ಜಿ ಕೆ ಗೋವಿಂದರಾವ್ ಎಂಬ ಪ್ರತಿರೋಧದ ಧ್ವನಿ..

ಹಿರಿಯ ರಂಗಕರ್ಮಿ ಜಿ ಕೆ ಗೋವಿಂದರಾವ ಅವರ ನಿಧನದ ಹಿನ್ನೆಲೆಯಲ್ಲಿ ಒಡನಾಡಿಗಳ ನುಡಿನಮನ.

ಅಂದು ಜೆ ಎಚ್ ಪಟೇಲರು ಮುಖ್ಯಮಂತ್ರಿ ಆಗಿದ್ದ ಸಂದರ್ಭ. ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ಸರ್ಕಾರದ ಸಹಕಾರದಿಂದಲೇ ಏರ್ಪಾಡಾಗಿತ್ತು. ಅದನ್ನು ಪ್ರಗತಿಪರರೆಲ್ಲ ಪ್ರತಿಭಟಿಸಿ ಬಂಧನಕ್ಕೊಳಗಾದೆವು. ಬಂಧಿತರಲ್ಲಿ ಜಿ ಕೆ ಗೋವಿಂದರಾವ್, ಡಾ ಜಿ ಆರ್ ಬಂಜಗೆರೆ ಜಯಪ್ರಕಾಶ್, ನಾನು ಇನ್ನೂ ಹಲವರಿದ್ದೆವು.

ಅಂದು ಬೆಳಿಗ್ಗೆ ಬಂಧಿಸಿ ಸಂಜೆ ಏಳು ಘಂಟೆಯವರೆಗೂ ನಮ್ಮನ್ನು ಟೌನ್ ಹಾಲ್ ಹತ್ತಿರದ ಪೋಲೀಸ್ ಸ್ಟೇಷನ್ ನಲ್ಲಿ ಇಟ್ಟಿದ್ದರು. ಬಿಡುಗಡೆಯ ಸುದ್ದಿ ಇಲ್ಲ, ಠಾಣಾ ಪಿಎಸ್ಐ ಉದ್ದೇಶಪೂರ್ವಕವಾಗಿ ಠಾಣೆಯಿಂದ ಹೊರಗೋಡಿದ್ದ. ಅಂದಿನ ನಮ್ಮ ರಾತ್ರಿ ಏನು ಹೇಗೆ ಎಂಬ ಮಾಹಿತಿಯನ್ನು ಯಾರೂ ಕೊಡಲಿಲ್ಲ. ಬಂಧಿಸಿ ತಂದು ಸ್ಟೇಷನ್ ನಲ್ಲಿಟ್ಟು ಹೋದ ಎಸ್ಸೈ ಬರಲಿಲ್ಲ . ಆಗ ಜಿ ಕೆ ಗೋವಿಂದರಾವ್ ಪೋಲೀಸ್ ಠಾಣೆ ಅಂಗಳದಲ್ಲಿ ನಿಂತು ‘ಹದಿನೈದು ನಿಮಿಷ ಸಮಯ ಕೊಡುತ್ತೇನೆ, ನಮ್ಮನ್ನು ಜೈಲಿಗೆ ಕಳಿಸಿ, ಇಲ್ಲ ಮನೆಗೆ ಕಳಿಸಿ’ ಎಂದು ಗುಡುಗಿದರು. ಆ ಗುಡುಗಿಗೆ ಠಾಣೆಯಲ್ಲಿದ್ದ ಪೋಲೀಸ್ ಸಿಬ್ಬಂದಿ ನಡುಗಿ ಹೋದರು.

ಹದಿನೈದು ನಿಮಿಷ ಮುಗಿಯಿತು. ‘ನಾನು ಹೊರಡುತ್ತೇನೆ ಬರುವವರು ಬನ್ನಿ’ ಎಂದರು. ನಾವೆಲ್ಲ ಪೋಲೀಸ್ ಸ್ಟೇಷನ್ ನಿಂದು ಹೊರ ಹೊರಟೆವು. ಪೋಲೀಸ್ ಸಿಬ್ಬಂದಿ ಹೋಗದಿರಲು ವಿನಂತಿಸುತ್ತಿದ್ದರು. ಆಗ ಜಿಕೆಜಿ ‘ಜೈಲಿಗೆ ತಕ್ಷಣ ಕಳಿಸಿದರೆ ಕಳಿಸಿ ಇಲ್ಲಾ ಮನೆಗೆ ಹೋಗುತ್ತೇವೆ’ ಅಂತ ನಡೆದೇ ಬಿಟ್ಟರು.ಇದು ಚಿಂತನೆಯಲ್ಲೂ, ಭಾಷಣದಲ್ಲೂ ಹೋರಾಟದಲ್ಲೂ ಅವರ ಖದರು. ಚಲನ ಚಿತ್ರಗಳಲ್ಲಿ ನಟಿಸುವಾಗಲೂ ಅವರು ಪಾತ್ರಗಳ ಸಂಭಾಷಣೆಯ ಶೈಲಿ ಅದೇ.

ಇತ್ತೀಚೆಗೆ ಮೋದಿ ಸರ್ಕಾರ ತಂದ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಫೋನ್ ಮೂಲಕವೇ ಪ್ರಚಾರ ಆರಂಭಿಸಿದರು. ನನಗೆ ಫೋನ್ ಮಾಡಿ ‘ಏನ್ ಮಾಡ್ತಾ ಇದೀರಾ, ಜನರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಈ ಶಿಕ್ಷಣ ನೀತಿಯ ಪಿತೂರಿ ತಿಳಿಸಿ ನಾನೂ ಬರ್ತೀನಿ’ ಎಂದರು. ಅವರ ಆರೋಗ್ಯ ತೊಂದರೆಯ ಮಧ್ಯೆಯೂ ಅವರ ಪ್ರತಿರೋಧದ ಧ್ವನಿ, ಪ್ರತಿಭಟಿಸುವ ಮನೋಭಾವ ತೀವ್ರವಾಗಿತ್ತು. ಜನಪರ, ಸೌಹಾರ್ದ ಪರ ಹೋರಾಟಗಾರ,ಚಿಂತಕ, ನಮ್ಮೆಲ್ಲರ ಪ್ರೀತಿಯ ಜಿಕೆಜಿ ತಮ್ಮ ೮೪ನೇಯ ವಯಸ್ಸಿನಲ್ಲಿ ಅಗಲಿದ್ದಾರೆ. ಪ್ರತಿರೋಧದ ಸಂಕೇತವಾಗಿದ್ದ ಅವರಿಗೆ ನಮನಗಳು.
-ಡಾ ಸಿದ್ಧನಗೌಡ ಪಾಟೀಲ್

ಜಾಗ್ರತಿ ಮೂಡಿಸುವ ಧ್ವನಿಗಳು ಒಂದೊಂದಾಗಿ ಮೌನವಾಗುತ್ತಿವೆ. ನಾಡಿನ ಹೆಸರಾಂತ ಚಿಂತಕ. ಲೇಖಕ, ಕಲಾವಿದ, ಎಲ್ಲಕ್ಕಿಂತ ಮಿಗಿಲಾಗಿ ಮನುಷ್ಯ ದ್ವೇಷದ ಕಿಚ್ಚು ಹಚ್ಚುವ ಕೋಮುವಾದವನ್ನು ಬದುಕಿನ ಕೊನೆಯುಸಿರು ಇರುವವರೆಗೆ ವಿರೋಧಿಸುತ್ತ ಬಂದಿದ್ದ, ಖಡಕ್ ಮಾತಿನ ಪ್ರೊ.ಜಿ.ಕೆ‌.ಗೋವಿಂದರಾವ ಇನ್ನಿಲ್ಲ.ಇವತ್ತು ಬೆಳಗಿನ ಜಾವ ಹುಬ್ಬಳ್ಳಿಯ ಮಗಳ ಮನೆಯಲ್ಲಿ ಗೋವಿಂದರಾವ ಕೊನೆಯುಸಿರೆಳೆದರು. ಬಾಬಾ ಬುಡನಗಿರಿಯಲ್ಲಿ ಕೋಮುವಾದಿ ಶಕ್ತಿಗಳ ವಿರುದ್ಧ ನಡೆದ ಪ್ರತಿರೋಧ ಆಂದೋಲನ ಸೇರಿದಂತೆ ಜನ ವಿಭಜಕ ಶಕ್ತಿಗಳ ವಿರುದ್ಧ ಅವರ ಜೊತೆಗೆ ಹಲವಾರು ಚಳವಳಿಗಳಲ್ಲಿ ಭಾಗವಹಿಸಿದ್ದು ಇನ್ನು ನೆನಪು ಮಾತ್ರ.
-ಸನತ್ ಕುಮಾರ್ ಬೆಳಗಲಿ

ಒಮ್ಮೆ ಗೋಕಾಕದಿಂದ ರಾಮದುರ್ಗಕ್ಕೆ ಜಿ.ಕೆ.ಗೋವಿಂದರಾವ್ ಜೊತೆಗೆ ಬರುತ್ತಿದ್ದೆ. ಅವರು ಉಸಿರುಗಟ್ಟಿಸುವ ತುರ್ತು ಪರಿಸ್ಥಿತಿಯ ಆ ದಿನಗಳ ಬಗ್ಗೆ ಮಾತನಾಡುತ್ತಿದ್ದರು. ರಸ್ತೆ ಎರಡೂ ಬದಿ ಸೂರ್ಯಪಾನದ ಬೆಳೆ ಅವರನ್ನು ಆಕರ್ಷಿಸಿತ್ತೇನೋ. ನಮ್ಮ ಚಂಪಾ “ಸಂಜೆ, ಸೂರ್ಯಪಾನದ ಹೂವು ಗೋಣು ಚೆಲ್ಲುವ ಮುನ್ನ, ಮುಗಿಲಲ್ಲಿ ಎಲ್ಲೋ ಹಕ್ಕಿ ಲಗಾಟ ಹೊಡೆದಾಗ, ಗೋಡೆಯಾಚೆಗಿನ ಸ್ವಂತದ ಹಾಳು ಹಂಪೆ ನೆನಪಾಗಿ ಮೈ ತುಂಬ ತುಂಗಭದ್ರೆಯ ಸೆಳವು ಹೆಚ್ಚುತ್ತದೆ” ಎಂದು ಬತ್ತದ ಅಂತಹ ಜೀವಸೆಲೆಯೇ ನಮ್ಮ ಭವಿಷ್ಯ ನಿರ್ಧರಿಸಬಲ್ಲದು, ಸುರಕೋಡ ಎಂದಿದ್ದರು ಜಿಕೆಜಿಯವರು.
-ಹಸನ್ ನಯೀಮ್ ಸುರಕೋಡ

‍ಲೇಖಕರು Admin

October 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: