ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ದೇಶಪಾಂಡೆ ಓದಿದ ‘ಮನದಲ್ಲಿ ನಿಂತವರು’

ಜಯಶ್ರೀ ದೇಶಪಾಂಡೆ

*

ಮನದಲ್ಲಿ ನಿಂತವರು

(ಲೇಖನಗಳ ಸಂಗ್ರಹ)

 ಕೆ ಉಷಾ ಪಿ ರೈ ಅವರಿಂದ ಒಡಮೂಡಿದ ಮನದಾಳದ ಚೆನ್ನುಡಿಗಳಿವು...

*

ಕನ್ನಡವನ್ನು ಉಸಿರಾಡಿ ಬರೆದು ಜೀವಿಸಿದ ಲೇಖಕಿಯರಲ್ಲಿ ‘ಉಷಕ್ಕ’ ಎಂದೇ ನಾನು ಕರೆಯುವ ಉಷಾ ಪಿ ರೈ ಅವರ ಪರಿಚಯ ನನಗಾಗಿದ್ದು ಅಖಂಡ ಮೂವತ್ತು ವರ್ಷಗಳ ಹಿಂದೆ! 90 ರ ದಶಕದಲ್ಲಿ… ಕರ್ನಾಟಕ ಲೇಖಕಿಯರ ಸಂಘದ ಮುಂದಾಳತ್ವವನ್ನು ಎರಡು ಅವಧಿಗೆ ವಹಿಸಿಕೊಂಡು ಮುಂದಿನವರು ಸದಾ ಸ್ಮರಿಸುವಂಥ  ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಮಾಡಿದವರು ಉಷಾ. ‘ಬಹುಭಾಷಾ ಸಾಮರಸ್ಯ’ವೆಂಬ ವಿಶಿಷ್ಟ ಸಾಹಿತ್ಯ ಕಾರ್ಯಕ್ರಮದಲ್ಲಿ ಹಲವಾರು ಭಾರತೀಯ ಭಾಷಾ ಸಾಹಿತಿಗಳ ಸಂಗಮವನ್ನು ಬೆಂಗಳೂರಿನಲ್ಲಿ ನಡೆಸಿ ಅದಕ್ಕೆ ಅಂದಿನ ನಮ್ಮ ರಾಜ್ಯಪಾಲರಾದ ರಮಾದೇವಿಯವರನ್ನು‌ ಕರೆಯಿಸಿದ್ದು ಬಹು ಮಹತ್ವದ್ದು.

ಅವರ ಅನುಭವವೇ ಒಂದು ಶರಧಿ! ಜೀವನವೂ ನೋವು ನಲಿವುಗಳ  ಆಗರವಾಗಿದ್ದುದನ್ನು ಅವರೇ  ತಮ್ಮ ಎರಡು ಜೀವಿತ ವೃತ್ತಾಂತಗಳ ಮೂಲಕ ಮನ ಮಿಡಿಯುವಂತೆ (ಯಾವ ನಾಳೆಯೂ ನಮ್ಮದಲ್ಲ, ಒಲ್ಲೆಯೆನ್ನದಿರು ನಾಳೆಗಳ)  ತಿಳಿಸಿಕೊಟ್ಟವರು. ಅಪಘಾತದಲ್ಲಿ ಪುನರ್ಜನ್ಮ ಪಡೆದಾದ ಮೇಲೆ, ಹಿರಿಯ ನಾಗರಿಕ ಪಟ್ಟ ದೊರೆತಾದ ಅನಂತರವೂ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದಕ್ಕೆ ನಿದರ್ಶನವಾಗಿ ವರ್ಣಚಿತ್ರಕಲೆ, ಪೇಂಟಿಂಗ್, ಮಂಡಲ ಆರ್ಟ್ ಇವೆಲ್ಲ ಕೈಗೆತ್ತಿಕೊಂಡು ಅಸಂಖ್ಯ ಕೃತಿಗಳಲ್ಲಿ ತಮ್ಮ ನೈಪುಣ್ಯ ಮೂಡಿಸಿದರು.

ಇಪ್ಪತ್ತೈದು ಅನನ್ಯ ಕೃತಿಗಳನ್ನು ಕನ್ನಡ, ತುಳು ಭಾಷೆಗಳಿಗೆ ಬರೆದಿತ್ತ‌ ಉಷಾ ಅವರಿಗೆ ಸಂದಿರುವ ಗೌರವ, ಸಮ್ಮಾನಗಳ ಕುರಿತು ಲೆಕ್ಕವಿಡಲು ಸಾಕಷ್ಟು ಸಮಯವೇ ಬೇಕೆಂದರೆ ದಿಟ! ಆ ಎತ್ತರಕ್ಕೇರಿರುವ ಉಷಕ್ಕ ನಮ್ಮೆಲ್ಲರ ಹೆಮ್ಮೆ.

ಇಂದು ಜೀವನಸಂಧ್ಯೆಯ ಹೊಸ್ತಿಲಲ್ಲೂ ಲೇಖನಿಯ ನಂಟನ್ನು ಬಿಡದೆ ಹೊರಳಿ ನೋಡಿ ತಮ್ಮ ನೆನಪಿನ, ಸಾಹಚರ್ಯದ, ಕಾರ್ಯಕ್ಷೇತ್ರದ, ಸ್ನೇಹವೃಂದದ, ಒಡನಾಡಿ ಮುದಗೊಂಡ ಅನೇಕಾನೇಕ‌ ದಿಗ್ಗಜರು ಸಾಹಿತಿಗಳು, ಕಲಾವಿದರು, ಆಪ್ತರು…. ಹೀಗೆ ಅಸಂಖ್ಯ ಬಳಗವನ್ನು‌ ತಮ್ಮ ಮನದಲ್ಲಿ ನಿಲ್ಲಿಸಿಕೊಂಡ ಸಂಕೇತವಾಗಿ‌ ರಚಿಸಿದ ಮನನೀಯ ಕೃತಿ‌ ಈಗಷ್ಟೇ ಮುದ್ರಣದ ಮನೆಯಿಂದ ಹೊರಬಂದಿರುವ‌ ಅವರ ಹೊಚ್ಚ ಹೊಸ ಪುಸ್ತಕ “ಮನದಲ್ಲಿ ನಿಂತವರು” ಕಂಡೊಡನೆ ತನ್ನತ್ತ ಸೆಳೆಯುವಷ್ಟು ಶಕ್ತ!

ಅಖಂಡ ನಾನ್ನೂರು ಪುಟಗಳಷ್ಟು‌ ಹಿರಿದಾದ ಈ ಹೊತ್ತಿಗೆಯ ಒಳಪುಟದಲ್ಲಿರುವ ಅಷ್ಟೂ ಅನುಭವ- ಅನಿಸಿಕೆ, ಬರೆಹದ ಭಂಡಾರವನ್ನು ಒಂದು ಲೇಖನದ ಚೌಕಟ್ಟಿನಲ್ಲಿ ಹಿಡಿದಿಡುವುದು ಅಸಾಧ್ಯವೇ ಹೌದಾದರೂ ಸಾಹಿತ್ಯ ಲೋಕವನ್ನು ಉಷಾ ಗಮನಿಸಿ ಮನದೊಳಗೆ ಇಳಿಸಿಕೊಂಡ ಪರಿ ಅಗಾಧವೇ… ಹಾಗಾಗಿ ಇದರಲ್ಲಿ ನನ್ನಳವಿಗೆ ನಿಲುಕುವಷ್ಟನ್ನಿಲ್ಲಿ ಒಪ್ಪಿಸುತ್ತಿರುವೆ.

‘ಇವರು ನಮ್ಮೂರಿನವರು ಎಂಬುದೇ ಹೆಮ್ಮೆ’ ಎಂದಾರಂಭಿಸಿ ಉಷಾ ಅವರು ಕನ್ನಡದ ವಿದ್ವತ್ತಿಗೆ ಗಟ್ಟಿಯಾದ ಅಡಿಪಾಯವನ್ನಿಟ್ಟ ಸನ್ಮಾನ್ಯ ಮಂಜೇಶ್ವರ ಗೋವಿಂದ ಪೈಯವರ ನಮನಸ್ಮರಣದೊಂದಿಗೆ ಮೊದಲುಗೊಳಿಸಿದ ಈ ಅಕ್ಷರಯಾನದಲ್ಲಿ ಬೇಂದ್ರೆ, ಭೈರಪ್ಪ,ಜಿ ವೆಂಕಟಸುಬ್ಬಯ್ಯ, ಯು ಆರ್ ಅನಂತಮೂರ್ತಿ, ವ್ಯಾಸರಾಯ ಬಲ್ಲಾಳರು, ಶತಾಯುಷಿ ನಿಟ್ಟೂರರು, ಕೆಟಿ ಗಟ್ಟಿ ಅವರಂಥ ಇನ್ನೂ ಹಲವಾರು  ದಿಗ್ಗಜರನ್ನು ನೆನೆದು ಅಕ್ಷರಿಸಿದ್ದಾರೆ. 

ಇಂಥ ಹಿರಿಜೀವ ಉಷಕ್ಕ ಇಲ್ಲಿ ನನ್ನಂಥ ‘ಮೊನ್ನೆ ಮೊನ್ನೆಯ’ ಸಾಹಿತ್ಯದ ಕುಡಿಗಳನ್ನೂ ಹೊನ್ನಗರಿಯಿಂದ ಸ್ಪರ್ಶಿಸಿದ್ದಾರೆಂದರೆ ಮನಸ್ಸು ಹಿಗ್ಗಿಹೋಗದೆ ಇರದೆ?! ನನ್ನದೆರಡು ಪುಸ್ತಕಗಳೂ ಇಲ್ಲಿ ಅವರ ಮೆದುಮನದ ಅವಲೋಕನದಲ್ಲಿ ಚೆಂದಗಾಣಿಸಿಕೊಂಡಿವೆ!

”ನೀ ಅರಿಯೆಯೇನು ನೀ

ಉಳಿಸಿಹೋದ ಮೌಲ್ಯಗಳೇ

ನಿನ್ನ ಸ್ಮಾರಕವಾಗುವುದೆಂದು?

ನೀ ಪಡೆದ ಹೆಸರೇ ನಿನ್ನ ಪೀಳಿಗೆಯ

ಆದರ್ಶವಾಗುವುದೆಂದು?

ನೀ ಬರೆವ ಜಮಾ ಖರ್ಚಿನ ಲೆಕ್ಕದ

ಖಾತೆಯಲಿ ನಿನ್ನ ಜೀವನದ 

ಮೌಲ್ಯಮಾಪನವಾಗಲಿ!

ಓ ಪಯಣಿಗ ಇದೇನೂ ಕಷ್ಟವಲ್ಲ,

ಯಾಕೆ ಗೊತ್ತೇನು?

ಈ ಪುಸ್ತಕ ಬರೆಯುವವ 

ಬೇರಾರೂ ಅಲ್ಲ ನೀನೇ!!”

ಈ ಕೃತಿಯೊಳಗಿನ ಹೂರಣದ ಕರ್ತೃಗಳಿಗಿತ್ತ ಈ ಕಾವ್ಯರೂಪೇಣ ಗೌರವ ವಿಭಿನ್ನವೇ ಹೌದು.

ಹೆಚ್ಚುಕಡಿಮೆ ಬೆರಗುಗೊಳಿಸುವಷ್ಟು ದೀರ್ಘ ಕಾಲಮಾನದ ಅವಧಿಯಲ್ಲಿ ‘ಮನದಲ್ಲಿ ನಿಂತವರು’ ‘ ಶ್ರದ್ಧಾಂಜಲಿ’ ಹಾಗೂ ಪುಸ್ತಕ ‘ಅವಲೋಕನ’ ಎಂಬ ಮೂರು ವಿಭಾಗಗಳನ್ನು ಮಾಡಿ ಲೇಖಕರು, ಸಂಪಾದಕರು, ಪ್ರಕಾಶಕರಿಂದ ಕೂಡಿದ, ಹಿರಿದಾದ ತಮ್ಮ ಬಳಗದಲ್ಲಿ ಅಳವಡಿಸಿ ಅವರ ಕುರಿತು ತಾವು ಬರೆದ ವಿಭಿನ್ನ ಬಗೆಯ ಲೇಖನಗಳನ್ನು ಇಲ್ಲಿ ಸೇರಿಸಿದ್ದಾರೆ. ಇವರಲ್ಲಿ ಉಷಾರ ಸಮಕಾಲೀನರು, ಅವರಿಗಿಂತ ಹಿರಿಯರು ಮತ್ತು ಕಿರಿಯರೆಲ್ಲರೂ ಕನ್ನಡಕ್ಕೆ ನೀಡಿದ ಕೊಡುಗೆಗಳು, ಸಂಘ,ಸಂಸ್ಥೆ, ಪತ್ರಿಕೋದ್ಯಮ, ಕಲೆ ಮತ್ತು ಸಾಹಿತ್ಯಕ್ಕೆ ಮೆರಗು ತಂದ ಸಾಧಕರು ಸೇರಿದ್ದಾರೆ. 

ಕನ್ನಡದ ರಥವನ್ನು ಚಾಲನೆಗೈದ ವಿದ್ವತ್ಪೂರ್ಣರನ್ನು ಅಡಿಗಡಿಗೆ ಉಲ್ಲೇ ಖಿಸಿ ನವೋದಯಪೂರ್ವ, ನವೋದಯ, ನವ್ಯ,ನವ್ಯೋತ್ತರ ಹೀಗೆ ಕಾಲಮಾನದ ಚಲನೆಯಲ್ಲಿ ತಾವು ಕಂಡ,ಓದಿದ, ಒಡನಾಡಿದ, ಕೃತಿಪರಿಚಯ, ವಿಮರ್ಶೆ,ಮಾಡಿದ, ಕಲೇಸಂನ ಏಳಿಗೆಯಲ್ಲಿ ಸ್ನೇಹಪೂರ್ಣರಾಗಿ ಜತೆಗೂಡಿದ, ಐವತ್ತೆಂಟು ಅಕ್ಷರಧ್ಯಾನಿಗಳನ್ನು ಕುರಿತು ಈ ಪುಸ್ತಕದಲ್ಲಿ ದಾಖಲಿಸುತ್ತ ಹೋಗಿದ್ದಾರೆ.

ಉಷಾ ಅವರ ಜೀವಕ್ಕೆ ಹತ್ತಿರವಾದ ಬಂಧುಬಳಗದಲ್ಲಿ, ಆತ್ಮೀಯ ಸೋದರಿ ಲತಾ, ಅದ್ಭುತ ಕ್ರಿಯಾಶಕ್ತಿಯ ಚಿಲುಮೆ ಸುಶೀಲಾ ಆಂಟಿ, ದೇವಕಿ ಶೆಟ್ಟಿ, ಉಷಾರ ಕೂಡು ಕುಟುಂಬ‌ದ ಪ್ರತಿನಿಧಿಯಂತಿದ್ದ ಜಗ್ಗುಮಾಮ ಅಥವಾ ಪ್ರಸಿದ್ಧ ಮೃಗಯಾಬೇಟೆಗಳ ಅನುಭವೀ ಸಾಹಿತಿ, ಬೇಟೆಗಾರನಿಂದ ಬರಹಗಾರನಾಗಿ ಬರೆದು ಆ ಕೃತಿಗೆ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದ ಕೆದಂಬಾಡಿ ಜತ್ತಪ್ಪ ರೈ ಯವರ ಕುರಿತಾಗಿನ ಅಭಿಮಾನ, ಗೌತಮಿ‌ ಶೆಟ್ಟಿಯವರ ದುರಂತ ಸಾವು ಇವನ್ನೂ  ನೆನೆಯುವ ಘಟನೆಗಳನ್ನು ವಿವರಿಸಿ ಕಣ್ಣು ಹನಿಗೂಡಿಸಿಕೊಂಡಿದ್ದಾರೆ. 

ಕಲೇಸಂನ ಅಧ್ಯಕ್ಷೆಯಾಗಿ, ಖಜಾಂಚಿಯಾಗಿ, ಕಾರ್ಯದರ್ಶಿಯಾಗಿ ನಡೆದ ಸ್ವಾರಸ್ಯಕರ ಸಂಗತಿಗಳನ್ನು ಹಲವು ನಿದರ್ಶನಗಳೊಂದಿಗೆ ಮೆಲುಕು ಹಾಕಿದ್ದಾರೆ. ಹಿಂದೆ ಆ ಸ್ಥಾನವನ್ನು‌ ಬೆಳಗಿದ ಹಿರಿಯರ ಜೊತೆಗಿನ ಸಂವಾದ, ಕಾರ್ಯಕ್ರಮಗಳು, ಕಲೇಸಂ ಏರಿದ ಎತ್ತರದ ಕುರಿತು ಹೇಳುತ್ತ 1990 ದಶಕದ ಕಲೇಸಂ ಮತ್ತು ತಮ್ಮ ನಡೆ, ಆಗ ಕಲೇಸಂನ ಚುಕ್ಕಾಣಿ ಹಿಡಿದಿದ್ದಂಥ ಪ್ರತಿಭಾನ್ವಿತೆ ಸ್ನೇಹಿತೆಯರು, ಲೇಖಕಿಯರು ಶಶಿಕಲಾ ವೀರಯ್ಯಸ್ವಾಮಿ, ಇಂದಿರಾ ಶಿವಣ್ಣ ಅವರೊಂದಿಗಿನ ಹೆಜ್ಜೆಗಳ ಬಗ್ಗೆ ಆಪ್ತವಾಗಿ ಬಿಡಿಸಿದ್ದಾರೆ.

ಅಂತೆಯೇ ಎಂ ಕೆ  ಇಂದಿರಾ, ಎಚ್ ಎಸ್ ಪಾರ್ವತಿ, ಡಾ.ನಿರುಪಮಾ, ನೀಳಾದೇವಿ, ಅನುಪಮಾ ನಿರಂಜನ, ಇಂದಿರಾ ಶಿವಣ್ಣ, ಕಮಲಾ ಹಂಪನಾ,‌ ಸುಧಾ ಮೂರ್ತಿ, ಪ್ರೇಮಾ ಭಟ್,‌ ಟಿ ಸುನಂದಮ್ಮ, ಡಾ.ಆರ್ ಪೂರ್ಣಿಮಾರಂಥ ಅಪ್ರತಿಮ ಲೇಖಕಿಯರೊಂದಿಗಿನ ಅವರ ಅನುಭವ, ಒಡನಾಟ, ಆ ವ್ಯಕ್ತಿತ್ವಗಳ ಕುರಿತು ತಮ್ಮ ಮೆಚ್ಚುಗೆ ಹೀಗೆ ಅಖಂಡ ನೆನಪಿನ ಬುತ್ತಿ ಬಿಚ್ಚಿ ಉಣಬಡಿಸಿದ್ದಾರೆ!

ಮಹಿಳೆಯ ಮನಸ್ಸಿನ ಒಳಾವರಣಗಳನ್ನು‌ ತ್ರಿವೇಣಿ ತೆರೆದಿಟ್ಟಂತೆ ಆಗ ಇನ್ನಾರಿಗೂ ಸಾಧ್ಯವಿರಲಿಲ್ಲ ಎಂಬ ಅನಿಸಿಕೆಯನ್ನಿತ್ತು ಉಷಾ, ‘ಶರಪಂಜರ’ಕೃತಿಗೆ ಸಾಹಿತ್ಯ ಸೃಷ್ಟಿಯ ಮೂಲವೇ ನೋವು, ಮನೋವಿಜ್ಞಾನ ಅಧ್ಯಯನ ಮಾಡಿದ ತ್ರಿವೇಣಿ ಆ ವಿಶಿಷ್ಟ ಜ್ಞಾನವನ್ನು  ತಮ್ಮ ಕಾದಂಬರಿಯ ಸ್ತ್ರೀ ಪಾತ್ರಗಳ ಮೂಲಕ ಜನಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು ಎಂದಿರುವುದು ನಿಜ. 

ಕುಲಶೇಖರಿಯವರ ಆತ್ಮಕಥನ ಇರುವುದೊಂದೇ ಜೀವ ಇಲ್ಲಿ ‘ನಾನೇನೂ ‘ಅಲ್ಲ’ವೆನ್ನುತ್ತಲೇ ನಾನಾಗುವ ಕಥನವಾಗಿ ಚಿತ್ರಿತವಿದೆ. ‘ಸಂಚರ’ ಸಹಸ್ರಮಾನದ ಲೇಖಕಿಯರ ತುಂಬ ವಿಶಿಷ್ಟ ಅಧ್ಯಯಿತ ಬರಹ, ಭಾರತೀಯರಷ್ಟೇ ಅಲ್ಲದೆ ಅನೇಕ ಯಶಸ್ವೀ ವಿದೇಶೀ ಲೇಖಕಿಯರ ಸಮಗ್ರ ಪರಿಚಯ ಕೊಟ್ಟ ಗೀತಾ ಶೆಣೈ ಅವರ ಕೃತಿ. ಅನೇಕರ ಕೃತಿಗಳ ಕುರಿತು ಅವಲೋಕನವನ್ನೂ ಮಾಡಿದ್ದಾರೆ.

ಅನಂತರದ ವರ್ಷಗಳಲ್ಲಿ ಸಾಹಿತ್ಯವನ್ನು ಲೋಕವನ್ನು ಇಲ್ಲೇ ಬಿಟ್ಟು ತೆರಳಿದ ಅನೇಕ  ಆಪ್ತರಿಗೆ ಶ್ರದ್ಧಾಂಜಲಿಯಲ್ಲಿ ಅವರ ಕೃತಿಗಳನ್ನು ಮನನೀಯವಾಗಿ ವಿಶ್ಲೇಷಿಸುವ ಮೂಲಕ‌ ನಮನ ಸಲ್ಲಿಸಿದ್ದಾರೆ. 

ಇದಲ್ಲದೇ ಕೆಟಿ ಗಟ್ಟಿಯವರ ‘ ಮೋಹ ಚುಂಬಿತ ಮಾಯೆ’ ಕಾದಂಬರಿಯೂ ಸೇರಿದಂತೆ  ಹಲವು ಸಾಹಿತಿಗಳ ಪುಸ್ತಕಗಳಿಗೆ ಉಷಕ್ಕ ಅತ್ಮೀಯವಾಗಿ ಬರೆದು ಕೊಟ್ಟ ಸಶಕ್ತ ಮುನ್ನುಡಿಗಳೂ ಇವೆ. 

ಸರ್ವ ಜನಾಂಗದ ಶಾಂತಿಯ ಭಾಷೆ ಎಸ್ ದಿವಾಕರ್ ಅವರ ಅತ್ಯಂತ ಪ್ರಬುದ್ಧ ಲೇಖನಗಳ ಸಂಗ್ರಹವೆಂದೆಂದು ಅದರೊಳಗಿನ ಪ್ರಖರ ವಸ್ತುಗಳನ್ನು‌ ಚರ್ಚಿಸಿದ್ದಾರೆ.‌ ಜಯರಾಮ ರೈಯವರ ‘ಪರಿವರ್ತನೆ’ ಕಾದಂಬರಿ ಓದಿ ಬಿಡುಗಡೆ ಮಾಡಿ ದಿ ಮಾಂಕ್ ಹೂ ಸೋಲ್ಡ್ ಹಿಸ್ ಫೆರಾರಿ ಯ ಕತೆಯನ್ನು ಹೋಲುವ ಪಡೆ-ಕಳಕೊಳ್ಳು- ಆಧ್ಯಾತ್ಮ ಸಾಧನೆ ಇವುಗಳ ಅಪರಿಮಿತ ಸಾಧ್ಯತೆಗಳ ಕುರಿತು ಮಾತಾಡಿದ್ದಾರೆ.

ವಿನ್ಸೆಂಟ್ ವ್ಯಾನ್ ಗೋ ಅದ್ಭುತ ಕಲಾವಿದ. ತೀವ್ರ ಹೋರಾಟದ ಜೀವನ ನಡೆಸುತ್ತಲೇ ಚಿತ್ರಕಲೆಯನ್ನು ಅಪರಿಮಿತವಾಗಿ ಕಾಮಿಸಿದವನು. Lust for life ಜೀವನಚರಿತ್ರೆ ವಿಜಯಾ ಸುಬ್ಬರಾಜ್ ರ ಲೇಖನಿ‌ ಸೂರ್ಯಕಾಂತಿಯ ಮಡಿಲಲ್ಲಿ ಎಂದು ಅನುವಾದಿಸಿದ ಕುರಿತ ಲೇಖನ‌ ಅನನ್ಯವೆನಿಸುತ್ತದೆ.

ಅನುವಾದ ಸಾಹಿತ್ಯದಲ್ಲಿ ಪ್ರಸಿದ್ಧರಾಗಿದ್ದ ಲೀಲಾ ನಾಯಕ್‌ ಅವರು‌ ಕನ್ನಡದಿಂದ ಹಿಂದಿಗೆ ಅನುವಾದಿಸಿದ ಕಥೆಗಳ ಸಂಕಲನ ‘ಕಥಾಕುಂಜ’ ದಲ್ಲಿ ನನ್ನದೊಂದು‌(ಲಿಫ್ಟ್) ಕಥೆಯೂ ಇದ್ದ ಸಂತಸ ನನಗೆ.

ದಣಿವರಿಯದ ಕಲಿಯಂತೆ ಬರೆಯುತ್ತ ನಡೆದ ಲೇಖಕಿ ಉಷಾ ನಿತ್ಯೋತ್ಸವದ ಮಹಾಕವಿ ಕೆ ಎಸ್ ನಿಸಾರ್ ಅಹ್ಮದ್ ಅವರ ಕಾವ್ಯ, ಅನಕೃ, ‘ಮಹಾಯುದ್ಧ’ ವ್ಯಾಸರಾಯ ಬಲ್ಲಾಳರ ‘ವಾತ್ಸಲ್ಯಪಥ, ಹೆಜ್ಜೆ,’ ಡಾ. ಸುಧಾ ಮೂರ್ತಿಯವರ ‘ಋಣ’ ಕಾದಂಬರಿಗಳನ್ನು ತಮ್ಮ ವಿಚಕ್ಷಣಾ ದೃಷ್ಟಿಕೋನಕ್ಕೆ ಒಳಪಡಿಸಿದ್ದರೆ. ‘ಇದು ಬರಿ ಬೆರಗಲ್ಲವೋ ಅಕ್ಕಾ’ ಎಂದುದ್ಗರಿಸಿ ‘ಮುಡಿ ಮಲ್ಲಿಗೆ, ಆ ಮುಖ ಎಂಬ ಎರಡು ವಿಭಾಗಗಳಲ್ಲಿ ಕಮಲಾ ಹಂಪನಾ ಅವರು ತಮ್ಮ ಸ್ನೇಹಪರಿಧಿಯಲ್ಲಿ ಆಗಮಿಸಿದ್ದ ಕನ್ನಡದ ಮೇರು ಲೇಖಕರ ವಿಶಿಷ್ಟ ವ್ಯಕ್ತಿಚಿತ್ರಣಗಳನ್ನು ಮೂಡಿಸಿದ ಸ್ವಾರಸ್ಯದ ಬೆರಗನ್ನು ಉಷಾ ಹಂಚಿಕೊಂಡಿದ್ದಾರೆ. ತಮಗೆ ಆತ್ಮೀಯ ಅಕ್ಕನೇ ಆದಂತಿದ್ದ ಕಮಲಾರ ಅಪಾರ ಯಶಸ್ಸಿನ ಹಿಂದೆ ಅವರದೇ ಧೈರ್ಯ,ಸ್ಥೈರ್ಯಗಳ ಅಖಂಡ ಪಾಲು‌!

ಉಷಾ ಅವರೇ ಒಂದೆಡೆ ಉಲ್ಲೇಖಿಸಿದಂತೆ

ಡಿವಿಜಿಯವರ ಲೇಖನಿಯಿಂದಿಳಿದ,

“ಗೌರವಿಸು ಜೀವನವ

ಗೌರವಿಸು ಚೇತನವ

ಆರದೋ ಜಗವೆಂದು ಭೇದವೆಣಿಸದಿರು

ಹೋರುವುದೇ ಜೀವನಸಮೃದ್ಧಿಗೋಸುಗ

ನಿನಗೆ ದಾರಿಯಾತ್ಮೋನ್ನತಿಗೆ ಮಂಕುತಿಮ್ಮ”   

ಕಗ್ಗದ ಈ ಸಾಲುಗಳ ಪ್ರತಿಸ್ವಾದದಂತೆ 

ಅವರ ಮನದಲ್ಲಿ ನಿಂತ ಮಹನೀಯರು, ಜ್ಞಾನವೃದ್ಧರು, ಅನುಪಮ ಸಾಹಿತಿಗಳ ಕುರಿತು‌ ಇವೇ ಅಮೃತವಾಕ್ಕುಗಳನ್ನು ತಮ್ಮ ಬರಹಗಳ ಮೂಲಕ ಸಲ್ಲಿಸಿ ಗೌರವಿಸಿರುವ ಉಷಾ ಪಿ ರೈ ಅವರ ಪುಸ್ತಕ‌ ಕನ್ನಡದಲ್ಲೇ ಒಂದು ವಿಶಿಷ್ಟ ಪ್ರಕಾರದ ಕೃತಿಯಾಗಿ ನವರಸಗಳನ್ನೂ ವ್ಯಂಜನಗಳನ್ನೂ ಹದವಾಗಿ ಸೇರಿಸಿದ ಹಿತಪಾಕದಂತೆ ನಮ್ಮ ಬಳಿ ಬಂದಿದೆ. ಉಷಾ ರೈ ಅವರ ಬದುಕಿನಲ್ಲಿ ಸಾಹಿತ್ಯವು ಅದಮ್ಯ ಚೇತನವಾಗಿ ಅವರ ಈಗಿನ ಇಳಿವಯದಲ್ಲೂ ತನ್ನತ್ತ ಸೆಳೆದುದಕ್ಕೆ ಸಾಕ್ಷಿ ಈ ಪುಸ್ತಕ. 

ದಿಗಂತದಗಲದಷ್ಟು ವಸ್ತುವಿರುವ  ‘ಮನದಲ್ಲಿ ನಿಂತವರು’ ಓದಿದವರ ಮನದಲ್ಲೂ ನಿಲ್ಲುವುದು ಖಚಿತ!

‍ಲೇಖಕರು avadhi

12 February, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading