಮಿತವಾದಂತೆ ಕಾಣಲಿಲ್ಲ.

ಎಳೆ ಹರೆಯದ ಕಟ್ಟೀಮನಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿಕೊಂಡರು. ಆರು ತಿಂಗಳ ಕಾರಾಗೃಹ ವಾಸವನ್ನು ಅವರು ಅನುಭವಿಸಿದರು. ಸ್ವಾತಂತ್ರ್ಯ ಹೋರಾಟದ ದಟ್ಟ ಅನುಭವ, ಗಾಂಧೀಜಿಯವರ ಚಿಂತನೆಯ ಪ್ರಭಾವ, ಸ್ವಾತಂತ್ರ್ಯ ಹೋರಾಟದ ಫಲವಾಗಿ ಹಳ್ಳಿಗಾಡಿನ ರೈತ ಕುಟುಂಬಗಳು ಒಡೆದು ಹೋದದ್ದು, ಹಳ್ಳಿಗಳ ಬದುಕು ವಿನಾಶಗೊಂಡದ್ದು ಇತ್ಯಾದಿ  ಬದುಕಿನ ಅನೇಕ ಮುಖಗಳು ಕಟ್ಟೀಮನಿ ಅವರಿಗೆ ಕಾಣಿಸಿದವು. ಇದೆಲ್ಲ ಅವರ ಕಾದಂಬರಿಗಳಿಗೆ ಕಚ್ಚಾ ಸಾಮಗ್ರಿಯನ್ನು ಒದಗಿಸಿತು.

ಹೊಟ್ಟೆಪಾಡಿಗಾಗಿ ಪತ್ರಿಕೋದ್ಯಮದ ಬೆನ್ನುಹತ್ತಿ, ಅತ್ತ ಇತ್ತ ಅಲೆದಾಡುತ್ತ, ವಿಭಿನ್ನ ವ್ಯಕ್ತಿಗಳನ್ನು ನೋಡುತ್ತ, ವಿಚಿತ್ರ ಸನ್ನಿವೇಶಗಳಿಗೆ ಎದುರಾಗುತ್ತ ಹೋರಾಟವನ್ನೇ ಮಾಡಬೇಕಾದ ಪರಿಸ್ಥಿತಿಗೆ ಎದುರಾದ ಕಟ್ಟೀಮನಿ ತಮ್ಮ ಅನುಭವ ವಲಯವನ್ನು ಹಿಗ್ಗಿಸಿಕೊಳ್ಳುತ್ತಲೇ ನಡೆದರು. ಇದೆಲ್ಲ ಅವರ ಬರಹಕ್ಕೆ ಸತ್ವವನ್ನು ತುಂಬಿತು.

4

ಸೃಜನಶೀಲ ಬರವಣಿಗೆ ಎನ್ನುವುದು ಕಾಲ್ಪನಿಕತೆಯನ್ನೂ ಒಳಗೊಂಡಿರುತ್ತದೆ ಎನ್ನುವುದು ಸ್ವಲ್ಪ ಮಟ್ಟಿಗೆ ನಿಜ. ಬರಹಗಾರ ತಾನು ನಿಂತ ನೆಲ ಮತ್ತು ಬದುಕಿದ ಕಾಲಕ್ಕೆ ನಿರಂತರವಾಗಿ ಸ್ಪಂದಿಸುತ್ತಲೇ ಇರುತ್ತಾನೆ. ಅವನ ಬರಹ ಎನ್ನುವುದು ಅವನ ಕಾಲಕ್ಕೆ, ಸಮಾಜಕ್ಕೆ, ಅಲ್ಲಿನ ಸಮಗ್ರ ಚಿತ್ರಣಕ್ಕೆ ಕನ್ನಡಿಯಾಗುತ್ತಲೇ ಇರುತ್ತದೆ. ಹಾಗಿದ್ದಾಗಲೇ ಆ ಬರಹ ಜೀವಂತಿಕೆಯಿಂದ ಮಿಡಿಯುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಒಂದು ಸಮಾಜದ ಚರಿತ್ರೆಯ ಎಳೆಗಳೂ ಸೃಜನಶೀಲ ಕೃತಿಯಲ್ಲಿ ಕಾಣಸಿಗುತ್ತವೆ. ಚರಿತ್ರೆಯ ಅಧಿಕೃತ ದಾಖಲೆಗಳೇ ಬೇರೆ, ಸೃಜನಶೀಲ ಕೃತಿಯಲ್ಲಿ ಸಿಕ್ಕುವ ಚರಿತ್ರೆಯ ಎಳೆಗಳೇ ಬೇರೆ ಎಂದು ಹೇಳಿದರೂ, ಸೃಜನಶಿಲ ಕೃತಿಗಳು ಹಿಡಿಯುವ ಚರಿತ್ರೆಯ ಎಳೆಗಳು ಹೆಚ್ಚು ಜೀವಂತಿಕೆಯನ್ನು ಚಿಮ್ಮಿಸುತ್ತವೆ.

ಕರ್ನಾಟಕದಲ್ಲಿ (ಆಗಿನ ಮುಂಬೈ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಮತ್ತು ಹೈದರಾಬಾದ್ ನಿಜಾಮರ ಕರ್ನಾಟಕ ಹಾಗೂ ಹಳೆಯ ಮೈಸೂರು ಪ್ರಾಂತ್ಯ) ನಡೆದ ಸ್ವಾತಂತ್ರ್ಯ ಹೋರಾಟದ ಕಥನವನ್ನು ಕೆಲವು ಅಧಿಕೃತ ದಾಖಲೆಗಳಲ್ಲಿ ಕಾಣಬಹುದು. ಆರ್. ಆರ್.ದಿವಾಕರ್, ಸೂರ್ಯನಾಥ ಕಾಮತ್ ಮೊದಲಾದವರು ಈ ಇತಿಹಾಸವನ್ನು ದಾಖಲೆಗೊಳಿಸಿದ್ದಾರೆ. ಈ ಇತಿಹಾಸವನ್ನು ಅಧಿಕೃತ ಎಂದು ಕರೆದರೂ, ಇದರಲ್ಲಿ ಸಿಕ್ಕುವ ಚಿತ್ರಗಳು ಸರ್ವೇಸಾಮಾನ್ಯ ಎಂದು ಕರೆಯಬಹುದಾದ ಚಿತ್ರಗಳು ಮತ್ತು ಅಂಕಿಸಂಖ್ಯೆಗಳು ತುಂಬಿದ ದಾಖಲೆಗಳು. ‌

ಹೋರಾಟದ ಒಟ್ಟು ಕಥನವನ್ನು ಕಟ್ಟಿಕೊಡುವ ಮತ್ತು ಎಲ್ಲವನ್ನೂ ಒಂದು ಬೀಸಿನಲ್ಲಿ ಹೇಳಿಬಿಡುವ ಆತುರವೂ ಇಂಥ ದಾಖಲೆಗಳಲ್ಲಿ ಇರುತ್ತದೆ. ಅಲ್ಲದೆ ಹೀಗೆ ಚಿತ್ರಿತವಾಗುವ ಚರಿತ್ರೆ ಹೆಚ್ಚಾಗಿ ದಾಖಲೆಗಳನ್ನು ಮತ್ತು ಕೇಳಿ ತಿಳಿದ ಸಂಗತಿಗಳನ್ನು ಅವಲಂಬಿಸಿರುತ್ತದೆ. ಸ್ವತಃ ಕಣ್ಣಾರೆ ಕಂಡ, ಅನುಭವಿಸಿದವರ ನೋವು, ನಿಟ್ಟುಸಿರುಗಳು ಇಲ್ಲಿ ಕಡಿಮೆ ಇರುತ್ತವೆ. ಇಂಥ ಸನ್ನಿವೇಶದಲ್ಲಿ ಚರಿತ್ರೆಯ ತುಣುಕು ತುಣುಕು ಚಿತ್ರಗಳಾದರೂ, ಸೃಜನಶೀಲ ಕೃತಿಗಳಲ್ಲಿ ಇರಬಹುದಾದ ಚಿತ್ರಗಳು (ಕೆಲವೆಡೆ ಕಲ್ಪನೆಗಳ ಮುಸುಕು ಹೊದ್ದಿದ್ದರೂ) ಹೆಚ್ಚು ಜೀವಂತವಾಗಿರುತ್ತವೆ.

ಕರ್ನಾಟಕದ ಬಾರ್ಡೋಲಿ ಎಂದು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಸಿದ್ಧಿ ಪಡೆದಿದ್ದ ಅಂಕೋಲಾ ತಾಲ್ಲೂಕಿನ ರೈತ ಹೋರಾಟ ಒಂದು ಅಪೂರ್ವವಾದ ಹೋರಾಟ; ರೋಮಾಂಚನ ಉಂಟುಮಾಡುವ ಹೋರಾಟ. ಇಲ್ಲಿನ ರೈತರು ತೋರಿದ ದಿಟ್ಟತನ, ಗಾಂಧೀಜಿಯವರ ಮಾತಿನಲ್ಲಿ ಇಟ್ಟ ನಂಬಿಕೆ ಮತ್ತು ಈ ನಂಬಿಕೆಯಿಂದಲೇ ನಡೆಸಿದ ಹೋರಾಟ ಬಹಳ ಉಗ್ರ ಸ್ವರೂಪ ಪಡೆದುಕೊಂಡಿದ್ದವು. ಇದರಿಂದಾಗಿ ರೈತ ಕುಟುಂಬಗಳು ಅನುಭವಿಸಿದ ಸಂಕಷ್ಟ ಮಾತುಗಳನ್ನು ಮೀರಿದ್ದು. ಇದರ ನಿಜವಾದ ಮತ್ತು ಹತ್ತಿರದ ನೋಟ ಸಿಕ್ಕಬೇಕೆಂದರೆ ವಿಮರ್ಶಕರಾದ ಪ್ರೊ.ಜಿ.ಎಚ್.ನಾಯಕರ ಆತ್ಮಕಥನ ‘ಬಾಳು’ ಕೃತಿಯನ್ನು ನೋಡಬೇಕು. ನಾಯಕರ ಅಣ್ಣ, ತಂದೆ ಮತ್ತು ಸೋದರ ಮಾವ ಹೀಗೆ ಕುಟುಂಬದ  ದುಡಿಯುವ ಗಂಡಸರೆಲ್ಲ ಜೈಲು ಸೇರಿ, ಎಳೆಯ ಮಕ್ಕಳನ್ನು ಇಟ್ಟುಕೊಂಡ ತಾಯಿ ಇಡೀ ಕುಟುಂಬವನ್ನು ಮುನ್ನಡೆಸಬೇಕಾದ ಬವಣೆ, ನೋವು, ದಿನದಿನದ ಹೋರಾಟ ಇವೆಲ್ಲ ಮಹತ್ವದ ಚರಿತ್ರೆಯ ಅಧ್ಯಾಯಗಳೇ. ಅಂಕೋಲೆಯ ಬಹುಪಾಲು ಕುಟುಂಬಗಳ ಕಥೆಯೂ ಇದೇ ಆಗಿತ್ತು. ಇಂಥ ಪುಟಗಳು ನಮಗೆ ದೊರೆಯುವುದು ‘ಬಾಳು’ ಕೃತಿಯಲ್ಲಿಯೇ.

ಇದೇ ಮಾದರಿಯ ಇನ್ನೊಂದು ಹೋರಾಟ ನಡೆದದ್ದು ಬೆಳಗಾವಿ ಜಿಲ್ಲೆಯಲ್ಲಿ. ಇದರ ವಿವರಗಳನ್ನು ನೋಡಲು ನಮಗೆ ಸಿಕ್ಕುವ ಸೃಜನಶೀಲ ದಾಖಲೆ ಎಂದರೆ ಬಸವರಾಜ ಕಟ್ಟೀಮನಿ ಅವರ ‘ಸ್ವಾತಂತ್ರ್ಯದೆಡೆಗೆ’ ಮತ್ತು ‘ಮಾಡಿ ಮಡಿದವರು’ ಕಾದಂಬರಿಗಳು. ಈ ಜಿಲ್ಲೆಯ ಗೋಕಾಕ ತಾಲ್ಲೂಕು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಹಳ್ಳಿಗಾಡಿನ ಜನ ನಡೆಸಿದ ಹೋರಾಟ ಅಸಾಧಾರಣವಾದದ್ದು; ರೈತರು ತೋರಿಸಿದ ಧೈರ್ಯ ಪ್ರಚಂಡವಾದದ್ದು. ಗಾಂಧೀಜಿಯವರ ಮಾತುಗಳಲ್ಲಿ ಅವರು ಇಟ್ಟುಕೊಂಡಿದ್ದ ನಿಷ್ಠೆ ಅಚಲವಾದದ್ದು. ಈ ಚಿತ್ರಣವನ್ನು ವಿವರವಾಗಿ ಕಟ್ಟಿಕೊಡುವ ಕಟ್ಟೀಮನಿ ಕಾದಂಬರಿಗಳು, ಸೃಜನಶೀಲ ಕೃತಿಗಳು; ಕಾಲ್ಪನಿಕತೆಗೂ ಅವಕಾಶ ಇರುವಂಥವು. ಆದರೂ, ಈ ಹೋರಾಟದ ಚಿತ್ರಣ ಕಾಲ್ಪನಿಕ ಎನ್ನಿಸುವುದಿಲ್ಲ.

ಸ್ವಾತಂತ್ರ್ಯದೆಡೆಗೆ ಪ್ರಕಟವಾದದ್ದು 1946ರಲ್ಲಿ. ಮಾಡಿಮಡಿದವರು ಪ್ರಕಟವಾದದ್ದು 1948ರಲ್ಲಿ. ಇಲ್ಲಿ ಕುತೂಹಲದ ಅನೇಕ ಸಂಗತಿಗಳಿವೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ವರ್ಗಗಳನ್ನು ಕಟ್ಟೀಮನಿ ಹೀಗೆ ಗುರುತಿಸುತ್ತಾರೆ: ನಮ್ಮನ್ನು ಗುಲಾಮಗಿರಿಗೆ ತಳ್ಳಿದ್ದ ಬ್ರಿಟಿಷರು, ಅವರ ಆಡಳಿತ ಯಂತ್ರದ ಭಾಗವಾಗಿದ್ದ ಅಧಿಕಾರಿಗಳು, ದೇಸಾಯರು, ಇನಾಮದಾರರು, ಕುಲಕರ್ಣಿಗಳು, ಪೊಲೀಸರು. ಇವರೆಲ್ಲರದು ಒಂದು ವರ್ಗವಾದರೆ, ಇವರು ಶೋಷಿಸುತ್ತಿದ್ದ ರೈತರದು ಇನ್ನೊಂದು ವರ್ಗ. ಅಷ್ಟೇ ಅಲ್ಲ, ಹೋರಾಟ ನಡೆಸುತ್ತಿದ್ದವರಲ್ಲೂ ಎರಡು ವರ್ಗ: ಗಾಂಧೀಜಿಯವರ ಮಾತಿನಿಂದ ಸ್ಫೂರ್ತಿಗೊಂಡ ಹೋರಾಟಕ್ಕೆ ಧುಮುಕಿದ ತರುಣರು ಒಂದು ವರ್ಗವಾದರೆ, ಹೋರಾಟ ನಡೆಸಲು ಹಿಂಜರಿದು ಮುಂಬೈ, ಪುಣೆನಗರಗಳನ್ನು ಸೇರಿ ಗುಪ್ತ ಸಭೆಗಳನ್ನು ನಡೆಸುತ್ತಿದ್ದ ಕಾಂಗ್ರೆಸ್ ಧುರೀಣರದು ಇನ್ನೊಂದು ವರ್ಗ. ಹಾಗೆಯೇ ನಗರಗಳ ಜನ ಮತ್ತು ಹಳ್ಳಿಯ ಜನ.

ಸ್ವಾತಂತ್ರ್ಯ ಬಂದ ನಂತರವೂ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಶೋಷಿಸುವ ವರ್ಗದಲ್ಲಿ ಬ್ರಿಟಿಷರ ಬದಲು ಮಂತ್ರಿಗಳು ಬಂದರು. ಅಧಿಕಾರಿಗಳು, ಆಡಳಿತ ಯಂತ್ರದಲ್ಲಿ ಸೇರಿಕೊಂಡಿರುವವರು, ವ್ಯಾಪಾರಿಗಳು, ಬಂಡವಾಳಗಾರರು ಇವರೆಲ್ಲ ಶೋಷಕ ವರ್ಗದ ಭಾಗವಾಗಿಯೇ ಉಳಿದುಕೊಂಡರು. ಹಳ್ಳಿಗಾಡಿನ ಅವಿದ್ಯಾವಂತ ರೈತರು, ಕಾರ್ಮಿಕರು, ಬಡತನಕ್ಕೆ ಸಿಕ್ಕಿ ನರಳುವ ವಿಭಿನ್ನ ಜನ  ಶೋಷಿತರಾಗಿಯೇ ಕಷ್ಟಗಳಿಗೆ ಎದೆಕೊಟ್ಟವರಾದರು.

ಸ್ವಾತಂತ್ರ್ಯ ಎಂಬುದು ಈ ದೇಶದ ಜನರಿಗೆ ಹೇಗೆ ದೊಡ್ಡ ಭ್ರಮನಿರಸನವಾಯಿತು ಎಂಬುದನ್ನು ಕಟ್ಟೀಮನಿ ಅವರ ಕಾದಂಬರಿಗಳು ಹೇಳುತ್ತವೆ.

ಕಟ್ಟೀಮನಿ ಅವರ ಕಾದಂಬರಿಗಳಲ್ಲಿ ಇನ್ನೂ ಒಂದು ಮುಖ್ಯವಾದ ಅಂಶ ಎದ್ದು ಕಾಣಿಸುತ್ತದೆ: ಸ್ವಾತಂತ್ರ್ಯ ಪೂರ್ವದಲ್ಲಿ ಎಷ್ಟೆಲ್ಲ ಕಷ್ಟಗಳಿದ್ದರೂ ಹಳ್ಳಿಗಳಲ್ಲಿದ್ದ ಬದುಕು ಒಂದು ಬಗೆಯಲ್ಲಿ ಸಮೃದ್ಧವಾಗಿತ್ತು, ವಿದ್ಯೆಯಿಂದ ವಂಚಿತರಾಗಿದ್ದರೂ ಜನ ಹೇಗೆ ಬೇಸಾಯವನ್ನು ಸಮರ್ಥವಾಗಿ, ನಿಷ್ಠೆಯಿಂದ ಮಾಡುತ್ತ, ತಮ್ಮದೇ ಆದ ನೆಮ್ಮದಿಯನ್ನು ಕಂಡುಕೊಂಡಿದ್ದರು, ಮೌಲ್ಯಗಳು, ನಂಬಿಕೆಗಳು ಹೇಗೆ ಉಳಿದುಕೊಂಡಿದ್ದವು ಎಂಬುದು ಇಲ್ಲಿ ಕಾಣಿಸುತ್ತದೆ.

ಕುಟುಂಬ ಎನ್ನುವುದು ಪುಟ್ಟ ಘಟಕವಾಗಿ ಸಮಗ್ರವಾಗಿ, ಅರ್ಥಪೂರ್ಣವಾಗಿ ಉಳಿದುಕೊಂಡಿದ್ದ ರೀತಿಯನ್ನೂ ಈ ಕಾದಂಬರಿಗಳಲ್ಲಿ ತೋರಿಸುತ್ತದೆ. ಲಾವಣಿದಾರರಾಗಿಯೂ ರೈತರು ದೇಸಾಯಿ, ಕುಲಕರ್ಣಿಗಳ ಉಪಟಳವನ್ನು ಎದುರಿಸುತ್ತಲೇ ಹೇಗೆ ದಿಟ್ಟತನದಿಂದ ಬಾಳಿದರು, ಹಳ್ಳಿಗಳಲ್ಲಿ ಸಹಬಾಳ್ವೆ ಎನ್ನುವುದು ಎಷ್ಟು ಬಿಗಿಯಾಗಿ ಉಳಿದುಕೊಂಡು ಬಂದಿತ್ತು ಎಂಬ ಚಿತ್ರಣವೂ ಕಟ್ಟೀಮನಿ ಅವರ ಕಾದಂಬರಿಗಳಲ್ಲಿ ಕಾಣಿಸುತ್ತದೆ. ಸ್ವಾತಂತ್ರ್ಯ ಎನ್ನುವುದು ನಮ್ಮನ್ನು ಗುಲಾಮಗಿರಿಯಿಂದ ಹೊರತಂದಿತು, ಅನೇಕ ಸೌಲಭ್ಯಗಳನ್ನು ನೀಡಿತು, ನಮಗೆ ನಾವೇ ಒಡೆಯರಾದ ನೆಮ್ಮದಿಯನ್ನೂ ತಂದಿತು. ಆದರೆ ಹಳ್ಳಿಗಳನ್ನು, ಅಲ್ಲಿನ ಸಹಬಾಳ್ವೆಯನ್ನು, ನಂಬಿಕೆ, ವಿಶ್ವಾಸಗಳನ್ನು, ಕುಟುಂಬಗಳ ಒಕ್ಕಟ್ಟನ್ನು ಹೇಗೆ ಮುರಿಯಿತು ಎಂಬ ದಾರುಣ ಕತೆಯನ್ನೂ ಈ ಕಾದಂಬರಿಗಳು ಹೇಳುತ್ತವೆ.

ಇಂಥ ಸಂಗತಿಗಳನ್ನು ಕಟ್ಟೀಮನಿ ಸಲೀಸಾಗಿ ಹೇಳಿಬಿಡುತ್ತಾರೆ. ಸ್ವಾತಂತ್ರ್ಯದ ಹೋರಾಟವನ್ನು ಚಿತ್ರಿಸುವಾಗಲೂ ಅವರು ಉದ್ವಿಗ್ನತೆಗೆ ಒಳಗಾಗುವುದಿಲ್ಲ. ಇವರ ಸಮಕಾಲೀನರೂ, ಪ್ರಗತಿಶೀಲ ಚಳವಳಿಯಲ್ಲಿ ಬಂದವರೂ ಆದ ತ.ರಾ.ಸು. ಅವರ ಕಾದಂಬರಿಗಳ ಉದ್ವಿಗ್ನತೆ, ಭಾವಾವೇಶ (ವಿಶೇಷವಾಗಿ ತರಾಸು ಅವರ ಚಾರಿತ್ರಿಕ ಕಾದಂಬರಿಗಳನ್ನು) ನೋಡಿದಾಗ ಕಟ್ಟೀಮನಿ ಅವರ ಬರವಣಿಗೆಯ ನಿರುಮ್ಮಳತೆ ಅರ್ಥವಾಗುತ್ತದೆ. ಅಲ್ಲಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮೊದಲಾದವರ ಹೋರಾಟದ ಕೆಚ್ಚಿನ ಪ್ರಸ್ತಾಪ ಬರುತ್ತ, ಇತಿಹಾಸವನ್ನು ವೈಭವೀಕರಿಸಿದರೂ, ಕಟ್ಟೀಮನಿಯವರ ಬರವಣಿಗೆ, ಶೈಲಿ, ಭಾಷೆ ಉದ್ವೇಗದ ಗಣದಿಂದ ಮುಕ್ತವಾಗಿವೆ.

ಈ ಕಾದಂಬರಿಗಳಲ್ಲಿ, ಅಷ್ಟೇಕೆ ಕಟ್ಟೀಮನಿ ಅವರ ಒಟ್ಟು ನಿಲುವಿನಲ್ಲಿ ಗಾಂಧೀತತ್ವವಾದ ಅಹಿಂಸೆಯ ಬಗ್ಗೆ ಗಾಢವಾದ ನಂಬಿಕೆ ಇದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೂ ಈ ಕಾದಂಬರಿಯಲ್ಲಿ ಬರುವ ಹೋರಾಟಗಾರರು ಅಹಿಂಸಾತ್ಮಕವಾಗಿಯೇ ಹೋರಾಟ ಇರಬೇಕೆಂದು ಬಯಸಿದವರು; ಬ್ರಿಟಿಷ್ ಆಳ್ವಿಕೆಗೆ ಅನೇಕ ರೀತಿಯಲ್ಲಿ ಬಿಸಿ ಮುಟ್ಟಿಸಿದರೂ, ಹಿಂಸೆಯನ್ನು ಬಿಟ್ಟುಕೊಟ್ಟ, ಅಥವಾ ಕಡಿಮೆ ಪ್ರಮಾಣದ ಹಿಂಸೆಗೆ ಎಡೆಕೊಡುವ ಕಾರ್ಯಕ್ರಮಗಳನ್ನೇ ನಡೆಸಿದರು ಎಂಬುದು ಮುಖ್ಯವಾಗಿ ಕಂಡುಬರುತ್ತದೆ.

ಚರಿತ್ರೆಯ ಇಂಥವೇ ಎಳೆಗಳನ್ನು ಉಳಿಸಿಕೊಂಡ ಕಟ್ಟೀಮನಿ ಅವರ ಇನ್ನೊಂದು ಕಾದಂಬರಿ-‘ಜ್ವಾಲಾಮುಖಿಯ ಮೇಲೆ.’ ಮೇಲು ನೋಟಕ್ಕೆ ಇದು ಗಿರಣಿ ಕಾರ್ಮಿಕರ ಬದುಕಿನ ಸುತ್ತ ಹೆಣೆದ ಕಾದಂಬರಿಯಂತೆ ಕಾಣಿಸುತ್ತದೆ. ಆದರೆ ದಾವಣಗೆರೆಯ ಚರಿತ್ರೆಯನ್ನು ಬಲ್ಲವರಿಗೆ ಇದು ಅಲ್ಲಿನ ಕಮ್ಯುನಿಷ್ಟರ ಹೋರಾಟದ ಚರಿತ್ರೆಯಾಗಿಯೂ ಕಾಣಿಸುತ್ತದೆ; ಹಾಗೆಯೇ ಅಲ್ಲಿಯ ಗಿರಣಿಗಳ ಕತೆಯಾಗಿ, ಗಿರಣಿ ಮಾಲೀಕರ ಕತೆಯಾಗಿ, ಗಿರಣಿ ಕಾರ್ಮಿಕರ ನೋವಿನ ಕತೆಯಾಗಿಯೂ ಕಾಣಿಸುತ್ತದೆ. ದಾವಣಗೆರೆಯ ಬಟ್ಟೆ ಗಿರಣಿಗಳಿಗೆ ಬಹುದೊಡ್ಡ ಹೆಸರಿತ್ತು. ಈ ಗಿರಣಿಗಳು ಬಹು ಎತ್ತರಕ್ಕೆ ಬೆಳೆದು ಹಾಗೆಯೇ ಬಿದ್ದು ಹೋದವು. ಈಗ ಇದೆಲ್ಲ ಚರಿತ್ರೆ. ಈ ಚರಿತ್ರೆ ಎಲ್ಲಿಯೂ ದಾಖಲಾಗಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ಕಟ್ಟೀಮನಿ ಅವರ ಕಾದಂಬರಿಗಳು, ಸೃಜನಶೀಲ ಬರಹಗಳಾದರೂ, ಅಂಥ ಚರಿತ್ರೆಯ ಎಳೆಗಳನ್ನಾದರೂ ನಮಗೆ ಕಟ್ಟಿಕೊಡುತ್ತವೆ.

ಈ ಕಾದಂಬರಿಯಲ್ಲಿ ಇನ್ನೊಂದು ಅಂಶವೂ ನಿಚ್ಚಳವಾಗುತ್ತದೆ. ಕಟ್ಟೀಮನಿ ಕಾರ್ಮಿಕರ ಪರವಾಗಿ ನಿಂತಿದ್ದರೂ, ಅವರು ಕಮ್ಯುನಿಷ್ಟ್ ಪಕ್ಷಕ್ಕೆ ಅಂಟಿಕೊಂಡವರಾಗಿರಲಿಲ್ಲ. ಇದು ಕೂಡಾ ಒಬ್ಬ ಲೇಖಕನನ್ನು ನೋಡುವಾಗ ಮುಖ್ಯವಾದ ಅಂಶವೇ.

ಕಟ್ಟೀಮನಿ ಅವರ ಕಾದಂಬರಿಗಳಲ್ಲಿ ಚಿತ್ರಿತವಾಗಿರುವ ಹೆಣ್ಣು. ದಿಟ್ಟೆ, ಎಂಥ ಕಷ್ಟಗಳಿಗೂ ಎದೆಗೊಡಬಲ್ಲ ಧೀರೆ. ಎಂಥ ಹೊತ್ತಿನಲ್ಲಿಯೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಂಥ ಛಲಗಾತಿಯರೂ, ಕರುಣೆ, ಪ್ರೀತಿಗಳನ್ನು ತುಂಬಿಕೊಂಡಿರುವಂಥ ಹೃದಯವಂತಿಕೆಯರೂ ಆಗಿ ಬದುಕಿನ ಬೇರುಗಳನ್ನು ಭದ್ರವಾಗಿ ಹಿಡಿದುಕೊಂಡವರಾಗಿಯೇ ಕಾಣಿಸುತ್ತಾರೆ. ಇದು ಕೂಡಾ ಗಮನಿಸಬೇಕಾದ ಅಂಶವೇ. ಪೊಲೀಸರ ಬದುಕನ್ನು ಹತ್ತಿರದಿಂದ ನೋಡಿದ ಕಟ್ಟೀಮನಿಯವರು ಪೊಲೀಸರನ್ನು ಚಿತ್ರಿಸುವಾಗ ತೋರಿಸುವ ಪ್ರೀತಿ-ಅನುಕಂಪಗಳೂ ಮೆಚ್ಚಬೇಕಾದ ಸಂಗತಿಗಳಾಗಿ ತೋರುತ್ತವೆ.

ವೇಶ್ಯೆಯರೂ ಈ ಸಮಾಜದ ಶೋಷಿತರೇ. ಕಟ್ಟೀಮನಿ ವೇಶ್ಯೆಯರನ್ನು ಕುರಿತು ಕಾದಂಬರಿಗಳನ್ನು, ಇತರ ಪ್ರಗತಿಶೀಲ ಲೇಖಕರಂತೆ, ಬರೆದಿದ್ದಾರೆ. ಸಾಮಾಜಿಕ, ಆರ್ಥಿಕ ಬಿಕ್ಕಟ್ಟುಗಳು, ಕೌಟುಂಬಿಕ ಹಿನ್ನೆಲೆಗಳು, ಅಸಹಾಯಕ ಪರಿಸ್ಥಿತಿಗಳು ಹೇಗೆ ಮಹಿಳೆಯರನ್ನು ವೇಶ್ಯಾಜೀವನಕ್ಕೆ ದೂಡಲು ಒತ್ತಾಯಿಸುತ್ತವೆ ಎನ್ನುವ ಸಹಾನುಭೂತಿಯಿಂದಲೇ ಕಟ್ಟೀಮನಿಯವರು ಈ ಕಾದಂಬರಿಗಳನ್ನು ರಚಿಸಿದ್ದಾರೆ. ಸಮಾಜವಾದಿ ಹೋರಾಟಗಳಲ್ಲೂ ಅವರು ಪರೋಕ್ಷವಾಗಿ ಹೇಗೆ ಪಾಲ್ಗೊಳ್ಳುತ್ತಿದ್ದರು ಎಂಬುದನ್ನು ಅವರ ‘ಜ್ವಾಲಾಮುಖಿಯ ಮೇಲೆ’ ಕಾದಂಬರಿಯಲ್ಲಿ ನೋಡಬಹುದಾಗಿದೆ. ಹೆಣ್ಣಿನ ತಾಯ್ತನದಲ್ಲಿ ಕಟ್ಟೀಮನಿಯವರಿಗಿರುವ ಗೌರವ ಮತ್ತು ನಂಬಿಕೆಗಳು ಆಳವಾದವು.

ಆಡುಭಾಷೆಯ ಬಳಕೆಯಲ್ಲಿ ಮತ್ತು ಪ್ರಾದೇಶಿಕ ಪರಿಸರವನ್ನು ಚಿತ್ರಿಸುವಲ್ಲಿ ಕಟ್ಟೀಮನಿ ಸಮರ್ಥ ಬರಹಗಾರರಾಗಿ ತೋರುತ್ತಾರೆ. ಸ್ವಾತಂತ್ರ್ಯದೆಡೆಗೆ ಮತ್ತು ಮಾಡಿ ಮಡಿದವರು ಕಾದಂಬರಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗುವ, ಅವಿತಿಟ್ಟುಕೊಳ್ಳುವ ಸನ್ನಿವೇಶದಲ್ಲಿ ಕಟ್ಟೀಮನಿ ಅವರು ಚಿತ್ರಿಸುವ ಕಾಡು,ಕೊಳ್ಳ, ಗುಡ್ಡ, ಹೊಳೆ-ಇವುಗಳ ಸೊಬಗು ಬೆಳಗಾವಿ ಜಿಲ್ಲೆಯ ನಿಸರ್ಗ ಸೌಂದರ್ಯವನ್ನು ಓದುಗರ ಮನಸ್ಸಿನಲ್ಲಿ ಗಾಢವಾಗಿ ಅಚ್ಚುತ್ತಿಬಿಡುತ್ತದೆ. ನವೋದಯದ ಈ ಗುಣ ಕಟ್ಟೀಮನಿಯವರಲ್ಲಿ ಎಷ್ಟು ಪ್ರಭಾವಶಾಲಿಯಾಗಿ ಉಳಿದಿದೆಯಲ್ಲಾ!

ಕಾದಂಬರಿಕಾರರಾಗಿ ಕಟ್ಟೀಮನಿಯವರು ಇವತ್ತಿಗೂ ಮುಖ್ಯರಾಗುವುದು ಇನ್ನೊಂದು ಮಹತ್ವದ ಕಾರಣಕ್ಕಾಗಿ. ಅವರು ಜಾತಿ, ಮತ, ಮೌಢ್ಯಗಳ ಮತ್ತು ಢೋಂಗಿ ಮಠಾಧೀಶರು ಹಾಗೂ ಮೂಲಭೂತವಾದಿಗಳ ವಿಚಾರಗಳಲ್ಲಿ ಕಟ್ಟೀಮನಿ ಅವರು ತಳೆಯುವ ನಿಲುವು ಆರೋಗ್ಯಕರವಾದದ್ದು ಮತ್ತು ಸಮಾಜದ ಮುನ್ನಡೆಗೆ ಅಗತ್ಯವಾದದ್ದು. ಈ ನಿಲುವಿಗೆ ಬದ್ಧರಾಗಿ ಕಟ್ಟೀಮನಿ ಅವರು ತಮ್ಮ ಕಾದಂಬರಿಗಳಲ್ಲಿ (ಮೋಹದ ಬಲೆಯಲ್ಲಿ, ಜರತಾರಿ ಜಗದ್ಗುರು) ಕೊಡುವ ಚಿತ್ರಗಳು ಅವರ ಪ್ರಚಂಡ ಧೈರ್ಯವನ್ನು ತೋರಿಸುತ್ತವೆ.

ಈಗಲೂ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಜಾತಿಯೊಂದನ್ನು ಎದುರಿಸಿ, ಅಲ್ಲಿಯ ಹುಳುಕುಗಳನ್ನು, ಕಾಮುಕ ಮಠಾಧೀಶರನ್ನು ಚಿತ್ರಿಸುವುದು ಸುಲಭದ ಸಂಗತಿಯಲ್ಲ. ಇದನ್ನು ಕಟ್ಟೀಮನಿಯವರು ಆ ಕಾಲಕ್ಕೇ ಮಾಡಿ ತೋರಿಸಿದ್ದರು. ಅದರ ಪರಿಣಾಮವನ್ನೂ ಅವರು ದಿಟ್ಟವಾಗಿಯೇ ಎದುರಿಸಿದ್ದರು. ಗುಂಡು ಹಾರಿಸಿ ಅವರನ್ನು ಕೊಲ್ಲುವ ವಿಫಲ ಪ್ರಯತ್ನವೂ ನಡೆದಿದ್ದಿತ್ತು. ಆದರೂ ಕಟ್ಟೀಮನಿ ಹೆದರಲಿಲ್ಲ; ತಮ್ಮ ನಿಲುವನ್ನು ಬದಲಿಸಲಿಲ್ಲ. ಇದು ಸಣ್ಣವಿಚಾರವೇನೂ ಅಲ್ಲ.

ಭಾಷೆ, ಶೈಲಿ, ಪ್ರಯೋಗ, ಕೃತಿಯ ಬಂಧ, ಶಿಲ್ಪಸೌಂದರ್ಯ ಇತ್ಯಾದಿ ಸಾಹಿತ್ಯಕ ಅಂಶಗಳಿಗೆ ಕಟ್ಟೀಮನಿ ಹೆಚ್ಚಿನ ಮಹತ್ವ ನೀಡಲಿಲ್ಲ. ತಮ್ಮ ಅನುಭವವನ್ನು ಸಲೀಸಾಗಿ, ನೇರವಾಗಿ ಹೇಳಿದರಷ್ಟೆ ಸಾಕು ಎನ್ನುವ ಮನೋಭಾವದಿಂದಲೇ ಅವರು ತಮ್ಮ ಕೃತಿಗಳನ್ನು ರೂಪಿಸಿರುವಂತೆ ಕಾಣುತ್ತದೆ. ಹೀಗಾಗಿ ಇವರ ಕೃತಿಗಳಲ್ಲಿ ಮೇಲಿನ ಅಂಶಗಳಿಗೆ ಹೆಚ್ಚಿನ ಅವಕಾಶ ಸಿಕ್ಕುವುದಿಲ್ಲ. ಪುನರಾವರ್ತನೆ, ಅನಗತ್ಯ ವಿವರಣೆ, ಸಡಿಲ ಬಂಧ ಇದೆಲ್ಲ ಮೇಲು ನೋಟಕ್ಕೇ ಕಾಣಿಸಿಬಿಡುತ್ತದೆ. ಕೆಲವು ಕಡೆಗಳಲ್ಲಿ ಸರಳ ತೀರ್ಮಾನಗಳಿಗೂ ಅವರು ಬರುವುದುಂಟು. ಕೃತಿಯ ಒಳಗೇ ಇರಬೇಕಾದ ಸಂಯಮ ಕೂಡಾ ಕೆಲವೆಡೆ ನಾಪತ್ತೆಯಾಗುವುದು, ವಾಚಾಳಿಯಾಗುವುದು, ಸಡಿಲಗೊಳ್ಳುವುದು ಇವೆಲ್ಲ ಕಟ್ಟೀಮನಿಯವರ ಕತೆ, ಕಾದಂಬರಿಗಳಲ್ಲಿ ಕಾಣಿಸುತ್ತವೆ. ಇದಕ್ಕೆ ಪ್ರಗತಿಶೀಲ ಚಳವಳಿಯ ಮಿತಿಗಳೂ ಕಾರಣವಿರಬಹುದು ಮತ್ತು ಆ ಕಾಲದ ಸಾಹಿತ್ಯಕ ನಿಲುವು, ನೋಟಗಳೂ ಕಾರಣವಾಗಬಹುದು.

ಇಷ್ಟಾಗಿಯೂ ಕಟ್ಟೀಮನಿ ಅವರ ಸಾಹಿತ್ಯ ಇವತ್ತಿಗೆ ಸಲ್ಲಲು ಮುಖ್ಯ ಕಾರಣ, ಅದರ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವಗಳಿಗಾಗಿ. ಬಸವರಾಜ ಕಟ್ಟೀಮನಿ ಅವರ ಜನ್ಮ ಶತಮಾನೋತ್ಸವದ ಈ ಹೊತ್ತಿನಲ್ಲಿ ಅವರ ಕೃತಿಗಳನ್ನು ಮತ್ತೊಮ್ಮೆ ಗಮನಿಸುವ, ಪರಿಶೀಲಿಸುವ ಅಗತ್ಯವಿದೆ. ಬರಹಗಾರನೊಬ್ಬನಿಗೆ ಕೊಡಬೇಕಾದ ಗೌರವವೂ ಈ ನೆಲೆಯಿಂದಲೇ ಆಗಬೇಕಾದ ಕೆಲಸ.

ಬಸವರಾಜ ಕಟ್ಟೀಮನಿ: ಜನನ : 5 ಅಕ್ಟೋಬರ್ 1919 ಗೋಕಾಕ, ಬೆಳಗಾವಿ ಜಿಲ್ಲೆ ;  ನಿಧನ : 23.10.1989 ಧಾರವಾಡದಲ್ಲಿ.

ಸಾಹಿತ್ಯ ಕೃತಿಗಳು : ಕಾದಂಬರಿ-40, ಕಥಾಸಂಕಲನಗಳು-10, ಇತರೆ-16 (ಒಟ್ಟು -66ಕೃತಿಗಳು) ; ಪ್ರಶಸ್ತಿ, ಗೌರವ: ಸೊವಿಯತ್ ದೇಶದ ನೆಹರೂ ಪ್ರಶಸ್ತಿ-ಜ್ವಾಲಾಮುಖಿಯ ಮೆಲೆ ಕಾದಂಬರಿಗೆ, 1968ರಲ್ಲಿ; ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ 52ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ-1980; ವಿಧಾನ ಪರಿಷತ್ತಿಗೆ ನಾಮಕರಣ-1968.

‍ಲೇಖಕರು Avadhi

December 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: