ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ದೇಶಪಾಂಡೆ ಕವಿತೆ- ಜೀವಚಕ್ರ…

ಜಯಶ್ರೀ ದೇಶಪಾಂಡೆ

ಬದುಕು ಮುನ್ನಡೆಯುತ್ತದೆ
ಕೆಟ್ಟ ಫ್ಯೂಸನ್ನು ಮತ್ತೆ ಕೂರಿಸಿದಂತೆ,
ಮನೆಮನದ ಕತ್ತಲಿಗೆ ಬೆಳಕುದುಂಬಿ
ಸಾವ ನೋವಿಗೆ ಮದ್ದು ಹಚ್ಚಿದಂತೆ.

ತತ್ತರಿಸಿದ್ದ ಮನದಂಗಳದಲ್ಲಿ
ಮತ್ತೆ ಜೀವದ ಕೊಂಡಾಟ,
ಸಿಡಿದು ಚಿಮ್ಮಿದ ಶೋಕ ಈಗ
ಆರಿ ತಣಿದ ಬರೀಬೂದಿ,

ಯಾಕೆಂದರೆ ಬದುಕು ಮುನ್ನಡೆಯುತ್ತದೆ…

ಕಳಚಿಳಿದ ಇಳೆಯ ಕೊಂಡಿ‌
ಹೊರಟು ಅವರ ಜೊತೆಯಲ್ಲಿ
ಕಣ್ಣಂಚಿನ ಹನಿಯಿಲ್ಲಿ,
ಮರಣದ ಮುಂದೂರಿ ಮಂಡಿ..
ಜಾತಸ್ಯಹೀ ಧ್ರವೋರ್ಮೃತ್ಯು:

ಬದುಕು ಮುನ್ನಡೆಯುತ್ತದೆ!

ಶೂನ್ಯವನ್ನು ಬೆನ್ನಟ್ಟಿದವರಿಗೂ, ಪರಿಪೂರ್ಣತೆಯ ಹಿಂಬಾಲಿಸಿದವರಿಗೂ,
ಇಟ್ಟ ಹೆಜ್ಜೆಗಳ ಗುರುತೆತ್ತಿ
ತೋರಿಸಿ ನಡೆಯುತ್ತದೆ.

ಪೂರ್ಣಾತ್ ಪೂರ್ಣಮಿದಂ!
ಸಾವಿಗೆ ಬೆನ್ನು ಹಾಕಿ…
ತಾತ್ಕಾಲಿಕ ಅರಿವಳಿಕೆಯ ಸುಖದಲ್ಲಿ,
‘ಮರಳಿ ಬಂದವರಿಲ್ಲ
ವರದಿ ತಂದವರಿಲ್ಲ!’
ಅದಕೇ…
ಬದುಕು ಮುನ್ನಡೆಯುತ್ತದೆ!

‍ಲೇಖಕರು Admin

23 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading