ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು- ಅರಿವಿನ ತತ್ವಗಳು…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

7

ಅರಿವಿನ ಸ್ಫೋಟಗಳು ಬಿಚ್ಚಿಡುವ ಪ್ರಾಥಮಿಕ ಅರಿವಿನ ತತ್ವಗಳು.

ಅರಿವ ಬೆಡಗು ಅಂಕಣದಲ್ಲಿ ಇಲ್ಲಿಯವರೆಗೆ ವಿವರಿಸಿದ ಮಗುವಿನ ಇಂದ್ರಿಯಗಳ ಮತ್ತು ಅದರ ಮೆದುಳಿನ  ಬೆಳವಣಿಗೆ, ಮಾನವರ ವಿಕಾಸದ ಹಾದಿ ಮತ್ತು ಮಾನವರಾಗಿ ವಿಕಾಸವಾದ ನಂತರದ ಎರಡು ಅರಿವಿನ ಸ್ಫೋಟಗಳು  ಅರಿವಿನ  ಕೆಲವು ತತ್ವಗಳನ್ನು ಬಿಚ್ಚಿಡುತ್ತವೆ.‌

ಈಗ ಪ್ರೌಢಶಾಲೆ ಓದಿದ ಎಲ್ಲರಿಗೂ ತಿಳಿದಿರುವಂತೆ ಮನುಷ್ಯರ ಉಗಮಕ್ಕೆ ಮೊದಲೇ ನಾಲ್ಕು ನೂರು ಕೋಟಿ ವರ್ಷಗಳಷ್ಟು ದೀರ್ಘ ಕಾಲದಲ್ಲಿ  ಜೀವಿಗಳು ವಿಕಾಸಗೊಳ್ಳುತ್ತಾ ಬಂದಿದ್ದವು. ಪ್ರಾಣಿಗಳ ಉಗಮ ಏಳು ಕೋಟಿ ವರ್ಷಗಳ ಹಿಂದೆ ಆರಂಭವಾದರೆ ಮಾನವ ಪೂರ್ವದ ರೂಪಗಳು ಕೇವಲ 40 ಲಕ್ಷ ವರ್ಷ ಹಿಂದಿನವು. ನಿಜವಾದ ಮಾನವರು ಹೋಮೋ ಸೆಪಿಯನ್ಸ್ ಕೇವಲ ಒಂದು ಲಕ್ಷ ವರ್ಷದ ಹಿಂದೆ ವಿಕಾಸಗೊಂಡವರು.

ಇಂದು ಲಭ್ಯವಿರುವ ಮಾಹಿತಿಗಳ ಆಧಾರದ ಮೇಲೆ ಮಾಡಿದ ಒಂದು ವೈಜ್ಞಾನಿಕ ಲೆಕ್ಕಾಚಾರ ಭೂಮಿಯ ಮೇಲೆ 87 ಲಕ್ಷ ಪ್ರಬೇಧಗಳಿವೆ (species). ಮನುಷ್ಯರು ಇವುಗಳಲ್ಲಿ ಒಂದು ಪ್ರಬೇಧ ಮಾತ್ರ. ಇಷ್ಟೊಂದು ಪ್ರಬೇಧಗಳಲ್ಲಿ ಮನುಷ್ಯರು ಗುರುತಿಸಿ ವಿವರಿಸಿರುವುದು ಕೇವಲ ಶೇ 20 ರಷ್ಟು ಮಾತ್ರ. ಭೂಮಿಯ ಮೇಲಿನ ಪ್ರಬೇಧಗಳಲ್ಲಿ ಶೇ.86 ರಷ್ಟು ನೀರಿನೊಳಗಡೆಯ ಪ್ರಬೇಧಗಳಲ್ಲಿ ಶೇ.91 ರಷ್ಟು  ಮಾನವರಿಗೆ ಇನ್ನೂ ತಿಳಿದಿಲ್ಲ. 

ಇನ್ನು ಭೂಮಿಯ ವಿಕಾಸದಲ್ಲಿ ರೂಪುಗೊಂಡ ಆಮ್ಲಜನಕದೊಂದಿಗೆ ಕೂಡಿದ ವಿಶಿಷ್ಟ ಸಂಯೋಜನೆಯ ಗಾಳಿ, ನೀರು, ಕಲ್ಲು ಬಂಡೆಗಳು, ಖನಿಜಗಳು, ಹಲ ಹಲವು ರಾಸಾಯನಿಕಗಳು ಮೊದಲಾದ ಅಜೈವಿಕ ವಸ್ತುಗಳು ಮತ್ತಷ್ಟು ಅಸಂಖ್ಯ.

ಅರಿವಿನ ಕೆಲ ಪ್ರಾಥಮಿಕ ತತ್ವಗಳು:

ಈ ಎಲ್ಲ ಜೈವಿಕ, ಅಜೈವಿಕ ವಸ್ತುಗಳು ಸೇರಿ ಪ್ರಕೃತಿ ಎಂದು ಮನುಷ್ಯರು ಅದರ ಒಂದು ಭಾಗವೆಂದು ಸಾಮಾನ್ಯ ಜನರು ತಿಳಿದಿದ್ದೇವೆ. ಮಾನವರ ಶರೀರವು ನಾನೂರು ಕೋಟಿ ವರ್ಷಗಳ ಹಿಂದಿನ, ಜಗತ್ತಿನ ಮೊದಲ ಜೀವಿಗಳ ಅಂಶದಿಂದ ಹಿಡಿದು ವಾನರರವರೆಗಿನ ದೇಹ ರಚನೆಯ ಅಂಶಗಳನ್ನು ಒಳಗೊಂಡಿದೆ. ವಿಶ್ವದ ಎಲ್ಲ ಧರ್ಮಗ್ರಂಥಗಳಲ್ಲಿ ಜೀವಿಗಳ ಹಾಗೂ ಮಾನವರ ಉಗಮದ, ವಿವಿಧ ಸಸ್ಯ, ಪ್ರಾಣಿಗಳ ಸೃಷ್ಟಿಯ ಬಗ್ಗೆ ಬರೆದದದ್ದೆಲ್ಲಾ ಕಲ್ಪನೆ ಎಂದು ಸಾಬೀತಾಗಿದೆ.

ಒಟ್ಟಿನಲ್ಲಿ ಮನುಷ್ಯರ ಹಾಗೂ ಜಗತ್ತಿನ  ಅಸ್ತಿತ್ವಕ್ಕೆ ಹೊರ ಪ್ರಪಂಚವನ್ನು ಆವರಿಸಿರುವ ಪ್ರಕೃತಿಯೇ, ಪ್ರಕೃತಿಯಲ್ಲಿನ ಭೌತಿಕ, ರಸಾಯನಿಕ ಮತ್ತು ಜೈವಿಕ ವಸ್ತುಗಳೇ ಪ್ರಥಮ ಮತ್ತು ಮೂಲ.‌ ಮನುಷ್ಯರು ಮತ್ತವರು ಪಡೆದ ಅರಿವು, ಅದು ಪ್ರಕೃತಿಯ ಬಗೆಗಿನ ಅರಿವಾಗಬಹುದು ಅಥವಾ ಧರ್ಮ ಮತ್ತಿತರ ವಿಚಾರಗಳಾಗಲಿ ಬಹುಕಾಲದ ನಂತರದ್ದು ಎಂಬದು ಅರಿವಿನ ಒಂದು ಮುಖ್ಯ ತತ್ವ. ಮಾನವನ ವಿಕಾಸದ ಇತಿಹಾಸದಿಂದ ಈ ಅಂಶ ತಾನಾಗಿಯೇ ತಿಳಿಯುತ್ತದೆ . ಜಗತ್ತೆಲ್ಲ ಮಿಥ್ಯೆ, ಕಾಣುವ ಎಲ್ಲ ವಸ್ತುಗಳೂ ಮಾಯೆ  ಎಂದು ವಾದಿಸಿದ ಗೌಡಪಾದರು, ಶಂಕರರು ಮೊದಲಾದ ಅನೇಕರ ಮಾಯಾವಾದದ ಪ್ರತಿಪಾದನೆಗಳು ವಾಸ್ತವಕ್ಕೆ ದೂರ ಎಂಬುದೂ ಇದರಿಂದ ಸಾಬೀತಾಗುತ್ತದೆ.

ಮಾನವರು ಪ್ರಕೃತಿಯ ವಿವಿಧ ಅಂಗಗಳ ಮತ್ತದರ ಒಟ್ಟಾರೆ ರಚನೆಯನ್ನು ಹಲವು ರೀತಿಯ ಅಧ್ಯಯನಕ್ಕೆ ಒಳಪಡಿಸುತ್ತಾ ಹಲ ಹಲವು ಪ್ರಕ್ರಿಯೆಗಳು, ತತ್ವಗಳನ್ನು ರೂಪಿಸುತ್ತಾ ಬಂದಿದ್ದಾರೆ. ಮೇಲೆ ಹೇಳಿದಂತೆ ಪ್ರಕೃತಿಯ ಬಗ್ಗೆ, ಇತರ ವಸ್ತು ಪ್ರಪಂಚದ ಬಗ್ಗೆ ಇನ್ನೂ ತಿಳಿದುಕೊಳ್ಳುವುದು ಬಹಳ ಬಹಳ ಇದೆ. ಪ್ರತಿ ದಿನವೂ ಕೋಟ್ಯಾಂತರ ವಿಜ್ಞಾನಿಗಳು ಪ್ರಕೃತಿಯ ಹಾಗೂ ಜಗತ್ತಿನ ಬಗೆಗಿನ ಅರಿವನ್ನು ವಿಸ್ತರಿಸಿಕೊಳ್ಳಲು ಶ್ರಮಿಸುತ್ತಲೇ ಇದ್ದಾರೆ. ಆದರೆ ಇಲ್ಲಿಯವರೆಗೆ ಪಡೆದ ಪ್ರಕೃತಿಯ ಬಗೆಗಿನ ಅರಿವೇ ಮಾನವರ ಬದುಕನ್ನು ಬೃಹತ್ ಪ್ರಮಾಣದಲ್ಲಿ ಬದಲಾಯಿಸಿದೆ. ಈ ಎಲ್ಲ ಕ್ರಿಯೆಗಳ ಮೂಲಕ ಮಾಯಾವಾದ ದಿನ ದಿನವೂ ನಿರಾಕರಣೆಗೆ ಒಳಗಾಗುತ್ತಲೇ ಇದೆ. ಈ ಬಗ್ಗೆ ಮತ್ತಷ್ಟು ವಿಶದವಾಗಿ ಮುಂದಿನ ಸಂಚಿಕೆಗಳಲ್ಲಿ ವಿಶ್ಲೇಷಣೆಗೆ ಒಳಪಡಿಸೋಣ.

ಪ್ರಕೃತಿಯ ಜೊತೆಗಿನ ಸಂಬಂಧದ ಮೂಲಕ ಮಾನವರು ತಮ್ಮ ಆಹಾರ ಪಡೆದು ಜೀವಿಸಿದ್ದಷ್ಟೇ ಅಲ್ಲದೆ, ಅದಕ್ಕಾಗಿ ಅಂದು ಶಿಲಾಯುಧಗಳನ್ನು ರೂಪಿಸಿಕೊಂಡ ಕ್ರಿಯೆಯ ಮೂಲಕವೇ ಮಾನವರು ತಮ್ಮ ಶರೀರದ ಆಕಾರ, ಕೈಗಳ ಚುರುಕುತನ, ಕಣ್ಣು, ಕಿವಿಗಳ, ಚರ್ಮದ ಸ್ಪರ್ಶತೆ, ನಾಲಿಗೆಯ ರುಚಿಯ ಸೂಕ್ಷ್ಮತೆಯನ್ನು  ಪಡೆದುಕೊಂಡರು ಎಂಬುದನ್ನು ಹಿಂದಿನ ಲೇಖನಗಳಲ್ಲಿ ವಿವರಿಸಲಾಗಿದೆ. ಮಾನವರ ಬುದ್ಧಿಶಕ್ತಿಯ ತಾಣ ಮೆದುಳಿನ ಬೆಳವಣಿಗೆ, ಮಾನವರ ವಿಶಿಷ್ಟತೆಯಾದ ಭಾಷೆಗಳೂ  ಈ ಕ್ರಿಯಾಶೀಲತೆ ಹಾಗೂ ಸಾಮೂಹಿಕ ಜೀವನ ವಿಧಾನದಿಂದ ರೂಪುಗೊಂಡವು. ಹಿಂದಿನ ಲೇಖನಗಳಲ್ಲಿ ವಿವರಿಸಲಾದ ಎರಡು ಅರಿವಿನ‌ ಸ್ಫೋಟಗಳಿಗೂ ಈ ಕ್ರಿಯಾಶೀಲತೆ ,ಅದರ ಮೂಲಕ ಪಡೆದ ಪ್ರಕೃತಿಯ ಜ್ಞಾನವೇ ಕಾರಣ.

ಸಾಮಾನ್ಯವಾಗಿ ಜ್ಞಾನವೇ ಮಾನವರ ಕ್ರಿಯಾಶೀಲತೆಯ ಆಧಾರ ಎಂಬ ತಿಳುವಳಿಕೆಯಿದೆ. ಅದಕ್ಕೆ ಭಿನ್ನವಾಗಿ ಮಾನವರಿಗೆ ಕ್ರಿಯೆಯೇ ಅರಿವಿನ ಮೂಲ ಎಂಬ ಮತ್ತೊಂದು ಮುಖ್ಯ ಅರಿವಿನ ತತ್ವವೂ ಮಾನವರ ಉಗಮ, ಅವರ ಮೆದುಳಿನ ಬೆಳವಣಿಗೆಯ ಇತಿಹಾಸದಿಂದ ತಿಳಿದು ಬರುತ್ತದೆ. ಕ್ರಿಯೆಯಿಂದ ಜ್ಞಾನ ಮೂಡುತ್ತದೆ. ಪಡೆದ ಈ ಜ್ಞಾನದಿಂದ ಕ್ರಿಯೆ ಮತ್ತಷ್ಟು ಉತ್ತಮಗೊಳ್ಳುತ್ತದೆ, ಪರಿಣಾಮಕಾರಿಯಾಗುತ್ತದೆ.

ಮಾನವರ ಎರಡು ಅರಿವಿನ ಸ್ಫೋಟಗಳು, ಅವುಗಳಿಗೂ ಹಿಂದಿನ ಶಿಲಾಯುಧಗಳ ತಯಾರಿಕೆಯ ಸಂದರ್ಭದಲ್ಲಿಯೂ ಎರಡು ಅರಿವಿನ ಮುಖ್ಯ ಸಾಧನಗಳನ್ನು  ಬಳಸುತ್ತಾ ಬಂದಿದ್ದಾರೆ. ಗಮನಿಸುವುದು ಅಥವಾ ವೀಕ್ಷಣೆ (observation )ಎಂಬುದು ಒಂದು ಸಾಧನ. ಅದರ ಜೊತೆಗೆ ತುಲನೆ (comparison)  ಎಂಬುದು ಮತ್ತೊಂದು ಸಾಧನ. ತಮ್ಮ ಶಿಲಾಯುಧಗಳಿಗೆ ಸೂಕ್ತ ಕಲ್ಲು ಯಾವುದು ಎಂಬುದನ್ನು ವಿಧ ವಿಧದ ಕಲ್ಲುಗಳನ್ನು ಗಮನಿಸುತ್ತಾ, ಒಂದರೊಡನೊಂದು ಹೋಲಿಕೆ ಮಾಡುತ್ತಾ ಆಯ್ಕೆ ಮಾಡಿಕೊಂಡರು, ಆಯ್ಕೆಗಳನ್ನು ಉತ್ತಮ ಪಡಿಸಿಕೊಳ್ಳುತ್ತಾ, ಉತ್ತಮ ಶಿಲಾಯುಧಗಳನ್ನು ಮಾಡಿಕೊಳ್ಳುತ್ತಾ ಸಾಗಿದರು. ಈ ಕ್ರಿಯೆಯಲ್ಲಿ ವಿವಿಧ ಕಲ್ಲುಗಳ ಜೊತೆಗೆ,  ಹಲವಾರು ಪ್ರಯೋಗಗಳನ್ನು  ಮಾಡದೆ ವಿವಿಧ ಕೆಲಸಗಳಿಗಾಗಿ ವಿವಿಧ ಆಕಾರದ,ವಿವಿಧ ಮೊನಚಿನ ಶಿಲಾಯುಧಗಳನ್ನು ತಯಾರಿಸುವುದು ಸಾಧ್ಯವಿಲ್ಲ. ‌

ಈ ಪ್ರಯೋಗಗಳು ಪ್ರಜ್ಞಾಪೂರ್ವಕ experiment ಗಳಾಗದೆ trial and error ಸ್ವರೂಪದ್ದಾಗಿರಬಹುದು. ಆದರೆ ಇವೆಲ್ಲವೂ ಮಾನವರ ಅರಿವಿನ ದಾರಿಯ ಹೆಜ್ಜೆಗಳು.

ಜೊತೆಗೆ ಮೊದಲ ಅರಿವಿನ ಸ್ಫೋಟದ ಆಧಾರವಾದ ಮರ ಗಿಡಗಳನ್ನು ಹಣ್ಣು, ಬೀಜ, ಗೆಡ್ಡೆ ಗೆಣಸುಗಳನ್ನು, ವಿವಿಧ ಪ್ರಾಣಿಗಳ ಜೀವನ ಚಕ್ರವನ್ನು, ವರ್ತನೆಗಳನ್ನು ಹಲವಾರು ದಶಕಗಳ ಕಾಲ ಗಮನಿಸಲು, ತುಲನೆ ಮಾಡಲು ಅಜ್ಜಿ ಅಜ್ಜಂದಿರಿಗೆ ಅವಕಾಶ ದೊರೆತಾಗಲೇ ಮೊದಲ  ಅರಿವಿನ ಸ್ಫೋಟ ಸಂಭವಿಸಿತು. ಮನುಷ್ಯನ ಮೆದುಳು ಮತ್ತಷ್ಟು ಬೆಳೆಯಿತು. ಹೋಮೋ ಸೆಪಿಯನ್ಸ್ ಎಂಬ ಬುದ್ಧಿವಂತ  ಮಾನವ ಪ್ರಬೇಧ ವಿಕಾಸವಾಯಿತು. ಕೃಷಿ ಪಶು ಸಂಗೋಪನೆ, ಲೋಹಗಳ ಶೋಧ ಮೊದಲಾದ ನಾಗರೀಕತೆಯ ಬೆಳವಣಿಗೆಯ ನೆಗೆತಗಳಲ್ಲಿ, ಇತ್ತೀಚಿನ ವಿಜ್ಞಾನ ಯುಗದ ಅರಿವಿನ ಸ್ಫೋಟದಲ್ಲಿ ಕೂಡಾ ಈ ಎರಡು ಅರಿವಿನ ಸಾಧನಗಳು ಬಹು ಮುಖ್ಯ ಪಾತ್ರ ವಹಿಸಿದವು.

ವೀಕ್ಷಣೆ
ಭಾರತದಲ್ಲಿಯೂ ಆದಿಮ ಸಮುದಾಯಗಳು, ನಂತರ ಆರ್ಯಭಟ ಬ್ರಹ್ಮ ಗುಪ್ತ ಮೊದಲಾದ ಖಗೋಳ ವಿಜ್ಞಾನಿಗಳು ನಕ್ಷತ್ರಗಳು, ಚಂದ್ರ,ಸೂರ್ಯರ ವೀಕ್ಷಣೆ ಮತ್ತು ವಿವಿಧ ಹಂಗಾಮುಗಳಲ್ಲಿ ಅವುಗಳ ಸ್ಥಾನ, ಆಕಾರಗಳ ತುಲನೆ ಮಾಡುತ್ತಲೇ ತಿಂಗಳು,ಋತುಗಳು, ಚಾಂದ್ರಮಾನ, ಸೂರ್ಯಮಾನ ವರ್ಷಗಳ  ಪರಿಕಲ್ಪನೆಯನ್ನು ರೂಢಿಸಿಕೊಂಡರಲ್ಲವೇ ?

ಈ ಅಂಕಣದ ಆರಂಭದ ಲೇಖನಗಳಲ್ಲಿ ವಿವರಿಸಿದಂತೆ ಜನನದ ನಂತರ ಶಿಶುವಿನ ಅರಿವಿನ ಬೆಳವಣಿಗೆಯಲ್ಲಿಯೂ ವೀಕ್ಷಣೆ ಮತ್ತು ತುಲನೆ ಮುಖ್ಯ ಪಾತ್ರ ವಹಿಸುತ್ತದೆ.  ತಾಯಿಯ ಮತ್ತು ಇತರರ ದನಿ, ಮುಖ ಚಹರೆಯ ವಿಶಿಷ್ಟತೆಗಳನ್ನು ತದೇಕವಾಗಿ ವೀಕ್ಷಿಸುತ್ತಾ, ತಾನು ನೋಡುವ, ಕೇಳುವ ಇತರರ ದನಿ, ಚಹರೆಗಳೊಂದಿಗೆ ಹೋಲಿಕೆ ಮಾಡುತ್ತಾ ತಾಯಿಯನ್ನು, ಇತರ ಆಪ್ತರನ್ನು ಗುರುತು ಹಿಡಿಯಲಾರಂಭಿಸುತ್ತದೆ. ಅಪರಿಚಿತರನ್ನು ಕಂಡಾಗ ತಾಯಿ, ತಂದೆ, ಅಜ್ಜಿ ಮೊದಲಾದ ಆಪ್ತರ ಆಸರೆ ಬಯಸುತ್ತದೆ. ಹೀಗೆ‌ ವೀಕ್ಷಣೆ ಮತ್ತು ತುಲನೆ   ಮಾನವರ ಉಗಮ ಕಾಲದಿಂದ ಇಂದಿನವರೆಗೂ ಇವು ಮಾನವರ ಅರಿವಿನ ಸಾಧನಗಳಾಗಿವೆ. ಆದರೆ ಇವುಗಳಿಗೆ  ಅರಿವಿನ ಸಾಧನಗಳೆಂಬ ಸ್ಥಾನವನ್ನು ನೀಡಲಾಗಿರಲಿಲ್ಲ.

ಆಧುನಿಕ ವಿಜ್ಞಾನ ಯುಗದ ಆರಂಭ ಕಾಲದಲ್ಲಿ ಫ್ರಾನ್ಸಿಸ್ ಬೇಕನ್ ಎಂಬ ವಿಶ್ವದ ಮೊದಲ ವೈಜ್ಞಾನಿಕ ತತ್ವಶಾಸ್ತ್ರದ ಪ್ರತಿಪಾದಕ ಪ್ರಯೋಗಗಳು, ವಿಶ್ಲೇಷಣೆ ಮೊದಲಾದ ಅರಿವಿನ ಸಾಧನಗಳ ಸಾಲಿನಲ್ಲಿ ಈ ಎರಡು ಸಾಧನಗಳಿಗೂ ಮುಖ್ಯ ಸ್ಥಾನ ನೀಡಿದ್ದಾನೆ. ವಿಜ್ಞಾನ ಯುಗದ ಮುಖ್ಯ ಸಾಧನೆಗಳಾದ ಕೋಪರ್ನಿಕಸ್‌ನ ಖಗೋಳ ವಿಜ್ಞಾನ ಕ್ರಾಂತಿಗೆ,ಡಾರ್ವಿನ್ನನ ವಿಕಾಸವಾದಕ್ಕೆ ವೀಕ್ಷಣೆ, ತುಲನೆಗಳೇ  ಪಾತ್ರ ವಹಿಸಿಲ್ಲವೇ? ಇವು ವಿಜ್ಞಾನ ರೂಪಿಸಿದ ಕ್ರಮಬದ್ಧ, ಯೋಜನಾ ಬದ್ಧ ವೀಕ್ಷಣೆಗಳು.  

ಪ್ರತಿಯೊಂದು ವಿಜ್ಞಾನ ವಿಭಾಗದಲ್ಲಿಯೂ ವೀಕ್ಷಣೆ (observation) ಎಂಬ ಪದ ದೃಷ್ಟಿಗೆ ಸಂಬಂಧಿಸಿದ್ದು. ಆದರೆ ಅರಿವಿನ‌ ಸಾಧನವಾಗಿ ಈ ಪದ  ಎಲ್ಲ ಇಂದ್ರಿಯಗಳಿಗೂ ವ್ಯಾಪಿಸಿಕೊಳ್ಳುತ್ತದೆ. ಒಂದು ವಸ್ತುವನ್ನು ಗ್ರಹಿಸುವಾಗ ದೃಷ್ಟಿಯೇ ಮುಖ್ಯ ಪಾತ್ರ ವಹಿಸಿದರೂ, ಆಯಾ ವಸ್ತುವಿನ ಸ್ವರೂಪಕ್ಕೆ ಅನುಗುಣವಾಗಿ ಶಬ್ದ, ಸ್ಪರ್ಶ, ವಾಸನೆ, ರುಚಿಗಳೂ ತಮ್ಮ ಪಾತ್ರ ವಹಿಸುತ್ತವೆ.

ಈ ಗುಣಗಳೂ ತುಲನೆಗೆ ಒಳಗಾಗುತ್ತವೆ. ಒಂದು ಹೂವಿನ ಬಣ್ಣ, ಆಕಾರ, ವಾಸನೆ ಸ್ಪರ್ಶಗಳನ್ನು ಕೂಡಿಯೇ ಅದರ ಗುರುತು ಹಿಡಿಯುವಂತೆ ಅನೇಕ ಕೀಟ, ಪಕ್ಷಿ, ಪ್ರಾಣಿಗಳನ್ನು ನಮ್ಮ ನೋಟಕ್ಕೆ  ಸಿಲುಕುವ ಮೊದಲೇ ಶಬ್ದದ ಮೂಲಕ ಗುರುತು ಹಿಡಿಯುವ ಸಾಧ್ಯತೆಗಳು ಹೆಚ್ಚು‌. ಮಗು ತಾಯಿಯನ್ನು ಗುರುತು ಹಿಡಿಯುವುದೂ ಕೂಡಾ ಮೊದಲು ಮೈಯ ವಾಸನೆ, ದನಿ ನಂತರ ದೃಷ್ಟಿಯ ಮೂಲಕ ಗುರುತು ಹಿಡಿಯಲಾರಂಭಿಸುತ್ತದೆ.
ಹೀಗೆ  ಪಂಚೇದ್ರಿಯಗಳು ಒದಗಿಸುವ ಮಾಹಿತಿಯನ್ನು ವೀಕ್ಷಣೆಯಿಂದ  ಸಂಗ್ರಹಿಸುವುದು, ಅದನ್ನು ಬೇರೆ ಮಾಹಿತಿಗಳೊಂದಿಗೆ ತುಲನೆ ಮಾಡುವುದು ಅರಿವಿನ ಮುಖ್ಯ ಪ್ರಾಥಮಿಕ ತತ್ವಗಳು.

ಮುಂದಿನ ಸಂಚಿಕೆಗಳಲ್ಲಿ ಲಕ್ಷಾಂತರ ಕಿಮೀ ದೂರ ಸಾಗಿದ ಕಣ್ಣು, ಕಿವಿಗಳು, ಭಾಷೆ ಮತ್ತು ಅರಿವು, ನೆನಪಿನ ಶಕ್ತಿ ಮತ್ತು ಅರಿವು, ಚಿಂತನೆ ಮತ್ತು ಅರಿವು ಇತ್ಯಾದಿ.

‍ಲೇಖಕರು Admin

May 7, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: