ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.
ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು
ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.
ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ
ಅಂಕಣ – ೫
ಇತ್ತೀಚಿನ ದಿನಗಳಲ್ಲಿ ಬಾಂಬೆ ಹೈಕೋರ್ಟಿನಲ್ಲಿ ಪ್ರಕರಣಗಳನ್ನು ವಿಚಾರಣೆಗಾಗಿ ಪಟ್ಟಿ ಮಾಡಿಸುವುದೇ ಒಂದು ದೊಡ್ಡ ಸವಾಲಾಗಿದೆ. ಇವುಗಳನ್ನೆಲ್ಲ ನೋಡಿದರೆ, ಈ ವ್ಯವಸ್ಥೆ ನಿಜಕ್ಕೂ ಯಾರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ ಎಂಬ ಸೋಜಿಗವೊಂದು ಮನಸ್ಸಿನಲ್ಲಿ ಮೂಡುತ್ತದೆ.
ತುರ್ತು ಪ್ರಕರಣವೊಂದನ್ನು ಪ್ರಸ್ತಾಪಿಸಿ, ನ್ಯಾಯಾಧೀಶರ ಗಮನಕ್ಕೆ ತರಲೂ ಇಂದು ಹಲವು ಅಡಚಣೆಗಳಿವೆ.
ಅನೇಕ ನ್ಯಾಯಮೂರ್ತಿಗಳು ವಕೀಲರಿಗೆ ಅಥವಾ ಜೂನಿಯರ್ ವಕೀಲರಿಗೆ ತುರ್ತು ವಿಷಯದ ಬಗ್ಗೆ ಒಂದು ಮಾತೂ ಹೇಳಲು ಅವಕಾಶ ಕೊಡುವುದಿಲ್ಲ; ಆ ಕ್ಷಣಕ್ಕೆ ಪರಿಹಾರ ಬೇಕಿರುವ ಪ್ರಕರಣಗಳಿಗೂ ತಿಂಗಳುಗಳ ನಂತರದ ದಿನಾಂಕ ನೀಡಿಬಿಡುತ್ತಾರೆ.
ಅಂತಹ ಸಂದರ್ಭದಲ್ಲಿ ವಕೀಲನ ಅಸಹಾಯಕತೆಗೆ ಉಳಿಯುವುದು ಎರಡೇ ದಾರಿ.
ಒಂದೋ ಆ ನ್ಯಾಯಮೂರ್ತಿಗಳ ಪಟ್ಟಿಯಲ್ಲಿ ‘ಅಚ್ಚುಮೆಚ್ಚು’ ಎಂದು ಹೆಸರಾದ ಹಿರಿಯ ವಕೀಲರೊಬ್ಬರ ಮೂಲಕ ಮತ್ತೊಮ್ಮೆ ಪ್ರಯತ್ನಿಸುವುದು. ಇಲ್ಲವೇ ವಿಚಾರಣಾ ಪಟ್ಟಿಯನ್ನು ನಿಯಂತ್ರಿಸುವ ಕೋರ್ಟ್ ಸಹಾಯಕರನ್ನು ಒಲಿಸಿಕೊಳ್ಳುವುದು. ಆದರೆ, ಈ ಎರಡೂ ಮಾರ್ಗಗಳು ಭಾರಿ ಹಣವನ್ನು ಅಪೇಕ್ಷಿಸುತ್ತದೆ.
ಈ ಎಲ್ಲಾ ಪ್ರಯತ್ನಗಳ ನಂತರ, ನಾವು ಎಣಿಸಿದ ದಿನಾಂಕ ಸಿಕ್ಕರೂ, ಪ್ರಕರಣ ವಿಚಾರಣೆಗೆ ಬರುವುದೋ, ಇಲ್ಲವೋ ಎಂಬುವುದು ಆ ನ್ಯಾಯಮೂರ್ತಿಗಳು ಪ್ರಕರಣಗಳ ಇತ್ಯರ್ಥದ ವೇಗದ ಮೇಲೆ ಅವಲಂಬಿತವಾಗಿರುತ್ತದೆ.
ಹೀಗಾಗಿ ಕಾಸ್ ಲಿಸ್ಟ್‌ನಲ್ಲಿ ನಿಮ್ಮ ಪ್ರಕರಣದ ಸ್ಥಾನವೇ ಅತಿ ಮುಖ್ಯವಾಗಿರುತ್ತದೆ. ಪ್ರಕರಣದ ಸ್ಥಾನ ನಿರ್ಧಾರಕ್ಕೆ ಕಕ್ಷಿದಾರನೂ ಇನ್ನಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಇಷ್ಟೆಲ್ಲ ಮಾಡಿ, ಸಾಕಷ್ಟು ಹಣ ಖರ್ಚು ಮಾಡಿದ ಮೇಲೂ ಹಿರಿಯ ವಕೀಲರೊಬ್ಬರು ನಿಮ್ಮ ಪರವಾಗಿ ಹಾಜರಾಗದಿದ್ದರೆ ನ್ಯಾಯಮೂರ್ತಿಗಳು ಪ್ರಕರಣವನ್ನು ಸುಮ್ಮನೆ ಮುಂದೂಡಿಬಿಡಬಹುದು.
ಕೆಲವೊಮ್ಮೆ ಪದಾಂಕಿತ ಹಿರಿಯ ವಕೀಲರು ಇದ್ದಾಗಲು ಫಲಿತಾಂಶ ಹೆಚ್ಚು ಭಿನ್ನವಾಗಿರುವುದಿಲ್ಲ ಕೇವಲ ಒಂದಷ್ಟು ನಿಮಿಷ ಹೆಚ್ಚು ವಿಚಾರಣೆ ನಡೆದು ಪರಿಣಾಮಕಾರಿ ಹಾಜರಾತಿಗಾಗಿ ಶುಲ್ಕ ತೆತ್ತಬೇಕಾಗುತ್ತದೆ ಅಷ್ಟೇ.
ಈ ಸನ್ನಿವೇಶ ಯಾವಾಗಲೂ ಹಾವು ಏಣಿ ಆಟದಂತೆಯೇ ಇರುತ್ತದೆ. ಪ್ರತಿ ವಿಚಾರಣೆಯ ದಿನಾಂಕದಲ್ಲೂ ಈ ಸ್ಥಾನ ಪಡೆಯುವ ಆಟ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ.
ಇಂದು ಬಾಂಬೆ ಹೈಕೋರ್ಟಿನಲ್ಲಿ ಕೋರ್ಟ್ ಅಸೋಸಿಯೇಟ್ ಆಗುವುದು ಎಷ್ಟು ಲಾಭದಾಯಕವಾಗಿದೆ ಎನ್ನುವುದಕ್ಕೆ ಹತ್ತು ಹುದ್ದೆಗಳಿಗೆ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬರುವುದೇ ಸಾಕ್ಷಿಯಾಗಿದೆ.
ಈ ಸಂಪೂರ್ಣ ವ್ಯವಸ್ಥೆಯ ವ್ಯತಿರಿಕ್ತವಾಗಿ ಎಂಬತ್ತರ ದಶಕದಲ್ಲಿ ಕೇವಲ ಕರಡು ಅರ್ಜಿಗಳು ನಮ್ಮ ಕೈಯಲ್ಲಿದ್ದರೂ ಸಾಕಿತ್ತು, ತುರ್ತು ವಿಷಯಗಳನ್ನು ಪ್ರಸ್ತಾಪಿಸಿ, ಅರ್ಹ ಪ್ರಕರಣಗಳಿಗೆ ಒಂದೆರಡು ದಿನದೊಳಗೆ ಎಲ್ಲವನ್ನೂ ಸರಿಪಡಿಸುವ ಭರವಸೆಯ ಮೇಲೆ ಮಧ್ಯಂತರ ಆದೇಶ ಪಡೆಯುತ್ತಿದ್ದೆವು.
ಈ ಕ್ಷಣಕ್ಕೆ ಸಿಟಿ ಸಿವಿಲ್ ಕೋರ್ಟ್‌ನ ಒಂದು ಪ್ರಕರಣ ನನಗೆ ನೆನಪಾಗುತ್ತದೆ – ಅದನ್ನು ಆ ಕಕ್ಷಿದಾರರ ಪರ ವಕೀಲರೇ ನನಗೆ ಹೇಳಿದ್ದರು.
ಒಮ್ಮೆ, ಫುಟ್‌ಪಾತ್ ಬಳಿ ತರಕಾರಿ ಮಾರುತ್ತಿದ್ದ ವ್ಯಾಪಾರಿಯೊಬ್ಬರಿಗೆ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಕೂಡಲೇ ಅಂಗಡಿ ತೆರವುಗೊಳಿಸುವ ಬೆದರಿಕೆ ಬಂತು. ಗಾಬರಿಗೊಂಡ ವ್ಯಾಪಾರಿ ವಿಷಯ ತಲುಪಿದ ಕೂಡಲೇ ಬಂದು ಈ ವಕೀಲರನ್ನು ಸಂಪರ್ಕಿಸಿದರು.
ಅಷ್ಟು ಹೊತ್ತಿಗಾಗಲೇ ಅಂದಿನ ನ್ಯಾಯಾಲಯದ ಕಲಾಪಗಳೆಲ್ಲ ಮುಗಿದಿತ್ತು. ಮರುದಿನ ಬೆಳಗ್ಗೆಯೇ ಕಾರ್ಪೋರೇಷನ್ ನಿಂದ ಅಂಗಡಿ ತೆರವುಗೊಳಿಸುವ ತಂಡ ಬರುವ ಸಾಧ್ಯತೆಯಿತ್ತು.
ನಿರಂತರವಾಗಿ ಮೂವತ್ತು ವರ್ಷಗಳಿಂದ ಆ ಸ್ಥಳದಲ್ಲೇ ತರಕಾರಿ ವ್ಯಾಪಾರ ಮಾಡುತ್ತಿದ್ದ, ಆತನಿಗೆ ಹಿಂದಿನ ನೋಟೀಸ್‌ಗಳು ತಲುಪಿರಲಿಲ್ಲ ಅಥವಾ ಕಳುಹಿಸಿರಲೇ ಇಲ್ಲ.
ಹಾಗಾಗಿ, ವಕೀಲರು ಅಂದು ಸಂಜೆ ಕರ್ತವ್ಯಕ್ಕೆಂದು ನಿಯೋಜಿಸಿದ್ದ ನ್ಯಾಯಾಧೀಶರ ಮನೆಗೆ ಭೇಟಿ ನೀಡಲು ನಿರ್ಧರಿಸಿದರು.
ಆ ನ್ಯಾಯಾಧೀಶರ ಹೆಸರು ಎ. ಎ. ಶೇಕ್. ಅವರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ನ್ಯಾಯಾಧೀಶರಾದ ಬಿ. ಲೆಂಟಿನ್ ಅವರ ಸಮಕಾಲೀನರಾಗಿದ್ದರು. ಲೆಂಟಿನ್ ಅವರು ನಂತರ ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿಗಳಾಗಿ ಹೆಸರುವಾಸಿಯಾದವರು.
ವಿಪರ್ಯಾಸವಾಗಿ ನ್ಯಾಯಾಧೀಶರಾದ ಶೇಕ್ ಅವರು ಸೇವೆಯಲ್ಲಿರುವಾಗಲೇ ನಿಧನರಾದರು. ಸಹೋದ್ಯೋಗಿಗಳು ಮತ್ತು ವಕೀಲ ವೃಂದ ಅವರ ಸಾವಿಗೆ ಕಂಬನಿ ಮಿಡಿಯಿತು.
ಅವರೇಕೆ ಅಷ್ಟು ಜನಪ್ರಿಯರಾಗಿದ್ದರು ಎನ್ನುವುದಕ್ಕೆ ಈ ಪ್ರಸಂಗ ನಿದರ್ಶನವಾಗಿದೆ.
ವಕೀಲರು ಮತ್ತು ಅಂದಿನ ಸಂಜೆ ಕರ್ತವ್ಯದ ಕೋರ್ಟ್ ಅಸೋಸಿಯೇಟ್ ಇಬ್ಬರೂ ಕೋರ್ಟ್ ನ ಅಧಿಕೃತ ದಾಖಲೆಗಳ ಬ್ಯಾಗ್ ಹಿಡಿದುಕೊಂಡು ನ್ಯಾಯಾಧೀಶರಾದ ಶೇಕ್ ಅವರ ನಿವಾಸಕ್ಕೆ ಹೋದರು. ಅವಿವಾಹಿತರಾಗಿದ್ದ ಅವರು ಒಂಟಿಯಾಗಿ ವಾಸಿಸುತ್ತಿದ್ದರು. ಸಂಜೆ ವಾಕಿಂಗ್ ಹೋಗಿದ್ದಾರೆಂದು ವಿಷಯ ತಿಳಿಯಿತು.
ಗೇಟ್ ಬಳಿಯಿದ್ದ ಕಾವಲುಗಾರ, ಸಾಹೇಬರು ಸಾಮಾನ್ಯವಾಗಿ ಮುನ್ಸಿಪಲ್ ಮಾರುಕಟ್ಟೆಗೆ ಹೋಗಿ ಸ್ವಲ್ಪ ತರಕಾರಿ ಕೊಂಡುಕೊಂಡು ಮನೆಗೆ ಬರುತ್ತಾರೆಂದೂ, ಅವರ ಅಡುಗೆಯವನು ಸಂಜೆ ಏಳು ಗಂಟೆಗೆ ಬರುತ್ತಾನೆಂದೂ ತಿಳಿಸಿದ.
ಇದನ್ನು ಕೇಳಿದ ಆ ಇಬ್ಬರೂ ಅರ್ಧ ಕಿಲೋಮೀಟರ್ ದೂರದಲ್ಲಿದ್ದ ಮುನ್ಸಿಪಲ್ ಮಾರುಕಟ್ಟೆಯ ಕಡೆಗೆ ಆತುರದ ಹೆಜ್ಜೆ ಹಾಕಿದರು.
ಅಲ್ಲಿ ಅವರಿಗೆ ನ್ಯಾಯಾಧೀಶರು ತರಕಾರಿ ವ್ಯಾಪಾರಿಯೊಂದಿಗೆ ಟೊಮ್ಯಾಟೊ ಮತ್ತು ಈರುಳ್ಳಿಯ ಬೆಲೆಯ ಚೌಕಾಸಿ ಮಾಡುತ್ತಿರುವುದು ಕಂಡುಬಂತು.
ನಡೆದ ವಿಷಯವನ್ನೆಲ್ಲ ತಿಳಿಸಿ, ಬೇಗ ಮನೆಗೆ ಬಂದು ಪ್ರಕರಣ ಆಲಿಸಬೇಕೆಂದು ಕೋರಿದಾಗ, ನ್ಯಾಯಾಧೀಶರು “ಇಲ್ಲೇ ವಾದ ಮಂಡಿಸಿ, ವಕೀಲರೇ.” ಎಂದು ನಗುತ್ತಾ ಹೇಳಿದರು.
ಐದು ನಿಮಿಷ ವಿಷಯ ಆಲಿಸಿದ ಬಳಿಕ “ನಾನು ಈಗಲೇ ನಿಮಗೆ ಏಕಪಕ್ಷೀಯ ತಡೆಯಾಜ್ಞೆ ನೀಡುತ್ತೇನೆ. 72 ಗಂಟೆಗಳ ನಂತರ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆಗೆ ತೆಗೆದುಕೊಳ್ಳೊಣ, ನೀವು ಎದುರುದಾರರಿಗೆ ನೋಟಿಸ್ ಜಾರಿ ಮಾಡಿಕೊಂಡು ಬನ್ನಿ.” ಎಂದರು.
ಆ ನಂತರ ಸಹಾಯಕನ ಕಡೆ ತಿರುಗಿ “ಈಗ ನನಗೊಂದು ಖಾಲಿ ಆರ್ಡರ್ ಶೀಟ್ ಕೊಡಿ.” ಎಂದು ಕೇಳಿದರು.
ನ್ಯಾಯಾಧೀಶರು ತಕ್ಷಣ ವಿಚಾರಣೆ ನಡೆಸುತ್ತಾರೆಂದು ನಿರೀಕ್ಷಿಸದ ಕಾರಣ ತಾನು ಚೀಲವನ್ನು ಕಾವಲುಗಾರನ ಬಳಿ ಬಿಟ್ಟುಬಂದಿರುವುದಾಗಿ ಸಹಾಯಕ ತಿಳಿಸಿದ.
ನ್ಯಾಯಾಧೀಶರು ಕಿರು ನಗೆ ಬೀರುತ್ತಾ “ಅರೇ, ಯಾವುದಾದರೂ ಪೇಪರ್ ಹುಡುಕಿ.” ಎಂದರು
ವಕೀಲರು ಮತ್ತು ಕೋರ್ಟ್ ಸಹಾಯಕ ಇಬ್ಬರೂ ಮಾರುಕಟ್ಟೆಯಲ್ಲಿ ಒಂದು ಖಾಲಿ ಖಾಗದಕ್ಕಾಗಿ ಹುಡುಕಾಡಿದಾಗ ಸಿಕ್ಕಿದ್ದು ಬಳಸಿ ಬಿಸಾಡಿದ ಬಸ್ ಟಿಕೆಟ್ ಮಾತ್ರ.
ನ್ಯಾಯಾಧೀಶರು “ಇದೂ ನಡೆಯುತ್ತದೆ” ಎಂದು ತಿಳಿಸಿ, ಆ ಟಿಕೆಟ್ ನ ಹಿಂಬದಿಯಲ್ಲಿ “ಪ್ರಾರ್ಥನೆ (ಸಿ) ಪ್ರಕಾರ ಮಧ್ಯಂತರ ಆದೇಶ” ಎಂದು ಬರೆದು ಸಹಿ ಮಾಡಿದರು.
ನಂತರ ಆ ಬಸ್ ಟಿಕೆಟ್ ಅನ್ನು ಸಹಾಯಕನಿಗೆ ನೀಡಿ ಕೂಡಲೇ ಹೋಗಿ ಆದೇಶವನ್ನು ಟೈಪ್ ಮಾಡಿಸಿ, ಮುದ್ರಿತ ದೃಢೀಕೃತ ಆದೇಶ ಪ್ರತಿಯನ್ನು ವಕೀಲರಿಗೆ ನೀಡುವಂತೆ ಸೂಚಿಸಿದರು.
ಅಲ್ಲದೆ, ವಕೀಲರಿಗೆ ಕಾರ್ಪೋರೇಷನ್ ಕಚೇರಿಯಲ್ಲಿನ ಯಾರಿಗಾದರೂ ಒಬ್ಬರಿಗೆ ಒಂದು ಪ್ರತಿ ಕೊಡಬೇಕೆಂದೂ, ಮತ್ತೊಂದು ಪ್ರತಿಯನ್ನು ಕಕ್ಷಿದಾರನಿಗೆ ಕೊಟ್ಟು ಬೆಳಗ್ಗೆ ಅಂಗಡಿ ತೆರವುಗೊಳಿಸುವ ಕಾರ್ಪೋರೇಷನ್ ತಂಡಕ್ಕೆ ತೋರಿಸುವಂತೆಯೂ ಸಲಹೆ ನೀಡಿದರು.
ಅವರಿಬ್ಬರೂ ನ್ಯಾಯಾಧೀಶರ ಆದೇಶ ಪ್ರತಿಯನ್ನು ಸಿದ್ದಗೊಳಿಸಲು ಹಿಂತಿರುಗಿದರು. ನ್ಯಾಯಾಧೀಶರು ಪುನಃ ತರಕಾರಿಯ ಚೌಕಾಸಿಗೆ ನಿಂತರು.
ಇದೆಲ್ಲವೂ ನಡೆದದ್ದು ಕೇವಲ ಹದಿನೈದು ನಿಮಿಷಗಳ ಅಂತರದಲ್ಲಿ.
ಮುಖ್ಯವಾದ ಸಂಗತಿಯೆಂದರೆ, ನ್ಯಾಯಾ ಸಿಗಬೇಕೆಂಬ ನ್ಯಾಯಾಧೀಶರ ಬದ್ಧತೆಯಿಂದಾಗಿ ಆ ಬಡ ತರಕಾರಿ ವ್ಯಾಪಾರಿಯ ಅಂಗಡಿಯೂ ಉಳಿಯಿತು ಮತ್ತು ಆತನ ಬದುಕುವ ಹಕ್ಕೂ ರಕ್ಷಿಸಲ್ಪಟ್ಟಿತು.
72 ಗಂಟೆಗಳ ನಂತರ ನ್ಯಾಯಾಲಯದ ಕಲಾಪಕ್ಕೆ ಪ್ರಕರಣ ವಿಚಾರಣೆಗೆ ಬಂದಿತು. ಎಂದಿನಂತೆ ಪ್ರಕರಣ ಮುಂದುವರೆಯಿತು.
ಆದರೆ, ಆ ತುರ್ತನ್ನು ಅರ್ಥೈಸಿಕೊಂಡಿದ್ದು ‘ನ್ಯಾಯ’ವಾಗಿತ್ತು.
ಇಂದು, ಇಂತಹದ್ದೇನಾದರೂ ನಡೆಯುತ್ತದೆ ಎನ್ನುವುದನ್ನು ನಾನು ಊಹಿಸಲಾರೆ.
ಮುದ್ರಿತ ಪುಟದ ಒಳ ಅಂಚು ಹೆಚ್ಚು ಕಡಿಮೆಯಾಗಿದ್ದರೆ, ಕಾಗದದ ಅಳತೆ ತಪ್ಪಿದ್ದರೆ, ಅಕ್ಷರಗಳ ಗಾತ್ರ ಮತ್ತು ನಡುವಿನ ಅಂತರ ಸ್ವಲ್ಪ ಆಯಾ ತಪ್ಪಿದರೂ ರಿಜಿಸ್ಟ್ರಿಯು ಪ್ರಕರಣಕ್ಕೆ ನಂಬರ್ ಕೊಡುವುದನ್ನು ನಿರಾಕರಿಸುತ್ತದೆ.
ಇಷ್ಟಾದ ಮೇಲೆ ಕಚೇರಿಯ ಎಲ್ಲಾ ಆಕ್ಷೇಪಣೆಗಳನ್ನು (Office Objections) ಪೂರೈಸಿದ ನಂತರ ಮತ್ತು ಪ್ರಕರಣದ ನಂಬರ್ ಸಿಕ್ಕಿ ಸರತಿಯಲ್ಲಿ ಬರುವವರೆಗೆ ತಮ್ಮ ಮುಂದೆ ಯಾವ ಪ್ರಕರಣವೂ ವಿಚಾರಣೆಗೆ ಪಟ್ಟಿಯಾಗಬಾರದೆಂಬ ನ್ಯಾಯಾಮೂರ್ತಿಗಳ ಮೌಖಿಕ ಆದೇಶವಿರುತ್ತದೆ.
ಈ ಮೃದು ಧೋರಣೆ ಬದಲಾಗಬೇಕು.
ನಾನು ಮುಂಬೈನ ಸೆಮಿನಾರ್‌ವೊಂದರಲ್ಲಿ ದಿವಂಗತ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಅವರ ಭಾಷಣ ಕೇಳಿದ್ದು ನೆನಪಾಗುತ್ತದೆ.
ಅವರು ಹೇಳಿದ ಪ್ರತಿಯೊಂದು ಮಾತುಗಳು ನನ್ನ ಮೇಲೆ ಪ್ರಭಾವ ಬೀರುವ ಜತೆಗೆ ಈಗಲೂ ನೆನಪಿದೆ.
‘ಕಾನೂನು’ (Law) ಮತ್ತು ‘ನ್ಯಾಯ’ (Justice) ಎರಡೂ ವಿಭಿನ್ನ ಆಯಾಮಗಳು ಎಂದಿದ್ದರು.
ನ್ಯಾಯಾಧೀಶರ ಕೆಲಸ ಕೇವಲ ಕಾನೂನಿನ ಪುನರುಚ್ಚಾರವಲ್ಲ. ಅದನ್ನು ಕಂಪ್ಯೂಟರ್ ಕೂಡ ಮಾಡಬಲ್ಲದು.
ಒಬ್ಬ ನ್ಯಾಯಾಧೀಶರ ಕೆಲಸವೆಂದರೆ ನ್ಯಾಯದ ಹುಡುಕಾಟದಲ್ಲಿ ಕಾನೂನನ್ನು ಬಳಸುವುದು. ಇಲ್ಲದಿದ್ದರೆ, ನ್ಯಾಯಾಧೀಶರನ್ನು ‘ಜಸ್ಟೀಸ್’ ಎಂದು ಏಕೆ ಕರೆಯಬೇಕು. ‘ಮಿಸ್ಟರ್ ಲಾ’ ಎಂದೇಕೆ ಕರೆಯಬಾರದು?
ಅಸಮಾನರ ನಡುವೆ ತಕ್ಕಡಿಯನ್ನು ಸಮಾನವಾಗಿ ಹಿಡಿಯುವುದು ಅಸಮಾನತೆಯನ್ನು ಮುಂದುವರೆಸಿದಂತೆಯೇ ಎಂದು ದೃಢವಾಗಿ ಹೇಳಿದ್ದರು.
ನ್ಯಾಯಾಧೀಶರು ಮೊದಲು ತಳಮಟ್ಟದಲ್ಲಿರುವವರ ಪರವಾಗಿ ನಿಂತು ಎರಡೂ ಕಡೆಯ ಸಮತೋಲನವನ್ನು ಕಾಪಾಡಬೇಕು. ಇಲ್ಲದಿದ್ದರೆ, ನ್ಯಾಯಾಧೀಶರನ್ನು ‘ಜಸ್ಟಿಸ್’ ಎಂದು ಕರೆಯುವುದರಲ್ಲಿ ಅರ್ಥವಿಲ್ಲ.
ಕಾನೂನು ಮತ್ತು ನ್ಯಾಯ ನಿಜಕ್ಕೂ ಎರಡು ವಿಭಿನ್ನ ಸಂಗತಿ ಎನ್ನುವುದು ಸತ್ಯ.
ಬಾಂಬೆ ಹೈಕೋರ್ಟಿನ ಅತ್ಯಂತ ಹಿರಿಯ ವಕೀಲರೊಬ್ಬರ ಚುರುಕಾದ ಮಾತೊಂದು ನನಗೆ ಈಗಲೂ ನೆನಪಿದೆ. ನಾವಿಬ್ಬರೂ ವಿಭಾಗೀಯ ಪೀಠದಲ್ಲಿ ನಮ್ಮ ಪ್ರಕರಣಕ್ಕಾಗಿ ಕಾಯುತ್ತಿದ್ದೆವು. ಆ ನ್ಯಾಯಾಧೀಶರ ಪ್ರಕರಣದ ಇತ್ಯರ್ಥದ ವೇಗ ಚೆನ್ನಾಗಿತ್ತೆಂಬ ಕಾರಣಕ್ಕೆ ‘ಒಳ್ಳೆಯ ನ್ಯಾಯಾಧೀಶರೆಂಬ’ ಮನ್ನಣೆಯನ್ನು ಹೊಂದಿದ್ದರು.
ಬಾರ್ ನಲ್ಲಿ ಎಲ್ಲರೂ ಇವರನ್ನು ‘ಅತ್ಯುತ್ತಮ ನ್ಯಾಯಾಧೀಶರಲ್ಲಿ ಒಬ್ಬರು’ ಎಂದು ಭಾವಿಸಿದ್ದಾರೆಂದು ನಾನು ಹಿರಿಯ ವಕೀಲರಿಗೆ ಹೇಳಿದೆ.
ತಕ್ಷಣವೇ ಪ್ರತಿಕ್ರಿಯಿಸಿದ ಹಿರಿಯ ವಕೀಲರು “ಖಂಡಿತವಾಗಿಯೂ ಇಲ್ಲ! ಅವರನ್ನು ನ್ಯಾಯಾಧೀಶರೆಂದು ಕರೆಯಲು ಸಾಧ್ಯವಿಲ್ಲ.”
ಮುಂದುವರೆದು, “ಅವರೊಬ್ಬ ಬರೀ ತೀರ್ಪುಗಾರ (adjudicator) ಅಷ್ಟೇ” ಎಂದರು.
ಆಗಲಿ, ಆ ತೀರ್ಪುಗಾರ ಅತ್ಯುತ್ತಮವಾಗಿ ತೀರ್ಪು ನೀಡುತ್ತಿದ್ದಾರೆ. ಹಾಗಾಗಿ ಅಲ್ಲಿನ ವಕೀಲರು ಅವರನ್ನು ‘ಉತ್ತಮ ನ್ಯಾಯಾಧೀಶರು’ ಎಂದು ಪರಿಗಣಿಸಿದ್ದಾರೆ.
ನಮ್ಮ ಗೌರವಾನ್ವಿತ ಹಿರಿಯ ವಕೀಲರು ಮಾತ್ರ ತಮ್ಮ ಅಭಿಪ್ರಾಯ ಬದಲಾಯಿಸಿಕೊಳ್ಳುವ ದೃಷ್ಟಿಯನ್ನು ಹೊರಳಿಸಲೇ ಇಲ್ಲ.
‘ನ್ಯಾಯ’ದ ಹುಡುಕಾಟ ನಿರಂತರವಾಗಿ ಜಾರಿಯಲ್ಲಿದೆ.






0 Comments