ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ನಾಗರಾಜ್ ಅಂಕಣ- ಹರಾಜ್ ! ಬಿಳಿಯ ಸುಂದರಿಯರ, ಗಟ್ಟಿ ರೆಟ್ಟೆಯ ಯುವಕರ ಹರಾಜ್ !

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

21

ದುಂಡನೆಯ ತಿರುಗು ವೇದಿಕೆಗಳು. ಸುತ್ತಲೂ ತಿರುಗುತ್ತಿವೆ. ವೇದಿಕೆಗಳ ಮೇಲೆ ಬೆಳ್ಳ‌ನೆಯ ಬೆತ್ತಲೆ ಯುವಕರು, ಯುವತಿಯರನ್ನು ನಿಲ್ಲಿಸಲಾಗಿದೆ. ಅವರ ದೇಹಸಿರಿಯನ್ನು ಎಲ್ಲ ಕೋನಗಳಿಂದ ತೋರಿಸುತ್ತಿದೆ.
ಈ ವೇದಿಕೆಗಳ ಮುಂದೆ ಹರಾಜುಗಾರರು ಕೂಗುತ್ತಿದ್ದಾರೆ. ಇವಳ ಮೊಲೆಯ ಸೊಬಗು ನೋಡಿ, ದುಂಡನೆಯ ನಿತಂಬಗಳ ಸೌಂದರ್ಯ ನೋಡಿ ! ಬನ್ನಿ ಕೊಳ್ಳಿ !! ಬೇಕಾದರೆ ಮುಟ್ಟಿ ನೋಡಿ , ಹಿಸುಕಿ ನೋಡಿ !  ಇನ್ನೂ ಹದಿನಾರರ ಯುವತಿ. ಬನ್ನಿ ಹಲ್ಲು ಎಣಿಸಿ ನೋಡಿ ಖಚಿತ ಮಾಡಿಕೊಂಡು ಕೊಂಡುಕೊಳ್ಳಿ .
ಮತ್ತೊಂದು ವೇದಿಕೆಯ ಮುಂದೆ  ಮತ್ತೊಬ್ಬ ಕಿರುಚುತ್ತಿದ್ದಾನೆ : ಇವನ ರೆಟ್ಟೆಯ ಗಟ್ಟಿತನ ನೋಡಿ . ಮೈಯ ಕಸುವು ನೋಡಿ ಎಂತಹಾ ಕಷ್ಟದ ಕೆಲಸವನ್ನೂ ಮಾಡಬಲ್ಲ! ಬನ್ನಿ ಕೊಳ್ಳಿ.

ಇದೊಂದು ರೋಮ್ ಸಾಮ್ರಾಜ್ಯದ ಗುಲಾಮರ ಹರಾಜು ಮಾರುಕಟ್ಟೆ. ಕೊಳ್ಳಲೆಂದು ಇಟಲಿಯ ಉದ್ದಗಲದ ದ್ರಾಕ್ಷಿ ತೋಟಗಳ‌ ಮಾಲೀಕರು, ತಾಮ್ರ, ಬೆಳ್ಳಿ ಗಣಿಗಳ ಮಾಲೀಕರು, ನಗರಗಳ ಶ್ರೀಮಂತ ಅಧಿಕಾರಿಗಳು, ವ್ಯಾಪಾರಿಗಳು, ಹಡಗುಗಳ ಮಾಲೀಕರು ಮೊದಲಾದವರೆಲ್ಲಾ ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲಿ ನೋಡಿದರೂ ಗುಜು ಗುಜು ಗುಂಪಲು. ಕೂಗಾಟಗಳು.

ಇಂತಹ ನೂರಾರು ಹರಾಜು‌ ಮಾರುಕಟ್ಟೆಗಳಿದ್ದವು ರೋಮನ್ ಸಾಮ್ರಾಜ್ಯದಲ್ಲಿ. ರೋಮ್ ಇರುವ ಇಟಲಿ ಪ್ರದೇಶದಲ್ಲಿ ಮಾತ್ರವೇ ಅಲ್ಲ, ಅಂದು ಅವರ ಸಾಮ್ರಾಜ್ಯಕ್ಕೆ ಸೇರಿದ ಈಜಿಪ್ಟ್, ಅಲೆಕ್ಸಾಂಡ್ರಿಯ, ಮೆಸಪೊಟೋಮಿಯಾ, ಬಾಬಿಲೋನಿಯಾ, ಪರ್ಷಿಯ ಮೊದಲಾದ‌ ಪ್ರದೇಶಗಳಲ್ಲಿ ಕೂಡಾ. ಪ್ರತಿ ವರ್ಷ ಲಕ್ಷಾಂತರ ಗುಲಾಮರ ಬಿಕರಿಯಾಗುತ್ತಿದ್ದವು ಇಂತಹ ಮಾರುಕಟ್ಟೆಗಳಲ್ಲಿ. ಈ ಗುಲಾಮರು ಅಮೇರಿಕಾ ಖಂಡಗಳಲ್ಲಿದ್ದಂತೆ ಆಫ್ರಿಕಾ ಖಂಡದ  ಕರಿಯ ನೀಗ್ರೋ ಜನಾಂಗದವರಲ್ಲ. ಬಹು ಮಟ್ಟಿಗೆ ಇಂದಿನ ಜರ್ಮನಿ, ಫ್ರಾನ್ಸ್, ಪೋಲೆಂಡ್ ರುಮಾನಿಯಾ ಮೊದಲಾದ ಪ್ರದೇಶಗಳ ‌ಬಿಳಿಯರೇ. ಪಶ್ಚಿಮ ಏಷ್ಯಾದ ಇರಾಕ್, ಸಿರಿಯಾ,ಇರಾನ್,ತುರ್ಕಿ‌ ಮೊದಲಾದ ದೇಶಗಳವರು ಕೆಲವರು.

ಇವರು ಗುಲಾಮರಾಗಿ ಇಲ್ಲಿ ಹರಾಜುಗೊಳ್ಳಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅಂದು ರೋಮಿನ ಬಲವಾದ ಸೈನ್ಯ  ಸುತ್ತ ಮುತ್ತಲಿನ ಯುರೋಪಿನ ಪ್ರದೇಶಗಳಲ್ಲಿ ಇನ್ನೂ ಬುಡಕಟ್ಟು ಜೀವನ ನಡೆಸುತ್ತಿದ್ದವರ  ಮೇಲೆ ಧಾಳಿ ಮಾಡಿ ಅವರ ಪ್ರದೇಶಗಳನ್ನು ಆಕ್ರಮಿಸುತ್ತಿತ್ತು ಮಾತ್ರವಲ್ಲ ಅಲ್ಲಿನ‌ ಜನರನ್ನು ಸೆರೆ ಹಿಡಿದು ತಂದು ಗುಲಾಮರನ್ನಾಗಿ ಮಾಡಿ ಮಾರಾಟಕ್ಕಿಡುತ್ತಿತ್ತು. ಹಾಗೆಯೇ ಈಜಿಪ್ಟ್ ಮೊದಲಾದ ದೇಶಗಳ ಮೇಲೆ ದಂಡೆತ್ತಿ ಹೋದಾಗಲೂ ಅಲ್ಲಿಯ ಜನ ಸಾಮಾನ್ಯರನ್ನು ಗುಲಾಮರನ್ನಾಗಿ ಮಾರಲು ಹಿಡಿತರುವುದು ಸಾಮಾನ್ಯವಾಗಿತ್ತು. ರೋಮನ್ ಸೈನ್ಯ ಆಕ್ರಮಣಕ್ಕೆ ಹೊರಟಿತೆಂದರೆ ಅದರ ಹಿಂದೆ  ಗುಲಾಮರ ವ್ಯಾಪಾರಿಗಳ ದಂಡೇ ಹಿಂಬಾಲಿಸುತ್ತಿತ್ತು.

ಸೈನ್ಯ ಆಕ್ರಮಣದಲ್ಲಿ ವಿಜಯಿಯಾದ ಕೂಡಲೇ ಹಿಡಿದ ಸಾವಿರಾರು ಜನ ಗಂಡು, ಹೆಣ್ಣುಗಳನ್ನು ಸೇನಾಧಿಪತಿಗಳಿಗೆ ಹಣ ತೆತ್ತು ಈ ಸಗಟು‌ ವ್ಯಾಪಾರಿಗಳು ಕೊಳ್ಳುತ್ತಿದ್ದರು. ಅವರನ್ನು ಗುಲಾಮರ ಮಾರುಕಟ್ಟೆಗಳ ಚಿಲ್ಲರೆ ವ್ಯಾಪಾರಿಗಳಿಗೆ ಮಾರುತ್ತಿದ್ದರು. ಪ್ರಸಿದ್ಧ ರೋಮನ್ ಚಕ್ರವರ್ತಿ ಜ್ಯೂಲಿಯಸ್ ಸೀಜರ್ ಇಂದಿನ‌ ಜರ್ಮನಿ , ಫ್ರಾನ್ಸ್ ,ಸ್ವಿಟ್ಜರ್ಲೆಂಡ್‌‌, ನೆದರ್‌ಲ್ಯಾಂಡ್ಸ್ ಮೊದಲಾದ ದೇಶಗಳನ್ನೊಳಂಡ ಗಾಲ್ ಪ್ರದೇಶದ ಒಂದು ಭಾಗವನ್ನು ಆಕ್ರಮಿಸಿದಾಗ ಅಲ್ಲಿ ವಾಸಿಸುತ್ತಿದ್ದ ಎಲ್ಲ 53,000 ಜನರನ್ನೂ ಗುಲಾಮರನ್ನಾಗಿ ಅಲ್ಲಿಯೇ ಈ ವರ್ತಕರಿಗೆ ಮಾರಿ ತನ್ನ ಸೈನಿಕರನ್ನು ನಿಯೋಜಿಸಿ ಅವರನ್ನು ರೋಮಿಗೆ ಎಳೆದು ತರಿಸಿದನಂತೆ. ಕಾರ್ಥೇಜ್ ಎನ್ನುವ ದೊಡ್ಡ ನಗರವನ್ನು ಆಕ್ರಮಿಸಿದಾಗ ಅದನ್ನು‌ಲೂಟಿ‌ ಮಾಡಿ ಅಲ್ಲಿಯ ಪ್ರತಿಷ್ಠಿತರನ್ನೂ ಸೇರಿಸಿ 50,000 ಜನರನ್ನು ಗುಲಾಮರನ್ನಾಗಿ ಹಿಡಿತರಲಾಯಿತು. ಮತ್ತೆ ಇನ್ನೊಂದು ಆಕ್ರಮಣದಲ್ಲಿಯೇ 1.50,000 ಜನರನ್ನು ಗುಲಾಮರನ್ನಾಗಿ ಮಾರಲಾಯಿತು. ಡೆಲೋಸ್ ಎಂಬ ದ್ವೀಪದಲ್ಲಿದ್ದ ಗುಲಾಮರ ಮಾರುಕಟ್ಟೆಯಲ್ಲಿ ದಿನವೊಂದಕ್ಕೆ 10,000 ಗುಲಾಮರನ್ನು ಮಾರಲಾಗುತ್ತಿತ್ತು ಎಂದರೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗುಲಾಮರ ಮೇಲೆ ಅಲ್ಲಿನ‌ ಸಂಪತ್ತು ಆಧಾರಪಟ್ಟಿತ್ತು ಎಂಬುದನ್ನು ಊಹಿಸಿಕೊಳ್ಳಿ.

ರೋಮನ್ ಶ್ರೀಮಂತರ,ಚಕ್ರವರ್ತಿ, ಮನ್ನೆಯರ ವೈಭವದ ಜೀವನಕ್ಕೆ ಇಡೀ ರೋಮ್ ಚಕ್ರಾಧಿಪತ್ಯದ ಆರ್ಥಿಕ ಸುಸ್ಥಿತಿಗೆ ಇದೊಂದು ಪ್ರಮುಖ ಆಧಾರವಾಗಿತ್ತು. ರೋಮ್ ಸುತ್ತಲಿನ ಇಟಲಿ ಪ್ರದೇಶದಲ್ಲಿ ಶೇ30-40 ರವರೆಗೆ ಗುಲಾಮರಿದ್ದರೆಂದು ಒಂದು ಅಂದಾಜಿದೆ.

ಈ ಗುಲಾಮರನ್ನು ಅತ್ಯಂತ ಅಪಾಯಕಾರಿಯಾದ ಮತ್ತು ಕಠಿಣವಾದ ಕೆಲಸಗಳಲ್ಲಿ ದುಡಿಸಲಾಗುತ್ತಿತ್ರು. ಗಣಿ ಕೆಲಸ ಅಂತಹದೊಂದು. ಅಮೃತಶಿಲೆಯ ಗಣಿಗಳು, ಬೆಳ್ಳಿಯ ಗಣಿಗಳು ಸಾವಿನಂಚಿನಲ್ಲಿಯೇ ಅತ್ಯಂತ ಶ್ರಮದಾಯಕ ಕೆಲಸಗಳಾಗಿದ್ದವು. ಭಾರವಾದ ಕಲ್ಲುಗಳ ದೊಡ್ಡ ತುಂಡುಗಳನ್ನು ಕೆಳಗಿನಿಂದ ಮೇಲಕ್ಕೆ, ದೂರ ದೂರಕ್ಕೆ ಒಯ್ಯುವುದು ಬಹಳ ಅಪಾಯಕಾರಿಯಾಗಿತ್ತು.  ಕಾಡೇ‌‌ ಪ್ರಧಾನವಾಗಿದ್ದ ಆ ದಿನಗಳಲ್ಲಿ ಬೆಟ್ಟ ಗುಡ್ಡಗಳ‌ ನಡುವೆ ಹೆದ್ದಾರಿಗಳ ನಿರ್ಮಾಣ, ನೀರಾವರಿ ಕಾಲುವೆಗಳು,ಅಣೆಕಟ್ಟುಗಳು ಇವುಗಳ ನಿರ್ಮಾಣ, ಬೃಹತ್ ಕಟ್ಟಡಗಳ ನಿರ್ಮಾಣಗಳಲ್ಲಿ‌, ಕೃಷಿಯಲ್ಲಿ, ದ್ರಾಕ್ಷಿ ತೋಟಗಳು, ಅದರಿಂದ ವೈನ್ ತಯಾರಿಕೆಯಲ್ಲಿ ಗುಲಾಮರನ್ನು ಬಳಸಿಕೊಳ್ಳಲಾಗುತ್ತಿತ್ತು. ಅಲ್ಲಿಯ ಕೃಷಿ ಎಂದರೆ ಗುಲಾಮರಿಂದ ಕೃಷಿ ಎಂಬಂತಾಗಿತ್ತು.

ಅಕ್ಷರ ಬಲ್ಲವರೂ ಗುಲಾಮರಾಗಿದ್ದರು. ರೋಮಿನ ಸರ್ಕಾರಿ ಅಧಿಕಾರಿಗಳ ಸಹಾಯಕರಾಗಿ, ಸಂಗೀತ, ನೃತ್ಯಗಳಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿತ್ತು. ದೊಡ್ಡ  ಪ್ರತಿಷ್ಠಿತರ ಬಂಗಲೆಗಳಲ್ಲಿ ನೂರಕ್ಕೂ ಹೆಚ್ಚು  ಗುಲಾಮರು ಕೆಲಸ ಮಾಡುತ್ತಿದ್ದರು.

ಗುಲಾಮರುಗಳನ್ನು ಹಗಲಿರುಳೂ ದುಡಿಸಿಕೊಳ್ಳಲಾಗುತ್ತಿತ್ತು. ಅತಿ ದುಡಿಮೆಯಿಂದ ಸುಸ್ತಾಗಿ ಕೆಳಗೆ ಬಿದ್ದರೆ ಉಸ್ತುವಾರಿ ಮಾಡುತ್ತಿದ್ದವರ ಚಾಟಿಯೇಟು ಅವರ ಬೆತ್ತಲೆ ಮೈಮೇಲೆ ಬರೆ ಎಳೆಯುತ್ತಿತ್ತು.  ಕೆಲಸ ಮಾಡುವ ಸ್ಥಳಗಳಲ್ಲಿ ಅವರನ್ನು ದಪ್ಪ ಸರಪಳಿಗಳಿಂದ ಕಟ್ಟಿ ಹಾಕಲಾಗುತ್ತಿತ್ತು. ಅವರಿಗೆ ಅತ್ಯಂತ ಕನಿಷ್ಟ  ಮಟ್ಟದ ಆಹಾರ ಬಿಟ್ಟರೆ ಬೇರೇನೂ ಸಿಗುತ್ತಿರಲಿಲ್ಲ. ಗುಲಾಮರಿಗೆ ಸ್ವಂತದ್ದು ಎನ್ನುವುದೇನು ಇರಲಿಲ್ಲ. ಅಕಸ್ಮಾತ್ ಅ‌ವರೇನಾದರು ಸಂಪಾದಿಸಿದರೆ ಅದೆಲ್ಲಾ ಅವರ ಮಾಲೀಕನಿಗೆ ಸೇರುತ್ತಿತ್ತು. ಹೆಣ್ಣು ಗುಲಾಮರು ದುಡಿಮೆಯ ಜೊತೆಗೆ ಲೈಂಗಿಕ‌ ದೌರ್ಜನ್ಯಗಳಿಗೆ ಈಡಾಗುತ್ತಿದ್ದರು.ಅವರನ್ನು  ವೇಶ್ಯಾವಾಟಿಕೆಗಳಲ್ಲಿ‌ ದುಡಿಸಿಕೊಳ್ಳಲಾಗುತ್ತಿತ್ತು.

ಇಂತಹ ದುರ್ಭರ ಪರಿಸ್ಥಿತಿಯಲ್ಲಿ ಗುಲಾಮರುಗಳು ಓಡಿ ಯತ್ನ‌ಮಾಡಿದರೆ ಮತ್ತೆ ಅಟ್ಟಿಸಿಕೊಂಡು ಹೋಗಿ ಅವರನ್ನು ಸೆರೆ ಹಿಡಿದು ತರಲಾಗುತ್ತಿತ್ತು. ಅವರ ಹಣೆಯ ಮೇಲೆ ಕಾದ ಕಬ್ಬಿಣದಿಂದ ಬರೆ ಎಳೆದು ಅವರು ಗುಲಾಮರು ಎಂಬುದನ್ನು ಹಾಗೂ  ಮಾಲೀಕರ ಹೆಸರನ್ನು ಕೆತ್ತಲಾಗುತ್ತಿತ್ತು. ಮಾನವ ಸಮಾಜದಲ್ಲಿ ಇಂತಹುದೊಂದು ಅವಸ್ಥೆ ಇತ್ತು ಎಂಬುದನ್ನು‌ ಕೇಳುವುದೇ ಸಂಕಟಕರ ಎನ್ನುವ ಸ್ಥಿತಿ ಅದು. ಇಂತಹದೊಂದು ಹೀನ ಮಟ್ಟದ ಗುಲಾಮಗಿರಿಯ ವ್ಯವಸ್ಥೆ ಕೇವಲ ರೋಮನ್  ಸಾಮ್ರಾಜ್ಯದಲ್ಲಿ ಮಾತ್ರವಲ್ಲ ಈಜಿಪ್ಟ್, ಮೆಸಪೊಟೋಮಿಯಾ, ಗ್ರೀಸ್, ಮ್ಯಾಸೆಡೋನಿಯಾ, ಚೀನಾಗಳಲ್ಲಿಯೂ ಸ್ಥಾಪಿತವಾಗಿತ್ತು.

ಭಾರತದಲ್ಲಿ ದಾಸ, ದಾಸಿಯರು ಜೀತಗಾರರು:
ಗಜಮುಖ ಗಣಪತಿ ಇಲಿಯ ಮೇಲೆ ಏರಿ ಮಾಡಿದ ಸವಾರಿ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಈ ಅಸಹ್ಯಕರ, ಸಂಕಟಕರ ಸ್ಥಿತಿಯವರೆಗೆ ತಲುಪಿತ್ತು.

ಭಾರತದಲ್ಲಿ ಇಂತಹ ಗುಲಾಮರಿದ್ದರೆ ? ಗುಲಾಮಗಿರಿ ವ್ಯವಸ್ಥೆ , ಗುಲಾಮರ ಮಾರುಕಟ್ಟೆ ಇತ್ತೆ ? ಬೇರೆ ಬುಡಕಟ್ಟುಗಳ ಮೇಲೆ ಧಾಳಿ ಮಾಡಿದಾಗ ಹಿಡಿದುಕೊಂಡು ಬರುತ್ತಿದ್ದ ಜನರು ಏನಾಗುತ್ತಿದ್ದರು ?
ಖಚಿತವಾಗಿ ಹೇಳಬಹುದು ಭಾರತದಲ್ಲಿ ಈ ರೀತಿಯ ಗುಲಾಮರ ಹರಾಜು ಕಟ್ಟೆಗಳು, ಲಕ್ಷಾಂತರ ಜನರನ್ನು ಹಿಡಿದು ಗುಲಾಮರನ್ನಾಗಿ ಮಾಡುವುದು ಇಂತಹ ಗುಲಾಮಗಿರಿ ಇರಲಿಲ್ಲ. ಅಂದರೆ ಗುಲಾಮಗಿರಿಯೇ ಇರಲಿಲ್ಲವೇ  ಎಂದರೆ, ಇತ್ತು ಅದು ಎರಡು ರೀತಿಯ ಸ್ವರೂಪವನ್ನು ಪಡೆದಿತ್ತು. ಒಂದು  ದಾಸ,ದಾಸಿಯರು,ಜೀತಗಾರರ ಸೇವೆ ಮತ್ತೊಂದು ಜಾತಿ ವ್ಯವಸ್ಥೆ.

ದಾಸ,ದಾಸಿಯರ ಸೇವೆಯ ಬಗ್ಗೆ ಬೃಹತ್ ಶಿಲಾಯುಗದ ಸಮಾಧಿಗಳಲ್ಲಿ ಕಾಣುವ ಅಸಮಾನತೆಯ ಕುರುಹುಗಳಲ್ಲಿ ಮತ್ತು ಬುಡಕಟ್ಟುಗಳ ಐತಿಹ್ಯಗಳಲ್ಲಿ ಕೆಲವು ಸೂಚನೆಗಳನ್ನು ಕಾಣಬಹುದು. ಈ ಬಗ್ಗೆ ವಿಷದವಾದ ಸಂಶೋಧನೆ ನಡೆಯಬೇಕಾಗಿದೆ.

ಆದರೆ ಭಾರತದಲ್ಲಿ ಕಂಡ ಮೊದಲ ನಾಗರೀಕತೆಯಾದ ಐದು ಸಾವಿರ ವರ್ಷಗಳ ಹಿಂದಣ ಸಿಂಧೂ ನಾಗರೀಕತೆಯಲ್ಲಿ ಇದರ ಸ್ಪಷ್ಟ ಗುರುತುಗಳಿವೆ.  ಹರಪ್ಪಾ, ಮೊಹೆಂಜದಾರೋಗಳು ಈ ನಾಗರೀಕತೆಗೆ‌ ಸೇರಿದ ಅತಿ ದೊಡ್ಡ ನಗರಗಳು. ಈ ನಗರಗಳ ಅವಶೇಶಗಳಲ್ಲಿ ಆಢ್ಯ ಶ್ರೀಮಂತರ ದೊಡ್ಡ ಮನೆಗಳ ಜೊತೆಗೆ ಸೇವಕರಿಗೆ ಸಣ್ಣ ಕೊಠಡಿಗಳು, ಧಾನ್ಯಗಳನ್ನು ಕುಟ್ಟುವ ಬಂಡೆಗಲ್ಲುಗಳ ಮತ್ತು ದೊಡ್ಡ ಉಗ್ರಾಣಗಳ ಬಳಿ ಅವುಗಳಲ್ಲಿ ದುಡಿಸಿಕೊಳ್ಳುತ್ತಿದ್ದ ಗುಲಾಮರ ಸಾಲು ಮನೆಗಳು  ಇವೆ.‌ ಇಷ್ಟೇ ಅಲ್ಲದೇ ಈ ನಾಗರೀಕತೆಯ ಪ್ರದೇಶಗಳಿಂದ ಮೆಸಪೋಟೋಮಿಯಾ ಪ್ರದೇಶಕ್ಕೆ ಗುಲಾಮರನ್ನು ರಫ್ತು ಮಾಡುತ್ತಿದ್ದರು. ಕ್ರಿಸ್ತ ಪೂರ್ವ  2300-2000ರ ಸಮಯದ ಮೆಸಪೋಟೋಮಿಯಾದ ದಾಖಲೆಗಳು ಸಿಂಧೂ ನಾಗರಿಕತೆಯ ಪ್ರದೇಶಗಳಿಂದ ದಂತ,ಚಿನ್ನ,ಗಟ್ಟಿ ಮರಗಳು ಮೊದಲಾದವುಗಳ ಜೊತೆಗೆ   ಗುಲಾಮರನ್ನು ಕೊಳ್ಳುತ್ತಿದ್ದುದರ ಕುರಿತು ಬರೆದಿವೆ. ಇಂತಹ ವ್ಯಾಪಾರಗಳನ್ನು ನಡೆಸಲು ಅಲ್ಲಿ ಸಿಂಧೂ ಜನರ ಒಂದು ವಸತಿಯೇ ಇದ್ದಿತು.

ಸಿಂಧೂ ಪ್ರದೇಶದಿಂದ ಗುಲಾಮರನ್ನು ಒಯ್ದು ಮಾರುವುದೆಂದರೆ ಸಿಂಧೂ ಪ್ರದೇಶದಲ್ಲಿಯೇ ಗಣನೀಯ ಸಂಖ್ಯೆಯಲ್ಲಿ ಜನರನ್ನು ಗುಲಾಮರನ್ನಾಗಿಸಿದ್ದರು. ಅವರಲ್ಲಿ ಹಲವರನ್ನು ಬೇರೆ ಪ್ರದೇಶಗಳಿಗೆ ಒಯ್ದು ಗುಲಾಮರನ್ನಾಗಿ ಮಾರಾಟ ಮಾಡುತ್ತಿದ್ದರು ಎಂಬುದರ ಸ್ಪಷ್ಟ ಸೂಚನೆಯಾಗಿದೆ.‌

ವೇದಗಳಲ್ಲಿ ದಾಸರು,ದಾಸಿಯರ ಬಗೆಗೆ ಹಲವು ಉಲ್ಲೇಖಗಳು ಬರುತ್ತವೆ. ಭಾರತಕ್ಕೆ ಬಂದ ಆರ್ಯರು ,ಅವರು ಬರುವ ಸಾವಿರಾರು ವರ್ಷಗಳ ಮೊದಲೇ ಇಲ್ಲಿ ವಾಸಿಸುತ್ತಿದ್ದ ಜನರ ಮೇಲೆ ಧಾಳಿ ಮಾಡಿದರು. ಅವರ ಸಂಪತ್ತು ಮತ್ತು ಭೂಮಿಯನ್ನು ಆಕ್ರಮಿಸಿಕೊಂಡರು. ಋಗ್ವೇದದಲ್ಲಿ ಆರ್ಯರು ಮೂರು ಹೆಸರುಗಳು ಮತ್ತೆ ಮತ್ತೆ ಕಾಣಬರುತ್ತದೆ. ದಾಸರು,ದಸ್ಯುಗಳು,ಪಣಿಗಳು ಎಂಬ ಈ ಹೆಸರು ಆ ಸಮುದಾಯಗಳ ಮೂಲ ಹೆಸರುಗಳಲ್ಲ. ಇದು ಆರ್ಯರು ತಮ್ಮ ದೃಷ್ಟಿಯಿಂದ ಮಾಡಿಕೊಂಡ ವಿಂಗಡಣೆ. Classification. ದಸ್ಯುಗಳು ಎಂದರೆ ಶತ್ರುಗಳು ಎಂದರ್ಥ. ದಾಸರು, ದಾಸ್ಯ ಎಂಬುದಕ್ಕೆ ಇಂದು ಭಾರತದಲ್ಲಿರುವ ಎಲ್ಲರಿಗೂ ಅರ್ಥ ಗೊತ್ತಿದೆ, ಸೇವಕರು, ಗುಲಾಮರು ಎಂದು.‌ ತಮಗೆ ಎದುರು ಬಿದ್ದವರು ಶತ್ರುಗಳು, ಶರಣಾದವರು ದಾಸರು  ಎಂಬ ಈ ವಿಂಗಡಣೆ ಆರ್ಯ ಬುಡಕಟ್ಟುಗಳು ಭಾರತಕ್ಕೆ ಪ್ರವೇಶಿಸುವ ಮೊದಲಿನಿಂದಲೇ ಇರಾನಿನಲ್ಲಿದ್ದಾಗಲೇ ಆಗಿನ ಗ್ರಂಥ ಜೆಂಡ್ ಅವೆಸ್ತಾದಲ್ಲಿ ಕಾಣಬರುತ್ತದೆ. ಅಂದರೆ ಅವರು ಮಧ್ಯ ಏಷ್ಯಾದಿಂದ ಹೊರಟು ಬರುವಾಗ ದಾರಿಯಲ್ಲಿ ತಮಗಿಂತ ಮೊದಲೇ ವಾಸಿಸುತ್ತಿದ್ದ ಸಮುದಾಯಗಳ ಮೇಲೆ‌ ಯುದ್ಧ ಮಾಡುವಾಗ ತಮ್ಮದೇ ಮೂಗಿನ ನೇರಕ್ಕೆ ಈ ವಿಂಗಡಣೆಯನ್ನು ಮಾಡಿಕೊಂಡರೆಂದು ಕಾಣುತ್ತದೆ.

ಋಗ್ವೇದದಲ್ಲಿ ದಸ್ಯುಗಳೆಂದರೆ ವಿಷ ಕಾರುವುದು , ದಾಸರೆಂದರೆ ಸ್ವಲ್ಪ ಮೃದುವಾಗಿರುವುದು ಕಾಣಬರುತ್ತದೆ. ದೇವ ಸಮುದಾಯಗಳ ನಾಯಕನಾದ ಇಂದ್ರನು ದಸ್ಯುಹಂತಾ,ದಸ್ಯುಘ್ನ, ಎಂದು ಕರೆಯಲ್ಪಟ್ಟಿದ್ದಾನೆ. ಅವರು ಕಪ್ಪು ಬಣ್ಣದವರು, ಅನಾಸರು ( ಮೂಗಿಲ್ಲದವರು- ಮೊಂಡ ಮೂಗಿನವರು)
ಪಂಚಾಶತ್ ಕೃಷ್ಣಾನಿ ವಪಃ ಸಹಸ್ರಾ ಅತ್ಕಂ ನ ಪುರೋ ಜರಿಮಾ ವಿ ದರ್ದಃ –
ಋಗ್ವೇದ – 4.16.13
ಐವತ್ತು ಸಾವಿರ ಕಪ್ಪು ಬಣ್ಣದವರನ್ನು ಕೊಂದ,ಅವರ ಪುರಗಳನ್ನು ಧ್ವಂಸ ಮಾಡಿದ,ಚಿಂದಿ ಬಟ್ಟೆಯಂತೆ ಅವು ನಾಶವಾಗಿ ಹೋದವು. ಇಂತಹ ಉಲ್ಲೇಖಗಳು ಹಲವು ಹತ್ತು.

ದಾಸರ ಪುರಗಳನ್ನು ಇದೇ ರೀತಿ ಆಕ್ರಮಿಸಿದ್ದಾರೆ. ಅವರಲ್ಲಿ ಕೆಲವರು ಆಕ್ರಮಣ ಮಾಡಿದ ಆರ್ಯರಿಗಿಂತ ಮೊದಲೇ ಇಲ್ಲಿ ಬಂದು ನೆಲೆಸಿದ್ದ ಆರ್ಯರೂ ಆಗಿರಬಹುದು. ( ಆರ್ಯರು ಒಂದೇ ಬಾರಿಗೆ ಭಾರತ ಪ್ರವೇಶಿಸಿದವರಲ್ಲ, ಅವರು ಮೂರು ಅಲೆಗಳಾಗಿ ಭಾರತಕ್ಕೆ ಬಂದವರು. ಈ ಅಲೆಗಳ ನಡುವೆ ಶತಮಾನಗಳ ವ್ಯತ್ಯಾಸವೇ ಉಂಟು ) ಅವರ‌ ಸಂಪತ್ತನ್ನು ವಶ ಪಡಿಸಿಕೊಂಡು ಅವರನ್ನು ನಿಕೃಷ್ಟವಾಗಿ ಕಂಡಿದ್ದಾರೆ. ಋಗ್ವೇದದ ಮಂತ್ರಗಳನ್ನು ಬರೆದ ಎಷ್ಟೋ ಋಷಿಗಳು,ಕೆಲವು ರಾಜರೂ ದಾಸೀ ಪುತ್ರರು. ಅಂದರೆ ಅವರನ್ನು ಸೋಲಿಸಿದ ಮೇಲೆ ಅವರನ್ನು ವಶ ಪಡಿಸಿಕೊಂಡು ದಾಸ ದಾಸಿಯರನ್ನಾಗಿ ಮಾಡಿಕೊಂಡರು. ದಾಸಿಯರನ್ನು ಲೈಂಗಿಕ ಉಪಭೋಗಕ್ಕಾಗಿ ಬಳಸಿಕೊಂಡರು.

ಹೀಗೆ ವಶ ಪಡಿಸಿಕೊಂಡ ದಾಸ,ದಾಸಿಯರನ್ನು ರಾಜರು ತಮ್ಮದೇ ಸಮುದಾಯಗಳಿಗೆ ಸೇರಿದ ಬ್ರಾಹ್ಮಣರಿಗೆ ದನಗಳು, ಒಡವೆಗಳ ಜೊತೆಗೆ ದಾನವಾಗಿತ್ತಿದ್ದಾರೆ. ಹೀಗೆ‌ ದಾನವಾಗಿತ್ತ ದಾಸ ದಾಸಿಯರ ಸಂಖ್ಯೆ ಸಾವಿರಾರು. ಹಾಗೆಯೇ ರಾಮಾಯಣ, ಮಹಾಭಾರತಗಳಲ್ಲಿ, ಪುರಾಣಗಳಲ್ಲಿ ರಾಜ ಕುವರಿಯರನ್ನು ವಿವಾಹದ ನಂತರ ಗಂಡನ ಮನೆಗೆ ಕಳಿಸಿಕೊಡುವಾಗ ಜೊತೆಗೆ ಕಳಿಸಿಕೊಟ್ಟ ದಾಸಿಯರ ಸಂಖ್ಯೆ ಹತ್ತು ಸಾವಿರದವರೆಗೂ ಹೋಗಿದೆ. ಈ ಸಂಖ್ಯೆಗಳು ಅಂದು ಭಾರತದಲ್ಲಿ ಜನರನ್ನು ದಾಸ್ಯಕ್ಕೆ ಒಳಪಡಿಸುವ ಪದ್ಧತಿ ಬಹಳ ದೊಡ್ಡ ಸಂಖ್ಯೆಯಲ್ಲಿಯೇ ಇತ್ತು. ಇವರನ್ನು ಅರಮನೆಗಳಲ್ಲಿ ವಿವಿಧ ಕೆಲಸ ಕಾರ್ಯಗಳ ಜೊತೆಗೆ ರಾಜರ ಲೈಂಗಿಕ ಭೋಗಕ್ಕಾಗಿ ಕೂಡಾ ಬಳಸಿಕೊಳ್ಳಲಾಗುತ್ತಿತ್ತು. ಆದರೆ ಅವುಗಳ ಜೊತೆಗೆ ದನಗಳ ಸಗಣಿ ಬಾಚುವ, ಅವುಗಳನ್ನು ಮೇಯಿಸಿಕೊಂಡು ಬರುವ,ಹಾಲು ಕರೆಯುವ ಹಾಗೂ ಬೇಸಾಯದ ಕೆಲಸಗಳಿಗೆ ಬಳಸಿಕೊಂಡು ಯಜಮಾನರುಗಳ ಸಂಪತ್ ವೃದ್ಧಿ ಮಾಡಿಕೊಳ್ಳಲಾಗುತ್ತಿತ್ತು.

ಇತರ ಬುಡಕಟ್ಟುಗಳ ಮೇಲೆ ಯುದ್ಧ ಮಾಡಿ ವಶಪಡಿಸಿಕೊಂಡು ದಾಸರನ್ನಾಗಿ ಮಾಡಿಕೊಂಡವರು ತಲೆ ತಲಾಂತರದವರೆಗೂ ಆ ಕುಟುಂಬಗಳ ದಾಸರಾಗಿರುತ್ತಿದ್ದರು. ಇವರನ್ನು ಮಾರಲಾಗುತ್ತಿತ್ತು. ಹೊಲ ಗದ್ದೆಗಳನ್ನು ಮಾರಿದಾಗ ಅವುಗಳ ಜೊತೆಯಲ್ಲಿಯೇ ಮಾರಲಾಗುತ್ತಿತ್ತು ಎಂಬುದಕ್ಕೆ ಕೌಟಲ್ಯನ ಅರ್ಥ ಶಾಸ್ತ್ರ, ಮನುಸ್ಮೃತಿ ಮೊದಲಾದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಪುರಾವೆಗಳಿವೆ. ಅವುಗಳಲ್ಲಿ ಅವರನ್ನು ಪಡೆದುಕೊಂಡ ವಿಧಾನದಂತೆ ಹತ್ತಾರು ರೀತಿಯಾಗಿ ವಿಂಗಡಿಸಲಾಗಿದೆ.

ಈ ರೀತಿ ಜನರನ್ನು ದಾಸ್ಯಕ್ಕೊಳಪಡಿಸುವ ಪದ್ಧತಿ ಇತ್ತೀಚಿನವರೆಗೂ ಸಾಮಾನ್ಯವಾಗಿತ್ತು. ವಿವಿಧ ತೊತ್ತುಗಳು , ಜೀತದಾಳುಗಳು ಹೀಗೆಯೇ ಮನೆತನಗಳಿಗೆ ತಲೆತಲಾಂತರದಿಂದ ಬಂದವರು, ಭೂಮಿಗೆ ಲಗತ್ತಾದವರು ಎಂಬೆಲ್ಲ ರೀತಿಗಳಿದ್ದವು.

ಇತ್ತೀಚಿಗೆ ಹತ್ತೊಂಬತ್ತನೆಯ ಶತಮಾನದ ಶೃಂಗೇರಿ ಮಠದ ದಾಖಲೆಗಳಲ್ಲಿ ತೊತ್ತುಗಳನ್ನು ಮಾರಿದ ಸಂಗತಿಗಳಿವೆ.  ತೊತ್ತುಗಳು ಜೀತದಾಳುಗಳು ಎಂಬ ಹೆಸರಿನಲ್ಲಿ  ಇತ್ತೀಚಿನವರೆಗೂ ಮುಂದುವರೆಯುತ್ತಿದೆ. ಜೀತಗಾರಿಕೆ ನಿಷೇಧವಾದ ನಂತರವೂ.

ಆದರೆ ರೋಮ್, ಗ್ರೀಸ್, ಈಜಿಪ್ಟ್‌ಗಳಷ್ಟು ವ್ಯಾಪಕವಾಗಿರಲಿಲ್ಲ ನಿಜ. ಆದರೆ ಅಲ್ಲಿ ಕ್ರಿಶ್ತಶಕ ನಾಲ್ಕನೇ ಶತಮಾನದ ನಂತರ ಯುರೋಪಿನಲ್ಲಿ ಗುಲಾಮರ ದಂಗೆಗಳ ನಂತರ ಅದು ನಾಶವಾಯಿತು. ಆದರೆ ಭಾರತದಲ್ಲಿ ಸಹಸ್ರ ಸಹಸ್ರ ವರ್ಷಗಳವರೆಗೆ ಮುಂದುವರೆಯಿತು. ಜಾತಿ ಪದ್ದತಿ, ಅಸ್ಪೃಶ್ಯತೆ ದಾಸ್ಯ ಪದ್ಧತಿ ಇತ್ತೀಚಿನವರೆಗೆ ಮುಂದುವರೆಯಲು ಆಧಾರವಾಯಿತು.

ಹಿಂದಿನ ಲೇಖನದಲ್ಲಿ ಹೇಳಿದಂತೆ ಕೃಷಿಯಿಂದ ಸಾಧ್ಯವಾದ ಹೆಚ್ಚುವರಿ ಉತ್ಪಾದನೆ, ಶೇಖರಣೆಯ ಸಾಧ್ಯತೆ ಉಂಟಾಯಿತು. ಅದರಿಂದಾಗಿ ಇನ್ನಷ್ಟು ಮತ್ತಷ್ಟು ಭೂಮಿ,  ದುಡಿಮೆಗೆ ಹೆಚ್ಚು ಜನರನ್ನು ಪಡೆಯುವ ದಾಹ ಸೃಷ್ಟಿಯಾಗಿತ್ತು. ಬೇರೆ ‌ಬುಡಕಟ್ಟುಗಳ ಮೇಲೆ ಆಕ್ರಮಣ, ಸಂಪತ್ತಿನ‌ ಲೂಟಿಯ ಜೊತೆಗೆ ಅವರ ಭೂಮಿಯನ್ನು ವಶಪಡಿಸಿಕೊಳ್ಳಲು ಹಾಗೂ  ಸೋತವರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಸೃಷ್ಟಿಯಾಗಿತ್ತು.

ಹೆಣ್ಣಿನ ಮೂಲದಿಂದಲೇ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದ, ಇಂತಹ ತಮ್ಮ ಕುಲಕ್ಕೆ ಮೂಲಾಧಾರವಾದ ಹೆಣ್ಣನ್ನು ಗುಲಾಮಳನ್ನಾಗಿ ಮಾಡಿಕೊಂಡು ಬೆತ್ತಲೆ ನಿಲ್ಲಿಸಿ, ಅಂಗಾಂಗಗಳ ಪ್ರದರ್ಶನ, ವರ್ಣನೆ ಮಾಡಿ ಹರಾಜು ಮಾಡುವ ದುಸ್ಥಿತಿಗೆ ತಲುಪಿದ್ದು ಹೇಗೆ ? ಸರಿಸುಮಾರು ಎಲ್ಲರೂ ಸಮಾನರು ಎಂಬಂತೆ ಜೀವಿಸುತ್ತಿದ್ದ ಮಾನವರ ಸಮುದಾಯ ಪುರುಷಾಧಿಪತ್ಯಕ್ಕೆ ಮತ್ತು ಅದರ ಜೊತೆಗೆ ಗುಲಾಮ ಪದ್ಧತಿಗೆ ಬದಲಾದದ್ದು ಹೇಗೆ ? ವಿವಾಹ ಎಂಬ ಮಹಿಳೆಯರ ನಿರಂತರ ದಾಸ್ಯ ಈ ಯುದ್ಧ, ಗುಲಾಮಿ ಪದ್ಧತಿಯ ಭಾಗವಾಗಿ ರೂಪುಗೊಂಡದ್ದು ಹೇಗೆ ಎಂಬುದು.

। ಮುಂದುವರೆಯುವುದು ।

‍ಲೇಖಕರು Admin

20 August, 2022

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading