ಜಿ ಎನ್ ನಾಗರಾಜ್ ಅಂಕಣ- ಲಿಂಗಾಯತ ಮತಗಳೆಂಬ ರಾಜಕೀಯ ಆಸ್ತಿಗಾಗಿ ಸಂಘರ್ಷ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಲಿಂಗಾಯತ ಮತಗಳೆಂಬ ರಾಜಕೀಯ ಆಸ್ತಿಗಾಗಿ ಸಂಘರ್ಷ: ಯಡಿಯೂರಪ್ಪ vs ಬಿಜೆಪಿ.

ನಿನ್ನೆ ಬಸವರಾಜ ಬೊಮ್ಮಾಯಿ ಮತ್ತು ಮೋ- ಶಾ ನಡುವೆ ಮುಖ್ಯ ಚರ್ಚೆ ನಡೆದಿದೆ. ಅದರ ವಸ್ತು ಸಂಪುಟ ರಚನೆ ಅಲ್ಲ. ಬದಲಾಗಿ ಲಿಂಗಾಯತ ಮತಗಳೆಂಬ ರಾಜಕೀಯ ಆಸ್ತಿಯನ್ನು ಬಿಜೆಪಿ ಹೆಸರಿಗೆ ಹೇಗೆ ವರ್ಗಾಯಿಸಿಕೊಳ್ಳಬೇಕೆಂಬ ತಂತ್ರವೇ ಪ್ರಧಾನ ಸ್ಥಾನ ಪಡೆದಿದೆಯೇ? 
ಯಡಿಯೂರಪ್ಪನವರು ಒಲ್ಲದ ಮನಸ್ಸಿನಿಂದ ರಾಜೀನಾಮೆ ನೀಡಿ ನಂತರ ಆರೆಸ್ಸೆಸ್ ಮೂಲದವರಲ್ಲದ ಬಸವರಾಜ ಬೊಮ್ಮಾಯಿಯವರ ಆಯ್ಕೆ ಒಂದು ಅಚ್ಚರಿಯ ವಿಷಯವೇ ಆಗಿದೆ. ಅವರ ನೆರಳು ಇವರು ಎಂದೆಲ್ಲ ಮಾತುಗಳು ಬಹಳ ಸಾಮಾನ್ಯವಾಗಿ ಕೇಳಬರುತ್ತಿದೆ.

ಇದೊಂದು ವಿಶೇಷ ರೀತಿಯ ಡಬಲ್ ಇಂಜಿನ್ ಸರ್ಕಾರವಾಗುವಂತೆ ಕಾಣುತ್ತಿದೆ. ಇದನ್ನು ವ್ಯಂಗ್ಯವಾಗಿ ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ಜೋಡಿಗೆ ಅನ್ವಯಿಸಿದರೂ ಯಡಿಯೂರಪ್ಪ ಉತ್ತರಪ್ರದೇಶದ ಯೋಗಿ ಮಾದರಿಯ ಡಬಲ್ ಎಂಜಿನ್ ಆಡಳಿತದ ಮಾದರಿಗಿಂತ ಭಿನ್ನವಾಗಿ ತಮ್ಮದೇ ಮಾದರಿ ರೂಪಿಸಿದ್ದಾರೆ. ಅದೇ ಅವರು ಈ ಸರ್ಕಾರದ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯದಿರಲು ಮುಳುವಾಗಿದೆ. ಬಸವರಾಜ ಬೊಮ್ಮಾಯಿ ಈ ಮಾದರಿಗಳಲ್ಲಿ ಯಾವ ಮಾದರಿ ಅನುಸರಿಸುವರು ಎಂಬುದೇ ಕರ್ನಾಟಕದ ಈಗಿನ ಮುಖ್ಯ ಪ್ರಶ್ನೆಯಾಗಿದೆ.

ಡಬಲ್ ಇಂಜಿನ್ ಸರ್ಕಾರ ಎಂಬುದನ್ನು ಮೊದಲು ನಾವೆಲ್ಲ ಕೇಳಿದ್ದು 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ. ಮೋದಿಯವರು ಇದನ್ನು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಿದಾಗೆಲ್ಲ ಬಾರಿ ಬಾರಿಗೂ ಹೇಳುತ್ತಿದ್ದರು. ಈ ಮಾತು ಮತ್ತೆ ದೊಡ್ಡ ಸುದ್ದಿಯಾಗಿದ್ದು ಇತ್ತೀಚಿನ ಬಂಗಾಲ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ. 

ರಾಜ್ಯ ಹಾಗೂ ಕೇಂದ್ರ ಎರಡೂ ಕಡೆ ಬಿಜೆಪಿ ಪಕ್ಷದ ಸರ್ಕಾರವಿದ್ದರೆ ಅದು ಡಬಲ್ ಇಂಜಿನ್ ಸರ್ಕಾರ. ವೇಗವಾಗಿ ರಾಜ್ಯದ ಅಭಿವೃದ್ಧಿ ಮಾಡಲು ಸಹಾಯಕ. ಆದ್ದರಿಂದ ಬಿಜೆಪಿಯನ್ನೇ ಆಯ್ಕೆ ಮಾಡಿ ಎಂದು ಅವರ ಮನವಿ. ಮೂರೂವರೆ ದಶಕಗಳ ಕಾಲ ಕಾಂಗ್ರೆಸ್‌ನ ಡಬಲ್ ಎಂಜಿನ್ ಸರ್ಕಾರಗಳ ಆಡಳಿತವನ್ನು ರಾಜ್ಯದ ಜನ ಆ ಹೊತ್ತಿಗಾಗಲೇ ಅನುಭವಿಸಿದ್ದರು ಮತ್ತು 1983 ರ ನಂತರ ತಿರಸ್ಕರಿಸಿದ್ದರು ಎಂಬುದು ಬೇರೆ ಮಾತು.

ಡಬಲ್ ಎಂಜಿನ್ ಎಂಬ ರೀತಿಯ ಮಾತುಗಳು ಪ್ರಜಾಪ್ರಭುತ್ವಕ್ಕೆ ಅಪಚಾರ. ಆದರೆ ಬಿಜೆಪಿಗೆ ಅದೊಂದು ತುರ್ತು. ತಕ್ಷಣಕ್ಕೆ ಆ ಪಕ್ಷದ ಆಡಳಿತ ಸ್ಥಿರವಾಗಲು ಅದೊಂದು ತುರ್ತು ಮಾತ್ರವಲ್ಲ. ಅವರ ದೀರ್ಘಕಾಲದ ರಾಜಕೀಯ ಸಿದ್ಧಾಂತದ ದೃಷ್ಟಿಯಿಂದಲೂ ಅತ್ಯಗತ್ಯ.

ಈಗ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತವಿದ್ದರೂ ಕೂಡಾ, ಎರಡನೇ ಬಾರಿಗೆ ಅದು ಬಹುಮತ ಪಡೆದಿದ್ದರೂ ಕೂಡ ಅದರ ನಾಯಕರಿಗೆ ಮೂರನೇ ಬಾರಿಗೆ ಆಯ್ಕೆಯಾಗುತ್ತದೆಂಬ ಖಾತರಿ ಇಲ್ಲ. ಏಕೆಂದರೆ ಬಿಜೆಪಿಗೆ ದೇಶದ ಹಲವು ರಾಜ್ಯಗಳಲ್ಲಿ ಹೆಚ್ಚು ಸ್ಥಾನ ಸಿಗುತ್ತಿಲ್ಲ. ಒಬ್ಬ ಸಂಸದನೂ ಆಯ್ಕೆಯಾಗದ ಕೆಲವು ರಾಜ್ಯಗಳೂ ಇವೆ.

ಹೀಗಾಗಿ ಬಿಜೆಪಿಯ ಹೆಚ್ಚಿನ ಲೋಕಸಭಾ ಸದಸ್ಯರು ಕೆಲವೇ ರಾಜ್ಯಗಳಿಂದ ಬರುತ್ತಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಅದು ಕೌ ಬೆಲ್ಟ್ ಎಂದು ಗುರುತಿಸಲ್ಪಟ್ಟ ಮತ್ತೆ ಮತ್ತೆ ರಾಜ್ಯ ಸರ್ಕಾರಗಳನ್ನು ರಚಿಸಿರುವ ಮೂರ್ನಾಲ್ಕು ರಾಜ್ಯಗಳು ಮಾತ್ರ. ಆ ರಾಜ್ಯಗಳಲ್ಲಿ ಹಲವು ಬಾರಿ ಅಧಿಕಾರ ಮಾಡಿ ಆ ರಾಜ್ಯಗಳಲ್ಲಿ ಗಣನೀಯ ಕೋಮುವಾದೀಕರಣ ಮಾಡಿರುವುದರಿಂದ ಆ ರಾಜ್ಯಗಳಲ್ಲಿ ಒಂದಷ್ಟು ಸ್ಥಾನಗಳನ್ನು ಗೆದ್ದು ಬರುತ್ತಿದೆ. ಆದರೆ ಅದು ಬಹುಮತ ಪಡೆಯುವಷ್ಟಾಗುವುದಿಲ್ಲ‌. ಆದ್ದರಿಂದ ರಾಜ್ಯಗಳಲ್ಲಿ ಅಧಿಕಾರ ಪಡೆಯುವುದು ಮಾತ್ರವಲ್ಲದೆ ಅಲ್ಲಿ ಗಣನೀಯ ಮುಸ್ಲಿಂ ದ್ವೇಷ ಹಬ್ಬಿಸುವುದು ಅದಕ್ಕೆ ದೇಶದಲ್ಲಿ ಮತ್ತೆ ಅಧಿಕಾರ ಪಡೆಯುವ ಪ್ರಧಾನ ಮಾರ್ಗ. ಇದಕ್ಕಾಗಿ ರಾಜ್ಯಗಳಲ್ಲಿ ಸರ್ಕಾರ ಅತ್ಯಗತ್ಯ.

ಈಗ ಬಿಜೆಪಿ 12 ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ, 6 ರಾಜ್ಯಗಳಲ್ಲಿ ಬೇರೆ ಪಕ್ಷಗಳ ಜೊತೆ ಮೈತ್ರಿಯಿಂದ ಸರ್ಕಾರ ರಚಿಸಿದೆ. ಆದರೆ ಇವುಗಳಲ್ಲಿ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಹತ್ತು ಮತ್ತು ಅದಕ್ಕಿಂತ ಹೆಚ್ಚು ಲೋಕಸಭಾ ಸದಸ್ಯ ಸ್ಥಾನಗಳಿರುವುದು. ಅವು
ಯುಪಿ 80,
ಕರ್ನಾಟಕ 28,
ಮಧ್ಯ ಪ್ರದೇಶ 28,
ಗುಜರಾತ್ 26,
ಅಸ್ಸಾಂ 14,
ಹರ್ಯಾಣ 10 .
ಒಟ್ಟು 176 ಮಾತ್ರ.
ಇವುಗಳನ್ನು ಬಿಟ್ಟರೆ ಮೈತ್ರಿ ಸರ್ಕಾರ ಇರುವ ಬಿಹಾರದಲ್ಲಿ 40. ತಾನು ಆಳುತ್ತಿರುವ ರಾಜ್ಯಗಳಲ್ಲಿಯೂ ಎಲ್ಲ ಸ್ಥಾನಗಳನ್ನೂ ಗೆಲ್ಲುವುದಕ್ಕಾಗುವುದಿಲ್ಲವಲ್ಲ.

ಬಿಜೆಪಿ ಆಡಳಿತ ಇಲ್ಲದಿರುವ ರಾಜ್ಯಗಳಲ್ಲಿಂದ ಹಲವು ಸ್ಥಾನಗಳಲ್ಲಿ ಅವರು ಗೆದ್ದಿದ್ದಾರೆ. ಆದರೆ ಮುಂದಿನ ಚುನಾವಣೆಗಳಲ್ಲಿ ಆ ಸ್ಥಾನಗಳನ್ನು ಪಡೆಯುವುದು ನಿಶ್ಚಿತವಿಲ್ಲ ಎಂಬುದು ಬಿಜೆಪಿಯ ನಾಯಕರ ಆತಂಕ. ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಪಡೆದ ಸ್ಥಾನಗಳನ್ನು ಉಳಿಸಿಕೊಳ್ಳುವುದೇ ಅನುಮಾನವಾಗಿರುವಾಗ ಇನ್ನು ಅಧಿಕಾರದಲ್ಲಿಲ್ಲದ ರಾಜ್ಯಗಳ ಕತೆ ಏನು?

ಅದಕ್ಕಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಹೆಚ್ಚು ಲೋಕಸಭಾ ಸ್ಥಾನಗಳಿರುವ ಪ.ಬಂಗಾಲದಂತಹ ರಾಜ್ಯಗಳನ್ನು ಗೆದ್ದುಕೊಳ್ಳಲು ಆಕ್ರಮಣಕಾರಿಯಾಗಿ ಎರಗಿದ್ದು. ಸಾವಿರಾರು ವರ್ಷಗಳಿಂದ ಉತ್ತರ ಭಾರತದ ಸಾಮ್ರಾಟರುಗಳು, ಬಾದಶಾಗಳು ಉಳಿದ ಸಂಸ್ಥಾನಗಳನ್ನು ಆಕ್ರಮಿಸಲು ಚತುರಂಗ ಬಲ ಬಳಸಿ ಯುದ್ಧ ಹೂಡಿದಂತೆ.

2019 ರ ಲೋಕಸಭಾ ಚುನಾವಣೆಗಳ ನಂತರ ಪರಿಸ್ಥಿತಿ ಬಹಳ ಬದಲಾಗಿದೆ. ರೈತ ನಾಶಕ ಕಾನೂನುಗಳ ವಿರುದ್ಧ ನಡೆದ,ನಡೆಯುತ್ತಿರುವ ಚಳುವಳಿಗಳು, ಅದರಲ್ಲೂ ದೆಹಲಿಯ ಗಡಿಯಲ್ಲಿ ಲಕ್ಷಾಂತರ ರೈತರ ಪ್ರತಿಭಟನೆಯಿಂದ ಬಹಳ ಸ್ಥಾನಗಳನ್ನು ಗೆದ್ದಿರುವ ಯುಪಿ, ಎಂಪಿ, ಹರ್ಯಾಣ, ರಾಜಾಸ್ಥಾನ‌ಗಳಲ್ಲಿ ಬಿಜೆಪಿಯ ಬಗೆಗಿನ ಸಿಟ್ಟು ಈಗಾಗಲೇ ಹಲವು ರೀತಿಯಲ್ಲಿ ವ್ಯಕ್ತವಾಗಿದೆ. ಪಂಜಾಬಿನಲ್ಲಿ ಬಿಜೆಪಿಯೊಂದಿಗೆ ಅಕಾಲಿದಳದ ಹಲವು ದಶಕಗಳ ಗಟ್ಟಿ ಮೈತ್ರಿ, ಅಲ್ಲಿಯ ರೈತ ಸಂಘಟನೆಗಳು, ಈ ಕಾನೂನುಗಳ ಬಗ್ಗೆ ನಿಮ್ಮ‌ ನಿಲುವೇನು ಎಂದು ಹೂಂಕರಿಸಿದ ಕೂಡಲೇ ಬಿರುಕು ಬಿಟ್ಟಿತು.

ರೈತ ಚಳುವಳಿ ಅಲ್ಲದೆ ಕೊರೊನಾ ನಿರ್ವಹಣೆ, ಲಾಕ್‌ಡೌನ್ ಕಾಲದ ಸಂಕಟಗಳು, ಕಾರ್ಮಿಕ ಕಾನೂನುಗಳು, ಚಿಂತಕರ ಬಂಧನಗಳು, ಪೆಗಾಸಸ್ ಮೊದಲಾದ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ಧಾಳಿ ಇತ್ಯಾದಿ ಜನರ ಬದುಕಿನ ಹಲವು ವಿಷಯಗಳು ಬಿಜೆಪಿ ಬಗ್ಗೆ ಜನರ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿದೆ.

ಈ ನೀತಿಗಳನ್ನಂತೂ ಬಿಜೆಪಿ ಬದಲಾಯಿಸಿಕೊಳ್ಳಲು ತಯಾರಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿಗೆ ಉಳಿದಿರುವುದು ಒಂದೇ ದಾರಿ. ಅದು ಜನಮಾನಸದ ಕೋಮುವಾದೀಕರಣ. ಆ ಮೂಲಕ ಮತದಾರರಲ್ಲಿ ಹಿಂದೂಗಳೆಲ್ಲರನ್ನು ಹಿಂದೂತ್ವದ ರಾಜಕಾರಣಕ್ಕೆ ಒಲಿಸಿಕೊಂಡು ಅವರನ್ನು ಖಾಯಂ ಆಗಿ ಬಿಜೆಪಿಗೆ ಮತ ನೀಡುವಂತೆ ಬದಲಾಯಿಸುವುದು.

ಗುಜರಾತಿನಲ್ಲಿ ಇಂತಹ ಪರಿವರ್ತನೆಯನ್ನು ಸಾಧಿಸಲಾಗಿದೆ. ಅದರ ಎರಡು ದಶಕಗಳಿಗೂ ಹೆಚ್ಚು ಕಾಲ ಅಲ್ಲಿ ಚುನಾವಣೆಗಳ ಗೆಲುವಿನ ಮೂಲಕ  ಫಲವನ್ನೂ ಪಡೆಯಲಾಗಿದೆ. ಅಲ್ಲಿ ಎಂತಹಾ ಮನಸ್ಥಿತಿ ಎಂದರೆ ಮುಸ್ಲಿಮರು ಹಿಂದೂಗಳು ಹೆಚ್ಚಿರುವ ಪ್ರದೇಶಗಳಲ್ಲಿ ವಾಸ ಮಾಡುವುದನ್ನು ಊಹಿಸಲೂ ಸಾಧ್ಯವಿಲ್ಲದ ಪರಿಸ್ಥಿತಿ. ಮುಸ್ಲಿಮರ ಮೇಲೆ ಆರ್ಥಿಕ ನಿಷೇಧ ಹೇರಲಾಗಿದೆಯೇನೋ ಎನ್ನುವಂತೆ ಮುಸ್ಲಿಮರ ಒಡೆತನದ ಅಂಗಡಿಗಳಲ್ಲಿ ಹಿಂದೂಗಳು ಏನೂ ಖರೀದಿಸುವುದಿಲ್ಲ, ಅವರು ಚಾಲಕರಾಗಿರುವ ಆಟೋಗಳಲ್ಲಿ ಕೂಡುವುದಿಲ್ಲ ಇತ್ಯಾದಿ.
2002 ರ ವ್ಯಾಪಕ ಕೋಮುದಂಗೆಗಳು ಮತ್ತು ನರಮೇಧ, ಅದರ ಹಿಂದಿನ ಮತ್ತು ಮುಂದಿನ ವರ್ಷಗಳಲ್ಲಿನ ಬಿರುಸಿನ ಅಪಪ್ರಚಾರಗಳು ಈ ಕೋಮುವಾದಿಕರಣದ ಅಡಿಪಾಯ.

ಮೋದಿಯವರು ಮತ್ತಿತರ ನಾಯಕರು ಮತ್ತೆ ಮತ್ತೆ ಎಲ್ಲ ರಾಜ್ಯಗಳ ಚುನಾವಣೆಗಳಲ್ಲಿ ಗುಜರಾತ್ ಅಭಿವೃದ್ಧಿಯ ಮಾದರಿ ಎಂದು ಒತ್ತಿ ಹೇಳುವಾಗ ಅದರ ಹೃದಯದಲ್ಲಿರುವುದು ಈ ಮಾದರಿಯೇ.

ಈ ಮಾದರಿಯ ತೀವ್ರಗಾಮಿ ಕೋಮುವಾದೀಕರಣಕ್ಕೆ ರಾಜ್ಯಗಳಲ್ಲಿ ಮಾತ್ರ ಅಧಿಕಾರ ಇದ್ದರೆ ಸಾಲದು. ಅದು  ಕೋಮುವಾದೀಕರಣಕ್ಕೆ ಹಲವು‌ ಸಾಂವಿಧಾನಿಕ ಮಿತಿಗಳನ್ನು ಹೇರುತ್ತದೆ. ಅದಕ್ಕಾಗಿ ಡಬಲ್ ಎಂಜಿನ್ ಸರ್ಕಾರ ಅಂದರೆ ರಾಜ್ಯಗಳ ಅಧಿಕಾರದ ಜೊತೆಗೆ ಕೇಂದ್ರದಲ್ಲಿ ಕೂಡಾ ಅಧಿಕಾರ ಇರಲೇಬೇಕು. ಗುಜರಾತ್‌ನಲ್ಲಿ 2002 ರ ಕೋಮುದಂಗೆ, ನರಮೇಧ ಸಾಧ್ಯವಾದದ್ದು ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವದಲ್ಲಿದ್ದುದರಿಂದಲೇ. ಗುಜರಾತ್‌ನಲ್ಲಿ ಮೋದಿ ಸರ್ಕಾರ, ದೆಹಲಿಯಲ್ಲಿ ವಾಜಪೇಯಿ ಸರ್ಕಾರ. ಅದ್ವಾನಿ ಗೃಹ ಮಂತ್ರಿ. ಕೇಂದ್ರ ಸರ್ಕಾರವೂ ಬಿಜೆಪಿ ಸರ್ಕಾರವಲ್ಲದೇ ಹೋಗಿದ್ದರೆ, ಅಂದಿನ‌ ರಾಷ್ಟ್ರಪತಿ ನಾರಾಯಣ್‌ರವರು ವಾಜಪೇಯಿಯವರಿಗೆ ನಿರ್ದೇಶಿಸಿದಂತೆ ತಕ್ಷಣವೇ ಮಿಲಿಟರಿ ಕಳಿಸಬಹುದಾಗಿತ್ತು. ರಾಜ್ಯ ಸರ್ಕಾರ ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಬಹುದಾಗಿತ್ತು. ತಕ್ಷಣವೇ ಕೋಮುದಂಗೆ ಎಬ್ಬಿಸಿದವರನ್ನು ಜೈಲಿಗೆ ಅಟ್ಟಬಹುದಾಗಿತ್ತು. ಇದು ರಾಜ್ಯ ಸರ್ಕಾರದಲ್ಲಿ ಮಾತ್ರ ಅಧಿಕಾರದಲ್ಲಿದ್ದಾಗ ಒದಗುವ ಸಂವಿಧಾನಿಕ ಮಿತಿ.

ಯೋಗಿ ಮಾದರಿ ಡಬಲ್ ಎಂಜಿನ್ ಆಡಳಿತ-
ಇಂತಹ ಡಬಲ್ ಎಂಜಿನ್ ಮಾದರಿಯ ಆಡಳಿತದ ದಾರಿಯಲ್ಲಿಯೇ ಯುಪಿಯ ಯೋಗಿ ಆದಿತ್ಯನಾಥರ ಸರ್ಕಾರ ನಡೆಯುತ್ತಿದೆ. ಎಲ್ಲ ಪ್ರಜಾಸತ್ತಾತ್ಮಕ ನೈತಿಕತೆ, ಕಾನೂನುಗಳುಗಳನ್ನು ಗಾಳಿಗೆ ತೂರಿದೆ. ಅದು ಅಸ್ತಿತ್ವಕ್ಕೆ ಬಂದದ್ದೇ ಎಸ್‌ಪಿ ಮತ್ತು ಬಿಎಸ್‌ಪಿ ಎಂಬ ಎರಡು ಪ್ರಾದೇಶಿಕ ಪಕ್ಷಗಳನ್ನು ಕೋಮು ದಂಗೆ,ದ್ವೇಷಗಳ ಮೂಲಕ ಹಿಮ್ಮೆಟ್ಟಿಸಿ ಎಂಬುದನ್ನು ನೆನಪಿನಲ್ಲಿಡೋಣ.

ನಿರಂತರವಾಗಿ ಸಾಧ್ಯವಾದ ಎಲ್ಲ ಅವಕಾಶ, ಸಿಕ್ಕ ಎಲ್ಲ ನೆಪ ಬಳಸಿಕೊಂಡು ಮುಸ್ಲಿಮರ ಬೇಟೆ ಈ ಮಾದರಿಯ ಪ್ರಧಾನ ಅಂಶ. ಅದು ಗೋಮಾಂಸವೋ, ಲವ್ ಜಿಹಾದೋ ಯಾವುದಾದರೂ ಆಯಿತು. ಇನ್ನು ಸಿಎಎ- ಎನ್.ಆರ್.ಸಿ-ಎನ್.ಪಿ.ಆರ್ ವಿರುದ್ಧ ಪ್ರತಿಭಟನೆಗಳಾದರಂತೂ ನೆಪಗಳೂ ಬೇಡ. ಮುಸ್ಲಿಂ ಸಮುದಾಯವನ್ನು ಕೆಣಕಿ ಹೆಚ್ಚು ಹೆಚ್ಚು ತೀವ್ರ ಪ್ರತಿಭಟನೆಗಳಿಗೆ ನೂಕುವುದು, ಅವರು ಇಂತಹ ಪ್ರಸಂಗಗಳಲ್ಲಿಯೂ ಸಂಯಮದಿಂದ ನಡೆದುಕೊಂಡರೆ ಪೋಲೀಸರೇ ಬೆಂಕಿ ಹಚ್ಚಿ ಆಸ್ತಿ ಪಾಸ್ತಿ, ಅಂಗಡಿ ಮುಂಗಟ್ಟು ನಾಶ ಮಾಡುವುದು, ಅದನ್ನು ಮುಸ್ಲಿಮರ ಮೇಲೆ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಸ್ಲಿಮರ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಅದೇ ನೆಪದ ಮೇಲೆ ಇದಕ್ಕಾಗಿ ಒಂದು ಕಾನೂನನ್ನೇ ತರುವುದು.

ಸಂಘಪರಿವಾರದ ಸಂಘಟನೆಗಳಿಗೆ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸಲು, ಹಿಂಸಾಚಾರ, ರೇಪ್, ಕೊಲೆಗಳನ್ನು ನಡೆಸಲು ವಿಶೇಷ ಸ್ವಾತಂತ್ರ್ಯ. ಮುಸ್ಲಿಂ ವ್ಯಕ್ತಿಗಳು ತಮ್ಮ ಮೇಲೆ ನಡೆಯುವ ಇಂತಹ ದುಷ್ಕೃತ್ಯಗಳ ವಿರುದ್ಧ ಸೆಣಸಿದರೆ ಕ್ರೂರ ಪ್ರತೀಕಾರ ಕ್ರಮಗಳನ್ನು ಪೋಲೀಸರು, ಸರ್ಕಾರದ ವಿವಿಧ ಅಂಗಗಳು ಕೈಗೊಳ್ಳುವುದು. ಸರ್ಕಾರದ ಮುಸ್ಲಿಮ್ ನೌಕರರು, ಅಧಿಕಾರಿಗಳ ಮೇಲೆ ನೆಪ ಹೂಡಿ ಕ್ರಮಗಳು, ಅವರ ಹಕ್ಕುಬದ್ಧ ಸಂಬಳ, ಸಾರಿಗೆ, ವರ್ಗಾವಣೆ, ಪದೋನ್ನತಿಗಳಲ್ಲಿ ಅನ್ಯಾಯ. 

ಮುಸ್ಲಿಮರು ಎರಡನೇ ದರ್ಜೆ ಪ್ರಜೆಗಳೆಂದು, ಅವರಿಗೆ ಭಾರತದ ಒಬ್ಬ ಸಾಮಾನ್ಯ ಪ್ರಜೆಗಿರುವ ಯಾವ ಸಾಮಾನ್ಯ ಹಕ್ಕುಗಳೂ ಇಲ್ಲವೆಂಬುದನ್ನು ನಿರೂಪಿಸಲು ಅವರಿಗೆ ಅವಮಾನ‌ ಮಾಡುವ ವಿವಿಧ ರೀತಿಯ ಕುತಂತ್ರಗಳನ್ನು ಮಾಡುವುದು. ಮುಸ್ಲಿಂ ಜನಸಂಖ್ಯೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲೊಂದಾದ ಯುಪಿಯಲ್ಲಿ ಒಬ್ಬ ಮುಸ್ಲಿಂಗೂ ತಮ್ಮ ಪಕ್ಷದ ಟಿಕೆಟ್ ನೀಡದೆ ರಾಜ್ಯದೆಲ್ಲ ಹಿಂದೂಗಳಿಗೆ ಪ್ರಜಾಪ್ರಭುತ್ವ ವಿರೋಧಿ ಸಂದೇಶ ನೀಡುವುದು.

ಒಟ್ಟಾರೆಯಾಗಿ ಮುಸ್ಲಿಂ ಸಮುದಾಯದ ಕಟು ದ್ವೇಷದ ಆಧಾರದ ಮೇಲೆ ಎಲ್ಲ ಹಿಂದೂಗಳ ಮತವನ್ನು ಖಾಯಂ ಆಗಿ ಸೆಳೆಯುವುದು. ಇದನ್ನು ಸಾಧ್ಯಮಾಡಲು ಆಯಕಟ್ಟಿನ ಪ್ರದೇಶಗಳಲ್ಲಿ ಕೋಮುದಂಗೆಗಳನ್ನು ಎಬ್ಬಿಸುವುದು. ಆಯೋಧ್ಯೆಯಲ್ಲಿ‌ ಸಂವಿಧಾನ ವಿರುದ್ಧವಾಗಿ ಹಲವು ಹಿಂದೂತ್ವದ ಆಚರಣೆಗಳು, ವೈಭವಗಳಿಗಾಗಿ ಸರ್ಕಾರದ ಬಜೆಟ್ ವೆಚ್ಚ.

ದಲಿತರ ಮೇಲೆ, ದಲಿತ ಮಹಿಳೆಯರ ಮೇಲೆ ದೌರ್ಜನ್ಯಗಳು, ರೇಪ್, ಕೊಲೆ ಪ್ರಕರಣಗಳು ಹೇರಳ. ದಲಿತ ಚಳುವಳಿಗಳ ಕ್ರಿಯಾಶೀಲರ ಮೇಲೆ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳು, ದಲಿತರ ಮೀಸಲಾತಿ ವಂಚನೆಗೆ ಒಳಗೊಳಗೇ ಹಲ ಹಲವು ನಿಯಮಗಳನ್ನು ರೂಪಿಸುವುದು. ಸುತ್ತೋಲೆಗಳು, ಇವ್ಯಾವೂ ಇಲ್ಲದೆ ಕೇವಲ ಮೌಖಿಕ ಆದೇಶಗಳು,ಒಳಸಂಚುಗಳನ್ನು ಮಾಡುವುದು. ಹಿಂದೂ ಮೇಲ್ಜಾತಿ, ಭೂಮಾಲಕ ಹಿಂದುಳಿದ ಜಾತಿಗಳ ಮತಗಳನ್ನೂ ಸೆಳೆಯುವುದು.

ಮಹಿಳೆಯರ ಮೇಲೆ ವಿವಿಧ ದೌರ್ಜನ್ಯಗಳು, ಹಕ್ಕುಗಳ ನಿರಾಕರಣೆ, ಉದ್ಯೋಗ, ಶಿಕ್ಷಣದ ಅವಕಾಶಗಳ ನಿರಾಕರಣೆಗಳ ಮೂಲಕ ಹಿಂದೂ ಪುರುಷಾಧಿಪತ್ಯದ ಅಹಂಗಳಿಗೆ ನೀರೆರೆದು ಪೋಷಿಸಿ ಅವರ ಮತ ಸೆಳೆಯುವುದು.

ಆಡಳಿತ ಯಂತ್ರದ ಕೋಮುವಾದೀಕರಣ, ಕಾನೂನುಗಳನ್ನು ಉಲ್ಲಂಘಿಸಿ ಮುಸ್ಲಿಂ, ದಲಿತ, ಬಡಜನರ ಮೇಲೆ ಕ್ರಮ ಕೈಗೊಳ್ಳಲು ಉತ್ತೇಜನ.  ಸರ್ಕಾರದ ಯೋಜನೆಗಳಲ್ಲಿ ಮುಸ್ಲಿಂ ಸನುದಾಯಕ್ಕೆ, ದಲಿತರಿಗೆ ನೀಡಬೇಕಾದ ಸೌಲಭ್ಯಗಳ ವಂಚನೆ. ಬಿಜೆಪಿ ಕಾರ್ಯಕರ್ತರಿಗೆ, ಹಿಂದೂತ್ವದ ಅಜೆಂಡಾಗಳಿಗೆ ಶರಣಾದರೆ ಮಾತ್ರ ಯೋಜನೆಗಳು ದಕ್ಕುವುದು. ಉದಾ: ಪುನರ್‌ ಮತಾಂತರವಾದ ಮುಸ್ಲಿಂ, ಕ್ರಿಶ್ಚಿಯನ್ ಬಡಜನರಿಗೆ ಮಾತ್ರ ಮನೆ, ಪಡಿತರ ಚೀಟಿ ಎಂಬ ಒತ್ತಡ.

ಆಡಳಿತದ ಎಲ್ಲ ಅಂಗಗಳಲ್ಲಿ, ಮುಖ್ಯವಾಗಿ ಪೋಲಿಸ್ ಇಲಾಖೆಯಲ್ಲಿ ಗೂಂಡಾ ಪಡೆಗಳು ಮಧ್ಯ ಪ್ರವೇಶಿಸಲು, ತಾವೇ ಅಧಿಕಾರಿಗಳ, ಪೋಲೀಸರ ಅಧಿಕಾರಗಳನ್ನು ಕೈಗೆತ್ತಿಕೊಳ್ಳಲು ಅವಕಾಶ.

ಹೀಗೆ ಹಲವು ಕೋಮುವಾದಿಕರಣದ ಆಯಾಮಗಳನ್ನು, ಮುಖಗಳನ್ನು ವಿಸ್ತರಿಸಿ ಹೇಳಬಹುದು. ಈ ಎಲ್ಲವೂ ಆಡಳಿತದ ವಿಪುಲ ಭ್ರಷ್ಟಾಚಾರ, ಕಾರ್ಪೊರೇಟ್‌ಗಳ ಓಲೈಕೆ, ಕೊರೊನಾ ಕಾಲದ ದುರಾಡಳಿತ, ಅದಕ್ಷತೆ,‌ ‘ಪವಿತ್ರ’ ಗಂಗಾ ನದಿಯಲ್ಲಿ ಸಾವಿರಾರು ಹೆಣಗಳ ಸಾಲು ಸಾಲು,   ಸಾವು, ಸೋಂಕುಗಳ ಸುಳ್ಳು ಲೆಕ್ಕಗಳು ಕೋಮುವಾದೀಕರಣದ ಮರೆಯಲ್ಲಿ ಮಾಡಿದ ಸಾಧನೆಗಳು.

ಯಡಿಯೂರಪ್ಪನವರು, ಡಬಲ್ ಎಂಜಿನ್ ಸರ್ಕಾರ ಬಂದ ಮೇಲೂ ಹಿಂದೆ 2008 ರಲ್ಲಿ ಸಿಂಗಲ್ ಎಂಜಿನ್ ಸರ್ಕಾರದ ಮೂರು ವರ್ಷಗಳಲ್ಲಿ ಯಾವ ನೀತಿ ಅನುಸರಿಸುತ್ತಿದ್ದರೋ ಸರಿ ಸುಮಾರು ಅದನ್ನೇ  ಮುಂದುವರೆಸ ಬಯಸಿದರು. ಆದರೆ ಈ ಡಬಲ್ ಎಂಜಿನ್ ಸರ್ಕಾರದಿಂದ ಒಂದು ಬಹು ದೊಡ್ಡ ಸಮಸ್ಯೆ ಮಾತ್ರ ಎದುರಾಗಿತ್ತು. ರಾಜ್ಯ ಸರ್ಕಾರಗಳ ಸಂಪನ್ಮೂಲಕ್ಕೆ ಬಹು ದೊಡ್ಡ ಕಡಿತ, ಕೇಂದ್ರ ಸರ್ಕಾರಗಳು ಹಿಂದೆಲ್ಲ ನಿರ್ವಹಿಸಿದ್ದ ಹೊಣೆಗಳು ರಾಜ್ಯ ಸರ್ಕಾರಗಳ ಹೆಗಲಿಗೆ ನೂಕಲ್ಪಟ್ಟಿದ್ದರಿಂದ ಮತ್ತಷ್ಟು ಹೆಚ್ಚು ಹೊರೆ. ಪ್ರವಾಹ ಮತ್ತು ಕೊರೊನಾ ಸಂಕಟಗಳ ಹಾನಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತಿದ್ದ ಅಲ್ಪ ಸ್ವಲ್ಪ ಪರಿಹಾರದಲ್ಲಿಯೂ ದೊಡ್ಡ ಕಡಿತ. ಜೊತೆಗೆ ಕೊರೊನಾ ಲಾಕ್‌ಡೌನ್‌ನ ಕಾರಣಕ್ಕೆ ಸಂಪನ್ಮೂಲದ ದೊಡ್ಡ ಕೊರತೆ ಆದರೆ ರೋಗ ನಿರ್ವಹಣೆಯ ಅಧಿಕ ವೆಚ್ಚ. ಅದರಿಂದಾಗಿ ಹಿಂದಿನಂತೆ ಅವರು ಹೊಸ ‘ಜನಪ್ರಿಯ’ ಯೋಜನೆಗಳನ್ನು ರೂಪಿಸಲಾಗಲಿಲ್ಲ. ಕೊರೋನಾ ಕಾಲದ ಜನರ ಸಂಕಟಗಳ ನಿವಾರಣೆಗೆ ನೆರೆ ಹೊರೆ ರಾಜ್ಯಗಳು ಜನರಿಗೆ ನೀಡಿದ ಪರಿಹಾರಗಳ ಒಂದು ತುಣುಕನ್ನೂ ನೀಡಲಾಗಲಿಲ್ಲ.

ಬಿಜೆಪಿಯ ಆರ್ಥಿಕ ನೀತಿಯ ಇಂತಹ ತೊಡಕುಗಳನ್ನು ನಿರ್ವಹಿಸಲೆಂದೇ ಬಿಜೆಪಿಯ ಬತ್ತಳಿಕೆಯಲ್ಲಿ ಕೋಮುವಾದೀಕರಣ ಎಂಬ ರಾಮಬಾಣ ಇರುವುದು. ಆದರೆ ಯಡಿಯೂರಪ್ಪನವರು ಈ ಎರಡು ವರ್ಷಗಳಲ್ಲಿ ಗುಜರಾತ್ ಮತ್ತು ಯುಪಿ ಮಾದರಿಯಲ್ಲಿ ಡಬಲ್ ಎಂಜಿನ್ ಸರ್ಕಾರ ನೀಡುವ ‘ವಿಶೇಷ’ ಸವಲತ್ತನ್ನು ಬಳಸಿಕೊಳ್ಳಲಿಲ್ಲ.

ಕೊರೋನಾ ಕಾಲದಲ್ಲಿ ದೆಹಲಿಯಲ್ಲಿನ ತಬ್ಲಿಗಿ ಸೋಂಕಿನ ಬಹು ದೊಡ್ಡ ಅಪಪ್ರಚಾರದ ಧಾಳಿಯನ್ನು ಆರೆಸ್ಸೆಸ್ ಇಲ್ಲಿ ಕೂಡಾ ಬಳಸಿಕೊಂಡಿತು, ಪಾದರಾಯನಪುರದ ಕೊರೋನಾ ಸೋಂಕುಗಳನ್ನು ಕೂಡಾ ಅದೇ ಮಾದರಿಯಲ್ಲಿ ಕೋಮುವಾದೀಕರಣಗೊಳಿಸಿ ಅಲ್ಲಿಯ ಮುಸ್ಲಿಂ ಸಮುದಾಯಕ್ಕೆ ಆರೆಸ್ಸೆಸ್ ಪಡೆ ಇಲ್ಲ ಸಲ್ಲದ ಕಿರುಕುಳಗಳನ್ನು ನೀಡಲು ಸರ್ಕಾರದ ಯಂತ್ರವನ್ನು ಬಳಸಿಕೊಂಡರು. ಬೆಂಗಳೂರಿನ ಬೆಡ್ ಕೊರತೆಯ ಕಾಲದ ಭ್ರಷ್ಟಾಚಾರವನ್ನು ಕೋಮುವಾದೀಕರಣಗೊಳಿಸಲು ಆರೆಸ್ಸೆಸ್ ವಟುವಾದ ಸಂಸದ ಬಳಸಿಕೊಂಡರು ಕೊರೋನಾ ಪರಿಹಾರದ ಕಾರ್ಯವನ್ನು ಬಿಜೆಪಿ ಕೈಯಾಳುಗಳ ಕೈಯಲ್ಲಿಟ್ಟು ಅದನ್ನು ರಾಜಕೀಯಗೊಳಿಸುವ ಮೋದಿ ಮಾದರಿಯನ್ನು ಅನುಸರಿಸಿದರು. ಇಂತಹ ಹೊಸ ಕಾರ್ಯಕ್ರಮಗಳ ಜೊತೆಗೆ ಕರಾವಳಿಯಲ್ಲಿ ಆರೆಸ್ಸೆಸ್ ಮತ್ತದರ ಪರಿವಾರ ನಾಲ್ಕು ದಶಕಗಳ ಕಾಲದಿಂದ ನಡೆಸುತ್ತಿರುವ ಕೋಮು ದ್ವೇಷದ, ಮುಸ್ಲಿಮರಿಗೆ ಕಿರುಕುಳ ನೀಡುವ ‘ಕೈಂಕರ್ಯ’ವನ್ನು ಮುಂದುವರೆಸಿದರು. ಹೀಗೆ ಈ ಅವಧಿಯ ಕೋಮುವಾದೀಕರಣದ ದುಷ್ಟ ಕ್ರಮಗಳ ಪಟ್ಟಿ ಮಾಡಬಹುದು.

ಆದರೆ ಮೇಲೆ ವಿವರಿಸಿದ ಯೋಗಿ ಪಡೆಯ ತೀವ್ರವಾದಿ ಕೋಮುವಾದೀಕರಣದ ಕ್ರಮಗಳು ಕಾಣಲಿಲ್ಲ. ಇದು ಯಡಿಯೂರಪ್ಪನವರ ಬಗ್ಗೆ ಕೇಶವಕೃಪಾ,ನಾಗಪುರ ಮತ್ತು ಬಿಜೆಪಿಯೊಳಗಿನ  ಆರೆಸ್ಸೆಸ್ ಪಡೆಯ ಅಸಂತೃಪ್ತಿ ಮತ್ತು ಸಿಟ್ಟಿನ ಮೂಲ. ಗುಜರಾತಿನಂತೆ  ಕರ್ನಾಟಕವನ್ನು ಬಿಜೆಪಿಯ ಭದ್ರ ನೆಲೆಯಾಗಿಸಲು ಅಂತಹುದೇ ಕೋಮುದಂಗೆ, ವ್ಯಾಪಕ ಹಿಂಸಾಚಾರ, ಮುಸ್ಲಿಂ ಬೇಟೆ, ಇವುಗಳ ಮೂಲಕ ಅಳಿಸಲಾಗದ ಕೋಮು ವಿಭಜನೆಗಳನ್ನು ತರವುದು ಆರೆಸ್ಸೆಸ್ ಅಜೆಂಡಾ. ಆದರೆ ಯಡಿಯೂರಪ್ಪ ಈ ‘ಮಾದರಿ’ಗೆ ಸುಮುಖರಾಗಿಲ್ಲ, ಸಹಕಾರ ನೀಡುತ್ತಿಲ್ಲ. ಈಗ ಡಬಲ್ ಎಂಜಿನ್ ಸರ್ಕಾರ ನೀಡಿದ ಅಪೂರ್ವ ಸದವಕಾಶವನ್ನು ಬಳಸಿಕೊಳ್ಳದಿದ್ದರೆ ಕರ್ನಾಟಕದಿಂದ ಮುಂದೆಲ್ಲ ನಿರೀಕ್ಷಿಸಿದಷ್ಟು ಲೋಕಸಭಾ ಸದಸ್ಯರನ್ನು ಪಡೆಯುವುದು ಸಾಧ್ಯವಾಗದು ಎಂಬ ಆತಂಕ.

ಹಲವು ರಾಜ್ಯಗಳಲ್ಲಿ ಸಂಸತ್ ಸ್ಥಾನಗಳು ಕುಸಿಯುವುದು, ಕುಗ್ಗುವುದು ಕಟ್ಟಿಟ್ಟ ಬುತ್ತಿ ಎಂಬ ಗೋಡೆ ಬರಹ ಕಣ್ಣಿಗೆ ಢಾಳಾಗಿ ಹೊಡೆದಷ್ಟೂ ಅವರಿಗೆ  ಆತಂಕಗಳು ಹೆಚ್ಚುತ್ತಾ ಹೋದವು. ಆತಂಕಗಳಿಗೆ ಪ್ರಮಾಣವಾಗಿ ಯಡಿಯೂರಪ್ಪನವರ ಬಗ್ಗೆ ಅವರ ಸಿಟ್ಟೂ ಹೆಚ್ಚುತ್ತಾ ಹೋಯಿತು.

ಇದೇ ಯಡಿಯೂರಪ್ಪನವರನ್ನು ಬಿಜೆಪಿ ಸರ್ಕಾರದ ಎರಡೂ ಅವಧಿಯಲ್ಲಿ ಪೂರ್ಣಾವಧಿ ಪೂರೈಸದೇ ಮೊಟಕುಗೊಳಿಸಲು ಮುಖ್ಯ ಕಾರಣ. ಅದರ ಜೊತೆಗೆ ಅಷ್ಟೇ ಪ್ರಮುಖವಾದ ಕಾರಣ ಯಡಿಯೂರಪ್ಪನವರ ಜಾತೀವಾದ ಮತ್ತದರ ಬಲದ ಮೇಲೆ ತಮ್ಮದೇ ಸಾಮ್ರಾಜ್ಯ ಕಟ್ಟುವ ಮಹತ್ವಾಕಾಂಕ್ಷೆ.

ಕೋಮುವಾದದ ವಿರುದ್ಧ ಜಾತೀವಾದ ಮತ್ತು ಭ್ರಷ್ಟಾಚಾರ :
ಜಾತೀವಾದವನ್ನೂ ಕೋಮುವಾದದ ಬೆಳವಣಿಗೆಗೆ ಆರೆಸ್ಸೆಸ್ ಬಹಳ ಯಶಸ್ವಿಯಾಗಿ ಅದು ಹುಟ್ಟಿದಂದಿನಿಂದಲೇ ಬಳಸಿಕೊಂಡಿದೆ. ಈಗ ಬಿಜೆಪಿ, ಮೋ-ಶಾ ನಾಯಕತ್ವದಲ್ಲಿ ಸೋಷಿಯಲ್ ಎಂಜಿನಿಯರಿಂಗ್ ಎಂಬ ವಿಜ್ಞಾನವನ್ನಾಗಿಸಿದೆ. ಭ್ರಷ್ಟಾಚಾರವನ್ನೂ ಕೂಡ ಅತ್ಯಂತ ಯಶಸ್ವಿಯಾಗಿ, ಕಾನೂನುಬದ್ಧಗೊಳಿಸಿ ಬೃಹತ್ ಪ್ರಮಾಣದಲ್ಲಿ ಮೋ- ಶಾ ಬಳಸುತ್ತಿರುವುದು ಕಣ್ಣಿಗೆ ಹೊಡೆಯುವ ವಿಷಯ. ಅದು ನಮ್ಮ ಕಣ್ಷಿಗೆ ಬಿದ್ದಿಲ್ಲ ಎನ್ನುವವರು ಕಣ್ಣಿದ್ದೂ ನೋಡಲು ನಿರಾಕರಿಸುವವರು.

ಆದರೆ ಹಲವು ಸಂದರ್ಭಗಳಲ್ಲಿ ಜಾತಿವಾದ, ಭ್ರಷ್ಟಾಚಾರ ಕೋಮುವಾದಕ್ಕೆ ಎದುರಾಳಿಯೂ ಹೌದು. ಯಡಿಯೂರಪ್ಪನವರ ಜಾತಿವಾದ ಕರ್ನಾಟಕದಲ್ಲಿ ಆರೆಸ್ಸೆಸ್- ಬಿಜೆಪಿಗೆ ಸದ್ಯಕ್ಕಂತೂ ನುಂಗಲಾರದ ತುತ್ತಾಗಿದೆ. ಇಲ್ಲಿ ಅವರ ಗುರಿ ಸಾಧನೆಗೆ ಬಹು ದೊಡ್ಡ ಅಡ್ಡಿಯಾಗಿದೆ.
ಯಡಿಯೂರಪ್ಪನವರಿಗೆ ಲಿಂಗಾಯತ ಸಮುದಾಯದ ಮೇಲೆ ಹಿಡಿತ ದಕ್ಕಿದ್ದೇ  ಕರ್ನಾಟಕದ ರಾಜಕೀಯ ಇತಿಹಾಸದ ಒಂದು ಮುಖ್ಯ ಅಧ್ಯಾಯ. 

ಒಂದೂವರೆ ದಶಕದ ಕಾಲ ಕರ್ನಾಟಕವನ್ನಾಳಿ ಎದುರಿಲ್ಲದಂತೆ ಮೆರೆದ ಲಿಂಗಾಯತ ಭೂಮಾಲಕ, ಶ್ರೀಮಂತ ಪಟ್ಟ ಭದ್ರ ಹಿತಗಳ ಪ್ರತಿನಿಧಿಗಳು ಮೂರು ದಶಕಗಳಿಗೂ ಹೆಚ್ಚು ಕಾಲ ರಾಜಕೀಯವಾಗಿ ಅನಾಥರಾಗಿದ್ದರು. ಹೆಗ್ಗಡೆ- ದೇವೇಗೌಡ ಸಂಘರ್ಷ, ವಾಜಪೇಯಿ – ಜಾರ್ಜ್ ಫರ್ನಾಂಡೀಸ್- ಹೆಗ್ಗಡೆ  ಸಂಚು ಜನತಾದಳವನ್ನು ಒಡೆದದ್ದು, ಕೊನೆಗೆ ಕುಮಾರಸ್ವಾಮಿಯ ಜನದ್ರೋಹ ಮೊದಲಾದ ಕಾರಣಗಳಿಗಾಗಿ ಯಡಿಯೂರಪ್ಪನವರಿಗೆ ಲಿಂಗಾಯತ ಮತಗಳ ಮೇಲೆ ಹಿಡಿತ ದಕ್ಕಿದೆ. ಅದರಲ್ಲಿ ಅವರ ಶ್ರಮವೂ ಸ್ವಲ್ಪ ಪಾತ್ರ ವಹಿಸಿದೆ.

ಇದನ್ನು ಆಧರಿಸಿಯೇ ಬಿಜೆಪಿಯನ್ನು 2008 ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ತರಲು ಯಡಿಯೂರಪ್ಪನವರಿಗೆ ಸಾಧ್ಯವಾಯಿತು. ಜಾತಿ ಸಮುದಾಯದ ಮತಗಳ ಮೇಲಿನ  ಹಿಡಿತ ಎಂಬುದು ಭಾರತದ ಎರಡು ಸಾವಿರ ವರ್ಷಗಳ ಕಾಲದ ಜಾತಿ ವ್ಯವಸ್ಥೆಯಿಂದ ನಿರ್ಮಾಣವಾದ ರಾಜಕೀಯ ಆಸ್ತಿ. ಇದರ ಹಿಡಿತ ಸಾಧಿಸಿದವರಿಗೆ ಇದು ಬೇರೆಲ್ಲ ಸ್ವಯಾರ್ಜಿತ ಆಸ್ತಿಯಂತೆಯೇ ಕಾಣುತ್ತದೆ. ತಮ್ಮ ಮುಂದಿನ‌ ಕುಟುಂಬಕ್ಕೆ, ವಾರಸುದಾರರಿಗೆ ವರ್ಗಾಯಿಸುವ ಹಕ್ಕುಳ್ಳ ಪಿತ್ರಾರ್ಜಿತ ಆಸ್ತಿಯಾಗಿಬಿಟ್ಟಿದೆ. ಪ್ರಾದೇಶಿಕ ಪಕ್ಷಗಳಲ್ಲಿ ಇದು ಬಹಳ ಸರಳವಾಗಿ , ಸಹಜವಾಗಿ ನಡೆದು ಭಾರತದ ರಾಜಕೀಯ ಆಸ್ತಿ ವರ್ಗಾವಣೆಯ ಅಘೋಷಿತ ಸಿವಿಲ್ ಕೋಡ್‌ನ ಭಾಗವಾಗಿ ಬಿಟ್ಟಿದೆ.

ಆದರೆ ಯಡಿಯೂರಪ್ಪನವರು ಬಿಜೆಪಿ ಎಂಬ ರಾಷ್ಟ್ರೀಯ ಪಕ್ಷದ ಒಳಗಿನಿಂದ ಈ ಆಸ್ತಿಯನ್ನು ದಕ್ಕಿಸಿಕೊಂಡಿದ್ದಾರೆಂಬುದೇ ಈಗ ಬಗೆಹರುಯಲಾರದ ಸಮಸ್ಯೆ. ಆರೆಸ್ಸೆಸ್- ಬಿಜೆಪಿ ಮತ್ತು ಯಡಿಯೂರಪ್ಪನವರ ಮಧ್ಯೆ ಇರುವ ಸಂಘರ್ಷ ಈ ರಾಜಕೀಯ ಆಸ್ತಿಯ ವರ್ಗಾವಣೆ ಬಗ್ಗೆ. ಅದನ್ನು ಬಿಜೆಪಿಗೆ ವರ್ಗಾಯಿಸಬೇಕೆಂದು ಆರೆಸ್ಸೆಸ್ ಒತ್ತಾಯ. ಅದು ತಮ್ಮ ಸ್ವಯಾರ್ಜಿತ. ನನ್ನ ಕುಟುಂಬಕ್ಕೆ ವರ್ಗಾಯಿಸುವುದು ನನ್ನ ಆಜನ್ಮ ಹಕ್ಕು ಎಂದು ಯಡಿಯೂರಪ್ಪನವರ ಹಠ.

ಅವರು ತಮ್ಮ ಹಿಂದಿನ ಮೂರು ವರ್ಷಗಳ ಅಧಿಕಾರಾವಧಿಯನ್ನೂ, ಈಗಿನ ಎರಡು ವರ್ಷಗಳ ಅಧಿಕಾರಾವಧಿಯನ್ನೂ ಒಂದು ಕಡೆ ಈ ಆಸ್ತಿಯನ್ನು ವೃದ್ಧಿಸಲು ಅಂದರೆ ಲಿಂಗಾಯತರ ಮತಗಳ ಮೇಲೆ ತಮ್ಮ ಹಿಡಿತವನ್ನು ಬಲಗೊಳಿಸಲು,ಮಠಗಳಿಗೆ ಕಾಣಿಕೆ, ಕೊಡುಗೆಗಳನ್ನು ನೀಡಲು ಬಳಸಿಕೊಂಡರು. ಮತ್ತೊಂದು ಕಡೆ ಅದು ತಮ್ಮ ಕುಟುಂಬದ ಹೆಸರಿಗೇ ನೋಂದಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಂಡರು. ಹಿಂದಿನ ಅವಧಿಯಲ್ಲಿ ರಾಘವೇಂದ್ರನ, ಈಗ ವಿಜಯೇಂದ್ರನ ಪ್ರಾಬಲ್ಯ ಎಲ್ಲರಿಗೂ ತಿಳಿದದ್ದೇ. ಈ ಮಧ್ಯೆ ಶೋಭಾ ಕರಂದಾಜೆಯವರೂ ಈ ಪ್ರಕ್ರಿಯೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

ಯಡಿಯೂರಪ್ಪನವರ ಅಪರಿಮಿತ ಭ್ರಷ್ಟಾಚಾರವೂ ಇದೇ ಗುರಿಯನ್ನು ಹೊಂದಿದೆ. ಈ ಮತಗಳ ಮೇಲಿನ ಹಿಡಿತ ಎಂಬ ನಿರಾಕಾರ ಆಸ್ತಿಯ ನೋಂದಾವಣೆ ಬಹಳ ದುಬಾರಿ. ಘಟಾನುಘಟಿಗಳೇ ಇದರಲ್ಲಿ ಸೋತು ಕೈ ಚೆಲ್ಲಿದ್ದಾರೆ. ಸಿದ್ಧರಾಮಯ್ಯನವರಂತೆ ಪ್ರಾದೇಶಿಕ ಪಕ್ಷ ಸ್ಥಾಪಿಸುವುದನ್ನು ಕೈ ಬಿಟ್ಟು ಕಾಂಗ್ರೆಸ್ ಸೇರಿ ಅದರಲ್ಲೇ ಸೆಣಸುತ್ತಿದ್ದಾರೆ. ದೇವೇಗೌಡರು ಇಳಿವಯಸ್ಸಿನಲ್ಲೂ  ಬೆವರಿಳಿಸುತ್ತಿದ್ದಾರೆ‌.

ಯಡಿಯೂರಪ್ಪನವರೂ ಪ್ರಾದೇಶಿಕ ಪಕ್ಷ ಸ್ಥಾಪಿಸಿ ತಾವೂ ಸೋತು, ಬಿಜೆಪಿಯನ್ನೂ ಸೋಲಿಸಿ ಇದು ಎಷ್ಟು ದುಬಾರಿ ಎಂಬ ಪಾಠ ಕಲಿತಿದ್ದಾರೆ. ಈ ದುಬಾರಿ ನೋಂದಾವಣೆಯ ವೆಚ್ಚ ಸಂಪಾದಿಸಲು ಅವಕಾಶವಾಗಲೆಂದೇ ಮತ್ತೆ ಬಿಜೆಪಿ ಸೇರಿದ್ದು. ನಂತರ ಇನ್ನಿಲ್ಲದ ಸರ್ಕಸ್ ಮಾಡಿ, ದುಬಾರಿ ಬಂಡವಾಳ ಹೂಡಿ  ಸರ್ಕಾರ ಬೀಳಿಸಿ ಸರ್ಕಾರ ರಚಿಸಿದ್ದು. ಯಡಿಯೂರಪ್ಪನವರು ಯೋಗಿಯಂತೆ ತೀವ್ರ ಕೋಮುವಾದೀಕರಣಕ್ಕೆ ಕೈ ಹಾಕದಿದ್ದುದು ಕೂಡ ತಮ್ಮ ಆಸ್ತಿ ಬಿಜೆಪಿಯ ಹೆಸರಿಗೆ ವರ್ಗಾವಣಸಯಾಗುವುದನ್ನು ತಪ್ಪಿಸಲೆಂದೇ ಅಲ್ಲವೇ ? ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಆರೆಸ್ಸೆಸ್ ಭಾಗವಾದ, ಹಲವು ಕಾಲ ಆರೆಸ್ಸೆಸ್ ಕಾರ್ಯವಾಹರಾಗಿ ಕೂಡ ಕೆಲಸ ಮಾಡಿದ ಯಡಿಯೂರಪ್ಪನವರಿಗೆ ಕೋಮು ದ್ವೇಷದ ಸಿದ್ಧಾಂತ ಮತ್ತು ರಾಜಕಾರಣ ಅಪರಿಚಿತವೇನಲ್ಲವಲ್ಲ! 

ಆರೆಸ್ಸೆಸ್ – ಬಿಜೆಪಿ ಈ ಆಸ್ತಿಯನ್ನು ಯಡಿಯೂರಪ್ಪನವರು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳುವ ಪ್ರಯತ್ನ ತಡೆಯುವ ಭಾಗವಾಗಿ  ಅವರ ಮೇಲೆ ಅಪಾದನೆಗಳ ಸರಮಾಲೆ ಹೊರಿಸಲಾರಂಭಿಸಿತು. ಅದಕ್ಕೆ ಬಹಳ ಜಾಣತನದಿಂದ ತಮ್ಮ ನೆಚ್ಚಿನ ಆರೆಸ್ಸೆಸ್ ಭಂಟರನ್ನು ಬಳಸದೆ ಯಡಿಯೂರಪ್ಪನವರ ಮಾಜಿ ಭಂಟರನ್ನೇ ಬಳಸಿತು ಎಂಬುದೊಂದು ಅಡಿ ಟಿಪ್ಪಣಿ.

ಈ ಸಂಘರ್ಷದ ಮೊದಲ ಸುತ್ತಿನಲ್ಲಿ ಎರಡೂ ಕಡೆಗೆ ಪಾಯಿಂಟುಗಳು ದಕ್ಕಿವೆ. ಯಡಿಯೂರಪ್ಪನವರು ಸೋತರೂ ಅದರಲ್ಲಿ ಹೆಚ್ಚು ಭಾಗ ಮತ್ತೆ ಪಡೆದುಕೊಂಡಿದ್ದಾರೆಂಬುದು ಮೇಲ್ನೋಟವಷ್ಟೇ.

ಬಸವರಾಜ ಬೊಮ್ಮಾಯಿಯವರು ಈಗ ಇಬ್ಬರ ಕೈಯಲ್ಲಿನ ದಾಳ. ಇದರಲ್ಲಿ ಲಿಂಗಾಯತ ಮತಗಳನ್ನು ಬಿಜೆಪಿಗೆ ವರ್ಗಾಯಿಸಲು ಬಸವರಾಜ ಬೊಮ್ಮಾಯಿಯವರನ್ನು ಬಳಸಬೇಕೆಂಬ ಬಿಜೆಪಿಯ ಕಾಂಕ್ಷೆ ಗೆಲ್ಲುತ್ತದೋ ಅಥವಾ ಅವರನ್ನು ತಮ್ಮ ಆಸ್ತಿ ವೃದ್ಧಿಯ ಸಾಧನವಾಗಿ ಮತ್ತು ಅದನ್ನು ತಮ್ಮ ಪರವಾಗಿ ರಕ್ಷಿಸಿ ಮುಂದೆ ತಮ್ಮ ವಾರಸುದಾರರಿಗೆ ವರ್ಗಾಯಿಸುವ  ಮಧ್ಯಂತರ ಏಜೆನ್ಸಿಯಾಗಿ ಬಳಸಿಕೊಳ್ಳುವುದರಲ್ಲಿ ಯಡಿಯೂರಪ್ಪ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಾಗಿದೆ. ಬೊಮ್ಮಾಯಿಯವರ ದೆಹಲಿ ಭೇಟಿಯಲ್ಲಿ ಮೋ-ಶಾರ ಜೊತೆಗಿನ ಸಾರಾಂಶ ಸಚಿವ ಸಂಪುಟ ರಚನೆಗಿಂತ ಈ ಅಂಶವೇ ಪ್ರಧಾನವಾಗಿದೆಯೆಂಬಂತೆ ಕಾಣುತ್ತಿದೆ. ಸಚಿವ ಸಂಪುಟ ರಚನೆ ಎಂಬುದು ಈ ಆಸ್ತಿ ತಿಕ್ಕಾಟದ ದೊಡ್ಡ ರಾಜಕೀಯ ನಾಟಕದ ಒಂದು ಅಂಕ ಮಾತ್ರ.

‍ಲೇಖಕರು Admin

July 31, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: