ಜರ್ಮನಿಯಿಂದ ವಿವೇಕ ರೈ: ನಾನು ನೀರುಮಜ್ಜಿಗೆ ಮಾಡಿದೆ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ  ರೈ

ಮತ್ತೆ ಮೊನ್ನೆ ಭಾನುವಾರ ಜರ್ಮನಿಯ ವ್ಯೂತ್ಸ್ ಬುರ್ಗ್ ನಗರದಲ್ಲಿ ವಸಂತೋತ್ಸವ.’ಸ್ಪ್ರಿಂಗ್ ಇಂಟರ್ ನ್ಯಾಷನಲ್ ಫೆಸ್ಟಿವಲ್’-ನಗರವನ್ನು ಸೀಳುವ ಮಾಯಿನ್ ನಗರದ ಚಂದದ ಹೂಗಳ ಉದ್ಯಾನವನದಲ್ಲಿ.ಕಳೆದ ವರ್ಷದಂತೆಯೇ ಈ ಬಾರಿಯೂ ಈ ನಗರದ ಅನೇಕ ಅಂತಾರಾಷ್ಟ್ರೀಯ ಸಂಬಂಧದ ದೇಶಗಳ ಸಂಘಗಳು ಮಳಿಗೆಗಳನ್ನು ತೆರೆದಿದ್ದುವು. ಭಾರತ, ಚೀನ, ಘಾನ, ಫಿನ್ಲೆಂಡ್, ಟರ್ಕಿ, ಟಿಬೆಟ್, ಫ್ರಾನ್ಸ್, ಸ್ವೀಡನ್, ಐರ್ಲೆಂಡ್, ಇಟಲಿ, ಸ್ಪೇನ್, ಶ್ರೀಲಂಕ ತಮಿಳು ಸಂಘ, ಅಮೇರಿಕ -ಹೀಗೆ ಜರ್ಮನಿಯೊಂದಿಗಿನ ಇಂತಹ ಸೌಹಾರ್ದ ಸಂಘಗಳು ತಮ್ಮ ಆಹಾರ , ಸಾಂಸ್ಕೃತಿಕ ವಸ್ತುಗಳು, ಹಾಡು ಕುಣಿತ ಚಿತ್ರ ಕಲೆಗಳ ಪ್ರದರ್ಶನಗಳನ್ನು ವಿಶಿಷ್ಟವಾಗಿ ನಡೆಸಿದವು.

ನಮ್ಮ ದೇಶ ಭಾರತವನ್ನು ಪ್ರತಿನಿಧಿಸುವ ಇಂಡೋ ಜರ್ಮನ್ ಸಂಘದ ಮಳಿಗೆ ಎಂದಿನಂತೆ ಭೌತಿಕವಾಗಿ ಮತ್ತು ಜನಪ್ರಿಯತೆಯ ದೃಷ್ಟಿಯಿಂದ ಎತ್ತರದಲ್ಲಿ ಇತ್ತು. ಸಂಘದ ಅಧ್ಯಕ್ಷೆ ಪ್ರೊಫೆಸರ್ ಬ್ರೂಕ್ನರ್ , ಕಾರ್ಯದರ್ಶಿ ಎಂಗೆಲ್ , ಉಪಾಧ್ಯಕ್ಷ ಪ್ರೊ.ಕ್ರೆಫ್ತ್ , ಭಾರತೀಯ ಮೂಲದ ಜರ್ಮನ್ ನಿವಾಸಿ ಸಿನ್ಹ, ಇಂಡಾಲಜಿ ವಿಭಾಗದ ಸಾರಾ, ಸೀನಾ , ಮರಿಯಾ, ಅಕಿ, ನಮ್ಮ ಕಡೆಯಿಂದ ಕೋಕಿಲ , ಇನ್ನು ಅನೇಕರು ಜರ್ಮನ್ ಭಾರತೀಯ ಸಂಘದ ಮಳಿಗೆಯನ್ನು ಆಕರ್ಷಣೆಯ ಕೇಂದ್ರವನ್ನಾಗಿಸಿದರು. ಭಾರತದ ಬಾವುಟ ಮತ್ತು ಪೋಸ್ಟರ್ ಗಳು ರಾರಾಜಿಸಿದವು. ನೆಹರು ಕಾಲದಿಂದ ಇಂದಿನವರೆಗೆ ಭಾರತ ಮತ್ತು ಜರ್ಮನಿ ದೇಶಗಳ ನಡುವಿನ ಸೌಹಾರ್ದ ಸಂಬಂಧವನ್ನು ಸಾರುವ ಚಿತ್ರಗಳು ಗಮನ ಸೆಳೆದವು. ಪೌಲಿನೆ ಭಾರತದ ‘ಹನ್ನ’-ಮದರಂಗಿ ಹಾಕಿದಳು. ಜರ್ಮನ್ ಮಕ್ಕಳು ತಮ್ಮ ಕೈ ಮೈಗಳಿಗೆ ಹಾಕಿಸಿಕೊಳ್ಳುತ್ತಿದ್ದ ಮದರಂಗಿ ಮುದ್ದು ಮಕ್ಕಳನ್ನು ಇನ್ನಷ್ಟು ಚಂದ ಕಾಣಿಸುತ್ತಿತ್ತು.

ಎಂದಿನಂತೆ ಭಾರತೀಯ ಊಟ ಮತ್ತು ತಿಂಡಿ ತಿನಿಸುಗಳಿಗೆ ನಮ್ಮ ಮಳಿಗೆಗೆ ವಿಪರೀತ ನೂಕುನುಗ್ಗಲು ಇತ್ತು. ಅನ್ನ, ಚಪಾತಿ, ಹಪ್ಪಳದೊಂದಿಗೆ ಸುಮಾರು ಹದಿನೈದು ಬಗೆಯ ತರಕಾರಿ ಪದಾರ್ಥ -ಪಲ್ಯಗಳ ರುಚಿಗೆ ಜನರು ಎಷ್ಟು ಮನಸೋತರೆಂದರೆ ಐದು ಗಂಟೆವರೆಗೆ ತೆರೆದಿರಬೇಕಾದ ಮಳಿಗೆಯಲ್ಲಿ ಮೂರುಗಂಟೆಯ ವೇಳೆಗೆ ಎಲ್ಲ ಆಹಾರ ಖಾಲಿಯಾಗಿ , ಪಕ್ಕದ ಶ್ರೀಲಂಕಾ ತಮಿಳು ಸಂಘದ ಮಳಿಗೆಗೆ ಸಂದರ್ಶಕರು ಹೋಗಬೇಕಾಯಿತು. ನಮ್ಮ ಮಳಿಗೆಯ ಎಲ್ಲ ಆಹಾರ ಪದಾರ್ಥಗಳು ಜರ್ಮನರು ಮತ್ತು ನಾವು ನಮ್ಮ ಮನೆಗಳಲ್ಲಿ ತಯಾರಿಸಿಕೊಂಡು ಬಂದವು. ಕಳೆದಬಾರಿ ಕೇಸರಿಬಾತ್ ಮಾಡಿದ್ದ ಕೋಕಿಲ ಈ ಬಾರಿ ಮಂಗಳೂರಿನ ವಿಶೇಷ ಸಿಹಿ ತಿಂಡಿ ಬಾಳೆಹಣ್ಣಿನ ಹಲ್ವ ಮಾಡಿದ್ದಳು. ಹಲ್ವಕ್ಕೆ ಬೇಡಿಕೆ ಹೆಚ್ಚಾಗಿ ಮಧ್ಯಾಹ್ನದ ಒಳಗೆ ಹಲ್ವ  ಖಾಲಿ. ನಾನು ಈಬಾರಿ ಮೊದಲ ಪ್ರಯತ್ನವಾಗಿ ನೀರುಮಜ್ಜಿಗೆ ಮಾಡಿಕೊಂಡುಹೋದೆ. ಮಜ್ಜಿಗೆಗೆ ಶುಂಟಿ , ಕಾಯಿಮೆಣಸು, ನೀರುಳ್ಳಿ, ಕೊತ್ತಂಬರಿ ಸೊಪ್ಪು , ಉಪ್ಪು ಹಾಕಿ ಮಿಶ್ರಣ ಮಾಡಿ, ಬೇವು ಸೊಪ್ಪು ಸಾಸಿವೆ ಒಗ್ಗರಣೆ ಹಾಕಿದ್ದು. ಮಜ್ಜಿಗೆ ಕುಡಿದ ಜರ್ಮನರು ಬಾಯಿ ಚಪ್ಪರಿಸಿಕೊಂಡದ್ದು ಕಂಡು ನನಗೆ ಸಮಾಧಾನ.

ವ್ಯೂತ್ಸ್ ಬುರ್ಗ್ ನಗರದ ಮೇಯರ್ ಗೆಯಾರ್ಗ್ ರೊಸೆನ್ ತಾಲ್ ನಮ್ಮ ಮಳಿಗೆಗೂ ಬಂದರು. ಸಾಮಾನ್ಯರಂತೆ ನಮ್ಮ ಅನ್ನ ಪಲ್ಯ ತೆಗೆದುಕೊಂಡು ಹೊರಗೆಬರುತ್ತಿದ್ದಾಗ ನಾನು ಕಂಡು ಪರಿಚಯ ಮಾಡಿಕೊಂಡು ಮಾತಾಡಿಸಿದೆ. ಭಾರತದ ಬಗ್ಗೆ ತುಂಬಾ ಮೆಚ್ಚುಗೆಯ ಮಾತಾಡಿದ್ದರು. ಚೀನಾಕ್ಕಿಂತ ಹೆಚ್ಚು ಅಭಿವೃದ್ಧಿಶೀಲ ಮತ್ತು ನಿಜವಾದ ಪ್ರಜಾಪ್ರಭುತ್ವದ ದೇಶ ಎಂದು ಕೊಂಡಾಡಿದರು. ಸೋಸಿಯಲಿಸ್ಟ್ ಡೆಮಾಕ್ರಟಿಕ್ ಪಕ್ಷದ ಮೇಯರ್ ಅವರ ಈ ಮಾತು ನಮಗೆ ಸಂಭ್ರಮ , ಅವರು ನಿಂತುಕೊಂಡು ನಮ್ಮ ಊಟ ಸವಿದು ‘ತುಂಬಾ ಚೆನ್ನಾಗಿದೆ’ಎಂದದ್ದು ಸಂತೃಪ್ತಿ.

ಮೇಯರ್ ರೋಸನ್ ತಾಲ್ ಅವರ ಉದ್ಘಾಟನೆ ಮತ್ತು ಅವರ ಒಡನಾಟದ ಮಾತು ಚಿತ್ರಗಳು ಮುಂದಿನ ಬಾರಿ.

 

‍ಲೇಖಕರು G

May 27, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Dr.D.M.Sagar

    Wow,! awesome experience. I had a nice time in Germany too. Thanks for the pics, it’s awesome to see these pretty german babes in traditional Indian dress!, a big WOW!

    ಪ್ರತಿಕ್ರಿಯೆ
  2. Usha P. Rai

    ನೀರು ಮಜ್ಜಿಗೆಯ ರುಚಿ ಬಲ್ಲವರೇ ಬಲ್ಲರು! ನೀವು ಅಲ್ಲಿ ಎಲ್ಲರಿಗೂ ಅದರ ರುಚಿಹಚ್ಚಿಸಿ ಬಿಟ್ಟಿರಿ! ಓದಿ ಖುಷಿಯಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: