ಜಿ ಎನ್ ನಾಗರಾಜ್ ಅಂಕಣ- ಜಾತಿ ವ್ಯವಸ್ಥೆ, ಬ್ರಿಟಿಷರು ನಾಶ ಮಾಡಿದ ಉಕ್ಕಿನ ಉನ್ನತ ತಂತ್ರಜ್ಞಾನ.. 

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

57

ವಿಶ್ವದ ಅತ್ಯುತ್ತಮ ಖಡ್ಗಗಳನ್ನು ತಯಾರಿಸಲು ಆಧಾರವಾಗಿದ್ದ ಆ ಮೂಸೆ ಉಕ್ಕು ಅಥವಾ ಡೆಕ್ಕನಿ ಉಕ್ಕು ತಯಾರಿಸುವ ಭಾರತದ ವಿಶ್ವಪ್ರಸಿದ್ಧ ಲೋಹ ತಂತ್ರಜ್ಞಾನ ಈಗ ಏನಾಗಿದೆ? ಅದರ ಬಗ್ಗೆ ಯಾವುದಾದರೂ ಇಂಜನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನ  ಮಾಡಲಾಗುತ್ತಿದೆಯೇ?, ಯಾವುದಾದರೂ ಕಾರ್ಖಾನೆಯಲ್ಲಿ ಅಂತಹ ಉಕ್ಕನ್ನು ತಯಾರಿಸುವ ವಿಧಾನವನ್ನು ಅನುಸರಿಸಲಾಗುತ್ತಿದೆಯೇ? ಈಗ ಹೊಸ ತಂತ್ರಜ್ಞಾನದಿಂದಾಗಿ ನಿರುಪಯುಕ್ತ ಎನಿಸಿದರೂ ಭಾರತದ ಇತಿಹಾಸದಲ್ಲಿ ಅದರ ಉನ್ನತ ಸ್ಥಾನದ ನೆನಪಾಗಿ ಈ ತಂತ್ರಜ್ಞಾನ ಬಲ್ಲವರನ್ನು ಹುಡುಕಿ ಅವರಿಗೆ ಪ್ರೋತ್ಸಾಹ ಕೊಡಲಾಗಿದೆಯೇ?

ಈ ಪ್ರಶ್ನೆಗಳನ್ನು ನಾವೆಲ್ಲ ಕೇಳಿಕೊಳ್ಳಬೇಕಾಗಿದೆ.

ಬುಡಕಟ್ಟು ಕಾಲದದಲ್ಲಿ ಕಬ್ಬಿಣದ ಉಪಯೋಗವನ್ನು ಕಂಡುಕೊಂಡ ಮೇಲೆ  ನಾಗರೀಕತೆಯೇ ಗುರುತು ಸಿಗದಂತೆ ಬದಲಾಗಿ ಹೋಯಿತು. ಕಬ್ಬಿಣದ ಗುಳ ಹಚ್ಚಿದ ನೇಗಿಲಿನಿಂದಾಗಿ  ಕೃಷಿ ಬಹಳ ವಿಸ್ತಾರವಾಯಿತು. ಹೊಸತಾಗಿ ರಾಜಪ್ರಭುತ್ವಗಳು ಸ್ಥಾಪನೆಯಾದವು. ಪರಸ್ಪರ ಆಕ್ರಮಣ ಯುದ್ಧಗಳಲ್ಲಿ ತೊಡಗಲು ಶಸ್ತ್ರಾಸ್ತ್ರಗಳನ್ನು ಒದಗಿಸಿದವು.

ಹೀಗಾಗಿ ಕಬ್ಬಿಣ ಒಂದು ಕಡೆ ಬದುಕಿನ ಮುಖ್ಯವಾಗಿ ಕೃಷಿ ಮತ್ತು ಕೆಲವು ಗೃಹೋಪಯೋಗದ ಉಪಕರಣಗಳ ತಯಾರಿಕೆಗೆ ಅಗತ್ಯವಾಯಿತು. ಮತ್ತೊಂದು ಕಡೆ ರಾಜ ಪ್ರಭುತ್ವಗಳಿಗೆ ಶಸ್ತ್ರಾಸ್ತ್ರಗಳ ತಯಾರಿಕೆಗೆ. ಆ ಕಾರಣಕ್ಕಾಗಿ ಕಬ್ಬಿಣ ಉಪಕರಣಗಳ ತಯಾರಕರಾದ ಕಮ್ಮಾರರ ಬಗ್ಗೆ ಎಲ್ಲಾದರೂ ಒಂದು ಕಡೆ ಬಹಳ ಅಪರೂಪವಾಗಿಯಾದರೂ ಶಾಸನಗಳಲ್ಲಿ, ಸಾಹಿತ್ಯದಲ್ಲಿ ನಮೂದಾಗಿದೆ. ಆದರೆ ಈ ಎಲ್ಲಕ್ಕೂ ಅಗತ್ಯವಾದ ಕಬ್ಬಿಣ ಗಣಿಗಳ, ಕಬ್ಬಿಣ ತಯಾರಕರ ಬಗ್ಗೆ ಎಲ್ಲಿಯೂ ಸಣ್ಣ ಸೂಚನೆಯೂ ಇಲ್ಲ.

ಭಾರತದ ಇತಿಹಾಸದಲ್ಲಿ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದ ಕರ್ನಾಟಕದ ಕಬ್ಬಿಣ ತಯಾರಕರು, ವಿಶ್ವಪ್ರಸಿದ್ಧ ಡೆಕ್ಕನಿ ಉಕ್ಕುಗಳನ್ನು ಬಹಳ ಶ್ರಮಪಟ್ಟು ತಯಾರು ಮಾಡಿದವರ ಬಗ್ಗೆ ಈ ದಾಖಲೆ, ಆಕರಗಳಲ್ಲಿ ಒಂಚೂರೂ ಗುರುತಿಲ್ಲ‌. ಏಕೆಂದು ಮತ್ತೆ ವಿವರಿಸಬೇಕಾಗಿಲ್ಲ. ಆದರೆ ಅವರು ಉತ್ಪಾದಿಸುವ ಕಬ್ಬಿಣ ಮತ್ತು ಉಕ್ಕಂತೂ ಸಮಾಜಕ್ಕೆ ಹಾಗೂ ರಾಜ ಪ್ರಭುತ್ವಗಳಿಗೆ ಬಹಳ ಅಗತ್ಯವಾಗಿತ್ತು. ಅದನ್ನು ಹೇಗೆ ಪಡೆಯಲಾಗುತ್ತಿತ್ತು?

ಹಳ್ಳಿಗಳಲ್ಲಿ ಕೃಷಿ ಉಪಕರಣಗಳನ್ನು ತಯಾರಿಸುತ್ತಿದ್ದ ಕಮ್ಮಾರರು ಅಲ್ಲಿಯ ಸಾಮಾಜಿಕ ರಚನೆಯಲ್ಲಿ ಆಯಗಾರರಾಗಿದ್ದರು. ಆಯಾ ಊರಿನ ರೈತರ ಬಳಿ ತಾವು ತಯಾರಿಸಿದ, ರಿಪೇರಿ ಮಾಡಿದ ಉಪಕರಣಗಳಿಗೆ ವಾರ್ಷಿಕವಾಗಿ ಒಂದಷ್ಟು ಧಾನ್ಯಗಳನ್ನು ಪಡೆಯುತ್ತಿದ್ದರು. ಎಂತಹ ಉಪಕರಣಗಳನ್ನು ಎಷ್ಟು ತಯಾರು ಮಾಡಿಕೊಟ್ಟರು, ಎಷ್ಟು, ಎಂತಹ ಉಪಕರಣಗಳನ್ನು ರಿಪೇರಿ ಮಾಡಿಕೊಟ್ಟರು ಎಂಬ ಆಧಾರದ ಮೇಲಲ್ಲ. ಈ ಕೆಲಸಗಳಿಗೆ ಎಷ್ಟು ಕಬ್ಬಿಣವನ್ನು ಅವುಗಳಿಗೆ ಉಪಯೋಗಿಸಲಾಗಿದೆ ಮತ್ತು ಎಷ್ಟು ಶ್ರಮಪಡಲಾಗಿದೆ ಎಂಬ ಆಧಾರದ ಮೇಲಲ್ಲ.

ಈ ಧಾನ್ಯದ ಆಯದಿಂದ (ಆದಾಯ ಅಲ್ಲ) ಕಮ್ಮಾರ ಮತ್ತವರ ಕುಟುಂಬ ಜೀವನ ವರ್ಷ ಪೂರ್ತಿ ಅವರ ಹೊಟ್ಟೆ ತುಂಬುತ್ತಿರಲಿಲ್ಲ. ಜೊತೆಗೆ ಮಕ್ಕಳು, ನಾಮಕರಣ, ಹಬ್ಬ, ಮದುವೆ ಇತ್ಯಾದಿಗಳಿಗೆ ಆ ಊರಿನ ಭೂಮಾಲಕರಿಂದ ಸಾಲ ಮಾಡಬೇಕಾಗಿ ಬರುತ್ತಿತ್ತು. ಈ ಸಾಲ ತೀರಿಸಲು ಕೇವಲ ಬಡ್ಡಿಗೆ ಅವರುಗಳಿಗೆ ಉಪಕರಣಗಳನ್ನು ತಯಾರು ಮಾಡಿಕೊಡಬೇಕಾಗುತ್ತಿತ್ತು. ಹಳ್ಳಿಗಳ ಹಲವರಂತೆ ಗ್ರಾಮ ಗಾವುಂಡರುಗಳಿಗೆ ಬಿಟ್ಟಿ ಕೆಲಸ ಮಾಡಿಕೊಡಬೇಕಾಗುತ್ತಿತ್ತು. ಆದರೆ ಇಂತಹ ಆಯದಿಂದ ಅವರು ತಮ್ಮ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ತಮ್ಮ ಕೌಶಲ್ಯವನ್ನು ಉತ್ತಮಪಡಿಸಿಕೊಳ್ಳಲು ಅಗತ್ಯವಾದ ಪ್ರೇರೇಪಣೆ ದೊರೆಯುತ್ತಿತ್ತೇ ಎಂಬುದು ಒಂದು ಮುಖ್ಯವಾದ ಪ್ರಶ್ನೆ. ಜೊತೆಗೆ ಬೇರೆ ಬೇರೆ ಹಳ್ಳಿಗಳಲ್ಲಿ ಹಂಚಿ ಹೋಗಿರುವಾಗ ಅವರ ನಡುವೆ ತಮ್ಮ ತಂತ್ರಜ್ಞಾನದ ಬಗ್ಗೆ ಪರಸ್ಪರ ಅನುಭವದಿಂದ ಕಲಿಯುವ, ವಿಚಾರ ವಿನಿಮಯ‌ ಮಾಡಿಕೊಳ್ಳುವ ಅವಕಾಶವೂ ವಂಚಿತವಾಗಿತ್ತು.

ಇವರು ಈ ಉಪಕರಣಗಳನ್ನು ತಯಾರಿಸಲು ಕಬ್ಬಿಣವನ್ನು ಎಲ್ಲಿಂದ ಮತ್ತು ಹೇಗೆ ಪಡೆಯುತ್ತಿದ್ದರು? ಕಬ್ಬಿಣವನ್ನು ತಯಾರು ಮಾಡುವವರು ಎಲ್ಲೆಲ್ಲೂ ಇರಲು ಸಾಧ್ಯವಿಲ್ಲ. ಅವರು ಕೇವಲ ಕಬ್ಬಿಣದ ಅದಿರು ಸಿಗುವ ಕಡೆ ಮತ್ತು ಅದನ್ನು ಕರಗಿಸುವಷ್ಟು ಹೆಚ್ಚಾದ ಶಾಖವನ್ನು ಉತ್ಪಾದನೆ ಮಾಡಲು ಅವಶ್ಯವಾದ ಇದ್ದಿಲನ್ನು ತಯಾರಿಸಲು ಬೇಕಾದ ಸೌದೆ ಸಿಗುವ ಕಾಡುಗಳ ಬಳಿಯೇ ವಾಸಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಅವರು ಜನರಿಂದ ದೂರವಾಗಿ ಕಾಡುಗಳ ಒಳಗೆ, ಬೆಟ್ಟ ಗುಡ್ಡಗಳ ಬಳಿ ವಾಸಿಸುತ್ತಿದ್ದರು. ಬಹಳ ಮಟ್ಟಿಗೆ ಆದಿವಾಸಿಗಳಾಗಿ ಉಳಿದರು. ಅವರಿಂದ ಊರ ಕಮ್ಮಾರರು ಕಬ್ಬಿಣ ಪಡೆದುಕೊಳ್ಳುವುದು ಹೇಗೆ? ಅದಕ್ಕೆ ಮಧ್ಯವರ್ತಿಗಳು ಅನಿವಾರ್ಯ. ಈ ಮಧ್ಯವರ್ತಿಗಳು ಕಾಡುಗಳ ಬಳಿ ವಾಸಿಸುವ ಈ ಕಬ್ಬಿಣ ತಯಾರಕರೊಂದಿಗೆ ಹೇಗೆ ವ್ಯವಹರಿಸಬಹುದು ಎಂಬುದನ್ನು ಊಹೆ ಮಾಡಿಕೊಳ್ಳಬಹುದು.

ಇಂತಹ ಪರಿಸ್ಥಿತಿ ಕಬ್ಬಿಣ ತಯಾರಕರಿಗೆ ಕೂಡ ಹೇಗೋ ಜೀವ ಉಳಿಸಿಕೊಳ್ಳಲು ಬೇಕಾದ ಒಂದಿಷ್ಟು ಆಹಾರಧಾನ್ಯವನ್ನು ನೀಡುತ್ತಿತ್ತೇ ಹೊರತು, ತಮ್ಮ ತಂತ್ರಜ್ಞಾನವನ್ನು ಉತ್ತಮಪಡಿಸಿಕೊಳ್ಳಲು ಬೇಕಾದ ಸಂಪನ್ಮೂಲವನ್ನು ಒದಗಿಸುತ್ತಿರಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಕಬ್ಬಿಣದ ಬಲದಿಂದಲೇ ಸ್ಥಾಪಿತವಾದ ರಾಜಪ್ರಭುತ್ವಗಳು ತಮ್ಮ ಆದಾಯದ ಮೂಲಗಳಾಗಿ ಲೋಹಗಳ ಬಗ್ಗೆ ಗಮನ ನೀಡಿದವು. ಆದರೆ  ಹೆಚ್ಚು ಆದಾಯ ತರುವ ಚಿನ್ನ, ಬೆಳ್ಳಿ, ವಜ್ರ, ವೈಢೂರ್ಯಗಳ ಮೇಲೇ ಅವರ ಗಮನ.

ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಗಣಿಗಳ ನಿರ್ವಹಣೆ ಮತ್ತು ಅದರ ಉಸ್ತುವಾರಿ ಅಧಿಕಾರಿಯ ಕರ್ತವ್ಯದ ಬಗ್ಗೆ ಒಂದು ಅಧ್ಯಾಯವೇ ಇದೆ. ಅದರಲ್ಲಿ ವಿವಿಧ ಲೋಹಗಳು ಇರುವ ಪ್ರದೇಶಗಳನ್ನು ಗುರುತಿಸುವುದು ಹೇಗೆ ಎಂಬ ವಿವರಗಳು ಇವೆ. ಅದರಲ್ಲಿ ಕಬ್ಬಿಣದ ಬಗೆಗೂ ಒಂದು ವಾಕ್ಯ ಇದೆ. ತಾಮ್ರ, ತವರ, ಸತು ಮುಂತಾದವುಗಳ ಬಗೆಗೂ ನಮೂದುಗಳಿವೆ. ಆದರೆ ಚಿನ್ನ, ಬೆಳ್ಳಿಗಳ ಬಗ್ಗೆ, ಅದರಿಂದ ನಾಣ್ಯಗಳನ್ನು ತಯಾರಿಸುವ ಬಗ್ಗೆ, ಚಿನ್ನ ಮತ್ತು ಇತರ ಲೋಹಗಳನ್ನು ವಿವಿಧ ಪ್ರಮಾಣದಲ್ಲಿ ಮಿಶ್ರ ಮಾಡಿ ವಿವಿಧ ರೀತಿಯ ಚಿನ್ನದ ಆಭರಣಗಳನ್ನು ತಯಾರಿಸುವ ಬಗ್ಗೆ ವಿವರಗಳಿವೆ. ಅಕ್ಕಸಾಲಿಗರು ಮಾಡುವ ಮೋಸಗಳನ್ನು ಕಂಡುಹಿಡಿಯುವ ಬಗ್ಗೆಯೆಲ್ಲ ವಿವರಗಳಿವೆ. ಇದಕ್ಕಾಗಿ ಗಣಿ ಇಲಾಖೆ ಮಾತ್ರ ಅಲ್ಲದೆ ಸುವರ್ಣಾಧ್ಯಕ್ಷ, ಸರಾಫ್ ಇಲಾಖೆ ಎಂಬ ಮೂರು ವಿವಿಧ ಇಲಾಖೆಗಳನ್ನು ಸ್ಥಾಪಿಸುವ ಸೂಚನೆ ನೀಡಲಾಗಿದೆ.

ತಾಮ್ರದ ಪಾತ್ರೆ ಪಗಡಿಗಳ ಬಗ್ಗೆ ಕೂಡಾ ನಮೂದಿಸಲಾಗಿದೆ.‌ ಆದರೆ ಕಬ್ಬಿಣದ ಗಣಿಗಾರಿಕೆ, ಕಬ್ಬಿಣದ ತಯಾರಿಕೆಯ ವಿಷಯವನ್ನು ಅಲಕ್ಷಿಸಲಾಗಿದೆ.

ಕಬ್ಬಿಣದ ಪ್ರಸ್ತಾಪ ಬರುವುದು ಆಯುಧಾಗಾರದ ಇಲಾಖೆಯ ಸಂದರ್ಭದಲ್ಲಿ ಮಾತ್ರ. ಆಯುಧಗಳನ್ನು ಮಾಡುವ ಶಿಲ್ಪಿಗಳಿಗೆ ಕೂಲಿ ಮಾತ್ತು ಸಮಯವನ್ನು ನಿಗದಿ ಮಾಡಿ ಮಾಡಿಸಬೇಕು. ಅವುಗಳಿಗೆ ತುಕ್ಕು ಹಿಡಿಯದಂತೆ ಸಂರಕ್ಷಿಸಬೇಕು ಎಂದು ಮಾತ್ರ ಹೇಳಲಾಗಿದೆ. ಆದರೆ ವಿವಿಧ ಅಸ್ತ್ರಗಳು, ಅವುಗಳ ಆಕಾರಗಳ ಬಗ್ಗೆ, ಲೋಹದ ಕವಚಗಳ ಬಗ್ಗೆ ವಿವರಿಸಲಾಗಿದೆಯೇ ಹೊರತು ಅವುಗಳ ತಯಾರಿಕೆಯ ವಿಧಾನಗಳು, ಕಬ್ಬಿಣದ ಜೊತೆಗೆ ವಿವಿಧ ಲೋಹಗಳನ್ನು ಮಿಶ್ರ ಮಾಡಿ ತಯಾರಿಸುವುದರ ಪರಿಣಾಮ, ಉಕ್ಕಿನ ತಯಾರಿ ಇವುಗಳ ಬಗ್ಗೆ ಗಮನವೇ ಇಲ್ಲ.

ಅರ್ಥಶಾಸ್ತ್ರ ರಚನೆಯಾದ ಮತ್ತು ವಿವಿಧ ಹಂತಗಳಲ್ಲಿ ವಿಸ್ತೃತ ರೂಪವನ್ನು ಪಡೆದುಕೊಳ್ಳುತ್ತಿರುವ ಸಮಯದಲ್ಲಿ ನಮ್ಮ ದೇಶದಲ್ಲಿ ಅತ್ಯುತ್ತಮ ಹಿಂದಿನ‌ ಲೇಖನಗಳಲ್ಲಿ ವಿವರಿಸಲಾದ ಮೂಸೆ ಉಕ್ಕಿನ ತಯಾರಿಕೆಯನ್ನು ಕಂಡುಕೊಳ್ಳಲಾಗಿತ್ತು. ಕತ್ತಿಗಳ ತಯಾರಿಕೆಗೆ ಅದರ ಉತ್ಕೃಷ್ಟ ಗುಣ ಶ್ಲಾಘನೆಗೆ ಒಳಗಾಗಿತ್ತು. ಆದರೆ ಅದರ ಬಗ್ಗೆ ಪ್ರಸ್ತಾಪ ಅರ್ಥಶಾಸ್ತ್ರ ಕೃತಿಯಲ್ಲಿಲ್ಲ.

ಆದರೆ ರಾಜ ಮಹಾರಾಜರುಗಳ ಯುದ್ಧಗಳು, ವಿವಿಧ ಶಸ್ತ್ರಾಸ್ತ್ರಗಳ, ಕವಚಗಳ ತಯಾರಿಕೆಯ ತುರ್ತು, ಅವುಗಳಿಗೆ ಕಬ್ಬಿಣ ಮತ್ತು ಉಕ್ಕುಗಳ ಬೇಡಿಕೆಯನ್ನು ಹಲವು ಪಟ್ಟು ಹೆಚ್ಚಿಸಿತು. ಮಾತ್ರವಲ್ಲ ಅವಶ್ಯವಾದ ಪ್ರಮಾಣದಲ್ಲಿ ಕಬ್ಬಿಣದ ಲಭ್ಯತೆ ಮತ್ತು ಅದರ ಗುಣಮಟ್ಟ ಅವರ ಸೋಲು ಗೆಲುವಿನ ಒಂದು ನಿರ್ಧಾರಕ ಅಂಶವಾಯಿತು.

ಕರ್ನಾಟಕದ ಚಾಲುಕ್ಯರು ನರ್ಮದಾ ನದೀ ತೀರದಿಂದ ಆಚೆಗೆ ಹರ್ಷವರ್ಧನಂತಹ ಸಾಮ್ರಾಟನನ್ನು ಅಟ್ಟಿದ್ದರಲ್ಲಿ, ʻಕಂಚಿಯಾನ್ ಮೂಮೆ ಪರಾಜಿಸಿದೋರ್ʼ ಎಂದು ಕೊಚ್ಚಿಕೊಂಡದ್ದರಲ್ಲಿ, ಅಲ್ಲಿಂದ ಇಲ್ಲಿಂದ ಸಂಪತ್ತನ್ನು ಸೂರೆ ಮಾಡಿ ಬದಾಮಿ, ಐಹೊಳೆ, ಪಟ್ಟದಕಲ್‌ಗಳ ದೇವಾಲಯ ನಿರ್ಮಿಸಿದ್ದರಲ್ಲಿ, ಇಲ್ಲಿ ಅಂದು ತಯಾರಾದ ಉಕ್ಕಿನ ಗುಣಮಟ್ಟ ಮತ್ತು ಪ್ರಮಾಣ, ಆ ಕತ್ತಿಗಳನ್ನು ತಯಾರಿಸಿದ ಕಮ್ಮಾರರ ಬಗ್ಗೆ ಯಾರಾದರೂ ಎಲ್ಲಿಯಾದರೂ ಹೇಳಿದ್ದಾರೆಯೇ?

ಆಗ ಇರಾನಿನಲ್ಲಿ, ಅರಬ್ ದೇಶಗಳಲ್ಲಿ ಡೆಕ್ಕನಿ ಉಕ್ಕು ಬಹಳ ಪ್ರಸಿದ್ಧವಾಗಿತ್ತು. ಇರಾನಿನ‌ ಆಳುವವರು ಅಲ್ಲಿಯ ರಾಯಭಾರಿಯನ್ನು  ಪುಲಿಕೇಶಿಯ ಆಸ್ಥಾನಕ್ಕೆ ಕಳುಹಿಸಿದ್ದರಲ್ಲಿ ಇಲ್ಲಿಯ ಕಬ್ಬಿಣ, ಉಕ್ಕಿನ ಪಾತ್ರವಿದೆಯೇ?

ಕನ್ನಡದ ಶಾಸನಗಳು ಕೆಲವೊಮ್ಮೆ ಚಿನ್ನ, ಅಕ್ಕಸಾಲಿಗರ ಬಗ್ಗೆ ಪ್ರಸ್ತಾಪಿಸಿದ್ದಾವೆ. ಆದರೆ ಆಹಾರ, ಬಟ್ಟೆಯ ಉತ್ಪಾದನೆಗೆ, ರಾಜರುಗಳ ಮೆರೆಯುವಿಕೆಗೆ ಒಂದು ಮುಖ್ಯ ಅಡಿಪಾಯವಾಗಿದ್ದ ಕಬ್ಬಿಣದ ಬಗ್ಗೆ ಒಂದು ಮಾತೂ ದಾಖಲಿಸುವುದಿಲ್ಲ.
ಈ ಪ್ರಶ್ನೆಗಳನ್ನು ಎತ್ತಬೇಕಲ್ಲವೇ?

ಅಂದು ಶಸ್ತ್ರಾಸ್ತ್ರಗಳ ತಯಾರಿಕೆಗೆ ಅಪಾರ ಪ್ರಮಾಣದ ಕಬ್ಬಿಣ, ಉಕ್ಕು ಅವಶ್ಯವಾಗಿ ಬೇಕಾಗಿತ್ತು. ನಂತರ ಕಾಲದ ಕೆಲ ಆಕರಗಳ ಆಧಾರದ ಮೇಲೆ ಹೇಳುವುದಾದರೆ ಇದು ಎರಡು ರೀತಿಯಲ್ಲಿ ನಡೆಯುತ್ತಿದ್ದಿರಬೇಕು. ಒಂದನೆಯದು, ರಾಜರ ಶಸ್ತ್ರಾಗಾರದ ಒಂದು ಅಂಗವಾಗಿ ಕತ್ತಿ ಮತ್ತಿತರ ಕಬ್ಬಿಣ ಹಾಗೂ ಉಕ್ಕಿನ ಯುದ್ಧ ಸಾಮಗ್ರಿಗಳನ್ನು ತಯಾರಿಸುವ ಕಮ್ಮಾರಸಾಲೆ, ಅದರ ಭಾಗವಾಗಿ ಕಬ್ಬಿಣದ ಅದಿರು ಸಿಗುವ ಪ್ರದೇಶದಲ್ಲಿ ನೇರವಾಗಿ ರಾಜನ ಅಧಿಕಾರಿಗಳ ಅಥವಾ ಸಾಮಂತ/ ಪಾಳೆಯಗಾರರ ಉಸ್ತುವಾರಿಯಲ್ಲಿ ಆದಿವಾಸಿಗಳು ಅಥವಾ ಮುದ್ದೆಗಮ್ಮಾರರ ಮೂಲಕ ಅವರಿಗೆ ಅವಶ್ಯವಾದಷ್ಟು ಗಣಿಗಳು ಮತ್ತು ಉಕ್ಕಿನ ತಯಾರಿಕೆ.

ಮತ್ತೊಂದು ಆ ಪ್ರದೇಶಗಳ ಪ್ರಭುಗಾವುಂಡರು ಅಥವಾ ವ್ಯಾಪಾರಿ ಮೊದಲಾದ ಮಧ್ಯವರ್ತಿಗಳು ಕಬ್ಬಿಣದ ತಯಾರಿಕೆಯನ್ನು ಮಾಡಿಸಿಕೊಂಡು ಊರ ಕಮ್ಮಾರರಿಗೆ ಮಾರುವುದು ಅಥವಾ ದೂರದ ಊರುಗಳ ಕಬ್ಬಿಣ, ಉಕ್ಕಿನ ಬೇಡಿಕೆಯನ್ನು ಪೂರೈಸುವುದು. 
ಹೊಸ ರಾಜ್ಯಗಳ ಸ್ಥಾಪನೆಯೊಂದಿಗೆ, ಸಾಮ್ರಾಜ್ಯಗಳ ವಿಸ್ತಾರದೊಂದಿಗೆ ಹಾಗೂ ಕೃಷಿಯ ವಿಸ್ತಾರದೊಂದಿಗೆ ಕಬ್ಬಿಣದ, ಉಕ್ಕಿನ ಬೇಡಿಕೆ ಹೆಚ್ಚುತ್ತಾ ಹೋಯಿತು. ಎಲ್ಲಿ ಈ ಅದಿರುಗಳಿದ್ದವೋ ಆ ಪ್ರದೇಶಗಳಿಂದ ಉಳಿದ ಬಹುಭಾಗಕ್ಕೆ  ಕಬ್ಬಿಣದ ವ್ಯಾಪಾರ ವಹಿವಾಟು ಬಹಳ ಲಾಭಕರವಾಯಿತು. ಅದರ ಮೇಲೆ ತೆರಿಗೆ ಹಾಕುವುದು ಅಥವಾ ಅದರ ವ್ಯಾಪಾರದಲ್ಲಿ ನೇರವಾಗಿ ತೊಡಗುವುದು ಆ ಪ್ರದೇಶದ ಪಾಳೆಯಗಾರು, ರಾಜರಿಗೆ ಹೆಚ್ಚು ಆದಾಯ ತರುವ ಮೂಲವಾಯಿತು.

ಹೀಗೆ ಭಾರತಾದ್ಯಂತ ವಿವಿಧ ಪ್ರದೇಶಗಳಲ್ಲಿ ಹೊಸ ರಾಜ್ಯ, ಸಾಮ್ರಾಜ್ಯಗಳು ಉದಯವಾಗುತ್ತಿದ್ದ ಕ್ರಿಪೂ ಮೂರು – ಎರಡನೇ ಶತಮಾನಗಳ  ಸಮಯದಲ್ಲಿಯೇ ಕತ್ತಿಗಳ ಚೂಪುತನ, ಧಾರ್ಡ್ಯವನ್ನು ಉನ್ನತ ಮಟ್ಟಕ್ಕೇರಿಸುವ ತುರ್ತಿನ ಕಾರಣವಾಗಿ  ಮೂಸೆ ಉಕ್ಕು ಎಂಬ ಹೊಸ ತಂತ್ರಜ್ಞಾನ ರೂಪುಗೊಂಡು ಹರಡಿದಂತೆ ಕಾಣುತ್ತದೆ.

ಮುಂದೆ ಹಲವರು ಪ್ರವಾಸಿಗಳು ದಾಖಲಿಸಿದಂತೆ ಕಮ್ಮಾರರು ಸಮಾಜದ ಅತ್ಯಂತ ಕೆಳಮಟ್ಟದಲ್ಲಿಯೇ ಉಳಿದರು. ಗುಡಿಸಲುಗಳಲ್ಲಿ ವಾಸ ಮಾಡುತ್ತಾ, ಬದುಕು ಹೊರೆಯಲು ಒಂದಷ್ಟು ಧಾನ್ಯವನ್ನು ಕೂಲಿಯಾಗಿ ಪಡೆಯುತ್ತಾ ಬದುಕು ಸಾಗಿಸಿದರು. ಕಬ್ಬಿಣ ತಯಾರಕರಿಗೆ ಅಷ್ಟು ಮಾತ್ರವೂ ದೊರಕುತ್ತಿರಲಿಲ್ಲ. 19ನೆಯ ಶತಮಾನದ ಆರಂಭದಲ್ಲಿ ಬುಖಾನನ್ ಎಂಬ ಬ್ರಿಟಿಷ್ ವೈದ್ಯ ಅವರ ಗವರ್ನರ್ ಜನರಲ್‌ ಮತ್ತು ಗವರ್ನರ್‌ಗಳ ಆಜ್ಞೆಯಂತೆ ಮಾಡಿದ ಸಮೀಕ್ಷೆಗಳಲ್ಲಿ ಬ್ರಿಟಿಷ್ ಪೂರ್ವದ ಕಬ್ಬಿಣದ ತಯಾರಿಕೆಯಲ್ಲಿ ಮೈಸೂರು ಸಂಸ್ಥಾನದಲ್ಲಿ ಕಮ್ಮಾರರಿಂದ ಉತ್ಪನ್ನದ ಒಟ್ಟು ಮೌಲ್ಯದಲ್ಲಿ ಕೇವಲ ಶೇ.3ರಷ್ಟು ಪಡೆಯುತ್ತಿದ್ದರು. ಶೇ.6ರಷ್ಟು ಉಪಕರಣ ತಯಾರಿಕೆ ಕಾರ್ಯಾಗಾರದ ಉಸ್ತುವಾರಿಗೆ ಶೇ.8 ಕುಲುಮೆಯ ಉಸ್ತುವಾರಿಗೆ,  ಶೇ.83ರಷ್ಟು ಮಾಲೀಕನಿಗೆ, ಉತ್ಪಾದನಾ ವೆಚ್ಚ, ರಾಜನಿಗೆ, ಪಾಳೆಯಗಾರನಿಗೆ ‌ನೀಡುವ ತೆರಿಗೆಗಳು, ದೇವಾಲಯ ಮತ್ತಿತರರಿಗೆ ದಾನ ಇತ್ಯಾದಿಗಳು ಸೇರಿ. ಈ ವೇತನ ಕಮ್ಮಾರರ ಹಾಗೂ ಕಬ್ಬಿಣ ತಯಾರಕರ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಎಂತಹ ಉತ್ತಮ ಉತ್ಪನ್ನ ನೀಡಿದರೂ ಇಂತಹ ದರಿದ್ರ ಬಾಳೇ ಎನ್ನುವಾಗ ಹೊಸ ಶೋಧಗಳನ್ನು ಮಾಡುವ ಅಥವಾ ಹೊರಗಿನಿಂದ ಹೊಸ ಶೋಧಗಳನ್ನು ಸ್ವೀಕರಿಸುವ ಉತ್ಸಾಹ ಬತ್ತಿ ಹೋಗುತ್ತದೆ. 1600ರ ಆರಂಭ ಕಾಲದಿಂದ ಭಾರತ ಇನ್ನೂ ವಸಾಹತಾಗುವ ಮೊದಲು ಡಚ್ಚರು ಮತ್ತಿತರರು ಭಾರತದ ಮಸ್ಲಿನ್ ಬಟ್ಟೆಗಳನ್ನು ಇಲ್ಲಿಂದ ಯುರೋಪಿಗೆ ರಫ್ತು ಮಾಡುತ್ತಿದ್ದರೆಂದು ಕೇಳಿದ್ದೇವಲ್ಲ. ಅದೇರೀತಿ ಕಬ್ಬಿಣ ಮತ್ತು ಉಕ್ಕನ್ನು, ಮೊಳೆಗಳು, ಫಿರಂಗಿಯ ಗುಂಡುಗಳು ಮೊದಲಾದ ಉತ್ಪನ್ನಗಳನ್ನು ಇಲ್ಲಿಂದ ರಫ್ತು ಮಾಡಿ ಲಾಭ ಮಾಡಿಕೊಳ್ಳುತ್ತಿದ್ದರು. ಅದಕ್ಕಾಗಿ ಹೊಸ ಕಂಪನಿಗಳನ್ನೇ ಹುಟ್ಟು ಹಾಕಿದರು. ಒತ್ತಡ ಹೇರಿ ಅತಿಕಡಿಮೆ ಬೆಲೆಯಲ್ಲಿ ಕೊಳ್ಳುತ್ತಿದ್ದರು.  ಆಂಧ್ರ, ಕರ್ನಾಟಕದ ಪ್ರದೇಶಗಳಿಂದ ಹೆಚ್ಚಾಗಿ ಕೊಳ್ಳುತ್ತಿದ್ದರು.‌ ಇಂತಹ ವಾಣಿಜ್ಯದಲ್ಲಿ ತೊಡಗಿದ್ದ ಒಬ್ಬ ಡಚ್ಚನು ಭಾರತದಲ್ಲಿ 53 ವಿವಿಧ ರೀತಿಯ ತೆರಿಗೆಗಳನ್ನು ಹಾಕಲಾಗುತ್ತಿತ್ತು ಎಂದು ದಾಖಲಿಸಿದ್ದಾನೆ.

ಸಾವಿರಾರು ವರ್ಷಗಳ ಸ್ಥಗಿತತೆ:
ಭಾರತದ ಲೋಹ ತಂತ್ರಜ್ಞಾನ ಆರಂಭದ ಹೊಸ ವಿಧಾನಗಳು ಮತ್ತು ಮೂಸೆ ಉಕ್ಕಿನ ಶೋಧವನ್ನು ಬಿಟ್ಟರೆ ಸಾವಿರಾರು ವರ್ಷಗಳ ಕಾಲ ಬಹಳಷ್ಟು ಸ್ಥಗಿತಗೊಂಡಿತು. ಇಂತಹ ಪರಿಸ್ಥಿತಿಗೆ ಇರ್ಫಾನ್ ಹಬೀಬ್ ಮತ್ತು ವಿಭಾ ತ್ರಿಪಾಠಿ ಮೊದಲಾದ ಅಧ್ಯಯನಕಾರರು ಹಲವು ಕಾರಣಗಳನ್ನು ಗುರುತಿಸಿದ್ದಾರೆ.

ಅದರ ತಾಂತ್ರಿಕ ಕಾರಣಗಳು ಹೀಗಿವೆ:
* ಅದಿರಿನಿಂದ ಕಬ್ಬಿಣ ತಯಾರಿಸುವುದಕ್ಕೆ ಮತ್ತು ಇತರ ಕೆಲಸಗಳಿಗೆ ಕಬ್ಬಿಣ ಕರಗಿಸಲು ಸೌದೆಯ ಇದ್ದಿಲನ್ನು ಬಳಸುತ್ತಿದ್ದುದು ಬಹಳ ವೆಚ್ಚದ್ದಾಗಿತ್ತು. ಹೆಚ್ಚು ಕಾಡುಗಳ ನಾಶಕ್ಕೆ ಕಾರಣವಾಗುತಿತ್ತು. ಪ್ರಭುತ್ವಗಳು ಕಾಡಿಗೆ ಸಂಬಂಧಿಸಿ ನಿರ್ಬಂಧ ಹೇರತೊಡಗಿದಾಗ ಕಬ್ಬಿಣದ ಉತ್ಪಾದನೆ ಬಹಳ ತ್ರಾಸದಾಯಕವಾಯಿತು. ಚೀನಾವೂ ಸೇರಿದಂತೆ ಇತರ ದೇಶಗಳು ಕೋಕ್ ಬಳಸಿ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲಾರಂಭಿಸಿದವು.

* ಬಹಳ ಕಬ್ಬಿಣ ಉತ್ಪಾದಿಸುವ ಅಗತ್ಯ ಬಂದರೂ ಕಬ್ಬಿಣ ಉತ್ಪಾದಿಸುವ ಕುಲುಮೆಗಳ ಗಾತ್ರ ಸಣ್ಣದಾಗಿಯೇ ಇರಬೇಕಾದ ಅನಿವಾರ್ಯತೆ ಇತ್ತು. ‌ಏಕೆಂದರೆ ಕುಲುಮೆಯಲ್ಲಿ ಶಾಖವನ್ನು ಏರಿಸಲು ಬೇಕಾದ ಗಾಳಿಯನ್ನು ಒತ್ತಡದಲ್ಲಿ ಸರಬರಾಜು ಮಾಡುವ ತಿದಿ, ಮಾನವ ಶ್ರಮದ ಮೇಲೆಯೇ ಆಧರಿಸಿತ್ತು. ಪ್ರಾಣಿಗಳ ಶ್ರಮ, ನೀರಿನ ಹರಿವಿನ ಶಕ್ತಿಯನ್ನು ಬಳಸಿದ ಬೇರೆ ದೇಶಗಳು ದೊಡ್ಡ ಕುಲುಮೆಗಳ ಮೂಲಕ ಹೆಚ್ಚು ಕಬ್ಬಿಣವನ್ನು ಉತ್ಪಾದಿಸಲು ಸಾಧ್ಯವಾಯಿತು.

* ಕೆಲವು ಸಣ್ಣ ಮಾರ್ಪಾಡುಗಳನ್ನು ಹೊರತುಪಡಿಸಿದರೆ ಮೇಲೆ ಹೇಳಿದಂತೆ ಹೆಚ್ಚು ಉತ್ತೇಜನ ಮತ್ತು ಅಂತಹ ಪರಿಸ್ಥಿತಿ ಇಲ್ಲದುದರಿಂದ ತಂತ್ರಜ್ಞಾನದ ಬೆಳವಣಿಗೆ ಸ್ಥಗಿತವಾಯಿತು.

ಸಾಮಾಜಿಕ ಕಾರಣಗಳು:
* ಕಮ್ಮಾರರನ್ನು ಕೀಳು ಜಾತಿಯನ್ನಾಗಿ ಪರಿಗಣಿಸಿ ಊರಿಂದ ದೂರ ಇಟ್ಟದ್ದು. ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಿದ್ದು.‌ ಇದರಿಂದಾಗಿ ಹಲವಾರು ತಲೆಮಾರುಗಳ ಅನುಭವ ಬರಹದ ಮೂಲಕ ವರ್ಗಾಯಿಸಲ್ಪಡುವುದು, ಸಾಂದ್ರೀಕರಣಗೊಳ್ಳುವುದು, ಆ ಜಾತಿಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ ಇತರರಿಗೂ ಅದರ ಜ್ಞಾನ ದೊರೆಯುವುದು ಮುಂತಾದ ಕ್ರಿಯೆಗಳಿಂದ ವಂಚಿತವಾಯಿತು.

* ಜಾತಿಪದ್ಧತಿಯ ಫಲವಾಗಿ ತಂತ್ರಜ್ಞಾನದ ಬೆಳವಣಿಗೆಗೆ ಬೇಕಾದ ತಾತ್ವಿಕ ವಿಶ್ಲೇಷಣೆ, ಗಣಿತದ ಸಮೀಕರಣ ಇತ್ಯಾದಿಗಳು ಮೇಲ್ಜಾತಿಗಳಲ್ಲಿ ಕೇಂದ್ರೀಕರಣವಾಯಿತು. ಅದೇ ಸಮಯದಲ್ಲಿ ಅವರಿಗೆ ಕಬ್ಬಿಣ ತಯಾರಿಕೆ ಮೊದಲಾದ ಕುಶಲಕರ್ಮಗಳು ಕೀಳೆಂಬ ಭಾವನೆಯಿಂದ ಈ ತಯಾರಿಕೆಗಳ ವಿವಿಧ ಹಂತಗಳು, ಪ್ರಕ್ರಿಯೆಗಳ ಪರಿಚಯವೇ ಆಗಲಿಲ್ಲ.‌ ಈ ಪ್ರಕ್ರಿಯೆಗಳ ಹತ್ತಿರದ ಪರಿಚಯವಿರುವವರಿಗೆ ತಾತ್ವಿಕ ಜ್ಞಾನ, ಗಣಿತ ಜ್ಞಾನ ಇರಲಿಲ್ಲ. ಕೃಷಿ ಮೊದಲಾದ ವಿವಿಧ ದುಡಿಮೆಗಳಲ್ಲಿ ತೊಡಗಿದ ಶೂದ್ರರೊಡನೆ ಸಂಪರ್ಕ ಇತ್ತು. ಕ್ಷತ್ರಿಯರಿಗೂ ಆಯುಧಗಳ ವಿಷಯಕ್ಕಾದರೂ ಸೀಮಿತ ಸಂಪರ್ಕ ಇತ್ತು. ಆದರೆ ಬ್ರಾಹ್ಮಣರಿಗೆ ಇವರೊಂದಿಗೆ ಪರಸ್ಪರ ಸಂಪರ್ಕವೇ ಬಾರದ ಸ್ಥಿತಿ ಒದಗಿತು.

* ಜಾತಿ ಪದ್ದತಿಯ ಪರಿಣಾಮ ಮೇಲ್ಜಾತಿಗಳು ಮತ್ತು ಕಮ್ಮಾರರ ನಡುವೆ ಮಾತ್ರವಲ್ಲ ಇತರ ಕುಶಲಕರ್ಮಿಗಳ ನಡುವೆಯೂ ಪರಸ್ಪರ ಅನುಭವದ ‌ಹರಿವು ಇಲ್ಲದಾಯಿತು. ಅವರ ತಂತ್ರಜ್ಞಾನ ಅವರಿಗೆ ಇವರದು ಇವರಿಗೆ ಎಂಬ ಸ್ಥಿತಿ. ಜಾತಿಪದ್ಧತಿ ಹೇರಿದ overspecialization. ಅದರಿಂದಾಗಿ ಒಂದು ವೃತ್ತಿಯಲ್ಲಿನ ತಾಂತ್ರಿಕ ಬೆಳವಣಿಗೆ ಮತ್ತೊಂದು ವೃತ್ತಿಗೆ ಅನ್ವಯಿಸಬಹುದಾದುದನ್ನೂ ಅನ್ವಯಿಸಲಾಗಲಿಲ್ಲ. ಎಣ್ಣೆಯ ಗಾಣಕ್ಕೆ ಉಪಯೋಗಿಸುವ ಎತ್ತುಗಳ ಶ್ರಮವನ್ನು ಕುಲುಮೆಗೆ ಉಪಯೋಗಿಸಲಿಲ್ಲ.‌

ಬ್ರಿಟಿಷರ ಆಮದುಗಳ ಹೊಡೆತ:
ಹೀಗೆ ಸಾವಿರಾರು ವರ್ಷಗಳ ಕಾಲ ಹೆಚ್ಚು ಬದಲಾಗದ ತಂತ್ರಜ್ಞಾನದ ಸಂದರ್ಭದಲ್ಲೂ ನೂರಾರು ಸಣ್ಣ ಕುಲುಮೆಗಳಿಂದಲೇ ಕಬ್ಬಿಣ ಮತ್ತು ಉಕ್ಕನ್ನು ತಯಾರಿಸಿ ದೇಶದ ಉತ್ಪಾದನೆಯ ಅಗತ್ಯವನ್ನು ಪೂರೈಸುತ್ತಿದ್ದರು. ತಂತ್ರಜ್ಞಾನ ವಂಚಿತರಾದರೂ ತಮ್ಮ ಅಪಾರ ಶ್ರಮ ಮತ್ತು ಕೌಶಲ್ಯದಿಂದ ಉತ್ತಮ ಕಬ್ಬಿಣವನ್ನು ದೇಶದ ಹಲವಾರೆಡೆಗಳಲ್ಲಿ ಉತ್ಪಾದಿಸುತ್ತಿದ್ದರು. ಈಸ್ಟ್ ಇಂಡಿಯಾ ಕಂಪನಿ ಭಾರತವನ್ನು ಆಕ್ರಮಿಸಿಕೊಂಡ ಸಮಯದಲ್ಲಿ ತನ್ನ ವಾಣಿಜ್ಯದ ಬೆಳವಣಿಗೆಗಾಗಿ ದೇಶದ ವಿವಿಧ ಭಾಗಗಳ ಕಬ್ಬಿಣ ಅದಿರು ಲಭ್ಯತೆ, ಅಸ್ತಿತ್ವದಲ್ಲಿರುವ ಗಣಿಗಳು, ಕಬ್ಬಿಣದ ಉತ್ಪಾದನೆಯ ಪ್ರಮಾಣ ಇತ್ಯಾದಿಗಳ ಸಮೀಕ್ಷೆಗಳನ್ನು ಮಾಡಿಸಿತು. ಇದರಿಂದ ಬ್ರಿಟಿಷ್ ಪೂರ್ವದ ಸ್ಥಿತಿಯ ಬಗ್ಗೆ ಒಂದಷ್ಟು ಮಾಹಿತಿ ಸಿಕ್ಕಿದೆ.

ಕರ್ನಾಟಕದಲ್ಲಿ ಶಿವಮೊಗ್ಗ, ಕಡೂರು, ಚಿತ್ರದುರ್ಗ ಜಿಲ್ಲೆಗಳಲ್ಲಿಯೇ 1872-75ರ ಸಮಯದಲ್ಲಿ 1,400 ಗಣಿಗಳಿದ್ದವಂತೆ. ಹೀಗೆ ಹಲವಾರೆಡೆ ಉತ್ಪಾದನೆಯಾಗುತ್ತಿದ್ದ ಕಬ್ಬಿಣವನ್ನು ಡಚ್ ಮೊದಲಾದ ದೇಶಗಳಿಗೆ ರಫ್ತು ಮಾಡುತ್ತಿದ್ದ ಬಗ್ಗೆ ಮೇಲೆ ಹೇಳಲಾಗಿದೆ. ಆದರೆ ಮುಂದೆ ಯುರೋಪಿನಲ್ಲಿ ವಿಜ್ಞಾನದಲ್ಲಿ ಉಂಟಾದ ನವೋದಯ ಮತ್ತು ಅದನ್ನು ಬಳಸಿಕೊಂಡು ರೂಪುಗೊಂಡ ಹೊಸ ತಂತ್ರಜ್ಞಾನ ಹೊಸ ರೀತಿಯ ಫ್ಯಾಕ್ಟರಿಗಳಲ್ಲಿ ಉತ್ಪಾದನೆ ಕಬ್ಬಿಣದ ಉತ್ಪಾದನಾ ವೆಚ್ಚವನ್ನು ಬಹಳ ಕುಗ್ಗಿಸಿತು. ಅದರ ಪರಿಣಾಮವಾಗಿ ಬ್ರಿಟಿಷ್ ಕಬ್ಬಿಣ ದೊಡ್ಡ ಪ್ರಮಾಣದಲ್ಲಿ ಆಮದಾಗತೊಡಗಿತು. ಲ್ಯಾಂಕಾಶೈರ್‌ನಿಂದ ಆಮದಾದ ಬಟ್ಟೆಗಳು, ಹತ್ತಿಯ ನೂಲುಗಳು ಭಾರತದ ಕೋಟ್ಯಾಂತರ ನೇಕಾರರನ್ನು ಹಸಿವಿಗೆ ದೂಡಿದ್ದರ ಬಗ್ಗೆ ವ್ಯಾಪಕವಾಗಿ ಅರಿವಿದೆ. ಸುಡಿ ಸುಡಿ ಪರದೇಶಿಯರ ವಸ್ತ್ರವ ಎಂಬ ಚಳುವಳಿ, ಚರಕಾ, ಖಾದಿ ಬಟ್ಟೆ ಮೊದಲಾದವುಗಳ ಮೂಲಕ.‌ ಆದರೆ ಅದೇ‌ ಸಮಯದಲ್ಲಿ ಬ್ರಿಟನ್‌ನ ಶೆಫೀಲ್ಡ್‌ನ ಕಬ್ಬಿಣ, ಉಕ್ಕು ಭಾರತದ ಕಬ್ಬಿಣ ತಯಾರಿಕೆಯನ್ನು ನಾಶ ಮಾಡಿದ್ದರ ಅರಿವಿಲ್ಲ. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕಬ್ಬಿಣದ ಆಮದು ನಿಷೇಧ ಎಂಬ ಕೂಗು ಏಳಲಿಲ್ಲ. ಏಕೆಂದರೆ ಜಾತಿ ಪದ್ದತಿಯ ವೈಪರೀತ್ಯದ ಕಾರಣ ಅವರಾರಿಗೂ ಕಾಡು, ಬೆಟ್ಟಗಳಲ್ಲಿ ನಡೆಯುವ ಈ‌ ಅಪಾರ ಶ್ರಮ ಮತ್ತು ಕೌಶಲ್ಯದ ಅರಿವೇ ಇರಲಿಲ್ಲ.

ಭಾರತದಲ್ಲಿ ಸ್ಥಾಪನೆಯಾದ ಹೊಸ ಕೈಗಾರಿಕೆಗಳಿಗೆ ಯಂತ್ರಗಳು, ಭಾರತದ ಕಮ್ಮಾರರಿಗೆ ಬೇಕಾದ ಕಬ್ಬಿಣವೂ ಕೂಡ ಆಮದಾಗತೊಡಗಿತು. ‌ಭಾರತದ ಪ್ರಾಚೀನ ತಂತ್ರಜ್ಞಾನ ಉಪಯೋಗಿಸಿದ ಕಬ್ಬಿಣ ತಯಾರಿಕೆ ಮೂಲೆಗೆ ಬಿತ್ತು. ಈಗ ಅಸುರ, ಅಗಾರಿಯಾ ಬುಡಕಟ್ಟುಗಳಲ್ಲಿ ಮುದ್ದೆಗಮ್ಮಾರ, ಕೊಡಚಾದ್ರಿಯ ಬುಡಕಟ್ಟುಗಳಲ್ಲಿ ಒಂಚೂರು ಮಾತ್ರ ಉಳಿದಿದೆ. ಇಂದಿನ ಇಂಜನಿಯರ್ ಮತ್ತು ಯೋಜನಾ ಆಯೋಗಗಳಿಗೆ, ಆಡಳಿತಗಾರರಿಗೆ ಅದರ ಅರಿವೇ ಇಲ್ಲದಂತಾಗಿದೆ.

ಒಟ್ಟಿನಲ್ಲಿ ಜಾತಿಪದ್ಧತಿ, ರಾಜ ಪ್ರಭುತ್ವಗಳ, ಪಾಳೆಯಗಾರಿಗಳ ಸುಲಿಗೆಗಳು, ತಂತ್ರಜ್ಞಾನದ ಜೊತೆ ಜೋಡಿಸಿಕೊಳ್ಳದ ಜ್ಞಾನ, ವಿಜ್ಞಾನದ ಬೆಳವಣಿಗೆಯ ಅಭಾವ, ಬ್ರಿಟಿಷ್ ಆಮದುಗಳ ಧಾಳಿ ಭಾರತದ ಉನ್ನತ ಉಕ್ಕಿನ ತಂತ್ರಜ್ಞಾನವನ್ನು ಸೊನ್ನೆಯಾಗಿಸಿಬಿಟ್ಟಿತು.

ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: