ಜಿ ಎನ್ ಉಪಾಧ್ಯ ಓದಿದ ‘ನೀಲಿ ನಕ್ಷೆ’

ಸ್ತ್ರೀಪ್ರಜ್ಞೆಯಲ್ಲಿ ಮೂಡಿಬಂದ ಸಶಕ್ತ ಕೃತಿ
ನೀಲಿ ನಕ್ಷೆ' (ಕಾದಂಬರಿ)

ಅಮಿತಾ ಭಾಗವತ್

ಅಂಕಿತ ಪುಸ್ತಕ, ಬೆಂಗಳೂರು, ೨೦೨೩ ಬೆಲೆ ರೂ. ೩೫೦/-

ಡಾ.ಜಿ.ಎನ್. ಉಪಾಧ್ಯ

ಸಾಹಿತ್ಯ ವಲಯವಾಗಿ ಮುಂಬೈ ಹೆಸರು ಮಾಡುತ್ತಾ ಬಂದಿದೆ. ಕನ್ನಡ ವಾಙ್ಮಯಕ್ಕೆ ಹೊಸ ನೀರು ಹಾಯಿಸಿದ ಕೀರ್ತಿ ಮುಂಬೈ ಕನ್ನಡ ಲೇಖಕರಿಗೆ ಸಲ್ಲುತ್ತದೆ. ಕವಿಯಾಗಿ ಹೆಸರು ಮಾಡಿದ ಅಮಿತಾ ಭಾಗವತ್ ಅವರ ಮೊದಲ ಕಾದಂಬರಿ- 'ನೀಲಿನಕ್ಷೆ'.

ಮುಂಬೈ ಕೇಂದ್ರಿತ ಕಾದಂಬರಿಗಳನ್ನು ಬರೆದು ಸೈ ಎನಿಸಿಕೊಂಡ ಬಲ್ಲಾಳ, ಚಿತ್ತಾಲ, ನಿಂಜೂರ್ ಮೊದಲಾದವರ ಸಾಲಿಗೆ ಇದೀಗ ಅಮಿತಾ ಅವರ ಹೆಸರೂ ಸೇರ್ಪಡೆಯಾಗಿದೆ. ಕಾದಂಬರಿ ಮಾಧ್ಯಮವನ್ನು ಗಂಭೀರವಾಗಿ ಪರಿಗಣಿಸಿ ಈ ಕೃತಿಯನ್ನು ಅವರು ರಚಿಸಿರುವುದು ವಿಶೇಷ.

ಕಾನೂನು ತಜ್ಞರಾಗಿ ಸಾರ್ವಜನಿಕ ರಂಗದಲ್ಲಿ ಕ್ರಿಯಾಶೀಲರಾಗಿರುವ ಅಮಿತಾ ಭಾಗವತ್ ಅವರು ಮಹಿಳೆಯರ ತವಕ ತಲ್ಲಣಗಳನ್ನು ಅರಿತವರು. ಗೃಹಿಣಿಯ ಬದುಕೇ ಮಹಿಳೆಯ ಆದರ್ಶ ಎಂಬ ಸರಳ ಸೂತ್ರದಿಂದ ಹೆಣೆಯಲ್ಪಟ್ಟ ಕಾದಂಬರಿ ಇದಲ್ಲ. ವಾಸ್ತವಿಕತೆ, ಹೊರ ಜಗತ್ತಿನ ಸ್ಪಷ್ಟವಾದ ಗ್ರಹಿಕೆ, ಸ್ತ್ರೀ ಸ್ವಾತಂತ್ರ್ಯ, ಸ್ತ್ರೀ ವಿದ್ಯಾಭ್ಯಾಸ, ಗಂಡು -ಹೆಣ್ಣುಗಳ ನಡುವೆ ಸಮಾಜ ತೋರುತ್ತಿರುವ ಪಕ್ಷಪಾತ, ಮಹಿಳೆಯ ಬದುಕಿನಲ್ಲಿ ಉಂಟಾಗುತ್ತಿರುವ ಸ್ಥಿತ್ಯಂತರ ಮೊದಲಾದ ಅಂಶಗಳ ವಿಶ್ಲೇಷಣೆ ಈ ಕಾದಂಬರಿ ನೆಲೆಪಡೆದಿರುವುದು ಅವಲೋಕನೀಯವಾಗಿದೆ.

ಕಾರವಾರದಂತಹ ಸಾಮಾನ್ಯ ಪಟ್ಟಣದಿಂದ ಬಂದ ಯುವತಿಯೊಬ್ಬಳು ತನ್ನ ಆತ್ಮಬಲದಿಂದ ಈ ಮಾಯಾನಗರಿಯಲ್ಲಿ ಬೆಳಗಿ ಬಾಳಿದ ಕಥನ ಈ ಕಾದಂಬರಿಯ ಮುಖ್ಯವಸ್ತು. ಅಮಾಯಕ, ಮುಗ್ಧ ಹೆಣ್ಣೊಬ್ಬಳು ತನ್ನ ಸಂಕಲ್ಪ ಶಕ್ತಿಯಿಂದ ಸುತ್ತಲಿನ ಆವರಣದ ಮೇಲೆ ಪ್ರಭುತ್ವ ಸಾಧಿಸಬಲ್ಲಳು ಎಂಬುದನ್ನು ಎತ್ತಿತೋರಿಸಿರುವುದು ಈ ಕಾದಂಬರಿಯ ಧನಾತ್ಮಕ ಅಂಶ. ಇದು ಸ್ತ್ರೀ ಪ್ರಜ್ಞೆಯಲ್ಲಿ ಮೂಡಿ ಬಂದ ಒಳ್ಳೆಯ ಕೃತಿ ಎಂಬುದು ಉಲ್ಲೇಖನೀಯ ಅಂಶ.

ಇದೊಂದು ಸ್ತ್ರೀ ಪ್ರಧಾನ ಕಾದಂಬರಿ. ಸರಯೂ ಸ್ವಾಭಿಮಾನವಿರುವ ದಿಟ್ಟ ಯುವತಿ. ಚೆಲುವೆಯಾದ ಅವಳು ಉದಾತ್ತ ಗುಣ ಸ್ವಭಾವಗಳ ಬುದ್ಧಿವಂತ ಮಹಿಳೆ. ಸರಯೂಳ ಮುಂಬೈ ಜೀವನ; ಅಸ್ತಿತ್ವಕ್ಕಾಗಿ ಅವಳ ಹೋರಾಟ ಕಾದಂಬರಿಯ ಅವಕಾಶವನ್ನು ತುಂಬಿಕೊಂಡಿದೆ. ಅವಳ ಆಂತರಿಕ ಬೆಳವಣಿಗೆ ಕಾದಂಬರಿಯ ಮುಖ್ಯ ಆಶಯವಾಗಿದೆ. ನಿರಾಕರಣೆಯಿಂದ ಸ್ವೀಕಾರದತ್ತ ಅವಳ ಬದುಕಿನ ಚಲನೆ ಸಾಗುತ್ತದೆ. ಸರಯೂಳ ಜೀವನದ ವಿವಿಧ ಹಂತಗಳನ್ನು, ಸಾಧನೆಗಳನ್ನು, ವ್ಯಕ್ತಿ, ಘಟನೆಗಳನ್ನು ಕಾದಂಬರಿ ನಮ್ಮೆದುರು ತೆರೆದಿಡುತ್ತದೆ. ಈ ಕಾದಂಬರಿಯ ಮೊದಲರ್ಧ ಮೇಲೊಡ್ರಾ ಮ್ಯಾಟಿಕ್ ರೀತಿಯದಾಗಿ ಕಾಣಿಸಿಕೊಂಡರೂ ಮುಂದೆ ಅದು ಹಲವು ಆಯಾಮಗಳನ್ನು ಪಡೆದು ತನ್ನ ಅರ್ಥವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ.

ಈ ಕಾದಂಬರಿಯ ಬಹುತೇಕ ಕಥೆ ನಡೆಯುವುದು ಮುಂಬೈಯಲ್ಲೇ. ಸರಯೂ ಮುಂಬೈಗೆ ಹೊರಗಿನವಳು. ತಂದೆಯ ಅನಾದರ, ತನ್ನ ರೂಪವೇ ತನಗೆ ಮುಳುವಾಗುವುದು, ಒಲವಿನ ಸೆಲೆ ಹರಿಸಿದ ವಿಶಾಲ್ ಹಾಗೂ ನಿಖಿಲ್‌ರ ಆತ್ಮವಿಶ್ವಾಸದ ಕೊರತೆ, ಕೊನೆಗೆ ಅನಿವಾರ್ಯವಾಗಿ ವಿಧುರ, ಎರಡು ಮಕ್ಕಳ ತಂದೆ ಅಂಕಿತ್ ಜತೆಗೆ ಮದುವೆ, ಬಳಿಕ ಬಂದ ಏಳುಬೀಳುಗಳ ಕಥನದಲ್ಲಿ ನಾಟಕೀಯ ಗುಣ ಬೆರೆತು ಕಾದಂಬರಿ ವಾಚನೀಯವೂ ಆಕರ್ಷಕವೂ ಆಗಿದೆ. ನೀಲಿನಕ್ಷೆಯ ಕಥೆ ಸರಯೂಳ ಮದುವೆಯ ಮೂಲಕ ರ‍್ಯವಸಾನ ಹೊಂದುವುದು ನಿಜವಾದರೂ ಹೆಣ್ಣೊಬ್ಬಳ ಮಹತ್ವಾಕಾಂಕ್ಷೆ ಅದು ಕೈಗೂಡುವವರೆಗೂ ಅವಳು ವಿಶ್ರಮಿಸದಿರುವುದು, ಅವಳ ಅರಿವು, ವಿವೇಕ ಬೇರೆಯೇ ದಿಕ್ಕಿನಲ್ಲಿ ಹರಿದು ಕಠಿಣ ಮಾರ್ಗದಲ್ಲಿ ಕ್ರಮಿಸುವುದು, ಆಧುನಿಕ ಮಹಿಳೆ ಎದುರಿಸುತ್ತಿರುವ ಸವಾಲುಗಳು ಹಾಗೂ ಪರಿಹಾರಗಳ ವಿವೇಚನೆ, ನಮ್ಮ ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ಜೀವನವನ್ನು ಸದೂರವಾಗಿ ನಿಂತು ನೋಡುವ ವಸ್ತುನಿಷ್ಠ ಪ್ರಯತ್ನ ಈ ಕಾದಂಬರಿಯ ಧನಾತ್ಮಕ ಅಂಶಗಳು.

ತಾನು ಅಪ್ಪ ಹೇಳಿದ ಹುಡುಗನನ್ನು ಮದುವೆಯಾಗಿ, ಆಮ್ಮನ ಹಾಗೆ ಬಂಗಾರ ಹೇರಿಕೊಂಡು, ಕೇವಲ ಅಡಿಗೆಯನ್ನು ಮಾಡುತ್ತ ಜೀವನವನ್ನು ಕಳೆಯಲಿದ್ದೇನೆಯೇ? ಆ ಭಾಗ್ಯಕ್ಕೆ ನಾನೇಕೆ ಮುಂಬೈಗೆ ಬರಬೇಕಿತ್ತು (ಪುಟ ೨೦೬)’ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸ್ವಾಭಿಮಾನ ಮತ್ತು ಅಹಂಕಾರ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಗಂಭೀರ ಜಿಜ್ಞಾಸೆ ಇಲ್ಲಿ ಸೊಗಸಾಗಿ ಸೂಚ್ಯವಾಗಿ ವ್ಯಕ್ತವಾಗಿದೆ. ಇದೊಂದು ಬರೇ ಅನುಕರಣಶೀಲ ಕಾದಂಬರಿಯಲ್ಲ. ನಮ್ಮ ಸಾಂಪ್ರತ ಸಮಾಜದ ಪರಿವರ್ತನೆಯ ಪ್ರಕ್ರಿಯೆ ಎತ್ತ ಸಾಗಿದೆ ಎಂಬ ಚರ್ಚೆ ಸಂವಾದವೂ ಇಲ್ಲಿ ನೆಲೆಪಡೆದಿರುವುದು ವಿಶೇಷ.

ಒಲ್ಲದ ಮನಸ್ಸಿನಿಂದ ಮುಂಬೈಗೆ ಬಂದು ಓದು ಮುಂದುವರಿಸಿ ತನ್ನ ಬದುಕಿನ ಹೊಣೆ ಹೊತ್ತ ದಿಟ್ಟ ಮಹಿಳೆಯ ಕಥನ ಈ ಕೃತಿಯಲ್ಲಿ ಸಶಕ್ತವಾಗಿ ಅರಳಿ ನಿಂತಿದೆ. ಅಮಿತಾ ಅವರ ಕಲಾನಿಷ್ಠೆ, ಕಾವ್ಯಮಯ ಭಾಷೆ, ಕಾದಂಬರಿಯ ಬಂಧ, ಮನೋವಿಶ್ಲೇಷಣಾತ್ಮಕ ಧಾಟಿ, ವಿಚಾರ ಹಾಗೂ ಅನುಭವಗಳನ್ನು ಕಲೆಯಾಗಿ ಮಾರ್ಪಡಿಸುವ ಜವಾಬ್ದಾರಿ ಇವೆಲ್ಲ ಮೆಚ್ಚತಕ್ಕ ಸಂಗತಿ.

ಇದೊಂದು ಸ್ತ್ರೀ ಪ್ರಧಾನ ಕಾದಂಬರಿ. ಹೆಣ್ಣು, ಅವಳ ರೂಪ, ಸ್ವರೂಪ ಮತ್ತು ಅವಳ ವಿವಾಹ ಸಂಬಂಧಗಳ ಕುರಿತು ಕನ್ನಡ ಕಾದಂಬರಿಗಳಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ತ್ರಿವೇಣಿ ಅವರ ಮುಕ್ತಿ' ಕಾದಂಬರಿಯಲ್ಲಿ ಬರುವ ಅಮೃತಾಳದು ಇದೇ ಬಗೆಯ ಪಾತ್ರ. ದೂರದ ಮುಂಬೈಯಲ್ಲಿ ತನ್ನ ಭವಿಷ್ಯವನ್ನು ಕಂಡುಕೊಳ್ಳುವ ಅಮೃತಾ ಕೊನೆಗೆ ವಿಧುರನೊಬ್ಬನನ್ನು ವಿವಾಹವಾಗುತ್ತಾಳೆ. ಆದರೆ ತ್ರಿವೇಣಿ ಅವರಿಗೆ ನಾಯಕಿಯನ್ನು ಒಳಗಿನಿಂದ ನೋಡಲು ಸಾಧ್ಯವಾಗಿಲ್ಲ. ಅಮಿತಾ ಅವರು ಆ ಕೆಲಸವನ್ನು ಈ ಕೃತಿಯಲ್ಲಿ ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಚಿತ್ತಾಲರ ಮೂರು ದಾರಿಗಳು’ ಕಾದಂಬರಿಯ ನಾಯಕಿ ನಿರ್ಮಲೆ ಸಹ ಕಾರವಾರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಏನೆಲ್ಲ ಪುಕಾರುಗಳೆದ್ದು ಹಿಂಸೆಯನ್ನು ಅನುಭವಿಸುತ್ತಾಳೋ ಸರಯೂ ಅದೆಲ್ಲವನ್ನು ಮೆಟ್ಟಿನಿಂತು ಯಶಸ್ವಿ ಮಹಿಳೆಯಾಗಿ ಕಂಗೊಳಿಸುತ್ತಾಳೆ.

ಸ್ವಾಭಿಮಾನ, ಧೈರ್ಯ, ಮಹತ್ವಾಕಾಂಕ್ಷೆಗಳಿದ್ದರೆ ವ್ಯಕ್ತಿತ್ವ ವಿಕಾಸ ಹಾಗೂ ಸಮಾಜವನ್ನು ತನ್ನ ಆದರ್ಶಗಳಿಗೆ ಅನುಗುಣವಾಗಿ ಪರಿವರ್ತಿಸಲು ಸಾಧ್ಯ ಎಂಬ ಧ್ವನಿಶಕ್ತಿ ಇಲ್ಲಿ ಪ್ರಕಟವಾಗಿದೆ. ಸಮಾಜದಲ್ಲಿ ಮಹಿಳೆ ಎದುರಿಸಬೇಕಾದ ಆಯ್ಕೆಯ ಪ್ರಶ್ನೆ ಇಲ್ಲಿ ಮುನ್ನಲೆಗೆ ಬಂದು ಕಾದಂಬರಿಯ ಹಿರಿಮೆಯನ್ನು ಹೆಚ್ಚಿಸಿದೆ. ಸರಯೂಳ ಅದಮ್ಯ ಜೀವನೋತ್ಸಾಹದ ಪ್ರತೀಕವಾಗಿ ಇಲ್ಲಿ ಮತ್ತೆ ಮತ್ತೆ ಕಡಲಿನ ವರ್ಣನೆ ಬಂದಿದೆ. ಹೀಗಿದ್ದೂ ಲೇಖಕರು ವರ್ಣನೆ ವ್ಯಾಖ್ಯಾನಗಳನ್ನು ಅವಲಂಬಿಸದೆ ಕಥನವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ. ಈ ಪುನರಪಿ ಬಣ್ಣನೆ ಕಾದಂಬರಿಯ ಏಕಾಗ್ರತೆಗೆ ಭಂಗ ತಂದಿಲ್ಲ ಎಂಬುದು ಹೇಳಲೇಬೇಕಾದ ಸಂಗತಿ.

“ಈ ಕಾದಂಬರಿಯಲ್ಲಿ ಬಿಡಿ ಮತ್ತು ಇಡಿಗಳ ನಡುವೆ ಲೇಖಕಿ ಸಾಧಿಸಿರುವ ಹದ ಅಪರೂಪದ್ದಾಗಿದೆ” ಎಂಬ ಜಯಂತ ಕಾಯ್ಕಿಣಿ ಅವರ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ. ಈ ಕೃತಿಗಾಗಿ ಅಮಿತಾ ಭಾಗವತ್ ಅವರಿಗೆ ಹಾರ್ದಿಕ ಅಭಿನಂದನೆಗಳು.

‍ಲೇಖಕರು avadhi

September 18, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: