ಜಯಶ್ರೀ ಕದ್ರಿ ಅವರ ‘ಬೆಳಕು ಬಳ್ಳಿ’

ಸ್ಮಿತಾ ಅಮೃತರಾಜ್, ಸಂಪಾಜೆ

ಬರಹಗಾರ್ತಿ ಜಯಶ್ರೀ ಬಿ. ಕದ್ರಿ ವೃತ್ತಿಯಲ್ಲಿ ಆಂಗ್ಲಭಾಷಾ ಉಪನ್ಯಾಸಕಿ. ಅವರು ಬರವಣಿಗೆಗೆ ನೆಚ್ಚಿಕೊಂಡದ್ದು ಕನ್ನಡವನ್ನು.ಇಂಗ್ಲೀಷಿನಷ್ಟೇ ಕನ್ನಡ ಭಾಷೆಯಲ್ಲಿ ಹಿಡಿತವಿರುವ ಅವರ ಬರಹಗಳನ್ನು ಓದುವುದೆಂದರೆ, ಶುದ್ಧವಾದ ಗಾಳಿಯನ್ನು ಉಸಿರೆಳೆದುಕೊಂಡು, ಪುಕ್ಕಟೆಯಾಗಿ ಮತ್ತಷ್ಟು ಜೀವ ಚೈತನ್ಯವನ್ನು  ಆವಾಹಿಸಿಕೊಂಡಂತೆ, ಹಾಗೇ ನೋಡಿದರೆ ಲೇಖಕಿ ಜಯಶ್ರೀಯವರ ಬರಹ ಮತ್ತು ವ್ಯಕ್ಟಿತ್ವ ಬೇರೆ ಬೇರೆಯಲ್ಲ ಅಂತ ಅನ್ನಿಸುತ್ತದೆ.

ಅವರ ಬರಹಗಳು ಪ್ರಾಮಾಣಿಕವಾಗಿ ತಾನು ಕಂಡುಂಡದ್ದನ್ನೇ ಬಿತ್ತರಪಡಿಸುತ್ತವೆ. ಈಗ ನಾನು ಹೇಳ ಹೊರಟಿರುವುದು ಇತ್ತೀಚೆಗಷ್ಟೇ ನಾನು ಓದಿದ ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಯನ್ನು ಕಟ್ಟಿಕೊಡುವ ಅವರ ಬರಹಗಳ ಗುಚ್ಚ ’ ಬೆಳಕು ಬಳ್ಳಿ ’ ಯೆಂಬ ಕೃತಿ.

ಲೇಖಕಿ ಕದ್ರಿಯವರ ಓದಿನ ವಿಸ್ತಾರ ಅಗಾಧವಾದದ್ದು. ಜೊತೆಗೆ ಬದುಕಿನ ಎಲ್ಲಾ ಸ್ತರದವರ  ಭಾವನೆಗಳನ್ನು, ಅವರ ಬದುಕಿನ ಜಂಜಡವನ್ನು, ಅವರೊಳಗಿನ ಏಕತಾನತೆಯನ್ನು ಸೂಕ್ಷ್ಮವಾಗಿ  ಗ್ರಹಿಸಿ ಬರೆಯಬಲ್ಲರು.ಇದು ಅವರ ಪುಸ್ತಕವನ್ನು ಓದುತ್ತಾ ಹೋದಂತೆ ನನ್ನ ಅರಿವಿಗೆ ಬಂದ ಸಂಗತಿ.  ಇಡೀ ಸಂಕಲನದಲ್ಲಿ ೫೦ಕ್ಕೂ ಹೆಚ್ಚಿನ ಬರಹಗಳಿವೆ. ಅತ್ತ ಲೇಖನದಂತೆಯೂ ಇತ್ತ ಲಲಿತ ಪ್ರಬಂಧದಂತೆಯೂ  ಓದಿಸಿಕೊಂಡು ಹೋಗುವ ಇಲ್ಲಿಯ  ಸುಲಲಿತ ಬರಹಗಳು ಜೀವನ ಪ್ರೀತಿಗೆ ಹಿಡಿದ ಕೈಗನ್ನಡಿಯಂತಿವೆ.

ಇಲ್ಲಿಯ  ಬಹುತೇಕ ಹೆಚ್ಚಿನ ಬರಹಗಳು ಮಹಿಳಾಪರ ಚಿಂತನೆಯನ್ನೇ ಕಟ್ಟಿ ಕೊಡುತ್ತವೆ. ಹಾಗೆಂದು ಇಲ್ಲಿಯ ಬರಹಗಳಲ್ಲಿ ಯಾವುದೇ ಅಬ್ಬರದ, ಆವೇಶಗಳ ತೀರ್ಮಾನಗಳು, ವಾದ ,ತರ್ಕ,ಮಂಡನೆಗಳಿಲ್ಲ. ಹೇಳಬೇಕಾದದ್ದನ್ನು ತಣ್ಣಗೆ ಮೆಲುವಾಗಿ ಹೇಳಿ ಮುಗಿಸುತ್ತಾರೆ. ಸ್ವತ; ತಾನು ಉಪನ್ಯಾಸಕಿಯಾಗಿರುವ ಕಾರಣ, ವಿದ್ಯಾರ್ಥಿಗಳೊಂದಿಗೆ ಬೆರೆಯುತ್ತಾ ಅವರ ಬದುಕಿನ ಭಾಗವಾದ ಕಾರಣ, ಅದರಲ್ಲೂ ಹೆಣ್ಣುಮಕ್ಕಳ ಒಡನಾಟ ಹೆಚ್ಚಾಗಿರುವುದರಿಂದಲೇ ಅವರಿಗೆ ಮಹಿಳೆಯರ ಅಂತರಂಗದ ದ್ವನಿಗಳು  ಬೇಗ ಅರ್ಥವಾಗುತ್ತವೆ.  ಒಳ್ಳೆಯ ಉಪನ್ಯಾಸಕಿಯ ಲಕ್ಷಣ ಕೂಡ ಇದೇ ಅಲ್ಲವೇ?.ಒಬ್ಬರ ಅಂತರಂಗದ ತಾಕಲಾಟಗಳನ್ನು ಗುರುತಿಸುವುದು, ಅವರ ನೋವಿಗೆ ದನಿಯಾಗುವುದು ಸಣ್ಣ ಸಂಗತಿಯೇನಲ್ಲ.

ಇಲ್ಲಿಯ ಬರಹಗಳ ವೈಶಿಷ್ಟ್ಯವೇನೆಂದರೆ, ಲೇಖಕಿ ಅಡುಗೆ ಮನೆಯಿಂದ ಹಿಡಿದು, ಕೃಷಿ, ಉದ್ಯೋಗ, ಸಿನೇಮಾ,ಬಾನುಲಿ, ಜಾಹಿರಾತು, ಬ್ಲಾಗ್, ಹೀಗೆ ತಮ್ಮ ಮುಂದೆ ಕಾಣುವ ವೈವಿಧ್ಯಮಯ ಪ್ರಪಂಚದ ಬಗ್ಗೆ ಅವರಿಗೆ ಅತೀವ ಕುತೂಹಲವಿದೆ.  ಬಡತನ , ನೋವು, ಅಪಮಾನಗಳನ್ನು ಮೀರಿ ಬೆಳೆದು ನಿಂತವರನ್ನು ಉದಾಹರಿಸುತ್ತಾ ಅಲ್ಲಲ್ಲಿ ಉಲ್ಲೇಖಿಸುವುದರ ಹಿಂದೆ ಜೀವನ ಇರುವುದೇ  ಗೆಲುವುದಕ್ಕೆ , ಈಸಿ ಜಯಿಸುವುದ್ದಕ್ಕೆ ಅನ್ನುವ ಸಂದೇಶವನ್ನು ರವಾನಿಸುತ್ತವೆ. 

ಹೆಣ್ಮಕ್ಕಳಿಗೆ ನಡು ವಯಸ್ಸೆಂಬುದು ಸಂಕ್ರಮಣದ ಕಾಲಘಟ್ಟ. ಒಂದು ಸುತ್ತಿನ ಜವಾಬ್ಧಾರಿಯಿಂದ ನುಣುಚಿಕೊಂಡು ಹೊಸ ಪ್ರಪಂಚಕ್ಕೆ ಅವರು ತೆರೆದುಕೊಳ್ಳುವುದೇ ಆಗ.  ಅಲ್ಲಿಯ ತನಕ ಆಕೆ ಮೂಲೆಗುಂಪಾಗಿಯೇ ಉಳಿಯಬೇಕಾದುದರ ಹಿಂದಿನ ಕಾರಣವನ್ನು ಅವರು ಯಾವುದೇ ಮುಚ್ಚು ಮರೆಯಿಲ್ಲದೆ ಎಲ್ಲ ಮಹಿಳೆಯರ ಧ್ವನಿಯಂತೆ ಉತ್ತರಿಸುತ್ತಾರೆ.  ಸಾಧನಾಶೀಲ ಹೆಣ್ಣು ಮಕ್ಕಳಿರಬಹುದು, ಅಥವಾ  ತಾನೇನು ಮಾಡಲಾಗಲೇ ಇಲ್ಲ ಅನ್ನುವ ಹೆಣ್ಣುಮಕ್ಕಳ ಹಳಹಳಿಕೆಯಿರಬಹುದು.

ಎಲ್ಲದ್ದಕ್ಕೂ ಅವರು ಸಕಾರಣವನ್ನು ಕೊಡುತ್ತಾ ಹೋಗಬಲ್ಲರು.  ಪ್ರತೀ ಬರಹದಲ್ಲೂ  ಬದುಕಿನಲ್ಲಿ ಬಂದೆರಗುವ  ನೋವು, ನಲಿವು, ಸೋಲು, ಗೆಲುವು ಎಲ್ಲವನ್ನೂ ಸಮಚಿತ್ತದ, ಸಮಭಾವದಲಿ , ಸವಾಲಾಗಿ  ತೆಗೆದುಕೊಳ್ಳಬೇಕೆಂಬ ಛಾತಿ ಇರಬೇಕೆಂಬ ಸಾರವನ್ನು ಇಲ್ಲಿಯ ಬರಹಗಳು ಪ್ರತಿ ಪಾದಿಸುತ್ತವೆ.

ಒಬ್ಬ ವಿಶ್ವವಿದ್ಯಾನಿಲಯದ  ಉಪನ್ಯಾಸಕಿಯಾಗಿಯೂ ಅವರಿಗೆ  ಗೃಹಿಣಿ ಮತ್ತು ಕೃಷಿಕ ಮಹಿಳೆಯ ಕೆಲಸಗಳೂ ಕೂಡ ಅಷ್ಟೇ ಮಹತ್ತದ್ದು ಅಂತ ಅನ್ನಿಸುತ್ತದೆ. ಅದಕ್ಕೇ ಅವರಿಗೆ ಆಟೋ ಚಾಲಕನ ಒಳಗುದಿಯನ್ನು ಅಷ್ಟೇ ತಾಳ್ಮೆಯಿಂದ ಕೇಳುವ ವ್ಯವಧಾನವಿದೆ. ಬದುಕು ಒಂದಕ್ಕೊಂದು ಪೂರಕವಾಗಿ ಸಹ್ಯವಾಗಲು ಯಾವ ಕೆಲಸವೂ ಮೇಲಲ್ಲ; ಮತ್ತು ಕೀಳೂ ಅಲ್ಲ ಅನ್ನುವುದು ಇಲ್ಲಿಯ ಬರಹಗಳ ಧೋರಣೆ. 

ಅಡುಗೆಯ ಕುರಿತು ಎಷ್ಟು ಬರಹ ಬರೆದರೂ ಎಲ್ಲೂ ಪುನರಾವರ್ತನೆಯಾಗುವುದಿಲ್ಲ.  ಪ್ರತೀ ಬರಹದಲ್ಲೂ ಹೊಸತನವಿದೆ, ಹೊಸ ಒಳನೋಟವಿದೆ. ವಲಸೆ ಕಾರ್ಮಿಕ ಮಹಿಳೆಯೊಬ್ಬಳು ಸಿಕ್ಕ ಜಾಗದಲ್ಲಿಯೇ ಸ್ಟವ್ ಉರಿಸಿ ಮಾಡುವ ಅಡುಗೆಯೂ ಮುಖ್ಯ ಆಗುವುದರ ಹಿಂದೆ ಅಡುಗೆಯೊಂದಿಗೆ ಬೆಸೆದುಕೊಂಡ ವಿಶ್ವವ್ಯಾಪಿ ಹಸಿವು ಎಲ್ಲರಿಗೂ ಒಂದೇ ಅನ್ನುವುದು ಮನದಟ್ಟಾಗುತ್ತದೆ. ವಸ್ತುವಿನ ರಿಪೇರಿ ಬದುಕಿಗೂ ಹೇಗೆ ಅನ್ವಯವಾಗಬಲ್ಲದು ಅನ್ನುವುದರಿಂದ ಹಿಡಿದು,ಕೊತ್ತಂಬರಿ ಸೊಪ್ಪು ಮಾರುವ ಮಹಿಳೆಯವರೆಗೊ ಚಾಚಿಕೊಳ್ಳುವ ಇಲ್ಲಿಯ ಬರಹಗಳನ್ನು  ಓದಿದಾಗ  ಲೇಖಕಿಗೆ  ಬದುಕಿನ ಕುರಿತಾಗಿ ಇರುವ ಅದಮ್ಯ ಕಾಳಜಿ ಮತ್ತು ಪ್ರೀತಿ ವ್ಯಕ್ತವಾಗುತ್ತದೆ..

ಸರ್ವೇ ಜನ; ಸುಖಿನೋ ಭವಂತು ಇಲ್ಲಿಯ ಬರಹಗಳ ಒಳ ಹರಿವು. ಸಮಸಮಾಜದ ನಿರ್ಮಾಣದ ಇಲ್ಲಿಯ ಬರಹಗಳ ಆಶಯ.  ಕಾಲೇಜಿನಲ್ಲಿ  ನಿದ್ದೆ  ತೂಗುವ ಮಕ್ಕಳಿಗೆ ಗದರುವ ಶಿಕ್ಷಕರು ನಮಗೂ ಕಾಣ ಸಿಗುತ್ತಾರೆ.  ಆದರೆ ಯಾಕೆ ಮಕ್ಕಳು ನಿದ್ದೆ ತೂಗುತ್ತಾರೆ ಅನ್ನುವ ಹಿಂದಿನ ಸತ್ಯವನ್ನು  ಕಂಡು ಹಿಡಿಯುವ ಶಿಕ್ಷಕಿಯರು ನಮಗೆ ಬೇಕಾಗಿದ್ದಾರೆ . ಇಲ್ಲಿ ಬರಹಗಾರ್ತಿ ಉಪನ್ಯಾಸಕಿಗೆ  ಆ ಅಂತ;ಕರಣ ಇದೆ. ಮನುಷ್ಯಪರ ಸಂವೇದನೆಗಳನ್ನು ಅರ್ಥಮಾಡಿಕೊಂಡವರಿಗಷ್ಟೇ ಯಾವುದೇ ಪ್ರತಿಕೂಲ ಸಂಗತಿಯ ಹಿಂದಿನ ಸತ್ಯ ಗೋಚರವಾಗಲು ಸಾಧ್ಯ. 

ಅಂತಹ ಸಂವೇದನೆಯನ್ನು ಇಲ್ಲಿಯ ಬರಹಗಳಲ್ಲಿ ಕಾಣಬಹುದು. ಹುಟ್ಟಿನಿಂದ ಯಾವ ಮಕ್ಕಳೂ ಕೆಟ್ಟವರಲ್ಲ ಅನ್ನುವ ಚಿಂತನೆಯನ್ನು  ಕಟ್ಟಿಕೊಡುವಾಗ, ವಿನಾಕಾರಣ ಕೆಟ್ಟವರು ಅನ್ನುವ ಹಣೆಪಟ್ಟಿ ಕಟ್ಟಿಕೊಂಡ ಮಕ್ಕಳಿಗೆ ಒದಗಿದ ಕೆಲವೊಂದು ಸಂದರ್ಭ ಸನ್ನಿವೇಶಗಳು ಕತೆಯಂತೆ ತೆರೆದುಕೊಳ್ಳುತ್ತಾ ನಮ್ಮನ್ನು ಅತ್ಮನಿವೇದನೆಗೆ ಹಚ್ಚಿಸಿಕೊಳ್ಳುತ್ತವೆ.  ಧನಾತ್ಮಕ ಭಾವವನ್ನು ಸ್ಫುರಿಸುತ್ತಲೇ ನಮ್ಮೊಳಗೊಂದು ಶಕ್ತಿ ಸಂಚಯವೊಂದನ್ನು ಪ್ರವಹಿಸುವಂತೆ ಮಾಡುವುದೇ ಇಲ್ಲಿಯ ಬರಹಗಳ ಉದ್ದೇಶ.

 ಸುಮಾ ಪ್ರಕಾಶನ ಹೊರತಂದ  ಈ ’ ಬೆಳಕು ಬಳ್ಳಿ ’ ಯೆಂಬ  ಮೌಲಿಕವಾದ ಬರಹದ ಗುಚ್ಚ, ಎಲ್ಲಾ ವಯಸ್ಸಿನವರಿಗೂ ಓದಿಸಿಕೊಂಡು ಹೋಗುತ್ತದೆ.  ಮನ ಮುಟ್ಟುವಂತೆ ಬರೆಯುವ ಶೈಲಿ ಲೇಖಕಿಗೆ ಸಿದ್ಧಿಸಿದೆ.  ಈ ಪುಸ್ತಕವನ್ನು ಓದುತ್ತಾ ಇದ್ದಂತೆ ಓದುಗ ಒಂದು ರೀತಿಯಲ್ಲಿ ನಿರಾಳವಾಗಬಲ್ಲ.  ಬದುಕಿನ ಕುರಿತಾದ ಹೊಸತೊಂದು ದೃಷ್ಟಿಕೋನವನ್ನು ಇಲ್ಲಿಯ ಬರಹಗಳಲ್ಲಿ ಕಾಣಬಹುದು.

ನಿಜ ಹೇಳಬೇಕೆಂದರೆ ಒಂದು ಆಪ್ತ ಸಮಾಲೋಚನೆಯ ಕ್ಷಣ ಇಲ್ಲಿ ನಮ್ಮದಾಗಬಹುದು. ಇವತ್ತಿನ ಧಾವಂತದ ಬದುಕಿನಲ್ಲಿ  ಸದಾ ಒತ್ತಡದಿಂದ  ನಲುಗುತ್ತಿರುವ ಬಹುತೇಕರಿಗೆ ಇದು ಸಂಜೀವಿನಿಯಂತೆ ಕೆಲಸ ಮಾಡಬಲ್ಲವು. ಮಾನವೀತೆಯನ್ನು ಕಲಿಸುವ, ಬದುಕಿನ ಸಂತಸದ ಗಳಿಗೆಗಳನ್ನಷ್ಟೇ ಎಣಿಸಲು ಹೇಳಿಕೊಡುವಂತಹ ಇಂತಹ ಚೇತೋಹಾರಿ ಪುಸ್ತಕ ಇವತ್ತಿನ ಅಗತ್ಯ. ಒಳ್ಳೆಯ ಪುಸ್ತಕಕ್ಕಾಗಿ ಜಯಶ್ರೀ ಬಿ. ಕದ್ರಿಯವರಿಗೆ ಅಭಿನಂದನೆಗಳು.

‍ಲೇಖಕರು Avadhi

September 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Vasundhara k m

    ಬೆಳಕು ಬಳ್ಳಿ ಕುರಿತು ಚೆಂದ ಬರೆದಿದಿದೀರಿ ಸ್ಮಿತಾ. ಜಯಶ್ರೀ ಕದ್ರಿ ಹಾಗೂ ನಿಮಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  2. Vasundhara k m

    ಚೆನ್ನಾಗಿ ಪುಸ್ತಕ ಪರಿಚಯ ಮಾಡಿರುವಿರಿ ಸ್ಮಿತಾ.. ಜಯಶ್ರೀ ಕದ್ರಿ ಹಾಗೂ ನಿಮಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  3. Jayashree B Kadri

    ಧನ್ಯವಾದಗಳು ಸ್ಮಿತಾ, ವಸುಂಧರಾ ಮೇಡಂ. ಅವಧಿ ಬಳಗಕ್ಕೆ ಕೃತಜ್ನತೆಗಳು.-ಜಯಶ್ರೀ ಬಿ ಕದ್ರಿ

    ಪ್ರತಿಕ್ರಿಯೆ
  4. Shyamala Madhav

    ಅಭಿನಂದನೆ, ಜಯಶ್ರೀ. ಓದಬೇಕಿದೆ. . ಚೆನ್ನಾಗಿ ಪರಿಚಯಿಸಿದ್ದಾರೆ, ಲೇಖಕಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: