ಚನ್ನಬಸವ ಆಸ್ಪರಿ ಓದಿದ ‘ಬಾಳನೌಕೆಗೆ  ಬೆಳಕಿನ ದೀಪ’

ಚನ್ನಬಸವ ಆಸ್ಪರಿ

—-

‘ಬಾಳನೌಕೆಗೆ  ಬೆಳಕಿನ ದೀಪ’ ರೇವಣಸಿದ್ದಪ್ಪ ಜಿ.ಆರ್. ಅವರ ಚೊಚ್ಚಲ ಕವನ ಸಂಕಲನ. ಸಂಕೀರ್ಣ ಕಾವ್ಯ ಪ್ರಯೋಗಗಳಿಂದ ದೂರ ನಿಂತು, ನಿರಾಭರಣ ಸುಂದರಿಯಂತಿರುವ ಈ ಸಂಕಲನದಲ್ಲಿ ಒಟ್ಟು 44 ಕವಿತೆಗಳಿವೆ. ಡಾ.ಲೋಕೇಶ್ ಅಗಸನಕಟ್ಟೆಯವರ ವಿದ್ವತ್ಪೂರ್ಣ ಮುನ್ನುಡಿ ಹಾಗೂ ಬಿದರಹಳ್ಳಿ ನರಸಿಂಹಮೂರ್ತಿಯವರ ಚುರುಕಾದ ಬೆನ್ನುಡಿ ಹೊತ್ತಿರುವ

ಈ ಕಟ್ಟು ತನ್ನ ಧ್ಯಾನಸ್ಥ ರಚನೆಗಳಿಂದಾಗಿ ಸಹೃದಯರನ್ನು  ಸೆಳೆಯುತ್ತದೆ. ಇಲ್ಲಿನ ಬಹುತೇಕ ಕವನಗಳು ಬದುಕಿಗೆ ನಿಷ್ಠವಾಗಿದ್ದರೂ ವಿಚಾರದ ಎಳೆಯೊಂದರ ಆಳಕ್ಕೆ ಓದುಗನನ್ನು ಕೊಂಡೊಯ್ಯುವುದರಿಂದ ಅಷ್ಟೇ ಫಿಲಸಾಫಿಕಲ್ ಎನಿಸಿಬಿಡುತ್ತವೆ. ಸಹೃದಯ ತನ್ನ ಓದಿನುದ್ದಕ್ಕೂ personal musings ಮೂಲಕ ಹಾದು ಹೋಗುವುದರಿಂದ ಇಡಿಯ ಗುಚ್ಛವೇ ಆಟೋಬಯಾಗ್ರಫಿಕಲ್ ಎಂದು ಅನಿಸಿಬಿಡುವ ಸಾಧ್ಯತೆಯೂ ಇದೆ. ತತ್ ಕ್ಷಣ ಸ್ಫುರಿಸುವ ಈ ಎಲ್ಲ ಭಾವಗಳಾಚೆಯೂ ಇಲ್ಲಿ ಕೇವಲ ಶುದ್ಧ ಕಾವ್ಯ ಉಸಿರಾಡುತ್ತಿರುವುದನ್ನು ಸೂಕ್ಷ್ಮ ಓದುಗ ಗಮನಿಸಬಲ್ಲ. ಅವರವರ ಅನುಭವದ ಪರಿಧಿಯಲ್ಲಿ ದಕ್ಕಬೇಕಾದುದನ್ನು ದಕ್ಕಿಸಿಕೊಟ್ಟಾಗಲೇ ಕವಿತೆ ಗೆಲ್ಲುತ್ತದೆ. ಕವಿಯ ಒಂದು ಕವಿತೆ ಪ್ರತಿಯೊಬ್ಬ ಓದುಗನಿಗೂ ಅವನದೇ ಆದ ಸ್ವತಂತ್ರ ಕವಿತೆಯಾಗಿ ದಕ್ಕಿದಾಗ ಮಾತ್ರ ಒಂದೇ ಬಳ್ಳಿಯ ಹಲವು ಬಣ್ಣದ ಹೂಗಳ ಸಾರ್ಥಕ್ಯವನ್ನು ಪಡೆಯುತ್ತದೆ.

ಈಗಾಗಲೇ ನಾಡಿನ ಹಿರಿ ಕಿರಿಯ ಕವಿಗಳು, ವಿಮರ್ಶಕರು,ಓದುಗರು ಈ ಕವಿತೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ.ಕವಿ ಮುಂದೆ ಕ್ರಮಿಸಬೇಕಾದ ಎಚ್ಚರದ ಹಾದಿಯನ್ನು ಕುರಿತೂ ಮುಕ್ತವಾಗಿ ಸ್ಪಂದಿಸಿದ್ದಾರೆ. ಈ ಕೃತಿಗೆ ಅಡ್ವೈಸರ್ ಸಾಹಿತ್ಯ ಪ್ರಶಸ್ತಿ ಸಂದಿರುವುದು ಕವಿಯ ಮುಂದಿನ ಕೃತಿಗಳ ಬಗ್ಗೆ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಸಂಕಲನದಲ್ಲಿ ವಸ್ತು ವೈವಿಧ್ಯತೆ ಇದ್ದರೂ ಕವಿಯ ಕೇಂದ್ರ ಕಾಳಜಿ ಮನುಷ್ಯ ಸ್ವಭಾವವನ್ನು ಹಾಗೂ ಬದುಕಿನ ನಿಗೂಢತೆಗಳನ್ನು ಭೇದಿಸುವುದೇ ಆಗಿದೆ. ‘ಸಿದ್ದೇಶ ಕಾಣೆಯಾಗಿದ್ದಾನೆ’ ಕವಿತೆಯ ಸಿದ್ದೇಶನಿಗೂ ಸಂಕಲನದುದ್ದಕ್ಕೂ ಮಾತನಾಡಿದ ಕವಿ ರೇವಣಸಿದ್ದಪ್ಪನವರಿಗೂ ಯಾವ ಭಿನ್ನತೆಗಳೂ ಗೋಚರಿಸುವುದಿಲ್ಲ. ಸಿದ್ದೇಶನಿಗಿರುವ ಬದುಕಿನ ಕುರಿತಾದ ಜಿಜ್ಞಾಸೆ, ಆತಂಕ,ತವಕ,ತಲ್ಲಣಗಳು ಹಾಗೂ ಅವನಿಗೆ ಎದುರಾಗುವ ಕ್ಷುದ್ರ ಜಗತ್ತು ಸ್ವತಃ ಕವಿಯ ಜಗತ್ತೆಂದು ಅನಿಸಿದರೆ ಅಚ್ಚರಿಯಿಲ್ಲ. ‘ಪರಿವಾರ’ ಶೀರ್ಷಿಕೆಯ ಕವಿತೆಯಲ್ಲಿ “ವಸುದೈವ ಕುಟುಂಬಕಂ” ನ‌ ಮಹತ್ತರ ಸಂದೇಶ ಬಿತ್ತರಿಸುವ ಕವಿ ‘ಮಗುವಾದರೂ ಆಗದೇ?’ ಕವಿತೆಯಲ್ಲಿ ಮನುಷ್ಯ ಮತ್ತೆ ನಿಜಾರ್ಥದಲ್ಲಿ ಮನುಷ್ಯನಾಗಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಈ ಕವಿತೆಯಲ್ಲಿನ ಕೊನೆಯ ಸಾಲುಗಳು “ಮನುಷ್ಯನಾದರೆ ಸಾಲದೇ?/ ಮಗುವಾದರೂ ಆಗದೇ?”ಚಿಂತನೆಗೆ ಹಚ್ಚುತ್ತವೆ.

ಇನ್ನು ‘ಸಾಗರ’ ಕವಿತೆಯ ಈಸದೇ ಗತಿಯಿಲ್ಲ, ಈಸದೇ ವಿಧಿಯಿಲ್ಲ ಎಂಬ  ಆಶಯ ಅರ್ಥಪೂರ್ಣ.’ಲೆಕ್ಕಕ್ಕೆ ಸಿಗದಷ್ಟು ಟೈಟಾನಿಕ್ಕುಗಳ ಮುಳುಗಿಸಿಕೊಂಡಿರುವ ಸಾಗರ ತಾನು ಮುಳುಗುವುದಿಲ್ಲ’-ಇಡೀ ಕವಿತೆಯಲ್ಲಿ ಗಮನ ಸೆಳೆದ ಸಾಲು.’ಸಾಗರ ನೀರು ಕುಡಿಸಿದ್ದೇ ಹೆಚ್ಚು’ ಎಂಬಲ್ಲಿನ ತೀರ್ಮಾನದವರೆಗೆ ತಲುಪುವ ಪದ್ಯದ ಗತಿ ಸಹಜವಾಗಿದೆ. ಆದರೆ ‘ಸೂಕ್ಷ್ಮಾತಿಸೂಕ್ಷ್ಮ ಅಣುಜೀವಿಗಳಿಂದ ಭಾರೀ ಗಾತ್ರದ ತಿಮಿಂಗಿಲಗಳವರೆಗೆ ತರಹೇವಾರಿ ಜೀವಜಂತುಗಳು ಈಸುತ್ತಿವೆ ಇಲ್ಲಿ’ ಎಂಬ ಸಾಲು ಗಾಢ ಗದ್ಯದ ಘಮಲಿನಲಿ ಮಿಂದ ವೈಜ್ಞಾನಿಕ ಸತ್ಯವೊಂದರ ಹೇಳಿಕೆಯಂತೆ ವಾಚ್ಯವಾಗಿಬಿಡುತ್ತದೆ.ಪದ್ಯದ ಸುಭಗತೆಗೆ,ಲಯಕ್ಕೆ ದಿಢೀರ್ ಬ್ರೇಕು ಹಾಕಿದಂತೆನಿಸಿತು. ಇದನ್ನೇ ಸ್ವಲ್ಪ ಅಮೂರ್ತಗೊಳಿಸಿ ಹೇಳಿದ್ದರೆ ಓದುಗನಿಗೆ ಸ್ಪೇಸ್ ಕೊಟ್ಟಂತೆಯೂ ಆಗುತ್ತಿತ್ತು;ಕವಿತೆಯ appeal ಕೂಡ ಹೆಚ್ಚುತ್ತಿತ್ತು. ಹಾಗೆಂದು ಕವಿತೆಯ ಒಟ್ಟು ಆಶಯಕ್ಕಾಗಲೀ ವಸ್ತುವಿನ ನಿರ್ವಹಣೆಗಾಗಲೀ ಇಲ್ಲಿ ಧಕ್ಕೆಯಾಗಿಲ್ಲ ಎಂಬುದನ್ನು ಗಮನಿಸಬೇಕು.

ಬದುಕಿನ ಬಗ್ಗೆ ತೀರದ ಆಸಕ್ತಿ ಹೊಂದಿರುವ ಕವಿ ಬದುಕಿನ ಲೆಕ್ಕಾಚಾರದಲ್ಲಿ ಎಡವುವುದಿಲ್ಲ.

ಈ ಲೆಕ್ಕ

ಕೆಲವರಿಗೆ ಸರಳ;

ಇನ್ನು ಕೆಲವರಿಗೆ ಸರಾಸರಿ;

ಹಲವರಿಗೆ ಕಠಿಣಾತಿಕಠಿಣ.

ಸಹವಾಸ ಸಾಕೆಂದು

ಕೈಚಲ್ಲುವಂತಿಲ್ಲ;

ಈ ಸಾಲುಗಳು ಕವಿ ಗ್ರಹಿಸಿದ ಬದುಕಿನ ಅಂಕಗಣಿತದ ವ್ಯಾಖ್ಯಾನದಂತೆ ಕಂಡರೂ ಸಂಬಂಧಗಳ ಕೆಮಿಸ್ಟ್ರಿ ಯನ್ನು ತಿಳಿಸದೆ ಸುಮ್ಮನಾಗವು. ಕವಿತೆಯ ಕೊನೆಯ ಸಾಲು-“ಯಾರದೋ ಕಣ್ ಪಾಯಿಂಟಿನಲ್ಲಿ ಪರೀಕ್ಷೆ ಬರೆಯುತ್ತಿದ್ದೇವೆ ನಾವೆಲ್ಲ”- ಬದುಕಿನ ಕುರಿತ ಕವಿಯ ಫಿಲಾಸಫಿ.

ಸಂಕಲನದಲ್ಲಿ ಬಹುವಾಗಿ ಇಷ್ಟವಾದ ಕವಿತೆ ‘ಯಂತ್ರಜೀವಿ’. ರೈಲಿನ ಪ್ರತಿಮೆಯ ಮುಖಾಂತರ ಬದುಕಿನ ಸ್ತರಗಳನ್ನು ಶೋಧಿಸುವ ಪರಿ ಅನನ್ಯವೆನಿಸುತ್ತದೆ.

ಹತ್ತುವವರು ಹತ್ತುತ್ತಾರೆ;

ಇಳಿಯುವವರು ಇಳಿಯುತ್ತಾರೆ.

ಹಳಬರ ಜಾಗದಲ್ಲಿ ಹೊಸಬರು ಬರುತ್ತಾರೆ;

ಹೊಸಬರು ಹಳಬರಾಗುವ ಹೊತ್ತಿಗೆ

ಇನ್ಯಾರೋ ಇರುತ್ತಾರೆ!

ಈ ಸಾಲುಗಳನ್ನು ಓದಿದ ನಂತರ ಇಷ್ಟೇ ಅಲ್ಲವೇ ಬದುಕು ಎಂದೆನಿಸದೇ ಇರದು.

ಇನ್ನು ‘ಕೋರಿಕೆ’ ಕವಿತೆಯಲ್ಲಿ

ಇಲ್ಲಿ ನಾನೇನೂ ಅಲ್ಲ, ನಿಮ್ಮಷ್ಟು ದೊಡ್ಡವನಲ್ಲ, ನಾಗರೀಕನಲ್ಲ;ನಾನು ಯಕಃಶ್ಚಿತ್ ಮನುಷ್ಯ; ಹುಸಿ ವೇಷಗಳನ್ನು ಆರೋಪಿಸಿಕೊಳ್ಳದೆ ತೀರ ಸಹಜತೆಯಲ್ಲಿ ಬದುಕುವವನು ಎಂದು ಹೇಳುತ್ತಲೇ ಕವಿ ತಾನು ಇತರರಿಗಿಂತ ತುಂಬ ಎತ್ತರದಲ್ಲಿ ನಿಂತುಬಿಡುವ ಸೋಜಿಗ ಕವಿತೆಯ ಚಲನೆಯೊಡನೆ ನಿಧಾನವಾಗಿ ಸಾಗಿ ಸಂಪನ್ನಗೊಳ್ಳುವ ಬಗೆ ಇಷ್ಟವಾಯಿತು.ಕೊನೆಯ ಸ್ಟಾಂಜಾದಲ್ಲಿನ ದೈನ್ಯತೆ ಒಂದು ಕ್ಷಣ ಹಿಡಿದು ನಿಲ್ಲಿಸಿತು.ಕವಿಗೊಂದು ಅನನ್ಯ ಐಡೆಂಟಿಟಿ ಇದೆಯೆನ್ನುವುದೇ ಕವಿತೆಯ ಆಶಯವಾಗಿದ್ದರೂ ಅದನ್ನು ಕವಿತೆಯಲ್ಲಿ ಕಟ್ಟಿಕೊಟ್ಟಿರುವ ಪರಿಯಿಂದಾಗಿ ಕ್ಷಣ ಕಾಲ ಸ್ತಬ್ಧವಾಗಿ ನಿಂತು ಯೋಚಿಸುವಂತೆ ಮಾಡಿತು. ‘ಅಪರಿಚಿತರು’ ಕವಿತೆಯಲ್ಲಿನ ಕವಿಯ ಮಾನವೀಯ ಆಶಯ ಗಮನ ಸೆಳೆಯುತ್ತದೆ-

ಒಮ್ಮೊಮ್ಮೆ ಅಂದುಕೊಳ್ಳುತ್ತೇನೆ 

ರಣರಂಗದಲ್ಲಿ 

ಎದುರಾಗುವ ಅಪರಿಚಿತರು 

ತಮ್ಮ ತಮ್ಮ 

ಬಂದೂಕು ಬದಿಗಿಟ್ಟು 

ಪರಸ್ಪರ

ಸುಖ ದುಃಖ ವಿಚಾರಿಸುವಂತಾದರೆ 

ಪಾಪಾಸ್ ಕಳ್ಳಿಯ ಜಾಗದಲ್ಲಿ 

ಗುಲಾಬಿ ನಳನಳಿಸುತ್ತದೆ

‘ಪಲಾಯನ’ ಶೀರ್ಷಿಕೆಯ ಕವಿತೆ ಆಳ ಭಾವವನ್ನು ಸರಳ ಶಬ್ದಗಳಲ್ಲಿ ಸಶಕ್ತವಾಗಿ ಹಿಡಿದಿಡುವಲ್ಲಿ ಗೆದ್ದಿದೆ.ಕವಿತೆಯ ಬಿರುಸಿನ ಚಲನೆಗೆ ಒದಗಿದ ಪದಗಳು, ಅವು ಸ್ಫುರಿಸುವ ಭಾವ ಕವಿತೆಯ ಒಟ್ಟಂದವನ್ನು,ಅದರ ಆಶಯವನ್ನು ಧ್ವನಿಸಲು ಸಹಜವಾಗಿಯೇ ಒಲಿದು ಬಂದಂತಿವೆ. ಸ್ವತಃ ಬುದ್ಧನಾಗದೆ ಮಧ್ಯರಾತ್ರಿಯಲ್ಲಿ ಎದ್ದುಹೋಗುವ ಸಿದ್ಧಾರ್ಥ ಪಲಾಯನಗೈದವನ ತಾಕತ್ತಿನ ರೂಪಕವಾಗಿ ನಿಲ್ಲುವಲ್ಲಿಗೆ ತಂದು ಮುಟ್ಟಿಸುವ ಕವಿತೆ ಮುಗಿದರೂ ಕಾಡುವ ಗುಣ ಹೊಂದಿದೆ.ಕೆಳಗಿನ ಈ ಸಾಲುಗಳನ್ನು ಗಮನಿಸಬಹುದು-

ಪಲಾಯನಗೈಯಬಹುದು 

ಸಿದ್ಧಾರ್ಥ ಮಧ್ಯರಾತ್ರಿಯಲ್ಲಿ

ಎದ್ದು ಹೋದಂತೆ 

‘ಸ್ವತಃ ಬುದ್ಧನಾಗದೆ’.

ಕಾಂಟ್ರಾಸ್ಟ್ ಗಳ ಮೂಟೆಯನ್ನು ಮೆಲ್ಲನೆ ಬಿಚ್ಚುತ್ತ ಸಾಗುವ ಕವಿತೆ ‘ಅಯೋಮಯ’ ಆಪ್ತವೆನಿಸುತ್ತದೆ.ಪ್ರತಿ ಸ್ಟ್ಯಾಂಜಾವೂ ಎಲ್ಲವೂ ಅಯೋಮಯ ಎನ್ನುವುದನ್ನು ನೆನಪಿಸುತ್ತ ಸಾಗುತ್ತದೆ.ಬದುಕಿನ ಚರ್ವಿತಚರ್ವಣವನ್ನು, ವೈರುಧ್ಯವನ್ನು ಸುಮ್ಮನೆ ಬಿತ್ತುತ್ತ ಸಾಗುವ ಕವಿತೆ ಈ ಬದುಕೇ ಅಯೋಮಯ ಎಂಬ ಸತ್ಯವನ್ನು ಸ್ಥಾಪಿಸುವಲ್ಲಿ ಗೆಲ್ಲುತ್ತದೆ.ಗಿಡದೆರಡು ಪ್ರತಿಮೆಗಳು ಬದುಕಿನ ಗಹನ ತತ್ವವೊಂದನ್ನು ಅನಾಯಾಸವಾಗಿ ಸಾರುವ ಕವಿತೆ ‘ಎರಡು ಗಿಡಗಳು’-

ಕುಂಡದ ಗಿಡಕ್ಕಿಲ್ಲ 

ಬಟಾ ಬಯಲಲ್ಲಿ 

ಸೆಟೆದು ನಿಂತ 

ಹೆಮ್ಮೆರದ ಗತ್ತು 

ಇರುವಷ್ಟು ಕಾಲ 

ಇದ್ದುದನ್ನೇ ಸೇವಿಸಿ 

ಬದುಕುತ್ತದೆ 

ಬೆಳಕಿನತ್ತ ಚಿತ್ತವಿಟ್ಟು.

ಈ ಸಾಲುಗಳು ಎಷ್ಟು ಕಾವ್ಯಾತ್ಮಕವಾಗಿವೆಯೋ ಅಷ್ಟೇ ಫಿಲಸಾಫಿಕಲ್ ಆಗಿಯೂ ಇವೆ. ಹೀಗೆ ಬದುಕಿನ ಬಗೆಗಿನ ಕವಿಯ ವ್ಯಾಖ್ಯಾನ ಮುಂದುವರೆಯುತ್ತಲೇ ಹೋಗುತ್ತದೆ. ಈ ರೀತಿಯ ಫಿಲಸಾಫಿಕಲ್ ಬೆಂಟ್ ಆಫ್ ಮೈಂಡ್ ಇರುವುದರಿಂದಲೇ ಇವರ ಬಹುತೇಕ ಕವಿತೆಗಳು ಪ್ರಶ್ನೆಗಳಲ್ಲಿ, ಜಿಜ್ಞಾಸೆಯಲ್ಲಿ ಮುಗಿಯುತ್ತವೆ. ಈ ದಿಸೆಯಲ್ಲಿ ಇವರ ಇನ್ನೊಂದು ಕವಿತೆ ‘ಜೀವನ ಶೂನ್ಯವೇ?’ ಅನ್ನು ಗಮನಿಸಬಹುದು. ಕವಿತೆಯ ಶೀರ್ಷಿಕೆಯೇ ಕವಿತೆಯ ಕೊನೆಯ ಸಾಲಾಗಿ, ಎಲ್ಲ ಪ್ರಶ್ನೆಗಳನ್ನೂ ಓದುಗರ ಮುಂದಿಡುತ್ತಿರುವಾಗ ಕವಿ ಹೇಳುವುದೇನಿದೆ ಇಲ್ಲಿ ಎಂಬ ನಿರಾಶೆ ಹುಟ್ಟಲೂ ಸಾಧ್ಯವಿದೆ. ರೇವಣಸಿದ್ದಪ್ಪನವರು ಇಂಥ ಸೂಕ್ಷ್ಮತೆಗಳೆಡೆಗೆ ಗಮನಹರಿಸಿದರೆ ಇನ್ನಷ್ಟು ಗಟ್ಟಿ ಕಾವ್ಯ ಕೃಷಿಯನ್ನು ಮಾಡಬಲ್ಲರು.

ಸಂಕಲನದಲ್ಲಿ ಗಮನ ಸೆಳೆಯುವ ಮತ್ತೊಂದು ಕವಿತೆ ‘ಬೆದೆ’.

ಘರ್ಷಣೆಯಲ್ಲಿ ಕಾವಿದೆ

ಕಾವಿನಲ್ಲಿ ಬೆಳಕೂ ಇದೆ

ಎಂಥ ದರ್ಶನ! ಇಲ್ಲೂ ಅಷ್ಟೆ ಕಾಮದ ವಿಶ್ವರೂಪ ದರ್ಶನ ಮಾಡಿಸಲು ಕವಿತೆ ಯಾವುದೇ ಸಾದೃಶ್ಯಗಳನ್ನು ಬಳಸದೆಯೇ, ಪದ ಚಮತ್ಕಾರದೊಂದಿಗೆ ಸಾಗುತ್ತ ಸ್ಪಷ್ಟ ಅನುಭವವನ್ನು ಮಂಡಿಸುವ ಪರಿ ಅಚ್ಚರಿ ಹುಟ್ಟಿಸುತ್ತದೆ.ಸುಪ್ತ, ಗುಪ್ತ, ನಂದದ ಜ್ವಾಲಾಮುಖಿ, ನವಿರಾದ ಹಿಂಸೆ,ಇಂಚಿಂಚೂ ಮುಕ್ಕುತ್ತಾ,ಅಂಚಂಚಲೂ ಹರಿವ- ಈ ಪದಪುಂಜಗಳು ಹೊತ್ತು ತರುವ ಭಾವ ಬೆದೆಯ ಉತ್ತುಂಗವನ್ನು, ಅದು ಉಂಟುಮಾಡುವ ಉನ್ಮತ್ತತೆಯನ್ನು ಹೇಳಲು ತಮ್ಮೊಳಗೇ ಶಕ್ತವಾಗಿವೆ.ಅಂದರೆ ಕಾವ್ಯದ ಬೇರೆ ತಂತ್ರಗಳ ಗೋಜಿಗೆ ಹೋಗದಷ್ಟು ಈ ಕವಿತೆ ನಿರಾಭರಣ ಸುಂದರಿ.

‘ಕಾಯುತ್ತಾ ಕಾಯುತ್ತಾ’ ಶೀರ್ಷಿಕೆಯ ಕವಿತೆ ಕಾಯುವುದು ನಿಶ್ಫಲವಾದರೂ,ಕಾಯುವುದೂ ಕೂಡಾ ಹೇಗೆ ನಿಷ್ಕಲ್ಮಶ ಕಾಯಕವಾಗಬಹುದೆನ್ನುವ ಸಾಧ್ಯತೆ, ಕಾಯುವವನ ನಿರ್ಲಿಪ್ತ ಭಾವ ಹಿಡಿದು ನಿಲ್ಲಿಸುತ್ತದೆ. ಈ ಕವಿತೆಗೆ ದಕ್ಕುವ ಪದಚಮತ್ಕಾರ ವಿಶಿಷ್ಟವಾದದ್ದು. ಅದೊಂದು ಧ್ಯಾನಸ್ಥ ಸ್ಥಿತಿಯೆಂದು ಬಣ್ಣಿಸುವ ಕವಿ ಕೊನೆಯಲ್ಲಿ ಭರವಸೆಯ ಚಿಲುಮೆಯನ್ನು ಚಿಮ್ಮಿಸುತ್ತಾರೆ.

ಇಲ್ಲಿರುವ ಬಹಳಷ್ಟು ಕವಿತೆಗಳನ್ನು ನಾನು ಈ ಮೊದಲೇ ಓದಿದ್ದೆನಾದರೂ, ಈಗ ಈ ಕಟ್ಟಿನ ಕವಿತೆಗಳನ್ನು ಒಟ್ಟಿಗೆ ಓದಿದ್ದರಿಂದ ಬೇರೆಯದೇ ಭಾವ ಪ್ರಪಂಚದ ದರ್ಶನದ ಜೊತೆಗೆ ಕವಿಯ ಕಾವ್ಯದ ಬನಿಯನ್ನು ಗುರುತಿಸಲೂ ತಕ್ಕಮಟ್ಟಿಗೆ ಸಾಧ್ಯವಾಗಿದೆ. ತಮ್ಮ ಮೊದಲ ಸಂಕಲನದಲ್ಲಿಯೇ ಕೆಲವಾರು ಉತ್ತಮ ಕವಿತೆಗಳನ್ನು ನೀಡಿರುವ ರೇವಣಸಿದ್ದಪ್ಪ ಅವರು ಒಂದು ಹಂತದ ಯಶಸ್ಸನ್ನು ದಾಖಲಿಸಿದ್ದಾರೆ. ಆದರೂ ಕಾವ್ಯ ಪ್ರಯೋಗ ನಿರಂತರವಾದದ್ದು. ಸಮಕಾಲೀನ ಸಂವೇದನೆಯನ್ನು ಗಮನಿಸಿ ಅಭಿವ್ಯಕ್ತಿಯ ನೆಲೆಗಳನ್ನೂ ಕಾವ್ಯ ಕುಸುರಿಯ ತಂತ್ರಗಳನ್ನೂ ಪರಿಶೀಲಿಸಿ ಕಾಲದ ಜೊತೆ ಹೆಜ್ಜೆ ಹಾಕುವ ಅನಿವಾರ್ಯತೆ ಎಲ್ಲ ಕಾಲಕ್ಕೂ ಇರುತ್ತದೆ. ಶ್ರೇಷ್ಠ ಸಾಹಿತ್ಯದ ಅಂತಿಮ ಗುರಿ ಜೀವನ ದರ್ಶನವೇ ಆಗಿದ್ದರೂ, ಅದು ವಾಚ್ಯವಾಗದಂತೆ, ಇದನ್ನೇ ಫಿಲಸಫೈಸ್ ಮಾಡುತ್ತಿದ್ದಾರೆ ಎಂದೆನಿಸದಂತೆ, ಸೂಕ್ಷ್ಮವಾಗಿ ಧ್ವನಿಸುವ ಕಲೆಯನ್ನು ಕರಗತ ಮಾಡಿಕೊಂಡಲ್ಲಿ ಫಿಲಸಾಫಿಕಲ್ ಎನ್ನುವ ಲೇಬಲ್ಲಿನಿಂದ ರೇವಣಸಿದ್ದಪ್ಪನವರು ಪಾರಾಗಲು ಸಾಧ್ಯವಿದೆ. ಬದುಕಿಗಿಂತ ಶ್ರೇಷ್ಠ ಫಿಲಾಸಫಿ ಮತ್ತೊಂದಿಲ್ಲ. ಘನವಾದುದರಲ್ಲಷ್ಟೇ ಬದುಕಿಲ್ಲ, ಲಘು ಪಲ್ಲಟಗಳಲ್ಲೂ ಬದುಕಿದೆ.ಬದುಕು ಸದಾ ವಿಷಾದದಲ್ಲಿಯೂ ನರಳುವುದಿಲ್ಲ.ಇದು ರೇವಣಸಿದ್ದಪ್ಪನವರಿಗೆ ಗೊತ್ತಿರದ ವಿಷಯವೂ ಅಲ್ಲ.ಬದುಕಿಗೆ ಇನ್ನಷ್ಟು ನಿಷ್ಠರಾಗಿ, ಸಣ್ಣಪುಟ್ಟ ಸಂಗತಿಗಳನ್ನೂ ಕಣ್ಣರಳಿಸಿ ನೋಡಿ, ಕಿವಿಯರಳಿಸಿ ಕೇಳಿ, ಎದೆಗೆ ತುಂಬಿಕೊಂಡು ಉನ್ಮತ್ತರಾಗಿ ಬರೆದಲ್ಲಿ ಈ ಕವಿ ಮತ್ತಷ್ಟು ಆಪ್ತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತಮ ಓದಿನ ಅನುಭೂತಿಯನ್ನು ನೀಡಿದ ಕವಿ ರೇವಣಸಿದ್ದಪ್ಪನವರಿಗೆ ಅಭಿನಂದಿಸಿ, ಅವರ ಭವಿಷ್ಯದ ಕಾವ್ಯ ಕೃಷಿಗೆ ಶುಭ ಹಾರೈಸುತ್ತೇನೆ

‍ಲೇಖಕರು avadhi

September 17, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: