ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾತ್ರೆ ಮುಗಿದ ಮಾರನೆಯ ದಿನ…

ಸದಾಶಿವ್ ಸೊರಟೂರು

ಜಾತ್ರೆ ಮುಗಿದ ಮಾರನೆಯ ದಿನ
ವಿಷಣ್ಣ ಮೌನ..

ಒಡೆದ ಬಲೂನಿನಿಂದ ಚಿಮ್ಮಿದ
ಮಾರುವವನ ಉಸಿರು-
ಹೆಸರೆ ಕೇಳದೆ ಕೊಂಡುಹೋದ ಮಂದಿ,
ಮಾರನೆ ದಿನಕ್ಕಿಲ್ಲದ ದಿನಸಿ
ಅದದೆ ಗಾಳಿಯನ್ನ ಮತ್ತೆ ಉಣ್ಣುತ್ತಾನೆ-

ಪೋರ ಬಿಳಿಸಿಕೊಂಡು ಹೋದ ಪೀಪಿ
ಯಾರದೊ ಕಾಲಿಗೆ ಸಿಕ್ಕಿ
ತುಂಡಾಗಿ ರೋಧಿಸುತ್ತಿದೆ..
ತುಳಿದವರ ಪಾದದ ಗೆರೆ ಮೂಡಿ-

ತೇರಿನ ಕೊರಳಿನಿಂದ ಬಿದ್ದ ಹಾರವನ್ನು
ಯಾರೊ ಪೊರಕೆಯಲ್ಲಿ ಗುಡಿಸಿ
ಹಾಕಿ ಎದ್ದು ಹೋಗಿದ್ದಾರೆ..
ನಗರ ಸಭೆ ಗಾಡಿ ತುಂಬ ಸುವಾಸನೆ-

ಆಟಿಕೆಯ ಗಂಟಿನಿಂದ ತಪ್ಪಿಸಿಕೊಂಡ
ಗೊಂಬೆಯೊಂದು
ಒಂಟಿತನಕ್ಕೆ ನಡುಗಿ ಬಿಕ್ಕುತ್ತಿದೆ..
ರಮಿಸುವವರಿಲ್ಲದೆ-

ತಪ್ಪಿಸಿಕೊಂಡು ಕಂಗಾಲಾಗಿದ್ದ ಕಂದನ
ಹೆಜ್ಜೆ ಗುರುತುಗಳು ಅನಾಥವಾಗಿ
ಯಾರದೊ ಪಾದಗಳನು ಹಿಂಬಾಲಿಸಿ
ಹೊರಟಿದೆ-

ಜನರ ಕಾಟದಿಂದ ತಪ್ಪಿಸಿಕೊಂಡು ಬಂದ
ದೇವರು ಗರ್ಭಗುಡಿಯಲ್ಲಿ
ಕಾಲು ಚಾಚಿ ಮೈಚೆಲ್ಲಿದ್ದಾನೆ..
ನಿರಾಳ-
ನಿರಾಭರಣ-

ಯಾವ ನಿದ್ದೆ ಮೆತ್ತಿತ್ತೊ
ಮನೆಮನೆಗಳಲಿ ಯಾಕೊ ಮಾತುಗಳಿಲ್ಲ
ಅಂಗಳದಲಿ ಬಿದ್ದ ಕಸ ಯಾರೂ
ತೊಳೆದಿಲ್ಲ-

ಜಾತ್ರೆ ಮುಗಿದರೂ,
ನಮ್ಮ ನಮ್ಮ ಯಾತ್ರೆಗಳು ಮುಗಿದರೂ
ಅಷ್ಟೆ..

ಬಳಿಕ ಎಲ್ಲವೂ ಸ್ತಂಭ
ಅದೆ ವಿಷಣ್ಣ ಮೌನ..

‍ಲೇಖಕರು Admin

14 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading