ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜರ್ಮನಿಯಲ್ಲಿ ಜೇಡ

 ಜಿ.ಪಿ.ಬಸವರಾಜು

ತಿಗಣಿ, ಸೊಳ್ಳೆ, ಜಿರಲೆಯನ್ನು ನೋಡದ ಜರ್ಮನ್‍

ಮನೆಯಲ್ಲಿ ಸುಖ ನಿದ್ರೆಯಲ್ಲಿ ಮುಳುಗಿದ್ದ ನನ್ನ

ಮಗನಿಗೆ ಒಂದು ರಾತ್ರಿ ಕನಸು: ಅಂತಿಂಥ ಸಾಧಾರಣ

ಜೇಡ ಅಲ್ಲ, ಮಹಾನ್‍ ಅಮೆಜಾನ್‍ ಕಾಡಿನಿಂದಲೇ

ಬಂದಿರಬೇಕು ಅದು,

 

ವಿಷಪೂರಿತ ದೈತ್ಯ, ನಿಧಾನಕ್ಕೆ

ಗೋಡೆಯ ಮೇಲಿಂದ ಕೆಳಗಿಳಿಯುತ್ತಿತ್ತು; ಅದರ ಕಾಲು

ಯಾವುದು, ಕೈ ಯಾವುದು, ಕಣ್ಣುಗಳು ಎಲ್ಲಿವೆ ತಿಳಿಯುವ

ಮೊದಲೇ ಒಂದೊಂದು ಹೆಜ್ಜೆ ಮುಂದಕ್ಕೆ, ಥಟ್ಟನೆ ನುಗ್ಗಿ

ಬಂದರೆ ತಾನೇ ಮೊದಲ ತುತ್ತು; ನೋಡಿದರೆ ಮತ್ತೆ ಮತ್ತೆ

ಬೆಳೆದಂತೆ, ಅದರ ಕಾಲುಗಳು ಇಡೀ ಗೋಡೆಗೆ ಗೋಡೆಯನ್ನೇ

ಹಿಡಿದಂತೆ; ಪಾತಾಳದಾಳಕ್ಕೆ ಬಿದ್ದವನಂತೆ ಮಗ ತಡಬಡಿಸಿದ,

ತಳಮಳಿಸಿದ, ಅದಕ್ಕೊಂದು ಸದ್ಗತಿ ಕಾಣಿಸಬೇಕು, ಇಲ್ಲವಾದರೆ ತನ್ನ

ಕತೆ ಮುಗಿಯಿತೆಂದು ಜಲಜಲ ಬೆವರಿದ; ನಡುಗುತ್ತ ನಡುಗುತ್ತ,

ತನಗೆ ಗೊತ್ತಿದ್ದ ರೀತಿನೀತಿಗಳನೆಲ್ಲ ಚಿಂತಿಸಿದ ಕನಸಿನಲ್ಲೇ:

ಮಹಾನ್‍ ಬೋನೊಂದನ್ನು ತಂದು ಅದಕ್ಕೆ ವರ್ಗಾಯಿಸುವುದು,

ಇಲ್ಲವೇ ಬಲೆಬೀಸಿ ತಿಮಿಂಗಿಲವನ್ನು ಹಿಡಿದಂತೆ ಹಿಡಿಯುವುದು,

ಮತ್ತೆ ಇದ್ದೇ ಇದೆ ಬೆಳಗಿನಲ್ಲಿ ಸಾಹಸದ ಕತೆ, ಭಾರೀ ಪ್ರಚಾರ,

ನೋಡಲು ಜನರ ನೂಕು ನುಗ್ಗಲು, ಟಿವಿ, ಪತ್ರಿಕೆಗಳಲ್ಲಿ ತನ್ನದೇ

ಫೋಟೋ, ಜೇಡನ ಜೊತೆಜೊತೆಗೇ, ಸಾಹಸದ ವರ್ಣನೆ-ಹೀಗೆಲ್ಲ

ಮನಸ್ಸು ಓಡುತ್ತಿರುವಾಗ ಜೇಡ ಕೆಳಗೆ ಇಳಿಯುತ್ತಲೇ ಇತ್ತು;

ಅದನ್ನು ಕಂಡದ್ದೇ ಕಮರಿದವು ಕನಸು ಕಲ್ಪನೆಗಳೆಲ್ಲ; ಆದರೂ

ಅಚಾನಕ್ಕಾಗಿ ಎದುರಾಯ್ತು ಒಂದು ಪ್ರಶ್ನೆ: ಈ ಜೇಡನ ಬೆನ್ನಮೇಲೆ

ಇರಬಹುದೆ ಕೊರೊನಾ ಮಾರಿ ಎನ್ನಿಸಿ ಥಟ್ಟನೆ ಎದ್ದು ಓಡಲು ನೋಡಿದ

 

ಕಾಲೇ ಏಳದು, ದೇಹ ಒಂದಿಂಚೂ ಅಲುಗದು, ತಾನು ಹೆಣ-

ಬಿದ್ದಹಾಗೆ ಬಿದ್ದುಕೊಂಡಿದ್ದೇನಲ್ಲ ಎಂದು ಕಾಲು ಝಾಡಿಸಿ, ಮೈ

ಒದರಿ ಎದ್ದೇಬಿಟ್ಟ; ಕತ್ತಲಲ್ಲಿ ಏನೂ ಕಾಣದೆ ಸ್ವಿಚ್ಚೊತ್ತಿದರೆ, ಖಾಲಿ

ಗೋಡೆ, ಜೇಡನ ಚಿತ್ರವೂ ಇಲ್ಲ, ವಿಚಿತ್ರವಾಯ್ತಲ್ಲಾ ಎಂದು ನೋಡಿದರೆ

ಪಕ್ಕದಲ್ಲಿ ತನ್ನನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಬಿದ್ದುಕೊಂಡ ಆಕೃತಿ

ಜೇಡವೊ, ಮನುಷ್ಯನೊ ಎಂದು ಭಯದಲ್ಲೇ ಮುಸುಕು ಸರಿಸಿದ

‍ಲೇಖಕರು nalike

21 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading