ಜಾಡಮಾಲಿಗಳ ಜಗತ್ತು : ನಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಜಾಡಮಾಲಿ ಆಗಬಾರದು..


ಅವತ್ತು ಭಾನುವಾರ ಪೌರಕಾರ್ಮಿಕರ ಸ್ಥಿತಿಗಿತಿ ಕುರಿತ ಖುದ್ದು ಭೇಟಿ ಮಾಡಿ ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ್ದ ನಮ್ಮ ಹಿರಿಯ ಸಂಪಾದಕರಾದ ಆರ್ಪಿ ವೆಂಕಟೇಶ ಮೂರ್ತಿ, ರಾಮಚಂದ್ರಸ್ವಾಮಿ, ವಿಜಯ್ ಕುಮಾರ್ ಮತ್ತು ನಾನು ಮಾದಿಗ ಸಮುದಾಯದ ಪೌರ ಕಾರ್ಮಿಕರೇ ವಾಸಿಸುವ ನಿರ್ಮಲ ನಗರ (ಹಿಂದಿನ ಮಟನ್ ಮಾರ್ಕೆಟ್ ಸರ್ಕಲ್) ಬಳಿ ಇಳಿದೆವು.
ಮಾದಿಗ ಸಮುದಾಯದ ಯುವ ಮುಖಂಡ ದಂಡೋರ ಸೋಮು ಮತ್ತು ಸಮುದಾಯದ ಜನತೆಗೆ ಇದೊಂದು ಅಚ್ಚರಿ ಮತ್ತು ಹೆಮ್ಮೆಯ ವಿಷಯ. ಜಿಲ್ಲೆಯ ಹಿರಿಯ ಸಂಪಾದಕರೊಬ್ಬರು ಮಾದಿಗರ ಮನೆಗೆ ಬರುತ್ತಿದ್ದಾರೆಂದು ಕುತೂಹಲ, ಅಚ್ಚರಿ.
ಅದೊಂದು ಕಿಷ್ಕಿಂದಾ ವಠಾರ. ಒಂದಕ್ಕೊಂದು ಅಂಟಿಕೊಂಡ ಮನೆ. ಹಟ್ಟಿ ಎಂಬುದೆ ಇಲ್ಲ. ಒಂದೊಂದು ಮನೆಯಲ್ಲೂ ಎರಡು ಮೂರು ಕುಟುಂಬಗಳು. ಆದರೂ ಪ್ರೀತಿ, ವಿಶ್ವಾಸಕ್ಕೆ ಇಲ್ಲಿ ಬರವಿಲ್ಲ. ಎಲ್ಲವೂ ಪುಟ್ಟ ಮನೆಗಳು. ಊರನ್ನು ಸ್ವಚ್ಛ ಮಾಡುವವರು ತಮ್ಮ ಮನೆಯನ್ನೂ ಸ್ವಚ್ಛವಾಗಿಟ್ಟುಕೊಂಡಿದ್ದಾರೆ. ನಮಗೆ ಆತ್ಮೀಯ ಸ್ವಾಗತ ತೋರಿದ ಸಮುದಾಯದ ಮುಖಂಡರು ತಮ್ಮನ್ನು ತಾವು ಪರಿಚಯಿಸಿದು. ಈ ನಡುವೆ ನಮಗೆ ಮೊದಲು ಭೇಟಿಯಾಗಿದ್ದು ಮುನಿಯಪ್ಪನನ್ನು. ಈತ ವಿಶಿಷ್ಠ ವ್ಯಕ್ತಿ. ಒಂದು ಅಕ್ಷರ ಬಾರದಿದ್ದರೂ ಪ್ರಜ್ಞಾವಂತ. ತನಗೆ ಬರುವ ಸಂಬಳದಲ್ಲಿ ತನ್ನ 4 ಮಕ್ಕಳನ್ನು ಬಿ.ಕಾಂ, ಬಿಬಿಎಂ, ಓದಿಸುತ್ತಿದ್ದಾನೆ. ನನ್ನ ಸ್ಥಿತಿ ನನ್ನ ಮಕ್ಕಳಿಗೆ ಬರಬಾರದು ಎಂಬುದು ಈತನ ದೊಡ್ಡ ಸವಾಲು. ಅಂತೆಯೇ ಬದುಕುತ್ತಿದ್ದಾರೆ. ಈತನ ಈ 20 ವರ್ಷದ ವೃತ್ತಿಯಲ್ಲಿ ಈತ ಕಂಡುಕೋಂಡ ಸತ್ಯಗಳೇನು..? ನೋವು.. ನಲಿವುಗಳೇನು.. ಸವಾಲುಗಳೇನು ಎಂದು ಕೇಳುತ್ತಾ ಹೋದೆವು.

ಕಲೆ : ಪುಂಡಲೀಕ ಕಲ್ಲಿಗನೂರ

ಮನಸ್ಸಿಗೆ ನೋವಾಗುತ್ತದೆ ಸ್ವಾಮಿ..
ನನ್ನ ಹೆಸರು ಮುನಿಯಪ್ಪ. ಕೆಲಸಕ್ಕೆ ಬಂದಿದ್ದು 1983 ರಲ್ಲಿ. ಒಂದೂ ಕ್ಲಾಸು ಓದಲಿಲ್ಲ. ನನ್ನಪ್ಪ ಅನಕ್ಷರಸ್ಥ. ಬಾಲ್ಯವೆಲ್ಲಾ ಬಡತನದಲ್ಲೇ ಕಳೆದೆವು. ಆ ನೋವು, ಹೋರಾಟವೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನನ್ನ ಮಕ್ಕಳು ನನ್ನಂತೆ ಅನಕ್ಷರಾಗಬಾರದು ಈ ಕಾರಣದಿಂದ ನನ್ನೆಲ್ಲ ಮಕ್ಕಳಿಗೆ ಒಳ್ಳೆ ವಿದ್ಯೆ ಕೊಡಿಸಿದ್ದೇನೆ. ನನ್ನ ಮಕ್ಕಳು ಯಾವತ್ತೂ ಈ ಕೆಲಸ ಮಾಡಕೂಡದು. ನನ್ನ ಕಷ್ಟಗಳ ಒಂದೇ ಒಂದು ಇಂಚು ಗೊತ್ತಾಗಬಾರದು, ಎಲ್ಲರಂತೆ ಬೆಳೆಯಲಿ ಎಂದು ಪ್ರೈವೇಟ್ ಶಾಲೆಗೆ ಸೇರಿಸಿ ಓದಿಸಿದ್ದೇನೆ. 17 ವರ್ಷದಿಂದ ಈ ಕೆಲಸ ಮಾಡುತ್ತಿದ್ದೇನೆ ಸ್ವಾಮಿ. ಈ ಕೆಲಸ ಮಾಡುತ್ತಿದ್ದೆವೆಲ್ಲಾ ಎಂದು ಯೋಚಿಸಿದರೆ ಮನಸ್ಸಿಗೆ ನೋವಾಗುತ್ತದೆ. ನಮ್ಮವರ್ಯಾರು ಬೇರೆ ಕೆಲಸಕ್ಕೆ ಹೋಗಲಿಲ್ಲ. ನಮ್ಮ ಹಣೆಬರಹ ಇದೇ ಕೆಲಸ ಮಾಡಬೇಕು ಎಂದಿತ್ತು ಆದ್ದರಿಂದ ಮಾಡುತ್ತಿದ್ದೇವೆ. ನಮಗೆ ಬೇರೆ ಕೆಲಸವೇ ಇಲ್ಲ.
ನಾವು ಮಾಡುವ ಕೆಲಸದ ಬಗ್ಗೆ ಅಸಹ್ಯ ಎನಿಸುವುದು ನಮ್ಮ ಕೆಲಸದಿಂದಲ್ಲ. ಜನ ನಮ್ಮನ್ನು ಕೀಳು ಮಟ್ಟದಲ್ಲಿ ನೋಡುವಾಗ. ನಮ್ಮನ್ನ ನೋಡುವ ದೃಷ್ಠಿಕೋನ ಇನ್ನೂ ಬದಲಾಗಿಲ್ಲ. ನಮ್ಮನ್ನು ಯಾರ ಮನೆಗೂ ಸೇರಿಸುವುದಿಲ್ಲ. ಮೇಲ್ವರ್ಗದವರು ಕಣ್ನೆತ್ತಿಯೂ ನೋಡುವುದಿಲ್ಲ. ಅವರ ಮನೆಯ ಉಚ್ಚೆ, ಹೇಲು ಕಟ್ಟಿಕೊಂಡಾಗ ಮಾತ್ರ ನಾವು ಬೇಕು. ಕನಿಷ್ಟ ಕರೆದು ಕಾಫಿ ಹೋಗಲಿ ನೀರು ಕೊಡುವುದಿಲ್ಲ. ಕೊಟ್ಟರೂ ಹಿಂಬದಿಯಿಂದ ಕರೆದು ಬೇರೆ ಲೋಟದಲ್ಲಿ ಕೊಡುತ್ತಾರೆ. ಆದರೂ ಸಹಿಸಿಕೊಂಡು ಕೆಲಸ ಮಾಡುತ್ತೇವೆ.
ನಮ್ಮ ಮುಂದೆ ಏನೇ ಇದ್ದರೂ ನಮಗೆ ಅಸಹ್ಯ ಎನಿಸುವುದಿಲ್ಲ ಸ್ವಾಮಿ. ಕಾರಣ ನಮ್ಮ ಕೆಲಸವೇ ಇದು. ಅಭ್ಯಾಸವಾಗಿ ಹೋಗಿದೆ. ಊಟ ಮಾಡುವ ಸಂದರ್ಭದಲ್ಲೂ ನಮಗೆ ಏನು ಅನ್ನಿಸುವುದಿಲ್ಲ. ಹಿಂದೆ ನಮ್ಮ ಬಹುತೇಕ ಜನರು ಕುಡಿತದ ದಾಸರಾಗಿ ಬೇಗನೆ ಜೀವ ಕಳೆದುಕೊಂಡಿದ್ದಾರೆ. ನಾನಂತೂ ಈವರೆಗೆ ಒಂದು ಹನಿ ಕುಡಿದಿಲ್ಲ. ಅದ್ದರಿಂದಲೇ ನನ್ನ ಮಕ್ಕಳನ್ನು ಈ ರೀತಿ ಬೆಳೆಸಲು ಸಾಧ್ಯವಾಗಿದೆ. ನನ್ನಂತೆ ಅವರು ಯಾವತ್ತೂ ಕಸ ಗುಡಿಸುವ, ಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕೆ ಬರಬಾರದು ಇದು ನನ್ನ ಆಸೆ. ಹಿಂದೆಲ್ಲ ನಾವು ಕೈಯ್ಯಿಂದಲೇ ಎಲ್ಲ ಬಾಚುತ್ತಿದ್ದೆವು. ರೋಗಗಳು ಮಾಮೂಲಾಗಿದ್ದವು. ನಮ್ಮನ್ನು ನೋಡಿದರೆ ನಮಗೆ ಅಸಹ್ಯ ಎನಿಸುತ್ತಿತ್ತು. ಆದರೆ ಈಗ ಸಮಾಜ ಬದಲಾಗಿದೆ. ನಾವೂಬ್ಬರು ಬದಲಾಗಿದ್ದೇವೆ. ಒಂದಿಷ್ಟು ಕೈ ಚೀಲ (ಗ್ಲೌಸ್) ಕೊಡುತ್ತಿದ್ದಾರೆ ಸಮಸ್ಯೆ ಇಲ್ಲ. ನಮ್ಮಲ್ಲೂ ಈಗ ಶಿಸ್ತು ಬಂದಿದೆ. ಬೇರೆಯವರನ್ನು ನೋಡಿ ನಮ್ಮ ಜನ ಬದಲಾಗುತ್ತಿದ್ದಾರೆ. ಆದರೆ ಜನ ನಮ್ಮನ್ನು ನೋಡುವ ದೃಷ್ಠಿಕೋನ ಬದಲಾಗಬೇಕು.
ನಾವು ಹಳ್ಳಿಯಲಿದ್ದವರಿಗೆ ಯಾವುದೇ ಕಾರಣಕ್ಕೂ ಹೆಣ್ಣು ಕೊಡುವುದಿಲ್ಲ ಸ್ವಾಮಿ. ನಮ್ಮ ಜಾತಿಯ ಇತಿಹಾಸದಲ್ಲೇ ಇಂತಹುದೊಂದು ಪ್ರಕರಣ ನಡೆದಿಲ್ಲ. ನಮ್ಮಲ್ಲಿ 2 ಅಂತರ್ಜಾತಿ ಮದುವೆ ಆಗಿದೆ. ಒಂದು ಮುಸ್ಲಿಂ ಜತೆ ಮತ್ತೊಂದು ಕ್ರಿಶ್ಚಿಯನ್ ಜತೆ.  ಬೇರೆ ಜಾತಿಯವರ್ಯಾರು ನಮ್ಮ ಜಾತಿಗೆ ಬಂದಿಲ್ಲ. ಬಂದರೆ ಸ್ವಾಗತಿಸುತ್ತೇವೆ. ನಮ್ಮಲ್ಲೆ 22 ಜಾತಿಗಳಿವೆ ಆದರೆ ಈವರೆಗೆ ಒಂದು ಜಾತಿಯಿಂದ ಮತ್ತೊಂದು ಜಾತಿಗೆ ಮದುವೆ ಮಾಡಿಕೊಟ್ಟ ಉದಾಹರಣೆ ಇಲ್ಲ.
ಒಂದೂವರೆ ಲಕ್ಷಕ್ಕೆ 190
ಹಾಸನ ದೊಡ್ಡ ಸಿಟಿ ಸ್ವಾಮಿ. ನಮಗೆ ಕ್ಲೀನ್ ಮಾಡಲು ಆಗುತ್ತಿಲ್ಲ. ಒಂದೂವರೆ ಲಕ್ಷ ಜನ ಹೊರಹಾಕಿದ್ದನ್ನು ನಾವು 190 ಜನ ಕ್ಲೀನ್ ಮಾಡಬೇಕು. ಜನ ಸಾಕಾಗುವುದಿಲ್ಲ. ಒಂದು ಮೂಲೆಗೂ ಆಗುವುದಿಲ್ಲ. ನಮ್ಮ ಜನರಿಗೂ ಹೇಳಿ ಹೇಳಿ ಸಾಕಾಗಿದೆ. ಬಾಯಿ ಬಿಟ್ಟಿ ಹೇಳಿದರೂ ಬುದ್ದಿ ಕಲಿಯುವುದಿಲ್ಲ. ಕನಿಷ್ಠ ಕಸವನ್ನು ಡಬ್ಬಿಗೆ ಹಾಕುವುದಿಲ್ಲ. ಬೇರೆ ದೇಶದಲ್ಲಿ ಅದೇನೋ ಕಾನೂನು ಇದೆಯಂತೆ ಹಾಗೆಯೇ ನಮ್ಮಲ್ಲೂ ರೂಲ್ಸ್ ಆಗಬೇಕು. ಕೆಲವರು ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಇನನೂ ಕೆಲ ಕೌನ್ಸಿಲರ್ಗಳು ನಮ್ಮ ಕೆಲಸ ನೋಡಿ ಕರೆದು ಕಾಫಿ ಕೊಡಿಸುತ್ತಾರೆ. ಆಗಾಗ್ಗೆ ಕೆಲಸದಲ್ಲೂ ತೊಂದರೆ ಆಗುತ್ತಿರುತ್ತದೆ. ಬೆಳಗ್ಗೆ 5 ಗಂಟೆಗೆ ಕೆಲಸ ಶುರುವಾದರೆ ಮದ್ಯಾಹ್ನ 2 ಗಂಟೆವರೆಗೂ ನಮ್ಮ ಕೆಲಸ ನಡೆಯುತ್ತದೆ. ಮಳೆ ಜಾಸ್ತಿ ಬಂದಾಗ ಅಥವಾ ರೋಡ್ ಬ್ಲಾಕ್ ಆದಾಗ ಹೆಚ್ಚು ಹೊರೆ ಬೀಳುತ್ತದೆ. ಮಳೆ ಬಂದು ನೀರು ಬ್ಲಾಕ್ ಆದಾಗ ನಮ್ಮ ಕಣ್ಣೀರು ನಮಗೆ ಗೊತ್ತು.. ಇದನ್ನು ಯಾರಿಗೆ ಹೇಳಿದರೂ ತೀರುವುದಿಲ್ಲ.
ನಮಗೂ ಸೌಲಭ್ಯ ಕೊಡಿ
ನಮ್ಮ ಮಕ್ಕಳು ಎಲ್ಲರಂತೆ ಬದುಕಬೇಕು. ಬೆಂಗಳೂರಿನಲ್ಲಿ ಓದುವ ಮಕ್ಕಳಿಗೆ ಸರ್ಕಾರದಿಂದ ಹಣ ಸಹಾಯ ಮಾಡುತ್ತಾರಂತೆ ಹಾಗೆ ನಮ್ಮ ಮಕ್ಕಳಿಗೂ ಹಣ ಸಹಾಯ ಮಾಡಬೇಕು. ಕಷ್ಟದಲ್ಲಿ ಓದಿಸುತ್ತಿದ್ದೇವೆ. ನಾವು ಮಾಡುವ ಕೆಲಸಕ್ಕೆ ನೀವು ಎಷ್ಟು ಕೊಟ್ಟರೂ ಸಾಲದು. ನಮ್ಮ ಮಕ್ಕಳಿಗಾದರೂ ನೀವು ಸಹಾಯ ಮಾಡಿ. ನಮ್ಮ ಕುಟುಂಬಗಳು ಸಂಕಷ್ಠದಲ್ಲಿವೆ. ಒಂದೊಂದು ವೇಳೆ ತಿನ್ನಲು ಅಕ್ಕಿಗೂ ಗತಿ ಇರುವುದಿಲ್ಲ ಅಂತಹ ಕುಟುಂಬಗಳಿವೆ. ನಾವು ಯಾರಿಗೆ ಹೇಳಿಕೊಳ್ಳೋಣ ದಯವಿಟ್ಟು ದೊಡ್ಡವರು ಈ ಕಡೆ ಗಮನಿಸಿ, ಅಷ್ಟೆ ನನ್ನ ಬೇಡಿಕೆ.
ಇದಿಷ್ಟು ಮುನಿಯಪ್ಪನೊಬ್ಬನ ನೋವು, ಸಂಕಟಗಳ ಮಾತಲ್ಲ 190 ಪೌರ ಕಾರ್ಮಿಕರ ನೋವು ಕೂಡ. ಇವರಲ್ಲಿ ವಿಧ್ಯೆ ಪಡೆಯುತ್ತಿರುವವರೇ ಮೊದಲ ತಲೆಮಾರು ಎಂದರೆ ಊಹಿಸಿಕೊಳ್ಳಿ ಪೌರ ಕಾರ್ಮಿಕರ ಸಂಕಟ ಹೇಗಿದೆ ಎಂದು ಹೀಗಿದ್ದರೂ 4 ಮಕ್ಕಳನ್ನು ಡಿಗ್ರಿ ಓದಿಸಿ ದೊಡ್ಡವನ್ನಾಗಿ ಮಾಡುತ್ತಿರುವ ಮುನಿಯಪ್ಪನ ಸಾಧನೆಯನ್ನು, ಛಲವನ್ನು ಮೆಚ್ಚಲೇಬೇಕು.
(ಮುಂದುವರೆಯುವುದು…)

‍ಲೇಖಕರು avadhi

August 7, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಸುಹಾಸ ಭಜಂತ್ರಿ

    ಹೆತ್ತೂರ್ ಅವರೇ, ಪೌರ ಕಾರ್ಮಿಕರ ಸಂದರ್ಶನ ಚೆನ್ನಾಗಿದೆ. ಪೌರ ಕಾರ್ಮಿಕರ ಸಮಸ್ಯೆಗಳ ಒಂದು ಮುಖವನ್ನು ಕಾಣಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನೊಂದು ಮುಖ ಕೂಡ ಮುಕ್ಯ ಅಲ್ಲವೇ? ದಯವಿಟ್ಟು ಪೌರ ಕಾರ್ಮಿಕರ ಮೇಲಧಿಕಾರಿಗಳ ಸಂದರ್ಶನ ಮಾಡಿ ಅವರಿಗೆ ಪೌರ ಕಾರ್ಮಿಕರ ತಥಾಕಥಿತ ಸಮಸ್ಯೆಗಳ ಬಗ್ಗೆ ನೇರವಾಗಿ ಪ್ರಶ್ನೆ ಕೇಳಿ. ಅವರು ಏನು ಹೇಳುತ್ತಾರೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಬರೆಯಿರಿ. ಇನ್ನು “ಒಂದೂವರೆ ಲಕ್ಷ ಜನ ಹೊರಹಾಕಿದ್ದನ್ನು ನಾವು 190 ಜನ ಕ್ಲೀನ್ ಮಾಡಬೇಕು” ಎಂಬ ಹೇಳಿಕೆ ಚಿಂತನಯೋಗ್ಯವಾಗಿದೆ. ನಗರಗಳ ಜನರು ತ್ಯಾಜ್ಯ ವಸ್ತುಗಳ ಉತ್ಪತ್ತಿಯನ್ನು ಕಡಿಮೆ ಮಾಡುವ ಹಾಗೆ ಅವರಿಗೆ ತಿಳುವಳಿಕೆ ಮೂಡಿಸಬೇಕಾಗಿದೆ. ಅಷ್ಟೇ ಅಲ್ಲ ತ್ಯಾಜ್ಯವಸ್ತು ನಿಯಂತ್ರಣದ ಬಗ್ಗೆ ಸರಕಾರ ಕೂಡ ಮನಸ್ಸು ಮಾಡಬೇಕಾಗಿದೆ.

    ಪ್ರತಿಕ್ರಿಯೆ
    • ಸುಹಾಸ ಭಜಂತ್ರಿ

      ಸರಿ ನಾಗರಾಜ್, ವೈಟ್ ಮಾಡುತ್ತೇನೆ. ನಿಮಗೆ ಒಳ್ಳೆಯದಾಗಲಿ.

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: