ಜಿ ಎನ್ ನಾಗರಾಜ್ ಅಂಕಣ- ತಾಳಿ ಎಂಬ ಗ್ರೀನ್ ಕಾರ್ಡ್…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

26

ತಾಳಿ ಎಂಬ ಗ್ರೀನ್ ಕಾರ್ಡ್. ಮದುವೆ- ಮಗಳಿಗೆ ಶಾಶ್ವತ ನಿವಾಸದ ಹಕ್ಕು ದೊರಕಿದ ಸಂಭ್ರಮ.


ತಾಳಿಯನ್ನು ಹೆಣ್ಣಿನ ತಂದೆಯೇ ಮಗಳಿಗೆ ಕಟ್ಟುವ ಪದ್ಧತಿ ಇತ್ತೀಚಿನವರೆಗೆ ಇತ್ತು ಎಂದರೆ ನಂಬುತ್ತೀರಾ! ಹಾಗಾದರೆ ಇದನ್ನು ನೋಡಿ! ಹೆಂಡತಿಯಾಗುವವಳಿಗೆ ಗಂಡನಾಗುವವನಲ್ಲ, ಗಂಡನ ಕುಲದ ಯಜಮಾನ ಯಾ ಗುರಿಕಾರ ವಧುವಿಗೆ ತಾಳಿ ಕಟ್ಟುತ್ತಿದ್ದರು!! ಇಂತಹ ಹಲವು ವೈವಿಧ್ಯಗಳಿದ್ದವು.
ತಾಳಿಯೆಂದರೇನು! ಅದರ ಮಹತ್ವವೇನು ಅದನ್ನು ಯಕಶ್ಚಿತ್ ಗ್ರೀನ್ ಕಾರ್ಡ್‌ಗೆ ಹೋಲಿಸುತ್ತೀರಲ್ಲಾ! ತಾಳಿ ಭಾಗ್ಯದ ಮಹಿಮೆ ತಿಳಿಯಲಾರದ, ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾದ ಆಧುನಿಕರು ನೀವು. ಈ ತಲೆ ಬರಹವನ್ನು ನೋಡಿದ ಕೂಡಲೇ ಮೊದಲು ತಾಳಿಯನ್ನು ಕಣ್ಣಿಗೊತ್ತಿ ಅದಕ್ಕೆ ನಮಿಸಿ ಹೀಗೆ ಟೀಕಿಸ ಬಯಸುವವರು ನಮ್ಮದೇ‌ ದೇಶದ, ಮೇಲೆ ಹೇಳಿದ ವಾಸ್ತವ ಸಂಗತಿಗಳ ಬಗ್ಗೆ ಏನೆನ್ನುತ್ತೀರಿ?


ತಾಳಿಯ ಬಗ್ಗೆ ಜನಪದರಲ್ಲಿ ಎಷ್ಟೊಂದು ಹಾಡು, ಗಾದೆಗಳು, ನಂಬಿಕೆಗಳು, ಕುರುಡು ನಂಬಿಕೆಗಳು, ಕಂದಾಚಾರಗಳು. ಸಾವಿರಾರು ವರ್ಷಗಳಿಂದ ಬೆಳೆಯುತ್ತಾ, ಹಬ್ಬುತ್ತಾ, ಹೆಚ್ಚುತ್ತಾ ಬಂದಿವೆ.


ತಾಳಿಯ ಭಾಗ್ಯ, ಮಹಿಮೆ, ಮಹತ್ವ, ಹೆಣ್ಣಿನ ಜೀವನದಲ್ಲಿ ಅದರ ಎಲ್ಲಿಲ್ಲದ ಪ್ರಾಮುಖ್ಯತೆ ಬಗ್ಗೆ ಎಷ್ಟೊಂದು ಸಿನೆಮಾಗಳು, ಈಗಿನ ಧಾರಾವಾಹಿಗಳು ಮತ್ತು ಯು ಟ್ಯೂಬ್, ವಾಟ್ಸಪ್‌, ಇನ್ಸ್ಟಾಗ್ರಾಮ್‌ಗಳೆಂಬ ನವ ಮಾಧ್ಯಮಗಳಲ್ಲಿನ ಅಸಂಖ್ಯ ವಿಡಿಯೋಗಳು, ಬರಹಗಳು, ಜ್ಯೋತಿಷಿಗಳು, ಸನಾತನ ಧರ್ಮದ ಬಿಟ್ಟಿ ಉಪದೇಶಕರು ಇತ್ತೀಚಿನ ಬಹಳ ಪ್ರಭಾವಶಾಲಿ ಸೇರ್ಪಡೆ.


ಅಬ್ಬಾಬ್ಬಾ! ಈ ಹೊಡೆತಕ್ಕೆ ಯಾವ ಮೆದುಳು ತಡೆದುಕೊಂಡೀತು. ಅಲ್ಲಾಡಿ ಹೋಗಿ ತಾಳಿಯನ್ನು ಕಣ್ಣಿಗೊತ್ತಿಕೊಂಡು ಮುಂದೆಂದೂ ಬಿಡೆನು ಇದನ್ನು, ಇದಕ್ಕಾಗಿ ಯಾವ ವ್ರತ, ಪೂಜೆಯನ್ನಾದರೂ ಮಾಡುತ್ತೇನೆ ಎಂಬ ಭಾವವನ್ನು ಹುಟ್ಟಿಸುವುದಿಲ್ಲವೇ ಈ ಮಾಧ್ಯಮಗಳ ಪ್ರಭಾವಕ್ಕೆ ಸಿಲುಕಿರುವವರಲ್ಲಿ. ಅಂತಹವರು ಗ್ರೀನ್ ಕಾರ್ಡ್ ಹೋಲಿಸುವುದನ್ನು ಟೀಕಿಸುವುದು ಸಹಜ.
ಆದರೆ ತಾಳಿ ಪದ್ಧತಿಯ ಉಗಮದ ಬಗ್ಗೆ ನಮ್ಮ ದೇಶದ ಜನರ ಪ್ರಾಚೀನ ನಂಬಿಕೆ, ವಿಚಾರ, ಆಚಾರಗಳು ಬೇರೇನೋ ಹೇಳುತ್ತಿವೆ. ತಾಳಿ ಎಂಬ ಪದ್ಧತಿ ಯಾವಾಗ, ಹೇಗೆ ಮತ್ತು ಯಾಕೆ ಹುಟ್ಟಿತು ಎಂಬ ಬಗ್ಗೆ  ಇವುಗಳ ಅಧ್ಯಯನದಿಂದ ತಿಳಿದುಕೊಳ್ಳೋಣ. ಇದಕ್ಕಾಗಿ ಅಮ್ಮ ಕೇಂದ್ರಿತ ಸಮಾಜದಿಂದ ಪುರುಷಾಧಿಪತ್ಯದ ಕಡೆಗೆ ಚಲಿಸುತ್ತಿದ್ದ, ಆಗ ತಾನೇ ಪುರುಷಾಧಿಪತ್ಯ ಸ್ಥಾಪಿಸಿಕೊಂಡಿದ್ದ ಸಂಕ್ರಮಣ ಕಾಲದ ಸಮಾಜಗಳ ಅಧ್ಯಯನಗಳನ್ನು  ಸಾವಧಾನವಾಗಿ ಪರಿಶೀಲಿಸಬೇಕು ಮತ್ತು ವಸ್ತುನಿಷ್ಠ ವಿಶ್ಲೇಷಣೆಗೊಳಪಡಿಸಬೇಕು.

ಗ್ರೀನ್ ಕಾರ್ಡ್ ಎಂದರೇನು? :

ಅಮೇರಿಕದಲ್ಲಿ ನೆಲಸಿ ಯಾವಾಗ ನಮ್ಮನ್ನು ಇಲ್ಲಿಂದ ಓಡಿಸುವರೋ ಎಂಬ ನಿತ್ಯ ಆತಂಕದಲ್ಲಿರುವ ಭಾರತೀಯರಿಗೆ, ಗಂಡನಿಂದ ದೂರಾಗಿ ಇಂಡಿಯಾದಲ್ಲಿ ಬದುಕುತ್ತಿರುವ ಹೆಂಡತಿಯರಿಗೆ, ಅವರ ಅಪ್ಪ ಅಮ್ಮಂದಿರಿಗೆ, ಇತರನೇಕರಿಗೆ ಗ್ರೀನ್ ಕಾರ್ಡ್ ಸಿಕ್ಕಿತು ಎಂದರೆ ಕುಣಿದು ಕುಪ್ಪಳಿಸುವಷ್ಟು ಸಂಭ್ರಮ. ಅಬ್ಬಾ ನಮ್ಮ ಬದುಕು ಪಾವನವಾಯ್ತು ಎಂಬ ಸಂತೋಷ. ಆತಂಕಗಳು ದೂರಾವಾದ ನಿಟ್ಟುಸಿರು. ‌
ಏನಿದು ಗ್ರೀನ್ ಕಾರ್ಡ್ ಎಂದರೆ – ಗ್ರೀನ್‌ ಕಾರ್ಡ್‌ನ ಕಾನೂನು ಬದ್ಧ ಹೆಸರು permanent resident card. ಇನ್ನು ಮುಂದೆ ನೀವು ಅಮೇರಿಕದಲ್ಲಿ ಶಾಶ್ವತವಾಗಿ ನೆಲಸಬಹುದು, ಯಾವುದೇ ಉದ್ಯೋಗ, ವ್ಯವಹಾರ ಮಾಡಬಹುದು, ಮನೆ ಮತ್ತಿತರ‌ ಆಸ್ತಿ ಕೊಳ್ಳಬಹುದು ಎಂಬ ಹಕ್ಕು ನೀಡುವ ಅಧಿಕಾರ ಮುದ್ರೆ. ಇನ್ನು ಮುಂದೆ ನೀವು  LPR ಗಳು- lawful permanent resident ಎಂದು ಕರೆಯಲ್ಪಡುತ್ತೀರಿ. ಅಂದ ಮಾತ್ರಕ್ಕೆ ನೀವು ಅಮೇರಿಕದ ಪ್ರಜೆಗಳಾಗಿಬಿಡುವುದಿಲ್ಲ. ಕೇವಲ ವಾಸದ ಹಕ್ಕು, ದುಡಿಯುವ, ಅನ್ನ ಸಂಪಾದಿಸುವ ಹಕ್ಕು ದೊರೆತಿದೆ. ಮುಂದೊಮ್ಮೆ ಅಮೇರಿಕದ ನಾಗರಿಕತ್ವಕ್ಕೆ ಅರ್ಜಿ ಗುಜರಾಯಿಸಬಹುದು,ಅದು ಸಿಗಲೂಬಹುದು! ಅಹಾ ಇನ್ನೇನು ಬೇಕು ಈ ಜನ್ಮಕ್ಕೆ!! ಈ ಕಾರ್ಡ್‌ಗೆ ಕೆಲವೊಮ್ಮೆ conditions ಇರುತ್ತವಂತೆ. ಎರಡು ವರ್ಷ, ಹತ್ತು ವರ್ಷ ಎಂಬ ಅವಧಿಯೂ ನಿಗದಿ.


ಸಾವಿರಾರು ವರ್ಷಗಳ ತಾಳಿ ಪುರಾಣದ ಬಗ್ಗೆ ಮಾತನಾಡುವಾಗ ಈ ಗ್ರೀನ್ ಕಾರ್ಡ್ ಕತೆಯನ್ನೇಕೆ ತಂದದ್ದು? ಕೆಲವರಿಗಾದರೂ ಈ – ಉಪಮೆಯೋ, ರೂಪಕವೋ – ಅದರ ಅರ್ಥವಾಗಿರಬೇಕು ಎಂದುಕೊಳ್ಳುತ್ತೇನೆ.


ತಾಳಿಯೂ ಕೂಡಾ ಗ್ರೀನ್ ಕಾರ್ಡ್‌ನಂತೆಯೇ ಅಲ್ಲವೇ! ಅದೂ ಕೂಡಾ  ಗಂಡನ ಮನೆಯಲ್ಲಿ ಶಾಶ್ವತವಾಗಿ ವಾಸ ಮಾಡುವ ಮತ್ತು ದುಡಿಯುವ,ಅನ್ನ ಸಂಪಾದಿಸುವ ಹಕ್ಕನ್ನು ದೊರಕಿಸುವ ಸಾಧನ. ಅದರ ಜೊತೆಗೆ ಗಂಡನ ಲೈಂಗಿಕ ಭೋಗಕ್ಕೆ ದೊರಕುವ, ಮಕ್ಕಳನ್ನು ಹೆರುವುದು, ಸಾಕುವುದೂ ಸೇರಿಕೊಂಡಿದೆ. ಮದುವೆಯಾದ ಮೇಲೆ ಅಮೆರಿಕಕ್ಕೆ ಹೋಗಿ ಗಂಡನ ಜೊತೆ ಸೇರುವ ಹೆಂಡತಿಗೂ ಈ “ಹಕ್ಕುಗಳು” ಸಿಗುತ್ತವೆ.


ತಾಳಿ ಕಟ್ಟಿಸಿಕೊಂಡು ಗಂಡನ ಮನೆಯ lawful permanent resident (LPR) ಆದ ಹೆಂಡತಿಯ ಸ್ಥಿತಿಯನ್ನು ಗ್ರೀನ್ ಕಾರ್ಡ್ ಬಹಳ ಚೆನ್ನಾಗಿ ಬಿಂಬಿಸುತ್ತದೆಯಲ್ಲವೇ? ಅವಳಿಗೆ ಭಾರತದ ಪ್ರಜೆಯಾಗುವ ಹಕ್ಕು, ವಿವಿಧ ಚುನಾವಣೆಗಳಲ್ಲಿ ಮತದಾನ ಮಾಡಲು ಗಂಡ, ಅತ್ತೆ, ಮಾವಂದಿರಿಗಿರುವಷ್ಟೇ ಹಕ್ಕನ್ನು ನಮ್ಮ ಸಂವಿಧಾನ ನೀಡಿರಬಹುದು. ಆದರೆ ಅದನ್ನು ಚಲಾಯಿಸಲು ಅವಳು ಮೊದಲು ತನ್ನ ಮನೆಯಲ್ಲಿ ಇತರರಂತೆ ಸಮಾನ ಹಕ್ಕುಳ್ಳ ಪ್ರಜೆಯಾಗಬೇಕು. ಅಲ್ಲಿಯವರೆಗೂ ಸಂವಿಧಾನ ನೀಡಿದ ಹಕ್ಕು ಅಷ್ಟರ ಮಟ್ಟಿಗೆ ಸೀಮಿತಗೊಳ್ಳುತ್ತದೆ.
ಆದರೆ ಆಸೆಯಿದೆ. ಮುಂದೊಮ್ಮೆ ಅವಳಿಗೂ ಆ ಮನೆಯ ಪೂರ್ಣ ಪ್ರಮಾಣದ ಪ್ರಜೆಯ ಸ್ಥಾನ ದೊರಕಬಹುದು ಎಂದು. ಕೆಲವು ಕೆಲವೇ ಕೆಲವು ಮನೆಗಳಲ್ಲಿ ಹೆಂಡತಿಯರಿಗೆ ಪ್ರಜೆಯ ಸ್ಥಾನ ದೊರಕಿದೆ. ಅದನ್ನು ನೋಡುತ್ತಾ ನನಗೂ ಸಿಗುತ್ತದೆ ಎಂಬ ಭರವಸೆ ತುಂಬಿಕೊಂಡು ಆಕೆ ಕಾಯಬೇಕು ತಾಳ್ಮೆಯಿಂದ. ಆದರೆ ಪ್ರಜೆ ಎಂಬ ಸ್ಥಾನ ಮರೀಚಿಕೆಯಂತೆ ಎಂದೆಂದೂ ದೊರಕದೆಯೇ ಹೋಗಬಹುದು.


ಹಲವೊಮ್ಮೆ LPR ಕಂಡಿಷನ್‌ಗಳಿಗೆ ಒಳಪಟ್ಡಿರುತ್ತದೆ. ಅದರಲ್ಲಿ ಮುಖ್ಯವಾದವುಗಳು ವರದಕ್ಷಿಣೆಯ ಪ್ರಮಾಣ, ಗಂಡು ಮಕ್ಕಳನ್ನು ಹೆರುವುದು, ಮನೆಯ ಜೀತಗಾರಿಕೆ, ಗಂಡನಿಚ್ಛೆಯಂತೆ ಅವನ ಭೋಗಕ್ಕೆ ಒದಗುವುದು ಇತ್ಯಾದಿ.
ಆದರೆ ಒಂದು ಬಹಳ ಮುಖ್ಯವಾದ ವ್ಯತ್ಯಾಸವಿದೆ ಅಮೇರಿಕದ ಗ್ರೀನ್ ಕಾರ್ಡ್ ಅವಧಿ ಮುಗಿದು ಹೋದರೆ ಅಥವಾ ಬೇರಾವುದೇ ಕಾರಣಕ್ಜೆ LPR ಸ್ಥಾನ ತಪ್ಪಿದರೆ ಅವರಿಗೆ ಭಾರತದ ಪ್ರಜೆ ಎಂಬ ಸ್ಥಾನವೇನೂ ನಷ್ಟವಾಗಿರುವುದಿಲ್ಲ. ಯಾವಾಗ ಬೇಕಾದರೂ ಈ LPR  ಸ್ಥಿತಿ ಸಾಕಪ್ಪಾ ಎನಿಸಿದರೆ ಕೂಡಾ ಭಾರತಕ್ಕೆ ಮರಳಬಹುದು. ಇಲ್ಲಿ ಬದುಕು ರೂಪಿಸಿಕೊಳ್ಳುವ ಎಲ್ಲ ಅವಕಾಶ ತೆರೆದಿರುತ್ತದೆ. ಅಂತಹ ಲಕ್ಷಾಂತರ ಉದಾಹರಣೆಗಳಿವೆ. ಆದರೆ ಹೆಂಡತಿ ಎಂಬವಳಿಗೆ ಗಂಡನ ಮನೆಯ LPR ಸ್ಥಾನ ತಪ್ಪಿದರೆ ತಾನು ಹುಟ್ಟಿ ಬೆಳೆದ ಮನೆಯಲ್ಲೂ, ಬೇರೆಲ್ಲೂ ಆಕೆಗೆ ಪ್ರಜೆಯ ಸ್ಥಾನ ಇರಲಿ LPR ಸ್ಥಾನವೂ ಇಲ್ಲ. ಕೆಲವೊಮ್ಮೆ ಸಿಕ್ಕರೆ ಅದು ಕೆಲ ತಿಂಗಳು, ಒಂದೆರಡು ವರ್ಷಗಳ ಅಸಹನೀಯ ಜೀವನದ ತಾತ್ಕಾಲಿಕ ವೀಸಾ ಮಾತ್ರ. ಅಪರೂಪಕ್ಕೆ ಕೆಲವು ತಂದೆ, ತಾಯಂದಿರು, ಅಣ್ಣ ತಮ್ಮಂದಿರು ಉದಾರವಾಗಿ LPR ಸ್ಥಾನ ಗ್ರಾಂಟ್ ಮಾಡಬಯಸಿದರೂ ಸುತ್ತ ಮುತ್ತಲ ಜನ, ನೆಂಟರಿಷ್ಟರು ಅಪ್ರೂವ್ ಮಾಡುವುದಿಲ್ಲ.


ಗ್ರೀನ್ ಕಾರ್ಡ್ ಮತ್ತು ತಾಳಿಯ ನಡುವಣ ಸಾಮ್ಯತೆ, ಭಿನ್ನತೆ ಇಷ್ಟಕ್ಕೆ ಸೀಮಿತವಲ್ಲ. ತಾಳಿಯನ್ನು ಗ್ರೀನ್ ಕಾರ್ಡ್ ಎಂದದ್ದು ಕೇವಲ ಹೋಲಿಕೆಯಾಗಿ ಮಾತ್ರ ಅಲ್ಲ. ಅದು ನಿಜವಾಗಿಯೂ ಕೂಡಾ ಹುಟ್ಡಿನಿಂದ ಒಂದು ಕುಲದ ಪ್ರಜೆಯಾಗಿದ್ದ ಹೆಣ್ಣು ಮತ್ತೊಂದು ಕುಲದ ಪ್ರಜೆಯಾಗುವ ಕ್ರಿಯೆಯ ಗುರುತು. ಆದರೆ ಇಂದು ತಾಳಿಯ ಬಗೆಗಿನ ತಿಳುವಳಿಕೆ ಮೂಡಿರುವ ಕಲ್ಪನೆಗಳ ರಾಶಿಯಲ್ಲಿ  ಎಲ್ಲೋ ಆಳದಲ್ಲಿ ಹುದುಗಿ ಹೋಗಿದೆ.

ಇಂದು ತಾಳಿ ಎಂದರೇನು? ಅದರ ಬಗ್ಗೆ ಮೂಡಿರುವ ಕಲ್ಪನೆ,ನಂಬಿಕೆಗಳೇನು? :

ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೂ ಗೊತ್ತಿರುವ ವಿಷಯಗಳಿವು. ಎಲ್ಲ ಪುರುಷರಿಗೂ ಈ ಎಲ್ಲವೂ ಗೊತ್ತಿರುವುದಿಲ್ಲವೆಂಬ ಕಾರಣಕ್ಕೆ ಕೆಳಗೆ ಒಂದು ಸಂಕ್ಷಿಪ್ತ ನೆನಪು.
ತಾಳಿ ಎಂದರೆ ಅದು ಸಾಮಾನ್ಯವಾಗಿ ಚಿನ್ನದ ಒಂದು ರಚನೆ. ಸಾಮಾನ್ಯವಾಗಿ ಎರಡು ಚಿನ್ನದ ಬೊಟ್ಟುಗಳಿರುತ್ತವೆ. ಕೆಲವು ಸಮುದಾಯಗಳಲ್ಲಿ ಒಂದೇ ಇರುತ್ತದೆ. ಅದು ವಿವಿಧ ಪ್ರದೇಶಗಳಲ್ಲಿ ವಿವಿಧ ಜಾತಿ ಸಮುದಾಯಗಳಲ್ಲಿ ಒಂದೊಂದು ರೀತಿಯ ಆಕಾರ ಹಾಗೂ ರೂಪವನ್ನು ಪಡೆದಿರುತ್ತದೆ.
ಅದನ್ನು ಕಟ್ಟುವುದು ಮದುವೆಯ ಮುಖ್ಯ ಭಾಗ. ಗಂಡೊಬ್ಬ ಹೆಣ್ಣೊಬ್ಬಳ ಕತ್ತಿಗೆ ಮದುವೆಯ ಸಂದರ್ಭದಲ್ಲಿ ಅದನ್ನು ಕಟ್ಟಿ ತನ್ನ ಹೆಂಡತಿಯನ್ನಾಗಿ ಮಾಡಿಕೊಳ್ಳುವ ಕ್ರಿಯೆ. ಅದು ಸಾನಾನ್ಯವಾಗಿ ಹರಿಷಿಣ ಹಚ್ಚಿದ ದಾರದಲ್ಲಿ ಪೋಣಿಸಲ್ಪಟ್ಟಿರುತ್ತದೆ. ಅದನ್ನು ಗಂಡು ಮೂರು ಗಂಟು, ಮೂರೇ ಗಂಟು ಹಾಕಿ ಕಟ್ಟುತ್ತಾನೆ. ಆಗ ಗಂಡಿನ ಸೋದರಿ ಅಥವಾ ಗಂಡಿನ ಮನೆಯ ಯಾರಾದರೂ ಹೆಂಗಸರು ಸಹಾಯ ಮಾಡುತ್ತಾರೆ.


ತಾಳಿ ಕಟ್ಟುವುದು ಹೆಣ್ಣೊಬ್ಬಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳುವುದರಲ್ಲಿ ಎಷ್ಟೊಂದು ಪ್ರಾಮುಖ್ಯತೆ ಪಡೆದಿದೆ ಎಂದರೆ ಆಶ್ಚರ್ಯವಾಗುತ್ತದೆ. ಗಂಡೊಬ್ಬ ಅಥವಾ ಅವನ ತಂದೆ ತಾಯಿಗಳು, ಹಲವೊಮ್ಮೆ ಹೆಣ್ಣಿನ ತಂದೆ ತಾಯಿಗಳು ಏನೇನೋ ಮೋಸ ಮಾಡಿ, ಸುಳ್ಳು ಹೇಳಿ ತಾಳಿ ಕಟ್ಟಿಸಿಬಿಟ್ಟರೆಂದರೆ ಮುಗಿಯಿತು. ಅವರ ಮೋಸ, ಸುಳ್ಳುಗಳು ಬಯಲಿಗೆ ಬಂದರೂ ಹೆಣ್ಣಾಗಲಿ, ಅವಳ ತಂದೆ ತಾಯಂದಿರಾಗಲಿ ಏನೂ ಮಾಡುವಂತಿಲ್ಲ. ಒತ್ತಡ, ಬೆದರಿಕೆಗಳಂತೂ ಸಾಮಾನ್ಯ. ಚಾಕು ಚೂರಿಯ ಬೆದರಿಕೆ ಹಾಕಿ ಮದುವೆಯ ಯಾವ ಶಾಸ್ತ್ರ, ಸಂಪ್ರದಾಯ, ಮಂಗಳ ವಾದ್ಯ, ಪುರೋಹಿತರೂ ಇಲ್ಲದೆ ಅರಿಶಿಣ ಮೆತ್ತಿದ ದಾರದಲ್ಲಿ ಅರಿಷಿಣದ ಕೊಂಬನ್ನು ಕಟ್ಟಿ ಅದನ್ನೇ ತಾಳಿಯೆಂದು ಕಟ್ಟಿಬಿಟ್ಟರೂ ಮದುವೆ ಆಗಿಯೇ ಹೋಯಿತು. ಅದನ್ನು ಕಿತ್ತೊಗೆಯಲು ಬರುವುದಿಲ್ಲ. ಹೀಗೆ ತಾಳಿ ಕಟ್ಟಿಸಿಕೊಳ್ಳಬೇಕಾಗಿ ಬಂದ ಹೆಣ್ಣನ್ನು ಬೇರೆಯವರು ಮದುವೆಯಾಗುವಂತಿಲ್ಲ.
ಹೀಗೆ ತಾಳಿ ಕಟ್ಟುವುದೇ ಮದುವೆ. ಉಳಿದೆಲ್ಲಾ ಆಚರಣೆ, ಸಂಭ್ರಮಗಳು ಕೇವಲ ಒಗ್ಗರಣೆ.


ಮದುವೆಯಲ್ಲಿ ತಾಳಿ ಕಟ್ಡಿದ ನಂತರ ಅದರ ಜೊತೆಗೆ ಕರಿಮಣಿಗಳನ್ನು ಮತ್ತು ಅಲ್ಲಲ್ಲಿ ಕೆಂಪು ಹವಳಗಳನ್ನು ಚಿನ್ನದ ಸರದಲ್ಲಿ ಪೋಣಿಸಿ ಧರಿಸುತ್ತಾರೆ. ಹಲವರು ಇವುಗಳ ಜೊತೆಗೆ ಅವರವರ ಆರ್ಥಿಕ ಶಕ್ತ್ಯಾನುಸಾರವಾಗಿ ಹಲವು ಚಿನ್ನದ ಕಾಸು ಮತ್ತಿತರ ಅಲಂಕಾರಗಳನ್ನೂ ಪೋಣಿಸಿಕೊಳ್ಳುತ್ತಾರೆ.
ಈ ಕರಿಮಣಿಗಳು ಹೆಣ್ಣಿಗೆ ಬರಬಹುದಾದ ಅಪಾಯಗಳನ್ನು, ನೆಗೆಟಿವ್ ಎನರ್ಜಿಯನ್ನು ಹೋಗಲಾಡಿಸುತ್ತದೆ. ಹವಳಗಳು ಮಂಗಳವನ್ನುಂಟು ಮಾಡುತ್ತವೆ. ಚಿನ್ನದ ತಾಳಿ ಎದೆಯ ಮೇಲೆ ತೂಗಾಡುತ್ತಾ ಹಾಲೂಡಿಸುವಾಗ ಉಂಟಾಗುವ ಉಷ್ಣವನ್ನು ತಡೆಗಟ್ಟುತ್ತದೆ ಹೀಗೆಲ್ಲಾ ಇತ್ತೀಚಿನ ಪುರೋಹಿತಶಾಹಿ ತಾಳಿಯನ್ನು ವೈಭವೀಕರಿಸುತ್ತಿದೆ. ಹೊಸ ನಂಬಿಕೆಗಳನ್ನು ಬಿತ್ತುತ್ತಿದೆ.


ತಾಳಿ ಬೊಟ್ಟಂತೂ ಯಾವಾಗಲೂ ಕುತ್ತಿಗೆಯಲ್ಲಿ ಇರಲೇಬೇಕು. ಮಲಗುವಾಗಲೂ, ಸ್ನಾನ ಮಾಡುವಾಗಲೂ ತೆಗೆಯುವಂತಿಲ್ಲ. ಗಂಡನ ಜೀವಕ್ಕೆ ಆಪತ್ತು. ಹೆಂಡತಿಯನ್ನು ವಿಧವೆ ಮಾಡುತ್ತದೆ. ಇನ್ನೂ ಹಲವು ರೀತಿಯಲ್ಲಿ ಹೆಂಡತಿಗೆ ಅಮಂಗಳಕರ.
ಆದ್ದರಿಂದ ತಾಳಿಯನ್ನು ದಿನವೂ ಬೆಳಗ್ಗೆ ಕುಂಕುಮ ಹಚ್ಚಿ ಕಣ್ಣಿಗೊತ್ತಿ ಪೂಜಿಸಬೇಕು. ಹಾಗೆ ದಿನದಲ್ಲಿ ಎರಡು ಮೂರು ಬಾರಿ ಕಣ್ಣಿಗೆ ಒತ್ತಿಕೊಳ್ಳುತ್ತಿರಬೇಕು. ಗಂಡನ ಆಯುಷ್ಯ ಹೆಚ್ಚಾಗಲು ಇದು ಅತ್ಯವಶ್ಯ. ಗಂಡನ ಜೀವಕ್ಕೆ ಯಾವುದೇ ಕಾರಣಕ್ಕೆ ಕುತ್ತು ಬರುವ ಸಂದರ್ಭದಲ್ಲೂ ತಾಳಿಯನ್ನು ಕಣ್ಣಿಗೊತ್ತಿಕೊಂಡು ದೇವರನ್ನು ಪ್ರಾರ್ಥಿಸಬೇಕು. ಗಂಡ ಗಂಡಾಂತರದಿಂದ ಪಾರಾದರೆ ಅದು ತಾಳಿಯ ಬಲ. ಹೆಂಡತಿ ತಾಳಿಯನ್ನು ಬಹು ಭಕ್ತಿಯಿಂದ ಪೂಜಿಸಿದ್ದರ ಫಲ ಎಂಬ ನಂಬಿಕೆಗಳು ವ್ಯಾಪಕವಾಗಿ ಜನಮನದಲ್ಲಿ ಆಳವಾಗಿ ಬೇರೂರಿವೆ. ಗಂಡ ಮನೆಯ ಹೊರಗೆ ಹೋಗಿ ಕ್ಷೇಮವಾಗಿ ಮನೆಗೆ ಬರಲು ತಾಳಿಯ ಪೂಜೆ ಅವಶ್ಯ. ಅದರಲ್ಲೂ ಅಪಾಯಕಾರಿ ಕೆಲಸದಲ್ಲಿ ತೊಡಗಿರುವವರ ವಿಷಯದಲ್ಲಂತೂ ಸರಿಯೇ ಸರಿ.


ಹೆಂಡತಿ ಈ ಬಗ್ಗೆ ಯಾವ ಔದಾಸೀನ್ಯ ತೋರಿದರೂ ಬಹಳ ಟೀಕೆಗೊಳಗಾಗುತ್ತಾಳೆ. ಗಂಡನಾದವನು ಹೆಂಡತಿಯ ಮೇಲೆ ದೌರ್ಜನ್ಯ ಎಸಗುವವನಾಗಲಿ, ದುಷ್ಟನಾಗಲಿ, ಕ್ರೂರಿಯಾಗಲಿ, ಹೆಂಡತಿಗೆ ಅವನ ಮೇಲೆ ಯಾವ ಪ್ರೀತಿ, ಗೌರವ ಇಲ್ಲದೆ ಹೋಗಲಿ ತಾಳಿಯನ್ನು ಪೂಜಿಸುವುದು ಅತ್ಯವಶ್ಯ. ಅತ್ತೆ ಮತ್ತಿತರ ಮುತ್ತೈದೆಯರು ಹೆಂಡತಿಯರಾದ ಹೆಣ್ಣುಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಏಕೆಂದರೆ ಅದು ಅವರ ಮಗನ ಅಥವಾ ಇತರ ರೀತಿಯಲ್ಲಿ ಮನೆಗೆ ಆಧಾರವಾದ ಗಂಡಿನ ಜೀವದ ಪ್ರಶ್ನೆ.


ಇತ್ತೀಚೆಗಷ್ಟೇ ಕೆಲವೇ ಕೆಲವು ಮಹಿಳೆಯರು ತಾಳಿಯ ಬಗೆಗಿನ ಕಟ್ಟಲೆಗಳನ್ನು ಉಲ್ಲಂಘಿಸುವ ಧೈರ್ಯ ತೋರುತ್ತಿದ್ದಾರೆ.
ಆದರೆ ತಾಳಿಯ ಮಹಿಮೆ ಅಷ್ಟೇ ಅಲ್ಲ. ಹೆಣ್ಣು ಮನೆಯ ಹೊರಗೆ ಹೆಜ್ಜೆಯಿಟ್ಟರೆ ತಾಳಿಯ ಸರವೇ ಅವಳ ರಕ್ಷಣೆ. ಬೇರೆ ಗಂಡಸರ ಕಾಮುಕ ದೃಷ್ಟಿ ಮದಯವೆಯಾದ ಹೆಣ್ಣುಗಳ ಮೇಲೆ ಬೀಳದಂತೆ ಮಾಡುವ ರಕ್ಷಾ ಕವಚ. ಆದ್ದರಿಂದ ಇನ್ನೂ ಮದುವೆಯಾಗದ ಮಹಿಳೆಯರೂ ತಾಳಿಯ ಸರದಂತೆ ಕಾಣುವ ಎಂತಹುದಾದರೂ ಒಂದು ಸರವನ್ನು ಮನೆ ಬಿಡುವ ಮುನ್ನ ಕೊರಳಿಗೆ ಹಾಕಿಕೊಳ್ಳುತ್ತಾರೆ.

ಗಂಡ ಸತ್ತರೆ ಹೆಂಡತಿಯನ್ನು ಅಮಂಗಳಕರವಾಗಿಸುವುದರಲ್ಲಿ ಕುಂಕುಮ ಅಳಿಸುವುದು ಇತ್ಯಾದಿ ಮುತ್ತೈದೆ ಲಕ್ಷಣಗಳನ್ನು ತೆಗೆದು ಹಾಕುವುದರಲ್ಲಿ ತಾಳಿಯನ್ನೂ ತೆಗೆದಿಡಲಾಗುತ್ತದೆ.
ಈ ತಾಳಿ ಸಣ್ಣ ದೊಡ್ಡ ದೇವತೆಗಳನ್ನೂ ಬಿಡುವುದಿಲ್ಲ. ಅವರ ವಿಗ್ರಹಗಳ ಕೊರಳಲ್ಲೂ ತಾಳಿ ಇರಲೇ ಬೇಕು.

ಹೀಗೇ ತಾಳಿಯ ಮಹಿಮೆಯನ್ನು ವರ್ಣಿಸುತ್ತಾ ಹೋಗಬಹುದು. ಅದರ ಬಗ್ಗೆ ಕತೆ ಪುರಾಣಗಳಿಗೆ ಲೆಕ್ಕವೇ ಇಲ್ಲ. ಯು ಟ್ಯೂಬ್, ಗೂಗಲ್ ಯುಗದಲ್ಲಿ ದಿನದಿಂದ ದಿನಕ್ಕೆ ಹೊಸ ಪುರಾಣಗಳನ್ನು ಸೃಷ್ಟಿ ಮಾಡುವ ವೈದಿಕ ಪುರೋಹಿತರು ಬಹಳ ಇದ್ದಾರೆ.
ನಿಜ ಸಂಗತಿ ಏನೆಂದರೆ ವೇದಗಳಲ್ಲೂ, ಮತ್ಯಾವ ವೈದಿಕ ಗ್ರಂಥಗಳಲ್ಲೂ ತಾಳಿಯ ಬಗ್ಗೆ ಪ್ರಸ್ತಾಪವಿಲ್ಲ. ಅಗ್ನಿ ಸಾಕ್ಷಿಯಾಗಿ ಪಾಣಿಗ್ರಹಣ, ಸಪ್ತ ಪದಿಗಳೇ ಮದುವೆಯ ಮುಖ್ಯ ಭಾಗ. ಉತ್ತರ ಭಾರತದಲ್ಲಿ ಮಾಂಗ್ ಭರ್‌ನಾ ಎಂಬ ಹೆಣ್ಣಿನ ಬೈತಲೆಯ ಮಧ್ಯೆ ಗಂಡು ಕುಂಕುಮವನ್ನು ಹಚ್ಚುವುದೇ ಮದುವೆಯ ಮುಖ್ಯ ಭಾಗ. ಬೈತಲೆಯ ಮಧ್ಯೆ ಕುಂಕುಮ ಕಂಡರೆ ಆಕೆ ಮದುವೆಯಾಗಿದ್ದಾಳೆಂಬುದಕ್ಕೆ ಹೆಗ್ಗುರುತು.
ತಾಳಿ ಕಟ್ಟುವುದು ಕೇವಲ ವಿಂಧ್ಯ ಪರ್ವತದಿಂದ ದಕ್ಷಿಣಕ್ಕಿರುವ ಪ್ರದೇಶದ ಜನರ ಆಚರಣೆ. ಈ ಪ್ರದೇಶಗಳಲ್ಲಿ ಬಹು ದೀರ್ಘಕಾಲ ಅಸ್ತಿತ್ವದಲ್ಲಿದ್ದ ಮತ್ತು ಇಂದೂ ಅಸ್ತಿತ್ವದಲ್ಲಿರುವ ಬುಡಕಟ್ಟುಗಳ ಆಚರಣೆ. ಆದ್ದರಿಂದ ಈ ಎಲ್ಲ ಕತೆ, ಪುರಾಣಗಳಿಗೂ ತಾಳಿಯ ನಿಜವಾದ ಉಗಮಕ್ಕೂ, ಅದರ ಅರ್ಥಕ್ಕೂ ಏನೇನೂ ಸಂಬಂಧವಿಲ್ಲ.

ಪುರುಷಾಧಿಪತ್ಯದಲ್ಲಿ ತಾಳಿ ಪದ್ಧತಿಯ ಉಗಮ ಮತ್ತು ಕಾರಣ:

ಲಕ್ಷಾಂತರ ವರ್ಷಗಳ ಕಾಲ ಮದುವೆ ಎಂಬ ಪದ್ಧತಿಯೇ ಇಲ್ಲದ ಸಮಯದಲ್ಲಿ ತಾಳಿ ಪದ್ಧತಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಲ್ಲವೇ. ಗುಂಪು ಮದುವೆ, ಜೋಡಿ ಮದುವೆಗಳ ಸಮಯದಲ್ಲೂ ತಾಳಿ ಕಟ್ಟುವ ಸಂದರ್ಭ ಬಂದಿರಲಿಲ್ಲ. ಆದರೆ ಆಗಲೂ ತಾಳಿ ಇತ್ತು. ಆದರೆ ಮದುವೆಗೂ ತಾಳಿಗೂ ಸಂಬಂಧ ಇರಲಿಲ್ಲ. ಅದನ್ನು ಮುಂದೆ ವಿವರಿಸೋಣ. ಈಗಲೂ ಬುಡಕಟ್ಟುಗಳಾಗಿರುವ , ಬುಡಕಟ್ಟುಗಳ ಬದುಕಿನ ಹಲವು ಪದ್ಧತಿಗಳನ್ನು ಇತ್ತೀಚಿನವರೆಗೂ ಉಳಿಸಿಕೊಂಡಿರುವ ಹಲವು ಸಮುದಾಯಗಳ ಉದಾಹರಣೆ ನೋಡೋಣ.

ಕೇರಳದ ನಂಬೂದರಿಗಳು ದೇಶಕ್ಕೇ ಗೊತ್ತಿರುವಂತೆ ಬಹಳ ಶ್ರೀಮಂತ ಬ್ರಾಹ್ಮಣರು. ಕಟ್ಟಾ ಸಂಪ್ರದಾಯವಾದಿಗಳು. ಅವರಲ್ಲಿ ‘ವಧುವಿನ ತಂದೆಯು ವಡಕ್ಕಿನಿ ಎಂಬ ಕೋಣೆಯಲ್ಲಿ ಮಗಳ ಕುತ್ತಿಗೆಗೆ ತಾಳಿಯನ್ನು ಕಟ್ಟುತ್ತಾನೆ. ತಾಯಿ ಆಕೆಯ ಕೈಗೆ ತುಳಸಿಯ ಮಾಲೆಯನ್ನು ಕೊಡುತ್ತಾಳೆ. ಇದರ ನಂತರ ವರನ ಮುಖ ದರ್ಶನಂ, ಉದಕ ಪೂರ್ವ ಕನ್ಯಕ ದಾನಂ, ಪಾಣಿಗ್ರಹಣಂ, ಲಾಜಹೋಮಂ ಇತ್ಯಾದಿಗಳು.

ತಮಿಳುನಾಡಿನ ಅತ್ಯಂತ ಶ್ರೀಮಂತ ಸಮುದ್ರ ವ್ಯಾಪಾರಿಗಳಾದ ನಾಟ್ಟು ಕೋಟ್ಟೈ ಚೆಟ್ಟಿ ಸಮುದಾಯದಲ್ಲಿ ಹೆಣ್ಣಿನ ಮತ್ತು ಗಂಡಿನ ಕಡೆಯವರನ್ನು ಬಿಟ್ಟು ಬೇರೊಂದು ಗುಂಪಿನ ಅತ್ಯಂತ ಹೆಚ್ಚು ಮಕ್ಕಳಿರುವ ವೃದ್ಧ ಮುತ್ತೈದೆ ಏಳು ಅಂಗುಲ ಉದ್ದ, ನಾಲ್ಕು ಅಂಗುಲ ಅಗಲವಿರುವ ದೊಡ್ಡ ಗಾತ್ರದ ತಾಳಿಯನ್ನು,17-23 ಇತರ ಚಿನ್ನದ ಆಭರಣಗಳ ಜೊತೆಗೆ ಪೋಣಿಸಿರುವ ಸರವನ್ನು ಹೆಣ್ಣಿನ ಕುತ್ತಿಗೆಗೆ ಅಗ್ನಿಯ ಮುಂದೆ ಕಟ್ಟುತ್ತಾಳೆ. ಇದರ ನಂತರ ಇಸಗುಡಿ ಮಾನಮ್ ಎಂಬ ಮದುವೆಯ ಒಪ್ಪಂದವನ್ನು ಬರೆಯುತ್ತಾರೆ. ನಂತರವೇ ಗಂಡು ಹೆಣ್ಣು ಹಾರ, ತೆಂಗಿನಕಾಯಿ ಬದಲಾಯಿಸಿಕೊಳ್ಳುವ ಮದುವೆಯ ಕ್ರಿಯೆ.

ಕೊಡಗು ಜಿಲ್ಲೆಯ ಪಂಜಿರಿಯರವ ಬುಡಕಟ್ಟಿನಲ್ಲಿ ಗಂಡಿನ ಅಕ್ಕ ನಿಶ್ಚಿತಾರ್ಥದ ದಿನವೇ ಹೆಣ್ಣಿನ ಕುತ್ತಿಗೆಗೆ ತಾಳಿಯನ್ನು ಕಟ್ಟುವ ಸಂಪ್ರದಾಯವಿದೆ. ಆಗ ಕಟ್ಟಿಲ್ಲವಾದರೆ ಮದುವೆಯ ದಿನ ಗಂಡು ಹೆಣ್ಣನ್ನು ಒಟ್ಟಿಗೆ ಕೂಡಿಸಿ ಆರತಿ ಎತ್ತಿದ ನಂತರ ಗಂಡಿನ ಅಕ್ಕ ತಾಳಿಯನ್ನು ಕಟ್ಟುತ್ತಾಳೆ. ನಂತರ ಇಬ್ಬರೂ ಕೈ ಕೈ ಹಿಡಿದು ಹೆಣ್ಣಿನ ಮನೆಯೊಳಗೆ ಹೋಗಿ ಅವರ ದೇವರಿಗೆ ನಮಸ್ಕಾರ ಮಾಡುವರು. ಮದುವೆಯ ಅವರ ಆಚರಣೆಗಳು ಮುಗಿದ ನಂತರ ಗಂಡಿನ ಮನೆಯಲ್ಲಿ ಹೆಣ್ಣಿನ ಕಡೆಯ ಚೆಮ್ಮಕಾರ ಗಂಡಿನ ಮನೆಯ ಚೆಮ್ಮಕಾರನಿಗೆ ಹೆಣ್ಣನ್ನು ಒಪ್ಪಿಸುವನು. ಹಾಗೆಯೇ ಗಂಡಿನ ಮನೆಯ ಚೆಮ್ಮಕಾರ ಗಂಡನ್ನು ಹೆಣ್ಣಿನ ಮನೆಯ ಚೆಮ್ಮಕಾರನಿಗೆ ಒಪ್ಪಿಸುವನು. ಕರ್ನಾಟಕದ ಮಲೆನಾಡು, ಕರಾವಳಿಯ ಹಸಲರಲ್ಲಿ ತಾಳಿ ಕಟ್ಟುವವನು ಹೆಣ್ಣಿನ ಕಡೆಯ ಕುಲದ ಗುರಿಕಾರ ಅಥವಾ ಅವಳ ಹಿರಿಯ ಪುರುಷ ಸಂಬಂಧಿ.
ಮುಕ್ಕುವನ್ ಎಂಬ ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ಬೆಸ್ತ ಸಮುದಾಯದಲ್ಲಿ ಹೆಣ್ಣು ಮಕ್ಕಳು ಋತುಮತಿಯಾಗುವ ಮೊದಲೇ ಪಂಡಲ್ ಕಿಜಿಕ್ಕಲ್ ಎಂಬ ಆಚರಣೆ ಮಾಡಿ ಆಗಲೇ ತಾಳಿ ಕಟ್ಟುತ್ತಾರೆ. ಆಗಲೇ ಗಂಡು ನಿಶ್ಚಯವಾಗಿದ್ದರೆ ಅವನ ಅಕ್ಕ ಕಟ್ಟುತ್ತಾಳೆ. ಇನ್ನೂ ಗಂಡು ನಿಶ್ಚಯವಾಗದಿದ್ದರೆ ಹೆಣ್ಣಿನ ಬೆಡಗು ಮದುವೆ ಮಾಡಿಕೊಳ್ಳುವ ಸಂಪ್ರದಾಯವಿರುವ ಬೆಡಗಿನ ಒಬ್ಬ ಹಿರಿಯ ಮಹಿಳೆ ತಾಳಿ ಕಟ್ಟುತ್ತಾಳೆ. ಮದುವೆಯ ದಿನವೂ ವರನ ಕಡೆಯ ಮದುವೆಯಾಗಿರುವ ಹಿರಿಯ ಮಹಿಳೆಯೊಬ್ಬಳು ಗಂಡನ್ನು ಮದುವೆಯಾಗಲು ಹೆಣ್ಣಿಗೆ ಸಮ್ಮತಿ ಇದೆಯೇ ಎಂದು ಎಲ್ಲರ ಮುಂದೆ ಕೇಳಿ, ಅವಳ ಸಮ್ಮತಿ ಪಡೆದು ಹೆಣ್ಣಿನ ಸೊಂಟಕ್ಕೆ ಒಂದು ಬಟ್ಟೆಯನ್ನು ಕಟ್ಟುತ್ತಾಳೆ.


ಗಂಡು ತಾಳಿಯನ್ನು ಕಟ್ಟುವ ಪದ್ಧತಿ ಇನ್ನೂ ರೂಢಿಗೆ ಬರದ ಸಮುದಾಯಗಳಲ್ಲಿ ಬಹಳಷ್ಟು ಮಟ್ಟಿಗೆ ಗಂಡಿನ ಅಕ್ಕನೇ ತಾಳಿಯನ್ನು ಕಟ್ಟುವುದು. ಮರವನ್ ಎಂಬುದು ತಮಿಳುನಾಡಿನ ದಕ್ಷಿಣ ಭಾಗದ ಕನ್ಯಾಕುಮಾರಿಯ ಬಳಿಯ ಪ್ರದೇಶದ ಅಧಿಪತಿಗಳಾಗಿದ್ದವರು. ಅವರ ಮದುವೆಯ ಸಂಪ್ರದಾಯದಲ್ಲಿ ಗಂಡಿನ ಅಕ್ಕನೇ ವಧುವಿನ ಮನೆಯಲ್ಲಿ ತಾಳಿಯನ್ನು ಕಟ್ಟುತ್ತಾಳೆ. ಆಗ ಹೆಣ್ಣಿನ ಕಡೆಯ ಮಹಿಳೆಯರು ದುಃಖವನ್ನು ವ್ಯಕ್ತಪಡಿಸುವಂತೆ ತೀಕ್ಷ್ಣವಾದ ದನಿಯಲ್ಲಿ ಕಿರುಚುತ್ತಾರೆ. ಇದನ್ನು ಕುಲವಿ ಇಡಲ್ ಎಂದು ಕರೆಯಲಾಗುತ್ತದೆ. ಅದೇ ಸಮುದಾಯದಲ್ಲಿರುವ ಮತ್ತೊಂದು ಪದ್ಧತಿ ಎಂದರೆ ಮದುವೆಯಾಗುವಾಗ ಗಂಡು ಮತ್ತು ಹೆಣ್ಣಿನ ಸುತ್ತಾ ಒಡೆದ ತೆಂಗಿನಕಾಯಿ ಮತ್ತು ತಂಬಿಟ್ಟನ್ನು ಮೂರು ಸುತ್ತು ಹಾಕಿಸಿ ಅದರ ಮೇಲೆ ಹೆಣ್ಣಿನಿಂದ ಉಗಿಸುತ್ತಾರೆ. ಆಗಲೂ ಹೆಣ್ಣಿನ ಕಡೆಯ ಮಹಿಳೆಯರು ಅರಚುತ್ತಾ ರೋದಿಸುತ್ತಾರೆ.
ಇವು ಗಂಡಿನ ಬದಲಾಗಿ ಬೇರೆಯವರು ತಾಳಿ ಕಟ್ಟುವ ಪದ್ಧತಿಯ ಕೆಲವು ಉದಾಹರಣೆಗಳು ಮಾತ್ರ.

ಇನ್ನೂ ಹಲವು ಸಮುದಾಯಗಳು ಈ ಪದ್ಧತಿಗಳನ್ನು ಅನುಸರಿಸುತ್ತವೆ. ಮದುವೆಯ ಹಿಂದಿನ ದಿನ ಹೆಣ್ಣಿನ ತಾಯಿ ಅಥವಾ ಅವರ ಕಡೆಯ ಹಿರಿಯ ಮುತ್ತೈದೆ ಒಂದು ತಾಳಿ ಕಟ್ಟುವುದು, ಮದುವೆಯ ದಿನ ಗಂಡು ಮತ್ತೊಂದು ತಾಳಿ ಕಟ್ಟುವುದೂ ಇದೆ.

ಈ ಎಲ್ಲ ಪದ್ಧತಿಗಳು ಗಂಡು ತಾಳಿ ಕಟ್ಟುವ ಪದ್ಧತಿ ಸಾರ್ವತ್ರಿಕವಾಗಿ ರೂಢಿಗೆ ಬರುವ ಮೊದಲ ರೂಪಗಳೆಂದು ಕಾಣುತ್ತವೆ. ಆ ಸಮುದಾಯಗಳ ಮೇಲೆ ವೈದಿಕ ಪ್ರಭಾವ ಇನ್ನೂ ಹೆಚ್ಚಿರದ ಸಮುದಾಯಗಳ ಆಚರಣೆಗಳು. ಬಹಳಷ್ಟು ಪ್ರಸಂಗಗಳಲ್ಲಿ ಬ್ರಾಹ್ಮಣರು ಮದುವೆ ನಡೆಸುವುದಕ್ಕೆ ಬದಲು ಆಯಾ ಸಮುದಾಯದ ಮುಖ್ಯಸ್ಥರೇ ಮದುವೆಯ ಆಚರಣೆಗಳನ್ನು ನಿರ್ದೇಶನ ಮಾಡುವ ಪದ್ಧತಿಯವು.

ಈ ಪದ್ಧತಿಗಳಲ್ಲಿ ಸಾಮಾನ್ಯವಾಗಿರುವ ಒಂದು ಸಾಮಾನ್ಯ ಅಂಶ ಗಂಡ ತಾಳಿ ಕಟ್ಟುವ ಪದ್ಧತಿ ಇಲ್ಲ. ಅದು ನಂತರ ಜಾರಿಗೆ ಬಂದ ಪದ್ಧತಿ. ಈಗ ನಮಗೆ ಗೊತ್ತಿರುವಂತೆ ಗಂಡು ತಾಳಿಯನ್ನು ಕಟ್ಟಿ ಇನ್ನು ಮುಂದೆ ಈಕೆ ತನ್ನ ಹೆಂಡತಿ ಎಂದು ಸಾರುವುದು ಮದುವೆಯ ಪ್ರಧಾನ ಅಂಶ. ಆದರೆ ಅವನನ್ನು ಬಿಟ್ಟು ಬೇರೆಯವರು ತಾಳಿ ಕಟ್ಟುವ ಪದ್ಧತಿಗೆ ಅರ್ಥವೇನು? ಅದರಲ್ಲಿಯೂ ಮದುವೆಗೆ ಮೊದಲೇ ಕಟ್ಟುವುದು ಈ ಬಹಳ ಪ್ರಸಂಗಗಳಲ್ಲಿ ಕಾಣುತ್ತೇವೆ. ನಿಶ್ಚತಾರ್ಥದ ಸಮಯದಲ್ಲಿ ಅಥವಾ ಇನ್ನೂ ಮೊದಲು- ಋತುಮತಿಯಾಗುವ ಮೊದಲೇ.
ಆಗಲೇ ತಾಳಿ ಕಟ್ಟುವುದಕ್ಕೆ ಅರ್ಥವೇನು ? 
ಈ ಒಗಟಿನ‌ ಅರ್ಥ ಬಿಡಿಸುವುದಕ್ಕೆ ಸೂಚನೆ ಸಿಗುವುದು ಗಂಡು ಕಟ್ಟುವ ತಾಳಿಗಳು. ಅದು ಒಂದು ತಾಳಿಯಲ್ಲ, ಎರಡು ತಾಳಿ. ಅವುಗಳಲ್ಲಿ ಒಂದನ್ನು ತಾಯಿ ಮನೆ ತಾಳಿ ಮತ್ತೊಂದನ್ನು ಗಂಡನ ಮನೆ ತಾಳಿ ಎಂದು ಕರೆಯಲಾಗುತ್ತದೆ. ಗಂಡನ ಮನೆ ತಾಳಿ ಎಲ್ಲರಿಗೂ ಅರ್ಥವಾಗುವಂತಹುದು. ತಾಯಿ ಮನೆ ತಾಳಿ ಎಂದರೇನು?

ಈ ಎರಡು ತಾಳಿಗಳ ಪದ್ಧತಿ ಮತ್ತು ಮೇಲಿನ ಹಲವು ಉದಾಹರಣೆಗಳು ಸೂಚಿಸುತ್ತಿರುವುದು ತಾಳಿ ಎಂಬುದು ಗಂಡ ಹೆಂಡತಿ ಸಂಬಂಧಕ್ಕೆ ಸಂಬಂಧವಿಲ್ಲ, ಆದರೆ ಮದುವೆಗೆ ಸಂಬಂಧವಿದೆ. ಇದೇನಿದು ಮತ್ತೊಂದು ಒಗಟು !
ಜಾನಪದ ಗೀತೆಗಳಲ್ಲಿ ತಾಳಿಯ ಉಲ್ಲೇಖ ಬಂದಾಗ ಬಹಳಷ್ಟು ಸಾರಿ ಗುಳದಾಳಿ ಎಂದೇ ಇರುತ್ತದೆ.

ಸರದಾರ ನಿನ್ನಿಂದ ಸರುವೆಲ್ಲ ಮರತೇನ
ಕೊರಳಾಗ ಇರುವ ಗುಳದಾಳಿ ಸಹಿತ ಸರುವೆಲ್ಲ ಮರತೇನ.

ಈ ಗುಳದಾಳಿ ಎಂದರೇನು? ಇದು ಕುಲ ತಾಳಿ ಎಂಬುದರ ತದ್ಭವ ರೂಪ.


ಈ ಪದ್ಧತಿಗಳ ಅರ್ಥ ಇಷ್ಟೇ ತಾಳಿ ಎಂಬುದು ಕುಲದ ಗುರುತು. ಬುಡಕಟ್ಟು ಮತ್ತು ಕುಲಗಳಲ್ಲಿ ಬುಡಕಟ್ಟು ಅಥವಾ ಕುಲ ಪ್ರಜ್ಞೆ ಬಹಳ ಬಲವಾದದ್ದು ಮತ್ತು ಗಡುಚಾದದ್ದು. ಬೇರೆ ಬುಡಕಟ್ಟುಗಳು ಅಥವಾ ಕುಲಗಳು ತಮ್ಮ ಕುಲದ ಯಾವುದೇ ಸದಸ್ಯ ಅಥವಾ ಸದಸ್ಯಳಿಗೆ ಏನೇ ಘಾಸಿ ಅವಮಾನ ಮಾಡಿದರೂ ಅದಕ್ಕೆ ಕುಲದ ಯಾರೇ ಆದರೂ ಪ್ರತಿಕ್ರಮ ಕೈಗೊಳ್ಳಬೇಕು. ಅವಶ್ಯವಾದರೆ ಇಡೀ ಕುಲವೇ ಕಾಳಗ ಹೂಡಬೇಕು.


ಇಂತಹ ಕುಲ ಪ್ರಜ್ಞೆಯ ಭಾಗವಾಗಿ ಪ್ರತಿಯೊಂದು ಕುಲವೂ ತನ್ನ ಸದಸ್ಯರನ್ನು ನಿರ್ದಿಷ್ಟ ಗುರುತುಗಳನ್ನು ರೂಪಿಸಿಕೊಂಡಿದ್ದವು. ಅವುಗಳಲ್ಲಿ ವಿವಿಧ ಬಣ್ಣಗಳ ಮಣಿಗಳು, ವಿವಿಧ ಪಕ್ಷಿಗಳ ಬಾಲದ ಪುಚ್ಚಗಳು, ಕುಲದ ಟೋಟೆಂ ಗುರುತಾದ ಪ್ರಾಣಿಯ ಚಿತ್ರ ಬಿಡಿಸಿದ ಪದಕದಂತಹ ವಸ್ತು ಅಥವಾ ಟೋಟೆಂ ಮರದ ಚಕ್ಕೆ ಇತ್ಯಾದಿ.


ನಮಗೆಲ್ಲ ಗೊತ್ತಿರುವಂತೆ ಕರಿಮಣಿ, ಕೆಂಪು ಹವಳ ತಾಳಿ ಸರದ ಭಾಗವಾಗಿದ್ದು ಹೀಗೆ. ಹಾಗೆಯೇ ಕೇರಳದ ಮಲಬಾರ್ ಮತ್ತು ಕೊಚ್ಚಿನ್‌ನಲ್ಲಿ ವಾಸವಿರುವ ತಂಡ ಪುಲಯನ್ ಎಂಬ ಸಮುದಾಯದಲ್ಲಿ ಶಂಖುವಿನ ತುಣುಕಿನಿಂದ ತಯಾರಿಸಿದ ತಾಳಿಯನ್ನು ಧರಿಸುತ್ತಾರೆ. ಅರಿಷಿಣದ ಕೊಂಬು ಕಟ್ಟಿದರೆ ಅದು ತಾಳಿಯಾಗುತ್ತದೆ ಎಂಬ ಪದ್ಧತಿ ಈಗಲೂ ಸಾರ್ವತ್ರಿಕವಾಗಿದೆ. ತಾಳಿಯ ಸರವನ್ನು ಬದಲಾಯಿಸಬೇಕಾದ ಪ್ರಸಂಗಗಳಲ್ಲಿ ಅಥವಾ ತಾಳಿಯನ್ನೂ ಅಡವಿಡಬೇಕಾದ ದುರ್ಭರ ಪ್ರಸಂಗಗಳಲ್ಲಿ ಅರಿಷಿಣದ ಕೊಂಬನ್ನು ಕಟ್ಟಿಕೊಳ್ಳುವುದು ಒಂದು ಪರ್ಯಾಯ. ಹಲವು ತಾಳಿಗಳು ಅರಿಷಿಣದ ಕೊಂಬನ್ನೇ ಹೋಲುವ ಚಿನ್ನದ  ಆಕಾರಗಳು. ಬೇರೆ ಬೇರೆ ಸಮುದಾಯಗಳು ಬೇರೆ ಬೇರೆ ಆಕಾರದ,ರೂಪದ ತಾಳಿಗಳನ್ನು ಧರಿಸುವುದು ಅವರು ಹಿಂದೆ ಧರಿಸುತ್ತಿದ್ದ ತಮ್ಮ ಕುಲ ಗುರುತುಗಳ ಚಿನ್ನದ ರೂಪಗಳೆಂದು ಎತ್ತಿ ತೋರುತ್ತದೆ.
ಹೀಗೆ ಪ್ರತಿ ಕುಲದ ಪ್ರತಿಯೊಬ್ಬ ಸದಸ್ಯಳಿಗೂ/ನಿಗೂ ತಾಳಿ ಎಂಬುದು ಅವಳ/ನ ಕುಲ ಸದಸ್ಯತ್ವದ ಗುರುತು. ಅದು ಕೇವಲ ತಮ್ಮ ಬುಡಕಟ್ಟು, ಕುಲದವರಿಗೆ ಮಾತ್ರವಲ್ಲ ಇತರ ಬುಡಕಟ್ಟು, ಕುಲದವರೂ ಇವರು ಯಾವ ಕುಲದವರು ಎಂದು ಗುರುತು ಹಿಡಿಯಲು ಸಹಾಯ ಮಾಡುವ ಸಾಧನ. ಇವರು ನಮಗೆ ಸಂಬಂಧ ಇರುವ ಕುಲ,ಇವರು ಶತ್ರು ಕುಲ ,ಇವರು ಬಹಳ ಬಲಶಾಲಿ ಕುಲದ ಸದಸ್ಯೆ, ಸದಸ್ಯ ಎಂಬುದರ ಮೇಲೆ ಅವರ ಜೊತೆ ಬೇರೆಯವರ ನಡವಳಿಕೆ ರೂಪುಗೊಳ್ಳುಲು ಅವಕಾಶ ನೀಡುತ್ತದೆ.


ಅಷ್ಟೇ ಅಲ್ಲ ಬುಡಕಟ್ಟು ಯಾ ಕುಲದ ಸಭೆಗಳಲ್ಲಿ ಭಾಗವಹಿಸುವ, ತಮ್ಮ ಅಭಿಪ್ರಾಯ ಹೇಳುವ ಹಕ್ಕಿನ ಗುರುತಿನ ಚೀಟಿ ಕೂಡಾ. ಹಾಗೆಯೇ ಕುಲದ ಭೂಮಿ, ಸಂಪತ್ತಿನಲ್ಲಿ ಭಾಗೀದಾರನೆಂಬ ಗುರುತು.


ಪ್ರತಿಯೊಬ್ಬ ಬಾಲಕ, ಬಾಲಕಿಯೂ ಒಂದು ನಿರ್ದಿಷ್ಟವಾದ ದೊಡ್ಡವರಾದರೆಂದು ಪರಿಗಣಿಸುವ ವಯಸ್ಸಿನಲ್ಲಿ ಅವರುಗಳನ್ನು ಬುಡಕಟ್ಟು ಯಾ ಕುಲದ ಪೂರ್ಣ ಸದಸ್ಯರುಗಳನ್ನಾಗಿ ಮಾಡಿಕೊಳ್ಳುವ ಕ್ರಿಯೆಯನ್ನು ಈ ಸಮುದಾಯಗಳು ಅನುಸರಿಸುತ್ತಿದ್ದವು. ಅವು ಕುಲದ ಹಲವು ಆಚರಣೆಗಳನ್ನು ಮೊದಲ ಬಾರಿಗೆ ಕಲಿಸುವುದರೊಂದಿಗೆ ಕುಲದ ಗುರುತನ್ನು ನೀಡುವ ಪ್ರಕ್ರಿಯೆಗಳಾಗಿದ್ದವು. ಈಗಲೂ ಅಂತಹ ಆಚರಣೆಗಳ ಗುರುತುಗಳು ಬಹಳ ಸಮುದಾಯಗಳಲ್ಲಿ ಪಳೆಯುಳಿಕೆಗಳಾಗಿವೆ. ಕಿವಿ ಚುಚ್ಚುವುದು, ಮನೆಯ ಹಿರಿ ಮಗನಿಗೆ ಜೋಗಿ ದೀಕ್ಷೆ ನೀಡಿ ಕಿವಿಗೆ ಕುಂಡಲಗಳನ್ನು ಹಾಕುವುದು ದಾಸರಲ್ಲಿ ನಾಮಗಳ ಜೊತೆಗೆ ಭಿಕ್ಷೆ ಬೇಡಲು ಕಳಿಸುವುದು ಇತ್ಯಾದಿ. ಜನಿವಾರವೂ ಅಂತಹುದೊಂದು ಗುರುತು ಎಂದು ಹೇಳಲಾಗಿದೆ.

ಬಾಲಕಿಯರು ಮೈ ನೆರೆದಾಗ ಮಾಡುವ ಹಲವು ದಿನಗಳ ಕಾರ್ಯಕ್ರಮದಲ್ಲಿ ಕುಲದ ಪದ್ಧತಿಗಳನ್ನು, ಅದರಂತೆ ಸೀರೆ ಮತ್ತಿತರ ಉಡುಪು ಉಡುವುದನ್ನು ಕಲಿಸುವುದರ ಜೊತೆಗೆ ಕುಲದ ಗುರುತುನ್ನು ಅವರಿಗೆ ನೀಡುವ, ತಾಳಿ ಕಟ್ಟುವ ಮೂಲಕ ಮಾಡಲಾಗುತ್ತಿತ್ತು ಎಂಬುದಕ್ಕೆ ಹಲವು ಉದಾಹರಣೆಗಳಿವೆ.
ಆದರೆ ತಾಯ ಮನೆಯಲ್ಲಿಯೇ ಜೀವನ ಪೂರ್ತಿ ಕಳೆಯುವ ಸಹಜ ಸಂಬಂಧದ ಅಮ್ಮ ಕೇಂದ್ರಿತ ಕುಲ ಇರುವಾಗ ಹಿಂದೆಯೇ ವಿವರಿಸಿರುವಂತೆ  ಹೆಣ್ಣೊಬ್ಬಳಿಗೆ ಮತ್ತು ಅವಳ ಮಕ್ಕಳಿಗೆ ಅಲ್ಲಿಯೇ ಎಲ್ಲ ಬಾಧ್ಯತೆಗಳು ಮತ್ತು ಆಸ್ತಿಯ ಪಾಲು. ಆದರೆ ಪುರುಷಾಧಿಪತ್ಯದ ಸಮಾಜದಲ್ಲಿ ಗಂಡನ ಮನೆಗೆ ಹೋಗಿ ಜೀವಿಸುವ ಪದ್ಧತಿ ಬಂದ ಮೇಲೆ ಅವಳ ಸದಸ್ಯತ್ವ ಎಲ್ಲಿ? ಅವಳ ಮತ್ತು ಅವಳ ಮಕ್ಕಳ ಬದುಕಿನ ಭದ್ರತೆ ಮತ್ತು ಅವಳ ಭಾದ್ಯತೆ, ಅವಳ ಮಕ್ಕಳ ವಾರಸುದಾರಿಕೆಯ ಪ್ರಶ್ನೆ ಹೊಸದಾಗಿ ಉದ್ಭವಿಸಿದವು. ಅವಳ ಮಕ್ಕಳು ಅವಳ ತಾಯ ಕುಲಕ್ಕೆ ಸೇರಿದವಲ್ಲ ಅವಳ ಗಂಡನ ಕುಲಕ್ಕೆ ಸೇರುತ್ತವೆ. ಆ ಕುಲದ ಆಸ್ತಿಯ ಪಾಲು ಪಡೆಯುತ್ತವೆ ಎಂಬುದನ್ನು ಖಾತರಿ ಮಾಡಬೇಕಾಯಿತು. ಅದಕ್ಕಾಗಿ ಮದುವೆಗೆ ಮೊದಲೇ, ಹೆಣ್ಣು ನಿಶ್ಚಯವಾದ ಕೂಡಲೇ ಆಕೆಗೆ ಗಂಡಿನ ಮನೆಯ ಕುಲದ ಗುರುತಾದ ತಾಳಿಯನ್ನು ಕಟ್ಟಿ ಆಕೆಯನ್ನು ಗಂಡನ ಕುಲದ ಸದಸ್ಯಳನ್ನಾಗಿ ಮಾಡಿಕೊಳ್ಳುವುದು ಅವಶ್ಯಕತೆಯಾಯಿತು. ಹೀಗೆ ಗಂಡಿನ ಕುಲದ ಹಿರಿಯ ಮುತ್ತೈದೆ ಅಥವಾ ಗಂಡಿನ ಅಕ್ಕ ಅಥವಾ ತಾಯಿ ಮದುವೆಗೆ ಮೊದಲೇ ತಾಳಿಯನ್ನು ಕಟ್ಟುವ ಪದ್ಧತಿ ಜಾರಿಗೆ ಬಂತು.

ಈ ಪದ್ಧತಿಯ ಜೊತೆ ಜೊತೆಗೇ ಹೆಣ್ಣು ತನ್ನ ಕುಲದ ಎಲ್ಲ ಹಕ್ಕುಗಳನ್ನೂ ಕಳೆದುಕೊಳ್ಳುವ ಆಚರಣೆಗಳೂ ಇವೆ. ಕುಡುಬಿಯರಂತಹ ಕೆಲವು ಸಮುದಾಯಗಳಲ್ಲಿ ಮದುವೆಯಾದ ಹೆಣ್ಣು ಕುಲದ ಸಂಬಂಧ ಕಡಿದುಕೊಳ್ಳುವ ವಿಶೇಷ ಆಚರಣೆಗಳೇ ಇವೆ. ಮತ್ತೆ ಕೆಲವು ಸಮುದಾಯಗಳಲ್ಲಿ ಮೇಲೆ ವಿವರಿಸಿದಂತೆ ಮದುವೆ ಸಮಾರಂಭದ ಒಂದು ಭಾಗವಾಗಿವೆ. ಆಗ ಹೆಣ್ಣಿನ ಕುಲದ ಹೆಂಗಸರು ಶೋಕ ವ್ಯಕ್ತಪಡಿಸುವುದನ್ನು ಮೇಲೆ ನೋಡಿದ್ದೀರಿ. ಮತ್ತೆ ಹಲವು ಸಮುದಾಯಗಳಲ್ಲಿ ಈ ಪದ್ಧತಿ ಮದುವೆಯ ಸಮಾರಂಭದ ಆಚರಣೆಗಳಲ್ಲಿ ಗುರುತು ಸಿಗಲಾರದಂತೆ ಹುದುಗಿ ಹೋಗಿವೆ.
ಹೀಗೆ ತಾಳಿ ಕಟ್ಟುವುದು ಗಂಡಿನ ಅಧಿಕಾರಕ್ಕೆ ಕೊರಳೊಡ್ಡುವ ಆಚರಣೆಯಲ್ಲ. ಅವನ ಆಯುಷ್ಯ, ಕ್ಷೇಮಕ್ಕೆ ಸಂಬಂಧ ಪಟ್ಟದೂ ಅಲ್ಲ. ಅದು ಗಂಡನ ಕುಲದವಳಾಗಿ ಗುರುತಿಸಲ್ಪಡುವ ಆಚರಣೆ ಮಾತ್ರ.

ಆದರೆ ಪುರುಷಾಧಿಪತ್ಯದ ಸಮಾಜದಲ್ಲಿ ಹೆಣ್ಣಿಗೆ ಯಾವ ಗಂಡನ ಮನೆಯಲ್ಲೂ ಪೂರ್ಣ ಹಕ್ಕುಗಳ ಸದಸ್ಯತ್ವ ದೊರೆಯದ ಕಾರಣ LPR ಎಂದು ಗುರುತಿಸುವ  permanant resident card ಎಂಬ ಒಂದು ಗ್ರೀನ್ ಕಾರ್ಡ್ ಮಾತ್ರ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

September 24, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: