ಸದಾಶಿವ್ ಸೊರಟೂರು ಕಥಾ ಅಂಕಣ – ಹಸಿವು..

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

21

ಮರದಲ್ಲಿ ನಳನಳಿಸುತ್ತಿದ್ದ ಮಾವಿನ ಎಲೆಗಳನ್ನು ಕತ್ತರಿಸಿ ತಂದು ಮಾಲೆಯಂತೆ ಹೆಣೆದು ಶಾಲೆಯ ಗೇಟಿನ ಕಮಾನಿಗೆ ನೇತು ಹಾಕಲಾಗಿತ್ತು. ಗೇಟಿನ ಆಸುಪಾಸಿಗೆ ಮುರಿದು ತಂದು ಬಾಳೆಯ ಕಂಬಗಳನ್ನು ಕಟ್ಟಲಾಗಿತ್ತು. ಈ ಎರಡು ಹಸಿರು ತುಣುಕುಗಳಿಂದ ಶಾಲೆಗೊಂದು ಹೊಸ ಕಳೆ ಬಂದಿತ್ತು. ಶಾಲೆಯ ಸೂರುಗಳಿಂದ ಎಳೆದು ಮುಂದಿನ ಧ್ವಜ ಕಂಬಕ್ಕೆ ಬಣ್ಣದ ತೋರಣಗಳನ್ನು ಒಂದು ಶಿಸ್ತಿನ ಸಾಲಿನಂತೆ ಎಳೆದು ಕಟ್ಟಲಾಗಿತ್ತು. ಶಾಲೆಯ ಮುಂದಿನ ಸಮತಟ್ಟು ನೆಲದಲ್ಲಿ ಬಣ್ಣದ ಶಾಮಿಯಾನ ಹೊಡೆದು ಪ್ಲಾಸ್ಟಿಕ್ ನೀಲಿ ಕುರ್ಚಿಗಳನ್ನು ಸಾಲಾಗಿ ಜೋಡಿಸಲಾಗಿತ್ತು.‌ ಬಾಲಕ ಬಾಲಕಿಯರು ಸಮವಸ್ತ್ರದಲ್ಲಿ ಕಳೆಕಳೆಯಾಗಿದ್ದರು. ಮೇಷ್ಟ್ರುಗಳಿಗೆ ಗಡಿಬಿಡಿ, ಧಾವಂತ. ಊರು ನಿಧಾನಕ್ಕೆ ಅಲ್ಲಿ ನೆರೆಯುತ್ತಿತ್ತು.

ಶಾಲೆಯ ಪಕ್ಕದಲ್ಲಿ ಎರಡು ದೊಡ್ಡ ದೊಡ್ಡ ಒಲೆಗಳಲ್ಲಿ ಅಡುಗೆ ಬೇಯಿಸಲಾಗುತ್ತಿತ್ತು. ಮೂರಾಲ್ಕು ಆಳುಗಳು ಅಡುಗೆ ತಯಾರಿಯಲ್ಲಿದ್ದರು. ಪಾಯಸ, ಬೂಂದಿ, ಅನ್ನ ಸಾರು, ಹುಳಿ, ಪಲ್ಯೆಗಳು ತಯಾರಾಗುತ್ತಿದ್ದವು. ಬಗೆಬಗೆ ಅಡುಗೆಗಳ ರುಚಿಯಾದ ಘಮಲು ಸುತ್ತಲು ಹರಡುತಿತ್ತು. ಒಂದು ನಿಚ್ಚಳ ಹಬ್ಬದಂತಹ ವಾತಾವರಣ ಅಲ್ಲಿ ಅರಳಿತ್ತು.

“ಮಿನಿಷ್ಟ್ರು ಬರ್ತಾರೆ ಮಿನಿಷ್ಟ್ರು ಗೊತ್ತಾ? ಮಧ್ಯಾಹ್ನ ನಿಮ್ಜೊತೆಯೇ ಊಟ ಮಾಡ್ತಾರಂತೆ. ನಿಮ್ಮ ಸ್ಕೂಲ್ ಗೆ ಬರ್ತೀನಿ ಮಧ್ಯಾಹ್ನ ನಿಮ್ಮ ಸ್ಕೂಲ್ ಮಕ್ಕಳ ಜೊತೆಯೇ ಊಟ ಮಾಡ್ತೀನಿ ಅಂತ ನಾಲ್ಕು ದಿನ ಮೊದಲೇ ಅಂದಿದ್ರು ಮಿನಿಷ್ಟರ್. ನೋಡಿ ನೋಡಿ ಅಡುಗೆ ಘಮಲು ಹೇಗೆ ಬರ್ತಾ ಇದೆ. ಆ ಎಲ್ಲಾ ಅಡುಗೆ ನಿಮಗಾಗಿಯೆ ಮಾಡ್ತಿರೋದು ಗೊತ್ತಾ.‌ ಮಿನಿಷ್ಟ್ರು ಜೊತೆ ಊಟ ಮಾಡುವ ನಿಮ್ ಪೋಟೊ ನಾಳೆ ಪೇಪರನಲ್ಲಿ ಬರುತ್ತೆ ಗೊತ್ತಾ? ಲಕ್ಕಿ ನೀವು ಲಕ್ಕಿ” ರಜೆ ಕಳೆದು ಬಂದ ಮಕ್ಕಳಿಗೆ ಶಾಲೆಯ ಆರಂಭದ ದಿನ ಬೆಳ್ ಬೆಳಗ್ಗೆಯೆ ಮೇಷ್ಟ್ರು ಹೀಗೆ ಪ್ರೋತ್ಸಾಹ ತುಂಬವ ಶೈಲಿಯಲ್ಲಿ ಮಕ್ಕಳಿಗೆ ಹೇಳುತ್ತಿದ್ದರು.

ಮಿನಿಷ್ಟರ್ ಅಂದರೆ ಏನೆಂದು ಅಷ್ಟಾಗಿ ಅರಿವಿಲ್ಲದ ಆ ಮಕ್ಕಳು ಮೇಷ್ಟ್ರು ಗಡಿಬಿಡಿಯಲ್ಲಿ ಮತ್ತು ಸಾಕಷ್ಟು ಸಡಗರದಲ್ಲಿ, ಧಾವಂತದ್ದಲ್ಲಿ ಹೇಳುತ್ತಿದ್ದರಿಂದ ಮಕ್ಕಳಿಗೆ ಅವರು ತುಂಬಾ ವಿಶೇಷವಾದವರು ಮತ್ತು ತುಂಬಾ ದೊಡ್ಡವರು ಇರಬೇಕು ಎನಿಸಿತು. ಅಂತವರು ನಮ್ಮ ಜೊತೆ ಜೊತೆ ಊಟ ಮಾಡುತ್ತಾರೆ ಎಂಬುದನು ನೆನೆದು ಪುಳಕಗೊಂಡರು. ಅವರ ಕಣ್ಣುಗಳಲ್ಲಿ ಒಂದು ಹೊಳಪು ಕಾಣಿಸಿತು.

ಇಂದೇ ಶಾಲೆಯ ಆರಂಭ. ಇಷ್ಟು ದಿನ ರಜೆ ಕಳೆದ ಬಳಿಕ ನಾಳೆ ಶಾಲೆಯ ಬಾಗಿಲು ತೆರೆಯುತ್ತಿವೆ. ಮೊದಲ ದಿನ ಶಾಲೆಯಲ್ಲಿ ಹಬ್ಬ. ಹಬ್ಬ ಅಂದಮೇಲೆ ಹಬ್ಬದ ಊಟವೂ ಇರುತ್ತದೆ. ಹಬ್ಬದ ಸಿಹಿಯೂಟದ ಜಾಡು ಹಿಡಿದು ಅವ್ವ ತಟ್ಟಿದ ರೊಟ್ಟಿ ತಿನ್ನದೆ ಓಡಿ ಬಂದಿದ್ದ ಕಿಟ್ಟಿ. ಕಿಟ್ಟಿ ಮೂರನೆ ತರಗತಿಯ ಪುಟ್ಟ ಪೋರ. ಅವನು ಶಾಲೆಯ ಅಡುಗೆ ಘಮಲಿಗೆ ಮತ್ತು ಹಸಿಯುತ್ತಿರುವ ಹೊಟ್ಟೆಯ ಮಧ್ಯೆ ಕಂಗಾಲಾಗಿದ್ದ. ಮೇಷ್ಟ್ರು ಹೇಳುತ್ತಿದ್ದ ಮಿನಿಷ್ಟರ್, ಪೋಟೊ, ಪೇಪರ್ ಈ ಯಾವ ಮಾತುಗಳೂ ಅವನ ಕಿವಿಗೆ ಬೀಳಲಿಲ್ಲ. ಊಟದ ಚೆಂದದ ವಾಸನೆ ಅವನನ್ನು ಆವರಿಸಿತ್ತು.

ಊರು ಕಾಯತೊಡಗಿತು. ಶಾಲೆಯೂ ಕಾಯತೊಡಗಿತು. ಮೇಷ್ಟ್ರು ಎಲ್ಲಾ ಸಿದ್ದತೆ ಮಾಡಿಕೊಂಡು ತುದಿಗಾಲ ಮೇಲೆ ನಿಂತಿದ್ದರು. ಅವರಿಗೆ ಹಾಕಬೇಕಾದ ಹಾರ, ಎತ್ತಬೇಕಾದ ಆರತಿ, ಡೋಲು ತಮಟೆಗಳು ಸಿದ್ದವಾಗಿ ಕಾಯುತ್ತಿದ್ದವು. ಮಕ್ಕಳು‌ ಅತ್ತ ಅಡುಗೆ ವಾಸನೆ, ಇತ್ತ ಖಾಲಿಯಾಗುತ್ತಿರುವ ಹೊಟ್ಟೆ, ಯಾರೊ ಬರುತ್ತಾರೆ ಎಂಬ ಕಾಯುವಿಕೆಯ ಅಸಹನೆಯಲ್ಲಿ ತೊಳಲಾಡುತ್ತಿದ್ದರು. ನಿಧಾನಕ್ಕೆ ಅವರ ಸಹನೆಯೂ ಅವರ ಹಿಡಿತಕ್ಕೆ ಸಿಗದೆ ಓಲಾಡುತ್ತಿತ್ತು.

ಊಟದ ಸಮಯವಾಯಿತು. ಮಿನಿಷ್ಟರ್ ರ ಸುಳಿವಿಲ್ಲ. ಇನ್ನೂ ಅರ್ಧ ಗಂಟೆ ಕಳೆಯಿತು. ಇಲ್ಲ, ಅವರ ಕಾರಿನ ಸದ್ದು ಕೇಳಿಸಲಿಲ್ಲ. ಮಕ್ಕಳ ಹೊಟ್ಟೆ ಪೂರ್ತಿ ಖಾಲಿಯಾಗಿದೆ. ಶಿಕ್ಷಕರು ಅತ್ತ ಕಡೆ ಗಮನಹರಿಸಿಲ್ಲ. ಸಮಯ ಉರುಳತ್ತಲೇ ಇದೆ. ಆಕಾಶದಲ್ಲಿ ಮೋಡಗಳು ನೆರೆಯುತ್ತಿವೆ.

ಮಧ್ಯಾಹ್ನ ಮೂರಾದರು ಸಚಿವರ ಸುಳಿವಿಲ್ಲ. ಇತ್ತ ಕಿಟ್ಟಿಯ ಹೊಟ್ಟೆ ಕೇಳಲು ತಯಾರಿಲ್ಲ. ಹಿಂದಿನ ದಿನ ರಾತ್ರಿಯಷ್ಟೆ ಊಟ ಮಾಡಿದ್ದ ಅವನು ಬೆಳಗ್ಗೆ ಏನೂ ತಿಂದಿಲ್ಲ. ಅವನ ಅವ್ವ ‘ರೊಟ್ಟಿ ತಿಂದು ಹೋಗು ಮಗಾ..’ ಅನ್ನುವ ಮಾತು ಕೇಳಿಸಿಕೊಳ್ಳದೆ ಬ್ಯಾಗ್ ನೇತುಹಾಕಿಕೊಂಡು ಓಡಿ ಬಂದಿದ್ದ. ಈಗ ಕಿಟ್ಟಿಯ ಹೊಟ್ಟೆಯಲ್ಲಿ ಯುದ್ದ ಶುರುವಾಗಿದೆ. ಕೂತು ಯೋಚಿಸಿದ. ಹೊಟ್ಟೆಯ ತಳಮಳ, ಪಾಯಸದ ಘಮಘಮ ವಾಸನೆ ಈ ಎರಡೂ ಜಗಳಕ್ಕೆ ಬಿದ್ದು ಕೊನೆಗೆ ಗೆದದ್ದು ಪಾಯಸದ ವಾಸನೆಯೇ. ಅರೆಕ್ಷಣ ಯೋಚಿಸಿ ಒಂದು ನಿರ್ಧಾರಕ್ಕೆ ಬಂದ. ಯಾರಿಗೂ ಕಾಣದಂತೆ ಹುಡುಗರ ಗುಂಪಿನಿಂದ ನಿಧಾನಕ್ಕೆ ಹಿಂದೆ ಸರಿದು ಎದ್ದ. ತನ್ನ ಹಸಿವಿಗೆ ತಾನೆ ಗೌರವಕೊಡದಿದ್ದರೆ ಇನ್ಯಾರು ಕೊಡಲು ಸಾಧ್ಯ ಎಂಬಂತಿತ್ತು ಅವನ ನಿರ್ಧಾರ. ಮೆಲ್ಲಗೆ ನಡೆಯುತ್ತಾ ಯಾರಿಗೂ ಗುಮಾನಿ ಬರದಂತೆ ಅಡುಗೆ ಮನೆಕಡೆ ನುಗ್ಗಿದ. ಅಡುಗೆ ಮನೆಯಲ್ಲಿ ಯಾರೂ ಇರಲಿಲ್ಲ. ಎಲ್ಲರೂ ಶಾಲೆಯ ಮುಂದೆ ನಿಂತು ಮಿನಿಷ್ಟರ್ ಇನ್ನೇನು ಬರಬಹುದು ಎನ್ನುವ ಧಾವಂತದಲ್ಲಿ‌ ಕಾಯುತ್ತಿದ್ದರು. ಕಿಟ್ಟಿ ಅಡುಗೆ ಮನೆಗೆ ನುಗ್ಗಿ ಅಲ್ಲೆ ಇದ್ದ ಒಂದು ಅಡಿಕೆ ತಟ್ಟೆ ಎತ್ತಿಕೊಂಡು ಪಾಯಸದ ಪಾತ್ರೆಯನ್ನು ನಿಧಾನಕ್ಕೆ ತೆರೆದು ಅದರೊಳಗಿದ್ದ ಘಮಘಮ ಪಾಯಸವನ್ನು ಹಾಕಿಕೊಳ್ಳತೊಡಗಿದ. ಊರಿನವರು ಯಾರೊ ಗಮನಿಸಿ ಓಡಿ ಬಂದು ಕಿಟ್ಟಿಗೆ ಎರಡೆಟು ಹಾಕಿ ತಟ್ಟೆ ಕಸಿದು ಬಿಟ್ಟರು. ಒಂದಷ್ಟು ಪಾಯಸ ನೆಲದ ಮೇಲೆ ಚೆಲ್ಲಿ ಹೊಯಿತು. ಅವನಿಗೆ ಬೈದು ಆಚೆ ಕಳುಹಿಸಿದರು. ಕಿಟ್ಟಿಗೆ ತೀರಾ ಅವಮಾನವಾದಂತಾಯ್ತು. ಅಳು ಬಂದೆ ಬಿಟ್ಟಿತು.

ಅಳುತ್ತಾ ಮನೆಗೆ ಬಂದ ಕಿಟ್ಟಿ ರೊಟ್ಟಿಯ ಹುಡುಕಾಟ ನಡೆಸಿದ. ಒಂದು ತುಣುಕು ರೊಟ್ಟಿಯೂ ಸಿಗಲಿಲ್ಲ. ಹಸಿವಿಗೆ ಒಂದಷ್ಟು‌ ನೀರು ಕುಡಿದು‌ ನಿದ್ದೆ ಹೋದ. ಅವನ ಅವ್ವ ಕೂಲಿಗೆ ಅಂತ ಯಾರದೊ ಹೊಲಕ್ಕೆ ಹೋಗಿದ್ದಳು. ಈಗಾಗಲೇ ನೆರೆದಿದ್ದ ಮೋಡಗಳು ಮಳೆ ಹನಿಸತೊಡಗಿದವು. ಹನಿಗಳು ದಟ್ಟವಾಗಿ ಮಳೆ ಜೋರಾಗಿ ಸುರಿಯತೊಡಗಿತು. ಮಗುವಿನ ಕೋಪವೇ ಮೋಡಗಳಿಗೆ ತಟ್ಟಿದೆಯೇನೊ ಎನ್ನುವಂತೆ ದಟ್ಟ ದಟ್ಟ ಮೋಡಗಳು ಮತ್ತಷ್ಟು ಹೆಚ್ಚಾದವು. ಮಳೆ ಮತ್ತಷ್ಟು ಜೋರಾಯಿತು. ಜೋರಾದ ಮಳೆ ಬಿಡದಂತೆ ಸುರಿಯತೊಡಗಿತು. ಆ ಊರು ಹಿಂದೆ ನೋಡಿಯೇ ಇಲ್ಲವೇನೊ ಎಂಬಂತೆ ಅಂದು ಮಳೆ ಸುರಿಯತೊಡಗಿತು. ಮಳೆ ಕಾರಣಕ್ಕೆ ತಾನು ಬರಲಾಗುವುದಿಲ್ಲ ಎಂದು ಮಿನಿಷ್ಟರ್ ಸಂಜೆ ನಾಲ್ಕು ಗಂಟೆಗೆ ಸುದ್ದಿ ತಲುಪಿಸಿದರು. ಮಳೆಯಂತೂ ಬಿಡದೇ ಸುರಿಯತೊಡಗಿತು.

ಇತ್ತ ಸಂಜೆಗೆ ಕೂಲಿಯಿಂದ ದಣಿದು ಬಂದ ಕಿಟ್ಟಿಯ ಅವ್ವ ಮಗ ಮಲಗಿರೋದನ್ನು ಆಶ್ಚರ್ಯಗೊಳ್ಳಲಿಲ್ಲ. ಒಮ್ಮೊಮ್ಮೆ ಕಾದು ಕಾದು ಕಿಟ್ಟಿ ನಿದ್ದೆ ಹೋದ ಉದಾಹರಣೆಗಳಿವೆ. ಇಂದೂ ಕೂಡ ಹಾಗೆಯೇ ಎಂದು ಕೊಂಡು ಅಡುಗೆ ಮಾಡಲು ಮೊದಲಿಟ್ಟಳು. ಅಡುಗೆ ಮಾಡಿ ಅವನನ್ನು ರಾತ್ರಿ ಊಟಕ್ಕೆ ಎಬ್ಬಿಸಿದಳು. ಕಿಟ್ಟಿ ಎದ್ದು ಕೂತ. ಇಡೀ ದಿನ ಊಟವಿಲ್ಲದೆ ಅವನು ಬಸವಳಿದು ಹೋಗಿದ್ದ. ಹಠವಾದಿ ಮಳೆ ಸುರಿಯುತ್ತಲೇ ಇತ್ತು. “ಕಿಟ್ಟಿ ಮಧ್ಯಾಹ್ನ ಶಾಲೇಲಿ ಉಂಡ್ಯೊ ಇಲ್ವೊ? ಅದೇನೊ ಶಾಲೇಲಿ ಮಾಡಿದ ಅಡುಗೆ ಹಳಸಿತ್ತು ಅಂತ ಮಾತಾಡಿಕೊಳ್ತಿದ್ರು. ಹಳಸಿದ ಕೂಳ್ನ ಮಣ್ಣು ತಗ್ದು ಈಗ ತಾನೆ ಮುಚ್ಚಿದ್ರಂತೆ. ಬೆಳಗ್ಗೆನೆ ಮಾಡಿದ್ದು ನಾಲ್ಕು ಜನರ ಕೈ ಮುಟ್ಟಿದ್ರೆ ತಡ್ದೀತಾ ಹೇಳು? ಅನ್ನದಲ್ಲಿ ಮಳೆ ನೀರು ಬಿದ್ದಿತ್ತಂತೆ. ಮಳೆ ಸುರೀತು, ಮಿನಿಷ್ಟ್ರು ಬರಲಿಲ್ಲ ಅಂತ ಏನೇನೊ ಮಾತಾಡಿಕೊಳ್ತಿದ್ರು. ನೀ ಉಂಡ್ಯೊ ಇಲ್ವೊ..?!” ಅಂತ ಅವ್ವ ಕೇಳುವಾಗ ಕಿಟ್ಟಿ ಏನು ಮಾತಾಡಬೇಕು ಅಂತ ತಿಳಿಯದೆ ಅವ್ವನ ಮುಖವನ್ನು ಸುಮ್ಮನೆ ನೋಡ ತೊಡಗಿದ. ಮಳೆ ಸುರಿಯುತ್ತಲೆ ಇತ್ತು.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

December 17, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: