ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಲಕ್ಷ್ಮೀ ಕೋಳಗುಂದ ಹೊಸ ಕವಿತೆ ‘ಮಿಣಾರಿ ಬೆಕ್ಕು’

ಜಯಲಕ್ಷ್ಮೀ ಎನ್ ಎಸ್ ಕೋಳಗುಂದ

ಮಿಕಿ ಮಿಕಿ ಕಣ್ಣಿನ ಮಿಣಾರಿ ಬೆಕ್ಕು

ಸಂತೆಗೆ ಹೊರಟಿತ್ತು.

ಪರ್ಸಿನ ತುಂಬಾ ರೊಕ್ಕವ ತುಂಬಿ

ಗತ್ತಲಿ ನಡೆದಿತ್ತು.

ನೆರಿಗೆಯ ಚಿಮ್ಮಿ ಸರ ಸರ ನಡೆದು

ಮಾರ್ಕೆಟ್ ಹೊಕ್ಕಿತ್ತು.

ಬ್ಯಾಗಿನ ತುಂಬಾ ತರಕಾರಿಗಳ

ಕೊಳ್ಳುವೆನೆಂದಿತ್ತು.

ಕೆಂಪನೆ ಹೊಳೆವ ಟೊಮ್ಯಾಟೊ ಹಣ್ಣಿಗೆ

ಬಹಳ ಬೆಲೆಯಿತ್ತು.

ಮಿರಿ ಮಿರಿ ಮಿಂಚುವ ಮೆಣಸಿನಕಾಯಿ

ದುಬಾರಿಯಾಗಿತ್ತು.

ಬೆಂಡೇಕಾಯಿಯ ಬೆಲೆಯನು ಕೇಳಿ

ಬೆವರೇ ಇಳಿದಿತ್ತು.

ಬದನೆಕಾಯಿ ಬಡವರಿಗಲ್ಲ

ಎನ್ನುತ ಸಾಗಿತ್ತು.

ಮೂಲಂಗಿಯನು ಮೂಸಲೆಯಿಲ್ಲಾ

ಮುಂದಕೆ ನಡೆದಿತ್ತು.

ಆಲೂಗಡ್ಡೆ ಅಯ್ಯೋ ಶಿವನೇ

ಆಗಸದಲ್ಲಿತ್ತು. 

ಹಾಗಲಕಾಯಿ ಆಹಾ! ತುಟ್ಟಿ

ಬೇಡವೆ ಬೇಡ ಎಂದಿತ್ತು.

ಚೌತೇಕಾಯಿಗೆ ಚೌಕಾಸಿ ಮಾಡಿ

ಸೋತೇ ಹೋಗಿತ್ತು.

ಪಡುವಲಕಾಯಿಗೆ ಪರ್ಸಿನ ರೊಕ್ಕ

ಸಾಲದು ಎನಿಸಿತ್ತು.

‘ನುಗ್ಗೆಯ ಬೆಲೆಯು ತಗ್ಗುವುದೆಂದೋ’

ಚಿಂತೆಯ ಮಾಡಿತ್ತು.

‘ಸೊಪ್ಪಿನ ಧಾರಣೆ ಸಸ್ತಾ ಅಲ್ಲ’

ಸಪ್ಪಗೆ ಹೇಳಿತ್ತು..

ಹಣ್ಣಿನ ನೋಟ ಕಣ್ಣಿಗೆ ಮಾತ್ರ

ಕೊಳ್ಳಲು ಹೆದರಿತ್ತು.

ತರಕಾರಿಗಳ ಏರಿದ ಬೆಲೆಗೆ

ಏದುಸಿರಿಕ್ಕಿತ್ತು.

ಸಂತೆಯನೆಲ್ಲಾ ಸುತ್ತೀ ಸುಳಿದೂ

ಸುಸ್ತೇ ಹೊಡೆದಿತ್ತು.

ಖಾಲೀ ಚೀಲವ ಕೈಯಲಿ ಹಿಡಿದು

ಮನೆಗೆ ಮರಳಿತ್ತು.

ಹಾಗೂ ಹೀಗೂ ಯೋಚನೆಯಲ್ಲೇ

ದಿನವನು ದೂಡಿತ್ತು.

ಹಿತ್ತಿಲಿನಲ್ಲಿ ತಾನೇ ಬೆಳೆಯುವ

ಉಪಾಯ ಹೊಳೆದಿತ್ತು.

ಇದ್ದುದ ಉಂಡು ನಿದ್ದೆಯ ಮಾಡಲು

ಹಾಸಿಗೆ ಹಿಡಿದಿತ್ತು.

‍ಲೇಖಕರು avadhi

19 July, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading