ಜಿ ಎನ್ ನಾಗರಾಜ್ ಅಂಕಣ- ನರಕ ಯಾತನೆಯ ಗರುಡ ಪುರಾಣ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

37

ವಿಷ್ಣು ಭಗವಾನರು ಗರುಡನಿಗೆ ಹೇಳಿದರು:
ಕೆಲ ಪಾಪಿ ಜೀವಗಳಿಗೆ ಕಬ್ಬಿನ ಗಾಣದಲ್ಲಿ ಹಾಕಿ ಕಬ್ಬನ್ನು ಹಿಂಡುವಂತೆ ಗಾಣಗಳನ್ನು ತಿರುಗಿಸುತ್ತಾರೆ. ಕೆಲವರನ್ನು ಸುಡುವ ಬೆಂಕಿಯಲ್ಲಿ ಸುಡಲಾಗುತ್ತದೆ. ಕೆಲವರನ್ನು ಎಣ್ಣೆಯ ಕಡಾಯಿಯಲ್ಲಿ ಹಾಕಿ ಕುದಿಸುತ್ತಾರೆ, ಪಕೋಡೆಯನ್ನು ಬೇಯಿಸುವಂತೆ ಬೇಯಿಸುತ್ತಾರೆ.ಕೆಲವು ಜೀವಿಗಳನ್ನು ಮದವೇರಿದ ಆನೆಗಳ ಕೆಳಗೆ ಹಾಕಿ ತುಳಿಸಲಾಗುತ್ತದೆ. ಕೆಲವರ ಕೈ ಕಾಲುಗಳನ್ನು ಕಟ್ಟಿಹಾಕಿ ಬಾವಿಯಲ್ಲಿ ನೇತು ಹಾಕಲಾಗುತ್ತದೆ. ಇನ್ನೂ ಕೆಲವರನ್ನು ಕ್ರಿಮಿ ಕೀಟಗಳ ಕುಂಡದಲ್ಲಿ ಎಸೆಯಲಾಗುತ್ತದೆ. ಕೀಟಗಳು ಕಿತ್ತು ತಿನ್ನುತ್ತವೆ. ಕೆಲವರನ್ನು ರಣ ಹದ್ದು ತಿನ್ನಲು ಎಸೆಯಲಾಗುತ್ತದೆ.

ಯಮದೂತರು ಎಲ್ಲ ಜೀವಿಗಳ ಶರೀರವನ್ನು ಅವರವರ ಅಪರಾಧಗಳ ಅನುಪಾತದಂತೆ ತುಂಡು ತುಂಡು ಕತ್ತರಿಸುತ್ತಾರೆ.
ಹೇ ಗರುಡ, ನರಕ ದ್ವಾರದ ಬಳಿಯೇ ಒಂದು ವಿಶಾಲವಾದ ವೃಕ್ಷವಿದೆ. ಅದರ ವಿಶೇಷತೆ ಏನೆಂದರೆ ಯಾವಾಗಲೂ ಅದರಲ್ಲಿ ಬೆಂಕಿಯು ಪ್ರಜ್ವಲಿಸುತ್ತಿರುತ್ತದೆ. ಈ ವೃಕ್ಷದಲ್ಲಿ ಜೀವಿಗಳನ್ನು ತಲೆ ಕೆಳಗಾಗಿ ತೂಗು ಹಾಕುತ್ತಾರೆ. ಹೀಗೆ ತೂಗು ಹಾಕಿದ ಮೇಲೆ ಲಾಠಿ, ಗದೆ, ತೋಮರ, ಭಲ್ಲೆ, ಒನಕೆಗಳಿಂದ ನಿರ್ದಯವಾಗಿ ಪ್ರಹಾರ ಮಾಡುತ್ತಾರೆ.

ಇದು ಹದಿನೆಂಟು ಮಹಾ ಪುರಾಣಗಳಲ್ಲಿ ಒಂದಾದ ಗರುಡ ಪುರಾಣದಲ್ಲಿ ಪಾಪಿಗಳಿಗೆ ನರಕದಲ್ಲಿ ನೀಡುವ ಭಯಂಕರ ಶಿಕ್ಷೆಗಳ ವರ್ಣನೆಯ ಒಂದು ಸಣ್ಣ ತುಣುಕು. ಇನ್ನು  ಯಮದೂತರು ಭೂಮಿಗೆ ಬಂದಿಳಿದು ಮನುಷ್ಯರ ಜೀವವನ್ನು ಸೆಳೆದುಕೊಂಡು  ನರಕದವರೆಗೆ ಕೊಂಡೊಯ್ಯುವ ಹಾದಿಯ ವರ್ಣನೆಗಳು ನರಕದ ವರ್ಣನೆಯನ್ನೂ ಮೀರಿಸುತ್ತವೆ. ಅದರಲ್ಲೂ ನರಕಕ್ಕೆ ಹೋಗುವ ದಾರಿಯಲ್ಲಿರುವ, ರಕ್ತ,ಕೀವು ಮಾಂಸಗಳಿಂದ ತುಂಬಿದ ವೈತರಣೀ ನದಿಗೆ ಜೀವವನ್ನು ಬಿಸುಡುವ ವರ್ಣನೆಯಂತೂ ಯಾರಿಗೂ ಅಸಹ್ಯವೆನಿಸುವಂತಿದೆ.

ತೀರಾ ಇತ್ತೀಚಿನವರೆಗೂ ಇಂತಹ ನರಕ ಯಾತನೆಗಳ ಬಗ್ಗೆ ಜನ ಸಾಮಾನ್ಯರಲ್ಲಿ ಬಗೆ ಬಗೆಯ ವರ್ಣನೆಗಳು ಚಲಾವಣೆಯಲ್ಲಿದ್ದವು.  ಯಥೇಚ್ಛವಾಗಿ ದೇವಾಲಯಗಳಲ್ಲಿ ನಿತ್ಯ ನಡೆಯುತ್ತಿದ್ದ ಹರಿಕತೆ,ಪುರಾಣಗಳ‌ ಮೂಲಕ , ವಿಶೇಷ ಸಂದರ್ಭಗಳಲ್ಲಿ , ದೇವರುಗಳ ಜಯಂತಿಗಳು ಮೊದಲಾದ ಸಂದರ್ಭಗಳಲ್ಲಿ ಹಲವು ಕತೆಗಳ ನಡುವೆ ಉಪಕತೆಗಳಾಗಿ ಇಂತಹ ವರ್ಣನೆಗಳು ಜನ ಸಾಮಾನ್ಯರ ನಡುವೆ ಬಿತ್ತರವಾಗುತ್ತಿದ್ದವು. ಪೌರಾಣಿಕ ನಾಟಕಗಳೂ ಇಂತಹ ವಿವರಣೆಗಳನ್ನು ಸಂಭಾಷಣೆಗಳಲ್ಲಿ ಒಳಗೊಳ್ಳುತ್ತಿದ್ದವು. ಇಂತಹವುಗಳನ್ನು ಕೇಳಿದ ಅಜ್ಜ,ಅಜ್ಜಿಯರು ಮಕ್ಕಳು, ಮೊಮ್ಮಕ್ಕಳಿಗೆ ಬಾಯಿ ಬಿಟ್ಟು ಕೇಳುವಂತೆ ವರ್ಣಿಸುತ್ತಿದ್ದರು. ಬ್ರಾಹ್ಮಣರ ನಡುವೆಯಂತೂ ಸಾವುಗಳ ಸಂದರ್ಭದಲ್ಲಿ ಗರುಡ ಪುರಾಣ ಓದಿಸಬೇಕೆಂಬ ಕಟ್ಟಲೆಯೇ ಇತ್ತು.

ಈ ರೀತಿಯ ನರಕದ ವರ್ಣನೆಗಳು‌ ನಿಜವೇ, ಇವುಗಳ ನಂಬಲರ್ಹವೇ ? ಈ ಪ್ರಶ್ನೆಗಳು ಈಗಿನ ವೈಜ್ಞಾನಿಕ ಯುಗದಲ್ಲಲ್ಲ,  ಸಾವಿರಾರು ವರ್ಷಗಳ ಹಿಂದಿನಿಂದಲೇ ಏಳುತ್ತಿದ್ದವು. ಅದಕ್ಕೆ ಗರುಡ ಪುರಾಣ ಹೀಗೆ ಸಮಜಾಯಿಷಿ ನೀಡುತ್ತದೆ :
ಮುನಿವರ್ಯರೇ, ಇವುಗಳ ಬಗ್ಗೆ ಹೇಳಿದಾಗ ಇವೆಲ್ಲ ಕಪೋಲ ಕಲ್ಪಿತಗಳೆಂದೂ , ಮೂಢ ನಂಬಿಕೆಗಳೆಂದೂ ತಿಳಿಯಲಾಗುತ್ತದೆ. ಆದರೆ ವ್ಯಕ್ತಿ ಮರಣ ಹೊಂದಿದ ನಂತರ ಘಟಿಸುವ ಘಟನೆಗಳನ್ನು ಮರಣ ಹೊಂದಿದವರು ಬಂದು ಹೇಳಲು ಸಾಧ್ಯವಿಲ್ಲ. ಆದರೆ ನಂಬುವುದು ಅನಿವಾರ್ಯ. ಆದ್ದರಿಂದಲೇ, ಋಷಿ ಮುನಿಗಳು ಪುರಾಣ ಪುಣ್ಯ ಕತೆಗಳ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಹೀಗೆ ನರಕದ ಭಯ ಜನರ ಪ್ರಜ್ಞೆಯ ಒಂದು ಭಾಗವಾಗುವಂತೆ ಮಾಡಲಾಗಿತ್ತು. ನರಕ ಯಾತನೆಗಳ ಭಯ ಜನರು ಧಾರ್ಮಿಕ ಕಟ್ಟಲೆಗಳಿಗನುಗುಣವಾಗಿ ಜೀವಿಸುವಂತೆ, ಸನ್ನಡತೆಯುಳ್ಳವರಾಗಿ ನಡೆಯುವಂತೆ ಮಾಡುತ್ತದೆ ಎಂದು ಭಾವಿಸುತ್ತಿದ್ದರು. ಆದರೆ ಯಾರನ್ನು.   ಗರುಡ ಪುರಾಣದಲ್ಲಿ ನರಕ ಯಾತನೆಯನ್ನು ತಪ್ಪಿಸಿಕೊಳ್ಳಲು ಯಾವ ನಡತೆಯನ್ನು ಅನುಸರಿಸಬೇಕೆಂದು ಹೇಳಲಾಗಿದೆಯೋ ಅವುಗಳೆಲ್ಲ ಹೆಚ್ಚಾಗಿ ಸಾಮಾನ್ಯ ಜನರನ್ನು ಕುರಿತಾದುದೇ ಹೊರತು ರಾಜರು, ಸಾಮಂತರು,ಪಾಳೆಯಗಾರರು ಮೊದಲಾದ ಆಳುವವರ ದಬ್ಬಾಳಿಕೆ, ದೌರ್ಜನ್ಯಗಳು, ಹಿಂಸೆ ಕೊಲೆಗಳು‌ ಆ ಪಟ್ಟಿಗಳಲ್ಲಿಲ್ಲ,  ವಿಪರೀತ ಬಡ್ಡಿ ವಸೂಲಿ,ಅದಕ್ಕಾಗಿ ದೌರ್ಜನ್ಯ ಇತ್ಯಾದಿ ಇಲ್ಲ.

ಬಹಳ ಮುಖ್ಯವಾಗಿ ಅದರಲ್ಲಿ ಪದೇ ಪದೇ ವಿಧಿಸಿರುವುದು ಬ್ರಾಹ್ಮಣರಿಗೆ ಭೂದಾನ, ಗೋದಾನ, ಹೋರಿಯ ದಾನ ಇತ್ಯಾದಿ ಮಾಡಬೇಕು, ಅವರಿಗೆ ಅಗೌರವ ಮಾಡಬಾರದು ಮುಂತಾಗಿ.

ನರಕದ ಕಲ್ಪನೆಯ ಮೂಲ :
ಅತಿ ಪ್ರಾಚೀನ ವೈದಿಕ ಗ್ರಂಥವಾದ   ಋಗ್ವೇದದಲ್ಲಿ  ಹೆಚ್ಚಾಗಿ ಕಾಣುವುದು ,ಸದ್ಗುಣ ಮತ್ತು ಜೀವನದಲ್ಲಿ ಧಾರ್ಮಿಕ ಕಟ್ಟಲೆಗಳಿಗೆ ಬದ್ಧವಾಗಿರುವುದಕ್ಕೆ ಪ್ರತಿಫಲ ಸ್ವರ್ಗದಲ್ಲಿ ದೇವತೆಗಳ ಸಹವಾಸ ಮತ್ತು ಸುಖದ ಸುರಿಮಳೆ. ಜೊತೆಗೆ ಮರಣ ಹೊಂದಿ ಸ್ವರ್ಗಸ್ಥರಾದ ಹಿರಿಯರೊಡನೆ ಒಡನಾಟ .ಅಲ್ಲಿ ಯಮನದೇ ಅಧಿಪತ್ಯ. ಅವನು ಸ್ವರ್ಗಾಧಿಪತಿ ಮಾತ್ರ.

ಯಜ್ಞಗಳನ್ನು ಮಾಡಿ ದೇವತೆಗಳಿಗೆ ಅವರವರ “ಇಷ್ಟ” ವನ್ನು ಸಲ್ಲಿಸುವುದು, ಯಜ್ಞದ ಪುರೋಹಿತರಿಗೆ ದಕ್ಷಿಣೆಗಳನ್ನು ನೀಡುವುದು ಇಷ್ಟಾ ಪೂರ್ತ ಎಂದು, ಅದನ್ನು ಪೂರೈಸಿದವರು ಪುಣ್ಯ ಗಳಿಸುತ್ತಾರೆ ಎಂಬುದೇ ಅಂದಿನ ಧಾರ್ಮಿಕ ಪದ್ಧತಿಯ ಹೂರಣವಾಗಿತ್ತು. ಹೀಗೆ ಒಬ್ಬ ವ್ಯಕ್ತಿಯು ಗಳಿಸಿದ ಪುಣ್ಯವು ಆ ವ್ಯಕ್ತಿಗಿಂತ ಮುಂಚೆಯೇ ಪರಲೋಕಕ್ಕೆ ಹೋಗಿ ಅಲ್ಲಿ ಅವನಿಗೆ ಆನಂದವನ್ನು ದೊರಕಿಸಿಕೊಡಲು ಅವನ ರಕ್ಷಕ ದೇವತೆಯಂತೆ ಅವನು ಬರುವುದನ್ನೇ ಕಾಯುತ್ತದೆ ಎಂಬ ಕಲ್ಪನೆ ಪ್ರಚಲಿತವಾಗಿತ್ತು.

ಅಂತ್ಯ ಸಂಸ್ಕಾರದ ಒಂದು ಋಕ್ಕಿನಲ್ಲಿ ಸತ್ತವನು ತನ್ನ ಇಷ್ಟಾಪೂರ್ತವನ್ನು ಸೇರಲಿ ಎಂದು ಹೇಳಲಾಗಿದೆ. ಆದರೆ ಯಮ ನರಕ ಎಂಬ ಭೀಕರದ ಅಧಿಪತಿ ಎನ್ನುವ ಕಲ್ಪನೆಗಳು ಇನ್ನೂ ಬೆಳೆದಿರಲಿಲ್ಲ.ಋಗ್ವೇದದಲ್ಲಿ ಎಲ್ಲೂ ನರಕದ ಬಗ್ಗೆ ಪ್ರಸ್ತಾಪವಾಗಿಲ್ಲ. ಅಸ್ಪಷ್ಟ ಸೂಚನೆಗಳು ಮಾತ್ರಾ ಕಾಣುತ್ತವೆ. ಆದರೆ ಅಥರ್ವಣ ವೇದ ಹಾಗೂ ಬ್ರಾಹ್ಮಣಗಳಲ್ಲಿ ನರಕವನ್ನು ಕುರಿತು ಸ್ಪಷ್ಟ ಉಲ್ಲೇಖಗಳಿವೆ. ಬೆಳಕಿನಿಂದ ಕೂಡಿ ಮೇಲೆ ಇರುವ ಸ್ವರ್ಗಕ್ಕಿಂತ ಭಿನ್ನವಾಗಿ ಅದು ಕೆಳಗೆ ಕತ್ತಲಿನಿಂದ ತುಂಬಿದ ಸ್ಥಳ ಎಂದು ವರ್ಣಿಸಲಾಗಿದೆ.  ಅಲ್ಲಿಗೆ ಹೋಗುವವರು ಅಲ್ಲಿಂದ ಎಂದಿಗೂ ತಪ್ಪಿಸಿಕೊಳ್ಳಲಾರರು ಎಂದೂ ಹೇಳಲಾಗಿದೆ.

ಜೀವನದಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿಗೆ ಅನುಗುಣವಾಗಿ ದೊರಕುವ ಒಳ್ಳೆಯ ಫಲಗಳು ಮತ್ತು ಶಿಕ್ಷೆಗಳ ಶ್ರೇಣಿ ಬ್ರಾಹ್ಮಣಗಳಲ್ಲಿ ಕಾಣಿಸಿಕೊಂಡಿದೆ. ಶತಪಥ ಬ್ರಾಹಣದಲ್ಲಿ ನರಕದಲ್ಲಿ ವಿವಿಧ ಪಾಪಗಳಿಗೆ ನೀಡುವ ಶಿಕ್ಷೆ ಅದರಿಂದುಂಟಾಗುವ ‌ನೋವು ಸಂಕಟಗಳನ್ನು ವೈದಿಕ ಗ್ರಂಥಗಳಲ್ಲಿ ಮೊದಲ ಬಾರಿಗೆ ವಿವರಿಸಲಾಗಿದೆ.

ಈ ಅಂಶವನ್ನು ಗಮನವಿಟ್ಟು ವಿಶ್ಲೇಷಿಸಬೇಕಾಗಿದೆ. ಬ್ರಾಹ್ಮಣಗಳೇ ವರ್ಣ ವ್ಯವಸ್ಥೆಯಲ್ಲಿ ಮೇಲ್ವರ್ಣಗಳೆನ್ನಿಸಿಕೊಳ್ಳುವದಕ್ಕೆ ಸೇರಿದ ಜನರಿಗೆ ಕೆಳ ವರ್ಣಗಳ ಸಮುದಾಯಗಳ ಮೇಲೆ ಮುಖ್ಯವಾಗಿ ಶೂದ್ರರ ಮೇಲೆ ಕ್ರೌರ್ಯ,ಹಿಂಸೆ,ಕೊಲೆಗಳನ್ನು ಎಸಗಲು ಸ್ವಾತಂತ್ರ್ಯ ನೀಡುವುದು. ಶೂದ್ರರು ಯಥಾ ಕಾಮ ವಧ್ಯ. ಮೇಲ್ವರ್ಣಗಳವರು ತಮಗಿಚ್ಛೆ ಬಂದಂತೆ ಶೂದ್ರರನ್ನು ಕೊಲೆ ಮಾಡಲೂ ಬಹುದು ಎಂದು ವ್ಯಾಖ್ಯಾನ‌ ನೀಡಿದೆ. ಮಹಿಳೆಯರು ಕೀಳು ಎಂಬ ವಿವರಣೆಗಳೂ ಕೂಡಾ ಬ್ರಾಹ್ಮಣ ಗ್ರಂಥಗಳಲ್ಲಿಯೇ ಕಾಣಬರುವುದು. ನರಕ ಯಾತನೆಯೂ  ಈ ಸಾಮಾಜಿಕ ವ್ಯವಸ್ಥೆಯ ಒಂದು ಅಂಗವಾಗಿ   ವಿವರಿಸಲ್ಪಟ್ಟಿದೆ . ಈ ಎಲ್ಲ ಅಂಶಗಳೂ ಅಂದಿನ ಸಮಾಜದಲ್ಲಿನ ವರ್ಣ ವ್ಯವಸ್ಥೆಯನ್ನು ಹೇರುವ ಭಾಗವಾಗಿ ರೂಪಿಸಿಕೊಂಡ ಕಲ್ಪನೆಗಳು ಎಂಬುದು ಸ್ಪಷ್ಟವಾಗುತ್ತದೆ.

ನರಕದ ಕಲ್ಪನೆಯ ಜೊತೆಗೆ ಜೋಡಿಸಿಕೊಂಡಿರುವ ಮತ್ತೆರಡು ಸಂಗತಿಗಳಲ್ಲಿ  ಶ್ರಾದ್ಧವೂ ಒಂದು. ಕಟ್ಟಲೆಗಳು ವಿಧಿಸಿದಂತೆ ಶ್ರಾದ್ಧವನ್ನು ಮಾಡದಿದ್ದರೆ ನರಕ ದಾರಿಯಲ್ಲಿ ಜೀವನು ಹಸಿವು, ನೀರಡಿಕೆಗಳಿಂದ ಬಾಧಿತನಾಗುವನು. ಸತ್ತವರಿಗೆ ಸತ್ತ ದಿನ ನೀಡುವ ನೀರು, ಅನ್ಮ, ನಂತರ ಕೆಲ ದಿನಗಳಲ್ಲಿ ಮಾಡುವ ಶ್ರಾದ್ಧ, 16 ತಿಂಗಳವರೆಗೆ ಪ್ರತಿ ತಿಂಗಳೂ ಮಾಡಬೇಕಾದ ಶ್ರಾದ್ಧ, ವರ್ಷದ ವಿಶೇಷ ಶ್ರಾದ್ಧ ಮುಂತಾದವು ಸತ್ತವರಿಗೆ ನರಕದ ದಾರಿಯಲ್ಲಿ ಒಂದಿಷ್ಟು ಆಹಾರ, ನೀರನ್ನು ಒದಗಿಸುತ್ತವೆ. ಆದ್ದರಿಂದ ಶ್ರಾದ್ಧವನ್ನು ಆಚರಿಸುವುದು ಮತ್ತು ಆ ಸಂದರ್ಭಗಳಲ್ಲಿ ಬ್ತಾಹ್ಮಣರಿಗೆ ಭಕ್ಷ್ಯ ಭೋಜನ, ದಕ್ಷಿಣೆ ದಾನಗಳು ಹೇಗೆ ಸತ್ತವರನ್ನು ನರಕ ಯಾತನೆಯನ್ನು ಒಂದಿಷ್ಟು  ಕಡಿಮೆ ಮಾಡುತ್ತವೆ ಎಂಬುದನ್ನು  ಹೇಳುತ್ತವೆ.  ನರಕದ ಬಾಧೆಯಿಂದ ತಪ್ಪಿಸಿಕೊಳ್ಳಲು‌ ಮಾಡಬೇಕಾದ ವ್ರತ ಮೊದಲಾದವುಗಳನ್ನು ವಿವರಿಸುತ್ತವೆ. ಆ ಮೂಲಕ ಪುರೋಹಿತಶಾಹಿಗೆ ಆದಾಯವನ್ನು ಖಾತರಿಗೊಳಿಸುವ ಮೂಲವಾಗಿವೆ.

ಮತ್ತೊಂದು ಶ್ರಾದ್ಧವನ್ನು ಕಾಲ ಕಾಲಕ್ಕೆ ಮಾಡಬೇಕಾದ ಹೊಣೆಯುಳ್ಳವನು ಪುತ್ರನೇ ಹೊರತು ಪುತ್ರಿಯಲ್ಲ ಎಂಬು ಬಹುತೇಕ ಶಾಸ್ತ್ರಗ್ರಂಥಗಳ ಕಟ್ಟಲೆ. ಅದರಿಂದಾಗಿಯೇ ಅಪುತ್ರಸ್ಯ ಗತಿರ್ನಾಸ್ತಿ ಎಂದು ಘೋಷಿಸಲಾಗಿದೆ .

ಅಪುತ್ರಸ್ಯ ಗತಿರ್ನಾಸ್ತಿ ಸ್ವರ್ಗೋ ನೈವ ಚ ನೈವ ಚ /
ಗಂಡು ಮಗನಿಲ್ಲದವನಿಗೆ ಸತ್ತ ನಂತರ ಸದ್ಗತಿಯಿಲ್ಲ. ಸ್ವರ್ಗವಂತೂ ದೊರಕುವುದಿಲ್ಲ, ದೊರಕುವುದೇ ಇಲ್ಲ.

ಈ ಪ್ರಸಿದ್ಧ ಶ್ಲೋಕದ ಮೂಲ ಹುಡಕಲು ಹೊರಟೆ. ಐತರೇಯ ಬ್ರಾಹ್ಮಣ, ದೇವಿ ಭಾಗವತ ಪುರಾಣ, ಗರುಡ ಪುರಾಣ, ರಾಮಾಯಣ ಇತ್ಯಾದಿ ಇತ್ಯಾದಿ. ಇದೊಂದು ಮಹಾ ಸುಭಾಷಿತ ಎಂದು ಅದರ ಬಗೆಗಿನ ಸಂಕಲನದಲ್ಲಿ ಸಂಗ್ರಹವಾಗಿದೆಯಂತೆ.   ಅಬ್ಬಾ ! ಎಷ್ಟೊಂದು ಶಾಸ್ತ್ರ ಗ್ರಂಥಗಳಲ್ಲಿ ಈ ವಾಕ್ಯ ಮತ್ತೆ ಮತ್ತೆ ಉಲ್ಲೇಖಿಸಲಾಗಿದೆಯೆಂದರೆ !! ಮತ್ತು‌ ಅದಕ್ಕೆ ಎರಡನೇ ಸಾಲಂತೂ ವಿವಿಧ ಗ್ರಂಥಗಳಲ್ಲಿ ಬೇರೆ ಬೇರೆಯಾಗಿವೆ ಮತ್ತು ಮತ್ತಷ್ಟು ಘೋರವಾದ ಅರ್ಥವನ್ನು ಹೊರಡಿಸುತ್ತವೆ.

ಅದರಲ್ಲೊಂದು ಹೀಗಿದೆ : ಆದ್ದರಿಂದ  ಹೇಗಾದರೂ ಸರಿಯೇ ಗಂಡು ಮಗನನ್ನು ಪಡೆಯಲೇ ಬೇಕು ( ಗರುಡ ಪುರಾಣ‌)

ಇಂತಹ ನಿರ್ದೇಶಗಳ ಫಲವಾಗಿ ಗಂಡು ಮಗನನ್ನು ಪಡೆಯಲೇಬೇಕೆಂಬ ಸಂಗತಿ ಇಂದೂ ಕೂಡಾ ಮಹಿಳೆಯರಿಗೆ ಎಂತೆಂತಹಾ ಹಿಂಸೆಗಳಿಗೆ ಕಾರಣವಾಗಿದೆ ಮತ್ತು‌ ಎಷ್ಟೊಂದು ಹೆಣ್ಣು ಭ್ರೂಣ ಹತ್ಯೆಗಳಿಗೆ ಕಾರಣವಾಗಿದೆ  ಎಂಬುದನ್ನು ವಿವರಿಸಬೇಕಾಗಿಲ್ಲ.

ಪುರ್ಜನ್ಮದ ಅಂಕುರ :
ಬ್ರಾಹ್ಮಣಗಳಲ್ಲಿ ಪಾಪಿಗಳಿಗೆ ನೀಡುವ ತೀವ್ರತರವಾದ ಶಿಕ್ಷೆಗಳಲ್ಲಿ ಒಂದು ಮತ್ತೆ ಮತ್ತೆ ಸಾಯುವುದು ( ಪುನರ್ಮೃತ್ಯು ). ಅದು ನಡೆಯುವುದು ಇನ್ನೊಂದು ಲೋಕದಲ್ಲಿ ಎಂದು ನಿರೂಪಿಸಲಾಗಿದೆ. ಆದರೆ ಅಲ್ಲಿಯೂ ಮತ್ತೆ ಮತ್ತೆ ಹುಟ್ಟುವ ಕಲ್ಪನೆ ಬರುವುದಿಲ್ಲ.

ಒಟ್ಟಿನಲ್ಲಿ ಸಾವಿನ ನಂತರವೂ ಎಲ್ಲೋ ಒಂದು ಕಡೆ,ಅವರವರ ಬದುಕನ್ನು ಅಂದಿನ ಕಟ್ಟಲೆಗಳು ಒಳ್ಳೆಯದು ಕೆಟ್ಟದು ಎಂದು ಮಾಡುವ ವಿಂಗಡಣೆಗಳಿಗನುಸಾರವಾಗಿ ಯಾವುದೋ ಒಂದು ರೂಪದಲ್ಲಿ ಅವರ ಅಸ್ತಿತ್ವ ಎಲ್ಲೋ ಒಂದು ಕಡೆ ಅದು ಸ್ವರ್ಗವೋ,ನರಕವೋ ಅಥವಾ ಇದೇ ಭೂಮಿಯ ಮೇಲೆ ದೆವ್ವಗಳಾಗಿಯೋ ಮುಂದುವರೆಯುತ್ತದೆ ಎಂಬ ನಂಬಿಕೆ ಇತ್ತು.

ಆದರೆ ಉಪನಿಷತ್ತುಗಳ ರಚನೆಯ ವೇಳೆಗೆ ಆತ್ಮದ ಪುನರ್ಜನ್ಮ ಬಹು ಮಹತ್ವದ ತತ್ವವಾಗಿಬಿಟ್ಟಿತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

December 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: