ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

2

ಅಮ್ಮನ ಮಡಿಲಿಂದ ಜಗತ್ತಿನ ಅರಿವು

ಅಮ್ಮನ ಒಡಲಿಂದ ಹೊರಬಿದ್ದು ಅಮ್ಮನ ಮಡಿಲು ತುಂಬಿದಾಗ ಅಮ್ಮನಿಗೆ ಹೆರಿಗೆಯ ನೋವಿನ ನಡುವೆಯೂ ಖುಷಿ. ಅಮ್ಮನ ಜಗತ್ತಿನ ಬೇರೆಲ್ಲರಿಗೂ ಆನಂದ. ಗದ್ದಲವೋ ಗದ್ದಲ.‌ ಆ ಜಗತ್ತಿಗೆ ಹೊಸ ಸೇರ್ಪಡೆಯಾದ, ಅಲ್ಲಿಯವರೆಗೆ ತನ್ನದೇ ಪುಟ್ಟ ಜಗತ್ತಿನಲ್ಲಿ ತಾನು ತಾನೇ ಆಗಿ ತೇಲಾಡುತ್ತಿದ್ದ ಶಿಶುವಿಗೆ ಮಾತ್ರ ಅಯೋಮಯ. ಇದ್ದಕ್ಕಿದ್ದಂತೆ ಹೊರಜಗತ್ತು ಹಲವು ರೂಪದಲ್ಲಿ ಅದನ್ನು ಆವರಿಸಿಕೊಳ್ಳುತ್ತದೆ. ಶಿಶುವನ್ನು ಎತ್ತಿಕೊಳ್ಳುವ, ನೋಡಬಯಸುವ ಹಲವಾರು ಜನರ ಉದ್ವೇಗದ ಶಬ್ದಗಳು ಅಲೆ ಅಕೆಯಾಗಿ ಶಿಶುವಿನ ಕಿವಿದೆರೆಗೆ ಬಡಿಯುತ್ತದೆ.‌ ಜೊತೆಗೆ ಹಲವಾರು ರೀತಿಯ ವಾಸನೆಗಳ ಮೇಳ ಮೂಗಿಗೆ ತಾಕುತ್ತದೆ. ಬಹಳ ಮೃದುವಾಗಿ ಎತ್ತಿಕೊಂಡು ತಲೆ,ಇಡೀ ಶರೀರಕ್ಕೆ ಆಧಾರ ನೀಡಿರುವಾಗಲೂ ಭೂಮಿಯ ಗುರುತ್ವಾಕರ್ಷಣೆ ಶಿಶುವಿನ ಅಂಗಾಂಗಗಳನ್ನು ಸೆಳೆಯುತ್ತಿರುತ್ತದೆ.

ಗರ್ಭಾಶಯದ ದ್ರವದೊಳಗೆ ‘ತೇಲಿ, ತೇಂಕಾಡುವ ಸೊಗ’ ಮುಂದೆಂದೂ ಇಲ್ಲ ಎನ್ನುವುದು ಅದಕ್ಕೆ ಅರಿವಾಗದೆ ಭಾದಿಸಲಾರಂಭಿಸುತ್ತದೆ. ಈ ಜಗತ್ತು ತನ್ನ ಮೇಲೆ ಮಾಡಿದ ದಿಢೀರ್ ಧಾಳಿಗೆ ಅದಕ್ಕೆ ಗೊತ್ತಿರುವ ಪ್ರತಿಕ್ರಿಯೆ ಒಂದೇ . ಅಳುವುದು. ಅದರ ಇಂದ್ರಿಯಗಳ ಮೇಲೆ ನಡೆದ ಧಾಳಿಯ ನಡುವೆ ತಾಯ ವಾಸನೆ ಮತ್ತು ದನಿಯ ಗುರುತು,ಅವಳ ಮುದ್ದು ಮಾತಿನಲ್ಲಿ ತುಂಬಿರುವ ಪ್ರೇಮದ ಹೊನಲು, ಅವಳ ದೇಹದ ಅಪ್ಪುಗೆ ಮಾತ್ರ ಅದಕ್ಕೆ ನೆಮ್ಮದಿ ತರುವಂತಹ ಏಕಮಾತ್ರ ಆಸರೆ. ಅಮ್ಮನ ಮಡಿಲಿನ ಈ ಆಸರೆಯ ರಕ್ಷಣೆಯಲ್ಲಿ ಲೋಕವನ್ನು ಅವಲೋಕಿಸಲು ಆರಂಭಿಸುತ್ತದೆ ಶಿಶು.‌ ಇದೇ ಲೋಕದ ಬಗೆಗಿನ ಅರಿವಿನ ಮೊದಲ ಮೆಟ್ಟಲು.

ಮಾನವ ಶಿಶು ಬೇರೆಲ್ಲಾ ಮೊಲೆಯೂಡುವ ಪ್ರಾಣಿಗಳಿಗಿಂತ ಹೆಚ್ಚು ಪರಾವಲಂಬಿ. ತಮ್ಮ ಮನೆಯಲ್ಲಿ ದನ,ಎಮ್ಮೆಗಳು, ಕುರಿ,ಮೇಕೆಗಳು ಇತ್ಯಾದಿ ಪ್ರಾಣಿಗಳು ಹೆರುವುದನ್ನು, ಹೆತ್ತ ಕೂಡಲೇ ಕರು, ಮರಿಗಳು ಚಂಗ ಚಂಗನೆ ನೆಗೆದಾಡುವುದನ್ನು ಗಮನಿಸಿದವರಿಗೆ ಈ‌ ಅಂಶ ಬಹಳ ಚೆನ್ನಾಗಿ ಗೊತ್ತಾಗುತ್ತದೆ. ಮಾನವ ಶಿಶುಗಳ ಈ  ಪರಾವಲಂಬನೆಯ ಸ್ಥಿತಿ ಒಂದು ದೌರ್ಬಲ್ಯವೆಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ಈ ದೌರ್ಬಲ್ಯ ಮಾನವ ವಿಕಾಸಕ್ಕೆ ಒಂದು ಮುಖ್ಯ ಕೊಡುಗೆ. ಏಕೆಂದರೆ ಶಿಶುಗಳಿಗೆ ಹೊಸ ಹೊಸತನ್ನು ಕಲಿಯಲು, ತಾಯಿ ಮತ್ತಿತರರು ಅದಕ್ಕೆ ಕಲಿಸಲು ತೆರೆದ ಮಹಾದ್ವಾರ ಈ ಅವಕಾಶ.

ಇತರೆಲ್ಲಾ ಪ್ರಾಣಿಗಳು ಪ್ರಕೃತಿಗೆ ಹಾಗೂ ತಮ್ಮ ಸಹಜೀವಿಗಳಿಗೆ ತಮ್ಮ ವಂಶವಾಹಿಗಳು( ಡಿಎನ್ಎ), ಅದರಿಂದ ಉತ್ಪನ್ನವಾದ ರಾಸಾಯನಿಕಗಳಿಂದ ನಿರ್ದೇಶಿತ ಪ್ರಾಥಮಿಕ ಮಟ್ಟದ instinctive ಪ್ರತಿಕ್ರಿಯೆಯನ್ನಷ್ಟೇ ನೀಡಲು ರೂಪಿತವಾಗಿವೆ. ಕಲಿಕೆ ಏನಿದ್ದರೂ ಬಹಳ ಅಲ್ಪ. ಮನುಷ್ಯ ಶಿಶು ಕೂಡಾ ಇಂತಹ ಈ ಪ್ರಾಥಮಿಕ ಪ್ರತಿಕ್ರಿಯೆಯೊಂದಿಗೆ ಜನಿಸುತ್ತದೆ. ಆದರೆ ಮುಂದೆ ಇಡೀ ಜೀವನದಲ್ಲಿ ಅದರ ಕಲಿಕೆ,‌ಪಡೆಯುವ ಅರಿವು ಅಪಾರ. ಈ ಕಲಿಕೆಗೆ ತಾಯಿ ಅಡಿಪಾಯ ಹಾಕುತ್ತಾಳೆ.

ಇದು ಲಕ್ಷಾಂತರ ವರ್ಷಗಳ ಮಾನವರ ನಾಗರೀಕತೆಯ ಬೆಳವಣಿಗೆಯ ಫಲ. ಈ ದೀರ್ಘ ಅವಧಿಯಲ್ಲಿ ಜಗತ್ತಿನ ಬಗ್ಗೆ ಗಳಿಸಿದ ಅಪಾರ ಜ್ಞಾನ ಸಂಪತ್ತು ಮತ್ತು ಮುಂದಿನ‌ ತಲೆಮಾರುಗಳಿಗೆ ಅದನ್ನು ವರ್ಗಾಯಿಸುವ ಮಾರ್ಗವನ್ನು ರೂಪಿಸಿಕೊಂಡ ಮಾನವರ ಸಮುದಾಯದ ಶೋಧದ ಫಲ.‌ ಈ ಅರಿವಿನ ಅಗಾಧತೆ ಹೆಚ್ಚಿದಷ್ಟೂ ಈ ಪರಾವಲಂಬಿತನದ ಅವಧಿ ಹೆಚ್ಚುತ್ತಾ ಹೋಗುತ್ತಿದೆ.‌ ಇದು ಹೇಗೆ‌ ದೌರ್ಬಲ್ಯವಾಗಲು‌ ಸಾಧ್ಯ.

ಇನ್ನೂ ಒಂದು ಮುಖ್ಯ ವೈಶಿಷ್ಟ್ಯವೆಂದರೆ ಮಾನವ ಶಿಶು ಬಹಳಷ್ಟು ಮೊಲೆಯೂಡುವ ಪ್ರಾಣಿಗಳಂತೆ ಕೇವಲ ತಾಯಿಯ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ತಾಯಿಯ ಜೊತೆ ಸಹಪೋಷಕರ (allopreening) ಅಗತ್ಯ ಕೂಡಾ ಇದೆ. ತಂದೆ ಇಂತಹ ಮುಖ್ಯ ಸಹ ಪೋಷಕರು. ಇವರ ಜೊತೆಗೆ ಇನ್ನೂ ಹಲವರು ಕೂಡಿಕೊಳ್ಳುತ್ತಾರೆ. ತಾಯ ಬಾಣಂತನ ಮಾಡುವ ಆ ಮೂಲಕ ತಾಯನ್ನೂ, ಶಿಶುವನ್ನೂ ಮೊದಲ ಕೆಲವು ತಿಂಗಳು ಆರೈಕೆ ಮಾಡುವ ಅಜ್ಜಿ, ತಾಯ ತಂಗಿ,ಅಣ್ಣ,ತಮ್ಮಂದಿರು, ತಂದೆಯ ತಾಯಿ, ಅಣ್ಣ ತಮ್ಮಂದಿರು ಇವರು ವಿವಿಧ ಪ್ರಮಾಣದಲ್ಲಿ ಸಹಪೋಷಕತ್ವ ವಹಿಸಿಕೊಳ್ಳುತ್ತಾರೆ.

ವಿವಿಧ ಕಾರಣಗಳಿಗಾಗಿ ತಾಯ ಆರೈಕೆ ಕೊರತೆಯಾದ ಶಿಶುಗಳಿಗೆ ಬೇರೆಯವರು ಕೂಡಾ ಸಹಪೋಷಕರಾಗುತ್ತಾರೆ. ಏನೇ ಕೊರತೆ, ಸಮಸ್ಯೆಗಳಿದ್ದರೂ  ಮಲತಾಯಿ, ದತ್ತು ಪಡೆದವರು, ಅನಾಥಾಲಯಗಳ ಸಿಬ್ಬಂದಿ ಇಂತಹ ಯಾರಾದರೂ ಆಗಬಹುದು.‌ ಇತರ ಪ್ರಾಣಿಗಳಲ್ಲಿ ಅಮ್ಮಗಳ ಶಿಶುವಿನ ಸಹಪೋಷಕರನ್ನು ಶಿಶುವಿಗೆ ಪರಿಚಯಿಸುವುದು ಕೂಡಾ ತಾಯಿಯೇ.‌ ಗರ್ಭಿಣಿಯ ಕೊನೆಯ ಮೂರು ತಿಂಗಳ ಅವಧಿಯಲ್ಲಿ ತಾಯಿಯ ಜೊತೆಯಲ್ಲಿರುವವರ ಗುರುತು ಅವರ ದನಿಯಿಂದ ಸ್ವಲ್ಪ ಮಟ್ಟಿಗೆ ಶಿಶುವಿಗೆ ಸಿಕ್ಕುತ್ತದೆ. ಆದರೆ ತಂದೆಯ, ಇತರೆಲ್ಲ ಸಹಪೋಷಕರ ಪರಿಚಯ ಆಗುವುದು ತಾಯ ಮಡಿಲಿನ ಕ್ಷೇಮ ಭಾವನೆಯ ನೆಮ್ಮದಿಯಲ್ಲಿಯೇ.‌ ನಂತರ ಈ ಸಹಪೋಷಕರು ತೋರುವ ಪ್ರೀತಿ, ನೀಡುವ ಪಾಲನೆ ಅವರನ್ನು ಶಿಶು ಸಹಪೋಷಕರೆಂಬಂತೆ ಪರಿಗಣಿಸುತ್ತದೆ. ‌ತಾಯಿಲ್ಲದಿರುವಾಗ ಇವರು ಶಿಶುವಿನ ನೆಮ್ಮದಿಯ ತಾಣವಾಗುತ್ತಾರೆ.

ಈ ಸಹಪೋಷಕತ್ವವೂ ಕೂಡಾ ಮಾನವರ ವಿಶಿಷ್ಟ ಸಾಮುದಾಯಿಕ ಜೀವನದಿಂದ ರೂಪುಗೊಂಡದ್ದು.

ಮತ್ತಷ್ಟು ಬೆಳೆಯುವ ಜ್ಞಾನೇಂದ್ರಿಯಗಳು :

ಶಿಶುವಿಗೆ ಅಮ್ಮನ ಅರಿವು ಮೂಡಲು ಕಾರಣವಾದ ಜ್ಞಾನೇಂದ್ರಿಯಗಳು ತಾಯ ಗರ್ಭದೊಳಗೇ ಬೆಳೆಯಲಾರಂಭಿಸಿದ್ದವಲ್ಲಾ ! ಮುಖ್ಯವಾಗಿ ವಾಸನೆ ಮತ್ತು ದನಿ ಗ್ರಹಣ ಸಾಮರ್ಥ್ಯಗಳಿಂದ ಶಿಶು ಹುಟ್ಟಿದ ಕೂಡಲೇ ತಾಯನ್ನು ಗುರುತು ಹಿಡಿಯುವ ಅಚ್ಚರಿಯ ಸಂಗತಿಯನ್ನು ಈ ಅಂಕಣದ ಮೊದಲ ಲೇಖನದಲ್ಲಿ ವಿವರಿಸಿದ್ದೇನೆ.‌ ಶಿಶು ಹುಟ್ಟುವ ವೇಳೆಗೆ ಪಂಚ ಜ್ಞಾನೇಂದ್ರಿಯಗಳಲ್ಲಿ ಸ್ಪರ್ಶ ಜ್ಞಾನ ಸರಿಸುಮಾರು ತನ್ನ ಪೂರ್ಣ ಬೆಳವಣಿಗೆಯ ಮಟ್ಟವನ್ನು ಮುಟ್ಟಿರುತ್ತದೆ. ವಾಸನೆ,ರುಚಿಯ ಗ್ರಹಣ ಸಾಮರ್ಥ್ಯವೂ ಕೂಡಾ. ಕೇಳುವ ಶಕ್ತಿ ರೂಪುಗೊಂಡಿದ್ದರೂ ಮತ್ತಷ್ಟು ಬೆಳವಣಿಗೆ ಸಾಧಿಸುವುದು ಬಾಕಿ ಇರುತ್ತದೆ. ಐದು ಇಂದ್ರಿಯಗಳಲ್ಲಿ ಅತಿ ಕಡಿಮೆ ಬೆಳವಣಿಗೆಯಾಗಿರುವುದು ನೋಟ ಮಾತ್ರ. ಆದರೆ  ಮೇಲೆ ಹೇಳಿದಂತೆ ಗರ್ಭಾಶಯದೊಳಗಿನ‌ ವಾತಾವರಣಕ್ಕೆ ಹೋಲಿಸಿದರೆ ಹುಟ್ಟಿದ ಕೂಡಲೇ ಈ ಎಲ್ಲ ಇಂದ್ರಿಯಗಳಿಗೆ ಹೊರ ಜಗತ್ತಿನಿಂದ ಒದಗುವ ಪ್ರಚೋದನೆ ಅಪಾರ. ಗರ್ಭದೊಳಗೆ ಇಂದ್ರಿಯಗಳು ಸಾಧಿಸುವ ಬೆಳವಣಿಗೆ ಹೊರ ವಾತಾವರಣ ಒದಗಿಸುವ  ಪ್ರಚೋದನೆಗಳನ್ನು ಸ್ವೀಕರಿಸಿ ಹೊರ ಜಗತ್ತನ್ನು ಅರ್ಥೈಸಿಕೊಳ್ಳಲು ಅಗತ್ಯವಾದ ಪರಿಕರಗಳನ್ನು ಸಿದ್ಧ ಮಾಡುವ ಕ್ರಿಯೆ. ಹುಟ್ಟಿದ ನಂತರ   ಈ ಪ್ರಚೋದನೆಗಳ ಪ್ರಭಾವಕ್ಕೆ ಪಕ್ಕಾಗುತ್ತಾ ಎಲ್ಲ ಇಂದ್ರಿಯಗಳೂ ಮತ್ತಷ್ಟು ಬೆಳವಣಿಗೆಯನ್ನು ಸಾಧಿಸುತ್ತವೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಈ ಇಂದ್ರಿಯಗಳು ಒದಗಿಸುವ ವಿವಿಧ ರೀತಿಯ ಅಪಾರ ಮಾಹಿತಿಯನ್ನು ಸಂಸ್ಕರಿಸಿ ಅದರಿಂದ ಶಿಶುವಿನಲ್ಲಿ ಜಗತ್ತಿನ ಅರಿವನ್ನು ಮೂಡಿಸಲು ಅತ್ಯಗತ್ಯವಾದ ಮೆದುಳಿನ ಬೆಳವಣಿಗೆ ಅಗತ್ಯ ವೇಗವಾಗಿ ಮತ್ತು ಸಮೃದ್ಧವಾಗಿ ನಡೆಯುತ್ತದೆ.

ಮನುಷ್ಯರ ಜ್ಞಾನದ ಮೂಲವಾಗಿ ಅತ್ಯಂತ ಹೆಚ್ಚು ಪಾತ್ರ ವಹಿಸುವ ಇಂದ್ರಿಯ ಕಣ್ಣು. ನಂತರ ಕಿವಿ, ಅದರ ನಂತರದ ಪಾತ್ರ ಸ್ಪರ್ಶ ಜ್ಞಾನ ನೀಡುವ ಚರ್ಮದ್ದು. ಪ್ರಾಣಿಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ವಾಸನೆ,ರುಚಿ ಗ್ರಹಣದ ಪಾತ್ರ ಮನುಷ್ಯರಲ್ಲಿ ಗೌಣವಾಗಿದೆ. ಪ್ರಾಣಿಗಳ ಆಕಾರದಲ್ಲಿಯೇ ಮೂಗೇ ದೇಹದ ಅತಿ ಮುಂದಿನ ಭಾಗ, ಜಲಚರಗಳಲ್ಲೂ, ಭೂಚರಗಳಲ್ಲೂ.

ಚರ್ಮ ಮತ್ತು ಸ್ಪರ್ಶ ಜ್ಞಾನ :
ಚರ್ಮ ಕೇವಲ ಸ್ಪರ್ಶ ಜ್ಞಾನ ಮಾತ್ರವಲ್ಲದೆ ಬಿಸಿ,ತಣ್ಪು,ಒತ್ತಡ, ನೋವುಗಳ ಅರಿವಿನ ವಾಹಕವೂ ಹೌದು. ಶಿಶುವಿನ ಚರ್ಮ ವಯಸ್ಕರ ಚರ್ಮಕ್ಕಿಂತ ಮೃದು ಮತ್ತು ಸಂವೇದನಾ ಶೀಲ.ಆದ್ದರಿಂದ ಹೆಚ್ಚು ಸ್ಪರ್ಶವನ್ನು ಬಯಸುತ್ತದೆ.  ತಾಯ ಮಮತೆಯ ಅಪ್ಪುಗೆ, ಇತರರ ಅಪ್ಪುಗೆ ಮತ್ತು ಪದೇ ಪದೇ ಮಾಡುವ ಸ್ಪರ್ಶಗಳು ಮಗುವಿನ‌ಲ್ಲಿ ನೆಮ್ಮದಿಯ, ಸುಭದ್ರತೆಯ ಭಾವನೆಯನ್ನು ಮೂಡಿಸುತ್ತವೆ. ಹೆಣ್ಣು ಶಿಶುವಿನ ಬಗ್ಗೆ ತಾತ್ಸಾರ, ತಾಯನ್ನು ಹುಟ್ಟಿನಲ್ಲೇ, ಹುಟ್ಟಿದ ಕೆಲ ದಿನಗಳಲ್ಲೇ ಕಳೆದುಕೊಂಡ ಶಿಶು, ಮಗು ಹುಟ್ಟಿದ ಕೆಲ ಕಾಲದಲ್ಲಿಯೇ ತಂದೆ ಆಕಸ್ಮಿಕವಾಗಿ‌ ಸತ್ತರೆ ತಂದೆಯನ್ನು ಕೊಂದ ಶಿಶು ಎಂಬ ನಿರ್ಲಕ್ಷ್ಯಕ್ಕೆ ಒಳಗಾದದ್ದು, ಅನಾಥ ಶಿಶುಗಳು, ಮತ್ತೇನೋ ಕಾರಣಕ್ಕಾಗಿ ಅಲಕ್ಷ್ಯಕ್ಕೆ ಒಳಗಾದವು ಇಂತಹ ಪ್ರೀತಿಯ ಸ್ಪರ್ಶದಿಂದ ವಂಚಿತವಾಗುವ ಸಂದರ್ಭ ಬಹಳ. ಅಂತಹ ಪ್ರಸಂಗಗಳಲ್ಲಿ ಮಗುವಿಗೆ ಮಮತೆ, ನೆಮ್ಮದಿಯ ತೀವ್ರ ಕೊರತೆಯಾದಾಗ ಶಿಶುವಿನಲ್ಲಿ ಕೆಲವು ಹಾರ್ಮೋನುಗಳ ತಯಾರಿಕೆಯಲ್ಲಿ ಏರುಪೇರುಂಟಾಗುತ್ತದೆ. ಅದು ಮೆದುಳಿನಲ್ಲಿ ನೆನಪು ಮುಂತಾದ ಕಾರ್ಯಗಳನ್ನು ಮಾಡುವ ಹಿಪ್ಪೋಕಾಂಪಸ್ ಎಂಬ ಭಾಗಕ್ಕೆ ಹಾನಿಯಾಗುತ್ತದೆ. ಇದರಿಂದಾಗಿ ಮುಂದೆ ವಯಸ್ಕರಲ್ಲಿ ಹೆಚ್ಚು ಹೃದಯದ ಕಾಯಿಲೆ, ಆತಂಕದ ಮನಸ್ಥಿತಿ, ಖಿನ್ನತೆ, ಸಕ್ಕರೆ ಕಾಯಿಲೆಗಳು ಹೆಚ್ಚಾಗುತ್ತವೆಂದು ಅಧ್ಯಯನಗಳು ತಿಳಿಸಿವೆ.

ಆದ್ದರಿಂದ ಶಿಶುಗಳಿಗೆ ಆಗಿಂದಾಗ್ಗೆ ಮಮತೆಯ ಸ್ಪರ್ಶ ಸಿಗಬೇಕು. ಅದಕ್ಕಾಗಿ ವಿಶ್ವದ ಹಲವು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗಳಲ್ಲಿ ಹಾಗೂ ಮನೆಗಳಲ್ಲಿ ತಾಯಿ ತನ್ನ ಶಿಶುವನ್ನು ಕಾಂಗರೂ ಕೇರ್ ಎಂಬ ಅಪ್ಪುಗೆಗೆ ಒಳಪಡಿಸಬೇಕು ಎಂದು ಸೂಚಿಸಲಾಗಿದೆ. ಶಿಶುವನ್ನು ನಗ್ನವಾಗಿ ಅಥವಾ ಕೇವಲ ಡೈಯಾಪರ್‌ನೊಂದಿಗೆ ಮಾತ್ರ ಇಡೀ ದೇಹವನ್ನು ತಾಯಿಯ ಎದೆ ಭಾಗವನ್ನು ಮುಚ್ಚಿಕೊಳ್ಳದೆ ಬೆತ್ತಲಾಗಿ ಅಪ್ಪಿಕೊಳ್ಳಬೇಕು. ದಿನಕ್ಕೆ ಒಟ್ಟು ಒಂದು ಗಂಟೆಯಾದರೂ ಈ ಅಪ್ಪುಗೆ ಶಿಶುವಿಗೆ ದೊರಕಿದರೆ ಅದರ ಬೌದ್ಧಿಕ ಶಕ್ತಿ,ನೆನಪಿನ ಶಕ್ತಿ ವೃದ್ಧಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಸ್ಪರ್ಶ ಹುಟ್ಟಿದ ಕೆಲ ತಿಂಗಳ ಕಾಲ ಶಿಶುವಿಗೆ ವಿವಿಧ ವಸ್ತುಗಳ ಬಗ್ಗೆ ತಿಳುವಳಿಕೆ ಪಡೆದುಕೊಳ್ಳುವ ಒಂದು ಮುಖ್ಯ ವಿಧಾನ. ಬಾಯಲ್ಲಿ,ತುಟಿಗಳಲ್ಲಿ ಅತ್ಯಂತ ಹೆಚ್ಚು ನರತಂತುಗಳಿರುವ ಅಂಗಗಳು. ಆದ್ದರಿಂದ ಶಿಶು ಕೈಗೆ ಏನೇ ಸಿಕ್ಕಿದರೂ ಅದನ್ನು ತುಟಿ,ಬಾಯಲ್ಲಿ ಹಿಡಿಯುತ್ತದೆ. ಕಚ್ವಿ ನೋಡುತ್ತದೆ. ಇಂತಹ ಕ್ರಿಯೆಗಳಿಗೆ ಅಡ್ಡಿ ಉಂಟುಮಾಡದೆ ಸ್ವಚ್ಛತೆಯನ್ನಷ್ಟೇ ಕಾಪಾಡಿಕೊಳ್ಳುವುದು ಸಾಕು.‌ ಅಷ್ಟೇ ಅಲ್ಲ ಶಿಶುವಿಗೆ ನೀಡುವ ಆಟಿಕೆಗಳಲ್ಲಿ ಹೆಚ್ಚಿನ ಬೆಲೆಯ ಕೆಲವಕ್ಕೆ ಆದ್ಯತೆ ನೀಡದೆ ಹಲವು ಬಗೆಯ ಆಟಿಕೆಗಳು, ವಿವಿಧ ವಸ್ತುಗಳಿಂದ ತಯಾರಾದವು, ಮುಟ್ಟಿದರೆ ಮೆದು,ಗಟ್ಟಿ, ನುಣುಪು, ಒರಟು, ಹಳ್ಳ ದಿಣ್ಣೆಗಳಿಂದ ಕೂಡಿರುವಂತಹವು ತಣ್ಣಗೆ, ಬಿಸಿ ಮೊದಲಾದ ವೈವಿಧ್ಯಮಯ ಅನುಭವ ನೀಡುವಂತಹವಹ ಆಟಿಗೆಗಳನ್ನು ಅಥವಾ ಇತರ ವಸ್ತುಗಳನ್ನು ನೀಡಿ ಶಿಶು ತನ್ನ ಜ್ಞಾನವನ್ನು ಬೆಳೆಸಿಕೊಳ್ಳಲು ಅವಕಾಶ ನೀಡಬೇಕು. ಇಂತಹ ಅನುಭವ ಇಡೀ ಜೀವನದಲ್ಲಿ ಸ್ಪರ್ಶವನ್ನು ಅರಿವಿನ ಒಂದು ಸಾಧನವಾಗಿ ಉಪಯೋಗಿಸಿಕೊಳ್ಳಲು, ವಿವಿಧ ಆಯಾಮಗಳಿಂದ ತಿಳಿವು ಬೆಳೆಸಿಕೊಳ್ಳಲು ಅವಕಾಶ ನೀಡುತ್ತದೆ.

ಕಿವಿ ಮತ್ತು ಕೇಳುವಿಕೆ :
ಕಿವಿಗಳು ಮತ್ತದರ ಭಾಗಗಳು ಗರ್ಭದೊಳಗೇ ರೂಪುಗೊಂಡು ಬಹಳಷ್ಟು ಬೆಳವಣಿಯಾಗಿರುತ್ತವೆ. ಹೀಗಾಗಿ ತಾಯ ದನಿಯನ್ನು ಗುರುತು ಹಿಡಿಯುವದರಿಂದ ಅವು ಹೆಚ್ಚು ಹಾಲು ಕುಡಿಯುತ್ತವೆ. ತಾಯ ದನಿ ಕೇಳಿದ ಕೂಡಲೇ ನೆಮ್ಮದಿಯ ಭಾವ ಉಂಟಾಗುತ್ತದೆ.
ಆದರೆ ಹುಟ್ಟಿದ ನಂತರ ಹಲವು ವರ್ಷಗಳ ಕಾಲ ಕಿವಿಯ ಅಂಗಗಳು ಬೆಳವಣಿಗೆ ಸಾಧಿಸುತ್ತಿರುತ್ತವೆ.

ಶಿಶುಗಳು ಹುಟ್ಟಿದ ಸಮಯದಿಂದ ಆರು ತಿಂಗಳವರೆಗೆ ಶ್ರವಣ ಶಕ್ತಿ ಸೂಕ್ಷ್ಮವಾಗಿರುವುದಿಲ್ಲ. ಹೆಚ್ಚು ಗಟ್ಟಿಯಾದ ದನಿಯನ್ನಷ್ಟೇ ಗುರುತಿಸುತ್ತವೆ. ಶ್ರವಣ ಸೂಕ್ಷ್ಮತೆ ಹೆಚ್ಚಾಗುತ್ತಾ ಹೋಗುತ್ತದೆ. ಆದರೂ ದನಿ ತರಂಗಗಳ ವ್ಯತ್ಯಾಸವನ್ನು ಗುರುತಿಸುವಂತಾಗಲು ಹಲವು ವರ್ಷಗಳೇ ಬೇಕು. ಮೇಲಿನ ದನಿ‌ ತರಂಗಗಳಲ್ಲಿನ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ ಬೆಳೆದರೂ ಕೆಳ ದನಿ ತರಂಗಗಳ ವ್ಯತ್ಯಾಸ ಗುರುತಿಸಲು ಹಲವು ವರ್ಷಗಳೇ ಬೇಕು. ಇದಕ್ಕೆ ಬಹು ಮುಖ್ಯವಾದ ಕಾರಣ ಅನುಭವ. ವಿವಿಧ ರೀತಿ,ಸೂಕ್ಷ್ಮತೆಗಳ ಶಬ್ದಗಳನ್ನು ಕೇಳುವ ಅನುಭವ ಸಿಕ್ಕಾಗ ಮೆದುಳಿಗೆ ದನಿ ತರಂಗಗಳ ಮಾಹಿತಿ ತಲುಪಿಸಿವ ನರತಂತುಗಳ ಹಾಗೂ ಮೆದುಳಿನ ಧ್ವನಿ ಕೇಂದ್ರದ ಬೆಳವಣಿಗೆಯಾಗುತ್ತದೆ.

ಶಿಶುಗಳಿಗೆ ಮಾತ್ರವಲ್ಲ ಐದು ವರ್ಷದ ಮಕ್ಕಳಿಗೂ ಕೂಡಾ ಧ್ವನಿ ಮೂಲವನ್ನು ಸರಿಯಾಗಿ ಗುರುತಿಸಲಾಗುವುದಿಲ್ಲ. ಆದರೆ ಮನುಷ್ಯನ ಕೇಳು ಸಾಮರ್ಥ್ಯ ಮುಂದಕ್ಕೆ ಅತ್ಯಂತ ಉತ್ತಮ ಸಂಗೀತವನ್ನು ಆನಂದಿಸುವಷ್ಟು, ಸಂಗೀತದ ತರತಮಗಳ ವ್ಯತ್ಯಾಸವನ್ನು ಗುರುತಿಸುವಷ್ಟು ಸೂಕ್ಷ್ಮವಾಗುತ್ತದೆ. ಉತ್ತಮ ತರಬೇತಿ ಹಾಗೂ ವೈವಿಧ್ಯಮಯ ಅನುಭವದಿಂದ ಇಂತಹ ಸಾಮರ್ಥ್ಯ ಗಳಿಸಿಕೊಳ್ಳಬಹುದು. 

ಕಣ್ಣು ಮತ್ತು ದೃಷ್ಡಿ :
ಹುಟ್ಟಿದ ಶಿಶುವಿಗೆ ಕಣ್ಣು ಮತ್ತು ದೃಷ್ಟಿ ಆಗಲೇ ಸ್ವಲ್ಪ ಮಟ್ಟಿಗೆ ಬೆಳೆದಿರುತ್ತದೆ.ಆದರೆ ಎಲ್ಲ ತಾಯಂದಿರಿಗೆ ಗೊತ್ತಿರುವಂತೆ ಇನ್ನೂ ಬಹಳ ಮಟ್ಟಿಗೆ ಬೆಳೆಯಬೇಕಾಗಿರುತ್ತದೆ. ನಮಗೆಲ್ಲ ಮೂಡಿರುವ ದೃಷ್ಟಿ ದೂರತೆ,ಸೂಕ್ಷ್ಮತೆಗಳೆಲ್ಲವೂ ಶಿಶು ತನ್ನ ಮೊದಲ ತಿಂಗಳುಗಳು,ಮೊದಲ ವರ್ಷದಲ್ಲಿ ಪ್ರಯಾಸ,ಪ್ರಯೋಗಗಳಿಂದ ರೂಢಿಸಿಕೊಟ್ಟಿರುವುದೇ ಆಗಿದೆ.‌

ಹುಟ್ಟಿದ ಸಮಯದಲ್ಲಿ ಅದಕ್ಕೆ ಬಣ್ಣಗಳನ್ನು ನೋಡುವ ಅಂಶಗಳು ಇನ್ನೂ ಬೆಳೆದಿರುವುದಿಲ್ಲ. ಮಸಕು ಮಸಕಾಗಿ ಕಪ್ಪು,ಬಿಳುಪು,ಬೂದು ಬಣ್ಣಗಳಷ್ಟೇ ಕಾಣುತ್ತಿರುತ್ತವೆ. ಕೇವಲ 20-30 ಸೆಂ.ಮೀ ದೂರದವರೆಗೆ ಅಷ್ಟೇ ಅದರ ದೃಷ್ಟಿ. ಮೊಲೆಯೂಡುತ್ತಿರುವ ಅಮ್ಮನ ಮುಖವನ್ನಷ್ಟೇ ನೋಡಲು ಶಕ್ತ.ಅದಕ್ಕೆ ಬೆರೆಲ್ಲವಕ್ಕಿಂತ ಮುಖಗಳನ್ನು ನೋಡುವುದೇ ಇಷ್ಟದ ಕೆಲಸ. ಆದರೆ ಕೆಲವೇ ವಾರಗಳಲ್ಲಿ ಬಣ್ಣಗಳನ್ನು ಗುರುತು ಹಿಡಿಯುವ ಸಾಮರ್ಥ್ಯ ಬೆಳೆಯುತ್ತದೆ. ಆದರೆ ಕಣ್ಣಿನ ಒಳಗಣ ಅಂಗಾಂಶಗಳು ಬೆಳೆಯುವುದಷ್ಟೇ ಅಲ್ಲ ಕಣ್ಣಿನ ಗುಡ್ಡೆ ಇನ್ನಷ್ಟು ಬೆಳೆಯಬೇಕು. ಕಣ್ಣಿನ ಮಸೂರ,ಗುಡ್ಡೆಯ ಚಲನೆಯನ್ನು ನಿಯಂತ್ರಿಸುವುದನ್ನು ಕಲಿಯಬೇಕು.

ಆಗತಾನೆ ಹುಟ್ಟಿದ ಶಿಶುವಿನ ಕಣ್ಣು ನೋಡುವುದಕ್ಕೆ ವಯಸ್ಕರ ಕಣ್ಣಿನಂತೆಯೇ ಕಾಣುತ್ತದೆ. ಆದರೆ ಅದರ ಬೆಳವಣಿಗೆ ಬಹಳ ದೀರ್ಘ ಕಾಲ ತೆಗೆದುಕೊಳ್ಳುತ್ತದೆ.  ಗಾತ್ರ 3.25 ಘನ ಸೆಂಮಿ ಇದ್ದರೆ ತೂಕ 3.45 ಗ್ರಾಂ. ಎರಡನೇ ವರ್ಷದ ಕೊನೆಯೊಳಗೆ ಕಣ್ಣಿನ ತೂಕ ಶೇ.40 ರಷ್ಟು, ಐದು ವರ್ಷದ ಒಳಗೆ ಶೇ.70 ರಷ್ಟು ಬೆಳೆದಿರುತ್ತದೆ. ಪೂರ್ಣ ಪ್ರಮಾಣದ ಬೆಳವಣಿಗೆಯಲ್ಲಿ ತೂಕ ಎರಡರಷ್ಟು, ಗಾತ್ರ ಮೂರರಷ್ಟು  ಹೆಚ್ಚಾಗುತ್ತದೆ. ಕಣ್ಣಿನ ಮಸೂರವೂ ತನ್ನ ವ್ಯಾಸದಲ್ಲಿ ಬೆಳೆಯುತ್ತಾ ಹೋಗುತ್ತದೆ. 

ಹುಟ್ಟಿದ ಸಮಯದಲ್ಲಿ ಕಣ್ಣನ್ನು ಹಿಡಿದಿಡುವ ಕಿರು ಮಾಂಸಖಂಡಗಳ ಮೇಲೆ ಶಿಶು ಹತೋಟಿ ಹೊಂದಿರುವುದಿಲ್ಲ. ಎಡ ಹಾಗೂ ಬಲ ಕಣ್ಣುಗಳು ಒಂದೇ ಕಡೆ ಕೇಂದ್ರೀಕರಿಸುವ ಶಕ್ತಿ ಬೆಳೆದಿರುವುದಿಲ್ಲ. ಆದರೆ ಶಿಶು ಐದಾರು ತಿಂಗಳು ಎನ್ನುವಾಗ ದೃಷ್ಟಿಯನ್ನು ಕೇಂದ್ರೀಕರಿಸುವ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ.  ಅದರ ಕಣ್ಣು ತಾಯನ್ನೇ ಹಿಂಬಾಲಿಸಲಾಂಭಿಸುತ್ತದೆ.

ಶಿಶುವಿನ ಜ್ಞಾನದ ಮತ್ತೊಂದು ಕಿಟಕಿ ತೆರೆದಂತಾಗುತ್ತದೆ. ಈಗ ಸ್ವಲ್ಪ ದೂರ ಇರುವ ವಸ್ತುಗಳನ್ನು ಗಮನಿಸುವುದು ,  ಅವುಗಳ ಮೂರು ಆಯಾಮಗಳ ಚಿತ್ರ ಮೂಡುವುದು, ವಸ್ತುವಿನ ದಿಕ್ಕು ದೂರವನ್ನು ಅಂದಾಜಿಸುವುದು, ಆ ವೇಳೆಗಾಗಲೇ ಮಗುಚಿಕೊಳ್ಳುವ , ತೆವಳುವ ಸಾಮರ್ಥ್ಯ ಬೆಳೆದಿರುವುದರಿಂದ ವಸ್ತುವನ್ನು ಹಿಡಿಯಲು ಅದರತ್ತ ಚಲಿಸುವುದು,  ಕೈ ಚಾಚುವುದು ಇವು ಲೋಕದ ಮಾನವರ ಅರಿವಿನ ಪಯಣದ ಮೊದಲ ಹೆಜ್ಜೆಗಳು. ಆದರೆ ಕೇವಲ ಪಂಚೇದ್ರಿಯಗಳು ಬೆಳೆದರೆ ಸಾಲದು. ಕಣ್ಣು ಕಂಡದ್ದನ್ನೆಲ್ಲ,ಕಿವಿ ಕೇಳಿದ್ದನ್ನೆಲ್ಲಾ ಶಿಶು ಕಾಣಲಾರದು,ಕೇಳಲಾರದು. ಬೆಳಕಿನ‌ ವಿನ್ಯಾಸ,ಶಬ್ದದ ತರಂಗಗಳಾಗಿ ಮಾತ್ರ ಉಳಿಯುತ್ತದೆ. ಆದ್ದರಿಂದ ಶಿಶುವಿನ ಮೊದಲ ವರ್ಷದಲ್ಲಿ ಮೆದುಳು ಎಲ್ಲ ಅಂಗಗಳಿಗಿಂತ ಬಹಳ ವೇಗವಾಗಿ ಬೆಳೆಯುತ್ತದೆ.

ಈ ಮಾಹಿತಿಗಳ ಮೂಲಕ ಲೋಕದ ಅರಿವು ಬೆಳೆಯಬೇಕಾದರೆ ಅವು ನರಜಾಲದ ಮೂಲಕ ಮೆದುಳನ್ನು ಪ್ರವೇಶಿಸಬೇಕು. ಮೆದುಳು ಕಣ್ಣು ಕಂಡದ್ದನ್ನು ಅರ್ಥೈಸಿ ಶಿಶುವಿಗೆ ಕಾಣಿಸಬೇಕು. ಹೀಗೆ ಕಾಣಿಸಲ್ಪಟ್ಟ ನೋಟ  ಶಿಶುವಿನ ಅನುಭವದ ಸಂಗ್ರಹಕ್ಕೆ ಸೇರಬೇಕು. ಮುಂದೆ ಅಂತಹುದೇ ನೋಟ ಕಂಡಾಗ ಅದರ ನೋಟವನ್ನು ಕಾಣಿಸಲು ಆ ಅನುಭವ ನೆರವಾಗಬೇಕು. ಇಂತಹ ಅನುಭವ ಲೋಕ ಎಲ್ಲ ಶಿಶುಗಳಿಗೂ ಒಂದೇ ಆಗಿರುವುದಿಲ್ಲ. ಅವರವರ ಮನೆ, ಪ್ರದೇಶ,ಹಳ್ಳಿ, ಪಟ್ಟಣ,ನಗರ, ರಾಜ್ಯ,ದೇಶ, ವೃತ್ತಿ ಇತ್ಯಾದಿಗಳಿಗೆ ತಕ್ಕಂತೆ ಬೇರೆ ಬೇರೆಯೇ ಆಗಿರುತ್ತದೆ. ಅದರಿಂದಾಗಿ ಪಡೆಯುವ ಅರಿವು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಬೇರೆಯೇ ಅಥವಾ ಒಂದೇ ಆಗಿರುತ್ತದೆಯೇ ?
ಈ ಎಲ್ಲ ಅಂಶಗಳ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ.

‍ಲೇಖಕರು Admin

March 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: