ಸದಾಶಿವ್ ಸೊರಟೂರು ಕಥಾ ಅಂಕಣ- ಶವಾಗಾರದ ಗೋಡೆ… 

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು.

ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ, ಲೈಫ್ ನಲ್ಲಿ ಏನಿದೆ ಸರ್? ದೇವರೇ ಅವಳು ಸಿಗದಿರಲಿ, ಷರತ್ತುಗಳು ಅನ್ವಯಿಸುತ್ತವೆ ಮುಂತಾದ ಪುಸ್ತಕಗಳು ಪ್ರಕಟವಾಗಿವೆ.

ಬರವಣಿಗೆಯಲ್ಲಿ ಅಪಾರ ಆಸಕ್ತಿಯುಳ್ಳ ಸದಾಶಿವ್ ಅವರು ಕನ್ನಡ ದಿನಪತ್ರಿಕೆಗಳಿಗೆ ಹಲವಾರು ಲೇಖನ ಹಾಗೂ ಅಂಕಣಗಳನ್ನು ಬರೆದಿದ್ದಾರೆ. 

ಹಲವು ಕಥೆಗಳು, ಕವನಗಳು ಬಹುಮಾನ ಗೆದ್ದಿವೆ. ನೂರಾರು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

44

ಗೇಟ್ ತೆರೆದು ನೇರವಾಗಿ ಮುಂದೆ ಹೋದ್ರೆ ಎಷ್ಟು ದಿನ ತಾನು ಬದುಕಬಹುದು ಅನ್ನುವುದನ್ನು ಖಚಿತಪಡಿಸಿಕೊಳ್ಳಬಹುದು… ಅದೇ ಗೇಟಿನಿಂದ ಸ್ವಲ್ಪ ಬಲಗಡೆಗೆ ಇನ್ನಷ್ಟು ದೂರ ನಡೆದು ಹೋದರೆ ಅಲ್ಲಿ ನೀನು ಹೇಗೆ ಸತ್ತೆ ಅನ್ನುವುದನ್ನು ಕೂಡ ಖಚಿತಪಡಿಸಿಕೊಳ್ಳಬಹುದು… ಹೇಗೆ ಬದುಕಬಹುದು? ಮತ್ತು ಹೇಗೆ ಕೊನೆ ಉಸಿರು ಚೆಲ್ಲಿದ ಅನ್ನುವುದಕ್ಕೆ ಹತ್ತಾರು ಮಾರು ದೂರದ ಅಳತೆಯ ಅಂತರದಲ್ಲಿ ಉತ್ತರವೊಂದು ಸಿಕ್ಕುಬಿಡುವಂಥಹ ಒಂದು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಮುಂದೆ ನಿಂತಿದ್ದೆ…‌

ಊರ ತುಂಬಾ ಹಬ್ಬಿದ್ದ ಸುದ್ದಿಯ ಜಾಡು ಹಿಡಿದು ಅಲ್ಲಿಗೆ  ಬಂದಿದ್ದೆ. “ಅಲ್ಲಾ ಮಾರಾಯ… ಅವ್ನಿಗೇನು ಬೇರೆ ಜಾಗ ಸಿಗ್ಲಿಲ್ವ ಈ ಹಾಳು ದಿನಗಳನ್ನು ತಳ್ಳೊಕೆ” ಅಂತ ಅವನ ಬಗ್ಗೆ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡು ಕುತೂಹಲ ಹೊತ್ತುಕೊಂಡು ನಾನು ಅವನನ್ನು ಹುಡುಕಿಕೊಂಡು ಬಂದಿದ್ದೆ. 

ನೇರವಾಗಿ ಹಾಸ್ಪಿಟಲ್ ಕಡೆ ಹೋಗದೆ… ಗೇಟಿನಿಂದ ಬಲಕ್ಕೆ ಹೊರಳಿದೆ. ಸ್ವಲ್ಪ ದೂರ ನಡೆದೆ. ಈ ಲೋಕದ ಗೊಡವೆ, ಈ ಜನರ ಗಜಿಬಿಜಿ ನನಗೇಕೆ ಎಂಬಂತೆ ಅದು ತನ್ನ ಪಾಡಿಗೆ ತಾನು ಒಂಟಿಯಾಗಿದ್ದ ಕಟ್ಟಡ. ಶವಾಗಾರ ನನ್ನ ನೋಡಿ ನಕ್ಕಿತು. ಅದರ ಹಲ್ಲುಗಳ ಹಿಂದೆ ಯಾವುದೊ ನಿಗೂಢತೆಯೊಂದು ಅವಿತುಕೊಂಡಿತ್ತು. ತುಟಿ ತುಂಬಾ ರಕ್ತ… ಹಲ್ಲಿನ ಮಧ್ಯೆ ಮಾಂಸದ ತುಣುಕುಗಳು ಸಿಕ್ಕಿಹಾಕಿಕೊಂಡಂತೆ ಕಾಣುತ್ತಿತ್ತು. ಅದಕ್ಕೊಂದು ಗಂಭೀರತೆ ಇತ್ತು. ಜನರು ಅದರ ಹತ್ತಿರ ಸುಳಿಯಲೂ ಹೆದರುವಂಥಹ ಗಂಭೀರತೆ ಅದು. 

ಆಸ್ಪತ್ರೆಯ ಮುಂದಿನ ಜಾಗ ಸ್ಪಿರಿಟ್‍ನ ವಾಸನೆಯಿಂದ ಘಮ್ಮೆನ್ನುತ್ತಿತ್ತು.‌ ಔಷಧಿಗಳ ಘಮಲಿನಿಂದ ಅಲ್ಲಿನ ವಾತಾವರಣಕ್ಕೆ ಒಂದು ಭಯಭೀತ ಗಂಭೀರತೆ ಇತ್ತು. ಎಲ್ಲರ ಮುಖದಲ್ಲೂ ಒಂದು ದುಗುಡ ಕುಣಿಯುತ್ತಿತ್ತು. ಮತ್ತು ಎಲ್ಲರ ಮುಖದಲ್ಲೂ ಸಾಧ್ಯವಾದಷ್ಟು ಹೆಚ್ಚು ದಿನಗಳ ಕಾಲ ಬದುಕಬೇಕೆಂಬ ಆಸೆಬುರಕತನ  ಕಾಣಿಸುತ್ತಿತ್ತು. 

ಶವಾಗಾರದ ಬಳಿ‌ ಹೋದ ನನಗೆ ಅದರ ಒಂದು ಗೋಡೆಯ ಪಕ್ಕದ ನೆರಳಿನಲ್ಲಿ ತನ್ನ ಇಡೀ ಬದುಕನ್ನು ಮುಂದೆ ಹರಡಿಕೊಂಡು ಕೂತ ಅವನು ಕಾಣಿಸಿದ. ಶವಾಗಾರದ ಗೋಡೆಯೊಂದಿಗೆ ಅದೇನನ್ನೋ ಗುಪ್ತವಾಗಿ ಮಾತಾಡುತ್ತಿರುವವನಂತೆ ಅವನು ಕಾಣಿಸುತ್ತಿದ್ದ. 

ಅವನು ಸುಮಾರು ಐವತ್ತು ವರ್ಷಗಳನ್ನು ಬಹಳ ಬಲವಂತವಾಗಿ ಮುಗಿಸಿದವನಿರಬೇಕು. ಅಂಥಹ ಸುಸ್ತೊಂದು ಅವನ ಮುಖದಲ್ಲಿತ್ತು. ಉಳಿದ ದಾರಿಯನ್ನು ಸವೆಸಲು ಅವನಿಗೆ ಯಾವ ಆಸಕ್ತಿಯೂ ಇಲ್ಲದವನಂತೆ ಕಾಣಿಸುತ್ತಿದ್ದ. ಬಿಳಿಯಾದ ಗಡ್ಡ ಉದ್ದವಾಗಿತ್ತು. ಕತ್ತರಿಸದ ತಲೆಗೂದಲು ಗಂಟಾಗಿತ್ತು. ತೊಟ್ಟ ಬಟ್ಟೆ ಮನುಷ್ಯರ ಮನಸಿನಲ್ಲಿರುವ ಗಲೀಜನ್ನು ಸ್ಪಷ್ಟವಾಗಿ ತೋರಿಸುವ ಒಂದು ರೂಪಕದಂತಿತ್ತು. ಸ್ವಲ್ಪ ಬಾಗಿದ ದೇಹ, ಲೋಕ ತೊರೆದ ಬೈರಾಗಿಯಂತೆ ಕಂಡ. 

ಅವನನ್ನು ಮಾತಾಡಿಸಬೇಕೋ, ಬೇಡವೋ ನನಗೆ ಆ ಕ್ಷಣಕ್ಕೆ ಗೊತ್ತಾಗಲಿಲ್ಲ. ನನಗಾದರೂ ಯಾಕೆ ಅವನ ಬಗ್ಗೆ ಇಷ್ಟು ಕೂತೂಹಲ? ಯೋಚಿಸಿದೆ. ಉಳಿದು‌ಕೊಳ್ಳಲು, ದಿನಗಳನ್ನು ನೂಕಲು ಈ ಜಗತ್ತಿನಲ್ಲಿ ಎಷ್ಟೊಂದು ಜಾಗ ಇರುವಾಗ ಇವನೇಕೆ ಈ ಶವಾಗಾರದ ಗೋಡೆ ಹಿಡಿದು ಕೂತಿದ್ದಾನೆ? ಉತ್ತರ ಅವನ ಬಳಿ ಸಿಕ್ಕರೆ ಅದು ಖಚಿತ… ಆದರೆ ಈಗಾಗಲೇ ಊರಿನ ಜನರ ಬಾಯಲ್ಲಿ ಉಚಿತವಾಗಿ ಹರಿದಾಡುತ್ತಿರುವ ಉತ್ತರವು ನಿಖರವಾದದ್ದೋ, ಅಲ್ಲವೋ ನಾನಾದರೂ ಹೇಗೆ ನಿರ್ಧರಿಸಲು ಸಾಧ್ಯವಿತ್ತು? 

ಸುಮಾರು ಹತ್ತು – ಹದಿನೈದು ವರ್ಷಗಳ ಹಿಂದೆ ಇದೇ ಶವಾಗಾರದಿಂದ ಹೊರಟವನು ಇತ್ತೀಚೆಗಷ್ಟೆ ಅಲ್ಲಿಗೆ ಮರಳಿದ್ದ. ಏನನ್ನೋ ಹುಡುಕಿ ಹೊರಟು ಬರಿಗೈಲಿ ಬಂದನೋ? ಅಥವಾ ಹುಡುಕಿದ್ದು ಸಿಕ್ಕಿದ ಮೇಲೆ ನೆಮ್ಮದಿಯಿಂದ ಬಂದನೋ? ಯಾರನ್ನೋ ಕಾಯಲು ಬಂದು ಕೂತಿರುವನೋ? ಉತ್ತರವನ್ನು ನಾನು ಊಹಿಸಿಬಹುದಷ್ಟೆ. ಆದರೆ ಅಸಲಿ ಉತ್ತರ ಅವನಿಗಾದರೂ ಗೊತ್ತೋ? ಮನುಷ್ಯನಿಗೆ ತಾನು ಇದೆಲ್ಲವನ್ನೂ ಏನಕ್ಕೆ ಮಾಡ್ತೀನಿ ಅನ್ನುವ ಅರಿವೆ ಇಲ್ಲದೆ ತನ್ನ ಕೆಲಸಗಳನ್ನು ಮಾಡುತ್ತಾ ಹೋಗುತ್ತಾನೆ. ಇವನ ಈ ಹುಚ್ಚ ನಡೆಗಳಲ್ಲಿ ಅಂಥಹ ಉದ್ದೇಶಪೂರಿತ ಸ್ಪಷ್ಟ ಉತ್ತರ ಹುಡುಕುವುದು ತಪ್ಪಾದೀತು ಅನಿಸಿತು ನನಗೆ. 

ಹತ್ತು ವರ್ಷದ ತನ್ನ ಮಗಳ ದೇಹವನ್ನು ಇದೇ ಶವದ ಮನೆಯಲ್ಲಿ ವೈದ್ಯರು ಚರಕ್, ಚರಕ್ ಅಂತ ಕೊಯ್ಯತ್ತಿರುವಾಗ ಈತ ತನ್ನ ಎದೆಯೇ ಹರಿದು ಹೋಗಿರುವಂತೆ ಹೊರಗೆ ತೊಳಲಾಡಿದ್ದ. ಬೋರಿಟ್ಟು ಅತ್ತಿದ್ದ. ಮಗಳು ನೀರಿನಲ್ಲಿ ಹೆಣವಾಗಿ ತೇಲಾಡಿ ಬಂದಾಗಲೇ ಅವಳು ಸತ್ತು ಹೋಗಿರುವುದು ಇವನಿಗೆ ಗೊತ್ತಾದದ್ದು. ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದವನಿಗೆ ಸಂಜೆ ಮನೆಗೆ ಬರುವಾಗ ಮಗಳು ಕಾಣದೆ, ಅವಳ ಹೆಣ ಇವನನ್ನು ಕಾದು ಕೂತಿತ್ತು.. 

ಅವಳೇ ಹೋಗಿ ಬಿದ್ದಳೋ? ಯಾರಾದರೂ ಮುಳುಗಿಸಿ ಸಾಯಿಸಿದರೋ? ಅಥವಾ ಸಾಯಿಸಿ ಎಸೆದು ಹೋಗಿದ್ದರೋ? ಅವನಿಗೆ ಏನೊಂದೂ ಗೊತ್ತಾಗಿರಲಿಲ್ಲ. 

ನಂತರ ಪೋಲಿಸ್ ದೂರು, ವಿಚಾರಣೆ, ಪೋಸ್ಟ್‌ಮಾರ್ಟಂ ಇವೆಲ್ಲವೂ ಸಾಗಿದ್ದವು. ಮಗಳ ಸಾವಿನಲ್ಲಿ ಇವನ ಪಾತ್ರ ಇರಬಹುದಾ ಅಂತ ಪೋಲಿಸರು ಅವನ ಮೇಲೊಂದು ಗುಮಾನಿ ಇಟ್ಟಿಯೇ ಇದ್ದರು. 

ಅವತ್ತು ಶವಾಗಾರದ ಮುಂದೆ ಕೊಯ್ದು ಹೊಲೆದಿದ್ದ ಮಗಳ ಮುಖ ನೋಡಿ ಹೋದವನು ಹತ್ತಾರು ವರ್ಷಗಳ ನಂತರ ಮತ್ತೆ ಅಲ್ಲಿಗೇ ಹಿಂದಿರುಗಿದ್ದ. ಪಾಪ ಮಗಳ ನೆನಪಿಗಾಗಿ ಮತ್ತೆ ಬಂದಿರಬೇಕು ಅಂತ ಜನ‌ ಮಾತಾಡಿಕೊಳ್ಳುತ್ತಿದ್ದರು. ಮಗಳು ಬೆಳೆದ ಜಾಗ, ಅವಳು ಓಡಾಡಿದ ಜಾಗ, ನೀರಿನಲ್ಲಿ ಮುಳುಗಿ ಸತ್ತ ಜಾಗದಲ್ಲಿ ಮಗಳ ನೆನಪು ಹುಡುಕದೆ, ಅವಳ ದೇಹ ಕತ್ತರಿಸಿದ ಜಾಗದಲ್ಲಿ ಮಗಳನ್ನು ಹುಡುಕುವುದೇನಿದೆ? ಎಂದು ನನಗನಿಸುತ್ತಿತ್ತು. 

ಊರಿನವರು ಅವನಿಗೆ ಹುಚ್ಚು ಹಿಡಿದಿದೆ ಅನ್ನುತ್ತಿದ್ದರು. ಬದುಕು ತಪ್ಪಿಸಿಕೊಂಡವರು ಇರುವುದೇ ಹಾಗೆ ಅನ್ನುತ್ತಿದ್ದರು ಕೆಲವರು. ಶವದ ಮನೆಯ ಬಳಿ ಹೆಣದ ಭಯ ಇಲ್ಲದೆ ಇರ್ತಾನೆ ಅಂದ್ರೆ ಅದು ಶುದ್ಧ ಮತಿಭ್ರಮಣೆ ಎಂಬುದು ಕೆಲವರ ಅಂಬೋಣ. ಇದು ಯಾವುದು ಸತ್ಯವೂ ಅಲ್ಲ, ಸುಳ್ಳೂ ಕೂಡ ಅಲ್ಲ ಎಂದು ನನಗೆ ಅನಿಸುತ್ತಿತ್ತು.‌ ಮೊದ ಮೊದಲು ಅವನು ಶವಾಗಾರದ ಬಳಿ ಇರುತ್ತಿದ್ದದ್ದನ್ನು ಗಮನಿಸಿದವರು ಅಲ್ಲಿಂದ ಅವನನ್ನು ಎದ್ದು ಕಳುಹಿಸುವ ಪ್ರಯತ್ನ ಮಾಡಿದ್ದರಂತೆ. ಆದರೆ ಅವನು ಅಲ್ಲಿಂದ ಎದ್ದು ಕಳೆದು ಹೋಗಲು ಬಯಸಿರಲಿಲ್ಲ. 

ಈಗ ಅವನು ತನ್ನ ಹಾಸಿಗೆಗಳನ್ನು ಕೊಡವಿಕೊಳ್ಳತೊಡಗಿದ್ದ. ನಾನು ಅನತಿ ದೂರದಲ್ಲಿ ನಿಂತು ನೋಡುತ್ತಿರುವುದನ್ನು ಅವನು ಗಮನಿಸಿದ. ನನ್ನ ಕಡೆ ನೋಡಿದ.‌ ಅವನು ಬರೀ ಕಣ್ಣುಗಳಲ್ಲಿ ನಕ್ಕ. ಇದೆಂಥ ಮಾಯೆ. ಬರೀ ಕಣ್ಣಲ್ಲೆ ನಗುವುದು? ಹುಚ್ಚನಾದವನು ಹೀಗಿರುತ್ತಾನಾ? ನನಗೆ ಗೊತ್ತಾಗಲ್ಲಿಲ್ಲ. 

ಮಾತಾಡಿಸಬೇಕೋ? ಬೇಡವೋ? ನನಗೆ ತಿಳಿಯಲಿಲ್ಲ. ಏನೆಂದು ಮಾತಾಡಿಸುವುದು? ಪತ್ರಕರ್ತರಂತೆ ಇಲ್ಲೇಕೆ ಕೂತಿದ್ದೀರಿ ಅನ್ನಲೇ? ಹಳೆಯ ನೆಂಟನಂತೆ ಮಾತು ಆರಂಭಿಸಲೇ? ಅಪರಿಚಿತನಂತೆ ಕೆಣಕಲೇ? ಅವನು ಅವನ ಪಾಡಿಗೆ ನೆಮ್ಮದಿಯಿಂದ ಇದ್ದ… ಅವನನ್ನು ಮಾತಾಡಿಸಲು ಬಂದು ನಾನು ತೊಳಲಾಡತೊಡಗಿದ್ದೆ.

ಮಾತಾಡಿಸಬೇಕು ಅನಿಸಿದರೂ ಅವನು ನಿಂತ ತಿಳಿನೀರಿನಂತೆ ನಿಚ್ಚಳವಾಗಿರುವಾಗ ನಾನೇಕೆ ಮಾತಿನ ಕಲ್ಲು ಎಸೆದು ಅವನ ಭಾವವನ್ನು ಬಗ್ಗಡುಗೊಳಿಸಲಿ ಅನಿಸಿತು. ಅವನು ಮತ್ತೊಮ್ಮೆ ಕಣ್ಣಲ್ಲೇ ನಕ್ಕ. ನನಗೆ ನಗುವನ್ನು ಕಣ್ಣಿನಲ್ಲೇ ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಅಷ್ಟೆ ಅಲ್ಲ, ಅವರ ಬಳಿ ಹೋಗಿ ಮಾತಾಡಿಸುವ ಧೈರ್ಯವೂ ಸಾಲಲಿಲ್ಲ. ಅವನ ಮುಖದಲ್ಲೊಂದು ವಿಶೇಷ ಗಂಭೀರತೆ ಮನೆ ಮಾಡಿತ್ತು. ಜನ ಅಂದುಕೊಳ್ಳವಷ್ಟು ಅವನು ಸುಲಭವಿಲ್ಲ ಅಂತ ನನ್ನ ಮನಸು ಹೇಳುತ್ತಿತ್ತು.‌ ಅವನು ಕೊಟ್ಟ ನಗುವನ್ನು ಹಿಂದಿರುಗಿಸಲಾಗದೆ ಆ ನಗುವಿನ ಋಣದಲ್ಲೇ ನಾನು ವಾಪಸ್ ಬಂದುಬಿಟ್ಟೆ.‌

ಮನೆಗೆ ಬಂದ ಮೇಲೆ ನನಗವನು ಕಾಡತೊಡಗಿದ್ದ. ಕಣ್ಣಿನಲ್ಲೇ ಚಿಮ್ಮಿಸಿದ್ದ ನಗು ನನಗೆ ಕಾಡುತ್ತಿತ್ತು.‌ ಕಣ್ಮುಚ್ಚಿದರೂ ಅವನ ಗಂಭೀರ ಮುಖವೇ ನೆನಪಾಗುತ್ತಿತ್ತು.‌ 

ಅವನ್ಯಾರು? ಏನು ಅವನ ತೊಂದರೆ? ಅನ್ನೋದರ ಬಗ್ಗೆ ಜನರಲ್ಲಿ ವಿಚಾರಿಸಬೇಕು ಅಂದುಕೊಂಡೆ.‌ ಇದೇ ನಗರದ ಸುತ್ತ ಮುತ್ತ ಹಳ್ಳಿಯನವನೊ… ಅಥವಾ ಇದೆ ನಗರದವನೋ ಆಗಿರುತ್ತಾನೆ. ಜನರಿಗೆ ಖಂಡಿತ ಅವನ ಬಗ್ಗೆ ಏನಾದ್ರೂ ತಿಳಿದೇ ತಿಳಿದಿರುತ್ತದೆ. ಮುಂದೆ ಅವನ ಬಳಿ ಹೋಗುವುದಾದರೆ ಅದನ್ನು ತಿಳಿದುಕೊಂಡೆ ಹೋಗಬೇಕು. ಅವನು ಹೇಳುವ ಮಾತುಗಳಿಗೆ ಈ ಹಳೆಯ ಕಥೆಯನ್ನು ಹೊಂದಿಸುತ್ತಾ ಹೋಗಬೇಕು ಅಂದುಕೊಂಡೆ. 

ಅದೇ ದಿನ ಸಂಜೆ. ಹೀಗೆ ಸುತ್ತಾಡಿ ಬರಲು ಹೋಗಿದ್ದ ನನಗೆ ಒಬ್ಬ ಹಿರಿಯರು ಅಚಾನಕ್ಕಾಗಿ ಮಾತಿಗೆ ಸಿಕ್ಕರು. ಮಾತುಗಳ ನಡುವೆ ನನಗೆ ಆ ಶವಾಗಾರದ ಬಳಿ ಇರುವವನ ವಿಚಾರ ತುರುಕುವ ಕುತೂಹಲವಾಯಿತು.‌ ತುರುಕಿದೆ ಕೂಡ. “ಪಾಪ ಅವನು… ಸಂಸಾರ ಒಡೆದು ಹೊಯ್ತು. ಅಮೇಲೆ ಇದ್ದ ಮಗಳು ಕೂಡ ಹೊಳೆಗೆ ಬಿದ್ದು ಸತ್ತು ಹೋದ್ಲು. ಹುಚ್ಚನಂತೆ ಎಲ್ಲೆಲ್ಲೊ ತಿರುಗಾಡಿದ. ಈಗ ಅಲ್ಲಿ ಇಲ್ಲಿ ಏನಾದ್ರೂ ಮಾಡಿಕೊಂಡು… ಅಲ್ಲೆ ಆಸ್ಪತ್ರೆ ಹತ್ರ ಮಲಗ್ತಾನೆ’ ಅಂದರು. ಇಡೀ ಒಂದು ಸಂಸಾರದ ಅವಸಾನದ ಕಥೆಯನ್ನು ಕೇವಲ ಒಂದು ವಾಕ್ಯದಲ್ಲಿ ಹೇಳಿ ಮುಗಿಸಿಬಿಟ್ಟರು. 

ಅದು ಇರೋದು ಹಾಗೆ… ಬೇರೆಯವರ ಬದುಕು ನಮಗೊಂದು ಸುದ್ದಿಯಷ್ಟೆ. ಅದು ಬರೀ ಹಗುರು. ಅನುಭವಿಸುವವನದು ಮಾತ್ರ ನಾಕ – ನರಕ. 

ಅವನ ಬಗ್ಗೆ ನನಗೆ ಮತ್ತಷ್ಟು ಸೆಳೆತ ಉಂಟಾಯಿತು.‌

ಮರುದಿನವೇ ನಾನು ಮತ್ತೆ ಶವಾಗಾರದ ಮುಂದಿದ್ದೆ. ಅವನು ಆಗಷ್ಟೇ ಎಲ್ಲೋ ಹೊರಗೆ ಹೋಗಿ ಬಂದಂತೆ ಕಾಣಿಸುತ್ತಿದ್ದ. ನನ್ನ ಕಡೆ ನೋಡಿದ.‌ ಅವನ ನೋಟದಲ್ಲಿ ಪರಿಚಯದ ಗೆಲುವಿತ್ತು. ನಾನು ಕಣ್ಣಲ್ಲಿ ನಗಲು ಯತ್ನಿಸಿದೆ. ಸಾಧ್ಯವಾಗಲಿಲ್ಲ. ಅವನು ನಕ್ಕ. ನಾನು ಬರೀ ತುಟಿ ಅಗಲಿಸಿದೆ. 

ಬಹುಶಃ ಅವನನ್ನು ಒಂದು ಅಕ್ಕರೆಯ ನೋಟದಲ್ಲಿ ನೋಡಿದವನು ನಾನೇ ಇರಬೇಕು ಅನಿಸಿತು. ಆದರೆ ಅವನ ಮೌನ ನನ್ನದೆಂಥ ಮೂರ್ಖತನ ಎಂಬುದನ್ನು ಎಚ್ಚರಿಸಿತು. 

ನಾನು ಅವನೊಂದಿಗೆ ಮಾತಾಡಲೇ ಬೇಕಿತ್ತು. ಮೊದಲ ಮಾತನ್ನು ಹೇಗೆ ಆರಂಭಿಸುವುದು? ಎಷ್ಟೇ ಬಂಧಗಳು ಮೊದಲು ಯಾವ ಮಾತು ಆಡಬೇಕು ಎಂಬುದನ್ನು ತಿಳಿಯದೇ ಶುರುವಿನಲ್ಲೇ ಮುಗಿದು ಹೋಗುತ್ತವೆ. ಮುರಿದ ಬಂಧಗಳಲ್ಲಿ ಕೊನೆಗೆ ಯಾವ ಮಾತು ಆಡಬೇಕೆಂದು ತಿಳಿಯದೆ ಸಂಬಂಧ ಅರ್ಧಜೀವ ಮಾಡಿ ಹೊರಟು ಹೋಗುತ್ತವೆ. ಆರಂಭದ ಮಾತು ಮತ್ತು ಅಂತ್ಯದ ಮಾತುಗಳು ನಿಜಕ್ಕೂ ಕಷ್ಟ. 

ಅವನ ಹತ್ತಿರ ಹೋದೆ. ಅಲ್ಲೊಂದು ದೊಡ್ಡ ಕಲ್ಲಿತ್ತು. ಅದರ ಮೇಲೆ ಕೂತೆ. ಅವನು ಅವನ ಪಾಡಿಗಿದ್ದ. ಮಾತಿಗೆ ಎಳೆಯುವ ನನ್ನ ಕಾತರಕ್ಕೆ ಯಾವುದೇ  ಕುತೂಹಲ ತೋರಿಸಲಿಲ್ಲ ಅವನು. 

“ನೀವು ಯಾಕೆ ಇಲ್ಲಿರೋದು? ಭಯ ಆಗಲ್ವ? ಕಾಯುವವರು, ಕಾಯಿಸುವವರು ಯಾರೂ ಇಲ್ವ?…” ಹೀಗೆ ಅರ್ಥ ಬರುವಂತೆ ನಾನು ಏನೇನೊ ಅವನ  ಮುಂದೆ ಬಡಬಡಿಸಿದೆ. 

ಎಷ್ಟು ವರ್ಷಗಳಿಂದ ತನ್ನ ಕಥೆ ಹೇಳಲು ಕಾದವನಂತೆ‌ ಮೆಲ್ಲನೆ ಮಾತು ಆರಂಭಿಸಿದ. ಈ ಅಪರಿಚಿತನಲ್ಲಿ ಅವನಿಗೆ ಯಾವ ನಂಬಿಕೆ, ಭರವಸೆ ಇತ್ತೋ, ಏನೋ?

“ತಾನು ಎಲ್ಲಿದ್ದರೂ ಆದೀತು ಅನ್ನುವವನಿಗೆ, ರಾತ್ರಿ ಮಲಗಿದ ತಕ್ಷಣ ನಿದ್ದೆ ಬರುವ ಕಡೆ ಇದ್ದರೆ ಒಳ್ಳೆಯದು.‌ ಕೆಲವರು ಕೆಲವೊಂದು ಕಾರಣಕ್ಕೆ ಎಲ್ಲೆಲ್ಲೋ ಇರಬೇಕಾಗುತ್ತದೆ. ಬಹುತೇಕ ಎಲ್ಲರೂ ಇನ್ಯಾವುದೋ ಕಾರಣಕ್ಕೆ ತಮಗೆ ಒಪ್ಪಿತವಿರದ ಜಾಗದಲ್ಲಿ ಉಳಿದು ಹೋಗಿದ್ದಾರೆ. ನಾನು ಕೊನೆಗೂ ಇಲ್ಲಿಗೆ ಬಂದು ತಲುಪಿದೆ. ಇಲ್ಲಿಂದ ಹೊರಟವನು… ಎಲ್ಲೆಲ್ಲೋ  ಅಲೆದೆ. ಮತ್ತೆ ಇಲ್ಲಿಗೆ ಬಂದೆ. 

“ಮಗಳ ನೆನಪಿಗೆ ನಾನು ಇಲ್ಲಿದೀನಿ ಅಂದ್ಕೊಳ್ತಾರೆ. ಮಗಳು ಈ ಹೆಣದ ಮನೆಯಲ್ಲಿ ಎಲ್ಲಿದ್ದಾಳೆ. ಅವಳ ರಕ್ತದ ಮೇಲೆ ಅದೆಷ್ಟು ಸಾವಿರ ಜನರ ರಕ್ತ ಹರಿದು ಹೋಗಿರಬಹುದು. ನನ್ನ ಮಗಳು ನನ್ನೊಳಗೆ ಇದ್ದಾಳೆ.‌ ಅವಳು ನಾನು ಹೋದ ಕಡೆಯಲ್ಲ ಬರ್ತಾಳೆ. ನೋಡಿಲ್ಲಿ…” ಅಂತ ತನ್ನ ಹಳೆಯ ಕೊಳೆಯಾದ ಬ್ಯಾಗಿನಿಂದ ಅವಳ ಪುಟ್ಟ ಫ್ರಾಕ್ ಒಂದನ್ನು ತೆಗೆದು ತೋರಿಸಿದ… 

ನಾನು ಸುಮ್ಮನೆ ನೋಡಿದೆ. ಅವನ ಮಾತಿನ ಹರಿವಿಗೆ ನಾನು ಮಾತು ತೂರಿಸಿ ಅಡ್ಡಹಾಕುವ ಪ್ರಯತ್ನ ಮಾಡಲಿಲ್ಲ. ಸುಮ್ಮನೆ ಹರಿಯಲು ಬಿಟ್ಟೆ… 

“ಮಗಳ ಮುಖ ನೋಡಿ ಇಲ್ಲಿಂದ ಹೊರಟೆ. ಈ ಜನ, ಈ ಜಗತ್ತು ಬೇಡವಾಗಿತ್ತು. ಸಾಯುವುದೂ ಬೇಡವಾಗಿತ್ತು. ಬೆಳಗ್ಗೆ ತಿಂಡಿ, ನಂತರ ಡ್ಯೂಟಿ, ಸಂಜೆ ಕಾಫಿ, ರಾತ್ರಿ ಸೆಕ್ಸು, ರೇಷನ್, ಕರೆಂಟ್ ಬಿಲ್ಲು, ಊರ ತೇರು, ಗರಿಗರಿ ಬಟ್ಟೆ ಈ ತರಹದ್ದು ಒಂದು ಗೊಡ್ಡು ಬದುಕು ಬೇಡದಾಗಿತ್ತು… 

ಹಸಿದಲ್ಲಿ ಬೇಡಿ ಉಣ್ಣುತ್ತಿದ್ದೆ. ನಿದ್ದೆ ಬಂದಲ್ಲಿ ಮಲಗುತ್ತಿದ್ದೆ. ಫುಟ್‌ಪಾತ್‌ ನನ್ನ ಹಾಸಿಗೆಯಾಯ್ತು. ಆದರೆ ರಾತ್ರಿ ಮಲಗಿದಾಗ ನಡೆದು ಹೋದ ಜನ ಬೀಳಿಸಿಕೊಂಡ ಹೋದ ಕನಸುಗಳು ಬೆನ್ನಿಗೆ ಒತ್ತುತ್ತಿದ್ದವು. ಅಲ್ಲಿಂದ ಒಂದು ಶಾಲೆಯ ಗಡಿಯ ಕಟ್ಟೆಗೆ ಸ್ಥಳಾಂತರಗೊಂಡೆ. ದಿನವಿಡೀ ಮಕ್ಕಳು ಬಿಟ್ಟು ಹೋದ ನರಳಾಟ ನನಗೆ ಅಲ್ಲಿ ಮಲಗಲು ಬಿಡಲಿಲ್ಲ. ನಿಲ್ದಾಣಗಳಲ್ಲಿ ಕೆಲವು ದಿನ ಇದ್ದೆ.‌ ಬಸ್ಸಲ್ಲಿ ಬದುಕು ತಪ್ಪಿಸಿಕೊಂಡವರ ಗೋಳು ನನ್ನ ಇರಿಯುತ್ತಿತ್ತು. ಇದು ಯಾವುದರ ಗೊಡುವೆಯೂ ಬೇಡ ಅಂತ ಒಂದಷ್ಟು ದಿನ ಸ್ಮಶಾನದ ಕಡೆ ಹೋದೆ. ಮಣ್ಣಾಗಿ‌ ಮಲಗಿದವರ ಹಪಾಹಪಿಗಳ ಕೂಗು ನನಗೆ ನಿದ್ದೆ ಕೊಡುತ್ತಿರಲಿಲ್ಲ. ಈ ಜಗತ್ತಿನಲ್ಲಿ ನೆಮ್ಮದಿಯಾಗಿರಲು ಒಂದು ಹಿಡಿ ಜಾಗವೂ ಇಲ್ವ ಅನ್ನುವ ಬೇಸರವೂ ಆಯ್ತು. 

ಅಲ್ಲಿಂದ ಹಿಮಾಲಯದ ಕಡೆ ಹೋಗಿ ತಪಸ್ಸಿಗೆ ಕೂತರೆ ಹೇಗೆ ಅಂತ ಯೋಚಿಸಿದೆ. ಹೇಗೋ ಹಿಮಾಲಯವನ್ನೂ ತಲುಪಿದೆ. ತಪಸ್ಸಿಗೆ ಕೂತವರು, ಕೂರಲು ಬರುವವರು, ತನಗೇನೋ ಸಿಕ್ತು ಅಂತ ಹೊರಡುವವರ ದೊಡ್ಡ ದಂಡೇ ಅಲ್ಲಿತ್ತು. ನನಗೆ ಅವರೆಲ್ಲಾ ಆಸೆಬರುಕರು ಅಂತ ಅನಿಸತೊಡಗಿತು. ತಪಸ್ಸು ಕೂಡ ಇನ್ನೇನನ್ನೋ ಪಡೆಯುವ ಒಂದು ಹಪಾಹಪಿ ತರಹ ಕಾಣಿಸಿತು. ರೇಜಿಗೆ ಹುಟ್ಟಿತು. ಅದೂ ಕೂಡ ಬೇಡ ಅನಿಸಿತು. ನನಗೆ ಅಲ್ಲಿಯೂ ಕೂಡ ಇರಲಾಗಲಿಲ್ಲ. ವಾಪಸ್ ಹೊರಟೆ.

ಅಲ್ಲಿಂದ ನೇರವಾಗಿ ಇಲ್ಲಿಗೆ ಬಂದೆ. ಇಲ್ಲಿ ಕೂತೇ. ಇದೇ ಗೋಡೆ ಬಳಿ. ಸಮಾಧಾನ ಸಿಕ್ತು ಅಂತಲ್ಲ. ಇಲ್ಲಿಗೆ ಮನುಷ್ಯರ ಸುಳಿವೇ ಇಲ್ಲ. ಎಲ್ಲರೂ ದೂರದಿಂದ ಈ ಜಾಗವನ್ನು ಭಯದಿಂದ ನೋಡುತ್ತಾರೆ. ಒಳಗೆ ಕೊಯಿಸಿಕೊಳ್ಳುವ ದೇಹ ಚಾಕು ಹಾಕಿದಾಗ ಈ ಭೂಮಿಯಿಂದ ಹೊರಟ ಕಾರಣಕ್ಕೆ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಅದು ನನಗೆ ಕೇಳಲು ಎಷ್ಟೊಂದು ಹಿತಕರವಾಗಿರುತ್ತದೆ. ಅಂಥದ್ದು ನಿರಾಳ ನಿಡುಸುಯ್ಯುವಿಕೆಗೆ ನಾನು ಎಷ್ಟೊಂದು ಜಾಗ ಅಲೆದೆ. ಇನ್ನೊಂದು ಸೋಜಿಗ ಗೊತ್ತಾ… ತಮ್ಮವರೇ ತಮ್ಮವರ ದೇಹ ಮುಟ್ಟಲು ಅಂಜುವ ಜಾಗ ಇದು. ಇಲ್ಲಿ ನನಗೆ ಮಲಗಿದ ತಕ್ಷಣ ನಿದ್ದೆ ಬಂದು ಬಿಡುತ್ತದೆ… ಈ ನಿದ್ದೆಗಾಗಿ ನಾನು ಇಷ್ಟು ದಿನ ಅಲೆದೆ…” ಎಂದ. 

ನಾನು ಇನ್ನೇನು ಕೇಳುವುದಿತ್ತು…?!

ಅಲ್ಲಿಂದ ಬಂದ ಮೇಲೆ ಒಂದು ವಾರ ಅವನ ಮಾತುಗಳೇ ನನಗೆ ಕಿವಿಯಲ್ಲಿ ಮಾರ್ದನಿಸುತ್ತಿದ್ದವು. ನಾನು ನನ್ನ ಬದುಕಿನ ಬಗ್ಗೆ ಯೋಚಿಸತೊಡಗಿದೆ. ನಾನು ಅವತ್ತು ಅವರಿಗೆ ಏನನ್ನೂ ಹೇಳದೆ ಬಂದೆ. ಅವರ ಬಳಿ ಒಂದಷ್ಟು ಮಾತಾಡಬೇಕಿತ್ತೆಂದು ನನಗೆ ಈಗ  ಅನಿಸತೊಡಗಿತ್ತು. ಅವರೊಳಗೆ ಇನ್ಯಾವ ವಿಷಯಗಳಿವೆಯೋ ತಿಳಿದುಕೊಳ್ಳಬೇಕು ಅನಿಸುತ್ತಿತ್ತು…

ಬೇರೆ ಬೇರೆ ಕಾರಣಗಳಿಂದ ನಾನು ಕೆಲವು ದಿನಗಳ ಕಾಲ ಆ ಕಡೆ ಹೋಗಲಾಗಲಿಲ್ಲ.  ಒಂದು ದಿನ ಬಿಡುವು ಮಾಡಿಕೊಂಡು ಆ ಕಡೆ ಹೋದೆ. ಶವಾಗಾರ ತಲುಪಿದೆ. ಆದರೆ ಅಲ್ಲಿ ಅವನು ಇರಲಿಲ್ಲ. ಅವನಿರುವ ಕುರುಹು ಕೂಡ ಇರಲಿಲ್ಲ. ಹಾಸಿಗೆ ಇತ್ಯಾದಿ ಅವನ ವಸ್ತುಗಳು ಕೂಡ ಇರಲಿಲ್ಲ… 

ನನಗೆ ಆಶ್ಚರ್ಯ ಆಯ್ತು… ತನಗಿಲ್ಲಿ ಸಮಾಧಾನ ಇದೆ ಅಂದವರು ಈ ಜಾಗವನ್ನು ತೊರೆದು ಅದೆಲ್ಲಿ ಹೋದರು? ಎಂಬ ಯೋಚನೆಯಾಯಿತು…

ಯಾರನ್ನು ಕೇಳುವುದು…? ಯಾರಿಗೆ ತಾನೆ ಇವರ ಬಗ್ಗೆ ಗೊತ್ತಿರುತ್ತದೆ? ಇವರನ್ನು ಅಷ್ಟೊಂದು ದಾದು ಮಾಡುವವರಾದರೂ ಯಾರು? ಅವರೊಂದು ಪ್ರಶ್ನೆಯಾಗಿಯೇ ನಿಚ್ಚಳವಾಗತೊಡಗಿದರು. 

ಅಲ್ಲಿಂದ ಹೊರಬಂದೆ… 

ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಗೆಳೆಯನೊಬ್ಬ ಎದುರಾದ…

ʻಏನೋ ಇಲ್ಲಿ? ಯಾಕೆ ಈ ಕಡೆ?ʼ ಎಂದು ಕೇಳಿದ ಅವನು. 

ಏನೊ ಹೇಳುವುದು… ಆ ಗೋಡೆಯ ಬಳಿಯ ಹುಚ್ಚನನ್ನು ನೋಡಲು ಬಂದೆ ಅನ್ನಲೇ? ಸುಮ್ಮನೆ ಮಾತುಮರೆಸಲು ನೋಡಿದೆ… ಆದರೂ ಇವನನ್ನು ಅವರ ಬಗ್ಗೆ ಕೇಳಬೇಕು ಅನಿಸಿತು. ಕೇಳಿಯೇ ಬಿಡುವ ಅನಿಸಿ ಕೇಳಿದೆ.

‘ಅದೇ ಅಲ್ಲಿ ಶವಾಗಾರದ ಬಳಿ ಒಬ್ಬ ಕೂತಿರುತಿದ್ನಲ್ಲ… ಅವನು ಎಲ್ಲಿ ಹೋದ…?’ ಅಂದೆ

‘ಓಹ್ ಅವ್ನಾ… ಎಲ್ಲೊ ಎದ್ದು ಹೋದ ಮೊನ್ನೆನೇ. ಮೊನ್ನೆ ಮಧ್ಯಾಹ್ನ ಒಂದು ಬಾಡಿ ಪೋಸ್ಟ್‌ಮಾರ್ಟಿಂಗೆ ಬಂದಿತ್ತು.‌ ಸುಮಾರು ನಲವತ್ತು ವರ್ಷದ ಹೆಣ್ಣಿನ‌ ದೇಹ.‌ ವಿಷ ಕುಡಿದು ಸತ್ತು ಹೋದ ಜೀವ. ಅಪರಿಚಿತ ಶವ ಅಂದುಕೊಂಡಿದ್ದರು. ಆದರೆ ಅಪರಿಚಿತ ಶವ ಅಲ್ಲ ಅನ್ನೋದು ನಂತರ ಗೊತ್ತಾಯ್ತು.‌ ಜನ ಏನೇನೊ  ಮಾತಾಡಿಕೊಳ್ಳುತ್ತಿದ್ರು. ಆ ವಿಚಾರ ಅವನ ಕಿವಿಗೂ ಬಿತ್ತು ಅನಿಸುತ್ತೆ. ತುಂಬಾ ಗಲಿಬಿಲಿಗೊಂಡ ಅಂತಿದ್ರು ಜನ. 

ಏಕಾಏಕಿ ಅವನು ತನ್ನೆಲ್ಲಾ ಸಾಮಾನುಗಳನ್ನು ಎತ್ತಿಕೊಂಡು ಹೊರಟೆ ಬಿಟ್ಟನಂತೆ. ಹೋಗುವಾಗ ಅದೇನೊ ಕೂಗಿ ಹೇಳಿದ್ನಂತೆ. ಪ್ರೀತಿ, ವಿಷ, ಸಾವು, ಸುಖ… ಹೀಗೆ ಏನೇನೊ ಬಡಬಡಿಸುತ್ತಿದ್ದನಂತೆ.  ನದಿಯೊಂದು ಕಡಲನ್ನು ಸೇರಿ ತನ್ನ ಬದುಕು ಮುಗಿಸಿಕೊಳ್ಳುವ ಆತುರದಲ್ಲಿ ಓಡುವಂತೆ ದಡಬಡ ಎದ್ದು ಹೋದನಂತೆ… ಎಂದ ಗೆಳೆಯ ಅಲ್ಲಿಂದ ಹೊರಟು‌ ಹೋದ. 

ನಾನು ಸುಮ್ಮನೆ ನಿಂತಿದ್ದೆ; ನನಗೆಲ್ಲವೂ ಖಾಲಿ ಖಾಲಿ ಅನಿಸತೊಡಗಿತ್ತು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

May 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: