ಜಿ ಎನ್ ನಾಗರಾಜ್ ಅಂಕಣ- ಬಾರತದಲ್ಲಿ ವಿಶ್ವದ ಮೊದಲ ವೈಜ್ಞಾನಿಕ ಚಿಂತನೆ ಮತ್ತು ಪ್ರಯೋಗ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

42

ಎಲೈ ವತ್ಸನೇ, ಈ ಉಪ್ಪನ್ನು ನೀರಿನಲ್ಲಿ ಹಾಕಿ ಅನಂತರ ಬೆಳಗ್ಗೆ ನನ್ನ ಬಳಿಗೆ ತೆಗೆದುಕೊಂಡು ಬಾ.
ಶ್ವೇತಕೇತುವು ಹಾಗೇ ಮಾಡಿದನು.
(ಲವಣ ಮೇತದುದಕೇs ವಧಾಯಾಥ ಮಾ ಪ್ರಾತರುಪಸೀದಥಾ, ಇತಿ ಸ ಹ ತಥಾ ಚಕಾರ ಛಾಂದೋಗ್ಯ ಉಪನಿಷತ್ತು- 6-13-1)
ಬೆಳಗ್ಗೆ ಉದ್ದಾಲಕ : ವತ್ಸ ನಿನ್ನೆ ರಾತ್ರಿ ಯಾವ ಉಪ್ಪನ್ನು ನೀರಿನಲ್ಲಿ ಹಾಕಿದೆಯಲ್ಲ ಅದನ್ಬು ತೆಗೆದುಕೊಂಡು ಬಾ.
ಶ್ವೇತಕೇತುವು ಅದನ್ನು ಎಷ್ಟು ಹುಡುಕಿದರೂ ಕಂಡು ಹಿಡಿಯಲಾಗಲಿಲ್ಲ. ಏಕೆಂದರೆ ಅದು ನೀರಿನಲ್ಲಿ ಕರಗಿ ಹೋಗಿತ್ತು.
ಉದ್ದಾಲಕ : ವತ್ಸ , ಆ ನೀರಿನ ಮೇಲ್ಭಾಗವನ್ನು ಕುಡಿ.ಹೇಗಿದೆ ?
ಶ್ವೇತಕೇತು : ಉಪ್ಪಾಗಿದೆ.
ಉದ್ದಾಲಕ : ಈಗ ನೀರಿನ‌ ಮಧ್ಯಭಾಗದಿಂದ ಕುಡಿ. ಹೇಗಿದೆ ?
ಶ್ವೇತಕೇತು : ಉಪ್ಪಾಗಿದೆ.
ಉದ್ದಾಲಕ : ಈಗ ನೀರಿನ ಕೆಳಭಾಗದಿಂದ ಕುಡಿ . ಹೇಗಿದೆ ?
ಶ್ವೇತಕೇತು : ಉಪ್ಪಾಗಿದೆ. ರಾತ್ರಿ ನೀರಿನಲ್ಲಿ ಹಾಕಿದ್ದು ಅದರಲ್ಲಿಯೇ ಇದೆ.
ಉದ್ದಾಲಕ : ಅಲ್ಲಿಯೇ ಇದ್ದರೂ ನೀನು ಅದನ್ನು ಕಂಡು ಹಿಡಿಯದಾದೆಯಲ್ಲ. ಅಲ್ಲಿಯೇ ಇದೆಯಲ್ಲ.  ( 6-13-2 )

ಇದನ್ನು ಓದಿದಾಗ ಓ ! ಇದೂ ಉಪನಿಷತ್ತಿನಲ್ಲಿದೆಯೇ ! ಅರೆ , ಇದು ನ್ಯಾಷನಲ್ ಹೈಸ್ಕೂಲಿನ ನಮ್ಮ ರಸಾಯನ ಶಾಸ್ತ್ರದ ಮೇಷ್ಟ್ರು ಪ್ರಯೋಗಾಲಯದಲ್ಲಿ ದ್ರವ, ದ್ರಾವಣಗಳ ( liquids and solutions ) ಲಕ್ಷಣಗಳ ಬಗ್ಗೆ ನಮ್ಮಿಂದ ಮಾಡಿಸಿದ ಪ್ರಯೋಗಗಳಂತೆಯೇ ಇದೆಯಲ್ಲ.‌ ಕರಗುವ ವಸ್ತುವಿನ ಅಣುಗಳು ಹೇಗೆ ದ್ರವಗಳ  ಅಣುಗಳ ಜೊತೆ ಬೆರೆತು ಹೋಗಿರುತ್ತದೆ‌ ಎಂದು ವಿವರಿಸಿದಂತೆಯೇ ಇದೆಯಲ್ಲ ಎನಿಸಿತು.

ಮತ್ತೂ ಒಂದು ಪ್ರಯೋಗ ನೋಡಿ :
ವತ್ಸ,ಆ ದೊಡ್ಡ ಆಲದ ಮರದ ಹಣ್ಣನ್ನು ತೆಗೆದುಕೊಂಡು ಬಾ.
ತಂದೆನು ಮಾನ್ಯನೇ.
ಒಡೆದು ನೋಡು.
ಒಡೆದೆನು ಮಾನ್ಯನೇ,
ಅದರಲ್ಲಿ ಏನು ಕಾಣುತ್ತದೆ ?
ಅಣುವಿಂತಹ ಬೀಜಗಳು ಕಾಣುತ್ತಿದೆ.
ಅವುಗಳಲ್ಲಿ ಒಂದನ್ನು ಒಡೆದು ನೋಡು.
ಒಡೆದೆನು ಮಾನ್ಯನೇ.
ಏನು ಕಾಣುತ್ತದೆ ?
ಕಣ್ಣಿಗೇನೂ ಕಾಣುವುದಿಲ್ಲ , ಮಾನ್ಯನೇ.
ವತ್ಸನೇ,  ಯಾವ ಸೂಕ್ಷ್ಮಾಂಶ ನಿನ್ನ ಕಣ್ಣಿಗೆ ಕಾಣದಾಗಿದೆಯೋ ಆ ಸೂಕ್ಷ್ಮಾಂಶದಿಂದಲೇ ದೊಡ್ಡ ಆಲದ ಮರ ಹುಟ್ಟಿದೆ. ವತ್ಸನೇ ಶ್ರದ್ಧೆಯಿಂದ ಗಮನಿಸು, ಕಲಿ.

ಇದೂ ಕೂಡಾ ನಮ್ಮ ಜೀವಶಾಸ್ತ್ರದ ಮೇಷ್ಟ್ರು ಕಲಿಸಿದ ಬೀಜದ ಭಾಗಗಳು, ಬೀಜದಿಂದ ಸಸ್ಯಗಳು ಮೊಳಕೆಯೊಡೆದು ಬೆಳೆಯುವ ವಿಧಾನದ ಬಗ್ಗೆ ಮಾಡಿಸಿದ ಪ್ರಯೋಗಗಳಂತೆಯೇ ಕಂಡವು.

ಉಪನಿಷತ್ತುಗಳ ತುಂಬೆಲ್ಲ ತಲೆ ಚಿಟ್ಟು ಹಿಡಿಸುವಂತಹ ಆತ್ಮದ ಅರಿವು , ಬ್ರಹ್ಮಜ್ಞಾನದ ವಿಷಯವೇ ತುಂಬಿಕೊಂಡಿವೆ ಎಂದೇ ಹಲವು ಉಪನ್ಯಾಸ, ಗ್ರಂಥಗಳಲ್ಲಿ ಕಂಡಿದ್ದ ನನಗೆ ಅಚ್ಚರಿ ಎನಿಸಿತು. ಅವುಗಳ ಬಗ್ಗೆ ಹೊಸದಾದ ಬೇರೆಯೇ ಅಭಿಪ್ರಾಯವನ್ನು ಮೂಡಿಸಿತು.    ಬಾರತದ ತತ್ವಶಾಸ್ತ್ರವೆಂದರೆ ಬ್ರಹ್ಮಜ್ಞಾನ ಎಂದು ಬಿಂಬಿಸಲಾಗಿದೆ. ಎಲ್ಲೆಡೆಯಲ್ಲೂ ನಡೆಯುವ ಉಪನ್ಯಾಸಗಳು ಅವುಗಳನ್ನೇ ಭೋರ್ಗರೆಯುತ್ತಿರುತ್ತವೆ. ಈ ವಿಷಯದ ಬಗ್ಗೆ ಮಾತಾಡಿದರೆ ಮಾತ್ರ ಭಾರತೀಯ ತತ್ವಶಾಸ್ತ್ರ ಎಂಬಂತೆ ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಬಿಂಬಿಸಲ್ಪಟ್ಟಿದೆ. ಇವುಗಳಿಗೇ ಆಧುನಿಕ ವಿಜ್ಞಾನದ ಭಾಷೆಯ ಬಣ್ಣ ಬಳಿದು ಉಪನ್ಯಾಸ ಮಾಡುವ ಹೊಸ ಹೊಸ ” ಜ್ಞಾನಿಗಳು” ಹುಟ್ಟುತ್ತಿದ್ದಾರೆ ಅವರಿಗೆ ಇಂದು ದೊಡ್ಡ ಮಾರುಕಟ್ಟೆ, ಹೇರಳ ಹಣದ ಹೊಳೆ ಹರಿಯುತ್ತದೆ. ಆತ್ಮ, ಬ್ರಹ್ಮಗಳ ಅರಿವೊಂದೇ ಜ್ಞಾನ, ಅದು ಮಾತ್ರ ಮೋಕ್ಷದ ಸಾಧನ. ಉಳಿದುದೆಲ್ಲ ನಶ್ವರ ಎಂದು ಬೋಧಿಸಿದ ಯಾಜ್ಞವಲ್ಕ್ಯರು ಅದನ್ನು ಬೋಧಿಸಿದ್ದು ಜನಕ ರಾಜ ಪಣಕ್ಕಿಟ್ಟ ಸಾವಿರಾರು ಹಸುಗಳು, ಅವುಗಳ ಕೊಂಬುಗಳಿಗೆ ಚಿನ್ನದ ಗೊಣಸುಗಳನ್ನು ಹಾಕಿದ್ದ ಹಸುಗಳು ಇತ್ಯಾದಿ ಸಂಪತ್ತನ್ನು ಪಡೆಯುವುದಕ್ಕಾಗಿ.‌ ಜನಕ ರಾಜ ಮತ್ತು ಹಲವು ಬಾರಿ ಇಂತಹ ಸಂಪತ್ತನ್ನು ಕೊಡುಗೈಯಾಗಿ ನೀಡುತ್ತಾನೆ. ಇಂದು ಬ್ರಹ್ಮವೇ ಜ್ಞಾನ ಎಂದು ಭೋಧಿಸುತ್ತಾ ಚಾರ್ಟರ್ಡ್ ವಿಮಾನಗಳಲ್ಲಿ ತಿರುಗಾಡುವವರೂ ಇಂತಹ ಅಪಾರ ಸಂಪತ್ತನ್ನು ಗಳಿಸುತ್ತಿದ್ದಾರೆ.

ಆದರೆ ಉಪನಿಷತ್ತುಗಳು ಏಕ ವ್ಯಕ್ತಿಗಳ ರಚನೆಗಳಲ್ಲ, ವೇದಗಳಂತೆಯೇ ಸಂಕಲನಗಳು . ಅದರಲ್ಲಿ ಅಂದು ಹಲವು‌ ಕಾಲದಿಂದ ಪ್ರಚಲಿತವಿದ್ದ ಚಿಂತನೆಗಳಿವೆ. ಅತ್ಯಂತ ಮೂಢ ಕಂದಾಚಾರಗಳನ್ನು ಬಹಳ ಶ್ರದ್ಧೆಯಿಂದ ಆಚರಿಸಬೇಕೆಂಬ ನಿರೂಪಣೆಗಳಿಂದ ಹಿಡಿದು ಚಿಂತನೆಯೇ ಮುಖ್ಯ ಆಧಾರವಾದ ವಿಚಾರಗಳೂ ಇವೆ ಎಂಬ ಬಗ್ಗೆ ನನಗೆ ಅರಿವು ಮೂಡಿಸಿದ್ದು ದೇಬೀಪ್ರಸಾದ ಚಟ್ಟೋಪಧ್ಯಾಯರ ಭಾರತೀಯ‌ ದರ್ಶನಗಳು ಎಂಬ ಪುಸ್ತಕ. ಒಂದು ಅಧ್ಯಯನದ ಪ್ರಕಾರ ಅವುಗಳಲ್ಲಿ 27 ವಿವಿಧ ಬಗೆಯ ಚಿಂತನೆಗಳಿವೆಯಂತೆ. ಒಂದೇ ರೀತಿಯ ಆತ್ಮ,ಬ್ರಹ್ಮ,ಮೋಕ್ಷಗಳನ್ನು ಬೇರೆ ಬೇರೆ ಋಷಿಗಳು, ರಾಜರುಗಳು ವಿವರಿಸಿದ್ದಾರೆಂಬ ನಿರೂಪಣೆಯೂ ಇದೆ. ಅದೇ ರೀತಿ ಬೇರೆ ಬೇರೆ ಋಷಿಗಳು ವಿಭಿನ್ನ ತತ್ವಗಳನ್ನೂ ಪ್ರತಿಪಾದಿಸಿದುದನ್ನು ದಾಖಲಿಸಲಾಗಿದೆ.

ಇಂದು ಭಾರತದಲ್ಲಿ ಪ್ರದೇಶ, ಭಾಷೆ, ಜನಜೀವನ, ಸಂಸ್ಕೃತಿ, ಸಾಹಿತ್ಯ, ಕಲೆ ಮುಂತಾದೆಲ್ಲವುಗಳಲ್ಲಿ ತಾನೇ ತಾನಾಗಿ ವ್ಯಕ್ತವಾಗಿರುವ ಬಹುತ್ವವನ್ನು ಮೆಟ್ಟಿ  ಭಾರತವೆಂದರೆ ಒಂದೇ ಭಾಷೆ, ಒಂದೇ ಆಹಾರ, ಒಂದೇ ಧರ್ಮ, ಒಂದೇ ತೆರಿಗೆ ವ್ಯವಸ್ಥೆ, ಒಂದೇ ರೀತಿಯ ಆಡಳಿತ ಎಂಬ ಏಕೀಕೃತ ವ್ಯವಸ್ಥೆಯನ್ನು ಹೇರಲು ಪ್ರಯತ್ನಿಸುತ್ತಿರುವ ಗತಿಯೇ ಉಪನಿಷತ್ತುಗಳಿಗೂ ಒದಗಿದೆ. ಸಾವಿರಾರು ವರ್ಷಗಳಿಂದ ನಡೆದ ಈ ಪ್ರಯತ್ನದ ಫಲವಾಗಿ  ಭಾರತದ ಸಮೃದ್ಧ ಬಹುವಿಧ ಚಿಂತನೆಗಳನ್ನು ಹೊಸಕಿ ಹಾಕಲಾಗಿದೆ. ಈಗಲೂ ಹಾಕಲಾಗುತ್ತಿದೆ.

ಅದರಲ್ಲಿ ಉದ್ದಾಲಕ ಅರುಣಿ ಎಂಬುವರ ವಿಚಾರಗಳು ಭಾರತಕ್ಕೆ ವಿಶ್ವ ಮಹತ್ವವನ್ನು ತಂದು ಕೊಡುವಂತಹವು. ವಿಶ್ವದ ಮೊತ್ತ ಮೊದಲ ವೈಜ್ಞಾನಿಕ ಚಿಂತನೆ ಮತ್ತು ಪ್ರಯೋಗಗಳನ್ನು ದಾಖಲಿಸುವಂತಹುದು. ಆಧುನಿಕ ವಿಜ್ಞಾನದ ಅತ್ಯುಚ್ಚ ಸಾಧನೆಗಳೆಲ್ಲ ಭಾರತದಲ್ಲಿ ಅತ್ಯಂತ ಪ್ರಾಚೀನ ಕಾಲದಲ್ಲಿಯೇ  ವೇದಗಳು,ಪುರಾಣಗಳಲ್ಲಿಯೇ ಇವೆ.   ಪುಷ್ಪಕ ವಿಮಾನ ವೈಮಾನಿಕ ತಂತ್ರಜ್ಞಾನದ ಅತಿ ಪ್ರಾಚೀನ  ದಾಖಲೆ, ಗಣಪತಿ ಅಂಗಗಳ ಕಸಿಯ ಅತಿ ಪ್ರಾಚೀನ ಉದಾಹರಣೆ, ಗಾಂಧಾರಿಗೆ ಟೆಸ್ಟ್ ಟ್ಯೂಬ್ ಶಿಶು ಜನನದ ತಂತ್ರಜ್ಞಾನ ತಿಳಿದಿತ್ತು ಎಂದು ಹಾಸ್ಯಾಸ್ಪದ ವಾದಗಳನ್ನು ಮಾಡುವ ಬದಲು ಈ ಸತ್ಯವನ್ನು  ವಿಶ್ವಕ್ಕೆ ಬಿಂಬಿಸಿ ವಿಜ್ಞಾನದ ಇತಿಹಾಸದಲ್ಲಿ ಹೆಮ್ಮೆಯ ಸ್ಥಾನ ಪಡೆಯುವುದು ಎಷ್ಟೋ ಮೇಲಲ್ಲವೇ ?
ಉದ್ದಾಲಕ ಅರುಣಿಯ ಚಿಂತನೆ ಮತ್ತು ಪ್ರಯೋಗಗಳು.
ಉದ್ದಾಲಕ ಅರುಣಿಯ ಹಾಗೂ ಅವರ ಪ್ರಯೋಗಗಳ ಪ್ರಸ್ತಾಪ ಛಾಂದೋಗ್ಯ ಉಪನಿಷತ್ತಿನ ಆರನೇ ಅಧ್ಯಾಯದ 16 ಖಂಡಗಳನ್ನು ಆವರಿಸಿದೆ. 
ಉದ್ದಾಲಕ ಅರುಣಿ ಈ ಪ್ರಯೋಗಗಳನ್ನು ಮಾಡಿಸುವಾಗ ಅದರ ಹಿಂದೆ ಜನ‌ ಸಾಮಾನ್ಯರ ಬದುಕಿನ ಅನುಭವಗಳ‌ ಮೂಲಕ ಮೂಡಿದ ಚಿಂತನೆಯ ಪ್ರಣಾಲಿಯಿದೆ.

ಉದ್ದಾಲಕ ಅರುಣಿ ಹೇಳುತ್ತಾರೆ :
ಹೇಗೆ ಒಂದು ಮಣ್ಣಿನ ಮುದ್ದೆಯ ಗುಣಗಳನ್ನು ತಿಳಿದುಕೊಳ್ಳುವುದರಿಂದ ಮಣ್ಣಿನಿಂದಾದುದನ್ನೆಲ್ಲ ತಿಳಿದುಕೊಳ್ಳಬಹುದೋ, ಚಿನ್ನದ ಬಗ್ಗೆ ತಿಳಿದುಕೊಳ್ಳುವುದರಿಂದ ಚಿನ್ನದಿಂದ ಮಾಡಿದ ವಿವಿಧ ಆಭರಣಗಳ ಬಗೆಗೆ ತಿಳಿದುಕೊಳ್ಳಬಹುದೋ ಹಾಗೆ ವಿವಿಧ ರೂಪಗಳ ಹಿಂದಿನ ವಸ್ತುವನ್ನು ಅನ್ವೇಷಿಸಬೇಕು . ಹೀಗೆ ಕುಂಬಾರ, ಅಲ್ಕಸಾಲಿ, ಕಮ್ಮಾರ ಮೊದಲಾದ ಕುಶಲ‌ಕರ್ಮಿಗಳ ಅನುಭವವನ್ನು ಆಧರಿಸಿ ರೂಪಿಸಿದ ಅನ್ವೇಷಣಾಂಶಗಳನ್ನು ಪ್ರಯೋಗಗಳ ಮೂಲಕ ಸಾಬೀತು ಮಾಡಲು ,  ಬೇರೆಯವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿರುವುದು ಕಂಡು ಬರುತ್ತದೆ.

ಅವರ ವೈಜ್ಞಾನಿಕ ಚಿಂತನೆಯನ್ನು ಮತ್ತಷ್ಟು ಎತ್ತಿ ತೋರುವ, ಬಹಳ  ಕುತೂಹಲಕರವಾದ, ಹೆಚ್ಚು ತ್ರಾಸದಾಯಕವಾದ, ಸಂಕೀರ್ಣವೂ ಆದ ಪ್ರಯೋಗವೆಂದರೆ ಮನಸ್ಸಿನ ಆಧಾರವೇನು ಎಂಬುದಕ್ಕೆ ಸಂಬಂಧಿಸಿದ್ದು.

ಅವರು ಹೇಳುತ್ತಾರೆ :  ವತ್ಸನೆ, ಹದಿನೈದು ದಿನಗಳವರೆಗೆ ಊಟ ಮಾಡಬೇಡ. ಬೇಕಾದಷ್ಟು ನೀರನ್ನು ಕುಡಿ. ನೀರನ್ನು ಕುಡಿಯುತ್ತಾ ಇದ್ದರೆ ಪ್ರಾಣವೇನೂ ಹೋಗುವುದಿಲ್ಲ.

ಶ್ವೇತಕೇತುವು ಹದಿನೈದು ದಿನಗಳವರೆಗೆ ಊಟ ಮಾಡಲಿಲ್ಲ. ನಂತರ ಉದ್ದಾಲಕನ ಬಳಿ ಬಂದನು.
ಆಗ ಉದ್ದಾಲಕ :  ನಿನಗೆ ಚೆನ್ನಾಗಿ ಗೊತ್ತಿರುವ ಋಗ್ವೇದ, ಯಜುರ್ವೇದ, ಸಾಮವೇದದ ಮಂತ್ರಗಳನ್ನು ಹೇಳು.
ಮಾನ್ಯನೇ , ನನಗೆ ಅವೊಂದು ನೆನಪಿಗೆ ಬರುತ್ತಿಲ್ಲ.
ಹಾಗಾದರೆ ಊಟ ಮಾಡು. ನನ್ನ ಮಾತನ್ನು ಅರಿತುಕೊಳ್ಳುವೆ.

ಊಟ ಮಾಡಿದ ನಂತರ ಅವನಿಗೆ ಯಾವುದನ್ನು ಹೇಳಬೇಕೆಂದು ಉದ್ದಾಲಕ ಹೇಳಿದ್ದನೋ ಅವೆಲ್ಲವನ್ನೂ ಹೇಳಲು ಶಕ್ತನಾದನು.
ಈ ಮೂಲಕ ಉದ್ದಾಲಕ ಹೇಳುತ್ತಾನೆ ಇದರಿಂದ ನೀನು‌ ತಿಳಿದುಕೊ, ಮನಸ್ಸು ಅನ್ನಮಯ. ಮನಸ್ಸಿಗೆ ಅನ್ನವೇ ಮೂಲ.‌

ಈ ಎಲ್ಲ ಪ್ರಯೋಗಗಳು ಏನನ್ನು ತೋರಿಸುತ್ತವೆ ? ಉಪನಿಷತ್ತಿನ ಬ್ರಹ್ಮಜ್ಞಾನಿಗಳೆಲ್ಲ ಚಿಂತನೆ, ಕಣ್ಣು ಮುಚ್ಚಿ ಧ್ಯಾನ ಮಾಡುತ್ತಾ ತತ್ವಗಳ ಅನ್ವೇಷಣೆ ಮಾಡುವ ವಿಧಾನವನ್ನು ಅನುಸರಿಸಿದ್ದಾರೆ. ಬ್ರಹ್ಮಜ್ಞಾನವೊಂದೆ ಜ್ಞಾನ. ಪ್ರಜ್ಞಾನಂ ಬ್ರಹ್ಮಂ ಅದೊಂದೇ ವಿದ್ಯೆ. ಉಳಿದುವೆಲ್ಲ ಅವಿದ್ಯೆ. ಲೋಕದ ವಸ್ತುಗಳ ಅರಿಯುವುದು ವ್ಯರ್ಥ. ಅವೆಲ್ಲ ಭ್ರಮೆ, ಮಿಥ್ಯೆ ಎಂಬುದನ್ನು ಪ್ರತಿಪಾದಿಸಿದ್ದಾರೆ.

ಪುರಾವೆಗಳು ಬೇಕೆಂದರೆ  ವೇದಗಳ ಮಂತ್ರಗಳು, ಮನುಸ್ಮೃತಿ ಮತ್ತಿತರ ಗ್ರಂಥಗಳ ಆಧಾರವೇ ಹೊರತು ಪ್ರತ್ಯಕ್ಷ ಅನುಭವವಾಗಲಿ , ಅವಲೋಕನವಾಗಲಿ‌ ಅಲ್ಲ. ಅಷ್ಟೇ ಅಲ್ಲ ಪತ್ಯಕ್ಷ ದ್ವಿಷಃ ಪತ್ಯಕ್ಷವಾಗಿ ಕಾಣುವುದನ್ನು ದ್ವೇಷಿಸುತ್ತಾರೆ ಎಂದರು ಯಾಜ್ಞವಲ್ಕ್ಯರು.
ಆದರೆ ಉದ್ದಾಲಕ ಅರುಣಿ ಅದಕ್ಕೆ ತದ್ವಿರುದ್ಧವಾಗಿ ತಮ್ಮ ತತ್ವಗಳನ್ನು ಸಾಮಾನ್ಯ ಜನರ ಬದುಕಿನ ಪ್ರತ್ಯಕ್ಷ ಅನುಭವಗಳ ಆಧಾರದ ಮೇಲೆ ರೂಪಿಸಿಕೊಂಡರು. ಪ್ರತಿ ಹೆಜ್ಜೆಯಲ್ಲೂ ನೇರ ಅವಲೋಕನ, ಪ್ರಯೋಗಗಳ ಮೂಲಕ ನಿರೂಪಿಸಿದರು. ಸಾಧಿಸಿ ತೋರಿಸಿದರು.

ಮನುಷ್ಯರ ಜೀವ, ಮನಸ್ಸು , ಮಾತು ಇವುಗಳ ಉಗಮದ ಮೂಲವೇನು ಎಂಬ ಅತ್ಯಂತ ಮುಲಭೂತ ತಾತ್ವಿಕ ಪ್ರಶ್ನೆಗಳನ್ನು ಮೊತ್ತ ಮೊದಲ ಬಾರಿಗೆ ಎತ್ತುತ್ತಾರೆ ಉದ್ದಾಲಕ ಋಷಿ. ಬೇರೆ ಋಷಿಗಳಂತೆ ಅದಕ್ಕೆ ಬ್ರಹ್ಮವೇ ಮೂಲ, ಆತ್ಮವೇ ಮೂಲ, ದೇವತೆಗಳೇ ಮೂಲ ಕಾರಣ ಎಂಬ ಊಹಾಪೋಹಗಳಿಗೆ ಮಣೆ ಹಾಕದೆ ತಮ್ಮ ನೇರ ಅವಲೋಕನ,ಪ್ರತ್ಯಕ್ಷಾನುಭವ , ಪ್ರಯೋಗಗಳ ದಾರಿ ಹುಡುಕುತ್ತಾರೆ. ಈ ಜಗತ್ತಿನ ವಸ್ತುಗಳೇ ಇವುಗಳ ಮೂಲ ಕಾರಣ ಎಂದು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಅದರಲ್ಲಿ ಮನಸ್ಸು ನಾವು ಸೇವಿಸುವ ಆಹಾರದ ಸೂಕ್ಷ್ಮ ಅಂಶಗಳಿಂದ ಉಗಮಗೊಂಡಿದೆಯೆಂದು ಪ್ರತಿಪಾದಿಸುವುದು ಬಹಳ ಆಶ್ಚರ್ಯಕರ ಸಂಗತಿ. ಇಂದಿನ ವಿಜ್ಞಾನದ ಪರಿಕರಗಳನ್ನು ಒಳಗೊಂಡ ಸಂಶೋಧನೆಗಳು ವಿಟಮಿನ್, ಮಿನರಲ್ ಮತ್ತಿತರ ಪೋಷಕಾಂಶಗಳು ಮೆದುಳಿನ ರಚನೆಯ ಆಧಾರ ಎಂದು ಕಂಡುಕೊಂಡಂತೆ ಅಂದು ನಿಖರ ತೀರ್ಮಾನಕ್ಕೆ ಬರುವುದು ಸಾಧ್ಯವಿರಲಿಲ್ಲ. ಆದರೆ ಅದರ ಸಮೀಪಕ್ಕೆ ಬಂದಿದ್ದಾರೆ ಎಂಬುದು ಗಮನಿಸಬೇಕಾದ ವಿಷಯ.

ಅವರು ಹೇಳಿದುದೆಲ್ಲ ಸತ್ಯವಲ್ಲದಿರಬಹುದು. ಆದರೆ ಅವರು ಅವುಗಳೆಲ್ಲದರ ಉಗಮ ಕಾರಣ ಪರಬ್ರಹ್ಮವಲ್ಲ ಈ ಲೋಕದ ವಸ್ತು ಪ್ರಪಂಚವೇ ಎಂದು ಕಂಡುಕೊಂಡಿದ್ದು ಬಹಳ ಮಹತ್ವದ ವಿಷಯ. ಅದು ಅನ್ವೇಷಣೆಗೆ ದಾರಿಯನ್ನು ತೆರೆಯುತ್ತದೆ. ಈ ಜೈವಿಕ ಅಂಗಗಳ, ಕ್ರಿಯೆಗಳ ಮೂಲ ಕಾರಣ ಪರಬ್ರಹ್ಮ, ಆತ್ಮ ಎಂಬ ಬ್ರಹ್ಮಜ್ಞಾನಿ ನಿರೂಪಣೆ  ಈ ಅನ್ವೇಷಣೆಯ ಬಾಗಿಲನ್ನೇ ಮುಚ್ಚಿಬಿಟ್ಟಿತು . ನಮ್ಮ ದೇಶವನ್ನು ಶತ ಶತಮಾನಗಳ ಕಾಲ ಹಿಂದಕ್ಕೆ ದೂಡಿತು.

ಉದ್ದಾಲಕರು ಕೇವಲ ಕೆಲ ಅಂಶಗಳ ಬಗ್ಗೆ ಮಾತ್ರವಲ್ಲ ಇಡೀ ಜಗತ್ತಿನ ಉಗಮ, ವಿಕಾಸದ ಬಗ್ಗೆ ಕಂಡುಕೊಂಡ ಸತ್ಯವೂ ಅಂದಿನ ಕಾಲಕ್ಕೆ ಬಹಳ ಮುಖ್ಯವಾದದ್ದು. ಅಂದು ಈ‌ ಜಗತ್ತನ ಮೂಲ ಅತ್ಯಂತ ನಿಗೂಢವಾದುದು. ಅದು ಅಸತ್ತಿನಿಂದ  ಸೃಷ್ಟಿಸಲ್ಪಟ್ಟಿದೆ. (ಅಂದು ಸತ್ ಎಂದರೆ ಅಸ್ತಿತ್ವದಲ್ಲಿರುವುದು, ಅಸತ್ ಎಂದರೆ ಅಸ್ತಿತ್ವದಲ್ಲಿಲ್ಲದ್ದು ಎಂದು ಅರ್ಥ) ಅಂದರೆ ನಿರಾಕಾರವಾದ, ವಸ್ತು ಪ್ರಪಂಚಕ್ಕೆ ಸೇರದ ಪರಬ್ರಹ್ಮವು ಏನೂ ಇಲ್ಲದುದರಿಂದ ಇರುವ ವಸ್ತು ಗಳನ್ನು ಸೃಷ್ಟಿಸಿತು ಎಂಬ ನಂಬಿಕೆಯಿತ್ತು. ಋಗ್ವೇದದ ಪ್ರಸಿದ್ಧ ಏಕಮಾತ್ರ ತತ್ವಶಾಸ್ತ್ರದ ವಿಚಾರವಾದ ನಾಸದೀಯ ಸೂಕ್ತದ ವರ್ಣನೆ ಹೀಗಿದೆ : ವಿಶ್ವದ ಸೃಷ್ಟಿಯು ತೀರಾ ಅವರ್ಣನೀಯ. ಆಗ್ಗೆ ಅಸತ್ ಎಂಬುದಿರಲಿಲ್ಲ. ಸತ್ ಎಂಬುದೂ ಇರಲಿಲ್ಲ. “ನ ಅಸದಾಸೀತ್ ನೋ ಸದಾಸೀತ್” ಎನ್ನುತ್ತದೆ.

ಆದರೆ ಉದ್ದಾಲಕರು ಇಂತಹ ಅಭಿಪ್ರಾಯಗಳನ್ನೆಲ್ಲ ನಿರಾಕರಿಸುತ್ತಾ ಈ ಜಗತ್ತೆಲ್ಲ ಸೃಷ್ಟಿಯಾಗಿರುವುದು  ಸತ್ ‌ನಿಂದ ಅಂದರೆ ಅಸ್ತಿತ್ವದಲ್ಲಿರುವ ವಸ್ತುವೊಂದರಿಂದ. ಅಸ್ತಿತ್ವದಲ್ಲಿಲ್ಲದುದರಿಂದ ವಸ್ತು, ಜೀವಗಳ ಉಗಮ ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ” ವತ್ಸನೇ ಅಸತ್ತಿನಿಂದ ಸತ್ ವಸ್ತುವು ಹುಟ್ಟಲು ಹೇಗೆ ಸಾಧ್ಯ ? ಸೃಷ್ಟಿಗೆ ಮೊದಲು ಈ ಜಗತ್ತು ಅದ್ವಿತೀಯವಾದ ಏಕವಾದ ಒಂದು ಸತ್ ಎಂಬ ವಸ್ತುವಾಗಿತ್ತು.
ಜಗತ್ತಿನೆಲ್ಲ ವಸ್ತುಗಳು, ಪ್ರಾಣಿ , ಮರ ಗಿಡಗಳು ಜೀವಿಗಳು ಈ‌ ಮೂಲವಸ್ತುವಾದ ಸತ್ ‌ನಿಂದ ಹುಟ್ಟಿದವು. ಸತ್‌ನಿಂದಲೇ ಬೆಳಕು, ನೀರು, ಆಹಾರಗಳು ಉಗಮಗೊಂಡಿವೆ ಎನ್ನುತ್ತಾರೆ.

ಈ ಎಲ್ಲ ವಿವರಣೆ, ತತ್ವಗಳಲ್ಲಿ ಎಲ್ಲೂ ದೇವತೆಗಳು, ಬ್ರಹ್ಮ ಸೃಷ್ಟಿಗೆ ಕಾರಣ ಎಂಬ ಅಂದಿನ‌ ಅತ್ಯಂತ ವ್ಯಾಪಕ ನಂಬಿಕೆಯ ವಿಚಾರವೇ ತಲೆ ಹಾಕುವುದಿಲ್ಲ.

ಸಾವಿನ ಬಗ್ಗೆ ಕೂಡ ಜೀವಿಯ ವಿವಿಧ ಅಂಶಗಳು ಉಗಮಗೊಂಡ ಹಾಗೆಯೇ ಒಂದು ವಸ್ತುವಿನಲ್ಲೊಂದು ಲೀನವಾಗುತ್ತಾ ಹೋಗುತ್ತವೆ ಎನ್ನುತ್ತಾರೆ.

ಅವರ ತಾತ್ವಿಕತೆಯಲ್ಲಿ ಹೇಳಿದಂತೆ ಬ್ರಹ್ಮ ಎಂಬ ಪರಿಕಲ್ಪನೆಯೇ ಇಲ್ಲ. ಮೋಕ್ಷ ಮೊದಲೇ ಇಲ್ಲ. ಆದ್ದರಿಂದ ಕರ್ಮ,  ಪುನರ್ಜನ್ಮದ ಪ್ರಸ್ತಾಪ ಬರುವುದೇ ಇಲ್ಲ. ಆತ್ಮ ಎಂಬ ಮಾತು ಬರುತ್ತದೆ. ಆದರೆ ಆತ್ಮ‌ ಎಂದರೇನು ಎಂಬ ಬಗ್ಗೆ ನೀನು ಆತ್ಮ ಎಂದು ಯಾರನ್ನು ‌ಆರಾಧಿಸುತ್ತೀಯೆ ಎಂದು ಪ್ರಶ್ನಿಸಲಾಯಿತು. ಅದಕ್ಕೆ ಉದ್ದಾಲಕರ ಉತ್ತರ ” ಎಲೈ ರಾಜನೇ , ನಾನು ಪೃಥ್ವಿಯನ್ನು ಆರಾಧಿಸುತ್ತೇನೆ. ” ಅಲ್ಲಿಗೆ ಉದ್ದಾಲಕರ ಪ್ರಕಾರ ಮನುಷ್ಯರ ದೇಹದೊಳಗೆ ದೇಹವಲ್ಲದ ಆತ್ಮನ ಕಲ್ಪನೆಯೂ ಮಣ್ಣುಗೂಡಿತು.

ಆದರೆ ಆತ್ಮ,ಬ್ರಹ್ಮಗಳ ಭಯಂಕರ ಪ್ರತಿಪಾದಕರಾದ ಆಚಾರ್ಯರುಗಳು – ಶಂಕರ,ರಾಮಾನುಜಾದಿಗಳು ಇಂತಹ ವೈಜ್ಞಾನಿಕ ವೈಚಾರಿಕತೆಗೆ ಆಧ್ಯಾತ್ಮದ ವಿವರಣೆ ನೀಡಲು ಎಷ್ಟು ತಿಣುಕಿದ್ದಾರೆ ಎಂದರೆ ಅವರು ಛಾಂದೋಗ್ಯ ಉಪನಿಷತ್ತುಗಳಿಗೆ ನೀಡಿದ ಭಾಷ್ಯಗಳನ್ನು ನೋಡಬೇಕು. ಅದರಲ್ಲೂ ಉದ್ದಾಲಕರು ಶ್ವೇತಕೇತುವಿಗೆ “ತತ್ ತ್ವಂ‌ ಅಸಿ”  ನೀನು ಅದೇ ಆಗಿದ್ದೀಯೆ ಎಂಬ ಮಾತನ್ನಂತೂ ತಿರುಚಿ ಬಿಟ್ಟಿದ್ದಾರೆ.

ಆದರೆ ಉದ್ದಾಲಕರ ಅಂದಿನ ಕಾಲಕ್ಕೆ ಅತ್ಯಂತ ಮುಂದುವರೆದ ವೈಜ್ಞಾನಿಕ ವಿಚಾರಗಳು, ಪ್ರಯೋಗಗಳ ದಾರಿ ಇಂದೂ ಕೂಡಾ ಮುಖ್ಯವಾಗಿವೆ. ಜಗತ್ತಿನ ಉಗಮ ಇಲ್ಲಿಯ ವಸ್ತುಗಳಿಂದಲೇ. ಜೀವ, ಮನಸ್ಸು ,ವಾಕ್‌ಗಳೂ ಕೂಡ ಜಗತ್ತಿನ ವಸ್ತುಗಳಿಂದಲೇ ಎಂಬ ವಿಚಾರ ಮಾನವ ಅರಿವಿನ ಬೆಳವಣಿಗೆಗೆ ಬಹು ಮುಖ್ಯ ಕೊಡುಗೆಗಳಾಗಿವೆ.

ಇವು ಗ್ರೀಕ್ ತತ್ವಶಾಸ್ತ್ರದಲ್ಲಿ ಮೊದಲ ವಿಜ್ಞಾನದ ಪ್ರಯೋಗ ಮಾಡಿದನೆಂದು ಹೆಸರಾದ, ಜಗತ್ತಿನ ವಿಜ್ಞಾನದ ಇತಿಹಾಸದಲ್ಲಿ ದಾಖಲಾದ ಥೇಲಿಸ್ ಎಂಬುವನ ವಿಚಾರ ಮತ್ತು ಪ್ರಯೋಗಗಳಿಂತ ಉತ್ಕೃಷ್ಟವಾಗಿವೆ. ಭಾರತ ಹೆಮ್ಮೆ ಪಡಬೇಕಾದ ನಿಜ ವೈಜ್ಞಾನಿಕ ಸಂಗತಿಗಳಿವು. ಇಂದು ಪಸರಿಸಲ್ಪಡುತ್ತಿರುವ ನಂಬಲನರ್ಹ ಪೊಳ್ಳು ಸುಳ್ಳುಗಳಲ್ಲ.

‍ಲೇಖಕರು Admin

January 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: