ಹಸ್ತದ ಮೇಲೆ ಮೆಹಂದಿ ರಂಗು
ಸಂದೀಪ ಈಶಾನ್ಯ
ಎಣಿಸಲಾರಷ್ಣು ಸೊನ್ನೆಗಳಂಟು
ಮದುವಣಗಿತ್ತಿಯ ದೇಹಸಿರಿ
ಅಳೆಯುವ ಮಾಪನ ಬೇಕು.
ಜಾರಿಬೀಳುತಿದೆ ಮೊಗ್ಗಿನ ಜಡೆ
ನಡುಮುಡಿಗೆ ಒಂದು ಗುಲಾಬಿ
ಇಳಿಬಿದ್ದ ಕೂದಲಿನ ಕಡೆಗೆ
ತೂಗುಬಿದ್ದಿದೆ ಆಟಿಕೆಯ ಒಡವೆ.
ಅರ್ಧಚಂದ್ರನ ಮೊಗಕೆ ಸಿಂಧೂರ ಚುಕ್ಕ
ದೀಪದ ಕಣ್ಣಿಗೆ ಒಂಚೂರು ಕಾಡಿಗೆ
ಇಳಿಜಾರು ಗಲ್ಲದ ಕೊನೆಗೆ ದೃಷ್ಟಿಬೊಟ್ಟು
ನಾಸಿಕದ ಪಾಲು ಹರಳು ಮೂಗುತ್ತಿ
ಶಂಕದ ಕವಾಟಕ್ಕೆ ಹೆಸರಿಲ್ಲದ ಓಲೆ.
ಮುಂಗೈ ಅಂಚಲ್ಲಿ ಏಳೆಂಟು ಬಳೆ
ಇಡಿಸಲಾರದ ತೋಳುಗಳಿಗೆ ತೋಳುಬಂದಿ
ಬಳಸಲಾರದ ಸೊಂಟಕ್ಕೆ ದುಬಾರಿ ಡಾಬು
ಅಸಲಿ ಮೈಗೆ ಅಮ್ಮನ ಮೆಚ್ಚಿನ ಸೀರೆ.
ಹಸ್ತದ ಮೇಲೆ ಮೆಹಂದಿ ರಂಗು
ಅಳತೆಯ ಪಾದಕೆ ಸದ್ದಿಲ್ಲದ ಗೆಜ್ಜೆ.
ತೂಕ ಹಾಕುತ್ತಿದ್ದಾನೆ ಚೆಂದವನ್ನು ಅವಳ ಬದುಕಿನ ಪೂರ್ಣಾವಧಿಯ ನಲ್ಲ
ಎಣಿಸಲಾರದಷ್ಟು ಸೊನ್ನೆಗಳಂಟು ಬೆನ್ನ ಹಿಂದೆ
ಏಕೆ
ಮದುವಣಗಿತ್ತಿಯ ಗೊಡವೆ ಉಳಿದ ಮೂರ್ಖ
ಮೋಹಿತರಿಗೆಲ್ಲ.





0 Comments