ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಎನ್ ಆರ್ ನಾಟಕ ‘ಉಚ್ಚಿಷ್ಟ’- ನಾವಿಬ್ಬರೂ ಮದುವೆಯಾಗೋಣ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ‘ಮೀಡಿಯಾ ಡೈರಿ’ ಬಹುರೂಪಿಯಲ್ಲಿ ‘ಆ ಪತ್ರಿಕೋದ್ಯಮ’ ಎಂಬ ಶೀರ್ಷಿಕೆಯ ಪುಸ್ತಕವಾಗಿ ರೂಪುಗೊಂಡಿತು.

ಆ ಪತ್ರಿಕೋದ್ಯಮ‘ ಪ್ರತಿಗಾಗಿ ಸಂಪರ್ಕಿಸಿ : 70191 82729 ಅಥವಾ ಇಲ್ಲಿ ಕ್ಲಿಕ್ ಮಾಡಿ https://bit.ly/3nWUsuJ

ಜಿ ಎನ್ ರಂಗನಾಥ ರಾವ್ ಅವರು ಹೊಸ ನಾಟಕ ಸರಣಿ ಬರೆಯಲಿದ್ದಾರೆ.

5

ಅದೇ ಅಂಕ

ದೃಶ್ಯ ೩

(ಅದೇ ದಿನ ಸಂಜೆ ಅಭಿನವ ಮತ್ತು ವರ್ಷಿಣಿ ಪಡಸಾಲೆಯಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ ಕುಳಿತಿದ್ದಾರೆ. ಅಭಿನವ ಬಿಯರ್ ಕುಡಿಯುತ್ತಿದ್ದಾನೆ)

ವರ್ಷಿಣಿ: ಅಭೀ… ನನಗೇನೋ ಇದು ಸರಿ ಅನ್ನಸಲಿಲ್ಲ ಬಿಡು..
ಅಭಿನವ: ಏನು?
ವರ್ಷಿಣಿ: ತಾಯಿ ಶ್ರಾದ್ಧ ಮಾಡಿದ ದಿವಸಾನಾದರೂ ಸ್ವಲ್ಪ ನೇಮ, ನಿಯಮ ಪಾಲಿಸಬೇಕು. ಅವತ್ತು ಇಡೀ ದಿನ ಜನ್ಮ
ಕೊಟ್ಟ ಆಕಿಯ ಸ್ಮರಣ ಮಾಡಬೇಕು.
ಅಭಿನವ: ಏನು ಹಾಗಂದ್ರ?
ವರ್ಷಿಣಿ: ನೀನು ಬೆಳಿಗ್ಗೆ ನಿನ್ನಮ್ಮನ ಶ್ರಾದ್ಧ ಮಾಡಿ ಸಂಜೆ ಹೀಗೆ ಕುಡಿತಾ ಕೂರೋದು ನಂಗ ಕೆಟ್ಟದನಿಸುತ್ತದೆ. ನೀನು
ಇವತ್ತು ಇಡೀ ದಿನ ಆಕಿ ನೆನಪಿನ ಮಡಿಲೊಳಗೆ ಕೂಸಿನ್ಹಾಂಗ ಇರಬೇಕು. ಅವಳ ಸ್ಮರಣ ಮಾಡಬೇಕು.
ಅಭಿನವ: ವರ್ಷೀ ನೀನು… ಯೂ ಆರ್ ಸ್ಟುಪಿಡ್ ನಾನ್‌ಸೆನ್ಸ್… ನಾ ನಿಂಗೆ ಬೆಳಿಗ್ಗೇನೆ ಹೇಳೀದನಲ್ಲ ಶ್ರಾದ್ಧ ಮಾಡೋ
ಅಷ್ಟು ಕಾಲ ಶುದ್ಧಿಯಾಗಿ, ಶ್ರದ್ಧೆಯಿಂದ ಇದ್ದರ ಸಾಕು.. ಲೋಕ ವ್ಯವಹಾರ ನಡೆಯೋದಾದರೂ ಹೀಗೇನೆ
ಇಡೀ ದಿನ ಮೂಗು ಹಿಡಿದು ಕೂತರ ವ್ಯವಹಾರ ನಡೆಯೋದಾದರೂ ಹ್ಯಾಗೆ?
ವರ್ಷಿಣಿ: ನೀನೀಗ ಏನು ಮಹಾ ಲೋಕ ವ್ಯವಹಾರ ನಡೆಸ್ತಿದಿ….
ಅಭಿನವ: ಓಹ್, ಪ್ಲೀಸ್ ಸ್ಟಾಪ್ ಇಟ್
ವರ್ಷಿಣಿ: ಆಯತಪ್ಪ ನಿಲ್ಲಿಸ್ತೀನಿ….. ಆದರೆ ಒಂದು ವಿಚಾರ ನನ್ನ ತಲೆ ತಿಂತಿದೆ…
ಅಭಿನವ: ಏನದು?
ವರ್ಷಿಣೀ: ಅದೇ ಬೆಳಿಗ್ಗೆ ಆಚಾರ‍್ರು ಹೇಳಿದ್ದು… ಮದುವಿ ಆಗದವರಿಗೆ ಶ್ರಾದ್ಧ ಇಲ್ಲ… ಅವರು ಪರ ಲೋಕದಲ್ಲಿ ತಮ್ಮ ಹಿರಿಯರು
ಉಳಿಸಿದ ಉಚ್ಚಿಷ್ಟ ತಿನಕೊ೦ಡು ಇರಬೇಕು ಅನ್ನೋದು…
ಅಭಿನವ: ಓ ಅದೆಲ್ಲ ಬುಲ್ ಶಿಟ್… ಅದನ್ನೆಲ್ಲ ನೀನು ಸೀರಿಯಸ್ಸಾಗಿ ತಗೋಬಾರದು….
ವರ್ಷಿಣಿ: ಇಲ್ಲ ಅಭಿನವ ನನಗೆ ಅದು ಬಹಳ ಕೆಟ್ಟದು ಅನ್ನಿಸತದ… ಇಹಲೋಕದಲ್ಲೂ ಪರಲೋಕದಲ್ಲೂ ಇನ್ನೊಬ್ಬರ ಉಚ್ಚಿಷ್ಟ
ತಿನಕೊಂಡು, ಇನ್ನೊಬ್ಬರ ಹಂಗಿನಲ್ಲಿ ಇರೋದು ಅಂದ್ರ…
ಅಭಿನವ: ವರ್ಷೀ ಅದರ ಬಗ್ಗೆ ನೀನು ಯಾಕೆ ತಲೆ ಕೆಡಿಸ್ಕೋತೀ… ನಾಲ್ಕು ಕಾಸು ದಕ್ಷಿಣೆ ಜಾಸ್ತಿ ಬರಲೀ ಅಂತ ಆಚಾರ‍್ರು
ಏನೇನೋ ಹೇಳ್ತಾರೆ… ಅದನ್ನೆಲ್ಲ ಸೀರಿಯಸ್ಸಾಗಿ ತಗೋ ಬಾರದು… ಅಲ್ಲಿಗೆ ಮರೆತು ಬಿಡಬೇಕು
ವರ್ಷಿಣೀ: ಇಲ್ಲ ನಂಗ ಹಾಗ ಅನಸೋಲ್ಲ…. ಅದು ಖರೇ ಅಂತೆ… ನಾನು ಅನಂತಪದ್ಮನಾಭಾಚಾರನ್ನೂ ಕೇಳಿದೆ.. ವೇದ ಉಪ
ನಿಷತ್ತುಗಳೂ ಹಾಗೇ ಹೇಳ್ತವಂತೆ… ಮನೂ ಕೂಡಾ…. ನಮಗ್ಯಾಕ ಅಂಥ ಪರಿಸ್ಥಿತಿ ಬರಬೇಕು… ಇಹದಲ್ಲಿ ಇದ್ದ ಹಾಗೇ
ಪರದಲ್ಲೂ ಸ್ವತಂತ್ರರಾಗೇ ಇರೋಣ…. ಯಾರ ಉಚ್ಚಿಷ್ಟದ ಹಂಗೂ ನಮಗ ಬ್ಯಾಡ….
ಅಭಿನವ: ಅಂದರೆ ನಿನ್ನ ಮಾತಾದರೂ ಏನು?
ವರ್ಷಿಣೀ: ನಾವಿಬ್ಬರೂ ಮದುವೆಯಾಗೋಣ. ನೀನು ನನ್ನ ಕೊರಳಿಗೊಂದು ತಾಳಿ ಕಟ್ಟಿಬಿಡು….
ಅಭಿನವ: ವರ್ಷೀ ನಾನು ನಿನಗೆ ಮೊದಲೇ ಹೇಳಿದೀನಿ.. ನನಗೆ ಮ್ಯಾರೇಜ್ ಅಸ್ ಆನ ಇನಸ್ಟಿಟ್ಯೂಷನ್ ವಿರೋಧ ಇದೆ ಅಂತ.
ನಾವು ಹೀಗೇ ಲಿವ್ ಇನ್ ಅರೇಂಜ್ಮೆ೦ಟಿನಲ್ಲೇ ಪತಿ ಪತ್ನಿಯರಂತೇ ಬದುಕೋಣ….

ವರ್ಷಿಣೀ: ಅಭೀ ನಾವು ಇಹಪರ ಎರಡೂ ನೋಡಬೇಕು ಕಣೋ… ಪ್ಲೀಸ್ ಮದುವೆಯಾಗೋಣ.. ನಿನಗೆ ಗ್ರಾಂಡ್ ಬೇಡ
ಅನ್ನಿಸಿದರೆ ದೇವಸ್ಥಾನದಲ್ಲಿ ಸಿಂಪಲೆ ಆಗಿ ತಾಳಿ ಕಟ್ಟಿಬಿಡು…..
ಅಭಿನವ: ನೋ ದಟೀಸ್ ಇಂಪಾಸಿಬಲ್…
ವರ್ಷಿಣೀ: ಅಭೀ ಪ್ಲೀಸ್… ನಂಗ್ಯಕೋ ಭಯ ಆಗ್ತಿದೆ ಕಣೋ… ಈ ಫೀಮೇಲ್ ಈಸ್ ಇನ್‌ಸೆಕ್ಯೂರ‍್ಡ್… ಜೀವಮಾನವಿಡೀ
ಸ್ವಾತ೦ತ್ರ್ಯಕ್ಕಾಗಿ ಹೋರಾಡಿ ಬದುಕಿದೋಳೂ ಪರ ಲೋಕದಲ್ಲಿ ಇನ್ನೊಬ್ಬರ ಉಚ್ಚಿಷ್ಟಕ್ಕೆ ಕೈ ಒಡ್ಡೋದು ಅಂದರ…
ನಿಂಗೂ ಅಷ್ಟೇ ಇಷ್ಟೆಲ್ಲ ವೈಭವದಿಂದ ಬಾಳ್ತಿರೋನು ಅಲ್ಲಿ ಇನ್ನೊಬ್ಬರ ಎಂಜಲು ಅನ್ನಕ್ಕೆ ಕೈ ಒಡ್ಡೋದು
ಅಂದರ ನಿನ್ನ ಆತ್ಮಕ್ಕ ನೋವು ಆಗೋದಲ್ಲೇನು?
ಅಭಿನವ: ವರ್ಷಿ, ಐ ಆಮ್ ಫೆಡಪ್ ವಿತ್ ಯುವರ್ ಸಿಲ್ಲಿ ಆರರ್ಗ್ಯೂಮೆಂಟ್ ಇಟ್ ಈಸ್ ಇಂಪಾಸಿಬಲ್…
ವರ್ಷಿಣಿ: ಹಾಗಾದರೆ ನೀನು ನನ್ನ ಮದುವೆ ಆಗೋದಿಲ್ಲೇನು?
ಅಭಿನವ: ಇಲ್ಲ ನಾವು ಹೀಗೇ ಕೊನೆ ಉಸಿರು ಇರೋ ತನಕ್ ಲಿವ್‌ ಇನ್ ಅರೇಂಜ್ಮೆ೦ಟನಲ್ಲೇ ಬದುಕೋರು… ಐ ಲವ್ ಯು
ಎ ಲಾಟ್, ಪ್ಲೀಸ್ ಅಂಡರ್ ಸ್ಟಾಂಡ್…
ವರ್ಷಿಣಿ: ಇದು ನಿನ್ನ ಆಖೈರು ನಿರ್ಧಾರವೋ?
ಅಭಿನವ: ಹೌದು
ವರ್ಷಿಣಿ: ಹಾಗಿದ್ದಲ್ಲಿ ಪರಿಣಾಮಗಳನ್ನು ನೀನು ಎದುರಿಸಬೇಕಾಗುತ್ತೆ
ಅಭಿನವ: ಏನು ಪರಿಣಾಮ?
ವರ್ಷಿಣೀ: ಅದನ್ನ ನಾನು ಹೇಳಲ್ಲ. ಇನ್ನು ನಾನು ನನ್ನ ಆತ್ಮದ ಆಣತಿಯಂತೆ ನಡೆಯುವವಳು…
(ಸೂತ್ರಧಾರ ಪ್ರವೇಶಿಸುವನು)
ಸೂತ್ರಧಾರ: ಉಚ್ಚಿಷ್ಟದ ಚಿಂತೆ ಬಿಡು ತಂಗಿ
ಅದು ಹಸಿದ ಆತ್ಮಗಳ ಅನ್ನ
ಪಿತೃಗಳ ಪ್ರಸಾದ ಪರಮಾನ್ನ
ಅಭಿನವ: ರೀ ನೀವ್ರೀ ನಮ್ಮಬ್ಬರ ಮಧ್ಯೆ ಬರಲಿಕ್ಕೆ… ಇದು ನನ್ನ ಅಂತಃಪುರ… ನನ್ನ ಅಂತರ೦ಗ… ನೀವು ಹೇಗೆ ಬಂದಿರಿ
ಸೂತ್ರಧಾರ: ನಾನು ನಿನ್ನ ಸಾಕ್ಷಿ ಪ್ರಜ್ಞೆ, ನೀನು ಇದ್ದಲ್ಲೆಲ್ಲ ಇರ್ತೀನಿ….
ಅಭಿನವ ಕುಮಾರ ಹಟ ಮಾಡಬ್ಯಾಡ….
ವಿವಾಹ ಬಂಧನವಲ್ಲ, ಮಂಗಳ ಸೂತ್ರ
ಮಂಗಳ ಸೂತ್ರ ಕಟ್ಟಲು ಬೇಕು
ಬಾಹುಬಂಧನ ಸವಿಯಲು ಬೇಕು
ಸಂತಾನವು ಫಲಿಸಲೇಬೇಕು
ಇದು ಗೃಹಸ್ಥದ ಗಂಧವಯ್ಯ
ಗೃಹಸ್ಥದ ಗಂಧವ ತೇಯಲೇ ಬೇಕು

(ಎಂದು ಕಾವ್ಯ ವಾಚನದಂತೆ ಪಠಿಸುವನು)
(ಇದೇ ನಿನ್ನ ಕೊನೇ ನಿರ್ಧಾರಾನಾ ಎನ್ನುತ್ತಾ ಕಣ್ಣೀರಿಡುತ್ತಾ ನಿರ್ಗಮಿಸುವಳು)
ಅಭಿನವ: ಗೆಳೆಯಾ ಹೌದಣ್ಣ, ಒಂದು ಲಾರ್ಜ್ ವಿಸ್ಕಿ ಕೊಡೋ… ಈ ಬಿಯರ್ ಏನೂ ಹತ್ತೋದೇ ಇಲ್ಲ…. ಸ್ಕಾಚ್ ತಾ…
ಹೌದಣ್ಣ: ಹೌದಣ್ಣ
(ಎಂದು ವಿಸ್ಕಿ ತರುವನು. ಅದನ್ನು ಅಭಿನವ ಗುಟುಕರಿಸುತ್ತಿರುವಂತೆ ತೆರೆ ಬೀಳುವುದು).

। ಉಳಿದದ್ದು ನಾಳೆಗೆ ।

‍ಲೇಖಕರು avadhi

15 April, 2023

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading